Tag: Board of Secondary Education

  • ಪ್ರೌಢ ಶಿಕ್ಷಣ ಮಂಡಳಿ ಎಡವಟ್ಟು – ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿನಿ

    ಪ್ರೌಢ ಶಿಕ್ಷಣ ಮಂಡಳಿ ಎಡವಟ್ಟು – ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿನಿ

    ಚಿತ್ರದುರ್ಗ: ಪ್ರೌಢ ಶಿಕ್ಷಣ ಮಂಡಳಿ ಮಾಡಿರುವ ಎಡವಟ್ಟಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣ ಭವಿಷ್ಯ ತೂಗುಯ್ಯಾಲೆಯಲ್ಲಿ ನೇತಾಡುತ್ತಿದೆ.

    ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದಾಗಿ ಕೋಟೆನಾಡು ಚಿತ್ರದುರ್ಗದ ವಿದ್ಯಾರ್ಥಿನಿ ಈಶ್ವರಿಯ ಮುಂದಿನ ಶಿಕ್ಷಣದ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.

    ಈಶ್ವರಿ ಮೆದೇಹಳ್ಳಿಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿದ್ದಾಳೆ. ಎಲ್ಲಾ ವಿಷಯಗಳಲ್ಲೂ ಶೇ.90ಕ್ಕೂ ಅಧಿಕ ಅಂಕ ಗಳಿಸಿದ್ದಾಳೆ. ಆದರೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಮಾತ್ರ ತಾನು ಪಟ್ಟ ಪರಿಶ್ರಮಕ್ಕಿಂತ ಅತಿ ಕಡಿಮೆ ಅಂಕಗಳು ಬಂದಿವೆ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ತನ್ನ ಉತ್ತರ ಪತ್ರಿಕೆಯನ್ನ ವಾಪಸ್ ತರಿಸಿಕೊಂಡಿದ್ದಾಳೆ. ಈಶ್ವರಿ ಬರೆದ ಉತ್ತರ ಪತ್ರಿಕೆಯ ಬದಲಾಗಿ ಬೇರೊಬ್ಬ ವಿದ್ಯಾರ್ಥಿ ಬರೆದಿರುವ ಉತ್ತರ ಪತ್ರಿಕೆಯನ್ನು ಮಂಡಳಿ ಕಳುಹಿಸಿದೆ.

    ಅಲ್ಲದೇ ಗಣಿತ ಮತ್ತು ವಿಜ್ಞಾನ ಪತ್ರಿಕೆಗಳನ್ನ ಪರಿಶೀಲಿಸಿ ಮತ್ತೊಮ್ಮೆ ಕಳುಹಿಸುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ಕೇವಲ ಗಣಿತ ಪತ್ರಿಕೆಯನ್ನು ಮಾತ್ರ ಮಂಡಳಿ ಕಳಿಸಿದ್ದು, ಶಿಕ್ಷಣ ಮಂಡಳಿ ವಿರುದ್ಧ ಪೋಷಕರು ಗರಂ ಆಗಿದ್ದಾರೆ.

    ತಮ್ಮ ಮಗಳ ಆತಂಕ ನೋಡಲಾಗದ ವಿದ್ಯಾರ್ಥಿನಿಯ ಪೋಷಕರು ಪರೀಕ್ಷಾ ಮಂಡಳಿಯ ಅಧಿಕಾರಿಗಳನ್ನ ಸಂಪರ್ಕಿಸಿ, ಸಮಸ್ಯೆ ಸರಿಪಡಿಸಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತೀವ್ರ ಆಕ್ರೋಶಗೊಂಡಿರೋ ಪೋಷಕರು ತಮ್ಮ ಮಗಳ ಮುಂದಿನ ಭವಿಷ್ಯಕ್ಕಾಗಿ ನ್ಯಾಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.