Tag: Blue Whale Game

  • ಬ್ಲೂವೇಲ್, ಕಿಕಿ ಆಯ್ತು, ಲಗ್ಗೆ ಇಟ್ಟಿದೆ ಮೋಮೋ ಚಾಲೆಂಜ್

    ಬ್ಲೂವೇಲ್, ಕಿಕಿ ಆಯ್ತು, ಲಗ್ಗೆ ಇಟ್ಟಿದೆ ಮೋಮೋ ಚಾಲೆಂಜ್

    ನವದೆಹಲಿ: ಈಗಾಗಲೇ ಬ್ಲೂವೇಲ್ ಚಾಲೆಂಜ್ ಜಗತ್ತಿನಾದ್ಯಂತ ಅವಾಂತರ ಸೃಷ್ಟಿಸಿದ್ದು, ಅನೇಕರನ್ನು ಬಲಿ ತೆಗೆದುಕೊಂಡಿತ್ತು. ನಂತರ ಕಿಕಿ ಚಾಲೆಂಚ್ ಬಂತು. ಈಗ ಇವೆರಡನ್ನು ಮೀರಿಸುವಂತಹ ಡೆಡ್ಲಿ ಗೇಮ್ ಮೋಮೋ ಚಾಲೆಂಜ್ ಹುಟ್ಟಿಕೊಂಡಿದೆ.

    ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಮೋ ಚಾಲೆಂಜ್ ವೈರಲ್ ಆಗಿದೆ. ಈ ಮೋಮೋ ಚಾಲೆಂಜ್ ಆಟವನ್ನು ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕವಾಗಿ ಹಾನಿ ಮಾಡುವುದು ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತದೆ.

    ಮೋಮೋ ಚಾಲೆಂಜ್:
    ಈ ಚಾಲೆಂಜ್ ತುಂಬಾ ಅಪಾಯಕಾರಿಯಾಗಿದೆ. ಒಂದು ವೇಳೆ ಈ ಗೇಮ್ ನನ್ನು ಪೂರ್ಣಗೊಳಿಸದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯಪಡುತ್ತಿದ್ದಾರೆ. ಮೋಮೋ ಚಾಲೆಂಜ್ ನಲ್ಲಿ ಸಿಲುಕಿದವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ.

    ಮೋಮೋ ಚಾಲೆಂಜ್ ಆಟ
    * ಮೊದಲು ಅಪರಿಚಿತ ನಂಬರಿನಿಂದ ಎಲ್ಲರಿಗೂ ಒಂದು ಸಂದೇಶವನ್ನು ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಚಾಲೆಂಜ್ ನೀಡುತ್ತದೆ. ಬಳಕೆದಾರರಿಗೆ ಕೆಲವು ಕೆಲಸಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಆ ಕೆಲಸವನ್ನು ಅವರು ಪೂರ್ಣ ಮಾಡದಿದ್ದರೆ, ಬಳಕೆದಾರಿಗೆ ಬೆದರಿಕೆ ಒಡ್ಡುತ್ತದೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತದೆ.

    ಮೋಮೋ ಚಾಲೆಂಜ್ ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತದೆ. ಮೋಮೋ ಚಾಲೆಂಜ್‍ಗಳಿಗೆ ಭಯಾನಕ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಳ್ಳಲಾಗುತ್ತದೆ. ಭಯಬೀಳಿಸುವ ಚಿತ್ರವೊಂದನ್ನು ಮೋಮೋ ಚಾಲೆಂಜ್ ಗೆ ಬಳಕೆ ಮಾಡಲಾಗುತ್ತದೆ. ಜಪಾನ್ ದೇಶದ ಆಯೇಶಾ ಎಂಬ ಕಲಾವಿದೆ ಈ ಫೋಟೋವನ್ನು ಸಿದ್ಧಪಡಿಸಿದ್ದು, ಅವರಿಗೂ ಈ ಮೋಮೋ ಚಾಲೆಂಜ್‍ಗೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಮಕ್ಕಳು, ಯುವಕರೇ ಟಾರ್ಗೆಟ್:
    ಈ ಮೋಮೋ ಚಾಲೆಂಜ್ ಹೆಚ್ಚಾಗಿ ಮಕ್ಕಳನ್ನು ಮತ್ತು ಯುವಜನತೆಯನ್ನು ಸೆಳೆಯುತ್ತದೆ. ಅದರಲ್ಲೂ ಮಕ್ಕಳನ್ನು ಅತಿ ಹೆಚ್ಚಾಗಿ ಸೆಳೆಯುತ್ತದೆ. ಈ ಚಾಲೆಂಜ್ ನಲ್ಲಿ ತೊಡಗಿದರವ ಬಳಿ ಅವರ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡುತ್ತದೆ. ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಈ ಬಗ್ಗೆ ಮುಂಬೈಯ ಆಸ್ಕರ್ ಆಸ್ಪತ್ರೆಯ ಡಾ. ರಾಜೇಶ್ ಕಾಕಡೆ ಅವರು ತಿಳಿಸಿದ್ದಾರೆ.

    ಈ ಚಾಲೆಂಜ್ ಸ್ವೀಕರಿಸಿದ ಮಕ್ಕಳು ಅತಿ ಹೆಚ್ಚಾಗಿ ವಾಟ್ಸಪ್ ಮತ್ತು ಫೇಸ್‍ಬುಕ್ ನಲ್ಲಿ ಸಕ್ರಿಯವಾಗಿರುತ್ತಾರೆ. ಆದ್ದರಿಂದ ಮ್ಕಕಳ ಮೇಲೆ ಪೋಷಕರು ಗಮನಹರಿಸಬೇಕು. ಒಂದು ವೇಳೆ ಅವರು ಅಪರಿಚಿತ ನಂಬರ್ ಜೊತೆ ಮಾತನಾಡುತ್ತಿದ್ದರೆ ಮೊದಲು ಅದನ್ನು ತಡೆಯಬೇಕು. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಅಂದರೆ ಸರಿಯಾಗಿ ಕುಡಿಯುವುದು, ತಿನ್ನುವುದನ್ನು ಬಿಟ್ಟಿದ್ದರೆ, ನಿಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಕಂಡು ಬಂದ ತಕ್ಷಣ ಮನೋವೈದ್ಯರ ಸಹಾಯ ಪಡೆಯಿರಿ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಹೈದರಾಬಾದ್: ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು, ಈ ಗೇಮ್ ಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಸಂಶಯಾಸ್ಪದ ಘಟನೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.

    ನಗರದ 19 ವರ್ಷದ ಯುವಕನೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಟಿ.ವರುಣ್ ಎಂದು ತಿಳಿದು ಬಂದಿದೆ. ವರುಣ್ ನಗರದ ಹೊರವಲಯದ ಗಾಂಡಿಪೇಟ್ ಬಳಿಯ ಮ್ಯಾಪಲ್ ಟೌನ್ ವಿಲ್ಲಾಸ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದನು.

    ಮೃತ ವರುಣ್ ತಂದೆ ಶನಿವಾರ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ವರುಣ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದು, ಎಲ್ಲರೊಂದಿಗೂ ಉತ್ತಮವಾಗಿ ಮಾತನಾಡಿಕೊಂಡು ಸಾಮಾನ್ಯವಾಗಿದ್ದ, ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಪಿ ಉಮೇಂದರ್, ವರುಣ್ ಬ್ಲೂ ವೇಲ್ ಗೇಮ್ ಚಾಲೆಂಜ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅನುಮಾನ ವ್ಯಕ್ತ ಪಡಿಸಿದ್ದು, ಆತ ಬಳಕೆ ಮಾಡುತ್ತಿದ್ದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಹಿಂದೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬ್ಲೂ ವೇಲ್ ಗೇಮ್ ಕುರಿತು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಪೋಷಕರು ಹಾಗೂ ಶಾಲೆಗಳಲ್ಲಿ ಮನವಿ ಮಾಡಿದ್ದರು.

  • ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

    ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

    ನವದೆಹಲಿ: ಮಕ್ಕಳ ಆತ್ಮಹತ್ಯೆಗೆ ಪ್ರೇರಣೆ ನೀಡುವ `ಸಾವಿನ ಗೇಮ್’ ಎಂದೇ ಕುಖ್ಯಾತಿ ಹೊಂದಿರುವ ಬ್ಲೂವೇಲ್ ಚಾಲೆಂಜ್ ಆಟದ ಎಲ್ಲಾ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಸಮಾಜಿಕ ಜಾಲತಾಣ ಹಾಗೂ ಸಂಪರ್ಕ ತಾಣಗಳಿಗೆ ಸೂಚನೆ ನೀಡಿದೆ.

    ಮಕ್ಕಳು ಅಂತರ್ಜಾಲದಲ್ಲಿ ಬ್ಲೂವೇಲ್ ಗೇಮ್ ಆಡುವ ಮೂಲಕ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ. ಹೀಗಾಗಿ ಕೂಡಲೇ ಅದರ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಗೂಗಲ್, ಫೇಸ್‍ಬುಕ್, ವಾಟ್ಸಾಪ್, ಇನ್‍ಸ್ಟಾಗ್ರಾಂ, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶಿಸಿದೆ.

    ಏನಿದು ಬ್ಲೂವೇಲ್ ಗೇಮ್?: ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್‍ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

    ಬ್ಲೂ ವೇಲ್ ಗೇಮ್  ಹೆಸರಲ್ಲಿ ಅಥವಾ ಬೇರೆ ಹೆಸರಲ್ಲಿ ಅದೇ ರೀತಿಯಾಗಿರುವ ಗೇಮ್‍ಗಳ ಲಿಂಕ್‍ಗಳನ್ನು ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದೆ.

    ಇದನ್ನೂ ಓದಿ: ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ಈ ರೀತಿಯ ಗೇಮ್‍ಗಳು ಇಂಟರ್ನೆಟ್‍ನಲ್ಲಿ ಇರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿದೆ. ಈ ಗೇಮ್‍ನ ಅಡ್ಮಿನ್ ಮಕ್ಕಳನ್ನ ಗೇಮ್ ಆಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದಿಸುತ್ತಾರೆ. ಇದರಿಂದ ಮಕ್ಕಳು ಅತ್ಯಂತ ಅಪಾಯಕಾರಿ ಘಟ್ಟವನ್ನ ತಲುಪಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.

    ಈ ಮಾರಣಾಂತಿಕ ಗೇಮ್‍ನ ಎಲ್ಲಾ ಲಿಂಕ್‍ಗಳನ್ನ ತೆಗೆಯಬೇಕು ಹಾಗೂ ಈ ಗೇಮ್‍ನ ಪ್ರತಿಪಾದಕರ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.