Tag: Blood Donate

  • ಕಷ್ಟದಲ್ಲಿರುವವರನ್ನು ಮನಸ್ಸಲ್ಲಿಟ್ಟುಕೊಂಡು ರಕ್ತದಾನ ಮಾಡಿ: ವಿಜಯ್ ರಾಘವೇಂದ್ರ

    ಕಷ್ಟದಲ್ಲಿರುವವರನ್ನು ಮನಸ್ಸಲ್ಲಿಟ್ಟುಕೊಂಡು ರಕ್ತದಾನ ಮಾಡಿ: ವಿಜಯ್ ರಾಘವೇಂದ್ರ

    ಬೆಂಗಳೂರು : ಕೊರೊನಾ ಸಂಕಷ್ಟ ಸಮಯದಲ್ಲಿ ರಕ್ತದ ಕೊರತೆ ಉಂಟಾಗಿದ್ದ ಪರಿಣಾಮವನ್ನು ಅರಿತು ಇಂದು ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಮಾಡುವುದು ಬ್ರಹ್ಮ ವಿದ್ಯೆಯಲ್ಲ, ಕಷ್ಟದಲ್ಲಿರುವವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಕ್ತದಾನ ಮಾಡಿ ಎಂದು ನಟ ವಿಜಯ್ ರಾಘವೇಂದ್ರ ಮನವಿ ಮಾಡಿಕೊಂಡರು.

    ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರೋಬ್ಬರಿ 560 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಗಿದೆ.

    ಪ್ರತಿವರ್ಷ ಶೇಷಾದ್ರಿಪುರಂ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಸಲಾಗುತಿತ್ತು. ಈ ವರ್ಷದ ರಕ್ತದಾನ ಶಿಬಿರ ಇಂದು ನಡೆದಿದೆ. ನಟ ವಿಜಯ್ ರಾಘವೇಂದ್ರ ರಕ್ತದಾನ ಶಿಬಿರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡೋದು ಆರೋಗ್ಯಕರ. ಅಗತ್ಯ ಇರುವವರಿಗೆ ರಕ್ತದಾನ ಸಹಾಯವಾಗಲಿ. ಹೆದರಿಕೆ ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಈ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನವನ್ನು ಮಾಡುವುದರ ಮೂಲಕ ಒಂದೊಳ್ಳೆ ಕೆಲಸಕ್ಕೆ ಸಾಕ್ಷಿಯಾದರು. ಕೊರೊನಾ ನಂತರ ಬೆಂಗಳೂರಿನಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತುಂಬಾ ವಿರಳವಾಗಿತ್ತು. ಇದರಿಂದ ನಗರದಲ್ಲಿ ರಕ್ತದ ಕೊರತೆಯೂ ಸಾಕಷ್ಟು ಕಾಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಲೇಜಿನ ಕ್ಯಾಂಪಸ್ ಮೂಲಕ ರಕ್ತದಾನ ಶಿಬಿರ ಕಾರ್ಯಕ್ರಮಗಳು ಹಲವು ಜೀವಗಳನ್ನು ಉಳಿಸಲಿವೆ.

  • ಕೊರೊನಾ ಸಮಯದಲ್ಲೂ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿದೆ ರಕ್ತದಾನಿಗಳ ತಂಡ

    ಕೊರೊನಾ ಸಮಯದಲ್ಲೂ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿದೆ ರಕ್ತದಾನಿಗಳ ತಂಡ

    – ಕೊರೊನಾ ಸಂದರ್ಭದಲ್ಲಿ ರಕ್ತ ಸಿಗದ್ದನ್ನು ಮನಗಂಡು ಕ್ಯಾಂಪ್ ಆಯೋಜನೆ
    – ರಕ್ತದ ಜೊತೆ ಪ್ಲಾಸ್ಮಾ ಸಹ ಸಂಗ್ರಹ

    ಕಲಬುರಗಿ: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಪರಿಸ್ಥಿತಿ ಅರಿತ ಯುವಕರ ತಂಡ ತಮ್ಮದೇ ಗುಂಪು ಕಟ್ಟಿಕೊಂಡು ರಕ್ತ ಸಂಗ್ರಹಕ್ಕೆ ನಿಂತಿದ್ದು, ಕ್ಯಾಂಪ್ ತೆರೆಯುವ ಮೂಲಕ ರಕ್ತ ಸಂಗ್ರಹಿಸುತ್ತಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿತರಿಗೆ ಸಹಾಯವಾಗಲು ಪ್ಲಾಸ್ಮಾ ಸಹ ಸಂಗ್ರಹಿಸುತ್ತಿದ್ದಾರೆ.

    ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿದ ಬಳಿಕ ಜಿಲ್ಲೆಯಲ್ಲಿ ಹಲವು ರಕ್ತ ದಾನಿಗಳು ತುರ್ತು ಸಮಯದಲ್ಲಿ ರಕ್ತ ದಾನ ಮಾಡಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ತುರ್ತು ಸಮಯಕ್ಕೆ ರಕ್ತ ಸಿಗದೆ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ. ಇದನ್ನು ಅರಿತ ಕಲಬುರಗಿಯ ಶರಣು ಪಪ್ಪಾ ನೇತೃತ್ವದ ಜೀ 99 ಹಾಗೂ ಜೀ 55 ಸದಸ್ಯರ ತಂಡ ಜಿಲ್ಲೆಯ ಹಲವೆಡೆ ಬ್ಲಡ್ ಕ್ಯಾಂಪ್ ಆಯೋಜಿಸಿದೆ. ಈ ಮೂಲಕ ಕೊರೊನಾದಂತಹ ಕಷ್ಟ ಕಾಲದಲ್ಲಿ ಹಣ ನೀಡಿದರೂ ರೋಗಿಗಳಿಗೆ ರಕ್ತ ಸಿಗದ ಸಮಯದಲ್ಲಿ ಅವರ ನೇರವಿಗೆ ನಿಂತಿದೆ. ಅಪಘಾತ, ಡೆಲಿವರಿಯಂತಹ ತುರ್ತು ಸಮಯದಲ್ಲಿ ರಕ್ತದ ಅವಶ್ಯವಿರುವವರ ನೇರವಿಗೆ ಧಾವಿಸಿದ್ದಾರೆ.

    ಸದ್ಯ ಈ ತಂಡದಲ್ಲಿ ರಕ್ತ ದಾನ ಮಾಡಲು 300ಕ್ಕೂ ಅಧಿಕ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗ ನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಿಗೆ ಪ್ಲಾಸ್ಮಾ ಚಿಕಿತ್ಸೆಯ ಅವಶ್ಯವಿದ್ದರೆ ಅಂತಹವರಿಗೆ ಪ್ಲಾಸ್ಮಾ ವ್ಯವಸ್ಥೆಯನ್ನು ಸಹ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಂದ ಪ್ಲಾಸ್ಮಾ ದಾನವಾಗಿ ಪಡೆಯುತ್ತಿದ್ದು, ಈಗಾಗಲೇ ಕಲಬುರಗಿ ಪೊಲೀಸ್ ಪೇದೆ ಜಗದೀಶ್ ಅವರಿಂದ ಪ್ಲಾಸ್ಮಾ ಪಡೆದು, ಮತ್ತೊಬ್ಬರಿಗೆ ನೀಡುವ ಮೂಲಕ ತಂಡ ಒಂದು ಜೀವ ಉಳಿಸಿದೆ.

    ಕೊರೊನಾದಂತಹ ಸಮಯದಲ್ಲಿ ರಕ್ತ ನೀಡಿದರೆ ಸೋಂಕು ಬರುತ್ತೆ ಎಂಬ ಭಯದಲ್ಲಿರುವ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಜೀ 99 ತಂಡದ ಸದಸ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾ ವಾರಿಯರ್ಸ್ ಗಳಂತೆ ಇವರು ಸಹ ಜನರ ಜೀವ ಉಳಿಸಲು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.

  • 500 ಕಿ.ಮೀ ಸಂಚರಿಸಿ ರಕ್ತ ನೀಡಿ ಮಹಿಳೆಯ ಪ್ರಾಣ ಉಳಿಸಿದ

    500 ಕಿ.ಮೀ ಸಂಚರಿಸಿ ರಕ್ತ ನೀಡಿ ಮಹಿಳೆಯ ಪ್ರಾಣ ಉಳಿಸಿದ

    ಭುವನೇಶ್ವರ್: ವ್ಯಕ್ತಿಯೊಬ್ಬರು 500 ಕಿ.ಮೀ ಸಂಚರಿಸಿ ರಕ್ತದಾನ ಮಾಡುವ ಮೂಲಕ ಮಹಿಳೆಯ ಪ್ರಾಣ ಉಳಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.

    ಸಬೀತಾ ಬ್ರಹ್ಮಪುರ್ ಎಂಬವರು ಎಂಕೆಸಿಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಬೀತಾ ಮಗುವಿಗೆ ಜನ್ಮ ನೀಡಿದ್ದು, ಅವರ ದೇಹದಲ್ಲಿ ರಕ್ತ ಕಡಿಮೆ ಆಗಿತ್ತು. ಸಬೀತಾ ಅವರದ್ದು ಅಪರೂಪದ ಬಾಂಬೆ ಬ್ಲಡ್ ಗೂಪ್ ಆಗಿದ್ದು, ಇದು ಭಾರತದಲ್ಲಿ ಕೇವಲ ಎರಡೂವರೆ ಲಕ್ಷ ಜನರಿಗೆ ಮಾತ್ರ ಈ ರಕ್ತದ ಗುಂಪು ಇದೆ.

    ಸಿಸೇರಿಯನ್ ಮೂಲಕ ಸಬೀತಾ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಬಳಿಕ ಸಬೀತಾ ದೇಹದಲ್ಲಿ ರಕ್ತ ಕಡಿಮೆ ಆಗಿತ್ತು. ವೈದ್ಯರು ಆ ರಕ್ತದ ಗುಂಪನ್ನು ಹುಡುಕಿದ್ದಾರೆ. ಆದರೆ ಎಲ್ಲಿಯೂ ಸಿಗಲಿಲ್ಲ. ಸಬೀತಾಗೆ ರಕ್ತ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜನರ ಬಳಿ ಸಹಾಯ ಕೇಳಿದ್ದರು.

    ರಕ್ತದಾನ ಮಾಡಿದ ದಿಲೀಪ್‍ಗೆ ಈ ವಿಷಯ ವಾಟ್ಸಾಪ್ ಮೂಲಕ ತಿಳಿಯಿತು. ಆಗ ತಕ್ಷಣ ಅವರು ಭುವನೇಶ್ವರ್ ದಿಂದ 500 ಕಿ.ಮೀ ಸಂಚರಿಸಿ ರಕ್ತದಾನ ಮಾಡಿದ್ದಾರೆ. ದಿಲೀಪ್ ಸರಿಯಾದ ಸಮಯಕ್ಕೆ ರಕ್ತ ನೀಡಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ದಿಲೀಪ್, ನನಗೆ ಜನರಿಗೆ ಸಹಾಯ ಮಾಡುವುದರಿಂದ ಖುಷಿ ಸಿಗುತ್ತದೆ. ನಾನು ಈವರೆಗೂ ನಾಲ್ಕು ಬಾರಿ ರಕ್ತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

  • ಬೇಸಿಗೆಯಲ್ಲಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಸಮಸ್ಯೆ – ಶಿಬಿರ ಆಯೋಜಿಸಿದ ಅಧಿಕಾರಿಗಳು

    ಬೇಸಿಗೆಯಲ್ಲಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಸಮಸ್ಯೆ – ಶಿಬಿರ ಆಯೋಜಿಸಿದ ಅಧಿಕಾರಿಗಳು

    ಹಾವೇರಿ: ಬೇಸಿಗೆಯ ಎರಡು ಮೂರು ತಿಂಗಳು ರಾಜ್ಯದ ನಾನಾ ಭಾಗಗಳಲ್ಲಿ ಜೀವಜಲದ ಸಮಸ್ಯೆ ಜೋರಾಗಿರುರತ್ತದೆ. ಆದರೆ ಈಗ ಬೇಸಿಗೆಯ ಮೂರು ತಿಂಗಳ ಅವಧಿಯಲ್ಲಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಹಾವೇರಿಯ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದಾರೆ.

    ಹಾವೇರಿ ತಾಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಯೋಗಶಾಲೆಯ ತಂತ್ರಜ್ಞಾನರ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾವೈದ್ಯಾಧಿಕಾರಿ ಡಾ.ರಾಘವೇಂದ್ರ ಚಾಲನೆ ನೀಡಿದ್ದರು. ಸದ್ಯ ಶಾಲಾ ಕಾಲೇಜುಗಳು ರಜೆ ಇವೆ. ಬೇರೆ ಅವಧಿಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿತ್ತು.

    ಶಾಲಾ-ಕಾಲೇಜು ಆರಂಭದ ದಿನದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಬ್ಲಡ್ ಬ್ಯಾಂಕ್‍ಗೆ ರಕ್ತವನ್ನು ಸಂಗ್ರಹಿಸುವ ಕಾರ್ಯ ಮಾಡಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಹೇಗೆ ಬರ ಬಂದಿದೆ. ಹಾಗೆ ರಕ್ತದಾನಿಗಳ ಸಂಖ್ಯೆ ಬೇಸಿಗೆಯಲ್ಲಿ ಕಡಿಮೆ ಆಗಿದೆ. ಹಾಗಾಗಿ ಜಿಲ್ಲೆಯ ಬ್ಲಡ್ ಬ್ಯಾಂಕ್ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಯ ಸದ್ಯಸರು ಸೇರಿದಂತೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದರು.

    ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸರಿ ಮಾಡಲು ಬಡರೋಗಿಗಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಅನುಕೂಲಕರ ಆಗಲಿ ಎನ್ನುವ ಉದ್ದೇಶದಿಂದ 108 ಆಸ್ಪತ್ರೆಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ. ಇದರಿಂದ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ. ಇನ್ನೊಂದು ಜೀವಕ್ಕೆ ಸಹಾಯ ಮಾಡಿ ಎಂದು ರಕ್ತದಾನ ಮಾಡಿದ ಸಿಬ್ಬಂದಿ ಹೇಳಿದ್ದಾರೆ.

  • ಕುಟುಂಬದ ಜೊತೆ ರಕ್ತದಾನ ಮಾಡಿ ನುಡಿದಂತೆ ನಡೆದ ಶಶಿಕುಮಾರ್!

    ಕುಟುಂಬದ ಜೊತೆ ರಕ್ತದಾನ ಮಾಡಿ ನುಡಿದಂತೆ ನಡೆದ ಶಶಿಕುಮಾರ್!

    ಬೆಂಗಳೂರು: ಬಿಗ್ ಬಾಸ್ ಸೀಸನ್ – 6ರ ವಿನ್ನರ್, ಆಧುನಿಕ ರೈತ ಶಶಿಕುಮಾರ್ ಅವರು ಇಂದು ತಮ್ಮ ಕುಟುಂಬ ಸಮೇತ ರಕ್ತದಾನ ಮಾಡಿ ತಾವು ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

    ಶಶಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊಸ ವರ್ಷದಂದು ಕುಟುಂಬ ಸಮೇತ ರಕ್ತದಾನ ಮಾಡುತ್ತೇವೆ. ಅಷ್ಟೇ ಅಲ್ಲದೇ ಅಂಗಾಂಗ ದಾನಕ್ಕೆ ಅನುಮತಿ ನೀಡುತ್ತೇವೆ ಎಂದು ಸಂಕಲ್ಪ ಮಾಡಿದ್ದರು. ಈ ಸಂಕಲ್ಪವನ್ನು ಪೂರ್ಣಗೊಳಿಸಲು ಶಶಿ ಹಾಗೂ ಅವರ ಕುಟುಂಬದ 15 ಜನ ರಕ್ತದಾನ ಮಾಡಿದ್ದಾರೆ.

    ಶಶಿ ಕುಟುಂಬ ಸಮೇತ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ್ದಾರೆ. ಶಶಿಕುಮಾರ್ ಅವರು ಮೊದಲಿನಿಂದಲೂ ರಕ್ತದಾನ ಮಾಡುತ್ತಿದ್ದು, ಇದುವರೆಗೂ ಅವರು 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.

    ಬಿಗ್ ಬಾಸ್ ಪಟ್ಟ ಪಡೆದ ಬಳಿಕ ಮಾತನಾಡಿದ ಶಶಿ, ಇದು ನನ್ನೊಬ್ಬನ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದು ಹೇಳಿದ್ದರು. ನನಗೆ ಬಂದ ಬಹುಮಾನದ ಹಣವನ್ನು ರೈತಾಪಿ ವರ್ಗದ ಕಲ್ಯಾಣಕ್ಕೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮತ್ತು ಬೇಸಾಯದತ್ತ ಯುವಕರನ್ನು ಸೆಳೆಯುವುದಕ್ಕೆ ಬಳಸುವುದಾಗಿ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv