ತಿರುವನಂತಪುರಂ: ಕಂಡು ಕೇಳರಿಯದ ಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದ್ದು, ತನ್ನ ಪ್ರಾಣದ ಹಂಗು ತೊರೆದು ಪುಟ್ಟ ಕಂದಮ್ಮನನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಿಸಿ ಸುದ್ದಿಯಾದ ಬೆನ್ನಲ್ಲೇ ಇದೀಗ ಬಡ ವ್ಯಾಪಾರಿಯೊಬ್ಬರು ಮಾನವೀಯತೆ ಮೆರೆದು ಹೀರೋ ಆಗಿದ್ದಾರೆ.
ಹೌದು. ಮಧ್ಯಪ್ರದೇಶ ಮೂಲದ ಬಡ ವ್ಯಾಪಾರಿ ವಿಷ್ಣು ಕಚ್ಚಾವ ಅಲ್ಲಿನ ನಿರಾಶ್ರಿತರಿಗೆ ಹೊದಿಕೆಗಳನ್ನು ನೀಡುವ ಮೂಲಕ ಹೀರೋ ಆಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಷ್ಣು ಕೇರಳದಲ್ಲಿ ಕೆಲದಿನಗಳಿಂದ ಬ್ಲಾಂಕೆಟ್ ಮಾರಾಟ ಮಾಡುತ್ತಿದ್ದರು. ಹಾಗೆಯೇ ಬ್ಲಾಂಕೆಟ್ ಗಳನ್ನು ಮಾರಿ ಜೀವನ ನಡೆಸುತ್ತಿದ್ದ ಇವರು, ಕೇರಳದ ಭಾರೀ ಮಳೆಯನ್ನು ಕಂಡು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ಕಣ್ಣಾರೆ ಕಂಡಿದ್ದರು. ಇದರಿಂದ ಜನರ ಕಷ್ಟವನ್ನು ಅರಿತ ವಿಷ್ಣು ತನ್ನಲ್ಲಿರುವ 50 ಬ್ಲಾಂಕೆಟ್ ಗಳನ್ನು ನಿರಾಶ್ರಿತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ಬಳಿಯಿರುವ ಎಲ್ಲಾ ಹೊದಿಕೆಗಳನ್ನು ಕಣ್ಣೂರು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಡಿಸಿ ಅದನ್ನು ನಿರಾಶ್ರಿತರಿಗೆ ನೀಡಿದ್ದಾರೆ. ಇದನ್ನೂ ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ
ಮೂಲತಃ ಮಧ್ಯಪ್ರದೇಶದವರಾಗಿರೋ ವಿಷ್ಣು ಕಳೆದ 12 ವರ್ಷಗಳಿಂದ ಕೇರಳದಲ್ಲಿ ನೆಲೆಸಿದ್ದಾರೆ. ಅಲ್ಲದೇ ಕೇರಳ ನನ್ನ ಎರಡನೆಯ ಮನೆ ಅಂತ ಹೇಳುತ್ತಿದ್ದಾರೆ. ಇಲ್ಲಿ ಬಂದು ವಾಸ ಮಾಡಿದ ಬಳಿಕ ಕೇರಳದಲ್ಲಿ ಇಂತಹ ಘಟನೆ ನೋಡಿರಲಿಲ್ಲ. ನೆರೆ ಪ್ರವಾಹದಿಂದ ಇಲ್ಲಿನ ಜನರ ಸ್ಥಿತಿಯನ್ನು ನನ್ನಿಂದ ನೋಡಲಾಗಿಲ್ಲ. ಹೀಗಾಗಿ ನನ್ನಲ್ಲಿ ಏನಿದೆಯೋ ಅದನ್ನು ದಾನ ಮಾಡಿದ್ದೇನೆ ಅಂತ ಹೇಳಿದ್ದಾರೆ.

ಸದ್ಯ ವಿಷ್ಣು ರಾತ್ರೋರಾತ್ರಿ ಬಡ ವ್ಯಾಪಾರಿ ಸ್ಟಾರ್ ಆಗಿದ್ದಾರೆ. ಅಲ್ಲದೇ ತಾನು ಮಾನವೀಯತೆ ಮೆರೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರೋದನ್ನು ಕಂಡು ಅವರು ಹೌಹಾರಿದ್ದಾರೆ. ಈ ವಿಡಿಯೋ ನೋಡಿದ್ರೆ ನನ್ನ ಪತ್ನಿ ತುಂಬಾ ಖುಷಿ ಪಡುತ್ತಾಳೆ ಅಂತಾನೂ ಹೇಳಿದ್ದಾರೆ.
ಈ ಮೊದಲು ಎನ್‍ಡಿಆರ್‍ಎಫ್ ತಂಡ ಕೇರಳದ ಇಡುಕ್ಕಿ, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಇಡುಕ್ಕಿ ಪ್ರದೇಶದ ಸೇತುವೆಯೊಂದರ ಬಳಿ ಪುಟ್ಟ ಮಗುವಿನೊಂದಿಗೆ ವ್ಯಕ್ತಿಯೊಬ್ಬರು ರಕ್ಷಣೆಗಾಗಿ ಕಾದು ಕುಳೀತಿದ್ದರು. ಇದನ್ನು ಕಂಡ ಸಿಬ್ಬಂದಿ ಹರಿಯುತ್ತಿದ್ದ ರಭಸದ ನೀರನ್ನು ಲೆಕ್ಕಿಸದೇ ಸೇತುವೆ ದಾಟಿ ಮಗುವಿನೊಂದಿಗೆ ಓಡಿ ಬಂದಿದ್ದಾರೆ. ಈ ವೇಳೆ ಮಗುವಿನ ತಂದೆಯೂ ಕೂಡ ಸಿಬ್ಬಂದಿ ಹಿಂದೆಯೇ ಓಡಿ ಹೋಗಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಯೊಬ್ಬರು ಪ್ರವಾಹದ ಮಧ್ಯೆಯೇ ಮಗುವನ್ನು ಕಾಪಾಡಿದ್ದು ಭಾರೀ ಸುದ್ದಿಯಾಗಿತ್ತು. ಅಧಿಕಾರಿಯ ಈ ಮಹಾನ್ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಅಲ್ಲದೇ ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಒಟ್ಟಿನಲ್ಲಿ ಹಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಿನ ಜನಜೀವನ ಅಕ್ಷರಶಃ ನಲುಗಿ ಹೋಗಿದೆ. ಆಹಾರ, ನೀರಿಗೂ ಅಲ್ಲಿನ ಜನ ಪರದಾಡುವಂತಜಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಅಲ್ಲಲ್ಲಿ ಕೆಲವೊಂದು ಮಾನವೀಯತೆ ಮೆರೆದ ಘಟನೆಗಳು ಬೆಳಕಿಗೆ ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv