Tag: boat

  • ದೋಣಿ ಬಿಟ್ಟು ಗುಂಡಿಬಿದ್ದ ರಸ್ತೆ ದಾಟಿದ ಗ್ರಾಮಸ್ಥರು

    ದೋಣಿ ಬಿಟ್ಟು ಗುಂಡಿಬಿದ್ದ ರಸ್ತೆ ದಾಟಿದ ಗ್ರಾಮಸ್ಥರು

    ದಾವಣಗೆರೆ: ಮಳೆಯಿಂದ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ದೋಣೆಯನ್ನು ಬಿಟ್ಟು ಗ್ರಾಮಸ್ಥರು ರಸ್ತೆ ದಾಟಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ಬಳ್ಳಾರಿಯ ಹರಪ್ಪನಹಳ್ಳಿ ತಾಲೂಕಿನ ಚಿಕ್ಕಮ್ಯಾಗಳಗೆರೆ ಗ್ರಾಮಸ್ಥರು ಈ ರೀತಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಮಳೆ ಬಂದರೆ ಸಾಕು ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬುತ್ತದೆ. ಹೀಗಾಗಿ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪನವರಿಗೆ ಕೂಡ ಕರೆಮಾಡಿ, ರಸ್ತೆ ಕಾಮಗಾರಿ ಮಾಡಿಸಿ ಎಲ್ಲಾ ದೋಣೆ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ದೋಣೆಯಲ್ಲ ಕುದುರೆ ಹಾಗೂ ಆನೆ ಕೊಡಿಸುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದರು ಎಂದು ಜನರು ಆರೋಪಿಸಿದ್ದಾರೆ.

    ಅಲ್ಲದೇ ರಸ್ತೆ ಕಾಮಗಾರಿ ಮಾಡುವಂತೆ ಶಾಸಕ ಕರುಣಾಕರ್ ರೆಡ್ಡಿಯವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋಗಿ ಗುಂಡಿಯಲ್ಲಿ ದೋಣಿ ಹಾಕಿ ಮಕ್ಕಳನ್ನು ಕೂರಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಹಾಗೆಯೇ ರಸ್ತೆ ಕಾಮಗಾರಿ ಮಾಡುವಂತೆ ಮನವಿ ಮಾಡಿದ್ದಾರೆ.

  • ಅರಬ್ಬೀ ಸಮುದ್ರದಲ್ಲಿ ಅಪಘಾತ- ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ

    ಅರಬ್ಬೀ ಸಮುದ್ರದಲ್ಲಿ ಅಪಘಾತ- ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ

    – ಸುಮಾರು 80 ಲಕ್ಷ ರೂ. ನಷ್ಟ

    ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಪಘಾತವೊಂದು ಸಂಭವಿಸಿದೆ. ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿದೆ. ಪರಿಣಾಮ ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ.

    ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಮಲ್ಪೆ ಬಂದರು ಸಮೀಪ ಬರುವಾಗ ಬಂಡೆಗೆ ಬಡಿದಿದೆ.

    ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19(ನಿನ್ನೆ)ರಂದು ವಾಪಸ್ ಆಗುವಾಗ ಅಚಾತುರ್ಯ ಮಡೆದಿದೆ. ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟ್ ನೀರಿನಲ್ಲಿ ಮುಳುಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ ನಲ್ಲಿದ್ದ 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಘಟನೆಯಿಂದಾಗಿ ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡೀಸೆಲ್ ಸಮುದ್ರ ಪಾಲಾಗುವ ಮೂಲಕ ಅಂದಾಜು 80 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ಭಂಡತನ ಮೆರೆದ ನಿವೃತ್ತ ಶಿಪ್ ಕ್ಯಾಪ್ಟನ್

    ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ಭಂಡತನ ಮೆರೆದ ನಿವೃತ್ತ ಶಿಪ್ ಕ್ಯಾಪ್ಟನ್

    ಮಂಗಳೂರು: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರ ಧ್ವಜವನ್ನೇ ತಲೆಕೆಳಗಾಗಿ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಭಂಡತನ ಮೆರೆದಿದ್ದಾನೆ.

    ಉಳ್ಳಾಲ ನೇತ್ರಾವತಿ ನದಿ ತಟದ ನಿವಾಸಿಯೊಬ್ಬ ತನ್ನ ಖಾಸಗಿ ಬೋಟ್ ನಲ್ಲಿ ರಾಷ್ಟ್ರಧ್ವಜವನ್ನು ಬೇಕಾ ಬಿಟ್ಟಿಯಾಗಿ ಹಾರಿಸಿ ಅವಮಾನಿಸಿದ್ದಾನೆ. ಖಾಸಗಿ ಶಿಪ್ ಒಂದರಲ್ಲಿ ಕ್ಯಾಪ್ಟನ್ ಆಗಿದ್ದ ಈ ವ್ಯಕ್ತಿ ಸದ್ಯ ನಿವೃತ್ತಿ ಆಗಿದ್ದಾನೆ.

    ಈತ ತನ್ನ ಖಾಸಗಿ ಸಂಚಾರಕ್ಕೆ ಸ್ಪೀಡ್ ಬೋಟ್ ಒಂದನ್ನು ಇಲ್ಲಿ ಉಪಯೋಗಿಸುತ್ತಿದ್ದು, ಆ ಬೋಟ್ ನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುತ್ತಾ ಸಂಚಾರ ನಡೆಸುತ್ತಿದ್ದ. ಈ ಬಗ್ಗೆ ಸ್ಥಳೀಯರು ಆತನ ಗಮನಕ್ಕೆ ತಂದರು ಸಹ, ನಾನು ಇದೇ ರೀತಿ ಧ್ವಜ ಹಾರಿಸುವುದು ನೀವು ಏನಾದರೂ ಮಾಡಿಕೊಳ್ಳಿ ಎಂದು ಉದ್ದಟತನ ಮೆರೆದಿದ್ದಾನೆ. ಹೀಗಾಗಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

  • ಮಹಾರಾಷ್ಟ್ರದಲ್ಲಿ ಮಲ್ಪೆಯ ಡೀಪ್ ಸೀ ಬೋಟ್ ವಶ- 7 ಮೀನುಗಾರರ ಬಂಧನ

    ಮಹಾರಾಷ್ಟ್ರದಲ್ಲಿ ಮಲ್ಪೆಯ ಡೀಪ್ ಸೀ ಬೋಟ್ ವಶ- 7 ಮೀನುಗಾರರ ಬಂಧನ

    ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ಹೋಗಿದ್ದ ಶ್ರೀಲಕ್ಷ್ಮೀ ಹೆಸರಿನ ಡೀಪ್ ಸೀ ಬೋಟ್ ಮಹಾರಾಷ್ಟ್ರದಲ್ಲಿ ಸೆರೆಯಾಗಿದೆ. ಬೋಟಲ್ಲಿದ್ದ ಏಳು ಮಂದಿ ಮೀನುಗಾರರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

    ಶ್ರೀಲಕ್ಷ್ಮೀ ಬೋಟ್‍ನ ಕ್ಯಾಪ್ಟನ್ ರಾಮ ಭಟ್ಕಳ ಸೇರಿ ಏಳು ಮಂದಿ ಎರಡು ದಿನಗಳ ಹಿಂದೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಬೋಟಲ್ಲಿದ್ದ ಏಳೂ ಮಂದಿ ಉತ್ತರಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಲಭಿಸಿದೆ. ಗೋವಾ ರಾಜ್ಯ ದಾಟಿ ಮಹಾರಾಷ್ಟ್ರ ತಲುಪಿದ್ದ ಬೋಟ್ ಮಾಲ್ವಾನ್ ಸಮುದ್ರ ತಲುಪುತ್ತಿದ್ದಂತೆ ಅಲ್ಲಿನ ಕೋಸ್ಟ್ ಗಾರ್ಡ್ ಪೊಲೀಸರು ಬೋಟ್ ಮತ್ತು ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ.

    ಮಹಾರಾಷ್ಟ್ರದ ಸಮುದ್ರ ತೀರದಿಂದ ಬೋಟ್ 12 ನಾಟೇಕಲ್ ದೂರ ಹೊರಗಿತ್ತು. ಆದ್ರೂ ಮಹಾರಾಷ್ಟ್ರದ ಮಾಲ್ವಾನ್ ಕೋಸ್ಟ್ ಗಾರ್ಡ್ ಪೊಲೀಸರಿಗೆ ಅಲ್ಲಿನ ಮೀನುಗಾರರು ದೂರು ನೀಡಿದ್ದರಿಂದ ಬಂಧನವಾಗಿದೆ ಎಂದು ಮಲ್ಪೆಯ ಮೀನುಗಾರರು ದೂರಿದ್ದಾರೆ.

    ಮಹಾರಾಷ್ಟ್ರ ರಾಜ್ಯದ ಗಡಿಯಿಂದ ಹೊರಗೆ ಅಂದ್ರೆ ಭಾರತ ದೇಶದ ಗಡಿಯೊಳಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟನ್ನು ಮಾಲ್ವಾನ್ ನ ಸ್ಥಳೀಯ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ನಡುರಾತ್ರಿ 1 ಗಂಟೆಗೆ ಸುಮಾರಿಗೆ ಮೀನುಗಾರರ ಅಕ್ರಮ ಬಂಧನವಾಗಿದೆ. ನಮ್ಮವರು ನಿಯಮದಂತೆ ಮೀನುಗಾರಕೆ ಮಾಡಿದ್ರೂ ಅರೆಸ್ಟ್ ಮಾಡಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಉಡುಪಿ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ಖಂಡಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತಮಾಡಿದ ಅವರು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿ ಸಾವು

    ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿ ಸಾವು

    – ಮಂಗ್ಳೂರಿನ ಉಳ್ಳಾಲ ಉಳಿಯ ಬಳಿ ದುರಂತ

    ಮಂಗಳೂರು: ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿಯೋರ್ವಳು ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಉಳಿಯಲ್ಲಿ ನಡೆದಿದೆ.

    ಮಂಜೇಶ್ವರ ಮಿಯಪದವು ನಿವಾಸಿ ರೆನಿಟಾ (18) ಮೃತ ಯುವತಿ. ಈ ದುರ್ಘಟನೆ ಕಲಬುರಗಿ ಜಿಲ್ಲೆಯ ನಿವಾಸಿ ಕಾವ್ಯ (20) ನೀರಿಗೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಉಳಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ತೊಕ್ಕೊಟ್ಟು ಚರ್ಚ್ ನ ವಾರ್ಷಿಕೋತ್ಸವಕ್ಕೆಂದು ಮಂಗಳೂರಿನ ಉಳ್ಳಾಲ ಉಳಿಯದಲ್ಲಿರುವ ಸ್ಥಳೀಯ ನಿವಾಸಿ ಜಾರ್ಜ್ ಎಂಬವರ ಮನೆಗೆ ಯುವತಿಯರ ತಂಡವೊಂದು ಬಂದಿದ್ದತ್ತು. ಭಾನುವಾರ ಜಾರ್ಜ್ ಅವರ ದೋಣಿಯಲ್ಲಿ ಉಲ್ಲಾಳದ ಉಳಿಯ ದ್ವೀಪಕ್ಕೆಂದು ಸಾಗುತ್ತಿದ್ದರು. ಈ ವೇಳೆ ಆಯ ತಪ್ಪಿ ದೋಣಿ ಪಲ್ಟಿಯಾಗಿದ್ದು ದೋಣಿಯಲ್ಲಿದ್ದ 6 ಮಂದಿ ಯುವತಿಯರು ನದಿ ನೀರಿಗೆ ಬಿದ್ದಿದ್ದರು. ತಕ್ಷಣ ದೋಣಿಯ ಅಂಬಿಗ ಎಲ್ಲರನ್ನೂ ಬಚಾವ್ ಮಾಡುವ ಪ್ರಯತ್ನ ಮಾಡಿದ್ದರೂ ರೆನಿಟಾ ಸಾವನ್ನಪ್ಪಿದ್ದಾರೆ.

    ಯುವತಿ ಕಾವ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನ ಸಮೀಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಅಂಬಿಗನ ಸಮಯ ಪ್ರಜ್ಞೆಯಿಂದ ನಾಲ್ವರು ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಉಡುಪಿ: ಜೀವನದ ಬಂಡಿ ದೂಡಲು ಆ ಆರು ಮಂದಿ ಭೂಮಿಬಿಟ್ಟು ಕಡಲಿಗೆ ಇಳಿದಿದ್ದರು. ಕಡಲು ಮುನಿದಿತ್ತು. ಬೋಟನ್ನು ಬುಡಮೇಲು ಮಾಡಿದ ಸುಂಟರಗಾಳಿ ಆರು ಜನರನ್ನು ಸಮುದ್ರಕ್ಕೆ ಎಸೆದಿತ್ತು.

    ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ 30 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ನೋಂದಾಯಿತ ಮೀನುಗಾರಿಕಾ ಬೋಟ್‍ವೊಂದು ಭಾಗಶಃ ಮುಳುಗಿತ್ತು. ಸುತ್ತಮುತ್ತ ಒಂದೂ ಬೋಟ್ ಇರಲಿಲ್ಲ. ಕೊನೆಯ ಹಂತದಲ್ಲಿ ಜಿಪಿಎಸ್ ಮೂಲಕ ಮಾಹಿತಿ ರವಾನಿಸಲಾಯ್ತು. ಐದು ನಾಟಿಕಲ್ ಮೈಲ್ ದೂರದಲ್ಲಿದ್ದ ಮೀನುಗಾರಿಕಾ ಬೋಟ್ ಅಲ್ಲಿಗೆ ಬಂದು ಆ ಬೋಟ್ ನ ಸಹಾಯದಿಂದ ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

    ಮಲ್ಪೆಯ ಮೀನುಗಾರರಾದ ಬೋಟಿನ ಚಾಲಕ ವೆಂಕಟೇಶ ಹರಿಕಾಂತ, ನಂದೀಶ್ ಖಾರ್ವಿ, ಸಂತೋಷ, ಹುಲಿಯಪ್ಪ, ದುರ್ಗಪ್ಪ ಹರಿಕಾಂತ ಹಾಗೂ ಅಣ್ಣಪ್ಪ ಹರಿಕಾಂತ ಅವರು ಪ್ರಾಣಾಪಾಯದಿಂದ ಪಾರಾದವರು. ಮಲ್ಪೆಯ ನೋಂದಣಿ ಹೊಂದಿದ ಬೋಟ್ ಇದಾಗಿದ್ದು, ಕೋಡಿ ಕನ್ಯಾನದ ಜಯಲಕ್ಷ್ಮಿ ಅವರ ಹೆಸರಲ್ಲಿದೆ. ಜ.12 ರಂದು ರಾತ್ರಿ 10.30 ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಬೋಟ್ ತೆರಳಿದೆ. ಜ.14 ರಂದು ಗಂಗೊಳ್ಳಿಯಿಂದ ಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಬೋಟಿನ ಹಿಂದಿನ ಹಲಗೆ ತುಂಡಾಗಿ, ಬೋಟಿನೊಳಗೆ ನೀರು ಹೋಗಿದೆ.

    ಚಾಲಕ ವೆಂಕಟೇಶ್ ತಕ್ಷಣ ವೈಯರ್ ಲೆಸ್ ಫೋನ್ ಮೂಲಕ ಹತ್ತಿರದ ಬೋಟಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಅಲ್ಲೇ ಸಮೀಪದಲ್ಲಿದ್ದ ಸಾಯಿರಾಮ್ ಎನ್ನುವ ಬೋಟಿನವರು ಇದರಲ್ಲಿದ್ದ ಎಲ್ಲ 6 ಮಂದಿ ಮೀನುಗಾರರನ್ನು ಪಾರು ಮಾಡಿದ್ದಾರೆ. ಈ ಸಂಬಂಧ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್‍ಐ ಸಂದೀಪ್ ಜಿ.ಎಸ್., ಎಎಸ್‍ಐ ಭಾಸ್ಕರ, ಸಿಬ್ಬಂದಿಯಾದ ಸುರೇಂದ್ರ, ಮತ್ತಿತರರು ಮಾಹಿತಿ ಪಡೆದುಕೊಂಡಿದ್ದಾರೆ. ಬೋಟ್ ಮುಳುಗಿದ್ದರಿಂದ 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಬೋಟ್ ಭಾಗಶಃ ಮುಳುಗಡೆಯಾಗಿದ್ದು, ಇದನ್ನು ಮೇಲೆತ್ತುವ ಸಂಬಂಧ ಮೀನುಗಾರರು 2 ಬೋಟಿನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಟ್ ಮೇಲೆತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

  • ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ಡೆಹ್ರಾಡೂನ್: ಗಂಗಾ ನದಿ ಮಲೀನವಾಗಬಾರದೆಂದು ಮೀನುಗಾರ ಪ್ರತಿದಿನ ಕಸ ಎತ್ತುತ್ತಿದ್ದಾರೆ.

    48 ವರ್ಷದ ಕಾಳಿಪದ ದಾಸ್ ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುತ್ತಿದ್ದಾರೆ. ಮೂಲತಃ ಪಶ್ಚಿಮ ಬಂಗಳಾದವರಾಗಿರುವ ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ.

    ಗಂಗಾ ನದಿಯಲ್ಲಿ ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ‘ನಮಾಮಿ ಗಂಗೆ’ ಎಂಬ ಯೋಜನೆಯನ್ನು ಶುರು ಮಾಡಿತ್ತು. ಆದರೆ ಕಾಳಿಪದ ಅವರು ಈ ಯೋಜನೆಯ ಹೆಸರು ಕೂಡ ಕೇಳಿಲ್ಲ. ಆದರು ಸಹ ಅವರು ಗಂಗಾ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿದ್ದಾರೆ.

    ಕಾಳಿಪದ ಬೆಲ್ಡಂಗಾದ ಕಲಾಬೇರಿಯಾದಿಂದ ಕೆಲಸ ಶುರು ಮಾಡುತ್ತಾರೆ. ಅವರು ತಮ್ಮ ದೋಣಿಯಿಂದ ಅನೇಕ ಘಾಟ್‍ಗಳಿಗೆ ಹೋಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎತ್ತುತ್ತಿದ್ದಾರೆ. ಅವರ ಕೆಲಸ ಭಗೀರಥ ಸೇತುವೆ ಅಥವಾ ಬೆಹ್ರಾಂಪೋರ್‍ನ ಫರ್ಶ್‍ದಂಗಾ ಘಾಟ್‍ನಲ್ಲಿ ಕೊನೆ ಆಗುತ್ತೆ.

    ನಾನು ಈಗ ಮೀನು ಹಿಡಿಯುವುದನ್ನು ಬಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಗಂಗಾ ನದಿಯಿಂದ ಎತ್ತುತ್ತಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಹೆಮ್ಮೆ ಇದೆ. ಸರ್ಕಾರ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆ ಗಂಗಾ ನದಿ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹಾಗಾಗಿ ನಾನು ಅನೇಕ ಘಾಟ್‍ಗಳಿಂದ ಕಸ ಎತ್ತುತ್ತಿದ್ದೇನೆ ಎಂದು ಕಾಳಪದ ತಿಳಿಸಿದ್ದಾರೆ.

    ನಾನು ಇತರೆ ಮೀನುಗಾರರಿಂದಿಗೆ ದೋಣಿಯಲ್ಲಿ ಹೋಗುತ್ತೇನೆ. ಬಳಿಕ ನಾನು ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತೇನೆ. ಪ್ರತಿದಿನ 5ರಿಂದ 6 ಗಂಟೆ ಕೆಲಸ ಮಾಡಿ 2 ಕ್ವಿಂಟಲ್ ಪ್ಲಾಸ್ಟಿಕ್ ಹೆಕ್ಕುತ್ತೇನೆ. ಬಳಿಕ ಇದನ್ನು ರಿಸೈಕಲ್‍ಗೆ ಕೊಟ್ಟು 2,400 ರೂ.ರಿಂದ 2,600 ರೂ.ವರಗೂ ಸಂಪಾದಿಸುತ್ತೇನೆ. ನಾನು ವಿದ್ಯಾಭ್ಯಾಸ ಮಾಡಿಲ್ಲ. ಆದರೆ ವಿದ್ಯಾಭ್ಯಾಸ ಮಾಡಿರುವ ಜನರನ್ನು ನಾನು ನೋಡುತ್ತೇನೆ. ಅವರು ಪ್ಲಾಸ್ಟಿಕ್ ಬಳಸಿ ಅದನ್ನು ಎಸೆಯುತ್ತಾರೆ ಎಂದು ಕಾಳಿಪದ ಹೇಳಿದ್ದಾರೆ.

  • ಇಂಜಿನ್ ಬಂದ್ ಆಗಿ ಗೋವಾದಲ್ಲಿ ಸಿಲುಕಿಕೊಂಡ ರಾಜ್ಯದ ಮೀನುಗಾರರು

    ಇಂಜಿನ್ ಬಂದ್ ಆಗಿ ಗೋವಾದಲ್ಲಿ ಸಿಲುಕಿಕೊಂಡ ರಾಜ್ಯದ ಮೀನುಗಾರರು

    -ಇತ್ತ ಮಂಗ್ಳೂರಲ್ಲಿ ಫಿಶಿಂಗ್ ಬೋಟ್ ರಕ್ಷಣೆ

    ಕಾರವಾರ/ಮಂಗಳೂರು: ಇಂಜಿನ್ ಬಂದ್ ಆಗಿ ರಾಜ್ಯದ ಮೀನುಗಾರರು ಗೋವಾ ರಾಜ್ಯದ ಲೋಲೆಮ್ ಬಳಿ ಆಳಸಮುದ್ರದಲ್ಲಿ ಸಿಲುಕಿಕೊಂಡಿದ್ದಾರೆ.

    ಮೀನುಗಾರರು ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ಬೋಟ್‍ನಲ್ಲಿದ್ದರು. ಬೋಟ್‍ನಲ್ಲಿ ರಾಜ್ಯದ ಎಂಟು ಜನ ಮೀನುಗಾರರು ಇದ್ದರು. ಉಡುಪಿಯಿಂದ ಮೀನುಗಾರಿಕೆಗೆ ಗೋವಾಕ್ಕೆ ತೆರಳುವಾಗ ಇಂಜಿನ್ ಬಂದ್ ಆಗಿ ಸಿಲುಕಿಕೊಂಡಿದ್ದರು.

    ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಆತಂಕಕ್ಕೊಳಗಾಗಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಬೋಟ್ ದಡಕ್ಕೆ ತರುಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ರಾಜ್ಯದ ಅಧಿಕಾರಿಗಳು ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಇತ್ತ ಮಂಗಳೂರಿನಲ್ಲಿ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಫಿಶಿಂಗ್ ಬೋಟ್‍ಗಳನ್ನು ರಕ್ಷಿಸಲಾಗಿದೆ. ಮಂಗಳೂರಿನ ಎನ್‍ಎಂಪಿಟಿ ಬಂದರಿನಲ್ಲಿ ಬೋಟ್ ಗಳಿಗೆ ಆಶ್ರಯ ನೀಡಲಾಗಿದ್ದು, ನವಬಂದರು ಯಾರ್ಡ್ ನಲ್ಲಿ ಸುರಕ್ಷಿತ ಲಂಗಾರು ಹಾಕಲಾಗಿದೆ.

    ಸಮುದ್ರದಿಂದ ವಾಪಸಾಗುತ್ತಿದ್ದ ವೇಳೆ ಬೋಟ್‍ಗಳು ಬಿರುಗಾಳಿಗೆ ಸಿಲುಕಿದ್ದವು. ಸದ್ಯ ಬೋಟ್ ಗಳಲ್ಲಿದ್ದ ಸಾವಿರಕ್ಕೂ ಮಿಕ್ಕಿ ಮೀನುಗಾರರಿಗೆ ಬಂದರು ಯಾರ್ಡ್ ನಲ್ಲಿ ಆಶ್ರಯ ನೀಡಲಾಗಿದೆ. ಚಂಡಮಾರುತ ಪರಿಣಾಮ ತೀರಕ್ಕೆ ಬರಲಾಗದೆ ಮೀನುಗಾರರು ಪರದಾಡಿದ್ದರು. ಈ ವೇಳೆ ಕೋಸ್ಟ್ ಗಾರ್ಡ್ ಪಡೆಗಳು ಬೋಟ್‍ಗಳನ್ನು ರಕ್ಷಣೆ ಮಾಡಿವೆ.

  • ಮುಳುಗುವ ಹಂತದಲ್ಲಿದ್ದ ದೋಣಿಯಿಂದ 15 ಮೀನುಗಾರರ ರಕ್ಷಣೆ

    ಮುಳುಗುವ ಹಂತದಲ್ಲಿದ್ದ ದೋಣಿಯಿಂದ 15 ಮೀನುಗಾರರ ರಕ್ಷಣೆ

    ಕಾರವಾರ: ಭಟ್ಕಳದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಯ ಮೀನುಗಾರರೇ ರಕ್ಷಿಸಿದ್ದಾರೆ. ಹೀಗಾಗಿ ಅದರಲ್ಲಿದ್ದ ಎಲ್ಲಾ 15 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

    ಸಮುದ್ರ ದಡದಿಂದ 25 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ದೋಣಿಯು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮಧುಕರ ಪೂಜಾರಿ ಎಂಬವರದ್ದಾಗಿದೆ. `ಮೂಕಾಂಬಿಕಾ’ ಹೆಸರಿನ ಆ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ಹೋಗಲಾಗಿತ್ತು.

    ದೋಣಿಯ ತಳಭಾಗ ಒಡೆದು ಮುಳುಗುವ ಹಂತ ತಲುಪಿದ್ದನ್ನು ಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಅವರು, ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿಯನ್ನು ಎಳೆದು ದಡಕ್ಕೆ ತರಲಾಯಿತು ಎಂದು ಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.

  • ಪ್ರವಾಹದಲ್ಲಿ ದೋಣಿ ಮಗುಚಿ, ನೀರಿಗೆ ಬಿದ್ದ ಬಿಜೆಪಿ ಸಂಸದ- ವಿಡಿಯೋ ವೈರಲ್

    ಪ್ರವಾಹದಲ್ಲಿ ದೋಣಿ ಮಗುಚಿ, ನೀರಿಗೆ ಬಿದ್ದ ಬಿಜೆಪಿ ಸಂಸದ- ವಿಡಿಯೋ ವೈರಲ್

    ಪಾಟ್ನಾ: ಬಿಹಾರದ ಮಸೌರಿಯಲ್ಲಿ ಪ್ರವಾಹ ಪರಿಸ್ಥಿಯನ್ನು ಪರಿಶೀಲಿಸಲು ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತರೆಳಿದ್ದರು. ಈ ವೇಳೆ ನೆರೆ ವೀಕ್ಷಣೆ ಮಾಡುತ್ತಿದ್ದಾಗ ಸಂಸದರಿದ್ದ ದೋಣಿ ಮಗುಚಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಬಿಹಾರದಲ್ಲಿ ರೌದ್ರಾವಾತಾರ ತೋರುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಬುಧವಾರ ಪಾಟ್ನಾದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ರಾಮ್ ಕೃಪಾಲ್ ಯಾದವ್ ಹೋಗಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬಿದ್ದು, ಕೆಲ ಸಮಯ ಆತಂಕದ ವಾತಾವರಣ ಸ್ಥಳದಲ್ಲಿ ನಿರ್ಮಾಣಗೊಂಡಿತ್ತು. ಆಗ ಸ್ಥಳೀಯರು ತಕ್ಷಣ ಸಂಸದರ ನೆರವಿಗೆ ಧಾವಿಸಿ ರಕ್ಷಿಸಿದರು. ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ರಿಕ್ಷಾ ಹೊರತರಲಾಗದೇ ಬಿಕ್ಕಿಬಿಕ್ಕಿ ಅತ್ತ ಚಾಲಕ: ವಿಡಿಯೋ

    ಸ್ಥಳದಲ್ಲಿ ರಕ್ಷಣಾ ದೋಣಿ ಇರದ ಹಿನ್ನೆಲೆ ಸಂಸದರು, ಕೆಲ ಬೆಂಬಲಿಗರು ಹಾಗೂ ಸ್ಥಳೀಯರು ನಾಡ ದೋಣಿಯಲ್ಲಿ ನೆರೆ ವೀಕ್ಷಣೆಗೆ ತೆರೆಳಿದ್ದರು. ಈ ವೇಳೆ ಮಾರ್ಗ ಮಧ್ಯ ದೋಣಿ ಆಯ ತಪ್ಪಿ ನೀರಿಗೆ ಮಗುಚಿ ಬಿದ್ದು ಅದರಲ್ಲಿದ್ದವರು ನೀರಿನಲ್ಲಿ ಮುಳುಗಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ತಕ್ಷಣ ಎಲ್ಲರನ್ನೂ ರಕ್ಷಣೆ ಮಾಡಿದ್ದಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಸದರ ದೋಣಿ ಮಗುಚಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇಡೀ ಬಿಹಾರ ರಾಜ್ಯ ಅಕ್ಷಶಃ ತತ್ತರಿಸಿ ಹೋಗಿದೆ. ಮಳೆಗೆ ಇಡೀ ಪಾಟ್ನಾ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಆಳೆತ್ತರದವರೆಗೂ ನೀರು ನಿಂತಿದೆ.

    ವರಣನ ಆರ್ಭಟಕ್ಕೆ ಸಾವಿಗೀಡಾದವರ ಸಂಖ್ಯೆ 42ಕ್ಕೇ ಏರಿದ್ದು, ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಭಾರತೀಯ ವಾಯುಸೇನಾ ಪಡೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರ ರಕ್ಷಣೆ ಜೊತೆಗೆ ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.