Tag: BMRCL

  • ಮೆಟ್ರೋ ಕಾಮಗಾರಿಗೆ ಆಂಜನೇಯ ದೇವಾಲಯ ಕೆಡವಲು ನಿರ್ಧಾರ – ಭಕ್ತರ ಆಕ್ರೋಶ

    ಮೆಟ್ರೋ ಕಾಮಗಾರಿಗೆ ಆಂಜನೇಯ ದೇವಾಲಯ ಕೆಡವಲು ನಿರ್ಧಾರ – ಭಕ್ತರ ಆಕ್ರೋಶ

    ಬೆಂಗಳೂರು: ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿ ನಡೆಸಲು ಆಂಜನೇಯ ದೇವಸ್ಥಾನವನ್ನು ತೆರವುಗೊಳಿಸಲು ನಿರ್ಧರಿಸಿದ್ದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.

    ಸುಮಾರು 150 ವರ್ಷಗಳಿಂದ ಈ ಆಂಜನೇಯನನ್ನು ಭಕ್ತರು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಹನುಮಂತನಿಗೆ ಮೆಟ್ರೋ ಬೂತ ಎದುರಾಗಿದೆ. ಆರ್.ವಿ.ರಸ್ತೆ ಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ.

    ಆದಷ್ಟು ಬೇಗ ಮೆಟ್ರೋ ರೈಲನ್ನು ಹಳಿ ಮೇಲೆ ಓಡಿಸುವ ಧಾವಂತದಲ್ಲಿ ನಮ್ಮ ಮೆಟ್ರೋ ನಿಗಮ ಇದ್ದು, ಆಂಜನೇಯನ ಗುಡಿಯನ್ನು ಒಡೆಯಲು ತಯಾರಿ ನಡೆಸಿದೆ. ಗಾರೆಬಾವಿ ಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಮೂರು ಆಂಜನೇಯನ ಸನ್ನಿಧಿಗಳಿದೆ. ಈ ಮೂರು ಆಂಜನೇಯನ ಗುಡಿಗಳನ್ನು ಕೆಡವಲು ಬಿಎಂಆರ್‍ಸಿಎಲ್ ಯೋಜನೆ ರೂಪಿಸಿದೆ.

    ಈ ಮಾರ್ಗದಲ್ಲಿ ಈಗಾಗಲೇ ಮೆಟ್ರೋ ಪಿಲ್ಲರ್ ಸಿದ್ಧವಾಗಿದ್ದು ಗಾರ್ಡರ್ ಗಳನ್ನು ಮೇಲೇರಿಸಲಾಗಿದೆ. ಶೇ.50 ರಷ್ಟು ಕೆಲಸ ಮುಗಿದಿದೆ. ಆದರೆ ಮೆಟ್ರೋಗೆ ಸರ್ವಿಸ್ ರಸ್ತೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಮೆಟ್ರೋ ಕಾಮಗಾರಿಗಾಗಿ ಹೈವೇ ಪ್ರಾಧಿಕಾರದಿಂದ ಸರ್ವಿಸ್ ರಸ್ತೆ ಜಾಗವನ್ನು ಮೆಟ್ರೋ ಪಡೆದಿತ್ತು. ಕಾಮಗಾರಿ ಮುಗಿಯುತ್ತಿದ್ದಂತೆ ಬದಲಿ ಸರ್ವಿಸ್ ರಸ್ತೆಯನ್ನು ಹೈವೇ ಪ್ರಾಧಿಕಾರಕ್ಕೆ ಬಿಟ್ಟುಕೊಡಬೇಕಿದೆ. ಹೀಗಾಗಿ ಗಾರೆಬಾವಿ ಪಾಳ್ಯ, ಬೊಮ್ಮನಹಳ್ಳಿ, ಹಾಗೂ ರೂಪೇನ ಅಗ್ರಹಾರದ ಆಂಜನೇಯ ದೇವಸ್ಥಾನಗಳನ್ನು ತೆರವುಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ.

    ಗಾರೆಬಾವಿ ಪಾಳ್ಯದಲ್ಲಿರುವ ಆಂಜನೇಯನ ಗುಡಿ ಅತ್ಯಂತ ಪುರಾತನವಾಗಿದ್ದು, ಸುಮಾರು 150 ವರ್ಷದಷ್ಟು ಹಳೆಯದು ಎನ್ನಲಾಗುತ್ತಿದೆ. ಅಲ್ಲದೆ ಈ ಹಿಂದಿನ ಪ್ಲಾನ್ ಪ್ರಕಾರ ಗುಡಿ ತೆರವು ಮಾಡುವುದಿಲ್ಲ ಎಂದು ಮೆಟ್ರೋ ಭರವಸೆ ನೀಡಿತ್ತು. ಆದರೆ ಈಗ ಏಕಾಏಕಿ ದೇವಸ್ಥಾನ ತೆರವಿಗೆ ಮುಂದಾಗಿರುವ ಮೆಟ್ರೋ ಕ್ರಮವನ್ನು ಭಕ್ತರು ಸೇರಿ ದೇವಸ್ಥಾನ ಆಡಳಿತ ಮಂಡಳಿ ಖಂಡಿಸಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡುವುದಿಲ್ಲ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿ, ರೂಪೇನ ಅಗ್ರಹಾರದ ಆಂಜನೇಯ ಸನ್ನಿಧಿಯನ್ನೂ ತೆರವು ಮಾಡುವುದಕ್ಕೆ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಮಾರ್ಗದ ಟ್ರಾಫಿಕ್ ಹತೋಟಿಗೆ ಮೆಟ್ರೋ ಅನಿವಾರ್ಯ. ಆದರೆ ಈಗ ಅನಾದಿಕಾಲದಿಂದಲೂ ಜನರು ಪೂಜಿಸಿಕೊಂಡು ಬಂದ ಗುಡಿ ತೆರವು ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

  • ಇಂದಿರಾನಗರದ ಮೆಟ್ರೋ ಪಿಲ್ಲರ್‌ ಬೇರಿಂಗ್‌ನಲ್ಲಿ ಬಿರುಕು

    ಇಂದಿರಾನಗರದ ಮೆಟ್ರೋ ಪಿಲ್ಲರ್‌ ಬೇರಿಂಗ್‌ನಲ್ಲಿ ಬಿರುಕು

    ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿಕ ಇದೀಗ ಇಂದಿರಾನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ.

    ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಮೂಡಿದೆ. ಆದರೆ ಪ್ರಯಾಣಿಕರನ್ನು ಕಣ್ಣತಪ್ಪಿಸಿ bmrcl ದುರಸ್ತಿ ಮಾಡುವುದಕ್ಕೆ ಹೊರಟಿದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಬಿಎಂಆರ್‌ಸಿಎಲ್ ನಿರ್ಲಕ್ಷ್ಯದಿಂದ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ಆರು ತಿಂಗಳ ಹಿಂದೆಯಷ್ಟೇ ಇದೇ ಮಾರ್ಗದಲ್ಲಿ ಮೆಟ್ರೋ ಸಮಸ್ಯೆ ಶುರುವಾಗಿತ್ತು. ಕಳೆದ ಬಾರಿ ಟ್ರಿನಿಟಿ ಸ್ಟೇಷನ್‍ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಮೊದಲ ಹಂತದ ಮೊದಲ ಫೇಸ್‍ನಲ್ಲಿ ಉದ್ಘಾಟನೆಯಾದ ಭಾಗ ಇದಾಗಿದೆ. ಆದರೆ ಇದೇ ಮಾರ್ಗದಲ್ಲಿ ಎರಡನೇ ಬಾರಿ ಸಮಸ್ಯೆ ಎದುರಾಗಿದೆ.

    ಜುಲೈ 30 ರಂದು ಮೆಟ್ರೋ ಪ್ರತಿಕಾ ಪ್ರಕಟಣೆಯೊಂದನ್ನು ಹೊರಡಿಸಿತ್ತು. ನೆರಳೆ ಮಾರ್ಗದ ಎಂಜಿ ರೋಡ್‍ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿರ್ವಹಣೆ ಎಂದು ಮಾಹಿತಿ ನೀಡಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ನಿರ್ವಹಣೆ ಅಂತಷ್ಟೇ ಮಾಹಿತಿ ನೀಡಲಾಗಿತ್ತು. ಆದರೆ ಈಗ ಪಿಲ್ಲರ್ ಬೇರಿಂಗ್ ಸಮಸ್ಯೆ ಬಯಲಾಗಿದೆ.

    ಪತ್ರಿಕಾ ಪ್ರಕಟಣೆಯಲ್ಲೇನಿತ್ತು..?
    ನಿರ್ವಹಣೆ ಕೆಲಸಕ್ಕಾಗಿ ನೇರಳೆ ಮಾರ್ಗದಲ್ಲಿನ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿ 9:30ರಿಂದ ಆ. 4ರ ಬೆಳಗ್ಗೆ 11:00 ಗಂಟೆವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುವುದಿಲ್ಲ.

    ಆಗಸ್ಟ್ 3ರಂದು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಸೇವೆಯ ಕೊನೆ ರೈಲು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ರಾತ್ರಿ 9:30 ಗಂಟೆಗೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗಿನ ಕೊನೆಯ ರೈಲು ರಾತ್ರಿ 9:00 ಗಂಟೆಗೆ ಹೊರಡಲಿದೆ.

    ಅದಾಗ್ಯೂ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿಯ ಸೇವೆ ಮುಕ್ತಾಯದವರೆಗೂ ಹಾಗೂ ಆ.4ರಂದು ಬೆಳಗ್ಗೆ 7:00 ಗಂಟೆಯಿಂದ 11:00 ಗಂಟೆಯವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುತ್ತವೆ.

    ಆ. 4 ರಂದು ಬೆಳಗ್ಗೆ 11:00 ಗಂಟೆಯ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ಮೆಟ್ರೋ ರೈಲಿನ ಸೇವೆಗಳು ದಿನನಿತ್ಯದಂತಿರುತ್ತವೆ. ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನ ಸೇವೆಗಳು ನಿಗದಿಯಂತೆ ನಡೆಯುತ್ತವೆ.

  • ಸಿಎಂ ಆಸ್ಪತ್ರೆ ಭೇಟಿಯಿಂದ ಅಂಬುಲೆನ್ಸ್‌ನಲ್ಲೇ ಕಾದ ರೋಗಿ!

    ಸಿಎಂ ಆಸ್ಪತ್ರೆ ಭೇಟಿಯಿಂದ ಅಂಬುಲೆನ್ಸ್‌ನಲ್ಲೇ ಕಾದ ರೋಗಿ!

    ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಯುವಕನ ಆರೋಗ್ಯ ವಿಚಾರಣೆಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದರಿಂದ ತುರ್ತು ಚಿಕಿತ್ಸೆಗೆ ಆಗಮಿಸಿದ್ದ ರೋಗಿಯೊಬ್ಬರು ಸ್ಟ್ರೆಚ್ಚರ್‍ನಲ್ಲಿಯೇ ಕಾದು ಚಿಕಿತ್ಸೆಗಾಗಿ ಪರದಾಟ ನಡೆಸಿದ್ದಾರೆ.

    ಶುಕ್ರವಾರ ಬೆಳಗ್ಗೆ ಜಯನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಲ್ಲಿ ವೇಣುಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಘಟನೆಯಲ್ಲಿ ಗಾಯಗೊಂಡಿದ್ದ ಆತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆತನ ತಾಯಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದರು.

    ಮೆಟ್ರೋ ನಿಲ್ದಾಣದಲ್ಲಿ ಯುವಕ ರೈಲಿಗೆ ಸಿಲುಕಿದ ಘಟನೆ ಬಗ್ಗೆ ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಸಿಎಂ ಆಸ್ಪತ್ರೆಗೆ ಬಂದ ಕಾರಣ ಪೊಲೀಸರು ಬೀಗಿ ಭದ್ರತೆಯನ್ನು ಏರ್ಪಡಿಸಿದ್ದರು. ಸಿಎಂ ಭೇಟಿಯಿಂದ ತುರ್ತು ಚಿಕಿತ್ಸೆಗೆ ಆಗಮಿಸಿದ ಕೆಲ ರೋಗಿಗಳು ಪರದಾಟ ನಡೆಸಿದರು.

    ಆಸ್ಪತ್ರೆಯ ಭೇಟಿ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಮೆಟ್ರೋ ನಿಲ್ದಾಣದಲ್ಲಿ ಮತ್ತಷ್ಟು ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಇಂದಿನ ಘಟನೆ ಘಟನೆ ಮೆಟ್ರೋ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಯಿಂದ ಆಗಿಲ್ಲ. ಕುಟುಂಬದ ಗಲಾಟೆಯಿಂದಾಗಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ಜೀವ ರಕ್ಷಣೆ ಮಾಡಿದ ಮೆಟ್ರೋ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.  ಇದನ್ನು ಓದಿ: ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಮೆಟ್ರೋ ರೈಲು ಆಗಮಿಸುವ ವೇಳೆ ಸುಮಾರು 20 ಮೀಟರ್ ದೂರವಿದ್ದ ಯುವಕ ಏಕಾಏಕಿ ಹಳಿಗೆ ಹಾರಿದ್ದು, ಈ ವೇಳೆ ರೈಲು ಹಳಿಯ ಮಧ್ಯಭಾಗದಲ್ಲಿ ಬಿದ್ದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು.

    ಯುವಕ ಆತ್ಮಹತ್ಯೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಟ್ರೋ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಇದ್ದರೂ ಕೂಡ ಘಟನೆ ನಡೆದಿದೆ. ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಸದ್ಯ ಸಂಚಾರ ಪುನರ್ ಆರಂಭಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬಿಎಂಆರ್ ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಆಸ್ಪತ್ರೆ ಬಳಿ ಮಾತನಾಡಿ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದರೆ ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದರು.

    ಮೆಟ್ರೋ ರೈಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ನಿವಾಸಿ ವೇಣುಗೋಪಾಲ್(18) ಎಂದು ತಿಳಿದು ಬಂದಿದೆ. ಆತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಬಳಿಕ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ತಡರಾತ್ರಿವರೆಗೂ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಇದನ್ನು ಗಮನಿಸಿದ್ದ ಪೋಷಕರು ಫೋನ್ ಹೆಚ್ಚು ಬಳಸದಂತೆ ತಿಳಿ ಹೇಳಿದ್ದರು. ಆದರೆ ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಪೋಷಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ವೇಣು ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಮನೆಯಿಂದ ಹೊರಬಂದಿದ್ದ. ಆ ಬಳಿಕ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಸಿಎಂ ಕುಮಾರಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    ಹೊಸ ವರ್ಷಕ್ಕೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    – ಅಂದು ಬಿಎಂಆರ್‌ಸಿಎಲ್ ನಿಂದ ಇಂದಿರಾನಗರ- ಎಂಜಿ ರಸ್ತೆಗೆ ಉಚಿತ ಬಸ್ ವ್ಯವಸ್ಥೆ

    ಬೆಂಗಳೂರು: ನೇರಳೆ ಮಾರ್ಗದಲ್ಲಿ ನಾಳೆಯೂ ನಮ್ಮ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ನಿಗಮವು (ಬಿಎಂಆರ್‌ಸಿಎಲ್) ಮಾಹಿತಿ ನೀಡಿದೆ.

    ಬೈಲಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ದುರಸ್ತಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಇಂದಿರಾನಗರದಿಂದ ಎಂಜಿ ರಸ್ತೆವರಿಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಸಿಸ್ಟಮ್ ಪರೀಕ್ಷೆ ಸಿಗ್ನಲಿಂಗ್ ರೈಲ್ವೇ ಟ್ರ್ಯಾಕ್ ಪರಿಶೀಲನೆ ಹಿನ್ನೆಲೆ ದುರಸ್ತಿ ಕಾರ್ಯ ವಿಸ್ತರಣೆಯಾಗಿದ್ದು, ಜನವರಿ 1ರಿಂದ ಆರಂಭವಾಗಲಿದೆ. ಈ ಮೂಲಕ ಹೊಸ ವರ್ಷಾಚರಣೆಗೆ ಎಂಜಿ ರಸ್ತೆಗೆ ಬರುವ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‍ಟಿಸಿಎಲ್ ಶಾಕ್ ಕೊಟ್ಟಿದೆ.

    ಟ್ರಿನಿಟಿ ಸಮೀಪ ಕಾಣಿಸಿಕೊಂಡಿದ್ದ ವಯಾಡಕ್ಟ್ ನಲ್ಲಿ ಬಿರುಕು ದುರಸ್ತಿ ಕಾಮಗಾರಿ ಡಿಸೆಂಬರ್ 30ರಂದು ಪೂರ್ಣಗೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿತ್ತು. ಆದರೆ ಇನ್ನೂ ದುರಸ್ತಿ ಬಾಕಿ ಇರುವುದರಿಂದ ನಾಳೆ ರಾತ್ರಿಯವರೆಗೂ ಕಾಮಗಾರಿ ನಡೆಯಲಿದ್ದು, ಮೆಟ್ರೋ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ.

    ಹೊಸ ವರ್ಷಕ್ಕೆ ಇಂದಿರಾನಗರ ಎಂಜಿ ರಸ್ತೆ ನಡುವೆ ಮೆಟ್ರೋ ರೈಲು ಸಂಚಾರ ಬಂದ್ ಆಗಿದ್ದರಿಂದ ಈ ಮಾರ್ಗದಲ್ಲಿ ಉಚಿತ ಬಿಎಂಟಿಸಿ ಸೇವೆ ಒದಗಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ – 3 ದಿನ ಸಂಚಾರ ಬಂದ್

    ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ – 3 ದಿನ ಸಂಚಾರ ಬಂದ್

    ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟ ನಂತರ ಅದಕ್ಕೆ ಕಬ್ಬಿಣದ ಪಿಲ್ಲರನ್ನು ಇಟ್ಟು ತಾತ್ಕಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಿಎಂಆರ್ ಸಿಎಲ್ ಮೆಟ್ರೋ ಪಿಲ್ಲರ್ ದುರಸ್ಥಿ ಕಾರ್ಯವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಬಂದ್ ಆಗಲಿದೆ.

    ಡಿಸೆಂಬರ್ 28 ಅಂದರೆ ಶುಕ್ರವಾರ ರಾತ್ರಿಯಿಂದ 29, 30 ಅಂದರೆ ಭಾನುವಾರದ ವರೆಗೂ ಮೆಟ್ರೋ ಸಂಚಾರ ಬಂದ್ ಆಗಲಿದೆ. ಎಂಜಿ ರಸ್ತೆಯಿಂದ ಇಂದಿರಾನಗರಕ್ಕೆ ಓಡಾಡುವ ಮೆಟ್ರೋ ಸಂಚಾರ 28 ರಿಂದ 30 ರವರೆಗೂ ಬಂದ್ ಆಗಲಿದೆ. ಆದರೆ ಇಂದಿರಾನಗರ ಟು ಬೈಯಪ್ಪನಹಳ್ಳಿ ಮೆಟ್ರೋ ಹಾಗೂ ಮೈಸೂರ್ ರಸ್ತೆಯಿಂದ ಎಂಜಿ ರಸ್ತೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.

    ಕೆಲವು ದಿನಗಳ ಹಿಂದೆ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿತ್ತು. ಹೀಗಾಗಿ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೋರ್ಟ್ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

    ಬಿಎಂಆರ್ ಸಿಎಲ್ ಸಿಬ್ಬಂದಿ ರಾತ್ರಿಯಿಂದ ಮುಂಜಾನೆವರೆಗೂ ದುರಸ್ಥಿ ಕಾರ್ಯ ಮಾಡಿದ್ದರು. ಪಿಲ್ಲರ್ ಬಿರಕು ಬಿಟ್ಟಿರುವ ಸ್ಥಳದ ಎರಡು ಕಡೆ ರಸ್ತೆ ಬ್ಲಾಕ್ ಮಾಡಿ ಕೆಲಸ ಮಾಡಲಾಗಿತ್ತು. ಬಿರಕು ಕಾಣಿಸಿಕೊಂಡಿರುವ ಪಿಲ್ಲರ್ ಸುತ್ತಲೂ ನಾಲ್ಕು ಸಪೋರ್ಟಿಂಗ್ ಸ್ಟಕ್ಚರ್ ಗಳನ್ನ ಅಳವಡಿಸಲಾಗಿತ್ತು.

    ಪದೇ ಪದೇ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗುವ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಣಿಕರೇ ಗಮನಿಸಿ – ಶನಿವಾರ, ಭಾನುವಾರ ಮೆಟ್ರೋ ಇರುತ್ತೆ

    ಪ್ರಯಾಣಿಕರೇ ಗಮನಿಸಿ – ಶನಿವಾರ, ಭಾನುವಾರ ಮೆಟ್ರೋ ಇರುತ್ತೆ

    ಬೆಂಗಳೂರು: ಮೆಟ್ರೋ ಪಿಲ್ಲರ್ ದುರಸ್ತಿ ಕಾರ್ಯವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದ್ದು, ಶನಿವಾರ ಹಾಗೂ ಭಾನುವಾರ ಮೆಟ್ರೋ ಸಂಚಾರ ಇರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ಸಮೀಪವಿರುವ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಅದರ ದುರಸ್ತಿ ಕಾರ್ಯದ ಉದ್ದೇಶದಿಂದ ಶನಿವಾರ ಹಾಗೂ ಭಾನುವಾರ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಇದನ್ನು ಓದಿ: ಬಿರುಕು ಮೂಡಿದ್ದು ಯಾಕೆ? ಸಮಸ್ಯೆ ಹೇಗೆ ಪರಿಹರಿಸಲಾಗುತ್ತದೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮೆಟ್ರೋ ಎಂಡಿ ಅಜಯ್ ಸೇಠ್

    ವಯಾಡಕ್ಟ್ ಕಾಂಕ್ರಿಟ್ ನಲ್ಲಿ ಬಿರುಕು ದುರಸ್ತಿ ಕಾಮಗಾರಿಗೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ದುರಸ್ತಿ ಕಾರ್ಯವನ್ನು ಮುಂದಿನ ವಾರ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರಿಗೆ ನಾಳೆ ಮೆಟ್ರೋ ಲಭ್ಯವಾಗಲಿದೆ.

    ಸದ್ಯ ಬೈಯ್ಯಪ್ಪನಹಳ್ಳಿಯಿಂದ ಟ್ರಿನಿಟಿಯವರೆಗೆ ರೈಲುಗಳ ಸಂಚಾರಕ್ಕೆ ಏಕಪಥದಲ್ಲಿ ಅನುವು ಮಾಡಿಕೊಡಲಾಗಿದೆ. ಟ್ರಿನಿಟಿ ನಿಲ್ದಾಣದ ಬಳಿ ಸಂಚರಿಸುವ ಸಂದರ್ಭ ರೈಲುಗಳ ವೇಗವನ್ನು 35 ಕಿ.ಮೀ.ಗೆ ಇಳಿಸಲಾಗಿದೆ. ಸಾಮಾನ್ಯವಾಗಿ ಮೆಟ್ರೋ ಪ್ರತಿ ಗಂಟೆಗೆ 45 ಕಿ.ಮೀ. ವೇಗದಲ್ಲಿ ಸಂಚಾರ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ಬೆಂಗಳೂರು: ಟ್ರಿನಿಟಿ ಸರ್ಕಲ್ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಕಾಣಿಸಿಕೊಂಡಿರುವ ಬಿರಕು ದುರಸ್ತಿ ಕಾರ್ಯವನ್ನು ರಾತ್ರಿ ಇಡೀ ಮಾಡಲಾಗಿದೆ.

    ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಬಿಎಂಆರ್‌ಸಿಎಲ್ ಅಧಿಕಾರಿಗಳು ದೆಹಲಿ ಮೆಟ್ರೋ ನಿಗಮದ ಮೊರೆ ಹೋಗಿದ್ದರು. ಅಧಿಕಾರಿಗಳ ಮನವಿಯಂತೆ ದೆಹಲಿ ಮೆಟ್ರೋ ನಿಗಮದ ಇಬ್ಬರು ಎಂಜಿನಿಯರ್‌ಗಳು ಬೆಂಗಳೂರಿಗೆ ಬಂದು ರಾತ್ರಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

    ದೆಹಲಿ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ದುರಸ್ತಿ ವಿಚಾರವಾಗಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಚರ್ಚಿಸಿ ಮುಂಜಾನೆ ಅಷ್ಟರಲ್ಲಿ ದುರಸ್ತಿ ಕೆಲಸ ಮುಗಿಸುವ ವಿಶ್ವಾಸದಲ್ಲಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸದ್ಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ದಿನ ಮೆಟ್ರೋ ಸಂಚಾರ ಸ್ಥಗಿತ!

    ಒಂದು ದಿನ ಮೆಟ್ರೋ ಸಂಚಾರ ಸ್ಥಗಿತ!

    ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿಯಿರುವ ಕಂಬದಲ್ಲಿನ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಒಂದು ದಿನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಮೆಟ್ರೋ ಸಂಚಾರ ಸ್ತಬ್ಧವಾಗುವ ಸಾಧ್ಯತೆಯಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೆಟ್ರೋ ನಿಗಮ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಜಯ್ ಸೇಠ್ ಅವರು, ಗುಣಮಟ್ಟದ ಕೊರತೆಯಿಂದ ಅಥವಾ ಎಂಜಿನಿಯರ್ ತಪ್ಪಿನಿಂದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಹನಿಕೂಮ್ ಕಾಂಕ್ರೀಟ್ (ಮಿಶ್ರಣ)ದಿಂದಾಗಿ ಹೀಗೆ ಆಗುವುದು ಸಾಮಾನ್ಯ. ಹೀಗಾಗಿ ಬೈಯಪ್ಪನಹಳ್ಳಿ ಹಾಗೂ ನಾಯಂಡಹಳ್ಳಿ ಮಾರ್ಗದಲ್ಲಿ ಸ್ವಲ್ಪ ಈ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ದುರಸ್ತಿ ಕೆಲಸ ನಡೆಯುತ್ತಿದೆ. ಒಂದು ದಿನ ಪಿಲ್ಲರ್ ಕಂಬದ ಅಂತರ ಸರಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಬೇಕೋ? ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ. ಒಂದು ವೇಳೆ ಸ್ಥಗಿತ ಮಾಡುವ ಅನಿವಾರ್ಯತೆ ಬಂದರೆ ಈ ಭಾನುವಾರ ಅಥವಾ ಮುಂದಿನ ಭಾನುವಾರ ಮೆಟ್ರೋ ಸಂಚಾರ ಸ್ತಬ್ಧವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

    ಕಂಬಗಳನ್ನು ಮುಖಾಮುಖಿಯಾಗಿ ನಿರ್ಮಾಣ ಮಾಡಿಲ್ಲ. ಮುಂದಿನ ತಿರುವಿನ ಭಾರವನ್ನು ಹೊತ್ತುಕೊಳ್ಳುವ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಈ ಭಾನುವಾರ ಅಥವಾ ಮುಂದಿನ ಭಾನುವಾರ ದುರಸ್ತಿ ಮಾಡಲಿದ್ದೇವೆ. ಜನ ಆತಂಕ ಪಡುವುದು ಬೇಡ. ನಮ್ಮ ಎಂಜಿನಿಯರ್ ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಬೇರೆ ಭಾಗದ ತಜ್ಞರಿಂದಲೂ ಸಲಹೆ ಪಡೆದಿದ್ದೇವೆ ಎಂದು ತಿಳಿಸಿದರು.

    ದುರಸ್ತಿ ಕಾರ್ಯದ ವೇಳೆ ಮೆಟ್ರೋ ಸಂಚಾರ ತೊಂದರೆ ಆಗುತ್ತದೆ. ಹೀಗಾಗಿ ಮೆಜೆಸ್ಟಿಕ್ ಭಾಗದಲ್ಲಿ ಹೆಚ್ಚಿನ ಮೆಟ್ರೋ ರೈಲು ಸಂಚಾರ ಮಾಡಲಿವೆ. ಆದರೆ ಸದ್ಯದ ಮಟ್ಟಿಗೆ ಸಂಚಾರದಲ್ಲಿ ಕೊಂಚ ಏರು ಪೇರು ಆಗಿದೆ. ಪ್ರಯಾಣಿಕರು ಸಹಕರಿಸಬೇಕು. ಆಂತರಿಕ ತನಿಖೆ ನಡೆಯುತ್ತಿದೆ. ಪಿಲ್ಲರ್ ನಲ್ಲಿ ಯಾವುದೇ ದೋಷವಿಲ್ಲ ಎಂದು ಮಾಹಿತಿ ನೀಡಿದರು.

    ಮೆಟ್ರೋ ಗುಣಮಟ್ಟದಲ್ಲಿ ರಾಜಿಯಾಗಲ್ಲ. ಲೋಡ್ ಹೆಚ್ಚಳದಿಂದ ಪಿಲ್ಲರ್ ನಲ್ಲಿ ಬಿರುಕು ಉಂಟಾಗಿಲ್ಲ. ಕಾಂಕ್ರೀಟ್ ಮಿಶ್ರಣದ ತೊಂದರೆಯಿಂದ ಈ ರೀತಿ ಆಗಿರಬಹುದು ಎಂದು ಸ್ಪಷ್ಟನೆ ನೀಡಿದರು.

    https://youtu.be/KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್

    ರಾತ್ರಿ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಬೆಂಗಳೂರು: ತಡರಾತ್ರಿವರೆಗೆ ಕೆಲಸ ಮುಗಿಸಿ ಮನೆಗೆ ತೆರಳುವ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್. ಏಕೆಂದರೆ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು ಸಂಚಾರವನ್ನು 12 ಗಂಟೆಯವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್‌ಸಿಎಲ್) ಚಿಂತನೆ ನಡೆಸಿದೆ.

    ರಾತ್ರಿ ವೇಳೆ ಹೆಚ್ಚು ಹಣ ತೆತ್ತು ಆಟೋದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಒಂದಿಷ್ಟು ನಿರಾಳವಾಗಲಿದ್ದಾರೆ. ಬಸ್ ಕಾಯುವ ಬದಲು ಮೆಟ್ರೋ ರೈಲು ಇದ್ದರೆ ಅನುಕೂಲ ಎನ್ನುವವರಿಗೆ ಇದು ಖುಷಿ ವಿಚಾರವಾಗಿದೆ.

    ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳಿಯುತ್ತಿದೆ. ಇತ್ತ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಟ್ರೋ ರೈಲು ಮೊರೆ ಹೋಗಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ, ಆರು ಬೋಗಿಗಳ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ 1,800 ಜನ ಒಂದೇ ಬಾರಿಗೆ ಪ್ರಯಾಣಿಸಬಹುದಾಗಿದೆ.

    ಅದಷ್ಟು ಬೇಗ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು 12 ಗಂಟೆಗೆ ವಿಸ್ತರಿಸಬೇಕು ಎಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv