Tag: boat

  • ಬೈಂದೂರು ದೋಣಿ ದುರಂತ- ನಾಲ್ವರು ಮೀನುಗಾರರ ಮೃತದೇಹ ಪತ್ತೆ

    ಬೈಂದೂರು ದೋಣಿ ದುರಂತ- ನಾಲ್ವರು ಮೀನುಗಾರರ ಮೃತದೇಹ ಪತ್ತೆ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ನಾಡದೋಣಿ ದುರಂತದ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಕೊಡೇರಿ ದೋಣಿ ದುರಂತ ಸ್ಥಳದ ಒಂದೆರಡು ಕಿಲೋಮೀಟರ್ ಆಸುಪಾಸಿನಲ್ಲಿ ಮೃತದೇಹ ಪತ್ತೆಯಾಗಿದೆ.

    ನಾಲ್ವರು ಮೀನುಗಾರರಾದ ಬಿ.ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹಗಳು ಸಮುದ್ರ ಕಿನಾರೆಯಲ್ಲಿ ಸಿಕ್ಕಿದೆ. ಭಾನುವಾರ ಮಧ್ಯಾಹ್ನ ಕಸುಬು ನಡೆಸಿ ವಾಪಸ್ಸಾಗುವಾಗ ನಾಡದೋಣಿ ಬಂಡೆಗೆ ಡಿಕ್ಕಿಯಾಗಿ ಕಣ್ಮರೆಯಾಗಿದ್ದರು. ಸೋಮವಾರ ಬೆಳಗ್ಗೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಳಿಯ ನಾಗೂರಿನಲ್ಲಿ ನಾಗ ಖಾರ್ವಿ ಮೃತದೇಹ ಪತ್ತೆಯಾಗಿತ್ತು.

    ರಾತ್ರಿ ಆದ್ರಗೋಳಿಯಲ್ಲಿ ಲಕ್ಷ್ಮಣ ಖಾರ್ವಿ ಮತ್ತು ಶೇಖರ ಖಾರ್ವಿ ಅವರ ಮೃತದೇಹಗಳು ಕಂಡುಬಂದಿವೆ. ನಂತರ ಮಂಜುನಾಥ ಖಾರ್ವಿ ಮೃತದೇಹ ಕೂಡ ಗಂಗೆಬೈಲು ಎಂಬಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕೋಸ್ಟ್ ಗಾರ್ಡ್, ನುರಿತ ಮುಳುಗು ತಜ್ಞರ ನೆರವು ಪಡೆದರೂ ನಾಪತ್ತೆಯಾದ ಮೀನುಗಾರರಲ್ಲಿ ಮೂವರ ಸುಳಿವು ಸಿಕ್ಕಿರಲಿಲ್ಲ. ಸಮುದ್ರದ ಅಲೆಗಳು ತೀವ್ರಗೊಂಡಿರುವುದು ಕಾರ್ಯಾಚರಣೆಯೂ ಹಿನ್ನಡೆಯಾಗಿತ್ತು. ಆಗ ಡ್ರೋನ್ ಮೊರೆ ಹೋಗಲಾಗಿತ್ತು.

    ಈ ವೇಳೆ ಡ್ರೋನ್ ಕ್ಯಾಮೆರಾವು ಕೊಡೇರಿ ಅಳಿವೆ ಬಾಗಿಲಿನಿಂದ ಸುಮಾರು ಅರ್ಧ ಕಿ.ಮೀ. ಒಳಗೆ ಶವವೊಂದು ತೇಲುತ್ತಿರುವ ಛಾಯಾಚಿತ್ರವನ್ನು ಸೆರೆ ಹಿಡಿದಿತ್ತು. ಅದು ಶೇಖರ ಖಾರ್ವಿ ಅವರದ್ದಾಗಿದ್ದು, ದುರ್ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಸಮುದ್ರ ತೀರಕ್ಕೆ ಮೃತದೇಹ ತೇಲಿ ಬಂದಿದೆ. ಸರ್ಕಾರ ಶೀಘ್ರ ಪರಿಹಾರ ಕೊಡಬೇಕು, ಮೀನುಗಾರರ ಸುರಕ್ಷತಾ ಕ್ರಮ ಕಡ್ಡಾಯ ಮಾಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

  • ದಿನಸಿ ತರಲು ತೆಪ್ಪದಲ್ಲಿ ತೆರಳಿದ್ದವರಲ್ಲಿ ನಾಲ್ವರು ಕೃಷ್ಣಾ ನದಿಯಲ್ಲಿ ನಾಪತ್ತೆ

    ದಿನಸಿ ತರಲು ತೆಪ್ಪದಲ್ಲಿ ತೆರಳಿದ್ದವರಲ್ಲಿ ನಾಲ್ವರು ಕೃಷ್ಣಾ ನದಿಯಲ್ಲಿ ನಾಪತ್ತೆ

    – ಜಿಲ್ಲಾಡಳಿತ ಎಚ್ಚರಿಕೆ ಧಿಕ್ಕರಿಸಿ ಹೊರ ಬಂದ ನಡುಗಡ್ಡೆ ಜನ

    ರಾಯಚೂರು: ದಿನಸಿ ತರಲು ತೆಲಂಗಾಣಕ್ಕೆ ತೆರಳಿದ್ದ ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆ ಗ್ರಾಮದ 13 ಜನ ಮರಳಿ ಬರುವಾಗ ತೆಪ್ಪ ಮುಗುಚಿ ಬಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ. ಕುರ್ವಾಕಲಾ ಗ್ರಾಮದ ಪಾರ್ವತಿ (55) ನರಸಮ್ಮ (36) ಸುಮಲತಾ (32) ಪೂಜಾ (10) ನಾಪತ್ತೆಯಾದವರು. ತೆಲಂಗಾಣದ ಪಂಚಪಾಡಕ್ಕೆ ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ಘಟನೆ ನಡೆದಿದೆ. 13 ಜನರಲ್ಲಿ 9 ಜನ ಈಜಿ ದಡ ಸೇರಲು ಹರಸಾಹಸ ಪಡುತ್ತಿದ್ದಾಗ ದಡದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕೂಡಲೇ ತೆಪ್ಪದಲ್ಲಿ ತೆರಳಿ 9 ಜನರನ್ನ ರಕ್ಷಿಸಿದ್ದಾರೆ. ಆದರೆ ತಾಯಿ ಸುಮಲತಾ ಮಗಳು ರೋಜಾ ಸೇರಿ ನಾಲ್ಕು ಜನ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ.

    ಮಾಹಿತಿ ತಿಳಿದ ತಕ್ಷಣವೇ ಯಾಪಲದಿನ್ನಿ ಪೋಲೀಸರು ನದಿ ದಡಕ್ಕೆ ತೆರಳಿದರಾದ್ರೂ ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ. ತೆಲಂಗಾಣದ ಮಕ್ತಲ್ ಠಾಣೆ ಪೊಲೀಸರು, ಅಲ್ಲಿನ ತೆಪ್ಪ ನಡೆಸುವವರು ಕೂಡಲೇ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ. ಆದರೆ ಮೂವರು ಮಹಿಳೆಯರು ಹಾಗೂ ಓರ್ವ ಬಾಲಕಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಹಾಗೂ ಎನ್ ಡಿ ಆರ್ ಎಫ್ ತಂಡ ತೆಲಂಗಾಣಕ್ಕೆ ತೆರಳಿದ್ದು ಬೆಳಿಗ್ಗೆಯಿಂದ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.

    ನಾರಾಯಣಪುರ ಜಲಾಶಯದಿಂದ ಸದ್ಯ 2 ಲಕ್ಷ 80 ಸಾವಿರ ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿಬಿಡಲಾಗುತ್ತಿದ್ದು ನದಿ ಪಾತ್ರಕ್ಕೆ ತೆರಳದಂತೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಸಿತ್ತು. ಅಷ್ಟಾದ್ರೂ ನಡುಗಡ್ಡೆ ಜನ ತೆಪ್ಪಗಳ ಮೂಲಕ ಅಗತ್ಯ ವಸ್ತುಗಳಿಗಾಗಿ ಹೊರಬರುತ್ತಲೇ ಇದ್ದಾರೆ. ರಾಯಚೂರು ತಾಲೂಕಿನಲ್ಲಿ ಮೂರು ನಡುಗಡ್ಡೆಗಳಿದ್ದು ಒಟ್ಟು 298 ಕುಟುಂಬಗಳಿಂದ 945 ಜನ ವಾಸವಾಗಿದ್ದಾರೆ. ಇಲ್ಲಿನ ಜನರಿಗೆ ಈಗಾಗಲೇ ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನ ಮಾಡಿದ್ದರು ಜನ ನಡುಗಡ್ಡೆಯಲ್ಲೇ ವಾಸವಾಗಿದ್ದಾರೆ. ಅಲ್ಲದೆ ಪ್ರವಾಹದ ವೇಳೆ ತುಂಬಿ ಹರಿಯುವ ನದಿಯಲ್ಲಿ ತೆಪ್ಪದಲ್ಲಿ ಹೆಚ್ಚು ಜನ ಪ್ರಯಾಣ ಮಾಡುತ್ತಾರೆ. ದುರಾದೃಷ್ಟವಶಾತ್ ತೆಪ್ಪ ಮುಗುಚಿ ಬಿದ್ದಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ.

    ಇನ್ನೂ ನಡುಗಡ್ಡೆಗಳಿಗೆ ಡೊಂಗರಾಂಪುರದಿಂದ ಕುರ್ವಕಲ ಹಾಗೂ ಆತ್ಕೂರಿನಿಂದ ಕುರ್ವಾಕುರ್ದಕ್ಕೆ ಎರಡು ಸೇತುವೆಗಳ ಕಾಮಗಾರಿಗಳು ಆರಂಭವಾಗಿ ದಶಕಗಳೇ ಕಳೆದರು ಪೂರ್ಣಗಿಲ್ಲ. ಹೀಗಾಗಿ ನಡುಗಡ್ಡೆಯ ಜನ ಪ್ರತಿಯೊಂದಕ್ಕೂ ತೆಪ್ಪವನ್ನೆ ಅವಲಂಬಿಸಿದ್ದಾರೆ. ಪ್ರವಾಹದ ಸಮಯದಲ್ಲೂ ಜಿಲ್ಲಾಡಳಿತದ ಎಚ್ಚರಿಕೆಯನ್ನ ದಿಕ್ಕರಿಸಿ ತೆಪ್ಪದಲ್ಲಿ ಓಡಾಡುತ್ತಿರುವುದು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಕೃಷ್ಣ ಪ್ರವಾಹದಲ್ಲಿ ನಾಪತ್ತೆಯಾಗಿರುವ ನಾಲ್ವರಿಗಾಗಿ ಬೆಳಗ್ಗೆ ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ ಹಾಗೂ ರಾಜ್ಯ ಮತ್ತು ತೆಲಂಗಾಣ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.

  • ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ

    ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ

    ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.

    ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.

    ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿಯ ಒತ್ತಡ ಇದ್ದಿದ್ದರಿಂದ, ನದಿಯಿಂದ ಭಾರಿ ಪ್ರಮಾಣದ ನೀರು ಸಮುದ್ರಕ್ಕೆ ಹರಿಯುತ್ತಿರುವುದರಿಂದ ಭಾರೀ ಒತ್ತಡ ನಿರ್ಮಾಣವಾಗಿತ್ತು. ಮೀನುಗಾರಿಕೆ ನಡೆಸಿ ಬಂದರಿಗೆ ವಾಪಸ್ಸಾಗುವ ಸಂದರ್ಭ ಸಾಗರಶ್ರೀ ಬೋಟ್ ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು, ಸ್ಥಳೀಯ ಮೀನುಗಾರರಿಗಾಗಿ ಶೋಧ ನಡೆಸುತ್ತಿದ್ದಾರೆ. ಈಜಿ ಬಚಾವಾದ ಏಳು ಜನರಿಗೆ ಚಿಕಿತ್ಸೆ ಕೊಡಲಾಗಿದೆ.

    ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಮೀನುಗಾರರಿಂದ ಘಟನೆಯ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಅಳಿವೆ ಬಾಗಿಲಿನ ಉದ್ದ ಕಿರಿದಾಗಿರುವುದರಿಂದ ಅಲೆಗಳ ಹೊಡೆತ ವಿಪರೀತ ಇದೆ. ಮುಂದಿನ ದಿನಗಳಲ್ಲಿ ಅಳಿವೆ ಬಾಗಿಲಿನ ಉದ್ದವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆ ಮಾತನಾಡಿ ಕಾಮಗಾರಿ ಮುಂದುವರಿಸುವಂತೆ ಪ್ರಯತ್ನಿಸುತ್ತೇನೆ ಎಂದರು.

    ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನಾಡದೋಣಿ ಬೋಟುಗಳು ಒಂದರ ಹಿಂದೆ ಒಂದು ಬರುತ್ತಿತ್ತು. ಈ ಸಂದರ್ಭ ಗಾಳಿಯ ಹೊಡೆತಕ್ಕೆ ಸಿಕ್ಕಿ ಸಾಗರ ಶ್ರೀ ದೋಣಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಾಲ್ವರು ಮೀನುಗಾರರು ಬಲೆಯ ಜೊತೆಗೆ ಸಮುದ್ರಕ್ಕೆ ಬಿದ್ದಿರುವುದರಿಂದ ಬಲೆ ಮೀನುಗಾರರನ್ನು ಸುತ್ತಿಕೊಂಡಿರುವ ಸಾಧ್ಯತೆ ಇದೆ. ಕ್ರೇನ್ ಬಳಸಿ ಕಣ್ಮರೆಯಾದ ಮೀನುಗಾರರನ್ನು ಹುಡುಕುವ ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದರು.

  • ಅಪರೂಪದ ಫಿಶ್ ಪತ್ತೆ- ಒಂದೇ ಮೀನು 20 ಲಕ್ಷಕ್ಕೆ ಮಾರಾಟ

    ಅಪರೂಪದ ಫಿಶ್ ಪತ್ತೆ- ಒಂದೇ ಮೀನು 20 ಲಕ್ಷಕ್ಕೆ ಮಾರಾಟ

    – ಔಷಧಿಯ ತಯಾರಿಕೆಯಲ್ಲೂ ಈ ಮೀನು ಬಳಕೆ

    ಕೋಲ್ಕತ್ತಾ: ಸುಮಾರು 780 ಕೆ.ಜಿ. ತೂಕದ ಅಪರೂಪದ ಮೀನೊಂದು ಪಶ್ಚಿಮ ಬಂಗಾಳದ ದಿಘಾದಲ್ಲಿ ಸಿಕ್ಕಿದೆ.

    ಚಿಲ್‍ಶಂಕರ್ ಮೀನು ಎಂದು ಕರೆಯಲಾಗುತ್ತದೆ. ಇದು ಸುಮಾರು 780 ಕೆ.ಜಿ ತೂಕ ಇದೆ. ಚಿಲ್‍ಶಂಕರ್ ಮೀನು ಅಪರೂಪದ ಜಾತಿಯಾಗಿದ್ದು, ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸಿಕ್ಕಿದೆ. ಈ ಮೊದಲು ಇಂತಹ ಮೀನನ್ನು ನೋಡಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.

    ಸೋಮವಾರ ಒರಿಸ್ಸಾದ ವ್ಯಕ್ತಿಯೊಬ್ಬನ ಒಡೆತನದ ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸೆರೆ ಸಿಕ್ಕಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಕಡಲಲ್ಲಿ ಈ ಅಪರೂಪದ ಮೀನು ಸಿಗುವುದೇ ಇಲ್ಲ. ಹೀಗಾಗಿ ಇದಕ್ಕೆ ಭಾರೀ ಬೆಲೆ ಹಾಗೂ ಬೇಡಿಕೆಯಿದೆ. ಆದ್ದರಿಂದ ಬೃಹತ್ ಚಿಲ್‍ಶಂಕರ್ ಮೀನನ್ನು ನೋಡಲು ಜನರು ಮತ್ತು ಸ್ಥಳೀಯ ಪ್ರವಾಸಿಗರು ಬಂದಿದ್ದರು.

    ಈ ಮೀನು ತುಂಬಾ ತೂಕವಾಗಿದ್ದು, ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಹಗ್ಗಗಳನ್ನು ಬಳಸಲಾಗಿತ್ತು. ಸ್ಥಳೀಯ ಮೀನುಗಾರರು ಹಗ್ಗದಿಂದ ಎಳೆದುಕೊಂಡು ಹೋಗಿ ವ್ಯಾನ್‍ಗೆ ಹಾಕಿದ್ದರು. ಅಲ್ಲಿಂದ ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘದ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋಗಲಾಗಿತ್ತು.

    ಈ ಮೀನಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 2100 ರೂ.ಗೆ ಹರಾಜು ಹಾಕಲಾಯಿತು. ಮೀನಿನ ಒಟ್ಟು ಬೆಲೆ 20 ಲಕ್ಷ ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕೊರೊನಾ ಸಂಕಷ್ಟದಲ್ಲೂ ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.

    ಇದು ಚಿಲ್‍ಶಂಕರ್ ಮೀನು. ಇದರ ತೂಕ 780 ಕಿ.ಗ್ರಾಂ. ಈ ಮೀನಿನ ಮಾರುಕಟ್ಟೆ ಬೆಲೆ ಕೆ.ಜಿ.ಗೆ 2100 ರೂ. ಇಷ್ಟು ದೊಡ್ಡ ಮತ್ತು ಅಪರೂಪದ ಮೀನನ್ನು ನಾವು ನೋಡಿಲ್ಲ ಎಂದು ಸ್ಥಳೀಯ ಮೀನುಗಾರ ಹೇಳಿದರು. ಮೀನು ಮೂಳೆ ಮತ್ತು ಎಣ್ಣೆಯನ್ನು ಔಷಧಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇನ್ನುಳಿದದ್ದು ಖಾದ್ಯವಾಗಿ ಸವಿಯಲ್ಪಡುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

  • ಮಗನೊಂದಿಗೆ ಬೋಟಿನಲ್ಲಿ ತೆರಳಿದ್ದ ನಟಿ- 6 ದಿನಗಳ ನಂತ್ರ ಶವವಾಗಿ ಪತ್ತೆ

    ಮಗನೊಂದಿಗೆ ಬೋಟಿನಲ್ಲಿ ತೆರಳಿದ್ದ ನಟಿ- 6 ದಿನಗಳ ನಂತ್ರ ಶವವಾಗಿ ಪತ್ತೆ

    – ಮಗನ ಜೀವ ಉಳಿಸಿ ನೀರಿನಲ್ಲಿ ಮುಳುಗಿದ ನಟಿ

    ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದಾಗ ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆಯಾಗಿದ್ದಾರೆ.

    ಹಾಲಿವುಡ್‍ನ ನಟಿ ನಯಾ ರಿವೇರಾ ಮೃತದೇಹ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ನಾಪತ್ತೆಯಾಗಿದ್ದರು. ಆದರೆ ಆರು ದಿನಗಳ ನಂತರ ಸೋಮವಾರ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.

    ನಟಿ ನಯಾ ರಿವೇರಾ ಕಳೆದ ವಾರ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದ ವೇಳೆ ಬೋಟ್‍ ಮಗುಚಿ ಮುಳುಗಿದ್ದರು. ಸದ್ಯಕ್ಕೆ ರಿವೇರಾ ಅವರ ಮೃತದೇಹ ಪತ್ತೆಯಾಗಿದೆ. ಆದರೆ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಇದು ಆತ್ಮಹತ್ಯೆ ಅಲ್ಲ ಎಂದು ತಿಳಿದುಬಂದಿದೆ ಎಂದು ವೆಂಚುರಾ ಕಂಟ್ರಿ ಶೆರಿಫ್ ಬಿಲ್ ಅಯುಬ್ ತಿಳಿಸಿದ್ದಾರೆ.

    ಪತ್ತೆಯಾಗಿರುವ ಮೃತದೇಹದ ಬಟ್ಟೆ ಮತ್ತು ಸ್ಥಿತಿಯನ್ನು ನೋಡಿದರೆ ಅದು ನಟಿ ನಯಾ ರಿವೇರಾ ಶವ ಎಂದು ತಿಳಿಯುತ್ತದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದರು.

    33 ವರ್ಷದ ರಿವೇರಾ ಲಾಸ್ ಏಂಜಲೀಸ್ ಸುತ್ತಾಡುವುದಕ್ಕೆ ಒಂದು ಗಂಟೆಯ ಅವಧಿಯವರೆಗೂ ಬೋಟ್‍ವೊಂದನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದರು. ಈ ವೇಳೆ ನಟಿ ತಮ್ಮ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕಸ್ಮಿಕವಾಗಿ ಬೋಟ್ ಮುಳುಗಿದೆ ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ನಟಿ ರಿವೇರಾ ಬೋಟ್ ನಾಪತ್ತೆಯಾಗಿತ್ತು. ನಂತರ ಪೆಟ್ರೋಲ್ ಬೋಟ್‍ಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಚರಣೆಯನ್ನು ನಡೆಸಿದಾಗ ಬೋಟ್ ಮತ್ತು ಮಗ ಪತ್ತೆಯಾಗಿದ್ದಾನೆ. ಆದರೆ ನಟಿ ರಿವೇರಾ ಮಾತ್ರ ಪತ್ತೆಯಾಗಿರಲಿಲ್ಲ ಎಂದು ಅಯುಬ್ ಹೇಳಿದ್ದಾರೆ.

    ಬೋಟ್ ಮುಳುಗುತ್ತಿದ್ದಾಗ ಅಮ್ಮ ನನ್ನನ್ನು ರಕ್ಷಿಸಿ ಬೋಟ್ ಮೇಲೆ ಹತ್ತಿಸಿದ್ದರು. ನಂತರ ನಾನು ಹಿಂದೆ ತಿರುಗಿ ನೋಡಿದಾಗ ಅವರು ನೀರಿನಲ್ಲಿ ಮುಳುಗುತ್ತಿದ್ದರು. ಕೊನೆಗೆ ನೀರಿನಲ್ಲಿ ಮುಳುಗುತ್ತಾ ಕಣ್ಮರೆಯಾಗುವುದನ್ನು ನೋಡಿದೆ ಎಂದು ಮಗ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಹೀಗಾಗಿ ನಟಿ ನಯಾ ರಿವೇರಾ ತಮ್ಮ ಮಗನ ಪ್ರಾಣ ಉಳಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    “ಬಹುಶಃ ನಟಿ ಬೋಟಿನಲ್ಲಿ ಸುತ್ತಾಡುತ್ತಿದ್ದಾಗ ಕಣಿವೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದೆ. ಈ ವೇಳೆ ಬೋಟ್ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ. ಆಗ ತಮ್ಮ ಮಗನನ್ನು ಬೋಟ್ ಮೇಲೆ ಹತ್ತಿಸಿ ಕಾಪಾಡಿದ್ದಾರೆ. ಆದರೆ ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಯುಬ್ ತಿಳಿಸಿದ್ದಾರೆ.

  • ಸಾಗರದಬ್ಬರಕ್ಕೆ ಮಗುಚಿ ಬಿದ್ದ ದೋಣಿ- ಸಮುದ್ರಕ್ಕೆ ಜಿಗಿದ್ರು 6 ಮಂದಿ

    ಸಾಗರದಬ್ಬರಕ್ಕೆ ಮಗುಚಿ ಬಿದ್ದ ದೋಣಿ- ಸಮುದ್ರಕ್ಕೆ ಜಿಗಿದ್ರು 6 ಮಂದಿ

    ಉಡುಪಿ: ಮುಂಗಾರು ಮಳೆಯಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಭಾರೀ ಅಲೆಗಳು ಸಾಗರದಲ್ಲಿ ಏಳುತ್ತಿವೆ. ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ನಲ್ಲಿ ಮೀನುಗಾರಿಗೆ ತೆರಳಲು ಹೊರಟ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದಿದೆ.

    ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದು, ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಹೀಗೆ ದೋಣಿಯಲ್ಲಿ ಮೀನುಗಾರಿಕೆಗೆ ದಡದಿಂದ ಕಡಲಿಗೆ ಇಳಿದ ಕೆಲವೇ ಕ್ಷಣಗಳಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ಮಗುಚಿ ಬಿದ್ದಿದೆ.

    ನಾಡ ದೋಣಿಯಲ್ಲಿ ಆರು ಜನರಿದ್ದು ಅವರೆಲ್ಲಾ ಘಟನೆಯ ಮುನ್ಸೂಚನೆಯನ್ನು ಅರಿತುಕೊಂಡು ಸಮುದ್ರಕ್ಕೆ ಹಾರಿದ್ದಾರೆ. ಕ್ಷಣಾರ್ಧದಲ್ಲಿ ಅಲೆಗೆ ಸಿಕ್ಕಿ ದೋಣಿ ಮಗುಚಿದೆ. ಮೀನುಗಾರರು ಈಜಿ ದಡ ಸೇರಿದ್ದಾರೆ. ಸದ್ಯ ದೋಣಿಯನ್ನು ಮೇಲಕ್ಕೆಳೆಯಲಾಗಿದೆ.

    ಕಡಲ ಮಕ್ಕಳು ಪ್ರಾಣ ಪಣಕ್ಕಿಟ್ಟಂತ ಹೋರಾಟದ ಜೀವನ ನಡೆಸುತ್ತಾರೆ ಎಂಬೂದಕ್ಕೆ ಈ ವೀಡಿಯೋ ಒಂದು ಸಾಕ್ಷಿಯಂತಿದೆ.

  • ಪರೀಕ್ಷೆ ಬರೆಯಲು ಬೋಟ್ ಏರಿ ಬಂದ ವಿದ್ಯಾರ್ಥಿಗಳು

    ಪರೀಕ್ಷೆ ಬರೆಯಲು ಬೋಟ್ ಏರಿ ಬಂದ ವಿದ್ಯಾರ್ಥಿಗಳು

    ಮಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಇಂದು ಬೋಟ್ ನಲ್ಲಿ ಬಂದ ವಿಶೇಷ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ದ್ವೀಪ ಪ್ರದೇಶವಾದ ತೋಟ ಬೆಂಗ್ರೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಂಗಳೂರು ನಗರಕ್ಕೆ ಬರಬೇಕಾದರೆ ತೆಪ್ಪದಲ್ಲೇ ಬರಬೇಕಾದ ಅನಿವಾರ್ಯತೆ ಇದೆ. ಆದರೆ ಇಲ್ಲಿ ರಸ್ತೆ ಮಾರ್ಗವಿದ್ದರೂ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಲು ವಿದ್ಯಾರ್ಥಿಗಳು ಬೋಟ್ ಹತ್ತಿದ್ದಾರೆ.

    ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಪರೀಕ್ಷಾ ಕೇಂದ್ರಕ್ಕೆ ಬಂದು, ಸುರಕ್ಷಿತವಾಗಿ ಮಕ್ಕಳನ್ನು ಕಳುಹಿಸಿದ್ದಾರೆ. ಕೊರೊನಾ ಆತಂಕದ ನಡುವೆಯೂ ವಿದ್ಯಾರ್ಥಿಗಳ ಈ ಪರೀಕ್ಷಾ ಉತ್ಸಾಹವನ್ನು ಗಮನಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ನಿನ್ನಯಷ್ಟೇ ಬಂಟ್ವಾಳದ ವಿದ್ಯಾರ್ಥಿ ಕೌಶಿಕ್ ತನ್ನ ಕಾಲಿನಲ್ಲೇ ಪರೀಕ್ಷೆ ಬರೆದು ಸುದ್ದಿಯಾಗಿದ್ದನು. ಈತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಚಿವರು ವಿದ್ಯಾರ್ಥಿಯ ಛಲಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು.

  • ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ

    ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ

    ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ (38) ನಾಪತ್ತೆಯಾಗಿರುವ ಮೀನುಗಾರರು. ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗಿಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದಾನೆ.

    ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಭೇಟಿ ಕೊಲ್ಹಾರ ತಹಶೀಲ್ದಾರ್ ಎಂ ಎಸ್ ಭಾಗವಾನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನಾಪತ್ತೆಯಾಗಿರುವವರಿಗಾಗಿ ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಲಾಗುತ್ತಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮೀನುಗಾರಿಕಾ ಬೋಟಿನಲ್ಲೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ನೇಣಿಗೆ ಶರಣು

    ಮೀನುಗಾರಿಕಾ ಬೋಟಿನಲ್ಲೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ನೇಣಿಗೆ ಶರಣು

    ಉಡುಪಿ: ಆಳ ಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್‍ನಲ್ಲಿ ಯುವಕ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.

    ಭಾಗ್ಯರಾಜ್ (26) ಮೃತ ಯುವಕ. ಶ್ರೀ ದುರ್ಗಾ ಎಂಬ ಮೀನುಗಾರಿಕಾ ಬೋಟ್ ಮಲ್ಪೆ ಬಂದರಲ್ಲಿ ಲಂಗರು ಹಾಕಿತ್ತು. ನಿಂತಿದ್ದ ಬೋಟ್‍ಗೆ ಕಟ್ಟಲಾಗಿದ್ದ ಹಗ್ಗಕ್ಕೆ ನೇಣು ಹಾಕಿಕೊಂಡು ಭಾಗ್ಯರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

    ಆರ್ಥಿಕ ಸಂಕಷ್ಟದಿಂದ ಭಾಗ್ಯರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುವಾಗಿರುವ ಭಾಗ್ಯರಾಜ್ ಮಲ್ಪೆ ವ್ಯಾಪ್ತಿಯಲ್ಲಿ ಚುರುಕಿನಿಂದ ಓಡಾಡಿಕೊಂಡಿದ್ದನು. ಪ್ರಾಣ ಕಳೆದುಕೊಳ್ಳುವಂತಹ ಸಮಸ್ಯೆ ಇರಲಿಲ್ಲ ಎಂದು ಗೆಳೆಯರು ಮಾತನಾಡುತ್ತಿದ್ದರು.

    ಭಾಗ್ಯರಾಜ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಆಲ್ ರೌಂಡರ್ ಆಟಗಾರನಾಗಿದ್ದ. ಅಲ್ಲದೇ ಕೇರಳ, ತಮಿಳುನಾಡು ಟೀಂಗಳಿಗೆ ಭಾಗ್ಯರಾಜ್ ಆಡುತ್ತಿದ್ದ. ಆದರೆ ಸಾಲ ಮರುಪಾವತಿಸಲಾಗದೆ ಬಹಳ ಒತ್ತಡ ಮಾಡಿಕೊಂಡಿದ್ದನು. ಕಳೆದ ರಾತ್ರಿ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ಗೆ ಹಗ್ಗ ಕಟ್ಟಿ ನೇಣು ಬಿಗಿದು ಮೀನು ತುಂಬಿಸಿಡುವ ಸ್ಟೋರೇಜ್‍ಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಓರ್ವ ವಿದ್ಯಾರ್ಥಿನಿಗಾಗಿ 70 ಆಸನದ ದೊಡ್ಡ ಬೋಟ್ ಓಡಿಸಿದ ಸರ್ಕಾರ

    ಓರ್ವ ವಿದ್ಯಾರ್ಥಿನಿಗಾಗಿ 70 ಆಸನದ ದೊಡ್ಡ ಬೋಟ್ ಓಡಿಸಿದ ಸರ್ಕಾರ

    – ಪರೀಕ್ಷೆ ಮುಗಿಸಿ ಬರುವರೆಗೂ ವಿದ್ಯಾರ್ಥಿನಿಗಾಗಿ ಕಾಯ್ತಿದ್ದ ದೋಣಿ
    – 4 ಸಾವಿರ ಖರ್ಚು ಆದ್ರೂ 18 ರೂ. ಪಡೆದ ಸಿಬ್ಬಂದಿ

    ತಿರುವನಂತಪುರಂ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗಳು ಪುನರಾರಂಭಗೊಂಡಿವೆ. ಇದೀಗ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗಲು 70 ಆಸನ ಸಾಮರ್ಥ್ಯದ ಬೋಟ್ ಓಡಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಜಿರಮ್‍ನಲ್ಲಿ ನಡೆದಿದೆ. ಇದೀಗ ಕೇರಳ ಜಲಸಾರಿಗೆ ವಿಭಾಗ (ಎಸ್‍ಡಬ್ಲ್ಯೂಟಿಡಿ)ದ ಅಧಿಕಾರಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಸಂದ್ರ ಬಾಬು ಜಲಸಾರಿಗೆ ಅಧಿಕಾರಿಗಳು ಮೂಲಕ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಸಂದ್ರ ಕೂಲಿ ಕಾರ್ಮಿಕ ದಂಪತಿಯ ಪುತ್ರಿಯಾಗಿದ್ದಾಳೆ. ಕಳೆದ ಒಂದು ವರ್ಷದಿಂದ ಸಂದ್ರ ಬಾಬು ಕೊಟ್ಟಾಯಂ ಜಿಲ್ಲೆಯ ಕಾಂಜಿರಾಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ. ವಿದ್ಯಾರ್ಥಿನಿ ಆಲಪ್ಪುಳದಲ್ಲಿರುವ ಎಂಎನ್ ಬ್ಲಾಕ್‍ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು.

    ದ್ಯಾರ್ಥಿನಿ ಎಂಎನ್ ಬ್ಲಾಕ್‍ನಿಂದ ತನ್ನ ಶಾಲೆಗೆ ತಲುಪಲು ಕೊಟ್ಟಾಯಂ ಜಿಲ್ಲೆಯ ಗಡಿ ಗ್ರಾಮವಾದ ಕಾಂಜಿರಮ್‍ಗೆ ಸರ್ಕಾರಿ ಬೋಟ್ ಸೇವೆ ಇದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಕುಟ್ಟನಾಡ್ ಪ್ರದೇಶದ ನಾನ ಕಡೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಬೋಟ್‍ಗಳ ಸಂಚಾರ ನಿಂತಿವೆ. ಈ ಮಧ್ಯೆ ಕೇರಳ ಸರ್ಕಾರ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿತ್ತು. ಹೀಗಾಗಿ ಬೋಟ್ ಸಂಚಾರವಿಲ್ಲದೆ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ಹೋಗಲು ಸಾಧ್ಯವಿರಲಿಲ್ಲ.

    ಈ ವೇಳೆ ಕೇರಳ ಜಲಸಾರಿಗೆ ಇಲಾಖೆ ವಿದ್ಯಾರ್ಥಿನಿ ನೆರವಿಗೆ ಬಂದಿದ್ದು, ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದೆ. ಮೇ 29 ಮತ್ತು 30 ರಂದು ಎರಡು ದಿನ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಹೋಗಲು 70 ಆಸನಗಳ ಸಾಮರ್ಥ್ಯದ ಬೋಟ್‍ಅನ್ನು ಆಕೆಯಾಗಿ ಓಡಿಸಲಾಗಿದೆ. ಈ ಬೋಟ್‍ನಲ್ಲಿ ಚಾಲಕ, ನೇವಿಗೇಟರ್, ಬೋಟ್ ಮಾಸ್ಟರ್ ಮತ್ತು ಇಬ್ಬರು ಸಹಾಯಕರು ಸೇರಿ ಒಟ್ಟು ಐದು ಸಿಬ್ಬಂದಿಯನ್ನು ನೇಮಿಸಲಾಗಿತ್ತು.

    ವಿದ್ಯಾರ್ಥಿನಿಯನ್ನ ಸೋಮವಾರ ಬೆಳಗ್ಗೆ 11.30ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಕಾಂಜಿರಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯ ಮುಂಭಾಗದಲ್ಲಿರುವ ಜೆಟ್ಟಿಯಲ್ಲಿ ಇಳಿಸಲಾಯಿತು. ಅಲ್ಲಿಯೇ ವಿದ್ಯಾರ್ಥಿನಿಗಾಗಿ ಬೋಟ್ ಕಾಯುತ್ತಿತ್ತು. ಮತ್ತೆ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮುಗಿಸಿದ ಬಳಿಕ ಬೋಟ್ ಮೂಲಕ ಮನೆಗೆ ತಲುಪಿಸಿದ್ದೇವೆ ಎಂದು ಬೋಟ್ ಅಧಿಕಾರಿ ತಿಳಿಸಿದ್ದಾರೆ.

    ಇಲಾಖೆ ಸಚಿವ ಮತ್ತು ಎಸ್‍ಡಬ್ಲ್ಯೂಟಿಡಿ ನಿರ್ದೇಶಕ ಶಾಜಿ ವಿ.ನಾಯರ್ ಅವರು ಪರೀಕ್ಷೆ ಬರೆಯಲು ನನಗೆ ಸಹಾಯ ಮಾಡಿದರು. ಮೊದಲು ನನ್ನ ಪೋಷಕರು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಸಾರಿಗೆ ಇಲಾಖೆಯನ್ನು ಸಂಪರ್ಕಿಸಿದ್ದರು. ಎಸ್‍ಡಬ್ಲ್ಯೂಟಿಡಿ ಸಚಿವರು ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ ಎಂದು ಸಂದ್ರ ಸಂತಸದಿಂದ ಹೇಳಿದ್ದಾಳೆ.

    ಈ ಬಗ್ಗೆ ಮಾತನಾಡಿದ ಶಾಜಿ ವಿ.ನಾಯರ್ ಮಾತನಾಡಿ, ಈ ಸೇವೆಯನ್ನು ನಿರ್ವಹಿಸಲು ಸರ್ಕಾರ ಮತ್ತು ಸಚಿವರು ಸಂಪೂರ್ಣ ಬೆಂಬಲ ನೀಡಿದರು. ವಿದ್ಯಾರ್ಥಿನಿಯ ಪ್ರಯಾಣಕ್ಕೆ 4,000 ರೂಪಾಯಿ ಖರ್ಚಾಗಿದೆ. ಆದರೆ ಆಕೆಯಿಂದ ಒಂದು ದಿನದ ಪ್ರಯಾಣಕ್ಕೆ ನಿಗದಿತ ಪ್ರಯಾಣ ದರ 18 ರೂ. ಮಾತ್ರ ಪಡೆಯಲಾಗಿದೆ. ಆರ್ಥಿಕ ನಷ್ಟದ ಬಗ್ಗೆ ನಾವು ಯೋಚಿಸಲಿಲ್ಲ. ಏಕೆಂದರೆ ವಿದ್ಯಾರ್ಥಿನಿ ತನ್ನ ಪರೀಕ್ಷೆಯನ್ನು ಬರೆಯುವುದು ನಮಗೆ ಮುಖ್ಯವಾಗಿತ್ತು ಎಂದು ಹೇಳಿದರು.