Tag: boat

  • ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

    ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

     – ಕಾಣೆಯಾದ ಮೀನುಗಾರರ ಬಗ್ಗೆ ಸುಳಿವೇ ಇಲ್ಲ

    ಉಡುಪಿ/ಕಾರವಾರ: ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದೆ.

    ಡಿಸೆಂಬರ್ 13 ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಮಾಲೀಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್, ಜೋಗಯ್ಯ ಎಂಬವರು ಕಾಣೆಯಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಹಾಗೂ ಉಡುಪಿ ಜಿಲ್ಲೆಯ 2 ಮೀನುಗಾರರು ಸೇರಿದಂತೆ ಒಟ್ಟು ಏಳು ಜನ ಮೀನುಗಾರರು ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಕುಟುಂಬದವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಮೀನುಗಾರರನ್ನು ಹುಡುಕಿ ಕೊಡುವಂತೆ ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದರು. ಬೋಟಿನ ಪತ್ತೆ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಡಿಐಜಿ ನೇತೃತ್ವದ ತನಿಖಾ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರೆ, ಕೇಂದ್ರ ಸರ್ಕಾರ ಸಟಲೈಟ್ ತಂತ್ರಜ್ಞಾನ, ನೌಕಾದಳದ ಸಿಬ್ಬಂದಿಯನ್ನು ಹಾಗೂ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸಿತ್ತು. ಆದರೆ ಅರಬ್ಬೀ ಸಮುದ್ರದಲ್ಲಿ ಅವಶೇಷಗಳಾಗಲಿ, ಶವವಾಗಲಿ ಸಿಗದ ಕಾರಣ ಉಗ್ರವಾದಿಗಳು ಅಥವಾ ಕಡಲಗಳ್ಳರು ಅಪಹರಿಸಿದ ಶಂಕೆ ವ್ಯಕ್ತಪಡಿಸಲಾಗಿತ್ತು. ಇದನ್ನೂ ಓದಿ: ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಕುಟುಂಬದೊಂದಿಗೆ ಶಾಸಕರಿಂದ ಪರಿಶೀಲನೆ:
    ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಉಡುಪಿಯ ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಮೀನುಗಾರರು ನಾಪತ್ತೆಯಾದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಅವರು ಮಾತುಕತೆ ಸಹ ನಡೆಸಿದ್ದರು. ಇದಾದ ಬಳಿಕ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೇ ವೇಳೆ ಕೇಂದ್ರ ಸರಕಾರ ಮತ್ತಷ್ಟು ಪತ್ತೆ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡುವ ಜೊತೆ ಖುದ್ದು ಮೀನುಗಾರರನ್ನು ದೆಹಲಿಗೆ ಕರೆಸಿಕೊಂಡು ಹಲವು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಹುಡುಕಾಟ ಮಾಡಲು ಕುಟುಂಬಸ್ಥರ ಮನವಿಯ ಮೇರೆಗೆ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಭಾರತೀಯ ಭೂಸೇನೆಯ ಅಧಿಕಾರಿಗಳ ಜೊತೆಗೆ ಮತ್ತು ನಾಪತ್ತೆಯಾದ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆಗೆ ತೆರಳಿದ್ದರು.

    ಊಹಾ ಪೋಹಗಳಿಗೆ ಎಡೆ:
    ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಕಾಣೆಯಾದ ಒಂದೂವರೆ ತಿಂಗಳಲ್ಲಿ ಬೋಟಿನ ಮೀನು ತುಂಬುವ ಬಾಕ್ಸ್ ಸಿಕ್ಕಿದ್ದು ಯಾವುದೋ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು. ಇದರ ಅವಶೇಷಗಳು ಅಥವಾ ಮೀನುಗಾರರ ಶವವಾದರೂ ಸಿಗಬೇಕಿತ್ತು, ಅದೂ ಕೂಡ ದೊರೆಯದೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನೌಕಾದಳ ನಿರಂತರ ಐದು ತಿಂಗಳಿಂದ ಹುಡುಕಾಟ ನಡೆಸಿ ಮಹಾರಾಷ್ಟ್ರದ ಮಲ್ವಾನ್ ನ ಕಡಲತೀರದಿಂದ ಅರಬ್ಬೀ ಸಮುದ್ರದ 33 ಕಿಲೋಮೀಟರ್ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದ್ದು ಹೆಚ್ಚಿನ ಹುಡುಕಾಟ ನಡೆಸಿದೆ. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಇದೀಗ ಅಧಿಕೃತವಾಗಿ ಅವಶೇಷಗಳು ಸಿಕ್ಕಿರುವ ಕುರಿತು ನೌಕಾದಳದ ಅಧಿಕೃತ ಟ್ಟಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿರುವುದು ಸುವರ್ಣ ತ್ರಿಭುಜ ಹಡಗು ದುರಂತಕ್ಕೀಡಾಗಿದೆ ಎನ್ನುವುದನ್ನು ದೃಢಪಡಿಸಿದೆ. ಆದರೆ ಹಡಗು ಡಿಕ್ಕಿ ಸಂಭವಿಸಿ ದುರಂತಕ್ಕಿಡಾಗಿದೆಯೇ ಅಥವಾ ಸಮುದ್ರದ ಅಲೆಗೆ ಕೊಚ್ಚಿಹೋಯ್ತಾ ಎನ್ನುವುದು ನೌಕಾದಳದವರಿಂದ ಅಧಿಕೃತವಾಗಿ ತಿಳಿದುಬರಬೇಕಿದೆ.

  • ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ಚಿಕ್ಕಮಗಳೂರು: ತೆಪ್ಪದಲ್ಲಿ ರೋಗಿಯನ್ನು ಕುರ್ಚಿಯಲ್ಲಿ ಕೂರಿಸಿಕೊಂಡು ಸ್ಥಳೀಯರು ಭದ್ರಾ ನದಿ ದಾಟಿಸಿದ ಮನಕಲಕುವ ಘಟನೆಯೊಂದು ಚಿಕ್ಕಮಗಳೂರಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಹಿರೆಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ತೆಪ್ಪದ ಮೂಲಕ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ.

    ಕೆಲ ತಿಂಗಳ ಹಿಂದೆ ಮೃತದೇಹವನ್ನು ಕೂಡ ಇದೇ ರೀತಿ ಸಾಗಿಸಿದ್ದರು. ಇಲ್ಲಿನ ಜನರು ಮೂರ್ನಾಲ್ಕು ದಶಕಗಳಿಂದ ಇದೇ ರೀತಿ ಬದುಕುತ್ತಿದ್ದಾರೆ. ತೆಪ್ಪ ಇಲ್ಲದಿದ್ದರೆ ಇವರಿಗೇ ಬದುಕೇ ಇಲ್ಲ. ಮಳೆಗಾಲದಲ್ಲಿ ಮಕ್ಕಳು ವಾರಗಟ್ಟಲೆ ಶಾಲೆಗೆ ಹೋಗುವುದಿಲ್ಲ. ಮನೆಗೆ ಒಂದು ಬೆಂಕಿ ಪೊಟ್ಟಣ ಬೇಕಂದ್ರೂ ನದಿ ದಾಟಿಯೇ ಬರಬೇಕು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಹಿಂದೆ ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದು, ರಸ್ತೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಕೂಡ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರು ಬಡಜನರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

  • ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಮಧ್ಯರಾತ್ರಿಯೇ ಬೋಟ್‍ಗಳು ವಾಪಸ್

    ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಮಧ್ಯರಾತ್ರಿಯೇ ಬೋಟ್‍ಗಳು ವಾಪಸ್

    ಕಾರವಾರ: ಪಾಕಿಸ್ತಾನದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಅರಬ್ಬೀ ಸಮುದ್ರದ ಆಳ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಮರಳಿ ತೀರಕ್ಕೆ ನಿರ್ಗಮಿಸುವಂತೆ ನೌಕಾದಳವು ಸೂಚನೆ ನೀಡಿದ್ದು, ಕರಾವಳಿ ತೀರದಿಂದ 12, 18 ನಾಟಿಕನ್ ಮೈಲು ದೂರದ ಗುಜರಾತ್, ಗೋವಾ ಭಾಗದ ಬುಲ್‍ಟ್ರಾಲ್, ಪರ್ಷಿಯನ್ ಬೋಟ್ ಗಳನ್ನು ಮರಳಿ ಬಂದರಿಗೆ ಬುಧವಾರ ಮಧ್ಯರಾತ್ರಿಯಿಂದ ನೌಕಾದಳ ಕಳುಹಿಸುತ್ತಿದೆ.

    ಗುಜರಾತ್ ಹಾಗೂ ಗೋವಾ ಭಾಗಕ್ಕೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ಸಹ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಆಳ ಸಮುದ್ರಕ್ಕೆ ತೆರಳಿದ ಮಂಗಳೂರು, ಉಡುಪಿ ಜಿಲ್ಲೆಯ ಹಲವು ಬೋಟುಗಳು ಮರಳಿ ತೀರದ ಕಡೆ ನಿರ್ಗಮಿಸುತ್ತಿವೆ.

    ಕಾರವಾರದ ಕರಾವಳಿ ಕಾವಲುಪಡೆ, ಕಸ್ಟಮ್ಸ್, ಮೀನುಗಾರಿಕಾ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ನೋಟಿಸ್ ಜಾರಿ ಮಾಡಿದ್ದು, ಮೀನುಗಾರಿಕೆಗೆ ಯಾವುದೇ ನಿರ್ಬಂಧ ಹೇರದಿದ್ದರೂ ಮೀನುಗಾರಿಕೆ ಚಟುವಟಿಕೆ ಕುರಿತು ಪ್ರತಿ ದಿನದ ಮಾಹಿತಿ ನೀಡುವಂತೆ ನೋಟೀಸ್ ನಲ್ಲಿ ಸೂಚನೆ ನೀಡಿದೆ. ಈ ಮೂಲಕ ಕರಾವಳಿಯಲ್ಲಿ ನೌಕಾದಳ ಹದ್ದಿನ ಕಣ್ಣಿಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ

    ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ

    – ಜೀವದ ಹಂಗು ತೊರೆದು 8 ಜನರನ್ನು ರಕ್ಷಿಸಿದ ಮೀನುಗಾರರು

    ಕಾರವಾರ: ಕೂರ್ಮಗಡ ಬೋಟ್ ದುರಂತದ ಸಾವಿನ ಸಂಖ್ಯೆ 9ರಿಂದ 13ಕ್ಕೆ ಏರಿಕೆಯಾಗಿದ್ದು, 8 ಜನರನ್ನು ರಕ್ಷಿಸಲಾಗಿದೆ. ಉಳಿದಂತೆ ನಾಪತ್ತೆಯಾದ ಪುಟ್ಟ ಮಕ್ಕಳು ಸೇರಿದಂತೆ 5 ಜನರ ಶೋಧಕಾರ್ಯ ಮುಂದುವರಿದಿದೆ.

    ಕಾರವಾರ ಮೂಲದ ಜಯಶ್ರೀ ಕೊಠಾರಕರ್, ಗಣಪತಿ ಕೊಠಾರಕರ್, ನಿಲೇಶ್ ಪೆಡ್ನೇಕರ್, ಅಮೋಲ್ ಬೆಳಗಾವಿ, ದರ್ಶನ ಕಾರವಾರ, ಸುರೇಶ್ ಚೆಂಡಿಯಾ, ಆದರ್ಶ ಮಾಜಾಳಿ, ಶ್ರೀನಿವಾಸ ಅರಗಾ, ಚೇತನಕುಮಾರ್ ಅರಗಾ, ಹಾವೇರಿ ತಾಲೂಕಿನ ಹೊಸೂರು ಗ್ರಾಮದ ಮಂಜವ್ವ, ಇದೇ ಕುಟುಂಬದ ಬಾಲಕ ಕಿರಣ್ ಮೃತ ದುರ್ದೈವಿಗಳಾಗಿದ್ದು, ಇನ್ನೊಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ.

    ಆಗಿದ್ದೇನು?:
    ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ಸಾವಿರಾರು ಭಕ್ತರು ತೆರಳಿದ್ದರು. ಪ್ರತಿ ವರ್ಷದಂತೆ ಮೀನುಗಾರರು ನರಸಿಂಹ ದೇವರವರಿಗೆ ಯಾವುದೇ ಅನಾಹುತ ಆಗದಂತೆ ಕಾಪಾಡುವಂತೆ ಬೇಡಿಕೊಂಡು ಬೋಟ್‍ಗಳಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿಸಿ ಭಕ್ತರು ವಾಪಾಸ್ ಆಗುತ್ತಿದ್ದಾಗ ಕೆಲ ಬೋಟ್ ಮಾಲೀಕರು ಹೆಚ್ಚು ಹಣ ಸಂಪಾದನೆಯ ದುರಾಸೆಗೆ ಬಿದ್ದು ಬೋಟ್‍ನ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ಕರೆತರುತ್ತಿದ್ದರು. ಅಷ್ಟೇ ಅಲ್ಲದೆ ಪ್ರಯಾಣಿಕರಿಗೆ ಲೈಫ್ ಜಾಕೇಟ್ ನೀಡದೇ ನಿಷ್ಕಾಳಜಿ ತೋರಿದ್ದಾರೆ. ಪರಿಣಾಮ 26 ಜನರು ಪ್ರಯಾಣಿಸುತ್ತಿದ್ದ ಬೋಟ್‍ವೊಂದು ಸಮುದ್ರ ಮಧ್ಯೆದಲ್ಲಿಯೇ ಮುಗುಚಿ ಬಿದ್ದಿದೆ. ತಕ್ಷಣವೇ ಬೋಟ್ ನಲ್ಲಿದ್ದ ಲೈಫ್ ಜಾಕೇಟ್ ಪಡೆದ ಕೆಲ ಪ್ರಯಾಣಿಕರು ಬದುಕುಳಿದಿದ್ದಾರೆ.

    ಸಮುದ್ರದಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜನರ ಕಿರುಚಾಟ ಕೇಳಿದ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಆಗಮಿಸಿ 8 ಜನರನ್ನು ರಕ್ಷಿಸಿದ್ದಾರೆ. ಬಳಿಕ 13 ಜನ ಪ್ರಯಾಣಿಕರ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಪುಟ್ಟ ಮಕ್ಕಳು ಸೇರಿದಂತೆ 5 ಜನ ಪ್ರಯಾಣಿಕರು ನಾಪತ್ತೆಯಾಗಿದ್ದು, ಕೋಸ್ಟ್‍ಗಾರ್ಡ್ ಸಿಬ್ಬಂದಿ ಮೀನುಗಾರರ ಸಹಾಯ ಪಡೆದು ಶೋಧ ಕಾರ್ಯ ಮುಂದುವರಿಸಿದ್ದಾರೆ.

    ಈ ದುರಂತಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಘಟನೆಯ ಕುರಿತು ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರವಾರ ಸಮುದ್ರದಲ್ಲಿ ದುರಂತ – ದೋಣಿ ಮುಳುಗಿ 9 ಸಾವು

    ಕಾರವಾರ ಸಮುದ್ರದಲ್ಲಿ ದುರಂತ – ದೋಣಿ ಮುಳುಗಿ 9 ಸಾವು

    ಕಾರವಾರ: 26 ಜನರು ಸಾಗುತ್ತಿದ್ದ ದೋಣಿಯೊಂದು ಮುಳುಗಿ 9 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಕಾರವಾರದ ಕೂರ್ಮಗಡ ಜಾತ್ರೆಗೆ ತೆರಳಿ ಜನರು ವಾಪಸ್ ಆಗುತ್ತಿದ್ದ ವೇಳೆ ಬೋಟ್ ಮುಳುಗಿದೆ. 9 ಜನರು ಸಾವನ್ನಪ್ಪಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜಯಶ್ರೀ ಕೊಠಾರಕರ್, ಗಣಪತಿ ಕೊಠಾರಕರ್, ನೀಲೇಶ್ ಪೆಡ್ನೇಕರ್, ಅಮೋಲ್ ಬೆಳಗಾವಿ, ದರ್ಶನ್ ಕಾರವಾರ, ಸುರೇಶ್ ಚೆಂಡಿಯಾ, ಆದರ್ಶ ಮಾಜಾಳಿ, ಶ್ರೀನಿವಾಸ ಅರಗಾ, ಚೇತನಕುಮಾರ ಅರಗಾ ಮೃತ ದುರ್ದೈವಿಗಳು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

    ಬೋಟ್ ಮುಳುಗುತ್ತಿದ್ದಂತೆ ಸ್ಥಳೀಯ ಮೀನುಗಾರರು ರಕ್ಷಣೆಗೆ ಮುಂದಾಗಿದ್ದಾರೆ. ಇತ್ತ ವಿಷಯ ತಿಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಂಟು ಜನರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೋಟ್ ಮುಳುಗಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಉಡುಪಿ: ಇಲ್ಲಿನ ಮಲ್ಪೆಯಿಂದ ಹೊರಟ ಬೋಟ್ ಸಮೇತ ಏಳು ಮಂದಿ ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀ ಪತ್ರ ಬರೆದಿದ್ದಾರೆ. ಇತ್ತ 3 ರಾಜ್ಯಕ್ಕೆ 6 ಮಂದಿಯ ಪೊಲೀಸ್ ಟೀಂ ನಿಯೋಜಿಸಲಾಗಿದೆ.

    ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಪೇಜಾವರ ಶ್ರೀಗಳು ಪ್ರಧಾನಿಗೆ ಒತ್ತಾಯಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸುವಂತೆ ಪತ್ರದಲ್ಲಿ ಪೇಜಾವರಶ್ರೀ ಒತ್ತಾಯಿಸಿದ್ದಾರೆ.

    ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ.  ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಪೊಲೀಸ್ ಟೀಂ:
    ಅರಬ್ಬೀ ಸಮುದ್ರದಲ್ಲಿ ಏನಾದರೂ ಅವಘಡ ಸಂಭವಿಸಿ ಮೀನುಗಾರರು ನಾಪತ್ತೆಯಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಕೇರಳಕ್ಕೆ ಎರಡು ತಂಡಗಳನ್ನು ರವಾನಿಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಾಲ್ಕು ಟೀಂ ತೆರಳಿದ್ದು ಕಣ್ಮರೆಯಾದವರ ತನಿಖೆ ಮಾಡುತ್ತಿದೆ.

    ಮಹಾರಾಷ್ಟ್ರದ ಮರಾಠಿ ಪತ್ರಿಕೆಯೊಂದರಲ್ಲಿ ಆಚ್ರಾ ಮತ್ತು ಮೆಲ್ವಾನ್ ನಲ್ಲಿ ಬೋಟಿನ ಟ್ರೇಗಳು ದೊರಕಿವೆ ಎಂದು ವರದಿಯಾಗಿತ್ತು. ಇವು ಸುವರ್ಣ ತ್ರಿಭುಜ ಬೋಟಿಗೆ ಸೇರಿದ ಟ್ರೇಗಳಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿದ್ದು ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ಒತ್ತಡದಲ್ಲಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಗೋವಾ ಮೀನುಗಾರನದ್ದು ಎನ್ನಲಾದ ವಾಯ್ಸ್ ನೋಟ್ ನ ಜಾಡು ಹಿಡಿದಿರುವ ಪೊಲೀಸರು ಗೋವಾದಲ್ಲೂ ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ದಾಟಿ ಗೋವಾ ಗಡಿ ಕಡೆ ಸುವರ್ಣ ತ್ರಿಭುಜ ಬೋಟ್ ಹೋಗಿದ್ಯಾ? ಪಾಕ್ ಗಡಿಯಲ್ಲಿ ಬೋಟ್ ಅಪಹರಣವಾಯ್ತಾ ಆನ್ನೋ ಸಂಶಯವೂ ಮೀನುಗಾರರಿಂದ ಬಂದಿದ್ದು ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಶುರುಮಾಡಿದೆ.

    ಡಿಸೆಂಬರ್13 ಕ್ಕೆ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಡಿ. 15 ರಿಂದ ಜಿಪಿಎಸ್- ಫೋನ್ ಸಂಪರ್ಕ ಕಡಿತಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

    ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

    ರಾಯಚೂರು: ಉಡುಪಿಯ ಮಲ್ಪೆಯಿಂದ ಹೊರಟಿರುವ ಮೀನುಗಾರರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ ಎಂದು ಪಶುಸಂಗೋಪನಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನಿಸಿದ್ದಾರೆ.

    ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವೆಂಕಟರಾವ್, ನಮ್ಮಲ್ಲಿ ಯಾವ ಫೋರ್ಸ್ ಗಳಿವೆ. ನಮ್ಮಲ್ಲಿರುವ ಜ್ಞಾನದಿಂದ ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಅವರು ನಾಪತ್ತೆಯಾದ ಮೊದಲ ದಿನದಿಂದಲೇ ಮಾಡಿದ್ದೇವೆ ಅಂದ್ರು.

    ಮೀನುಗಗಾರರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದು ಬಿಟ್ಟರೆ ನಮ್ಮಲ್ಲಿ ಬೇರೆ ದಾರಿಗಳಿಲ್ಲ. ಪ್ರತಿಭಟನೆ ಮಾಡಲಿ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ನಾವು ತೆರೆದ ಮನಸ್ಸಿನಿಂದ ಎಲ್ಲದಕ್ಕೂ ತಯಾರಿದ್ದೇವೆ. ಹೀಗಾಗಿ ಅಲ್ಲಿಯ ಮುಖಂಡರಾದ್ರು ನೀವು ಈ ರೀತಿ ಮಾಡಿದ್ರೆ ಹುಡುಕಬಹುದು, ಪತ್ತೆ ಮಾಡಬಹುದೆಂದು ಹೇಳಬೇಕು ಅಲ್ವಾ ಎಂದು ಅವರು ಪ್ರಶ್ನಿಸಿದ್ರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಬರೀ ಪ್ರತಿಭಟನೆ ಮಾಡುತ್ತೇವೆ ಅಂದ್ರೆ ನಾವೇನು ಮಾಡಬೇಕು. ಸಮುದ್ರದಕ್ಕೆ ಎಗರಬೇಕಾ ಎಂದು ಪ್ರಶ್ನಿಸಿದ ಸಚಿವರು, ಅವರು ಸಲಹೆಗಳನ್ನು ನೀಡಲಿ. ಈ ಬಗ್ಗೆ ನಾವು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇವೆ. ಅವರು ಏನು ಮಾಡಬೇಕು? ನಮ್ಮಿಂದ ಏನ್ ನಿರೀಕ್ಷೆ ಮಾಡ್ತಾರೆ? ಎನ್ನುವುದನ್ನು ಹೇಳಿದ್ರೆ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ರು. ಇದನ್ನೂ ಓದಿ: ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

    ಹೋರಾಟ ಮಾಡೋದಾದ್ರೆ ಅದಕ್ಕೊಂದು ಅರ್ಥ ಹಾಗೂ ಪರಿಹಾರ ಇರಲೇಬೇಕಲ್ವ. ನಮಗೂ ಅವರ ಬಗ್ಗೆ ಆತಂಕ ಇದೆ. ಹೀಗಾಗಿ ನಾವು ಎಲ್ಲಾ ವಿಧಗಳಿಂದ ಪ್ರಯತ್ನ ಮಾಡಿದ್ದೇವೆ. ಯಾವುದೇ ಕುರುಹುಗಳು ಈವರೆಗೆ ಸಿಕ್ಕಿಲ್ಲ. ಬೋಟ್ ಮುಳುಗಿದ್ರೆ ಡಿಸೇಲ್ ಆದ್ರೂ ಸಮುದ್ರದಲ್ಲಿ ತೇಲಬೇಕಿತ್ತು. ಒಟ್ಟಿನಲ್ಲಿ ನಮಗೆ ಮಾಹಿತಿ ಬಂದ 1 ಗಂಟೆಯಲ್ಲಿ ನಾವು ಅಲರ್ಟ್ ಆಗಿದ್ದೇವೆ. ಹೆಲಿಕಾಪ್ಟರ್ ಗಳನ್ನು ಕಳುಹಿಸಿದ್ದೇವೆ ಎಂದು ಅವರು ಹೇಳಿದ್ರು.

    ಇದೇ ವೇಳೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಹಣ ಪತ್ತೆ ಪ್ರಕರಣ ತನಿಖೆಯಿಂದ ಬಯಲಾಗಿದೆ. ಈ ಹಿಂದೆ ಯಡಿಯೂರಪ್ಪ ಹಿಂಬಾಲಕರ ಬಳಿ ಹಣ ಸಿಕ್ಕಿದೆ ಆಗ ರಾಜೀನಾಮೆಯನ್ನು ಬಿಜೆಪಿ ಕೇಳಬೇಕಿತ್ತು. ವಿಧಾನಸೌಧಕ್ಕೆ ಯಾರು ಯಾರೋ ಬರುತ್ತಾರೆ. ಅಲ್ಲಿ ನಡೆದ ಹಣಕಾಸಿನ ವ್ಯವಹಾರ ತನಿಖೆಯಿಂದ ಗೊತ್ತಾಗಲಿದೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಲಿಕಾಪ್ಟರ್​ನಲ್ಲಿ ಬಂದು ಸಮುದ್ರದ ಮಧ್ಯದಲ್ಲಿದ್ದ ಮೀನನ್ನು ಪಡೆದ ನೌಕಾದಳ ಸಿಬ್ಬಂದಿ: ವಿಡಿಯೋ ವೈರಲ್

    ಹೆಲಿಕಾಪ್ಟರ್​ನಲ್ಲಿ ಬಂದು ಸಮುದ್ರದ ಮಧ್ಯದಲ್ಲಿದ್ದ ಮೀನನ್ನು ಪಡೆದ ನೌಕಾದಳ ಸಿಬ್ಬಂದಿ: ವಿಡಿಯೋ ವೈರಲ್

    ಕಾರವಾರ: ಒಂದು ಬಾರಿ ಮೀನು ಸಾರಿನ ರುಚಿ ಆಹ್ವಾದಿಸಿದವರಿಗೆ ಮತ್ತೆ ಅದನ್ನು ತಿನ್ನಲು ಏನೇನು ಕಿತಾಪತಿ ಮಾಡುತ್ತಾರೆ. ಮೀನಿಗಾಗಿ ಅಂದರೆ ನಿಜವಾಗಿಯೋ ಶಾಕ್ ಆಗುತ್ತದೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋವಾ ಗಡಿಯಲ್ಲಿ ಮಲ್ಪೆಯ ಬೋಟ್ ಒಂದು ಮೀನು ಬೇಟೆ ಮಾಡಿ ಕಾರವಾರದ ಕಡೆ ಹೋಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಮೂಲಕ ಬಂದ ಭಾರತೀಯ ನೌಕಾದಳದ ಸಿಬ್ಬಂದಿ ಬೋಟ್ ಬಳಿಯಿಂದ ಮೀನು ಪಡೆದು ಹೋಗಿದ್ದಾರೆ.

    ನೌಕಾದಳ ಸಿಬ್ಬಂದಿ ಬೋಟ್ ಬಳಿ ಬಂದು ಮೀನಿಗಾಗಿ ಬೋಟ್ ನವರಿಗೆ ಸನ್ನೆ ಮಾಡಿ ಮೀನು ಕೊಡುವಂತೆ ಹೇಳಿ, ನಂತರ ಹಗ್ಗದ ಮೂಲಕ ಕವರ್ ಕೆಳಗಿಳಿಸಿ ಬೋಟ್ ನಲ್ಲಿದ್ದ ಮೀನುಗಾರರ ಕೈಯಿಂದ ಮೀನು ಪಡೆಯುತ್ತಿರುವ ದೃಶ್ಯವನ್ನು ಆ ಬೋಟ್ ನೊಂದಿಗಿದ್ದ ಮತ್ತೊಂದು ಬೋಟ್ ನವರು ರೆಕಾರ್ಡ್ ಮಾಡಿದ್ದಾರೆ.

    ಸದ್ಯ ಈಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೇ ಗಡಿ ಕಾಯುವ ನೌಕಾದಳ ಸಿಬ್ಬಂದಿ ಈ ವರ್ತನೆಗೆ ಟೀಕೆ ಸಹ ವ್ಯಕ್ತವಾಗಿದೆ.

    https://www.youtube.com/watch?v=bHPxBRMNrog&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಬ್ಬೀ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ- ಉಡುಪಿಯ 800 ಬೋಟುಗಳು ದಡದತ್ತ

    ಅರಬ್ಬೀ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ- ಉಡುಪಿಯ 800 ಬೋಟುಗಳು ದಡದತ್ತ

    ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಐದು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರಿಕಾ ಇಲಾಖೆ ಮುಂಜಾಗ್ರತ ಕ್ರಮವಾಗಿ ಹೈ ಅಲರ್ಟ್ ಘೋಷಿಸಿದೆ. ಅಲ್ಲದೇ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದೆಂದು ಸೂಚನೆ ನೀಡಿದೆ.

    ಅರಬ್ಬೀ ಸಮುದ್ರದಲ್ಲಿ ಏಕಾಏಕಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಕರಾವಳಿಯಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ತೂಫಾನ್ ಎದ್ದರೆ ಮೊದಲು ಸಮಸ್ಯೆಯಾಗೋದು ಮೀನುಗಾರರಿಗೆ. ಹಾಗಾಗಿ ಸಮುದ್ರದ ಮಧ್ಯೆಯಿರುವ ಮೀನುಗಾರರನ್ನು ಇಲಾಖೆ ವಾಪಾಸ್ ಕರೆಸಿಕೊಳ್ಳುತ್ತಿದೆ.

    ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುಮಾರು 800 ಬೋಟ್ ಗಳನ್ನು ಮಲ್ಪೆ ಮೀನುಗಾರರ ಸಂಘ ದಡಕ್ಕೆ ಬರುವಂತೆ ಸಂದೇಶ ರವಾನಿಸಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಲ್ಪೆ ಬಂದರಿನಿಂದ ಸುಮಾರು 800 ಬೋಟುಗಳು ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದು, ತೂಫಾನ್ ಬರುವ ಹಿನ್ನೆಲೆಯಲ್ಲಿ ಎಲ್ಲಾ ಬೋಟ್ ಗಳನ್ನು ಬಂದರಿಗೆ ವಾಪಾಸ್ ಕರೆಸಿಕೊಳ್ಳಲಾಗುತ್ತಿದೆ. ಅಕ್ಟೋಬರ್ 5 ರಿಂದ 10ರ ವರೆಗೆ ಐದು ದಿನಗಳ ಕಾಲ ಅರಬ್ಬೀ ಸಮುದ್ರಕ್ಕೆ ತೆರಳದೇ ಬೋಟ್ ಗಳೆಲ್ಲಾ ಬಂದರಿನಲ್ಲೇ ಲಂಗರು ಹಾಕಲಿದೆ.

    ಈಗಾಗಲೇ ಮಲ್ಪೆ ಬಂದರಿನಲ್ಲಿ ಎಚ್ಚರಿಕಾ ಕರೆಗಂಟೆ ಮೊಳಗಿಸಲಾಗಿದೆ. ಮೀನುಗಾರರ ಮಾತೃಸಂಘದ ಮೂಲಕ ಐದು ಕಡೆಗಳಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಸಮುದ್ರಕ್ಕೆ ಹೋದ ಬೋಟ್ ಗಳಿಗೆ ವೈರ್‍ಲೆಸ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಕೂಡಾ ಸಮುದ್ರದಾದ್ಯಂತ ಗಸ್ತು ಸುತ್ತಿ ಎಚ್ಚರಿಕೆ ನೀಡುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಈ ಬಾರಿ ಮೀನುಗಾರಿಕೆಯೂ ಕಮ್ಮಿ. ಅಲ್ಲದೇ ಡೀಸೆಲ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದೀಗ ಐದು ದಿನ ಹೈ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ವಾಯುಭಾರ ಕುಸಿತದ ಸಂದರ್ಭ ಯಾರೂ ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುತ್ತೇವೆ. ಕೋಟ್ಯಾಂತರ ರೂಪಾಯಿ ವೆಚ್ಚದ ಬೋಟ್ ಹಾಗೂ ಅದಕ್ಕಿಂತ ಅಮೂಲ್ಯವಾದ ಮೀನುಗಾರರ ಪ್ರಾಣ ಮುಖ್ಯ ಅಂತ ಹೇಳಿದರು.

    ಮಹಾರಾಷ್ಟ್ರ- ಗೋವಾ ಬಾರ್ಡರ್ ದಾಟಿ ಹೋದ ಮೀನುಗಾರರನ್ನು ಸಂಪರ್ಕ ಮಾಡುವುದು ಬಹಳ ಕಷ್ಟಕರ. ಒಬ್ಬರಿಂದ ಒಬ್ಬರು ಮಾಹಿತಿ ಪಡೆದು ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಹೊರ ರಾಜ್ಯದಲ್ಲಿ ಕೂಡಾ ಬೋಟ್ ಗಳು ನೆಲೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ದು ಭೂಲೋಕದ ಮೇಲಿನ ಸ್ವರ್ಗ..! ಕಳೆದ ನಾಲ್ಕು ತಿಂಗಳಿಂದ ಆ ಸ್ವರ್ಗಕ್ಕೆ ಬಾಗಿಲು ಹಾಕಲಾಗಿತ್ತು. ಸ್ವರ್ಗಕ್ಕೆ ಹೋಗಲಾಗದೆ, ಜನರೆಲ್ಲಾ ಭೂಮಿ ಮೇಲೆಯೇ ಅಲೆದಾಡುತ್ತಿದ್ದರು. ಇದೀಗ ಸ್ವರ್ಗದ ಬಾಗಿಲು ತೆರೆದಿದ್ದು ಜನ ಹಾಡುತ್ತಾ.. ಕುಣಿಯುತ್ತಾ ಮಸ್ತ್ ಮಜಾ ಮಾಡುತ್ತಾ ಸುಂದರ ಸ್ವರ್ಗಕ್ಕೆ ಟ್ರಿಪ್ ಶುರು ಮಾಡಿದ್ದಾರೆ.

    ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ನೀರು.., ರಭಸವಾಗಿ ಬೀಸೋ ತಂಗಾಳಿ.., ಆಕಾಶದಲ್ಲಿ ಹಾರಾಡೋ ಅನುಭವ..
    ಈ ಖುಷಿ ಒಟ್ಟಿಗೆ ಒಂದೇ ಕಡೆ ಸಿಗಬೇಕಾದ್ರೆ ನೀವು ಉಡುಪಿಗೆ ಬರಬೇಕು. ಮಲ್ಪೆಗೆ ಬಂದು ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವ ಬೋಟ್ ಹತ್ತಬೇಕು. ಬೋಟ್ ಹತ್ತುತ್ತಿದ್ದಂತೆ ಕಿವಿಗೆ ಡೀಜೆ ಮ್ಯೂಸಿಕ್ ಅಪ್ಪಳಿಸುತ್ತದೆ. ಕೆಳಗೆ ಸಮುದ್ರ.. ಮೇಲೆ ಆಗಸ ಕಿವಿಗಪ್ಪಳಿಸೋ ಹಾಡು ಯಾರಿಗುಂಟು ಯಾರಿಗಿಲ್ಲ ಅಷ್ಟು ಎಂಜಾಯ್ ಮಾಡಬಹುದು.

    ಮಳೆಗಾಲದಲ್ಲಿ ಮೂರೂವರೆ ತಿಂಗಳು ಸಂಪೂರ್ಣ ಬಂದ್ ಆಗಿದ್ದ ಉಡುಪಿಯ ಸೈಂಟ್ ಮೇರೀಸ್ ಪ್ರವಾಸ ಇದೀಗ ಮತ್ತೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯಿಂದ ಟ್ರಿಪ್ ಶುರುವಾಗುತ್ತದೆ. ಸಂಜೆಯ ತನಕ ನಾಲ್ಕು ಸುತ್ತ ನೀರು ನಡುವೆ ಇರುವ ಭೂಲೋಕದ ಸ್ವರ್ಗಕ್ಕೆ ಹೋಗಿ ಎಂಜಾಯ್ ಮಾಡಬಹುದು. ಮಲ್ಪೆ ಬೋಟ್ ಪಾಯಿಂಟ್ ನಿಂದ ಆರೂವರೆ ಕಿಲೋಮೀಟರ್ ದೂರವಿರುವ ಸೈಂಟ್ ಮೇರೀಸ್ ದ್ವೀಪದ ಕೂಗಳತೆ ದೂರದಲ್ಲಿ ದೊಡ್ಡ ಬೋಟನ್ನು ನಿಲ್ಲಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮತ್ತೊಂದು ಚಿಕ್ಕ ಬೋಟ್‍ಗೆ ಎಲ್ಲಾ ಪ್ರವಾಸಿಗರನ್ನು ಶಿಫ್ಟ್ ಮಾಡಲಾಗುತ್ತದೆ. ಆ ಬೋಟ್ ದ್ವೀಪ ತಲುಪುತ್ತದೆ. ದೊಡ್ಡ ಬೋಟ್ ಮಲ್ಪೆಗೆ ವಾಪಾಸ್ಸಾಗುತ್ತದೆ

    ಫೋಟೋಗಳಲ್ಲಿ ಸೈಂಟ್ ಮೇರೀಸನ್ನು ಕಣ್ತುಂಬಿಕೊಂಡಿದ್ದ ಮೈಸೂರಿನ ಮಾಲಿನಿ ಮತ್ತು ಅವರ ಕುಟುಂಬ ಉಡುಪಿಗೆ ಬಂದಿತ್ತು. ಸೈಂಟ್ ಮೆರೀಸ್ ಗೂ ಭೇಟಿ ನೀಡಿದೆ. ಜೀವನದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಯಾನ ಮಾಡಿದ ಅನುಭವ ಈ ಕುಟುಂಬಕ್ಕೆ ಸಿಕ್ಕಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲಿನಿ, ನಾನು ಗಾಳಿಯಲ್ಲಿ ತೇಲಾಡುತ್ತಿರುವ ಅನುಭವವಾಗುತ್ತಿದೆ. ಅದ್ಭುತ ಅನ್ನೋದನ್ನು ನಾನಿಲ್ಲಿ ಕಂಡುಕೊಂಡೆ ಎಂದು ಹೇಳಿದರು. ಸುಮಾರು 15 ಕಿಲೋಮೀಟರ್ ಅರಬ್ಬಿ ಸಮುದ್ರದಲ್ಲಿ ಯಾನ ಮಾಡಿ ಬಹಳ ಖುಷಿಯಾಯ್ತು ಅಂತ ಹೇಳಿದರು.

    ಪ್ರವಾಸಿಗ ನಿರಂಜನ್ ಮಾತನಾಡಿ, ಎರಡನೆ ಬಾರಿಗೆ ಸೈಂಟ್ ಮೆರೀಸ್ ನೋಡ್ತಾಯಿದ್ದೇನೆ. ಮಕ್ಕಳೂ ಬಹಳ ಎಂಜಾಯ್ ಮಾಡಿದ್ದಾರೆ. ಮತ್ತೆ ಮತ್ತೆ ಸೈಂಟ್ ಮೇರೀಸ್‍ಗೆ ಬರಬೇಕೆಂದು ಡಿಸೈಡ್ ಮಾಡಿದ್ದೇವೆ ಎಂದರು.

    ಭಾರತವನ್ನು ಕಂಡು ಹಿಡಿದ ಕಲ್ಲಿಕೋಟೆಗೆ ಹೋಗುವ ಮೊದಲು ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ. ಇಲ್ಲಿನ ಸೌಂದರ್ಯವನ್ನು ಆತ ಬಹಳ ವರ್ಣಿಸಿದ್ದ. ಸೈಂಟ್ ಮೇರೀಸ್ ದ್ವೀಪದಲ್ಲಿ ಕಾಣಸಿಗುವ ವಿಭಿನ್ನಾಕಾರದ ಕಲ್ಲುಗಳು ಎಲ್ಲರನ್ನು ಸೆಳೆಯುತ್ತದೆ. ಕಲ್ಲಿನ ಮೇಲೆ ಅಪ್ಪಳಿಸೋ ತೆರೆಗಳನ್ನು ಅನುಭವಿಸೋದೆ ಚಂದ. ಸೂರ್ಯಾಸ್ತದ ಸಂದರ್ಭದಲ್ಲಿ ಇದ್ರಂತೂ ಇಡೀ ಸಮುದ್ರ ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ. ಈ ಬಾರಿ ಸೇಫ್ಟಿ ದೃಷ್ಟಿಯಿಂದ ದೊಡ್ಡ ಬೋಟ್, ಅದರಲ್ಲೊಂದು ವಾಶ್ ರೂಮನ್ನೂ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶದ ಪ್ರವಾಸಿಗರಿಗೆ ಇದು ಬಹಳ ಇಷ್ಟವಾಗಿದೆ.

    ಬೋಟ್ ಮಾಲೀಕ ಪ್ರಕಾಶ್ ಕೊಡವೂರು, ಮಾತನಾಡಿ ಬೋಟ್‍ನಲ್ಲಿ ಲೈಫ್ ಜಾಕೆಟ್- ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. 250 ರುಪಾಯಿ ಟಿಕೆಟ್‍ನಲ್ಲಿ ಸೈಂಟ್ ಮೇರೀಸ್ ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ 150 ರುಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮಳೆಗಾಲ ಆರಂಭವಾಗುವವರೆಗೆ ಸೈಂಟ್ ಮೇರೀಸ್ ಎಂಬ ಭೂಲೋಕದ ಮೇಲಿನ ಸ್ವರ್ಗ ಓಪನ್ ಇರುತ್ತದೆ. ಅರ್ಧಗಂಟೆ ದೊಡ್ಡ ಬೋಟ್‍ನಲ್ಲಿ ಪಯಣ, ಅಲ್ಲಿಂದ ಸಣ್ಣ ಬೋಟ್ ಮೂಲಕ ದ್ವೀಪಕ್ಕೆ ಶಿಫ್ಟ್, ಅಲ್ಲಿ ಬೇಕಾದಷ್ಟು ಸುತ್ತಾಟ, ಮತ್ತೆ ಎರಡು ಬೋಟ್‍ಗಳಲ್ಲಿ ಮಲ್ಪೆಗೆ ವಾಪಾಸ್. ಇಷ್ಟಕ್ಕೆ ತಗಲುವ ವೆಚ್ಚ 250 ರೂಪಾಯಿ ಮಾತ್ರ. ತಮಗೆ ಬೇಕಾದ ತಿಂಡಿ- ಊಟ ಕೊಂಡೊಯ್ದು ಫ್ಯಾಮಿಲಿ.. ಫ್ರೆಂಡ್ಸ್ .., ಲವ್ವರ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv