Tag: boat

  • ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಡಿಸ್ಪುರ್: 11 ವರ್ಷದ ಬಾಲಕ ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತನ್ನ ತಾಯಿ ಸೇರಿದಂತೆ ಮೂವರನ್ನು ರಕ್ಷಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

    11 ವರ್ಷದ ಕಮಲ್ ಕಿಶೋರ್ ದಾಸ್ ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕ. ಬುಧವಾರ ಕಮಲ್ ಕಿಶೋರ್ ದಾಸ್ ಕುಟುಂಬ ಉತ್ತರ ಗುವಾಹಟಿಯಿಂದ ತನ್ನ ಅಜ್ಜಿಯನ್ನು ಬಿಟ್ಟು ಮನೆಗೆ ವಾಪಸ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ.

    ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆಯೇ ಕಮಲ್ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. ಬಳಿಕ ಕಮಲ್ ಹಿಂದೆ ತಿರುಗಿ ನೋಡಿದಾಗ ತನ್ನ ತಾಯಿ ಮತ್ತು ಚಿಕ್ಕಮ್ಮ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಕಮಲ್ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಬಳಿಕ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ.

    “ದೋಣಿ ಪಿಲ್ಲರ್ ಗೆ ಬಡಿದಾಗ ನನ್ನ ತಾಯಿಯು ನನ್ನ ಶೂಗಳನ್ನು ತೆಗೆದುಕೊಂಡು ಈಜುವಂತೆ ಹೇಳಿದರು. ಅದರಂತೆಯೇ ನಾನು ಈಜಿ ತೀರಕ್ಕೆ ಸೇರಿದೆ. ಆದರೆ ನಾನು ತೀರಕ್ಕೆ ಬಂದಾಗ ನನ್ನ ತಾಯಿ ಮತ್ತು ಚಿಕ್ಕಮ್ಮ ಈಜುಕೊಂಡು ಬರಲು ಸಾಧ್ಯವಾಗಿಲ್ಲ. ಬಳಿಕ ನಾನು ನದಿಗೆ ಹಾರಿ ತಾಯಿಯ ಕೂದಲನ್ನು ಹಿಡಿದುಕೊಂಡು ಬಂದು ಪಿಲ್ಲರ್ ಹಿಡಿದುಕೊಳ್ಳುವಂತೆ ಮಾಡಿದೆ” ಎಂದು ಕಮಲ್ ಹೇಳಿದ್ದಾನೆ.

    ಬುರ್ಕಾ ಧರಿಸಿದ್ದ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನದಿಯಲ್ಲಿ ತೇಲುವುದಕ್ಕೂ ಕಷ್ಟ ಪಡುತ್ತಿದ್ದರು. ಬಳಿಕ ನಾನು ಮತ್ತೆ ನದಿಗೆ ಜಿಗಿದು ಅವರನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಮಗು ತಾಯಿಯ ಕೈಯಿಂದ ಜಾರಿ ನೀರಿನೊಳಗೆ ಬಿದ್ದು ಮುಂದೆ ಹೋಯಿತು. ತಾಯಿಯೂ ಕೂಡ ಮಗುವನ್ನು ರಕ್ಷಿಸಲು ನದಿಗೆ ಜಿಗಿದರು. ಆದರೆ ಈ ವೇಳೆ ನಾನು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಮಲ್ ಹೇಳಿದ್ದಾನೆ.

    ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುವುದನ್ನು ಅಭ್ಯಾಸ ಮಾಡಲು ಹೋಗುತ್ತಿದ್ದನು. ಇದರಿಂದಲೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು ಸಾಧ್ಯವಾಯಿತು ಎಂದು ಕಮಲ್ ತಾಯಿ ಜಿತುಮೋನಿ ದಾಸ್ ಹೇಳಿದ್ದಾರೆ.

    ಈ ದೋಣಿಯಲ್ಲಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದು, ಜೊತೆಗೆ ಅಕ್ರಮವಾಗಿ 18 ಮೋಟಾರ್ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಮೂವರನ್ನು ಕಮಲ್ ರಕ್ಷಿಸಿದ್ದು, 12 ಮಂದಿ ಈಜಿ ದಡ ಸೇರಿದ್ದಾರೆ. 10 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಂಬಿ ಹರಿಯುತ್ತಿರೋ ಭದ್ರಾ ನದಿಯಲ್ಲಿ ತೆಪ್ಪದಲ್ಲೇ ಮೃತದೇಹ ಸಾಗಿಸಿದ ಗ್ರಾಮಸ್ಥರು

    ತುಂಬಿ ಹರಿಯುತ್ತಿರೋ ಭದ್ರಾ ನದಿಯಲ್ಲಿ ತೆಪ್ಪದಲ್ಲೇ ಮೃತದೇಹ ಸಾಗಿಸಿದ ಗ್ರಾಮಸ್ಥರು

    ಚಿಕ್ಕಮಗಳೂರು: ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮಕ್ಕೆ ರಸ್ತೆಯಿಲ್ಲ, ಹೀಗಾಗಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮೃತ ದೇಹವನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಸಾಗಿಸಿದ್ದಾರೆ.

    ಮಂಗಳೂರಿನ ಆಸ್ಪತ್ರೆಯಲ್ಲಿ ಹೊಳೆಕುಡಿಗೆ ಲಕ್ಷ್ಮಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ದೇಹವನ್ನು ಗ್ರಾಮಕ್ಕೆ ತರಲು ಕಾಲು ದಾರಿಯ ಮೂಲಕ 12 ಕಿ.ಮೀ. ಸುತ್ತಿ ಬರಬೇಕು. ಆ ದಾರಿಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ, ಹೀಗಾಗಿ ತೆಪ್ಪದ ಮೂಲಕವೇ ಶವವನ್ನು ಸಾಗಿಸಬೇಕಾಯಿತು.

    ಹೊಳೆಕುಡಿಗೆ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ ಈ ಗ್ರಾಮಕ್ಕೆ 3 ದಶಕಗಳಿಂದಲೂ ರಸ್ತೆ ಕಲ್ಪಿಸಿಲ್ಲ ಹಾಗೂ ಮೂಲಸೌರ್ಕಗಳಿಂದ ಜನರು ವಂಚಿತರಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಮೂಡಿಗೆರೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೃತರ ಸಂಬಂಧಿ ರುದ್ರಯ್ಯ ದೂರಿದ್ದಾರೆ.

    ಇತ್ತೀಚೆಗೆ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ನದಿಯಲ್ಲಿಯೇ ಸಾಗಬೇಕಾಯಿತು. ನದಿ ಪ್ರವಾಹ ಹೆಚ್ಚಾದರೆ ವಾರಗಟ್ಟಲೇ ಮನೆಯಿಂದ ಹೊರಗೆ ಹೋಗಲು, ಮಕ್ಕಳು ಶಾಲೆಗೆ ತೆರಳವುದು ಕಷ್ಟವಾಗುತ್ತದೆ. ನಗರಕ್ಕೆ ಹೋಗಲು ತೆಪ್ಪದ ಮೂಲಕವೇ ಸಾಗಬೇಕು. ಬೆಳಗ್ಗೆಯಿಂದ ಸಂಜೆವರೆಗೆ ದೋಣಿಯ ಮೂಲಕ ಚಲಿಸುವುದು ಕಷ್ಟ. ಅನೇಕ ಬಾರಿ ಜಿಲ್ಲಾಡಳಿತಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಮಳೆಗಾಲ ನಿಂತ ಮೇಲೆ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳುತ್ತ ಅಧಿಕಾರಿಗಳು ಕಾಲ ದೂಡುತ್ತಿದ್ದಾರೆ ಎಂದು ಚಂದ್ರಶೇಖರ್ ಅಳಲು ತೋಡಿಕೊಂಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೋಟ್ ಹತ್ತಲು ಬೆನ್ನನ್ನೇ ಮೆಟ್ಟಿಲಾಗಿಸಿದ ಮೀನುಗಾರ!

    ಬೋಟ್ ಹತ್ತಲು ಬೆನ್ನನ್ನೇ ಮೆಟ್ಟಿಲಾಗಿಸಿದ ಮೀನುಗಾರ!

    ತಿರುವನಂತಪುರಂ: ಮಹಾಮಳೆ ಕರ್ನಾಟಕದ ಹಾಗೂ ಕೇರಳ ಜನತೆಯನ್ನು ತಲ್ಲಣಗೊಳಿಸಿದ್ದು, ಅನೇಕರು ವಿವಿಧ ರೀತಿಯ ಸಹಾಯಕ್ಕೆ ನಿಂತಿದ್ದಾರೆ. ಮೀನುಗಾರನೊಬ್ಬ ಬೆನ್ನನ್ನೇ ಮೆಟ್ಟಿಲು ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀನುಗಾರ ಕೆ.ಪಿ.ಜೈಸಾಲ್ ಮಲಪ್ಪುರಂ ಜಿಲ್ಲೆಯ ವೆಂಗರಾದಲ್ಲಿ ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದು, ಮಹಿಳೆಯರಿಗೆ ಬೋಟ್ ಹತ್ತಲು ಸಾಧ್ಯವಾಗಲಿಲ್ಲ. ಇರಿಂದಾಗಿ ಜೈಸಾಲ್ ಬೋಟ್ ಪಕ್ಕದಲ್ಲಿಯೇ ಮಂಡಿ ಹಾಗೂ ಎರಡು ಕೈಗಳನ್ನು ನೆಲಕ್ಕೆ ಊರಿ ಬೆನ್ನನ್ನು ಮೆಟ್ಟಿಲಿನಂತೆ ಮಾಡಿ ಬೋಟ್ ಹತ್ತಲು ಮಹಿಳೆಯರಿಗೆ ಸಹಾಯ ಮಾಡಿದರು.

    ಜೈಸಾಲ್ ಅವರ ಸಹಾಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಹಾಮಳೆಗೆ ದೇವರನಾಡಲ್ಲಿ 380 ಮಂದಿ ಪ್ರಾಣ ಕಳೆದುಕೊಂಡಿದ್ದು, ಸುಮಾರು 3.14 ಲಕ್ಷ ಜನರನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯಕ್ಕೆ 500 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಕೇರಳ ಸಂತ್ರಸ್ತರಿಗೆ ಪರಿಹಾರ ಧನ ಹರಿದು ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 6 ಗಂಟೆ ಸಮುದ್ರದಲ್ಲಿ ಈಜಿ ಸಾವನ್ನೇ ಗೆದ್ದು ಬಂದ ಮೀನುಗಾರ!

    6 ಗಂಟೆ ಸಮುದ್ರದಲ್ಲಿ ಈಜಿ ಸಾವನ್ನೇ ಗೆದ್ದು ಬಂದ ಮೀನುಗಾರ!

    ಮಂಗಳೂರು: ಮೀನುಗಾರಿಕೆಗೆ ಹೊರಟಿದ್ದ ಬೋಟ್‍ನಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರ 6 ಗಂಟೆಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

    ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ಹೋಗಿದ್ದಾಗ ಸಂಜೆಯ ವೇಳೆ ಬೋಟ್‍ನಲ್ಲಿದ್ದ ತಮಿಳುನಾಡಿನ ಕಾರ್ಮಿಕ ನಾಗರಾಜ್ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ತಕ್ಷಣವೇ ಅವರ ರಕ್ಷಣೆಗೆ ಮುಂದಾಗಿದ್ದರೂ ನಾಗರಾಜ್ ಸುಳಿವು ಸಿಕ್ಕಿರಲಿಲ್ಲ. ಬಳಿಕ ಸುಮಾರು 40 ಬೋಟ್‍ಗಳಲ್ಲಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿತ್ತು. ಆದ್ರೂ ನಾಗರಾಜ್ ಮಾತ್ರ ಪತ್ತೆಯಾಗಿರಲಿಲ್ಲ.

    ಕೊನೆಗೆ ಎನ್‍ಎಂ ಪಿಟಿ ಯಿಂದ ಹೊರಟ ಕೋಸ್ಟ್‍ಗಾರ್ಡ್ ನೌಕೆಯವರು ಆ ಸ್ಥಳದಲ್ಲಿ ಹುಡುಕಾಡಿ ಸಮುದ್ರಕ್ಕೆ ಬಿದ್ದ ಕಾರ್ಮಿಕನನ್ನು ಪತ್ತೆ ಹಚ್ಚಿ ರಕ್ಷಿಸಿ ರಾತ್ರಿ ನವಮಂಗಳೂರಿಗೆ ಕರೆತಂದಿದ್ದಾರೆ. ಒಟ್ಟಿನಲ್ಲಿ ಸಮುದ್ರದಲ್ಲಿ ಸುಮಾರು 6 ಗಂಟೆಗಳ ಕಾಲ ಈಜಿ ನಾಗರಾಜ್ ಸಾವನ್ನೇ ಗೆದ್ದು ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಲೆಗಳ ರಭಸಕ್ಕೆ ದಡಕ್ಕೆ ಅಪ್ಪಳಿಸಿದ ದೋಣಿ: ಮೀನುಗಾರರು ಅಪಾಯದಿಂದ ಪಾರು!

    ಅಲೆಗಳ ರಭಸಕ್ಕೆ ದಡಕ್ಕೆ ಅಪ್ಪಳಿಸಿದ ದೋಣಿ: ಮೀನುಗಾರರು ಅಪಾಯದಿಂದ ಪಾರು!

    ಕಾರವಾರ: ಸಮುದ್ರದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯೊಂದು ಅಲೆಗಳ ರಭಸಕ್ಕೆ ದಡಕ್ಕೆ ಬಂದು ಅಪ್ಪಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ನಗರದ ಬೈತಖೋಲ ಬಂದರು ಪ್ರದೇಶದ ಅಲಿಗದ್ದಾ ಕಡಲತೀರದಲ್ಲಿ ಈ ಘಟನೆ ನಡೆದಿದ್ದು, ವಾಸ್ಕೋ ಮೂಲದ ಬೋಟ್ ಹಗ್ಗ ತುಂಡಾದ ಪರಿಣಾಮ ದೋಣಿ ದಡಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ಬೋಟಿನಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ತಡರಾತ್ರಿ ಗಾಳಿಯ ರಭಸ ಹೆಚ್ಚಿದ್ದಿದ್ದರಿಂದಲೇ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

    ಕಳೆದ ನಾಲ್ಕೈದು ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ತೂಫಾನ್ ಉಂಟಾಗಿದ್ದು, ಕಾರವಾರ ಬಂದರು ಪ್ರದೇಶದಲ್ಲಿ ಮಂಗಳೂರು, ಉಡುಪಿ, ಗೋವಾ ಹಾಗೂ ತಮಿಳುನಾಡು ಭಾಗದ ಮೀನುಗಾರಿಕಾ ದೋಣಿಗಳು ಲಂಗರು ಹಾಕಿ ನಿಂತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರ ಸಂಚಾರ ಅಸ್ತವ್ಯಸ್ತ!

    ದಾವಣಗೆರೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರ ಸಂಚಾರ ಅಸ್ತವ್ಯಸ್ತ!

    ದಾವಣಗೆರೆ: ತುಂಗ ಹಾಗೂ ಭದ್ರಾ ನದಿಯ ನೀರು ಹೊರ ಬಿಟ್ಟ ಪರಿಣಾಮ ದಾವಣಗೆರೆಯ ನದಿಯ ತಟದಲ್ಲಿರುವ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇದರಿಂದಾಗಿ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

    ಚಿಕ್ಕಬಿದರಿ ಹಾಗೂ ಸಾರಥಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಸೇತುವೆ ಮುಳುಗಡೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಅದರಲ್ಲೂ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ನೂರಾರು ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. ಎರಡು ಗ್ರಾಮಗಳಿಗೆ ಸಂಚರಿಸಲು ಬೋಟ್ ಬಿಟ್ಟಿದ್ದು ಅದು ಕೂಡ ಉಪಯೋಗವಿಲ್ಲದಂತಾಗಿದೆ. ಶಾಸಕರು ಅಧಿಕಾರಿಗಳು ಬಂದಾಗ ಮಾತ್ರ ಬೋಟ್ ಸರಿಯಾಗಿ ಕೆಲಸ ಮಾಡುತ್ತದೆ ಬಾಕಿ ಸಮಯದಲ್ಲಿ ಕೆಟ್ಟು ನಿಂತಿರುತ್ತದೆ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.

    ಬೆಳಗ್ಗೆಯಿಂದಲೇ ಗ್ರಾಮದ ಜನರು ಕೆಲಸ ಕಾರ್ಯಗಳಿಗೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಬೋಟ್ ನ ವ್ಯವಸ್ಥೆ ಇದ್ದು, ಅದು ಕೂಡ ಕೇವಲ ಎರಡ್ಮೂರು ಬಾರಿ ಮಾತ್ರ ಸಂಚರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಾರೆಯೇ ವಿನಃ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿಲ್ಲ. ಅಲ್ಲದೆ ನದಿಯ ತಟದಲ್ಲಿರುವ ಹೊಲ ಗದ್ದೆಗಳು ಸಂಪೂರ್ಣವಾಗಿ ಮುಳುಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಲೆಗಳ ಹೊಡೆತಕ್ಕೆ ಸಿಲುಕಿ ಮಾರ್ಗಮಧ್ಯಯೇ ಕೆಟ್ಟು ನಿಂತ ದೋಣಿಗಳು: ಮೂವರ ರಕ್ಷಣೆ!

    ಅಲೆಗಳ ಹೊಡೆತಕ್ಕೆ ಸಿಲುಕಿ ಮಾರ್ಗಮಧ್ಯಯೇ ಕೆಟ್ಟು ನಿಂತ ದೋಣಿಗಳು: ಮೂವರ ರಕ್ಷಣೆ!

    ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಮತ್ತೆರಡು ದೋಣಿಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದಾಗಿ ಸಮುದ್ರ ಮಧ್ಯೆಯೇ ಸಿಲುಕಿಕೊಂಡಿವೆ.

    ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ಹನುಮ ಸಾನಿಧ್ಯ ಹೆಸರಿನ ದೋಣಿಯು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ ಸುಮಾರು 12 ನಾಟಿಕಲ್ ಮೈಲಿ ದೂರದಲ್ಲಿ ತಾಂತ್ರಿಕ ದೋಷದಿಂದಾಗಿ ದೋಣಿಯು ಅಲ್ಲೇ ನಿಂತುಕೊಂಡಿದೆ. ಸಮುದ್ರದಲ್ಲಿನ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ದೋಣಿಯು ಏಳು ಮೈಲಿ ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿದಿದೆ. ಈ ವೇಳೆ ದೋಣಿಯೊಳಗೆ ನೀರು ನುಗ್ಗಿ ನೋಡ ನೋಡುತ್ತಿದ್ದಂತೆ ಮುಳುಗುಡೆಯಾಗಿದೆ.

    ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಭವ್ಯತ ಮತ್ತು ಲಕ್ಷ್ಮೀ ಪಂಡರಿ ಎಂಬ ಹೆಸರಿನ ದೋಣಿಯ ಮೀನುಗಾರರು ರಕ್ಷಿಸಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಯನ್ನು ಇತರೆ ದೋಣಿಗಳ ಸಹಾಯದಿಂದ ಹಗ್ಗ ಕಟ್ಟಿ ದಡಕ್ಕೆ ಎಳೆದು ತರಲಾಗಿದೆ. ಈ ಅವಘಡದಿಂದಾಗಿ ಸುಮಾರು 9 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಇದಲ್ಲದೇ ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವಿಶ್ವಾಸ್ ಎಂಬ ದೋಣಿ ಸುರತ್ಕಲ್ ಸಮೀಪದ 35 ನಾಟಿಕಲ್ ಹಾಗೂ ಲಕ್ಷ್ಮೀ ಜನಾರ್ದನ್ ಎಂಬ ದೋಣಿಯು ಭಟ್ಕಳ ಸಮೀಪದ 40 ನಾಟಿಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆ ಯಿಂದ ಕೆಟ್ಟು ನಿಂತಿರುವ ಬಗ್ಗೆ ವರದಿಯಾಗಿದೆ. ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ದೋಣಿಯವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ದೋಣಿಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

    ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟಿಕಲ್ (9.25 ಕಿ.ಮೀ) ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.

    ಈಗಾಗಲೇ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿರುವ ದೋಣಿಗಳಲ್ಲಿರುವ ಮೀನುಗಾರರ ಸಂಪರ್ಕ ಮಾಡಿದ್ದು, ಕೆಟ್ಟು ನಿಂತಿರುವ ದೋಣಿಗಳಲ್ಲಿರುವ ಮೀನುಗಾರರನ್ನು ರಕ್ಷಿಸುವಂತೆ ಹೇಳಿದ್ದೇವೆ. ಅಲ್ಲದೇ ಸಮುದ್ರದಲ್ಲಿ ಸಾಕಷ್ಟು ಏರಿಳೀತ ಕಂಡುಬರುತ್ತಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಈಗಾಗಲೇ ಸೂಚನೆಯನ್ನು ನೀಡಲಾಗುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರೈತರು ತಮ್ಮ ಜಮೀನುಗಳಿಗೆ ತೆರಳಲು ಬೇಕು ದೋಣಿ ಸಹಾಯ- ಆಯ ತಪ್ಪಿದರೆ ಆಪಾಯ ಗ್ಯಾರಂಟಿ

    ರೈತರು ತಮ್ಮ ಜಮೀನುಗಳಿಗೆ ತೆರಳಲು ಬೇಕು ದೋಣಿ ಸಹಾಯ- ಆಯ ತಪ್ಪಿದರೆ ಆಪಾಯ ಗ್ಯಾರಂಟಿ

    ಬೆಳಗಾವಿ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಮಾಡಲು ರೆಡಿಯಾಗಿದಾರೆ. ಆದರೆ ಈ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಬೇಕೆಂದರೆ ದೋಣಿ ಸಹಾಯದಿಂದಲೇ ಹೋಗಬೇಕು. ಒಂದು ವೇಳೆ ಆಯ ತಪ್ಪಿದರೆ ಮಾತ್ರ ಆಪಾಯ ಗ್ಯಾರಂಟಿ.

    ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹುಣಶಿಕಟ್ಟಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಇಲ್ಲಿ ಉತ್ತಮ ಮಳೆಯಾದರೆ ರೈತರು ತಮ್ಮ ಜಮೀನುಗಳಿಗೆ ಹೋಗೋದು ಕಷ್ಟವಾಗುತ್ತದೆ. ಜಮೀನಿಗೆ ಹೋಗಲು ಜನರು ದೋಣಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಲ್ಲದೇ ನದಿ ಆ ಕಡೆ ದಡ ಸೇರಲು ರೈತರು ತಮ್ಮ ಜಾನುವಾರುಗಳ ಜೊತೆಗೆ ನದಿಯಲ್ಲಿ ಈಜಬೇಕಾದ ಪರಿಸ್ಥಿತಿ ಬಂದಿದೆ.

    ಈ ಗ್ರಾಮದ 1,500ಕ್ಕೂ ಹೆಚ್ಚು ಎಕರೆ ಜಮೀನು ಮಲಪ್ರಭೆ ನದಿ ಆಚೆ ಇದೆ. ರೈತರು ಏನಾದರೂ ಮಳೆ ಬಂದಿದೆ ಬಿತ್ತನೆ ಮಾಡಬೇಕೆಂದರೆ ನದಿ ದಾಟಲೇಬೇಕು. ಹೀಗಾಗಿ ರೈತರು ಜೀವ ಕೈಯಲ್ಲಿಟ್ಟುಕೊಂಡು ದೋಣಿ ಮೂಲಕ ಸಾಗುತ್ತಾರೆ. ಒಂದು ವೇಳೆ ಆಯ ತಪ್ಪಿದರೆ ಅಪಾಯ ಮಾತ್ರ ಕಟ್ಟಿಟ್ಟಬುತ್ತಿ. ಹೀಗಾಗಿ ತುಂಬಿ ಹರಿಯುತ್ತಿರುವ ಮಲಪ್ರಭೆಯಲ್ಲಿ ಜನ, ಜಾನುವಾರು ಈಜಿಕೊಂಡು ದಡ ಸೇರುವ ಸ್ಥಿತಿ ನಿರ್ಮಾಣವಾಗಿದೆ.

    ಅನೇಕ ವರ್ಷಗಳಿಂದ ಹುಣಶಿಕಟ್ಟಿ ಗ್ರಾಮದ ಜನರು ತಮ್ಮ ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಒಂದು ಬೋಟ್ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದೆ. ಈ ಬೋಟ್ ಬೆಳಗ್ಗೆ 9 ರಿಂದ 11, ಸಂಜೆ 3 ರಿಂದ 5ರ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತೆ. ಇನ್ನುಳಿದ ಸಂದರ್ಭದಲ್ಲಿ ರೈತರು ಜಮೀನಿಗೆ ಹೋಗಲು ನದಿಯಲ್ಲಿ ಈಜಿಕೊಂಡೆ ಹೋಗಬೇಕು. ನಮಗೊಂದು ಸೇತುವೆ ನಿರ್ಮಿಸಿದರೆ ಪುಣ್ಯ ಬರುತ್ತೆ ಎಂದು ಇಲ್ಲಿನ ಜನರು ಹೇಳುತ್ತಾರೆ.

    ಒಟ್ಟಾರೆಯಾಗಿ ಹುಣಶಿಕಟ್ಟಿ ಗ್ರಾಮದ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಜಮೀನುಗಳಿಗೆ ತೆರಳುತ್ತಾರೆ. ರೈತರ ಈ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಶಾಶ್ವತ ಪರಿಹಾರ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಉಡುಪಿ: ಭಟ್ಕಳ ಹಾಗೂ ಗಂಗೊಳ್ಳಿಯ ನಡುವೆ ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುತ್ತಿದ್ದ ಎರಡು ದೋಣಿಗಳು ಸಮುದ್ರ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕ್ಕಿ ಮುಳುಗಿ ಹೋಗಿದ್ದು, ದೋಣಿಯಲ್ಲಿದ್ದ 16 ಮಂದಿ ಮೀನುಗಾರರನ್ನು ರಕ್ಷಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಮೀನುಗಾರಿಕೆ ದೋಣಿಗಳು ಭಟ್ಕಳದ ಗಂಗೊಳ್ಳಿ ನಡುವೆ ಮುಳುಗಡೆಯಾಗಿದೆ. ಎರಡು ಪ್ರತ್ಯೇಕ ದೋಣಿಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಯ ವೀಡಿಯೊ ಬಹಳ ರೋಚಕವಾಗಿದ್ದು, ಕಣ್ಣೆದುರೇ ಎರಡು ಕೋಟಿ ಬೆಲೆಯ ದೋಣಿಗಳು ಮುಳುಗಡೆಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾತಾವರಣ ಏರುಪೇರಾದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವ-ಗಣೇಶ ದೋಣಿಯು ಸಂಜೆಯ ವೇಳೆಗೆ ತೀವ್ರವಾದ ಗಾಳಿ-ಮಳೆಯಿಂದಾಗಿ ಸಮುದ್ರದಲ್ಲಿ ನೀರಿನ ಅಲೆಗಳ ಆರ್ಭಟ ಜೋರಾಗಿದ್ದರಿಂದ ದೋಣಿಯಲ್ಲಿ ತೂತು ಬಿದ್ದು, ದೋಣಿ ಮುಳುಗಡೆಯಾಗಲು ಶುರುವಾಗಿದೆ. ದೋಣಿಯಲ್ಲಿದ್ದ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆಗೆ ಕರೆದಿದ್ದಾರೆ. ಕೂಡಲೇ ಮಲ್ಪೆಯಿಂದ ತೆರಳಿದ ದೋಣಿಗಳ ಮೂಲಕ ಮುಳುಗಡೆಯಾಗುತ್ತಿದ್ದ ದೋಣಿಯಿಂದ 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಗಿದೆ.

    ಇದಲ್ಲದೇ ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಎಂಬ ದೋಣಿಯು ಗಂಗೊಳ್ಳಿ ಹಾಗೂ ಭಟ್ಕಳದ ನಡುವೆ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಮೀನುಗಾರರ ಮಾಹಿತಿಯಿಂದ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ದೋಣಿಯ ಮೀನುಗಾರರು 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ.

    ಸಮುದ್ರದ ನಡುವೆ ಗಾಳಿ ಮಳೆ ಬೀಸುತ್ತಿದ್ದರಿಂದ ಮುಳುಗುತ್ತಿದ್ದ ದೋಣಿಯಿಂದ ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ರಕ್ಷಣೆಗೆ ತೆರಳಿದ ದೋಣಿಯಿಂದ ಹಗ್ಗ ಎಸೆದು ಅವರನ್ನು ರಕ್ಷಿಸಲಾಗಿದೆ. ಕೆಲ ಮೀನುಗಾರರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದ್ದು, ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ. ಈ ಎರಡು ಮುಳುಗಡೆಯಾಗುವ ದೋಣಿಯಲ್ಲಿದ್ದವರ ರಕ್ಷಣೆಯ ವಿಡಿಯೋ ನೋಡುವವರ ಮೈ ಜುಂ ಎನಿಸುವಷ್ಟು ರೋಮಾಂಚನಕಾರಿಯಾಗಿದ್ದು, ಸಾಕಷ್ಟು ವೈರಲ್ ಆಗಿದೆ.

    https://www.youtube.com/watch?v=XqFcvZYNWYY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ನಾಲ್ಕು ಜನ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದರು. ಈ ವೇಳೆ ಸ್ಥಳೀಯ ಮೀನುಗಾರರು ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

    ಭಟ್ಕಳದ ಬೆಳ್ನಿ ಗ್ರಾಮದ ತಿಮ್ಮಪ್ಪ ಮೊಗೇರ್, ರಾಮಚಂದ್ರ ಖಾರ್ವಿ, ಗಣಪತಿ ಖಾರ್ವಿ ಮತ್ತು ಶ್ರೀನಿವಾಸ್ ಖಾರ್ವಿ ಅವರನ್ನು ರಕ್ಷಣೆ ಮಾಡಲಾಗಿದೆ. ನಾಲ್ವರನ್ನು ಭಟ್ಕಳದ ಮುಂಡಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಈ ನಾಲ್ವರು ಅರಬ್ಬಿ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪ್ರಾಣಾಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

    ಈ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.