Tag: Blue Tick

  • ಟ್ವಿಟ್ಟರ್‌ನ ಬ್ಲೂಟಿಕ್ ನನಗೆ ಬೇಡ – ಕಿತ್ತಾಡಿಕೊಂಡ ಮಸ್ಕ್, ಸ್ಟೀಫನ್ ಕಿಂಗ್

    ಟ್ವಿಟ್ಟರ್‌ನ ಬ್ಲೂಟಿಕ್ ನನಗೆ ಬೇಡ – ಕಿತ್ತಾಡಿಕೊಂಡ ಮಸ್ಕ್, ಸ್ಟೀಫನ್ ಕಿಂಗ್

    ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ (Twitter) ಸಿಇಒ ಎಲೋನ್ ಮಸ್ಕ್ (Elon Musk) ಕೆಲ ಪ್ರಭಾವಿ ವ್ಯಕ್ತಿಗಳಿಗೆ ಟ್ವಿಟ್ಟರ್ ಖಾತೆಗಳಲ್ಲಿ ಬ್ಲೂ ಟಿಕ್‌ಗಳನ್ನು (Blue Tick) ಪಡೆಯಲು ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ನೀಲಿ ಟಿಕ್ ನನಗೆ ಬೇಡ. ಬದಲಿಗೆ ಅದಕ್ಕೆ ವ್ಯಯಿಸಲಾಗುವ ಹಣವನ್ನು ಯುದ್ಧಪೀಡಿತ ಉಕ್ರೇನ್‌ಗೆ (Ukraine) ಸಹಾಯ ಮಾಡಲು ದೇಣಿಗೆ ನೀಡಿ ಎಂದು ಅಮೆರಿಕದ ಜನಪ್ರಿಯ ಲೇಖಕ ಸ್ಟೀಫನ್ ಕಿಂಗ್  (Stephen King) ಕಟುವಾಗಿಯೇ ಮಸ್ಕ್‌ಗೆ ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಲು ಪಾವತಿ ಮಾಡುವಂತಹ ಚಂದಾದಾರಿಕೆಯನ್ನು ಹೊರತಂದಿತ್ತು. ಕಳೆದ ವಾರ ಸೆಲೆಬ್ರಿಟಿ, ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಪಾವತಿ ಮಾಡದೇ ಹೋದ ಎಲ್ಲಾ ಬಳಕೆದಾರರ ಖಾತೆಗಳಲ್ಲಿ ನಿಲಿ ಟಿಕ್ ಮಾರ್ಕ್ ಮಾಯವಾಗಿತ್ತು. ಆದರೆ ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ನೀಲಿ ಟಿಕ್ ಮಾರ್ಕ್‌ಗಳು ಮತ್ತೆ ಗೋಚರಿಸತೊಡಗಿವೆ. ಈ ಪೈಕಿ ಹೆಚ್ಚಿನವರು ತಮ್ಮ ಪರಿಶೀಲಿಸಿದ ಖಾತೆಗಾಗಿ ಯಾವುದೇ ರೀತಿಯಲ್ಲಿ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿರುವ ಪ್ರಭಾವಿ ವ್ಯಕ್ತಿಗಳ ಪೈಕಿ ಸ್ಟೀಫನ್ ಕಿಂಗ್ ಕೂಡಾ ಒಬ್ಬರು. ತಾವು ಟ್ವಿಟ್ಟರ್‌ನ ನೀಲಿ ಟಿಕ್‌ಗೆ ಚಂದಾದಾರರಾಗಿಲ್ಲವಾದರೂ ತಮ್ಮ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿದೆ ಎಂದು ಕಿಂಗ್ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, “ನಿಮಗೆ ಸ್ವಾಗತ, ನಿಮ್ಮ ಪರಿಶೀಲಿಸಿ ಖಾತೆಗಾಗಿ ಸ್ವತಃ ತಾವೇ ಪಾವತಿಸಿರುವುದಾಗಿ” ತಿಳಿಸಿದ್ದಾರೆ. ಈ ಬಳಿಕ ಸ್ಟೀಫನ್ ಕಿಂಗ್ ಹಾಗೂ ಮಸ್ಕ್ ನಡುವೆ ವಾಗ್ಯುದ್ಧ ಪ್ರಾರಂಭವಾಗಿದೆ.

    ಬಳಿಕ ಟ್ವೀಟ್ ಮಾಡಿರುವ ಸ್ಟೀಫನ್ ಕಿಂಗ್, “ನನಗೆ ಬ್ಲೂ ಟಿಕ್‌ನ ಅಗತ್ಯವಿರಲಿಲ್ಲ. ಇದಕ್ಕೆ ವ್ಯಯಿಸಲಾಗಿರುವ ಹಣವನ್ನು ಉಕ್ರೇನ್‌ಗೆ ದೇಣಿಗೆ ನೀಡಬಹುದಿತ್ತು. ಬ್ಲೂಟಿಕ್ ಚಂದದಾರಿಕೆ ಹಣ ಕೇವಲ 8 ಇದೆ. ಆದರೆ ಮಸ್ಕ್ ಇನ್ನೂ ಸ್ವಲ್ಪ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಬಹುದು ಎಂದು ಸಲಹೆ ನೀಡಿದ್ದಾರೆ.

    ಈ ವೇಳೆ ಮಸ್ಕ್ ತಾವು ಉಕ್ರೇನ್‌ಗೆ ಈ ಹಿಂದೆಯೇ ನೀಡಿದ್ದ ಸಹಾಯದ ಬಗ್ಗೆ ತಿಳಿಸಿದ್ದಾರೆ. ನಾನು ಈಗಾಗಲೇ ಉಕ್ರೇನ್‌ಗೆ 100 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದೇನೆ. ಆದರೆ ನೀವು ಇಲ್ಲಿಯವರೆಗೆ ಎಷ್ಟು ದೇಣಿಗೆ ನೀಡಿದ್ದೀರಿ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಸ್ಟೀಫನ್ ಕಿಂಗ್‌ಗೆ ಸವಾಲೆಸೆದಿದ್ದಾರೆ. ಇದನ್ನೂ ಓದಿ: Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?

    ಮಸ್ಕ್ನ ಸ್ಪೇಸ್‌ಎಕ್ಸ್ ಯುದ್ಧ ಪೀಡಿತ ದೇಶವಾದ ಉಕ್ರೇನ್‌ನಲ್ಲಿ ಟರ್ಮಿನಲ್, ಹೊಸ ಉಪಗ್ರಹಗಳು, ಉಪಗ್ರಹ ಉಡಾವಣೆ ಮತ್ತು ಉಪಗ್ರಹ ನಿರ್ವಹಣೆಗಾಗಿ ಪಾವತಿಸುತ್ತಿದೆ. ಉಕ್ರೇನ್‌ನ ಉಪ ಪ್ರಧಾನ ಮಂತ್ರಿ ಮೈಖೈಲೊ ಫೆಡೋರೊವ್ ಅವರು ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್‌ನ ಕೆಲಸವನ್ನು ದೇಶದಲ್ಲಿ ಮುಂದುವರೆಸಿದ್ದಕ್ಕಾಗಿ ಮಸ್ಕ್‌ಗೆ ಧನ್ಯವಾದ ಅರ್ಪಿಸಿದ ಟ್ವೀಟ್ ಅನ್ನು ಸಹ ಮಸ್ಕ್ ಉಲ್ಲೇಖಿಸಿದ್ದಾರೆ.

    ಇತ್ತೀಚೆಗೆ ಪಾವತಿ ಮಾಡದೇ ಹೋದ ಪ್ರಭಾವಿ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಬ್ಲೂ ಟಿಕ್ ಅನ್ನು ಕಳೆದುಕೊಂಡಿದ್ದರು. ಇದಾದ ಕೇವಲ 3 ದಿನಗಳಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ಮತ್ತೆ ಬ್ಲೂ ಟಿಕ್ ಕಾಣಿಸಿಕೊಳ್ಳಲಾಗುತ್ತಿದೆ. ಕೆಲ ಪ್ರಭಾವಿ ವ್ಯಕ್ತಿಗಳ ಪರಿಶೀಲಿಸಿದ ಖಾತೆಗಳಿಗಾಗಿ ಮಸ್ಕ್ ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು. ಇದಾದ ಬಳಿಕ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಟ್ವಿಟ್ಟರ್ ಬಳಕೆದಾರರು ಉಚಿತವಾಗಿ ಬ್ಲೂ ಟಿಕ್ ಅನ್ನು ಪಡೆಯಬಹುದು ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

  • Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?

    Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?

    – ಪಾವತಿ ಮಾಡದೆ ನಿಧನರಾದ ಹೆಸರಾಂತ ವ್ಯಕ್ತಿಗಳ ಖಾತೆಯಲ್ಲೂ ಬ್ಲೂ ಟಿಕ್

    ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಇತ್ತೀಚೆಗೆ ಬಳಕೆದಾರರ ಖಾತೆಗೆ ಬ್ಲೂ ಟಿಕ್ (Blue Tick) ಬೇಕೆಂದರೆ ಪಾವತಿ ಮಾಡುವಂತಹ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಇದೀಗ ಟ್ವಿಟ್ಟರ್ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರಿಗೆ ಬ್ಲೂ ಟಿಕ್ ಅನ್ನು ಮರಳಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಕೆಲ ದಿನಗಳ ಹಿಂದೆ ಟ್ವಿಟ್ಟರ್ ಬಹುತೇಕ ಎಲ್ಲಾ ಖಾತೆಗಳಿಂದ ನೀಲಿ ಟಿಕ್ ಮಾರ್ಕ್ ಅನ್ನು ತೆಗೆದುಹಾಕಿತ್ತು. ಕೇವಲ ಪಾವತಿ ಮಾಡಿದ ಬಳಕೆದಾರರಿಗೆ ಮಾತ್ರವೇ ನೀಲಿ ಟಿಕ್ ಅನ್ನು ನೀಡುವಂತಹ ಚಂದಾದಾರಿಕೆಯನ್ನು ಜಾರಿಗೆ ತಂದಿತ್ತು. ಇದರಿಂದ ಪಾವತಿ ಮಾಡದೇ ಹೋದ ಅನೇಕ ಸೆಲೆಬ್ರಿಟಿಗಳು, ಹೆಸರಾಂತ ವ್ಯಕ್ತಿಗಳು ಕೂಡಾ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಆದರೀಗ 10 ಲಕ್ಷಕ್ಕೂ ಅಧಿಕ ಫಾಲವರ್ಸ್ ಇರುವ ಬಳಕೆದಾರರು ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿದ್ದಾರೆ ಎನ್ನಲಾಗಿದೆ.

    ಸೆಲೆಬ್ರಿಟಿಗಳು ಹಾಗೂ ಹೆಸರಾಂತ ವ್ಯಕ್ತಿಗಳು ಇತ್ತೀಚೆಗೆ ಟ್ವಿಟ್ಟರ್‌ಗೆ ಪಾವತಿ ಮಾಡದೇ ಹೋಗಿದ್ದಕ್ಕಾಗಿ ಏಪ್ರಿಲ್ 20ರಂದು ತಮ್ಮ ಖಾತೆಯ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಬಾಲಿವುಡ್ ನಟರಾದ ಆಲಿಯಾ ಭಟ್, ಶಾರೂಖ್ ಖಾನ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಿಲಿಯನೇರ್ ಬಿಲ್ ಗೇಟ್ಸ್ ಸೇರಿದಂತೆ ಹಲವರು ಈ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಇದೀಗ ಅವರೆಲ್ಲರ ಖಾತೆಗಳಲ್ಲೂ ನೀಲಿ ಟಿಕ್ ಮತ್ತೆ ಗೋಚರವಾಗಿದೆ. ಆದರೆ ಇವರೆಲ್ಲರೂ ತಮ್ಮ ಖಾತೆಯನ್ನು ಅಧಿಕೃತವಾಗಿ ಪರಿಶೀಲಿಸಲು ಪಾವತಿ ಮಾಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಇಲ್ಲಿ ವಿಚಿತ್ರವೆನಿಸಿರುವ ವಿಚಾರವೆಂದರೆ ನೀಲಿ ಟಿಕ್‌ಗೆ ಪಾವತಿ ಮಾಡುವ ಫೀಚರ್ ಬರುವುದಕ್ಕೂ ಮೊದಲೇ ನಿಧನರಾಗಿರುವ ಅನೇಕ ಹೆಸರಾಂತ ವ್ಯಕ್ತಿಗಳ ಖಾತೆಗಳಲ್ಲಿ ಈಗ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತಿದೆ. ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಟ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್, ರಿಷಿ ಕಪೂರ್, ಗಾಯಕ ಮೈಕಲ್ ಜಾಕ್ಸನ್, ಕ್ರಿಕೆಟಿಗ ಶೇನ್ ವಾರ್ನ್ ಸೇರಿದಂತೆ ಅನೇಕರ ಖಾತೆಗಳಲ್ಲೂ ಈಗ ನೀಲಿ ಟಿಕ್ ಕಾಣಿಸುತ್ತಿದೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ಇದೀಗ ಗಮನಿಸಬೇಕಾಗಿರುವ ವಿಚಾರವೆಂದರೆ 65 ಲಕ್ಷ ಅನುಯಾಯಿಗಳನ್ನು ಹೊಂದಿರುವ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಅವರ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿಲ್ಲ. ಈ ಹಿಂದೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ (Elon Musk) ಕೆಲ ಬಳಕೆದಾರರ ಖಾತೆಗಳಿಗೆ ಬ್ಲೂ ಟಿಕ್ ಅನ್ನು ಇರಿಸಿಕೊಳ್ಳಲು ತಾವೇ ಪಾವತಿ ಮಾಡುವುದಾಗಿ ಹೇಳಿದ್ದರು. ಅವರಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಲೆಬ್ರಾನ್ ಜೇಮ್ಸ್, ಕೆನಡಾದ ನಟ ವಿಲಿಯಂ ಶಾಟ್ನರ್, ಲೇಖಕ ಸ್ಟೀಫನ್ ಕಿಂಗ್ ಸೇರಿದ್ದಾರೆ.

    ಇದೀಗ 10 ಲಕ್ಷಕ್ಕೂ ಅಧಿಕ ಅನುಯಾಯಿಗಳಿರುವ ಬಳಕೆದಾರರಿಗೆ ಟ್ವಿಟ್ಟರ್ ಬ್ಲೂ ಟಿಕ್ ಅನ್ನು ಉಚಿತವಾಗಿ ನೀಡುತ್ತಿದೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಟ್ವಿಟ್ಟರ್ ಸ್ಪಷ್ಟನೆ ನೀಡಿಲ್ಲ. ಉಚಿತವಾಗಿ ಬ್ಲೂ ಟಿಕ್ ಅನ್ನು ಪಡೆಯಲು ಯಾವೆಲ್ಲಾ ಮಾನದಂಡಗಳಿವೆ ಎಂಬುದೂ ಅಸ್ಪಷ್ಟವಾಗಿದೆ. ಇದನ್ನೂ ಓದಿ: ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

  • ಟ್ವಿಟರ್ ಬ್ಲೂ ಟಿಕ್ ಮಾಯ: ಸಿನಿಮಾ ಸಿಲೆಬ್ರಿಟಿಗಳು ವಿಚಿತ್ರ ಪ್ರತಿಕ್ರಿಯೆ

    ಟ್ವಿಟರ್ ಬ್ಲೂ ಟಿಕ್ ಮಾಯ: ಸಿನಿಮಾ ಸಿಲೆಬ್ರಿಟಿಗಳು ವಿಚಿತ್ರ ಪ್ರತಿಕ್ರಿಯೆ

    ಟ್ವಿಟರ್ (Twitter) ಸಂಸ್ಥೆಯು ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂಟಿಕ್ (Blue Tick) ಅನ್ನು ತೆಗೆದುಹಾಕಿದೆ. ಈ ಹಿಂದೆಯೇ ಸಂಸ್ಥೆಯು ಚೆಕ್ ಮಾರ್ಕ್ ಕುರಿತು ಪ್ರಕಟನೆಯನ್ನು ನೀಡಿತ್ತು. ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ಮೊದಲಿನಂತೆಯೇ ಉಳಿಯುತ್ತದೆ ಎನ್ನುವ ಸಂದೇಶವನ್ನು ಹಲವಾರಿ ಬಾರಿ ನೀಡಿತ್ತು. ಕೆಲವರು ಹಣ ಪಾವತಿಸಿ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಗೊಂದಲಕ್ಕೆ ಬಿದ್ದಿದ್ದಾರೆ.

    ಹಣಪಾವತಿ ಮಾಡದ ಬಹುತೇಕ ಸಿಲೆಬ್ರಿಟಿಗಳ (Celebrity) ಬ್ಲೂಟಿಕ್ ನಿನ್ನೆಯೇ ಮಾಯವಾಗಿದೆ. ಸ್ಯಾಂಡಲ್ ವುಡ್ (Sandalwood) ನ ಯಶ್, ಸುದೀಪ್, ರಮ್ಯಾ ಸೇರಿದಂತೆ ಬಹುತೇಕ ನಟ ನಟಿಯರ ನೀಲಿ ಚಿಹ್ನೆ ಮಾಯವಾಗಿದೆ. ಸತೀಶ್ ನೀನಾಸಂ ಸೇರಿದಂತೆ ಬೆರಳೆಣಿಕೆಯ ಕಲಾವಿದರ ಬ್ಲೂಟಿಕ್ ಉಳಿದುಕೊಂಡಿದೆ. ಕಾರಣ ಅವರು ಸಬ್ ಸ್ಕ್ರೈಬ್ ಮಾಡಿಸಿಕೊಂಡು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ:ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

    ಕೆಲವರು ಬ್ಲೂಟಿಕ್ ಕಳೆದುಕೊಂಡು ಹೊಂದಲವಾಗಿದ್ದಾರೆ. ನಟಿ ಖುಷ್ಬು ಸುಂದರ್ ‘ನನ್ನ ಖಾತೆ ಸಕ್ರೀಯವಾಗಿದ್ದರೂ ಬ್ಲೂಟಿಕ್ ಯಾಕೆ ಹೋಗಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ವಿಭಿನ್ನವಾಗಿಯೇ ಪ್ರತಿಕ್ರಿಯೆ ನೀಡಿದ್ದು, ‘ಬೈ ಬೈ ಬ್ಲೂಟಿಕ್’  ಎಂದು ಟ್ವೀಟ್ ಮಾಡಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಖಾತೆಯ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಕಮಲ್ ಹಾಸನ್, ಜ್ಯೂನಿಯರ್ ಎನ್.ಟಿ.ಆರ್ ಅವರ ಖಾತೆಗಳು ಬ್ಲೂಟಿಕ್ ನಲ್ಲಿ ಮಿರಿಮಿರಿ ಮಿಂಚುತ್ತಿವೆ.

    ಬ್ಲೂಟಿಕ್ ಉಳಿಸಿಕೊಳ್ಳಬೇಕಾದರೆ, ಇಂತಿಷ್ಟು ಹಣವನ್ನು ಸಂದಾಯ ಮಾಡಿ ಸಬ್ ಸ್ಕ್ರೈಬ್ ಆಗಬೇಕು ಎನ್ನುವುದು ಎಲೋನ್ ಮಸ್ಕ್ ಅವರ ಉದ್ದೇಶವಾಗಿತ್ತು. ಉಚಿತವಾಗಿ ಈ ಸೇವೆಯನ್ನು ಕೊಡುವುದಿಲ್ಲ ಎಂದು ಅವರು ಈ ಹಿಂದೆಯೇ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ.

  • ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ

    ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ

    ವಾಷಿಂಗ್ಟನ್/ನವದೆಹಲಿ: ಕಳೆದ ವರ್ಷ ಟ್ವಿಟ್ಟರ್ (Twitter) ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಸ್ವಾಧೀನಪಡಿಸಿಕೊಂಡ ಬಳಿಕ ಜನರು ತಮ್ಮ ಖಾತೆಗಳಲ್ಲಿ ಬ್ಲೂ ಟಿಕ್ ಮಾರ್ಕ್ (Blue Tick) ಪಡೆಯಲು ಇನ್ನು ಮುಂದೆ ಪಾವತಿಸಬೇಕಾಗುತ್ತದೆ ಎಂದು ಘೋಷಿಸಿದ್ದರು. ಅದರಂತೆ ಹಲವು ದೇಶಗಳಲ್ಲಿ ಈ ನಿಯಮ ಪ್ರಾರಂಭವಾಗಿತ್ತು. ಇದೀಗ ಭಾರತದಕ್ಕೂ (India) ಟ್ವಿಟ್ಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾರ್ಕ್ ಪಡೆಯಲು ಪಾವತಿ ಮಾಡುವ ನಿಯಮ ಬಂದಿದೆ.

    ಇದೀಗ ಭಾರತದಲ್ಲಿ ಬ್ಲೂ ಟಿಕ್ ಮಾರ್ಕ್ ಅನ್ನು ಐಒಎಸ್ ಹಾಗೂ ಆಂಡ್ರಾಯ್ಡ್ ಸಾಧನಗಳನ್ನು ಬಳಸುವವರು ಖರೀದಿ ಮಾಡಬಹುದು ಮಾತ್ರವಲ್ಲದೇ ಟ್ವಿಟ್ಟರ್‌ನ ವೆಬ್‌ಸೈಟ್ ಅನ್ನು ಬಳಸುವವರು ಕೂಡಾ ಇದನ್ನು ಖರೀದಿಸಬಹುದಾಗಿದೆ. ಭಾರತದಲ್ಲಿ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರು ಬ್ಲೂ ಟಿಕ್ ಅನ್ನು ಖರೀದಿಸಲು ಮಾಸಿಕವಾಗಿ 900 ರೂ.ಯನ್ನು ನಿಗದಿಪಡಿಸಲಾಗಿದೆ. ವೆಬ್‌ಸೈಟ್ ಬಳಕೆದಾರರು ಇದನ್ನು ಕೇವಲ 650 ರೂ.ಗೆ ಖರೀದಿ ಮಾಡಬಹುದು.

     

    ಬಳಕೆದಾದದರು ಟ್ವಿಟ್ಟರ್ ಬ್ಲೂ ಟಿಕ್‌ನ ವಾರ್ಷಿಕ ಚಂದಾದಾರಿಕೆ ಖರೀದಿಸಲು ಬಯಸಿದರೆ 6,800 ರೂ. ವೆಚ್ಚವಾಗುತ್ತದೆ. ಇದು ತಿಂಗಳಿಗೆ ಅಂದಾಜು 566 ರೂ. ಆಗುತ್ತದೆ. ಆದರೆ ಈ ಪ್ಲಾನ್ ಕೇವಲ ವೆಬ್‌ಸೈಟ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದ್ದು, ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಾಗಿಲ್ಲ. ಇದನ್ನೂ ಓದಿ: 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    ಈ ಹಿಂದೆ ಟ್ವಿಟ್ಟರ್‌ನಲ್ಲಿ ನೀಲಿ ಟಿಕ್ ಅನ್ನು ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕ ವ್ಯಕ್ತಿಗಳ ಅಧಿಕೃತ ಖಾತೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದೀಗ ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಬೂದು ಬಣ್ಣದ ಟಿಕ್ ಮಾರ್ಕ್ ಹಾಗೂ ಪ್ರಸಿದ್ಧ ಕಂಪನಿಗಳ ಖಾತೆಗಳಿಗೆ ಹಳದಿ ಬಣ್ಣದ ಟಿಕ್ ಮಾರ್ಕ್ ನೀಡಲಾಗಿದೆ. ಇದೀಗ ನೀಲಿ ಬಣ್ಣದ ಟಿಕ್ ಮಾರ್ಕ್ ಪಡೆಯಲು ಶುಲ್ಕ ಪಾವತಿಸುವ ನಿಯಮ ತಂದಿರುವುದರಿಂದ ಸಾಮಾನ್ಯ ವ್ಯಕ್ತಿಗಳು ಕೂಡಾ ಹಣವನ್ನು ಪಾವತಿಸಿ ಇದನ್ನು ಪಡೆಯಬಹುದು. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್

    ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್

    ವಾಷಿಂಗ್ಟನ್: ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆಯೇ ಅದರ ಕಾರ್ಯವೈಖರಿ ಸೇರಿದಂತೆ ಹೆಚ್ಚಿನ ವಿಷಯಗಳು ಬದಲಾಗುತ್ತವೆ ಎಂದು ತಿಳಿಸಲಾಗಿತ್ತು. ಅದರಂತೆಯೇ ಇದೀಗ ಮಸ್ಕ್ ಬ್ಲೂ ಟಿಕ್ (Blue Tick) ಮಾರ್ಕ್ ಹೊಂದಿರುವ ಖಾತೆಗಳಿಗೆ ಪಾವತಿ ಮಾಡುವ ಹೊಸ ಯೋಜನೆಯನ್ನು ದೃಢಪಡಿಸಿದ್ದಾರೆ.

    ಹಲವು ಟೀಕೆಗೆ ಒಳಗಾಗಿಯೂ ಮಸ್ಕ್ ಇದೀಗ ಬಳಕೆದಾರರ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಬೇಕೆಂದರೆ ತಿಂಗಳಿಗೆ 8 ಡಾಲರ್ (ಸುಮಾರು 661 ರೂ.) ಪಾವತಿಸಬೇಕು ಎಂದಿದ್ದಾರೆ. ಒಂದು ವೇಳೆ ಇಲ್ಲಿಯವರೆಗೆ ಬ್ಲೂ ಟಿಕ್ ಹೊಂದಿದ್ದ ಬಳಕೆದಾರರು ಪ್ರತಿ ತಿಂಗಳು ನಿಗದಿತ ಪಾವತಿಯನ್ನು ಮಾಡದೇ ಹೋದಲ್ಲಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಪ್ರಸ್ತುತ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಅಥವಾ ಹೊಂದದೇ ಇರುವ ಬಳಕೆದಾರರ ವ್ಯವಸ್ಥೆ ಮೂರ್ಖತನವಾಗಿದೆ. ಈಗ ಎಲ್ಲಾ ಶಕ್ತಿ ಜನರಿಗೆ! ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ 8 ಡಾಲರ್ ಪಾವತಿಸಿ ಎಂದು ಬರೆದಿದ್ದಾರೆ.

    ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಬಳಕೆದಾರರ ಪರಿಶೀಲಿಸಿದ ಖಾತೆಯಲ್ಲಿ ಕಾಣಿಸಿಕೊಳ್ಳುವ ಬ್ಲೂ ಟಿಕ್‌ಗೆ ತಿಂಗಳಿಗೆ 19.99 ಡಾಲರ್ (ಸುಮಾರು 1,600 ರೂ.) ಪಾವತಿಸಬೇಕಾಗಬಹುದು ಎಂದು ವರದಿಯಾಗಿತ್ತು. ಈ ವರದಿಗೆ ಇದೀಗ ಮಸ್ಕ್ ಉತ್ತರಿಸಿ, ತಿಂಗಳಿಗೆ 8 ಡಾಲರ್ ಅನ್ನು ನಿಗದಿಪಡಿಸಿದ್ದಾರೆ. ಇದನ್ನೂ ಓದಿ: ಪರಾಗ್ ಸ್ಥಾನಕ್ಕೆ ಶ್ರೀರಾಮ್ – ಮತ್ತೆ ಭಾರತೀಯನಿಗೆ ಒಲಿಯುತ್ತಾ ಟ್ವಿಟ್ಟರ್ ಪಟ್ಟ?

    ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ:
    ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಆಪ್‌ನಲ್ಲಿ ಮಾತ್ರವೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ತನ್ನ ಉದ್ಯೋಗಿಗಳಿಗೂ (Employees) ಬಿಗಿಯಾದ ನಿಯಮಗಳನ್ನು ತಂದಿರುವುದಾಗಿ ವರದಿಯಾಗಿದೆ. ಟ್ವಿಟ್ಟರ್‌ನ ಕೆಲ ಎಂಜಿನಿಯರುಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ 7 ದಿನವೂ ಕೆಲಸ ಮಾಡಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು

    ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಬಳಿಕ ಆಪ್‌ನಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ (Blue Tick) ಮಾರ್ಕ್ ಬೇಕೆಂದರೆ ಪಾವತಿಸುವ ಹೊಸ ಯೋಜನೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಟ್ವಿಟ್ಟರ್ ಮಸ್ಕ್ ತೆಕ್ಕೆಗೆ ಸೇರುತ್ತಿದ್ದಂತೆ ಅವರು ಬಳಕೆದಾರರಿಗೆ ಆಪ್‌ನ ಹೊಸ ಬದಲಾವಣೆಗಳ ಬಗ್ಗೆ ಕೆಲ ಸುಳಿವುಗಳನ್ನು ನೀಡಿದ್ದಾರೆ. ಅವರು ಟ್ವಿಟ್ಟರ್ ಪರಿಶೀಲನೆ ಪ್ರತಿಕ್ರಿಯೆಯನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದಿದ್ದಾರೆ. ಇದರ ಪ್ರಕಾರ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಮಾರ್ಕ್ ಅಥವಾ ಪರಿಶೀಲಿಸಿದ ಪ್ರೊಫೈಲ್‌ಗಳಿಗೆ ಪಾವತಿಸುವ ನಿಯಮವನ್ನು ತರುವ ಸಾಧ್ಯತೆಯಿದೆ.

    Elon Musk twitter 1

    ವರದಿಗಳ ಪ್ರಕಾರ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಟ್ವಿಟ್ಟರ್ ಬಳಕೆದಾರರು ಇನ್ನು ತಿಂಗಳಿಗೆ 4.99 ಡಾಲರ್ (411 ರೂ.) ಪಾವತಿಸಬೇಕಾಗಬಹುದು. ಒಂದು ವೇಳೆ ಪಾವತಿಸದೇ ಹೋದಲ್ಲಿ ಆ ಬಳಕೆದಾರರು ಬ್ಲೂ ಟಿಕ್ ಮಾರ್ಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮಸ್ಕ್ ಪಾಲಾಗುತ್ತಿದ್ದಂತೆ ಪರ್ಯಾಯ ಆಪ್ ರಚನೆಯಲ್ಲಿ ತೊಡಗಿದ ಟ್ವಿಟ್ಟರ್ ಸಂಸ್ಥಾಪಕ

    _Elon Musk

    ಸದ್ಯ ಕಂಪನಿ ಇನ್ನೂ ಈ ಯೋಜನೆಯ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ಒಂದು ವೇಳೆ ಈ ಪಾವತಿಯ ವಿಧಾನವನ್ನು ಜಾರಿಗೊಳಿಸಿದ್ದಲ್ಲಿ ಸಾಮಾನ್ಯ ಬಳಕೆದಾರರು ಕೂಡಾ ಸುಲಭವಾಗಿ ಬ್ಲೂ ಟಿಕ್ ಮಾರ್ಕ್ ಅನ್ನು ಪಡೆಯಲು ಸಾಧ್ಯವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್‌

    Live Tv
    [brid partner=56869869 player=32851 video=960834 autoplay=true]