Tag: boat

  • ಮೂರು ದಿನದಿಂದ ಕೆಟ್ಟು ನಿಂತ ಬೋಟ್‍ನಲ್ಲಿದ್ದ 23 ಮೀನುಗಾರರ ರಕ್ಷಣೆ

    ಮೂರು ದಿನದಿಂದ ಕೆಟ್ಟು ನಿಂತ ಬೋಟ್‍ನಲ್ಲಿದ್ದ 23 ಮೀನುಗಾರರ ರಕ್ಷಣೆ

    ಕಾರವಾರ: ಯಾಂತ್ರಿಕ ಬೋಟಿನಲ್ಲಿ ತಾಂತ್ರಿಕ ದೋಷದಿಂದಾಗಿ ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ನಲ್ಲಿದ್ದ 23 ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಭಟ್ಕಳ ಬಂದರಿನಿಂದ NFG ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಅರಬ್ಬಿ ಸಮುದ್ರದ 30 ನಾಟಿಕಲ್ ಮೈಲು ದೂರದಲ್ಲಿ ಇಂಜಿನ್ ಕೆಡುವುದರ ಜೊತೆ ಬ್ಯಾಟರಿ ಕೂಡ ಕೆಟ್ಟು ಹೋಗಿತ್ತು. ಇದರಿಂದ ಜಿಪಿಎಸ್ ಮತ್ತು ವೈರಲೆಸ್ ಸಂಪರ್ಕ ಸ್ಥಗಿತವಾಗಿ ಯಾರನ್ನೂ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ.

    ಸಮುದ್ರದಲ್ಲಿ ಮೂರು ದಿನಗಳವರೆಗೆ 23 ಮೀನುಗಾರರು ಸಂಕಷ್ಟದಿಂದ ಕಾಯುತ್ತಿದ್ದರು. ಮೂರು ದಿನಗಳ ನಂತರ ಮೀನುಗಾರಿಕಾ ಬೋಟ್ ಈ ಭಾಗದಲ್ಲಿ ಬಂದಿದೆ. ನಂತರ ವೈರಲೆಸ್ಸ್ ಸಂಪರ್ಕ ಮಾಡಿ ಇಂದು ಎಲ್ಲರನ್ನು ರಕ್ಷಣೆ ಮಾಡಲಾಗಿದ್ದು ಭಟ್ಕಳ ಬಂದರಿಗೆ ಕರೆತರಲಾಯಿತು.

  • ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 63 ಪ್ರಯಾಣಿಕರಿದ್ದ ಪ್ರವಾಸಿ ಬೋಟ್ ಅಪಘಾತಕ್ಕೀಡಾಗಿ, 13 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೋಟ್ ನಲ್ಲಿ ಒಟ್ಟು 63 ಜನರಿದ್ದು, ಅದರಲ್ಲಿ 50 ಪ್ರವಾಸಿಗರು ಮತ್ತು 13 ಮಂದಿ ಬೋಟ್ ಸಿಬ್ಬಂದಿ ಇದ್ದಾರೆ. ಗೋದಾವರಿ ನದಿಯ ಬಳಿಯಿರುವ ಪಾಪಿಕೊಂಡಲು ಬೆಟ್ಟಗಳನ್ನು ನೋಡಲು ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

    ಈ ಹಡಗಿನಲ್ಲಿದ್ದ 63 ಜನರ ಪೈಕಿ 13 ಮಂದಿಯ ಮೃತ ದೇಹ ಸಿಕ್ಕಿದ್ದು, ಇನ್ನೂ ಸುಮಾರು 40 ಮಂದಿ ನದಿಯಲ್ಲಿ ಕಾಣೆಯಾಗಿದ್ದಾರೆ. ಮೂಲಗಳ ಪ್ರಕಾರ, ದೋಣಿಯಲ್ಲಿದ್ದ ಎಲ್ಲರಿಗೂ ಲೈಫ್ ಜಾಕೆಟ್‍ಗಳು ಇದ್ದು, ಅವರಲ್ಲಿ ಕೆಲವರು ಧರಿಸಿಲ್ಲ ಎಂದು ವರದಿಯಾಗಿದೆ. ವಿಶಾಖಪಟ್ಟಣಂ ಮತ್ತು ಗುಂಟೂರಿನಿಂದ ಎರಡು ಎನ್‍ಡಿಆರ್‍ಎಫ್ ತಂಡಗಳು ಬಂದಿದ್ದು, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಚರಣೆ ಮಾಡುತ್ತಿದ್ದಾರೆ.

    ಗೋದಾವರಿ ನದಿಗೆ ಪ್ರವಾಹದ ಸಮಯದಲ್ಲಿ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಅದ್ದರಿಂದ ಅಲ್ಲಿನ ಪ್ರವಾಸೋದ್ಯಮ ಅಧಿಕಾರಿಗಳು ಶನಿವಾರದವರೆಗೆ ನದಿಯಲ್ಲಿ ಪ್ರವಾಸಿಗರ ಸೇವೆಯನ್ನು ನಿಲ್ಲಿಸಿತ್ತು. ಆದರೆ ಇತ್ತೀಚಿಗೆ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಇಂದು ಬೋಟ್‍ನಲ್ಲಿ ಹೋಗಲು ಅನುಮತಿ ನೀಡಿದ್ದರು ಎಂದು ವರದಿಯಾಗಿದೆ.

    ಈ ವಿಚಾರದ ತಿಳಿದು ತಕ್ಷಣ ಅಧಿಕಾರಿಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗಮೋಹನ್ ರೆಡ್ಡಿ, ತಕ್ಷಣವೇ ರಕ್ಷಣಾ ಕಾರ್ಯಚರಣೆ ಕೈಗೊಳ್ಳುವಂತೆ ಸೂಚಿಸಿ, ಮೃತವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ನೌಕಪಡೆ ಮತ್ತು ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.

  • ಭದ್ರೆಯ ಭಯದಲ್ಲಿ ಸಾಗುತ್ತಿದೆ ಮಲೆನಾಡಿಗರ ಬದುಕು

    ಭದ್ರೆಯ ಭಯದಲ್ಲಿ ಸಾಗುತ್ತಿದೆ ಮಲೆನಾಡಿಗರ ಬದುಕು

    ಚಿಕ್ಕಮಗಳೂರು: ಸೇತುವೆ ಸಂಪರ್ಕ ಕಡಿತಗೊಂಡು ಜನರು ಭಯದಿಂದ ತೆಪ್ಪದಲ್ಲಿ ಸಾಗುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ-ಬಾಳೆಗದ್ದೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಆಶ್ಲೇಷ ಮಳೆ ಹಾಗೂ ಭದ್ರೆ ನದಿಯಿಂದ ಹಾಳಾಗಿ ಹೋಗಿದೆ. ಇದೀಗ ಬಾಳೆಗದ್ದೆ ಗ್ರಾಮದ 70-80 ಮನೆ ಹಾಗೂ 200 ಜನ ನಗರಕ್ಕೆ ಬರಲು ತೆಪ್ಪವನ್ನು ಆಶ್ರಯಿಸಿದ್ದಾರೆ. 10 ವರ್ಷಗಳ ಹಿಂದೆ ತೆಪ್ಪದಲ್ಲಿ ಸಾಗುವಾಗ ತೆಪ್ಪ ಮಗುಚಿ ಮೂವರು ಮೃತಪಟ್ಟಿದ್ದರು.

    ಅಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ರಾಜ್ಯದ ಅತಿ ದೊಡ್ಡ ಎರಡನೇ ಸೇತುವೆ ಕೂಡ ಆಗಿದೆ. ಆದರೆ ಇಂದು ಭದ್ರೆಯ ಅಬ್ಬರಕ್ಕೆ ಮುರಿದು ಬಿದ್ದು ಮತ್ತೊಂದು ಅನಾಹುತಕ್ಕೆ ಆಹ್ವಾನ ನೀಡಿದಂತಿದೆ. ಕೂಡಲೇ ಸರ್ಕಾರ ಇಲ್ಲಿಗೆ ಆದಷ್ಟು ಬೇಗ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಿವಾಸಿಗಳು ಮತ್ತೆ ತೆಪ್ಪದ ಮೊರೆ ಹೋಗಿದ್ದಾರೆ. ಎಲ್‍ಕೆಜಿಯಿಂದ ಡಿಗ್ರಿ ಓದುವ ಮಕ್ಕಳು ಕೂಡ ಇದೇ ತೆಪ್ಪದಲ್ಲಿ ಶಾಲೆಗೆ ಹೋಗಿಬರಬೇಕು. ಹೆತ್ತವರು ದಿನ ಬಂದು ತೆಪ್ಪದಲ್ಲಿ ಮಕ್ಕಳನ್ನು ಸಾಗಿಸಿ ಹೋಗುತ್ತಿದ್ದಾರೆ. ಬಾಳೆಗದ್ದೆ ಗ್ರಾಮದಿಂದ ಬೇರೆ ಮಾರ್ಗವಿದ್ದರೂ ಅದು, 12-15 ಕಿ.ಮೀ. ದೂರವಾಗುತ್ತದೆ ಅಲ್ಲದೆ ದಟ್ಟಕಾನನದೊಳಗೆ ಹೋಗಬೇಕಾಗುತ್ತದೆ. ಅಲ್ಲಿ 24 ಗಂಟೆಯೂ ದಾರಿ ಮಧ್ಯೆ ಹುಲಿ, ಆನೆ, ಕಾಡುಕೋಣ ಸೇರಿದಂತೆ ಎಲ್ಲಾ ಪ್ರಾಣಿಗಳು ಇರುತ್ತದೆ. ಜನ ಓಡಾಡೋದಕ್ಕೆ ಅಸಾಧ್ಯ. ಹಾಗಾಗಿ ಜನ ಅನಿವಾರ್ಯವಾಗಿ ಜೀವದ ಹಂಗು ತೊರೆದು ತೆಪ್ಪದಲ್ಲಿ ಬದುಕು ದೂಡುತ್ತಿದ್ದಾರೆ.

    ಅಂದು 50 ಲಕ್ಷದಲ್ಲಿ ಮುಗಿದಿದ್ದ ಈ ಸೇತುವೆಗೆ ಇಂದು 1.20 ಲಕ್ಷ ಬೇಕಾಗಿದೆ. ಸದ್ಯಕ್ಕೆ ಅರಣ್ಯ ಸಿಬ್ಬಂದಿಗಳು ಇದೇ ಜಾಗದಲ್ಲಿ ಸ್ಥಳೀಯರ ನೆರವಿಗೆ ಬಂದಿದ್ದಾರೆ. ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ, ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಜನ ಸೇತುವೆ ಮುಂದಿನ ಮಳೆಗಾಲಕ್ಕೆಲ್ಲ ತುರ್ತಾಗಿ ನಿರ್ಮಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ತಂಡದ ಐವರೂ ಸೇಫ್

    ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ತಂಡದ ಐವರೂ ಸೇಫ್

    ಕೊಪ್ಪಳ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರು ರಕ್ಷಣಾ ಸಿಬ್ಬಂದಿಯನ್ನೂ ರಕ್ಷಣೆ ಮಾಡಲಾಗಿದೆ.

    ಘಟನೆ ನಡೆದ ಕೂಡಲೇ ನಾಲ್ವರನ್ನು ರಕ್ಷಿಸಲಾಗಿದ್ದು, ಆ ಬಳಿಕ ಗಿಡ ಹಿಡಿದುಕೊಂಡಿದ್ದ ಸಿಬ್ಬಂದಿಯನ್ನು ಕೂಡ ರಕ್ಷಿಸುವ ಮೂಲಕ ಐವರು ರಕ್ಷಣಾ ಸಿಬ್ಬಂದಿ ಕೂಡ ಸೇಫಾಗಿದ್ದಾರೆ.

    ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರಲ್ಲಿ ಓರ್ವ ಸಿಬ್ಬಂದಿಗೆ ಗಿಡ ಆಸರೆ ಆಗಿದೆ. ಸುಮಾರು 2 ಗಂಟೆ ಕಾಲ ಗಿಡ ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಎನ್‍ಡಿಆರ್‍ಎಫ್ ತಂಡ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ತುಂಗಭದ್ರಾ ನದಿ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಸಿಬ್ಬಂದಿ ಲೈಫ್ ಜಾಕೆಟ್ ಹಾಕಿದ್ದರಿಂದ ಸೇಫ್ ಆಗಿದ್ದರು. ದುರ್ಘಟನೆ ನಡೆದ ಕೂಡಲೇ ಸ್ಥಳೀಯರು, ಇತರ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ ಕೂಡಲೇ ಜೀವ ಉಳಿಸಿದವರಿಗಾಗಿ ಹುಡುಕಾಟ ನಡೆಸಿತ್ತು. ಮೊದಲು ಮೂವರನ್ನು ರಕ್ಷಿಸಿದ ಎನ್‍ಡಿಆರ್‍ಎಫ್ ತಂಡ ಈಗ ಉಳಿದ ಇಬ್ಬರನ್ನು ಕೂಡ ರಕ್ಷಿಸಿದೆ.

  • ನೆರೆಯಲ್ಲಿ ನೀರುಪಾಲಾಗಿದ್ದ ಮೂವರು ಸಿಬ್ಬಂದಿಯ ರಕ್ಷಣೆ

    ನೆರೆಯಲ್ಲಿ ನೀರುಪಾಲಾಗಿದ್ದ ಮೂವರು ಸಿಬ್ಬಂದಿಯ ರಕ್ಷಣೆ

    ಕೊಪ್ಪಳ: ಪ್ರವಾಹಕ್ಕೀಡಾದ ಐವರು ಸಿಬ್ಬಂದಿಯಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದೆ. ಇನ್ನಿಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

    ಪ್ರವಾಹಕ್ಕೀಡಾದ ಸಂತ್ರಸ್ತರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಬೋಡ್ ಸಮೇತ ಐವರು ರಕ್ಷಣಾ ಸಿಬ್ಬಂದಿ ಕೊಚ್ಚಿ ಹೋಗಿದ್ದರು. ಸಿಬ್ಬಂದಿ ಲೈಫ್ ಜಾಕೆಟ್ ಹಾಕಿದ್ದರಿಂದ ಸೇಫ್ ಆಗಿದ್ದು, ಸದ್ಯ ಮೂವರನ್ನು ರಕ್ಷಣೆ ಮಾಡಲಾಗಿದೆ.

    ದುರ್ಘಟನೆ ನಡೆದ ಕೂಡಲೇ ಸ್ಥಳೀಯರು, ಇತರ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ ಕೂಡಲೇ ಜೀವ ಉಳಿಸಿದವರಿಗಾಗಿ ಹುಡುಕಾಟ ನಡೆಸಿತ್ತು. ಸದ್ಯ ಮೂವರು ಬಚಾವ್ ಆಗಿದ್ದು, ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ತುಂಗಭದ್ರಾ ನದಿ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರುಪಾಲಾಗಿದ್ದರು.

  • ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ ಪದಾರ್ಥಗಳಿಗಾಗಿ ನದಿ ದಾಟಲು ಆಗದೆ ಪರದಾಡುತ್ತಿದ್ದಾರೆ.

    ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದರೂ, ಅಗತ್ಯ ವಸ್ತುಗಳಿಗಾಗಿ ಕುರ್ವಕುರ್ದ ಮತ್ತು ಕುರ್ವಕುಲ ನಡುಗಡ್ಡೆಗಳ ಜನ ಅರಗೋಲಿನಲ್ಲೇ ನದಿ ಪಕ್ಕದ ಡೊಂಗರಾಂಪುರಕ್ಕೆ ಬರುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರುವ ಮೂಲಕ ಜನರನ್ನು ಶಿಫ್ಟ್ ಆಗುವಂತೆ ಸೂಚನೆ ನೀಡಿತ್ತು. ಸ್ಥಳಾಂತರಗೊಳ್ಳಲು ಒಪ್ಪದ ಗ್ರಾಮಸ್ಥರು ತೆಪ್ಪದಲ್ಲೇ ಓಡಾಡುತ್ತಿದ್ದಾರೆ.

    ಜೀವ ರಕ್ಷಕ ಜಾಕೆಟ್‍ಗಳನ್ನು ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನಡುಗಡ್ಡೆಗಳ ಜನರ ಸುರಕ್ಷತೆಗಾಗಿ ಎನ್.ಡಿ.ಆರ್.ಎಫ್ ತಂಡ ಸ್ಥಳದ ವೀಕ್ಷಣೆಯನ್ನೂ ನಡೆಸಿದೆ. ಇನ್ನೂ ಕುರ್ವಕುಲ ದತ್ತಾತ್ರೇಯ ಪೀಠಕ್ಕೆ ಭಕ್ತರು ಅರಗೋಲಿನಲ್ಲೇ ಬಂದು ಹೋಗುತ್ತಿದ್ದಾರೆ. ಭಕ್ತರು ಸೆಫ್ಟಿ ಜಾಕೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಬೋಟ್ ವ್ಯವಸ್ಥೆ ಮಾಡಬೇಕು ಎಂದು ನಡುಗಡ್ಡೆಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

  • ಭೀಕರ ನೆರೆ – ಎನ್‌ಡಿಆರ್‌ಎಫ್‌ ಬೋಟ್‍ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಭೀಕರ ನೆರೆ – ಎನ್‌ಡಿಆರ್‌ಎಫ್‌ ಬೋಟ್‍ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಪಾಟ್ನಾ: ಭೀಕರ ಪ್ರವಾಹಕ್ಕೆ ಬಿಹಾರ ತತ್ತರಿಸಿ ಹೋಗಿದೆ. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಬೋಟ್‍ನಲ್ಲಿಯೇ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

    ಬಿಹಾರದ ಮೋತಿಹರಿ ಪ್ರದೇಶ ಸಂಪೂರ್ಣ ಜಲಾವೃತಿಯಾಗಿದೆ. ಭಾನುವಾರದಂದು ಇಲ್ಲಿನ ಗೋಬ್ರಿ ಗ್ರಾಮದ ನಿವಾಸಿ ಸಬೀನ(41) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಗ್ರಾಮ ಜಲಾವೃತಗೊಂಡಿದ್ದ ಕಾರಣಕ್ಕೆ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡುತ್ತಿದ್ದರು. ಈ ಬಗ್ಗೆ ತಿಳಿದ ತಕ್ಷಣ ಎನ್‌ಡಿಆರ್‌ಎಫ್‌ ತಂಡ ಸ್ಥಳಕ್ಕೆ ಆಗಮಿಸಿ ಅವರ ನೆರವಿಗೆ ನಿಂತರು.

    ಮಹಿಳೆ ಕುಟುಂಬಸ್ಥರು ಹಾಗೂ ಕೆಲ ಆಶಾ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯನ್ನು ಮೋಟಾರ್ ಬೋಟ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಮಾಡಿದರು. ಆದರೆ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದ್ದು, ಎನ್‌ಡಿಆರ್‌ಎಫ್‌ ಸಿಬ್ಬಂದಿ ಬೋಟ್‍ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದರು.

    ಈ ವೇಳೆ ಎನ್‌ಡಿಆರ್‌ಎಫ್‌ ನರ್ಸಿಂಗ್ ಸಹಾಯಕ ರಾಣಾ ಪ್ರತಾಪ್ ಯಾಧವ್ ಅವರು ಬೋಟ್‍ನಲ್ಲಿ ಇದ್ದರು. ಹೀಗಾಗಿ ಅವರ ಮಾರ್ಗದರ್ಶನ ಪಡೆದು ಎನ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸಬೀನ ಅವರಿಗೆ ಹೆರಿಗೆ ಮಾಡಿಸಿದ್ದಾರೆ.

    ತದನಂತರ ತಾಯಿ ಮಗುವನ್ನು ಬಜಾರಿಯಾದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಸದ್ಯ ಇಬ್ಬರು ಆರೋಗ್ಯವಾಗಿದ್ದರೆ.

    ಪ್ರವಾಹದ ಸಂಕಷ್ಟದ ಸಮಯದಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದು ಎರಡು ಜೀವವನ್ನು ಉಳಿಸಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಮೈತುಂಬಿ ಹರಿಯುತ್ತಿರುವ ಕೃಷ್ಣೆ – ಸಂಚಾರಕ್ಕೆ ನದಿ ತೀರದ ಜನರಿಗೆ ದೋಣಿಯೇ ಆಸರೆ

    ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಮೈತುಂಬಿ ಹರಿಯುತ್ತಿರುವ ಕೃಷ್ಣೆ – ಸಂಚಾರಕ್ಕೆ ನದಿ ತೀರದ ಜನರಿಗೆ ದೋಣಿಯೇ ಆಸರೆ

    ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ವರುಣ ರೌದ್ರಾವಾತಾರ ತೋರುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ಆದ್ದರಿಂದ ನದಿ ತೀರದ ಗ್ರಾಮಸ್ಥರ ಸಂಚಾರಕ್ಕೆ ದೋಣಿ ಪ್ರಯಾಣ ಶುರವಾಗಿದೆ.

    ರಣ ಬಿಸಿಲಿಗೆ ಬರಿದಾಗಿದ್ದ ಕೃಷ್ಣಾ ನದಿಗೆ ಈಗ ಜೀವ ಬಂದಿದೆ. ರಾಜ್ಯದಲ್ಲಿ ಹೇಳುವಷ್ಟರ ಮಟ್ಟಿಗೆ ಮಳೆ ಬಾರದಿದ್ದರೂ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿದೆ. ಆದ್ದರಿಂದ ಮುಂಬೈ ನಗರ ಜಲಾವೃತಗೊಂಡಿದ್ದು ಜನಜೀವನ ಅಸ್ಥವ್ಯಸ್ತಗೊಂಡಿದೆ. ಆದರೆ ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಳೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನದಿ ತೀರದ ಗ್ರಾಮಗಳ ನಡುವೆ ಸಂಪರ್ಕಕ್ಕಾಗಿ ಜನರು ದೋಣಿಯಾನ ಮಾಡುವಂತಾಗಿದೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣಕ್ಕೆ ಹೋಗಬೇಕೆಂದರೆ ದೋಣಿಯಲ್ಲೇ ಸಾಗಬೇಕು. ದೋಣಿಯಲ್ಲಿ ಬೈಕ್ ಇಟ್ಟುಕೊಂಡು ಜನರು ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುತ್ತಿದ್ದಾರೆ.

    ವ್ಯಾಪಾರಸ್ಥರು, ಸಂತೆಗೆ ಹೊರಡುವವರು, ರೈತರು ಎಲ್ಲರಿಗೂ ಸಂಚಾರಕ್ಕೆ ದೋಣಿಯೇ ಆಸರೆಯಾಗಿದೆ. ಸ್ವಲ್ಪ ಆಯ ತಪ್ಪಿದರೂ ನದಿಪಾಲಾಗುವ ಸಾಧ್ಯತೆ ಇರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಜನ ದೋಣಿಯಲ್ಲಿ ಸಂಚರಿಸುತ್ತಿದ್ದಾರೆ.

  • ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಉಡುಪಿ: ಜೀವ ಪಣಕ್ಕಿಟ್ಟ ಯುವಕರು ನದಿಯಲ್ಲಿ ಮುಳುಗುತ್ತಿದ್ದ ಹಸು ರಕ್ಷಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮುಂಗಾರು ಕೊಂಚ ಚುರುಕಾಗಿರುವುದರಿಂದ ಕುಂದಾಪುರದ ಪಂಚ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕಳೆದೆರಡು ದಿನದಿಂದ ನದಿಯ ರಭಸ ಜಾಸ್ತಿಯಾಗಿದೆ. ನದಿ ನೀರಿನ ಸೆಳೆತಕ್ಕೆ ಹಸುವೊಂದು ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

    ಗಂಗೊಳ್ಳಿಯ ಕೆಲ ಯುವಕರಿಗೆ ಇದು ಗೊತ್ತಾಗಿದೆ. ಕೂಡಲೇ ನಾಲ್ಕಾರು ಯುವಕರು ದೋಣಿ ಹತ್ತಿ ನದಿಗಿಳಿದಿದ್ದಾರೆ. ಈಜುತ್ತಾ ಮುಳುಗುತ್ತಿದ್ದ ಹಸುವಿನ ಚೂಪು ಕೊಂಬಿಗೆ ಹಗ್ಗ ಹಾಕಿದ್ದಾರೆ. ಸಮುದ್ರದ ಕಡೆ ಸಾಗಿ ಹೋಗುತ್ತಿದ್ದ ಹಸುವನ್ನು ದಡಕ್ಕೆ ಮುಟ್ಟಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಉದ್ದ ಹಗ್ಗದ ತುದಿ ದಡದಲ್ಲಿರುವವರಿಗೆ ಸಿಕ್ಕ ಕೂಡಲೇ ಹಸುವನ್ನು ದಡಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗಂಗೊಳ್ಳಿಯ ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು, ಅಣ್ಣಪ್ಪ ಹಾಗೂ ಗೆಳೆಯರು ಜೀವ ಪಣಕ್ಕಿಟ್ಟು ಕೊನೆಗೂ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಳುಗುವವನಿಗೆ ಹುಲುಕಡ್ಡಿ ಸಿಕ್ಕರೂ ಒಮ್ಮೆ ಬಚಾವ್ ಆಗುತ್ತದೆಯಂತೆ. ಅದರಂತೆ ಈಗ ಯುವಕರು ಸಾಹಸದಿಂದ ಹಸು ತನ್ನ ಪ್ರಾಣವನ್ನು ಉಳಿಸಿಕೊಂಡಿದೆ.

    ನಾವು ಸಮುದ್ರ ತೀರದವರು, ಸಮುದ್ರ ಮತ್ತು ನದಿಯಲ್ಲಿ ಈಜಿ ದಡ ಸೇರುವ ಚಾಕಚಕ್ಯತೆ ಇದೆ. ದನವೂ ಈಜುತ್ತದೆ. ಆದರೆ ನೀರಿನ ರಭಸ ಜಾಸ್ತಿಯಾಗಿರುವುದರಿಂದ ಸಮುದ್ರದ ಕಡೆ ಹೋಗುತಿತ್ತು. ಹಗ್ಗ ಹಾಕಿ ನೀರಿನ ವಿರುದ್ಧ ದಿಕ್ಕಿಗೆ ಎಳೆದು ಹಾಕಿದ್ದೇವೆ ಎಂದು ಅಣ್ಣಪ್ಪ ಹೇಳಿದ್ದಾರೆ.

  • ಮೀನುಗಾರಿಕಾ ಬೋಟ್‍ನ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ದುಷ್ಕರ್ಮಿಗಳು

    ಮೀನುಗಾರಿಕಾ ಬೋಟ್‍ನ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ದುಷ್ಕರ್ಮಿಗಳು

    ಮಂಗಳೂರು: ನಗರದ ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟನ್ನು ರಾತ್ರೋರಾತ್ರಿ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ಘಟನೆ ನಡೆದಿದೆ.

    ಖಾಲಿ ಬೋಟ್ ಈಗ ಸಮುದ್ರಕ್ಕೆ ತೇಲುತ್ತಾ ಹೋಗಿ ತೀರದಿಂದ ಸ್ವಲ್ಪ ದೂರದಲ್ಲಿ ಕಡಲ ಮಧ್ಯೆ ಬಂಡೆಗೆ ಸಿಲುಕಿ ಮುಳುಗಡೆಯಾಗಿದೆ. ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ.

    ಗಾಂಜಾ ವ್ಯಸನಿಗಳು ಈ ಕೃತ್ಯ ಎಸಗಿರಬೇಕೆಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್‍ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ಬೋಟ್‍ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲೀಕರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.