Tag: Boat tragedy

  • ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ರಾಂಚಿ: ಜಾರ್ಖಂಡ್‍ನ ಜಮ್ತಾರಾ ಜಿಲ್ಲೆಯ ಬಳಿಯ ನದಿಯಲ್ಲಿ ಇತ್ತೀಚೆಗಷ್ಟೇ ಪ್ರಯಾಣಿಕ ದೋಣಿ ಮುಳುಗಡೆಗೊಂಡಿದ್ದು, ಸೋಮವಾರ ಎನ್‌ಡಿಆರ್‌ಎಫ್ ತಂಡ ಆರು ಶವಗಳನ್ನು ಹೊರತೆಗೆದಿದ್ದಾರೆ ಮತ್ತು ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜಾರ್ಖಂಡ್‍ನ ಜಮ್ತಾರಾದ ದಾಮೋದರ್ ನದಿಯ ಬಾರ್ಬೆಂಡಿಯಾ ಸೇತುವೆಯ ಬಳಿ ಶುಕ್ರವಾರ ದೋಣಿ ಮುಳುಗಿ ಈ ದುರಂತ ಸಂಭವಿಸಿದೆ. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ಸೋಮವಾರ ಆರು ಮೃತದೇಹಗಳು ಪತ್ತೆಯಾಗಿದ್ದು, ಭಾನುವಾರ ಎಂಟು ಮಂದಿ ಶವ ಪತ್ತೆಯಾಗಿತ್ತು. ಇನ್ನೂ ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಒಟ್ಟು ಈವರೆಗೂ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಜಮ್ತಾರಾ ಉಪ ಆಯುಕ್ತ ಫೈಜ್ ಅಹ್ಮದ್ ಮುಮ್ತಾಜ್ ತಿಳಿಸಿದ್ದಾರೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಡೈವರ್‌ಗಳ ಹುಡುಕಾಟ ಬಹುತೇಕ ಮುಗಿದಿದೆ ಎಂದು ಅವರು ಹೇಳಿದರು. ಈ ಘಟನೆ ಕುರಿತಂತೆ ವಿಧಾನಸಭೆಯಲ್ಲಿ ನಿರ್ಸಾದ ಬಿಜೆಪಿ ಶಾಸಕಿ ಅಪರ್ಣಾ ಸೇನ್‍ಗುಪ್ತಾ ಅವರು ಕೇಳಿದ ಪ್ರಶ್ನೆಗೆ ಹೇಮಂತ್ ಸೋರೆನ್ ಅವರು, ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ವಿಪತ್ತು ನಿರ್ವಹಣಾ ಇಲಾಖೆಯಿಂದ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ನದಿಗೆ ಅಡ್ಡಲಾಗಿರುವ ಬಾರ್ಬೆಂಡಿಯಾ ಸೇತುವೆ ಕಾರ್ಯರೂಪಕ್ಕೆ ತಂದಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ವಿರೋಧ ಪಕ್ಷಗಳ ಹಲವಾರು ನಾಯಕರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸೇತುವೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದ ಕಾರಣ ಜನರು ನದಿ ದಾಟಲು ನದಿ ಮಾರ್ಗದ ಮೂಲಕ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ಹಾವೇರಿ: ಕಾರವಾರ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರ ಹಾಗೂ ಯತ್ನಳ್ಳಿಯ ಬೆಳವಲಕೊಪ್ಪ ಕುಟುಂಬಗಳ ಒಂಭತ್ತು ಜನರಿಗೆ ತಲಾ ಐದು ಲಕ್ಷ ರೂ. ಪರಿಹಾರದಂತೆ ಒಟ್ಟಾರೆ 45 ಲಕ್ಷ ರೂ. ಪರಿಹಾರ ಚೆಕ್‍ ಅನ್ನು ಕುಟುಂಬ ವರ್ಗಕ್ಕೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ, ದೋಣಿ ದುರಂತದಲ್ಲಿ ಮಡಿದ ಕುಟುಂಬದ ಸೋಮಪ್ಪ ಬಿ.ಬೆಳವಲಕೊಪ್ಪ ಸವಣೂರ ಇವರಿಗೆ 20 ಲಕ್ಷ ರೂ. ಚೆಕ್ ಹಾಗೂ ಎಂಟು ವರ್ಷದ ಬಾಲಕ ಗಣೇಶ ಪಿ.ಬೆಳವಲಕೊಪ್ಪ ಹಾಗೂ ಶ್ರೀಮತಿ ಕೇಶವ್ವ ಬಿ.ಬೆಳವಲಕೊಪ್ಪ ಅವರಿಗೆ 25 ಲಕ್ಷ ರೂ.ಗಳ ಚೆಕ್‍ಗಳನ್ನು ಸಚಿವರು ನೀಡಿದರು.

    ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ದೋಣಿ ದುರಂತದಲ್ಲಿ 16 ಜನ ಜಲಸಮಾಧಿಯಾಗಿದ್ದು, ಈ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರು ಯತ್ನಳ್ಳಿಯ 9 ಜನ ದುರಂತದಲ್ಲಿ ಸಾವನ್ನಪ್ಪಿದ್ದರು. ಬಿ.ಸೋಮಪ್ಪ ಅವರ ಹೆಂಡತಿ ಶ್ರೀಮತಿ ಮಂಜುಳಾ ಎಸ್. ಬೆಳವಲಕೊಪ್ಪ, ಮಕ್ಕಳಾದ ಕಿರಣ, ಅರುಣಾ ಹಾಗೂ ಸಹೋದರಿ ಕೀರ್ತಿ ಸಾವನ್ನಪ್ಪಿದ್ದರು. ತಲಾ ಐದು ಲಕ್ಷ ರೂ.ದಂತೆ 20 ಲಕ್ಷ ರೂ. ಪರಿಹಾರ ಚೆಕ್‍ನ್ನು ಸೋಮಪ್ಪ ಅವರು ಗೃಹ ಸಚಿವರಿಂದ ಸ್ವೀಕರಿಸಿದರು. ಇದೇ ಗ್ರಾಮದ ಇನ್ನೊಂದು ಕುಟುಂಬದ ಪರಶುರಾಮ ಬಿ.ಬೆಳವಲಕೊಪ್ಪ, ಹೆಂಡತಿ ಭಾರತಿ ಬೆಳವಲಕೊಪ್ಪ, ಮಗಳಾದ ಸಂಜನಿ, ಸುಜಾತಾ, ಮಗ ಸಂಜಯ ಸೇರಿದಂತೆ ಐದು ಜನ ಮೃತಪಟ್ಟಿದ್ದು, ಪರಶುರಾಮ ಅವರ ಎರಡನೇ ಮಗನಾದ ಗಣೇಶ ಘಟನೆಯಲ್ಲಿ ಬದುಕಿ ಉಳಿದ್ದನು. ಮೃತರ ಮಗ ಗಣೇಶ ಹಾಗೂ ಅವರ ಅಜ್ಜಿ ಕೇಶವ್ವ (ಮೃತ ಪರಶುರಾಮ ತಾಯಿ) ಅವರಿಗೆ ಗೃಹ ಸಚಿವರು 25 ಲಕ್ಷ ರೂ. ಪರಿಹಾರದ ಚೆಕ್‍ನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾದ ಎಸ್.ಕೆ ಕರಿಯಣ್ಣನವರ, ಬ್ಯಾಡಗಿ ಕ್ಷೇತ್ರದ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿಗಳಾದ ಕೃಷ್ಣ ಭಾಜಪೇಯಿ, ಪೊಲೀಸ್ ಅಧೀಕ್ಷಕರಾದ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ವಿಜಯಕುಮಾರ, ಜಿ.ಪಂ. ಸದಸ್ಯರಾದ ಸಿದ್ದರಾಜು ಕಲಕೋಟಿ, ಹಾಗೂ ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.

  • ದೋಣಿ ಮುಗುಚಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸೇರಿ 5 ಮಕ್ಕಳ ಸಾವು

    ದೋಣಿ ಮುಗುಚಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸೇರಿ 5 ಮಕ್ಕಳ ಸಾವು

    ತಿರುವನಂತಪುರ: ಹಿನ್ನೀರಿನಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಮಣಪುರಂ ಜಿಲ್ಲೆಯ ಚಂಗರಕುಳಂ ಗ್ರಾಮದಲ್ಲಿ ನಡೆದಿದೆ.

    ಚಂಗರಕುಳಂ ಗ್ರಾಮದ ಬಳಿ ನಾರನಿಪುಜಂ ನದಿಯ ಹಿನ್ನೀರಿನಲ್ಲಿ ಈ ದೋಣಿ ದುರಂತ ನಡೆದಿದೆ. ವೈಶಣ್ (20), ಪ್ರಸೀನಾ (13), ಜನೀಶಾ (17), ಪೂಜಾ (13), ಅಭಿದೇವ್ (13) ಮತ್ತು ಆದಿನಾಥ್ (14) ದೋಣಿ ದುರಂತದಲ್ಲಿ ಮೃತ ದುರ್ದೈವಿಗಳು. ಇನ್ನು ಈ ದುರಂತದಲ್ಲಿ ಅಂಬಿಗ ವೇಲಾಯುಧ (55), ಫಾತಿಮಾ (9) ಮತ್ತು ಶಿಬಕಾ (11) ಬದುಕುಳಿದಿದ್ದಾರೆ.

    ಮಕ್ಕಳೆಲ್ಲ ತಮ್ಮ ಸಂಬಂಧಿ ಅಂಬಿಗನಾದ ವೇಲಾಯುಧ ಜೊತೆ ಜಲಾಶಯ ನೋಡಲು ಚಿಕ್ಕದಾದ ಬೋಟ್ ನಲ್ಲಿ ತೆರಳಿದ್ದರು. ಕೇವಲ ಇಬ್ಬರು ಸಾಮರ್ಥವುಳ್ಳ ಬೋಟ್ ನಲ್ಲಿ ಒಂಭತ್ತು ಜನ ಪ್ರಯಾಣಿಸಿದ್ರಿಂದ ನದಿಯ ಮಧ್ಯಭಾಗದಲ್ಲಿ ಬೋಟ್ ಮುಗುಚಿ ಬಿದ್ದಿದೆ. ವೇಲಾಯುಧ ರಿಗೆ ಈಜು ಬರುತ್ತಿದ್ದರಿಂದ ಫಾತಿಮಾ ಎಂಬ ಬಾಲಕಿಯನ್ನು ರಕ್ಷಿಸಿ, ತಾನು ಬದುಕುಳಿದಿದ್ದಾರೆ. ಇತ್ತ 11 ವರ್ಷದ ಶಿಬಕಾ ಈಜಿ ದಡ ಸೇರಿದ್ದಾನೆ. ದೋಣಿಯಲ್ಲಿದ್ದ ವೇಲಾಯುಧ ಮಗ ವೈಶಾಲ್ ಗೆ ಈಜು ಬರುತ್ತಿದ್ದರೂ ಮಕ್ಕಳನ್ನು ಬದುಕಿಸಲು ಹೋಗಿ ಜಲಸಮಾಧಿ ಆಗಿದ್ದಾನೆ.

    ಮೃತ ದೇಹಗಳನ್ನೆಲ್ಲಾ ನದಿಯಿಂದ ಹೊರ ತೆಗೆಯಲಾಗಿದೆ. ಬದುಕುಳಿದು ಬಂದವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿ ಬಿದ್ದಿದೆ.

    ಜಿಲ್ಲೆಯ ಪವಿತ್ರ ಸಂಗಮಂ ಘಾಟ್ ಬಳಿ ಈ ದುರಂತ ನಡೆದಿದೆ. ಬೋಟ್ ನಲ್ಲಿದ್ದ 11 ಜನರು ಕಣ್ಮರೆಯಾಗಿದ್ದು, ಇದೂವರೆಗೂ ಕೇವಲ 15 ಮೃತ ದೇಹಗಳು ಮಾತ್ರ ಪತ್ತೆಯಾಗಿವೆ. ಇನ್ನೂ 12 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ ಪತ್ರಿಕೆಗಳು ವರದಿ ಮಾಡಿವೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ವ್ಯಸ್ಥವಾಗಿದ್ದಾರೆ. ಆದರೆ ಸಾವು- ನೋವಿನ ಬಗ್ಗೆ ನಿಖರ ಅಂಕಿ ಅಂಶಗಳು ಇದೂವರೆಗೂ ಲಭ್ಯವಾಗಿಲ್ಲ.

    ದುರಂತಕ್ಕೆ ಕಾರಣವೇನು?: ಇಂದು ಕಾರ್ತಿಕ ಮಾಸದ ಕೊನೆಯ ಭಾನುವಾರ. ಹಾಗಾಗಿ ಜನರು ಪವಿತ್ರ ಸಂಗಮಂ ಘಾಟ್ ತೆರಳಿದ್ದಾರೆ. ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪವಿತ್ರ ಸಂಗಮಂ ಇದೊಂದು ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಅನೇಕ ಪ್ರವಾಸಿಗರು ಪ್ರವಾಸಿ ಸ್ಥಳವನ್ನು ನೋಡಲು ಹೋಗುತ್ತಾರೆ. ಆದರೆ ಇಂದು ಕಾರ್ತಿಕ ಮಾಸ ಕೊನೆಯ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಇದೇ ಸ್ಥಳದಲ್ಲಿ ಗೋದಾವರಿ ಮತು ಕೃಷ್ಣಾ ನದಿಯ ಸಂಗಮವಾಗುತ್ತದೆ. ಪ್ರವಾಸಿಗರೆಲ್ಲರೂ ಭವಾನಿ ದ್ವೀಪದಿಂದ ಪವಿತ್ರ ಸಂಗಮಂ ನಲ್ಲಿ ನಡೆಯುವ ಪವಿತ್ರ ಆರತಿಯನ್ನು ಕಣ್ತುಂಬಿಸಿಕೊಳ್ಳಲು ತೆರಳುತ್ತಿದ್ರು.

    ಬೋಟ್ ನಲ್ಲಿದ್ದ ಹೆಚ್ಚಿನ ಸಂಖ್ಯೆಯ ಜನರು ಪ್ರಕಾಶಂ ಜಿಲ್ಲೆಯ ಒಂಗಲ್ ನಿವಾಸಿಗಳು ಎಂದು ತಿಳಿದು ಬಂದಿದ್ದು, ಎಲ್ಲರೂ ಕ್ರೀಡಾಕೂಟಗಳಲ್ಲಿ ಬಳಕೆಯಾಗುವ ಸಾಧರಾಣ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದರು.

    ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಆದೇಶ ನೀಡಿದ್ದಾರೆ.