Tag: black panther

  • ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

    ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

    ಚಾಮರಾಜನಗರ: ವನ್ಯಜೀವಿಗಳ ಸಾಂದ್ರತೆ ಹೆಚ್ಚಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

    ಹೊಳೆಮತ್ತಿ ನೇಚರ್ ಫೌಂಡೇಷನ್‍ನ ಡಾ.ಸಂಜಯ್ ಗುಬ್ಬಿ ತಂಡದವರು ಚಿರತೆ ಅಧ್ಯಯನಕ್ಕೆ ನಡೆಸಿದ್ದ ಕ್ಯಾಮೆರಾ ಟ್ರ್ಯಾಪ್‍ನಲ್ಲಿ ಚಿರತೆ ಗೋಚರವಾಗಿದೆ. ಈ ಮುನ್ನ 2020ರ ಡಿಸೆಂಬರ್ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಚಿರತೆಗೆ 6 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್‍ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ವನ್ಯಜೀವಿ ಕಾರಿಡಾರ್‍ನನ್ನು ಸಂರಕ್ಷಿಸುವಂತೆ ವನ್ಯ ಜೀವಿ ತಜ್ಞರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

  • ತಂತಿ ಉರುಳಿಗೆ ಸಿಲುಕಿ ಶಿರಸಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

    ತಂತಿ ಉರುಳಿಗೆ ಸಿಲುಕಿ ಶಿರಸಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

    – ಮಲೆನಾಡು ಭಾಗದಲ್ಲಿ ಮೊದಲ ಬಾರಿ ಕಪ್ಪು ಚಿರತೆ ಪತ್ತೆ

    ಕಾರವಾರ: ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ತಂತಿಯ ಉರುಳಿಗೆ ನಾಲ್ಕು ವರ್ಷದ ಅಪರೂಪದ ಕಪ್ಪು ಚಿರತೆ ಸಿಲುಕಿ ಮೃತಪಟ್ಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆಯಲ್ಲಿ ಇಂದು ನಡೆದಿದೆ.

    ಇಂದು ಬೆಳಗ್ಗೆ ಉರುಳಿಗೆ ಸಿಲುಕಿ ಚಿರತೆ ಒದ್ದಾಡುವುದನ್ನು ನೋಡಿದ ಸ್ಥಳೀಯರು, ಅರಣ್ಯಾಧಿಕಾರಿಗಳಿಗೆ ತಿಳಸಿದ್ದಾರೆ. ತಕ್ಷಣ ಬನವಾಸಿ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಲು ಸ್ಥಳಕ್ಕೆ ಆಗಮಿಸಿದ್ದರು. ಆದರೆ ರಕ್ಷಣೆ ಮಾಡುವಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ. ಇದನ್ನೂ ಓದಿ:  ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿ ಕಪ್ಪು ಚಿರತೆ ಇರುವುದು ಪತ್ತೆಯಾಗಿದೆ. ಚಿರತೆ ಕಳೆಬರಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾಡು ಪ್ರಾಣಿ ಭೇಟೆಗೆ ಯಾರು ಉರಳು ಹಾಕಿದ್ದಾರೆ ಎಂಬ ತನಿಖೆಯನ್ನು ಅರಣ್ಯಾಧಿಕಾರಿಗಳು ಕೈಗೊಂಡಿದ್ದಾರೆ.

  • ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆಯಲ್ಲಿ ಮೂರು ದಿನ ಸಫಾರಿ ನಡೆಸಿದ್ದು, ವೈಲ್ಡ್ ಲೈಫ್ ಫೋಟೋಗ್ರಫಿ ನಡೆಸಿದ್ದಾರೆ. ಈ ವೇಳೆ ಕರಿ ಚಿರತೆ ಸೇರಿದಂತೆ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ್ದಾರೆ.

    ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಡಿ ಬಾಸ್ ಸಫಾರಿ ನಡೆಸಿದ್ದು, ಈ ವೇಳೆ ಕರಿ ಚಿರತೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕರಿ ಚಿರತೆ ದಾಸನ ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಇದೀಗ ಸೆರೆ ಹಿಡಿದಿದ್ದು, ಇದರಿಂದಾಗಿ ಡಿ ಬಾಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮೂರು ದಿನಗಳ ಕಾಲ ದರ್ಶನ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಭರ್ಜರಿ ಸಫಾರಿ ನಡೆಸಿದ್ದಾರೆ.

    ಸಫಾರಿ ವೇಳೆ ಮೂರು ಹುಲಿ, ಕರಿ ಚಿರತೆ, ಕಾಡು ನಾಯಿ, ಆನೆಗಳು ಕ್ಯಾಮರಾಕ್ಕೆ ಸೆರೆ ಸಿಕ್ಕಿವೆ. ಅದ್ಭುತ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ದರ್ಶನ್ ಸೆರೆ ಹಿಡಿದಿದ್ದಾರೆ. ಅದರಲ್ಲೂ ಕರಿ ಚಿರತೆ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದಾರೆ. ಡಿ ಬಾಸ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಆಗಾಗ ಸಫಾರಿ ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಹುಲಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು.

    ಕಾಡಿನ ದಾರಿಯಲ್ಲಿ ಹುಲಿ ಭರ್ಜರಿಯಾಗಿ ಘರ್ಜಿಸುತ್ತಿದ್ದ ವೇಳೆ ದರ್ಶನ್ ಚಿತ್ರಗಳನ್ನು ಸೆರೆ ಹಿಡಿದಿದ್ದರು. ವೈನ್ಯ ಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ದರ್ಶನ್, ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಆಗಾಗ ಸಫಾರಿ ಹೋಗುತ್ತಲೇ ಇರುತ್ತಾರೆ. ಅಲ್ಲದೆ ವೈಲ್ಡ್ ಲೈಫ್ ಫೋಟೋಗ್ರಫಿ ಸಹ ಅವರಿಗೆ ಎಲ್ಲಿಲ್ಲದ ಪ್ರೀತಿ ಎಂಬುದು ತಿಳಿದಿರುವ ವಿಚಾರವಾಗಿದೆ.

    ಶೂಟಿಂಗ್‍ನಿಂದ ಬಿಡುವು ಸಿಕ್ಕಾಗಲೆಲ್ಲ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್‍ನಲ್ಲೇ ಕಾಲ ಕಳೆಯುತ್ತಾರೆ. ಸಾಕು ಪ್ರಾಣಿಗಳು ಹಾಗೂ ಹಸುಗಳ ಜೊತೆಯೇ ಇರುತ್ತಾರೆ. ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಅರಣ್ಯಕ್ಕೆ ತೆರಳಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಬಳಗದೊಂದಿಗೆ ಬೈಕ್‍ನಲ್ಲಿ ಲಾಂಗ್ ರೈಡ್ ಹೋಗಿದ್ದರು. ಇದೀಗ ನಾಗರಹೊಳೆಗೆ ತೆರಳಿದ್ದಾರೆ.

    ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿದ್ದ ದರ್ಶನ್, ಪ್ರಾಣಿ, ಪಕ್ಷಿಗಳ ಫೋಟೋವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟು ವಿವಿಧ ರೀತಿಯ ಕಾಡು ಪ್ರಾಣಿಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕ್ಯಾಮೆರಾ ಹೆಗಲಿಗೆ ಹಾಕಿಕೊಂಡು ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡಿದ್ದಾರೆ. ದರ್ಶನ್ ಸಧ್ಯ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

  • ಆನ್‍ಲೈನ್ ಗೇಮ್ ಟಾಸ್ಕ್ ಗಾಗಿ ನೇಣು ಬಿಗಿದುಕೊಂಡ ಯುವಕ

    ಆನ್‍ಲೈನ್ ಗೇಮ್ ಟಾಸ್ಕ್ ಗಾಗಿ ನೇಣು ಬಿಗಿದುಕೊಂಡ ಯುವಕ

    ಪುಣೆ: ಬ್ಲೂವೇಲ್ ರೀತಿಯ ಆನ್‍ಲೈನ್ ಗೇಮ್‍ನಲ್ಲಿನ ಟಾಸ್ಕನ್ನು ಪೂರ್ಣಗೊಳಿಸಲು ಹೋಗಿ 20 ವರ್ಷದ ಯವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಯುವಕನನ್ನು ಲೋನಿಖಂಡ್ ನಗರ ಪ್ರದೇಶದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ದಿವಾಕರ್ ಮಾಲಿ ಎಂದು ಗುರುತಿಸಲಾಗಿದೆ.

    ನೇಣು ಹಾಕಿಕೊಳ್ಳುವ ಮುಂಚೆ ದಿವಾಕರ್ ಮಾಲಿ ಪತ್ರ ಬರೆದಿದ್ದು, ಅದರಲ್ಲಿ ಪಂಜರದಲ್ಲಿದ್ದ ಬ್ಲ್ಯಾಕ್ ಪ್ಯಾಂಥರ್ (ಕರಿ ಚಿರತೆ) ಈಗ ಸ್ವತಂತ್ರವಾಗಿದೆ. ಈಗ ಅದರ ಮುಂದೆ ಯಾವುದೇ ನಿರ್ಬಂಧಗಳು ಇಲ್ಲ. ಇದು ಅಂತ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ, ಮಾಲಿ ಪತ್ರದಲ್ಲಿ ತನ್ನನ್ನು ತಾನು ಬ್ಲ್ಯಾಕ್ ಪ್ಯಾಂಥರ್ ಎಂದು ಹೇಳಿಕೊಂಡಿದ್ದಾನೆ. ಆದ್ದರಿಂದ ಇದು ಯಾವುದೋ ರೀತಿಯ ಆನ್‍ಲೈನ್ ಗೇಮ್ ಆಡಲು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಅವನು ಬರೆದ ಪತ್ರ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಇದ್ದು ಅದರ ಮೇಲೆ ಬ್ಲ್ಯಾಕ್ ಪ್ಯಾಂಥರ್ ಚಿತ್ರ ಬಿಡಿಸಿ ಸೂರ್ಯ ಮತ್ತೆ ಹೊಳೆಯುತ್ತಾನೆ ಎಂದು ಬರೆದಿದ್ದಾನೆ ಎಂದು ಹೇಳಿದ್ದಾರೆ.

    ಮಾಲಿ ಮನೆಯವರು ಮತ್ತು ನೆರೆಹೊರೆಯವರು ಹೇಳುವ ಪ್ರಕಾರ, ಅವನು ಬ್ಲೂವೇಲ್ ರೀತಿಯ ಆನ್‍ಲೈನ್ ಗೇಮ್‍ನಲ್ಲಿ ಬರುವ ಟಾಸ್ಕನ್ನು ಮಾಡಲು ಹೋಗಿ ತನ್ನ ಜೀವನವನ್ನು ಕಳೆದುಕೊಂಡ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಮಾಲಿ ತಾಯಿ, ಎಲ್ಲ ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಾನು ನನ್ನ ಮಗನನ್ನು ಕಳೆದುಕೊಂಡೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

    ಬ್ಲೂವೇಲ್ ಚಾಲೆಂಜ್ ಎಂಬುದು ಒಂದು ಆನ್‍ಲೈನ್ ಆಟವಾಗಿದ್ದು, ಇದನ್ನು ಆಡುವವರಿಗೆ ಈ ಗೇಮ್ ಮೂಲಕವೇ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಆಡುವವರು ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಇದರಲ್ಲಿ ತನ್ನ ಮೇಲೆ ತಾನೇ ಹಲ್ಲೆ ಮಾಡಿಕೊಳ್ಳುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಗಳನ್ನು ನೀಡಲಾಗುತ್ತದೆ.

  • 22 ಆಡು, ಹತ್ತಾರು ಹಸುಗಳನ್ನು ಭಕ್ಷಿಸಿದ್ದ ಕರಿ ಚಿರತೆ ಸೆರೆ

    22 ಆಡು, ಹತ್ತಾರು ಹಸುಗಳನ್ನು ಭಕ್ಷಿಸಿದ್ದ ಕರಿ ಚಿರತೆ ಸೆರೆ

    ಉಡುಪಿ: 22 ಆಡು, ಹತ್ತಾರು ಹಸುಗಳನ್ನು ಭಕ್ಷಿಸಿ, ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕರಿ ಚಿರತೆಯನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

    ಸುಮಾರು ದಿನಗಳಿಂದ ಮುದೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕರಿ ಚಿರತೆ ಬೀಡು ಬಿಟ್ಟಿತ್ತು. ಇದೇ ಗ್ರಾಮದ ಮರ್ಕಡಿ ಜೋಸ್ ಎಂಬವರು ಸಾಕಿದ್ದ ಸುಮಾರು 22 ಮೇಕೆಗಳನ್ನು ಹಿಡಿದು ತಿಂದಿತ್ತು. ಅಲ್ಲದೇ ಹಸುಗಳನ್ನು ಬೇಟೆಯಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಮರ್ಕಡಿ ಜೋಸ್ ಅವರು ಸಾಕಿದ್ದ ಮೇಕೆಗಳನ್ನು ಕೆಲವು ದಿನಗಳಿಂದ ಒಂದರಂತೆ ಎಳೆದುಕೊಂಡು ಹೋಗುತ್ತಿತ್ತು. ಈ ಕುರಿತು ಮರ್ಕಡಿ ಜೋಸ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆಯೇ ಕುಂದಾಪುರ ವಲಯಾರಣ್ಯಾಧಿಕಾರಿ ಶರತ್ ಶೆಟ್ಟಿ ನೇತೃತ್ವದಲ್ಲಿ ಜೋಸ್ ಅವರ ಮನೆಯ ಹತ್ತಿರದ ತೋಟದಲ್ಲಿ ಬೋನು ಇಟ್ಟುದ್ದರು. ಹೀಗಾಗಿ ಮಂಗಳವಾರ ಚಿರತೆ ಬೋನ್‍ಗೆ ಬಿದ್ದಿದೆ.

    ಈ ಭಾಗದ ಜನರು ಹಿಂದೆಂದು ಕರಿ ಚಿರತೆ ನೋಡಿರಲಿಲ್ಲ. ಹೀಗಾಗಿ ಅದನ್ನು ನೋಡಲು ಮುಗಿಬಿದ್ದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಮುದೂರು ವನಪಾಲಕರಾದ ಸಂತೋಷ ಹಾಗೂ ಗ್ರಾಮಸ್ಥರು ಚಿರತೆಯನ್ನು ವಾಹನಕ್ಕೆ ಸಾಗಿಸಿದರು. ಸೆರೆ ಸಿಕ್ಕ ಕರಿ ಚಿರತೆಯನ್ನು ಸುರಕ್ಷಿತ ತಾಣಕ್ಕೆ ಕೊಂಡೊಯ್ದು ಬಿಡುವುದಾಗಿ ಕುಂದಾಪುರ ವಲಯಾರಣ್ಯಾಧಿಕಾರಿ ಶರತ್ ಶೆಟ್ಟಿ ಹೇಳಿದರು.

    ಮುದೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಹಾಗೂ ಹುಲಿಗಳ ಕಾಟ ಹೆಚ್ಚಾಗಿದೆ. ಪ್ರತಿ ದಿನ ಒಬ್ಬೊಬ್ಬರ ಮನೆಯಿಂದ ಹಸು ಮೇಕೆ ಕಾಣೆಯಾಗುತ್ತಿವೆ. ಅಲ್ಲದೇ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಹಸು ಮೇಕೆಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿರುವವರ ಜೀವನ ಕಷ್ಟವಾಗುತ್ತಿದೆ. ಇದಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.