Tag: boat

  • ಕುಡಿದ ಮತ್ತಲ್ಲಿ ದೋಣಿ ಕದ್ದು, ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ಸಿಲುಕಿ ಪರದಾಡಿದ

    ಕುಡಿದ ಮತ್ತಲ್ಲಿ ದೋಣಿ ಕದ್ದು, ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ಸಿಲುಕಿ ಪರದಾಡಿದ

    ಕಾರವಾರ: ಕೋಣಿ ಬೀಚ್ ನಲ್ಲಿ ನಿಲ್ಲಿಸಿದ್ದ ದೋಣಿಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ಕದ್ದು, ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.

    ಲೈಟ್ ಹೌಸ್ ನೋಡಲು ಹೋದ ಮಹಾರಾಷ್ಟ್ರ ಮೂಲದ ಸಪ್ನಲ್ (21) ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡಿದ್ದ. ಬಳಿಕ ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿ, ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಅರಗ ಜ್ಞಾನೇಂದ್ರಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್

    ಇಂದು ಕಾರವಾರದ ಕೋಣಿ ಬೀಚ್ ಗೆ ಬಂದಿದ್ದ ಈತನಿಗೆ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿರುವ ಲೈಟ್ ಹೌಸ್ ನೋಡುವ ಹಂಬಲವಾಗಿದೆ. ಬೀಚ್ ನಲ್ಲಿ ನಿಲ್ಲಿಸಿದ್ದ ಓಂ ಯತಾಳ ಎಂಬ ನಾಡದೋಣಿಯನ್ನು ಕುಡಿದ ಮತ್ತಲ್ಲಿ ಕದ್ದು, ಸಮುದ್ರದಲ್ಲಿ ಹೋಗಿ ಲೈಟ್ ಹೌಸ್ ತಲುಪಿದ್ದಾನೆ. ಈ ವೇಳೆ ದೋಣಿಯ ಲಂಗುರನ್ನು ಸರಿಯಾಗಿ ಹಾಕದ್ದರಿಂದ ಲೈಟ್ ಹೌಸ್ ಬಳಿಯ ದ್ವೀಪದಲ್ಲಿರುವ ಬಂಡೆಯ ಬಳಿ ಸಿಲುಕಿಕೊಂಡಿದೆ.

    ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆ ಸಿಪಿಐ ನಿಶ್ಚಲ್ ಕುಮಾರ್, ಇಂಟರ್‍ಸೆಪ್ಟರ್ ಬೋಟ್ ಮೂಲಕ ಸ್ಥಳಕ್ಕೆ ತೆರಳಿ, ಈತನನ್ನು ರಕ್ಷಿಸಿ ಕರೆತಂದಿದ್ದಾರೆ. ಬಳಿಕ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಮುರುಡೇಶ್ವರದಲ್ಲಿ ದೋಣಿ ಪಲ್ಟಿ- ಏಳು ಮೀನುಗಾರರ ರಕ್ಷಣೆ

    ಮುರುಡೇಶ್ವರದಲ್ಲಿ ದೋಣಿ ಪಲ್ಟಿ- ಏಳು ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಪಲ್ಟಿಯಾಗಿ ಏಳು ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

    ಮುರುಡೇಶ್ವರದಿಂದ ಜಲಗಂಗಾ ಎಂಬ ಹೆಸರಿನ ದೋಣಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಅಲೆಗಳ ಅಬ್ಬರಕ್ಕೆ ಬೋಟ್ ತಳಭಾಗಕ್ಕೆ ಅಲೆಯಿಂದ ಹಾನಿಯಾಗಿ ಪಲ್ಟಿಯಾಗಿದೆ. ತಕ್ಷಣ ಸ್ಥಳೀಯ ಮೀನುಗಾರರು ಇವರನ್ನು ರಕ್ಷಿಸಿದ್ದಾರೆ.

    ಜನಾರ್ಧನ್ ಪುರ್ಸು, ಹರಿಕಾಂತ ಗದ್ದೆಮನೆ ಅವರಿಗೆ ಸೇರಿದ ಬೋಟ್ ಇದಾಗಿದ್ದು, ಬೋಟ್ ಪಲ್ಟಿಯಾಗಿ ಬಲೆಗಳು ಕೊಚ್ಚಿಹೋಗಿವೆ. ಬೋಟ್ ಮತ್ತು ಇಂಜಿನ್ ಹಾಳಾಗಿದ್ದು 1,50,000 ರೂ. ಹಾನಿಯಾಗಿದೆ.

  • ಕೋಟಿ ಖರ್ಚು ಮಾಡಿದರೂ ಪಾತಿ ದೋಣಿಯೇ ಗ್ರಾಮಕ್ಕೆ ಸಂಚಾರ ಸಾಧನ

    ಕೋಟಿ ಖರ್ಚು ಮಾಡಿದರೂ ಪಾತಿ ದೋಣಿಯೇ ಗ್ರಾಮಕ್ಕೆ ಸಂಚಾರ ಸಾಧನ

    – ಸೇತುವೆ ದಾಟಲು ಏಣಿ ನಿರ್ಮಿಸಿಕೊಂಡ ಗ್ರಾಮಸ್ಥರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೊಗರಿಬೈಲದಲ್ಲಿ ಅಘನಾಶಿನಿ ನದಿ ಸೇತುವೆಯ ಎರಡೂ ಬದಿ ಸಂಪರ್ಕಕ್ಕೆ ಸ್ಥಳೀಯರೇ ಅಡಿಕೆ ಮರ, ಕಟ್ಟಿಗೆ ಕಂಬ ಬಳಸಿ, ಶ್ರಮದಾನದ ಮೂಲಕ ಏಣಿ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಸೇತುವೆ ಮೇಲೆ ಓಡಾಡಲು ಅನುಕೂಲ ಕಲ್ಪಿಸಿಕೊಂಡಿದ್ದಾರೆ.

    ಬೊಗರಿಬೈಲ, ಉಪ್ಪಿನಪಟ್ಟಣ ಧಕ್ಕೆ ನಡುವೆ ಸುಮಾರು 17 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಎರಡೂ ಬದಿಗೆ ರಸ್ತೆ ಸಂಪರ್ಕಿಸುವ ಕೆಲಸ ಮಾತ್ರ ಮೂರು ವರ್ಷಗಳಿದಿಂದ ಬಾಕಿ ಉಳಿದಿದೆ.

    ಸಿದ್ದಾಪುರ, ಹೊನ್ನಾವರ ಸಂಪರ್ಕ ರಸ್ತೆ
    ಬ್ರಿಟಿಷರ ಕಾಲದಲ್ಲಿ ಎತ್ತಿನಗಾಡಿ ಓಡಾಡಿದ ಹೊನ್ನಾವರದ ಕತಗಾಲ ರಸ್ತೆಯನ್ನು ಈ ಸೇತುವೆ ಸಂಪರ್ಕಿಸುತ್ತದೆ. ಎರಡೂ ಕಡೆ ಮೂರು ಗ್ರಾಮ ಪಂಚಾಯಿತಿಗಳ ಹತ್ತಾರು ಊರುಗಳ ಸಂಪರ್ಕಕ್ಕೆ ಅತೀ ಸಮೀಪದ ಮಾರ್ಗ ಇದಾಗಿದೆ.

    ಈ ಊರಿನ ರಸ್ತೆಯು ಸಿದ್ದಾಪುರ, ಹೊನ್ನಾವರ ತಾಲೂಕನ್ನು ಸಂಪರ್ಕಿಸುತ್ತದೆ. ವಾಹನ ಸವಾರರಿಗೆ ಇಂಧನ ಉಳಿಸುವ ಈ ರಸ್ತೆ ಎರಡು ತಾಲೂಕನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೂ ಮೊದಲು ನದಿಯ ಎರಡೂ ಕಡೆ ಜನರ ಓಡಾಟಕ್ಕೆ ಪಾತಿ ದೋಣಿಗಳ ಬಳಕೆ ಇತ್ತು. ಬೇರೆ ಊರಿನ ಜನ ಇಲ್ಲಿ ದೋಣಿ ಬಳಸುತ್ತಿದ್ದರು. ಎರಡು ವರ್ಷಗಳಿಂದ ದೋಣಿ ಹಾಳಾಗಿದೆ. ಹಾಳಾದ ದೋಣಿಯಲ್ಲಿ ಮಳೆಗಾಲದ ಪ್ರವಾಹದಲ್ಲಿ ನದಿ ದಾಟುವುದು ಅಪಾಯಕಾರಿ.

    ಕುಮಟಾ ಶಾಸಕ ದಿನಕರ್ ಶಟ್ಟಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೂ ಇಲ್ಲಿನ ಸಮಸ್ಯೆ ಕುರಿತು ಮನವಿ ಸಹ ನೀಡಲಾಗಿದೆ. ಆದರೆ ಮೂರು ವರ್ಷಗಳು ಗತಿಸಿದರೂ ಊರಿಗೆ ಸೇತುವೆ ಸಂಪರ್ಕ ಕನಸಾಗಿ ಉಳಿದಿದೆ. ಹೀಗಾಗಿ ಗ್ರಾಮಸ್ಥರು ಸೇರಿ ಇದೀಗ ಎರಡು ದಿನ ಶ್ರಮದಾನ ಮಾಡುವ ಮೂಲಕ ಸೇತುವೆಗೆ ಏಣಿ ರೂಪದಲ್ಲಿ ಸಂಪರ್ಕ ಕಲ್ಪಿಸಿದ್ದಾರೆ.

    ಸದ್ಯ ಮಳೆಗಾಲ ಪ್ರಾರಂಭವಾದ್ದರಿಂದ ಈ ಭಾಗದಲ್ಲಿ ಓಡಾಡುವುದು ಸ್ಥಳೀಯ ಜನರಿಗೆ ಕಷ್ಟಸಾಧ್ಯವಾಗಿದೆ. ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ವಾದರೂ ಇಲ್ಲಿನ ಜನರ ದಿನನಿತ್ಯದ ಗೋಳು ಮಾತ್ರ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷದಿಂದ ಬದಲಾಗಿಲ್ಲ.

  • ಶೂ ಒದ್ದೆಯಾಗದಂತೆ ನೋಡಿಕೊಂಡ ಸಚಿವರ ವಿಡಿಯೋ ವೈರಲ್

    ಶೂ ಒದ್ದೆಯಾಗದಂತೆ ನೋಡಿಕೊಂಡ ಸಚಿವರ ವಿಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ ಮೀನುಗಾರಿಕೆ-ಮೀನುಗಾರರ ಕಲ್ಯಾಣ ಮತ್ತು ಪಶುಸಂಗೋಪನಾ ಸಚಿವ ಅನಿತಾ ರಾಧಾಕೃಷ್ಣನ್ ಅವರು ತಮ್ಮ ಶೂ ಒದ್ದೆಯಾಗದಂತೆ ನೋಡಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

    ಸಮುದ್ರ ಕೊರೆತದ ಬಗ್ಗೆ ತನಿಖೆ ನಡೆಸಲು ಡಿಎಂಕೆ ಸಚಿವರು ಪಾಲವರ್ಕಡಿನಲ್ಲಿ ಸ್ಥಳೀಯರೊಂದಿಗೆ ಮಾತನಾಡಿ, ದೋಣಿ ವಿಹಾರವನ್ನು ಮಾಡಿದ್ದಾರೆ.

    ಈ ಸಮಯದಲ್ಲಿ ದೋಣಿ ದಡಕ್ಕೆ ಬಂದಾಗ, ಮೀನುಗಾರರು ಸಚಿವರು ದೋಣಿಯಿಂದ ಇಳಿಯುವಂತೆ ಕುರ್ಚಿಯನ್ನು ಇರಿಸಿದ್ದಾರೆ. ಆದರೆ ತನ್ನ ಬೂಟೂಗಳನ್ನು ಒದ್ದೆಯಾಗಿಸಲು ಹಿಂಜರಿಯುತ್ತಿದ್ದ ಸಚಿವರನ್ನು ನೋಡಿ ಮೀನುಗಾರರು ಅವರ ಭುಜದ ಮೇಲೆ ಕುರಿಸಿಕೊಂಡು ಎತ್ತಿಕೊಂಡು ಹೋಗುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಇದು ವಿಐಪಿ ಸಂಸ್ಕೃತಿ ಎಂದು ಸಚಿವರನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟ ಪುನಾರಚನೆ – ಟ್ರೆಂಡಿಂಗ್ ಆದ ಅಣ್ಣಾಮಲೈ

    ಅನಿತಾ ರಾಧಾಕೃಷ್ಣನ್ ಪ್ರತಿಕ್ರಿಯಿಸಿ, “ಅದರಲ್ಲಿ ಏನು ತಪ್ಪಿದೆ? ಅವರು ಪ್ರೀತಿಯಿಂದ ಕೇಳಿದ್ದಕ್ಕೆ ನಾನು ಅವರ ಹೆಗಲ ಮೇಲೆ ಹತ್ತಿದೆ. ಒಂದು ವೇಳೆ ನಾನು ಒತ್ತಾಯಿಸಿದರೆ ಅದು ತಪ್ಪು ಆಗುತ್ತದೆ. ಅವರೇ ಕೇಳಿಕೊಂಡ ಅದು ಹೇಗೆ ತಪ್ಪು? ಮೀನುಗಾರಿಕೆಯ ಮಂತ್ರಿಯಾಗಿ ಮೀನುಗಾರರ ಭುಜದ ಮೇಲೆ ಏರದೇ ಬೇರೆ ಯಾರ ಭುಜವನ್ನು ಏರಲು ಸಾಧ್ಯ ಎಂದು ಪ್ರಶ್ನಿಸಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

  • ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ಯಾದಗಿರಿ: ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಸಮೀಪದಲ್ಲಿ ನಡೆದಿದೆ.

    ವಡಗೇರಾ ತಾಲೂಕಿನ ಅಗ್ನಿಹಾಳ ಗ್ರಾಮದ ಮನು(20) ಈ ಅವಘಡದಲ್ಲಿ ಮೃತ ಮೀನುಗಾರ. ಇಂದು ಬೆಳಗ್ಗೆ ತನ್ನ ತಂದೆ ಜೊತೆಗೆ ಕೃಷ್ಣಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮನು, ಥರಮಾಕೋಲ್ ದೋಣಿಯ ಮೂಲಕ ಬಲೆ ಹಾಕಲು ಮುಂದಾಗಿದ್ದ, ಈ ವೇಳೆ ಮನು ಕಾಲಿಗೆ ಬಲೆ ಸಿಕ್ಕು ಹಾಕಿಕೊಂಡಿದೆ. ಇದರಿಂದಾಗಿ ನೀರಿನಲ್ಲಿ ಕಾಲು ಅಲುಗಾಡಿಸಲಾಗದೇ ದೋಣಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಸದ್ಯ ಸಹ ಮೀನುಗಾರರು ಮೃತದೇಹ ಹೊರ ತೆಗೆದಿದ್ದು, ನದಿ ತೀರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾಗಮಂಡಲ ಜಲಾವೃತ – ಘಟಪ್ರಭಾ, ಕೃಷ್ಣ ನದಿ ತೀರದ ಜನರಿಗೆ ಪ್ರವಾಹ ಭೀತಿ

  • ಕುಡಿತದ ಮತ್ತಿನಲ್ಲಿ  ಚಾಲನೆ – ಮೀನುಗಾರಿಕೆಗೆ ತೆರಳಿದ್ದ ಬೋಟ್ ಅವಘಡ

    ಕುಡಿತದ ಮತ್ತಿನಲ್ಲಿ ಚಾಲನೆ – ಮೀನುಗಾರಿಕೆಗೆ ತೆರಳಿದ್ದ ಬೋಟ್ ಅವಘಡ

    ಮಂಗಳೂರು: ಕುಡಿತದ ಅಮಲಿನಲ್ಲಿ ಬೋಟ್ ಚಲಾಯಿಸಿದ ಪರಿಣಾಮ ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ಅವಘಡಕ್ಕೀಡಾದ ಘಟನೆ ಮಂಗಳೂರು ಉಳ್ಳಾಲ ಕೋಡಿ ಕಡಲ ತೀರದಲ್ಲಿ ನಡೆದಿದೆ.

    ಮಂಗಳೂರಿನ ಉಳ್ಳಾಲದ ಅಶ್ರಫ್ ಎಂಬವರ ‘ಅಝಾನ್’ ಹೆಸರಿನ ಬೋಟ್ ನಸುಕಿನ ಜಾವ ರಾತ್ರಿ 1:30 ಸುಮಾರಿಗೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು ತೆರಳಿತ್ತು.

    ಈ ಬೋಟ್ ನಲ್ಲಿ 10 ಮಂದಿ ತಮಿಳುನಾಡು ಮೂಲದ ಮೀನುಗಾರರಿದ್ದು ಅದರಲ್ಲಿ ಚಾಲಕ ಸೇರಿ ಐವರು ಕುಡಿತದ ಮತ್ತಿನಲ್ಲಿದ್ದರು. ಸಮುದ್ರ ಮಧ್ಯೆ ಕುಡಿತದ ಅಮಲಿನಲ್ಲಿ ಚಾಲಕ ಬೋಟನ್ನು ಇನ್ನೋರ್ವ ಮೀನುಗಾರನಿಗೆ ಚಲಾಯಿಸಲು ಕೊಟ್ಟಿದ್ದು ಅವಘಡಕ್ಕೆ ಕಾರಣವಾಗಿದೆ.

    ಬೋಟ್ ದಡಕ್ಕೆ ಬಂದು ಅಪ್ಪಳಿಸಿದ್ದು ಸ್ಥಳೀಯರು ಇಂದು ಬೆಳಗ್ಗಿನ ಜಾವ ಎಲ್ಲಾ 10 ಮಂದಿ ಮೀನುಗಾರರನ್ನೂ ರಕ್ಷಣೆ ಮಾಡಿದ್ದಾರೆ. ಈ ವೇಳೆ ಮೀನುಗಾರರು ವಾಂತಿ ಮಾಡುತ್ತಿದ್ದ ಕಾರಣ ಕುಡಿದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಉಡುಪಿ: ಮಂಗಳೂರಿನ ಎಂಆರ್‌ಪಿಎಲ್ ಕಂಪನಿಯ ಟಗ್ ದೋಣಿ ಮುಳುಗಿರುವ ಘಟನೆಗೆ ಸಂಬಂಧಿಸಿದಂತೆ 9 ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕರಾವಳಿ ಕಾವಲುಪಡೆ ಪೊಲೀಸರ ತಂಡ ಕೂಡಾ ರಕ್ಷಣಾ ಕೆಲಸದಲ್ಲಿ ಕೈಜೋಡಿಸಿದ್ದಾರೆ.

    ಬೋಟ್ ನಲ್ಲಿವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಸತತ 8 ಗಂಟೆಯಿಂದ ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿಕೊಂಡ ಇಬ್ರು ಉಡುಪಿಯ ಪಡುಕೆರೆ ಮಟ್ಟು ಕೊಪ್ಲಕ್ಕೆ ಬಂದಿದ್ದಾರೆ. ಬದುಕುಳಿದವರನ್ನು ಮೊಮಿರುಲ್ ಮುಲ್ಲಾ, ಕರೀಮುಲ್ಲಾ ಶೇಕ್ ಎಂದು ಗುರುತಿಸಲಾಗಿದೆ.

    ಈ ನಡುವೆ ಮಗುಚಿಬಿದ್ದ ಟಗ್ ಬೋಟಿನಲ್ಲಿದ್ದ ಒಬ್ಬ ವ್ಯಕ್ತಿಯದ್ದು ಎನ್ನಲಾದ ಶವಪತ್ತೆಯಾಗಿದೆ. ಹೇಮಚಂದ್ರ ಜಾ ಎಂಬಾತನ ಶವ ಪಡುಬಿದ್ರೆಯಲ್ಲಿ ಸಿಕ್ಕಿದೆ. ಒಟ್ಟು ಒಂಬತ್ತು ಜನರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯಿದೆ. ದಡ ಸೇರಿದ ಇಬ್ಬರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಯುವಕ ಬಂದು ತಲುಪಿದ್ದಾನೆ. ನಸೀಮ್ ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದವನು. ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್ ಪಿಎಲ್ ಕಂಪನಿಯ ನೌಕರನಾಗಿದ್ದು, ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ನೀರುಪಾಲಾಗಿದ್ದರು.

    ಸದ್ಯ ಬೋಟ್‍ನಲ್ಲಿ ಸುರಕ್ಷಿತವಾಗಿರುವ 9 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದೆ. ಸೆಲ್ಫಿ ವಿಡಿಯೋ ಮಾಡಿ ರಕ್ಷಣೆಗೆ ಮೊರೆ ಹೋಗಿದ್ದಾರೆ. ಕರಾವಳಿ ಕಾವಲುಪಡೆ ಪೊಲೀಸರಿಗೆ ವೀಡಿಯೋ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಚರಣೆ ಕಡಲ ಅಲೆಗಳ ಅಬ್ಬರ ಅಡ್ಡಿಯಾಗಿದೆ.

    ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್‍ಪಿ ಎಸ್ ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ.

  • ಹಡಗು, ಮೀನುಗಾರಿಕಾ ಬೋಟ್ ಅಪಘಾತ- ಇಬ್ಬರು ಸಾವು, 12 ಮಂದಿ ನಾಪತ್ತೆ

    ಹಡಗು, ಮೀನುಗಾರಿಕಾ ಬೋಟ್ ಅಪಘಾತ- ಇಬ್ಬರು ಸಾವು, 12 ಮಂದಿ ನಾಪತ್ತೆ

    ಮಂಗಳೂರು: ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಮತ್ತು ಮೀನುಗಾರಿಕಾ ಬೋಟ್ ಅಪಘಾತ ಸಂಭವಿಸಿದೆ.

    ಕೇರಳ-ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಇದಾಗಿದೆ. ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

    ಅಪಘಾತದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೋರ್ ನಿಂದ ಮೀನುಗಾರಿಕಾ ಬೋಟ್ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು.

    ಸದ್ಯ ಇಂಡಿಯನ್ ಕೋಸ್ಟ್ ಗಾರ್ಡ್‍ನ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ಬಗ್ಗೆಯೂ ಇಂಡಿಯನ್ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆ ಮಾಹಿತಿ ನೀಡಿದೆ.

  • ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ್ದ 11 ಭಾರತೀಯ ಮೀನುಗಾರರನ್ನು ಬಂಧಿಸಿರುವ ಘಟನೆ ನಡೆದಿದೆ.

    ಸಮುದ್ರದ ಗಡಿ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನ ಜಲ ಪ್ರದೇಶ ಪ್ರವೇಶಿಸಿದ ಎರಡು ಬೋಟ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿದ್ದ 11 ಮೀನುಗಾರರನ್ನು ಪ್ರಾಥಮಿಕ ವಿಚಾರಣೆ ಬಳಿಕ ಡಾಕ್ಸ್ ಪೊಲೀಸ್ ಕರಾಚಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ಕಡಲ ಭದ್ರತಾ ಪಡೆ (ಪಿಎಂಎಸ್) ಪ್ರಕಟಣೆಯಲ್ಲಿ ತಿಳಿಸಿದೆ.

    ಹಡಗುಗಳು, ವಿಮಾನಗಳು ಮತ್ತು ವೇಗದ ದೋಣಿಗಳು ನಿಯಮಿತವಾಗಿ ಕಡಲ ವಲಯದಲ್ಲಿ ಗಸ್ತು ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳುತ್ತೇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ನೀರಿನಲ್ಲಿ ಹಲವಾರು ಅನಗತ್ಯ ಒಳನುಗ್ಗುವಿಕೆಗಳನ್ನು ಗಮನಿಸಲಾಗಿದೆ ಎಂದು ಪಿಎಂಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಅರೇಬಿಯನ್ ಸಮುದ್ರದಲ್ಲಿ ಕಡಲ ಗಡಿಯನ್ನು ಸ್ಪಷ್ಟವಾಗಿ ಗುರುತಿಸದ ಕಾರಣ ಮೀನುಗಾರರು ಬರುತ್ತಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಆಗಾಗ್ಗೆ ಮೀನುಗಾರರನ್ನು ಬಂಧಿಸುತ್ತಿವೆ. ಮೀನುಗಾರರಿಗೆ ತಮ್ಮ ನಿಖರವಾದ ಸ್ಥಳವನ್ನು ತಿಳಿಯಲು ತಂತ್ರಜ್ಞಾನವನ್ನು ಹೊಂದಿದ ದೋಣಿಗಳಿಲ್ಲ.

  • ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿಗೆ ಬಲಿ

    ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿಗೆ ಬಲಿ

    ಮುಂಬೈ: ಕುಟುಂಬಸ್ಥರು ಒಟ್ಟಾಗಿ ದೋಣಿ ವಿವಾಹರಕ್ಕೆಂದು ಹೋದವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ತಂದೆ, ಮಗ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಉಜನಿ ಹಿನ್ನೀರಿನಲ್ಲಿ ನಡೆದಿದೆ.

    13 ವರ್ಷದ ಮಗ ಮತ್ತು 49 ವರ್ಷದ ತಂದೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೆಲ್ಫಿ ಹುಚ್ಚಾಟಕ್ಕೆ ಇಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ದಂಪತಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೋಗಿದ್ದಾರೆ. ಈ ವೇಳೆ ಬೇರೆ ಬೇರೆ ಪೋಸ್ ಕೊಟ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿಗೆ ಪೋಸ್ ಕೊಡುತ್ತಾ ತುದಿಯವರೆಗೂ ಹೋಗಿ ನೀತಿದ್ದಾರೆ.

    ಈ ವೇಳೆ ನಿಯಂತ್ರಣ ತಪ್ಪಿ ನೀರಿಗೆ ದೋಣಿಯಲ್ಲಿದ್ದ 6 ಮಂದಿ ಬಿದ್ದಿದ್ದಾರೆ. ದೋಣಿ ಮಗುಚಿರುವುದನ್ನು ಕಂಡು ಹತ್ತಿರದಲ್ಲೇ ಇದ್ದ ಮೀನುಗಾರರು ಬಂದು ರಕ್ಷಣೆ ಮಾಡುವಷ್ಟರಲ್ಲಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉಳಿದವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬರಲಾಗಿದೆ.

    ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸೋಲ್ಲಾಪುರ ಎಸ್‍ಪಿ ತೇಜಸ್ವಿ ಸತ್ಪು ತಿಳಿಸಿದ್ದಾರೆ.