Tag: BMRCL

  • ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬೆಂಗಳೂರು: ಸಾಂದರ್ಭಿಕ ಶಿಶು ಮೈತ್ರಿ ಸರ್ಕಾರದಲ್ಲಿ ಈಗ ಮತ್ತೊಂದು ಹೊಸ ರಾಗ ಆರಂಭವಾಗಿದೆ. ಸಚಿವ ಸ್ಥಾನ ಹಂಚಿಕೆ ಸಮಸ್ಯೆ ಇನ್ನು ಬಾಕಿ ಇರುವಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಖಾತೆ ಹಂಚಿಕೆಯಲ್ಲಿ ಮನಸ್ತಾಪ ಎದುರಾಗುತ್ತಿದೆಯಂತೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡುವೆ ಖಾತೆ ಹಂಚಿಕೆಗಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ನನಗೆ ಅದು ಬೇಕು, ಕೊಟ್ಟುಬಿಡಿ ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದಿದ್ದಾರಂತೆ.

    ಡಿಸಿಎಂ ಪರಮೇಶ್ವರ್ ಕೇಳಿದ್ದೇನು:
    ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಪರಮೇಶ್ವರ್ ಅವರು ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್ ಸಿಎಲ್) ಖಾತೆಯೂ ಬೇಕೆಂದು ಪಟ್ಟು ಹಿಡಿದಿದ್ದಾರೆ. ನಾನು ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವೆ. ಹೀಗಾಗಿ ಬಿಎಂಆರ್ ಸಿಎಲ್ ಖಾತೆ ನನ್ನ ಬಳಿಯೇ ಇದ್ದರೆ, ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿ.ಪರಮೇಶ್ವರ್ ಅವರ ಬೇಡಿಕೆಯನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ದೂರ ತಳ್ಳುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು, ಸಮಸ್ಯೆ ಮಾಜಿ ಪ್ರದಾಣಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿಗೆ ಹೋಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

  • ಜೂನ್ 4 ರಂದು ಮೆಟ್ರೋ ಸೇವೆ ಇರಲ್ಲ!

    ಜೂನ್ 4 ರಂದು ಮೆಟ್ರೋ ಸೇವೆ ಇರಲ್ಲ!

    ಬೆಂಗಳೂರು: ಹೈಕೋರ್ಟ್ ಆದೇಶದ ಬಳಿಕವೂ ಸಮಸ್ಯೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಬಗೆಹರಿಸದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನೌಕರರು ಜೂನ್ 4ರಂದು ಮುಷ್ಕರ ನಡೆಸಲಿದ್ದಾರೆ.

    ವೇತನ ಪರಿಷ್ಕರಣೆ, ಬಡ್ತಿ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಮ್ಮ ಮೆಟ್ರೋ ನೌಕರರ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ.

    ಮಾರ್ಚ್ 22ರಂದು ಪ್ರತಿಭಟನೆ ನಡೆಸಲು ನೌಕರರು ನಿಶ್ಚಯಿಸಿದ್ದರು. ಆದರೆ, ಹೈಕೋರ್ಟ್ ಬಿಎಂಆರ್ ಸಿಎಲ್ ಹಾಗೂ ಅದರ ನೌಕರರಿಗೆ ಸಮಾಧಾನದಿಂದ ವರ್ತಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿತ್ತು.

    ಹೈಕೋರ್ಟ್ ಆದೇಶದ ಮೇರೆಗೆ ಮೆಟ್ರೊ ನೌಕರರು ತಮ್ಮ ಮುಷ್ಕರವನ್ನು 1 ತಿಂಗಳವರೆಗೆ ಮುಂದೂಡಿದ್ದರು. ಈಗ ಮಾತುಕತೆ ಫಲಪ್ರದವಾಗದ ಕಾರಣ ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

  • ಮಾರ್ಚ್ 22ರಂದು ಮೆಟ್ರೊ ಮುಷ್ಕರ ಇರಲ್ಲ

    ಮಾರ್ಚ್ 22ರಂದು ಮೆಟ್ರೊ ಮುಷ್ಕರ ಇರಲ್ಲ

    ಬೆಂಗಳೂರು: ಮಾರ್ಚ್ 22 ರಂದು ನಡೆಯಲು ಉದ್ದೇಶಿಸಿದ್ದ ನಮ್ಮ ಮೆಟ್ರೊ ನೌಕರರ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.

    ಎಸ್ಮಾ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹಾಕಿದ್ದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಇಂದು ಎರಡು ಕಡೆಯವರೆಗೆ ಕುಳಿತು ಸಂಧಾನ ನಡೆಸುವಂತೆ ಸೂಚನೆ ನೀಡಿದೆ. ಎರಡು ಕಡೆಯವರು ಸಮಾಧಾನದಿಂದ ವರ್ತಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿತು.

    ಹೈಕೋರ್ಟ್ ಆದೇಶದ ಮೇರೆಗೆ ಮೆಟ್ರೊ ನೌಕರರು ತಮ್ಮ ಮುಷ್ಕರವನ್ನು 1 ತಿಂಗಳವರೆಗೆ ಮುಂದೂಡಿದ್ದಾರೆ. ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ ಮತ್ತೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಬಡ್ತಿ, ವೇತನ ಪರಿಷ್ಕರಣೆ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ತಡೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೆಟ್ರೊ ನೌಕರರು ಮಾ. 22 ರಂದು ಮುಷ್ಕರ ನಡೆಸಲು ಮುಂದಾಗಿದ್ದರು. ಮೆಟ್ರೊ ಸಾರ್ವಜನಿಕ ಸೇವೆಯಾಗಿದ್ದು, ಇದಕ್ಕೆ ಅಡಚಣೆ ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮುಷ್ಕರಕ್ಕೆ ಇಳಿದರೆ ಎಸ್ಮಾ ಜಾರಿಗೊಳಿಸಲಾಗುತ್ತದೆ ಎಂದು ಬಿಎಂಆರ್‍ಸಿಎಲ್ ಎಚ್ಚರಿಕೆ ನೀಡಿತ್ತು.

  • ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಗಳು, ಕೆಎಸ್‍ಆರ್ ಟಿಸಿ ಪ್ರಯಾಣಿಕರಿಗೆ ದುಬಾರಿ ಟಿಕೆಟ್ ವಿಧಿಸುವುದು ನಿಮಗೆ ಗೊತ್ತೇ ಇದೆ. ಈಗ ಇದೇ ತಂತ್ರವನ್ನು ಬಿಎಂಆರ್ ಸಿಎಲ್ ಮಾಡಿದ್ದು ಹೊಸ ವರ್ಷದಂದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಲಾಭ ಮಾಡಲು ಮುಂದಾಗಿದೆ.

    ಹೌದು, ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 11ರ ವರೆಗೆ ಕಾರ್ಯನಿರ್ವಹಿಸುವ ಮೆಟ್ರೋ ಡಿಸೆಂಬರ್ 31ರ ರಾತ್ರಿ ಬೆಳಗ್ಗಿನ ಜಾವ 2 ಗಂಟೆಯವರೆಗೆ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ನೀಡುವುದಾಗಿ ಹೇಳಿದೆ. ಆದರೆ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಟ್ರಿನಿಟಿ, ಎಂಜಿ ರೋಡ್, ಮತ್ತು ಕಬ್ಬನ್ ಪಾರ್ಕ್ ನಿಲ್ದಾಣದಿಂದ ಪ್ರಯಾಣಿಕರು ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರೂ. ದರವನ್ನು ನಿಗದಿ ಪಡಿಸಿದೆ.

    ಡಿಸೆಂಬರ್ 31ರ ರಾತ್ರಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ ಹೀಗಾಗಿ ಚಿಲ್ಲರೆ ನೀಡಲು ನಮಗೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ 50 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಮ್ಮ ನಡೆಯ ಬಗ್ಗೆ ಸಮರ್ಥನೆ ನೀಡಿದ್ದಾರೆ.

    ಸಾರ್ವಜನಿಕರಿಂದ ವಿರೋಧ:
    ಸಾರ್ವಜನಿಕರ ಸೇವೆ ನೀಡಬೇಕಾದ ಮೆಟ್ರೋ ಚಿಲ್ಲರೆ ನೆಪದಲ್ಲಿ ಈ ರೀತಿ ದರ ಏರಿಸಿ ಲಾಭಕ್ಕೆ ಮುಂದಾಗಿರುವುದು ಎಷ್ಟು ಸರಿ? ನಾವು ಒಂದು ಟಿಕೆಟ್ ಗೆ ಎಷ್ಟು ದರ ಆಗುತ್ತದೋ ಅಷ್ಟೇ ಹಣವನ್ನು ನೀಡುತ್ತೇವೆ. ನಮಗೆ ಚಿಲ್ಲರೆ ನೀಡುವುದೇ ಬೇಡ. ಈಗ ಹೇಗೆ ಟಿಕೆಟ್ ನೀಡುತ್ತಿರೋ ಅಷ್ಟೇ ದರಲ್ಲಿ ಟಿಕೆಟ್ ನೀಡಬಹುದಲ್ಲವೇ ಎಂದು ಪ್ರಶ್ನೆ ಮಾಡಿ ಮೆಟ್ರೋ ದರ ಏರಿಕೆಯನ್ನು ಟೀಕಿಸುತ್ತಿದ್ದಾರೆ.

    https://www.youtube.com/watch?v=xDbb1xHdrZ4

     

  • ಸಂಪಿಗೆರಸ್ತೆ-ಯಲೇಚನಹಳ್ಳಿ ನಡುವೆ ಮೆಟ್ರೋ ರೈಲು- ರಾಷ್ಟ್ರಪತಿಗಳಿಂದ ಉದ್ಘಾಟನೆ

    ಸಂಪಿಗೆರಸ್ತೆ-ಯಲೇಚನಹಳ್ಳಿ ನಡುವೆ ಮೆಟ್ರೋ ರೈಲು- ರಾಷ್ಟ್ರಪತಿಗಳಿಂದ ಉದ್ಘಾಟನೆ

    ಬೆಂಗಳೂರು: ಸಿಲಿಕಾನ್ ಸಿಟಿ ಜನರ 10 ವರ್ಷಗಳ ಕನಸು ನನಸಾಗಿದೆ. ಬೆಂಗಳೂರಿನ ಹೆಮ್ಮೆಯ ಪ್ರತೀಕವಾದ ನಮ್ಮ ಮೆಟ್ರೋ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.
    ಇಂದು ದಕ್ಷಿಣ ಭಾರತದ ಮೊದಲ ಹಂತದ ನಮ್ಮ ಮೆಟ್ರೋವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಜೆ 6 ಗಂಟೆಗೆ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳೆಗ್ಗೆ 6 ಗಂಟೆಯಿಂದ ಸಾರ್ವಜನಿಕರ ಓಡಾಟಕ್ಕೆ ಮೊದಲ ಹಂತದ ನಮ್ಮ ಮೆಟ್ರೋ ಮಾರ್ಗ ಮುಕ್ತವಾಗಲಿದೆ.

    ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಕೆ.ಬಿ. ಕೋಳಿವಾಡ, ಬಿ.ಕೆ. ಶಂಕರಮೂರ್ತಿ, ಮೇಯರ ಪದ್ಮಾವತಿ, ಕೇಂದ್ರ ಸಚಿವರಾದ ಅನಂತಕುಮಾರ ಮತ್ತು ಸದಾನಂದ ಗೌಡ ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಸಮಯ ಬದಲಾವಣೆ: ಮಹತ್ವದ ನಿರ್ಧಾರವೊಂದರಲ್ಲಿ ಮೆಟ್ರೋ ನಿಗಮ ರೈಲುಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಿದೆ. ಸೋಮವಾರದಿಂದ ಹೊಸ ವೇಳಾಪಟ್ಟಿ ಅನ್ವಯವಾಗಲಿದೆ. ಈಗಿರುವ 6 ಗಂಟೆಗೆ ಬದಲು ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ರೈಲು ತನ್ನ ಸಂಚಾರ ಆರಂಭಿಸಲಿದೆ. ರಾತ್ರಿ 10 ಗಂಟೆ ಬದಲು 11 ಗಂಟೆಯವರೆಗೂ ಸಂಚಾರ ಇರಲಿದೆ. ಕೆಂಪೇಗೌಡ ರೈಲು ನಿಲ್ದಾಣದಿಂದ ನಾಲ್ಕು ಟರ್ಮಿನಲ್ ನಿಲ್ದಾಣಗಳ ಕಡೆಗೆ ರಾತ್ರಿ 11.25ಕ್ಕೆ ಕಡೆಯ ರೈಲು ಸಂಚರಿಸಲಿದೆ. ನಾಗಸಂದ್ರ ಟರ್ಮಿನಲ್‍ಗೆ ರಾತ್ರಿ 10.50ಕ್ಕೆ ಕೊನೆಯ ರೈಲು, ಯಲೇಚಲನಹಳ್ಳಿ ಟರ್ಮಿನಲ್‍ಗೆ 11 ಗಂಟೆಗೆ, ಮೈಸೂರು ರಸ್ತೆಗೆ 11.05ಕ್ಕೆ ಕೊನೆಯ ರೈಲು ಹೊರಡಲಿದೆ.

    ಭಾನುವಾರ ಒಂದು ದಿನ ಮಾತ್ರ ಬೆಳಗ್ಗೆ 5.30ಕ್ಕೆ ರೈಲುಗಳ ಓಡಾಟ ಆರಂಭವಾಗಲಿದೆ. ಇನ್ನು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ರೈಲುಗಳ ಓಡಾಟ ಇರಲಿದೆ. ಕಡಿಮೆ ಇರುವ ಅವಧಿಯಲ್ಲಿ ಪ್ರತಿ 20 ನಿಮಿಷಕ್ಕೊಮ್ಮೆ ರೈಲುಗಳು ಓಡಲಿವೆ. ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

    ಮೆಟ್ರೋ ರೈಲಿನ ಅಧಿಕೃತ ಕೆಲಸ ಆರಂಭವಾಗಿದ್ದು ಏಪ್ರಿಲ್ 15 2007 ರಂದು. ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಯೋಜನೆಗೆ ಚಾಲನೆ ನೀಡಿದ್ರು. ಬಿಎಂಆರ್‍ಸಿಎಲ್ ಈ ಯೋಜನೆಯನ್ನ 2005 ರಲ್ಲೆ ಆರಂಭ ಮಾಡಲು ಯೋಜನೆ ರೂಪಿಸಿಕೊಂಡಿತ್ತು. ಆದ್ರೆ ಸರ್ಕಾರದಲ್ಲಿ ಆದ ಬದಲಾವಣೆಯಿಂದ ಮೆಟ್ರೋ ಕಾಮಗಾರಿಗೆ ಒಪ್ಪಿಗೆ ದೊರೆಯಲು ನಿಧಾನವಾಯ್ತು. ಆದ್ರೆ 2006 ರಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದು ಆ ನಂತರ ಬಿಎಂಆರ್‍ಸಿಎಲ್ ತನ್ನ ಕೆಲಸ ಆರಂಭಿಸಿತು.

    ನಮ್ಮ ಮೆಟ್ರೋ ಮೊದಲ ಹಂತ ಎಲ್ಲಿಂದ ಎಲ್ಲಿಗೆ ಓಡುತ್ತೆ ಎಷ್ಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸಂಚಾರ ಮಾಡುತ್ತೆ ಅನ್ನೋದನ್ನ ನೊಡೋದಾದ್ರೆ
    * ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿ
    * ಯಲೇಚನಹಳ್ಳಿ ಟು ನಾಗಸಂದ್ರ
    * ಮೆಟ್ರೋ ಸಂಚಾರದ ಒಟ್ಟು ದೂರ: 42.3 ಕಿ.ಮೀ
    * ಸುರಂಗ ಮಾರ್ಗದ ಒಟ್ಟು ದೂರ: 8.8 ಕಿ.ಮೀ
    * ಎತ್ತರಿಸಿದ ಮಾರ್ಗದ ಒಟ್ಟು ದೂರ: 33.42 ಕಿ.ಮೀ
    * ಒಟ್ಟು ನಿಲ್ದಾಣ: 40
    * ಒಟ್ಟು ವೆಚ್ಚ: 14,291 ಕೋಟಿ ರೂಪಾಯಿ

    ಒಟ್ಟು 42.3 ಕೀಲೋ ಮೀಟರ್ ದೂರ ಮೆಟ್ರೋ ಸಂಚರಿಸಲಿದೆ. ಇದ್ರಲ್ಲಿ 8.8 ಕಿಲೋ ಮೀಟರ್ ದೂರದವರೆಗೆ ಸುರಂಗ ಮಾರ್ಗವಿದ್ರೆ, 33.42 ಕಿಲೋ ಮೀಟರ್ ದೂರದವರೆಗೆ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಒಟ್ಟು 40 ಮೆಟ್ರೋ ನಿಲ್ದಾಣಗಳಿದ್ದು, ಈ ಎಲ್ಲಾ ಪ್ರಾಜೆಕ್ಟ್‍ಗೆ ಇದೂವರೆಗೂ ತಗುಲಿದ ಒಟ್ಟು ವೆಚ್ಚ 14,291 ಕೋಟಿ ರೂಪಾಯಿ.

    ಇನ್ನು ನಮ್ಮ ಮೆಟ್ರೋನ ಪ್ರಮುಖ ಆಕರ್ಷಣೆ ಅಂದ್ರೆ ಅದು ಮೆಜೆಸ್ಟಿಕ್ ನಿಲ್ದಾಣ. ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ಈ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ 70 ಸಾವಿರ ಪ್ರಯಾಣಿಕರು ಬರಬಹುದು. ಸಿಟಿ ರೈಲ್ವೇ ನಿಲ್ದಾಣ, ಬಿಎಂಟಿಸಿ ನಿಲ್ದಾಣ. ಮತ್ತು ಕೆಎಸ್‍ಆರ್‍ಟಿಸಿ ನಿಲ್ದಾಣ ದಿಂದ ನೇರವಾಗಿ ಮೆಜೆಸ್ಟಿಕ್‍ನ ಈ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಬರಬಹುದಾದಂತಹ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

    ನಮ್ಮ ಮೆಟ್ರೋ ಮೊದಲ ಹಂತ ಮುಗಿಸಲು 10 ವರ್ಷಗಳ ಸುದೀರ್ಘ ಅವಧಿಯನ್ನು ತಗೆದುಕೊಂಡ ಅಧಿಕಾರಿಗಳು ಎರಡನೇ ಹಂತ ಮತ್ತು 3 ನೇ ಹಂತವನ್ನು 2022ರ ಒಳಗೆ ಮುಗಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ.