Tag: black money

  • ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್‌ ಶಾ ಪ್ರಶ್ನೆ

    ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್‌ ಶಾ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ಸಿಗೆ (Congress) ಬಂದಿರುವ 1,600 ಕೋಟಿ ರೂ. ಏನು? ಅದನ್ನು ಎಲ್ಲಿಂದ ಪಡೆದಿದೆ ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಪ್ರಶ್ನಿಸಿದ್ದಾರೆ.

    ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ‘ಹಫ್ತಾ ವಸೂಲಿ’ ಮಾಡಿದೆ ಎಂದು ರಾಹುಲ್‌ ಗಾಂಧಿ (Rahul Gandhi) ಆರೋಪಕ್ಕೆ ಪ್ರತಿಕ್ರಿಯಿಸಿದರು.

    ಚುನಾವಣಾ ಬಾಂಡ್‌ಗಳು (Electoral Bonds) ರಾಜಕೀಯದಲ್ಲಿ ಕಪ್ಪುಹಣವನ್ನು (Black Money) ಬಹುತೇಕ ಅಂತ್ಯಗೊಳಿಸಿತ್ತು. ಇದಕ್ಕಾಗಿಯೇ ರಾಹುಲ್ ಗಾಂಧಿ, ಇಡೀ INDIA ಒಕ್ಕೂಟ ಬಾಂಡ್‌ ವಿರುದ್ಧವಾಗಿತ್ತು ಮತ್ತು ಮತ್ತೊಮ್ಮೆ ರಾಜಕೀಯವನ್ನು (Politics) ಆಳಲು ಹಳೆಯ ವ್ಯವಸ್ಥೆಯನ್ನು ಅವರು ಬಯಸಿದ್ದರು ಎಂದು ಅಮಿತ್‌ ಶಾ ತಿರುಗೇಟು ನೀಡಿದರು.

    ಕಾಂಗ್ರೆಸ್‌ 1600 ಕೋಟಿ ರೂ. ಹಣವನ್ನು ಚುನವಾಣಾ ಬಾಂಡ್‌ನಿಂದ ಪಡೆದುಕೊಂಡಿದೆ. ನಾವು ಇದನ್ನು ಪಾರದರ್ಶಕ ದೇಣಿಗೆ ಎಂದು ಭಾವಿಸುತ್ತೇವೆ. ನಮ್ಮದನ್ನು ಅವರು ಅವರು ಹಫ್ತಾ ವಸೂಲಿ ಎಂದು ಆರೋಪಿಸಿದರೆ ಅವರ ಹಣ ಏನು ಎಂದು ಅಮಿತ್‌ ಶಾ ಪ್ರಶ್ನಿಸಿದರು. ಇದನ್ನೂ ಓದಿ: ವಿಮಾನ ಬಿಡಿ , ರೈಲ್ವೇ ಟಿಕೆಟ್‌ ಖರೀದಿಸಲು ಆಗುತ್ತಿಲ್ಲ – ಕಾಂಗ್ರೆಸ್‌ ಖಾತೆ ಫ್ರೀಜ್‌, ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

    ಇತರ ಪಕ್ಷಗಳಂತೆ ಬಿಜೆಪಿಯು ತಮ್ಮ ದಾನಿಗಳ ಪಟ್ಟಿಯನ್ನು ಬಹಿರಂಗಪಡಿಸುತ್ತದೆಯೇ ಎಂಬ ಪ್ರಶ್ನೆಗೆ, ನಾನು ನಿಮಗೆ ಭರವಸೆ ನೀಡುತ್ತೇನೆ ಬಾಂಡ್‌ ವಿವರಗಳು ಪ್ರಕಟವಾದ ನಂತರ INDIA ಮೈತ್ರಿಕೂಟವು ಜನರನ್ನು ಎದುರಿಸಲು ಕಷ್ಟವಾಗಬಹುದು ಎಂದು ಹೇಳಿದರು.

    ಭಾರತೀಯ ರಾಜಕೀಯದಲ್ಲಿ ಕಪ್ಪು ಹಣದ ಪ್ರಾಬಲ್ಯವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್‌ ಪರಿಚಯಿಸಲಾಯಿತು. ಚುನಾವಣೆಯಲ್ಲಿ ಸುಧಾರಣೆ ತರಲು ತಂದಿದ್ದೆವು. ಆದರೆ ಸುಪ್ರೀಂ ಕೋರ್ಟ್‌ ಈಗ ಚುನಾವಣಾ ಬಾಂಡ್‌ ಅನ್ನು ರದ್ದುಗೊಳಿಸಿದೆ. ಈಗ ಇದಕ್ಕೆ ಯಾವುದೇ ಮಹತ್ವ ಇಲ್ಲ ಎಂದರು.

  • ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    – ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಯೋಜನೆ ಜಾರಿ
    – ಕಂಪನಿ, ಪಕ್ಷದ ಬ್ಯಾಲೆನ್ಸ್‌ ಶೀಟ್‌ನಲ್ಲಿ ವಿವರ ಉಲ್ಲೇಖ
    – ಯೋಜನೆ ರದ್ದುಗೊಂಡಿದ್ದರಿಂದ ಮತ್ತೆ ಕಪ್ಪು ಹಣ ಬರಲಿದೆ

    ನವದೆಹಲಿ: ಕಪ್ಪು ಹಣವನ್ನು (Black Money) ನಿರ್ಮೂಲನೆ ಮಾಡಲು ಚುನಾವಣಾ ಬಾಂಡ್‌ (Electoral Bonds) ಯೋಜನೆಯನ್ನು ಸರ್ಕಾರ ಜಾರಿ ಮಾಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

    ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

    ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಆದರೆ ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು ಕಪ್ಪುಹಣವನ್ನು ನಿರ್ಮೂಲನೆ ಮಾಡಲು  ಅದನ್ನು ಹೇಗೆ ಪರಿಚಯಿಸಲಾಗಿದೆ ಎಂಬುದರ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ಅಮಿತ್ ಶಾ ಹೇಳಿದರು.

    ದೇಶದ ಜನರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯೋಜನೆ ಜಾರಿಯಾಗುವ ಮೊದಲು ಚುನಾವಣೆಗೆ  ಫಂಡಿಂಗ್‌ ಹೇಗೆ ನಡೆಯುತ್ತಿತ್ತು?  ಪಕ್ಷಗಳಿಗೆ ನಗದು ಮೂಲಕ ದೇಣಿಗೆ ನೀಡಲಾಗುತ್ತಿತ್ತು. ಆದರೆ ಎಲ್ಲಿಯೂ ಯಾರು ಹಣ ನೀಡಿದ್ದಾರೆ ಎಂಬ ಮಾಹಿತಿ ಬರುತ್ತಿರಲಿಲ್ಲ. ಅದು ಕಪ್ಪು ಹಣ ಅಥವಾ ಬಿಳಿ ಹಣವೋ ಎಂದು ಕೇಳಿದರು. ಈ ಯೋಜನೆ ರದ್ದಾದರೆ ಮತ್ತೆ ಕಪ್ಪು ಹಣ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್ 

    ಚುನಾವಣಾ ಬಂಡ್‌ ಯೋಜನೆ ಕಾರ್ಯಗತಗೊಂಡ ನಂತರ ಕಂಪನಿಗಳು ಅಥವಾ ವ್ಯಕ್ತಿಗಳು ಪಕ್ಷಗಳಿಗೆ ದೇಣಿಗೆಗಾಗಿ ಬಾಂಡ್ ಅನ್ನು ಖರೀದಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಚೆಕ್ ಅನ್ನು ಸಲ್ಲಿಸಬೇಕಾಗಿತ್ತು. ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಜಾರಿಗೊಳಿಸಿದ ನಂತರ ಗೌಪ್ಯತೆಗೆ ಅವಕಾಶವಿಲ್ಲ. ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಪಡೆದ ಹಣದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕಂಪನಿಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ನಲ್ಲಿ ಎಷ್ಟು ಎಷ್ಟು ಬಾಂಡ್‌ ಪಡೆದಿದ್ದೇವೆ ಎಂಬುದನ್ನು ಉಲ್ಲೇಖಿಸುತ್ತವೆ. ಬಾಂಡ್‌ ಮೂಲಕ ಪಡೆದ ಹಣ ಕಪ್ಪು ಹಣ ಅಲ್ಲ ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡರು.

    ಬಿಜೆಪಿ ಅಧಿಕಾರದಲ್ಲಿರುವುದರಿಂದ ಚುನಾವಣಾ ಬಾಂಡ್‌ಗಳ ಯೋಜನೆಯಿಂದ ಲಾಭ ಪಡೆದಿದೆ ಎಂಬ ಗ್ರಹಿಕೆ ಇದೆ. ರಾಹುಲ್ ಗಾಂಧಿ ಕೂಡ ಇದು ವಿಶ್ವದ ಅತಿದೊಡ್ಡ ಸುಲಿಗೆ ದಂಧೆ ಎಂದು ಹೇಳಿದ್ದಾರೆ. ಅವರಿಗೆ ಈ ವಿಷಯಗಳನ್ನು ಯಾರು ಬರೆದುಕೊಡುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ಕುಟುಕಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? – ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಮರು ಸವಾಲ್‌!

    ಬಿಜೆಪಿ 6000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಎಲ್ಲಾ ಪಕ್ಷಗಳಿಗೆ ಒಟ್ಟು ಬಾಂಡ್‌ ಮೂಲಕ 20,000 ಕೋಟಿ ರೂ. ಬಂದಿದೆ. ಹಾಗಾದರೆ 14,000 ರೂ.ಗಳ ಬಾಂಡ್ ಎಲ್ಲಿ ಹೋಯಿತು ಎಂದು ಕೇಂದ್ರ ಗೃಹ ಸಚಿವರು ಪ್ರಶ್ನಿಸಿದರು.

     

    ಚುನಾವಣಾ ಬಾಂಡ್ ಯೋಜನೆ ಮೂಲಕ ಬಿಜೆಪಿ ಪಡೆದಿರುವ ಮೊತ್ತದ ಬಗ್ಗೆ ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಲೋಕಸಭೆಯಲ್ಲಿ ಅವರು ಹೊಂದಿರುವ ಸ್ಥಾನಗಳ ಸಂಖ್ಯೆ ಮತ್ತು ಪಕ್ಷದ ಸದಸ್ಯರ ಸಂಖ್ಯೆಗೆ ಅಸಮಾನವಾಗಿದೆ. 303 ಸಂಸದರನ್ನು ಹೊಂದಿರುವ ಬಿಜೆಪಿ 6,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. 242 ಸಂಸದರನ್ನು ಹೊಂದಿರುವ ವಿರೋಧ ಪಕ್ಷಗಳು 14,000 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿವೆ ಎಂದು ತಿಳಿಸಿದರು.

    ಕಾಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಗದು ವಹಿವಾಟಿನ ಮೂಲಕ 1100 ದೇಣಿಗೆ ನೀಡಿದಾಗ ಪಕ್ಷಕ್ಕೆ 100 ರೂ. ಠೇವಣಿ ಇಡಲಾಗುತ್ತಿತ್ತು. 1000 ರೂ.ಗಳನ್ನು ತಮ್ಮ ಮನೆಯಲ್ಲಿ ಇಡುತ್ತಿದ್ದರು. ಕಾಂಗ್ರೆಸ್ ಇದನ್ನು ವರ್ಷಗಳಿಂದ ಮಾಡಿಕೊಂಡು ಬಂದಿತ್ತು ಕಿಡಿಕಾರಿದರು.

  • ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ: ಸುಪ್ರೀಂ ಕೋರ್ಟ್‌

    ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ: ಸುಪ್ರೀಂ ಕೋರ್ಟ್‌

    ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds) ಯೋಜನೆ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ (Supreme Court ) ಐತಿಹಾಸಿಕ ತೀರ್ಪು ನೀಡಿದ್ದು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

    ಚುನಾವಣಾ ಬಾಂಡ್‌ಗಳ (ಎಲೆಕ್ಟೋರಲ್‌) ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ಸರ್ಕಾರ ಹಾಗೂ ಅರ್ಜಿದಾರರ ನಡುವಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ (DY Chandrachud) ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠವು ಕಳೆದ ನವೆಂಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.

    ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಚುನಾವಣಾ ಬಾಂಡ್‌ಗಳು ಕಪ್ಪುಹಣವನ್ನು ತಡೆಯುವ ಏಕೈಕ ಮಾರ್ಗವಲ್ಲ ಎಂದು ಹೇಳಿ ಯೋಜನೆಯನ್ನೇ ರದ್ದು ಪಡಿಸಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ

     

    ತನ್ನ ತೀರ್ಪಿನಲ್ಲಿ ಯೋಜನೆಯು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ. ಇದರಿಂದ ಕಪ್ಪು ಹಣ ನಿಗ್ರಹವಾಗುವುದಿಲ್ಲ ಎಂದು  ತಿಳಿಸಿದೆ. ಇದನ್ನೂ ಓದಿ: ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣವೇ ಚುನಾವಣಾ ಬಾಂಡ್‌ ನೀಡುವುದನ್ನು ನಿಲ್ಲಿಸಬೇಕು. ಚುನಾವಣಾ ಬಾಂಡ್‌ಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು  ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಎಸ್‌ಬಿಐ ನೀಡಬೇಕು.  ಮಾರ್ಚ್ 13 ರೊಳಗೆ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆ ವಿವರಗಳನ್ನು ಪ್ರಕಟಿಸಬೇಕು ಎಂದು ಮಹತ್ವದ ಆದೇಶ ಪ್ರಕಟಿಸಿದೆ.

    2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ಪರಿಚಯಿಸಿತ್ತು.

  • ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ (Swiss Banks) ಭಾರತೀಯರ ಭಾರತೀಯರ ಹೂಡಿಕೆ, ಡಿಪಾಸಿಟ್ (Indians’ funds) ಪ್ರಮಾಣ ಇಳಿಕೆಯಾಗಿದೆ.

    2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್‌ (ಅಂದಾಜು 30 ಸಾವಿರ ಕೋಟಿ ರೂ.) ಇಳಿಕೆಯಾಗಿದೆ ಎಂದು ಸ್ವಿಸ್‌ ಕೇಂದ್ರೀಯ ಬ್ಯಾಂಕ್‌ನ (Switzerland’s Central Bank) ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.

    2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.

    2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ (PM Narendra Modi Government) ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ (Black Money) ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

    ಹಲವು ಸುತ್ತಿನ ಮಾತುಕತೆಯ ಬಳಿಕ ಸ್ವಿಸ್‌ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ 2018ರಲ್ಲಿ ಭಾರತದ ಕೈಸೇರಿತ್ತು. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿತ್ತು.

    ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

     

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸ್ವಿಸ್‌ ಬ್ಯಾಂಕ್‌ ಸರ್ಕಾರಗಳಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣಗಳು ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ನವದೆಹಲಿ: ರಾಜಸ್ಥಾನದ ಜೈಪುರ ಮೂಲದ ಆಭರಣ ತಯಾರಿಕೆ ಮತ್ತು ರಫ್ತು ಸಮೂಹವೊಂದರ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿ 500 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

    ತೆರಿಗೆ ವಂಚಿಸಿದ ಕಂಪನಿ ಯಾವುದು ಎಂದು ಇನ್ನೂ ಬಹಿರಂಗವಾಗಿಲ್ಲ. ದೇಶಾದ್ಯಂತ ಏಕಕಾಲದಲ್ಲಿ 50 ಕಡೆ ನಡೆದ ದಾಳಿಯಲ್ಲಿ ತೆರಿಗೆ ವಂಚಿಸಿದ ಹಣ ಪತ್ತೆಯಾಗಿದೆ.

    ದಾಳಿ ವೇಳೆ 4 ಕೋಟಿ ರೂ. ನಗದು ಹಾಗೂ 9 ಕೋಟಿ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅನೇಕ ದಾಖಲೆ ಪತ್ರಗಳು ದೊರೆತಿದೆ. ಕಂಪನಿಯವರು 72 ಕೋಟಿ ರೂ.ನಷ್ಟು ಹಣಕ್ಕೆ ತೆರಿಗೆ ಪಾವತಿಸದೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಆಫ್ರಿಕನ್ ದೇಶದಿಂದ ಈ ಕಂಪನಿ ಕಚ್ಚಾ ರೂಪದ ಅಮೂಲ್ಯ ಆಭರಣ ಹರಳುಗಳನ್ನು ತಂದು ಜೈಪುರದಲ್ಲಿ ಸಂಸ್ಕರಣೆ ಮಾಡುತ್ತಿತ್ತು. ಅದರಿಂದ ಬಂದ ಆದಾಯವನ್ನು ಬಚ್ಚಿಡುತ್ತಿತ್ತು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

  • ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಬೆಂಗಳೂರು: ಬಿಟ್‍ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಬಿಜೆಪಿ ವಿರುದ್ಧ ಆರೋಪ ಮಾಡ್ತಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧವೇ ಕಮಲ ಪಡೆ ಹೊಸ ಬಾಂಬ್ ಸಿಡಿಸಿದೆ. ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎನ್ನಲಾದ ಶ್ರೀಕಿಗೆ ಪ್ರಿಯಾಂಕ್ ಖರ್ಗೆ ಸಂಪರ್ಕ ಇತ್ತು ಎಂದು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪ ಮಾಡಿದ್ದಾರೆ.

    ಪ್ರಿಯಾಂಕ್ ಐಟಿ ಬಿಟಿ ಮಂತ್ರಿ ಆಗಿದ್ದಾಗ ಶ್ರೀಕಿಯನ್ನು ಭೇಟಿ ಮಾಡಿ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದ್ದು, ಅವರು ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್‍ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ.. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕು ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಟ್‌ಕಾಯಿನ್‌ ಹಗರಣಕ್ಕೆ ಸಿಎಂ ತಲೆದಂಡವಾಗಲಿದೆ : ಪ್ರಿಯಾಂಕ್ ಖರ್ಗೆ

    ಕಟೀಲ್ ಮೌನವನ್ನು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆಗೆ ಕೃಷಿ ಮಂತ್ರಿಗಳು ತಿರುಗೇಟು ನೀಡಿದ್ದಾರೆ. ಕಟೀಲ್ ಲೆವೆಲ್ಲೇ ಬೇರೆ. ಪ್ರಿಯಾಂಕ್ ಹೇಳಿಕೆಗೆಲ್ಲಾ ಅವರು ಉತ್ತರ ಕೊಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

    ಶ್ರೀಕಿಗೆ ಭದ್ರತೆ ಕೊಡಬೇಕೆಂಬ ಸಿದ್ದರಾಮಯ್ಯ ಒತ್ತಾಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಶ್ರೀಕಿಗೆ ಸರ್ಕಾರಕ್ಕಿಂತ್ಲೂ ಕಾಂಗ್ರೆಸ್‍ನವರೇ ಹೆಚ್ಚು ರಕ್ಷಣೆ ಕೊಡ್ತಾರೆ ಎಂದು ಟಾಂಗ್ ನೀಡಿದ್ದಾರೆ.

  • ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    – ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಇಳಿಕೆ
    – ವಾರ್ಷಿಕ ವರದಿಯಲ್ಲಿ ಆರ್‌ಬಿಐ ಮಾಹಿತಿ

    ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ.

    2019-20ರ ವಾರ್ಷಿಕ ವರದಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.

    2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿದೆ.

    2018ರ ಮಾರ್ಚ್‌ ಅಂತ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2 ಸಾವಿರ ರೂ. ನೋಟುಗಳ ಪಾಲು ಶೇ. 3.3ರಷ್ಟಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಈ ಪ್ರಮಾಣ ಶೇ.2.4ಕ್ಕೆ ಇಳಿದಿದೆ.

    ಮೌಲ್ಯದ ಆಧಾರದಲ್ಲಿ ನೋಡುವುದಾದರೆ 2018ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಪಾಲು ಶೇ.37.3 ರಷ್ಟಿತ್ತು. 2019ರಲ್ಲಿ ಇದು ಶೇ.31.2ಕ್ಕೆ ಇಳಿಕೆಯಾದರೆ ಮಾರ್ಚ್‌ 2020ರಲ್ಲಿ ಇದು ಶೇ.22.6ಕ್ಕೆ ಕುಸಿದಿದೆ.

    ವರದಿಯಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂದು ಹೇಳಿದೆ. 2018-19ರಲ್ಲಿ 500 ರೂ. ಮುಖಬೆಲೆಯ 1,147 ಕೋಟಿ ನೋಟುಗಳನ್ನು ಮುದ್ರಿಸಿದ್ದರೆ 2019-20ರಲ್ಲಿ ಇದು 1,200 ಕೋಟಿಗೆ ಏರಿಕೆಯಾಗಿದೆ.

    10, 50, 200, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 20, 100 ಮತ್ತು 2,000 ರೂಪಾಯಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

     

    ಹಿಂದೆಯೇ ಹೇಳಿತ್ತು:
    ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿತ್ತು.

    ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ.86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು.

  • ನೋಟು ನಿಷೇಧದ ಬಳಿಕ ಬಂಗಾರದ ಮೇಲೆ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್

    ನೋಟು ನಿಷೇಧದ ಬಳಿಕ ಬಂಗಾರದ ಮೇಲೆ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್

    – ಬಂಗಾರದ ಮೇಲೆ ಬೀಳುತ್ತೆ ಭಾರೀ ದಂಡ
    – ಕಪ್ಪುಹಣ ನಿಯಂತ್ರಣಕ್ಕೆ ಸರ್ಕಾರದ ಕ್ರಮ

    ನವದೆಹಲಿ: ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ.

    ಹೌದು. ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನು ನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆ.

    ಆದಾಯ ತೆರಿಗೆ ಅಮ್ನೆಸ್ಟಿ ಸ್ಕೀಂ ಮಾದರಿಯಲ್ಲಿ ಕೇಂದ್ರ ಸರ್ಕಾರವು ಗೋಲ್ಡ್ ಅಮ್ನೆಸ್ಟಿ ಸ್ಕೀಮ್ ತರಲಿದೆ. ಈ ಸ್ಕೀಂ ಪ್ರಕಾರ ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಈ ಚಿನ್ನವನ್ನು ಇಂತಿಷ್ಟು ಬೆಲೆ ತೆತ್ತು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

    ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ರೂಪಿಸಿದ್ದು ಆರಂಭದಲ್ಲಿ ಸರ್ಕಾರ ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ಈ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಹೊಂದಿದ್ದರೆ ಅದರ ವಿವರವನ್ನು ತೋರಿಸುವ ಅಗತ್ಯವಿಲ್ಲ. ಆದರೆ ಆ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಇದ್ದರೆ ಮೂಲವನ್ನು ತಿಳಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ನಂತರ ಸರ್ಕಾರವೇ ನಿಗದಿಪಡಿಸಿದ ದಂಡವನ್ನು ತೆತ್ತು ಈ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕಾಗುತ್ತದೆ.

    ಅಕ್ಟೋಬರ್ ಎರಡನೇ ವಾರದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯ ಬಗ್ಗೆ ನಿರ್ಧಾರ ಪ್ರಕಟವಾಗಬೇಕಿತ್ತು. ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ನಿಗದಿಯಾಗಿದ್ದರಿಂದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

    ಚಿನ್ನದ ಮೇಲೆ ತೆರಿಗೆ ಯಾಕೆ?
    ನೋಟು ನಿಷೇಧದ ಬಳಿಕ ಹಣಕಾಸು ವ್ಯವಹಾರಗಳಿಗೆ ಕಠಿಣ ನೀತಿಯನ್ನು ತರಲಾಗಿದ್ದು ಬ್ಯಾಂಕಿನಿಂದ ನಗದು ಡ್ರಾ ಮಾಡಲು ಮಿತಿ ಹೇರಲಾಗಿದೆ. ಅಷ್ಟೇ ಅಲ್ಲದೇ ಆನ್‍ಲೈನ್ ವ್ಯವಹಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವ್ಯವಹಾರಗಳು ದಾಖಲಾಗುತ್ತದೆ. ಇದರಿಂದ ಪಾರಾಗಲು ಕಪ್ಪು ಕುಳಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ವರ್ಷ ವರ್ಷ ಜಾಸ್ತಿ ಆಗುತ್ತಿರುವ ಕಾರಣ ಮತ್ತು ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಆಸ್ತಿ ಆಗಿದ್ದರಿಂದ ಇದರ ಮೇಲೆಯೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಚಿನ್ನದ ಆಭರಣ/ ಬಾರ್ ಗಳನ್ನು ಖರೀದಿಸುತ್ತಿದ್ದಾರೆ. ಚಿನ್ನ ನೀಡುವುದರ ಮೂಲಕವೂ ಭ್ರಷ್ಟಾಚಾರ ನಡೆಯುತ್ತದೆ. ಯಾರ ಬಳಿ ಎಷ್ಟು ಚಿನ್ನ ಇದೆ ಎನ್ನುವ ಮಾಹಿತಿಯೂ ಸರ್ಕಾರದ ಬಳಿ ಇಲ್ಲದ ಕಾರಣ ಕಪ್ಪು ಕುಳಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆದಾಗ ಕೆಜಿಗಟ್ಟಲೇ ಚಿನ್ನ ಇರುವುದು ಪತ್ತೆಯಾಗುತ್ತದೆ. ಹೀಗಾಗಿ ಅಕ್ರಮವಾಗಿ ಬಂದಿರುವ ಚಿನ್ನದ ಮೇಲೆ ನಿಗಾ ಇಡಲು ಸರ್ಕಾರ ಈಗ ತೆರಿಗೆ ಹೇರಲು ಮುಂದಾಗುತ್ತಿದೆ.

    ಗೊಂದಲವೂ ಇದೆ:
    ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಚಿನ್ನ ಸರ್ಕಾರ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿದ್ದರೆ ಅದು ಸಕ್ರಮವೋ? ಅಕ್ರಮವೋ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಸದ್ಯ ಸರ್ಕಾರ ಚಿನ್ನದ ಮೇಲೆ ತೆರಿಗೆ ವಿಧಿಸಲು ಮುಂದಾಗುತ್ತಿದೆ ಎನ್ನುವ ವಿಚಾರ ಮಾತ್ರ ಪ್ರಕಟವಾಗಿದ್ದು, ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ಯಾವ ರೀತಿ ಇರುತ್ತದೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

  • ಬೆಂಗ್ಳೂರು ಕಂಪನಿಯ ರಹಸ್ಯ ಮಾಹಿತಿ ಬಹಿರಂಗಕ್ಕೆ ಸ್ವಿಸ್ ಸರ್ಕಾರ ಒಪ್ಪಿಗೆ

    ಬೆಂಗ್ಳೂರು ಕಂಪನಿಯ ರಹಸ್ಯ ಮಾಹಿತಿ ಬಹಿರಂಗಕ್ಕೆ ಸ್ವಿಸ್ ಸರ್ಕಾರ ಒಪ್ಪಿಗೆ

    ನವದೆಹಲಿ/ಬೆರ್ನ್: ಕಪ್ಪುಹಣ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮತ್ತು ಚೆನ್ನೈ ಮೂಲದ 2 ಕಂಪನಿ ಹಾಗೂ ಮೂವರು ವ್ಯಕ್ತಿಗಳ ಕುರಿತ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಿಜರ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ.

    ಬೆಂಗಳೂರು ಮೂಲದ ಜಿಯೋಡೆಸಿಕ್ ಮತ್ತು ಚೆನ್ನೈ ಮೂಲದ ಆಧಿ ಕಂಪನಿ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದು, ಈ ಕಂಪನಿಗಳ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಕೇಳಿದ್ದರು. ಈ ಮಾಹಿತಿಯನ್ನು ನೀಡಲು ಸ್ವಿಸ್ ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.

    ಈ ಎರಡು ಕಂಪನಿಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಮಾಹಿತಿ ಬಹಿರಂಗಕ್ಕೆ ಫೆಡರಲ್ ತೆರಿಗೆ ವಿಭಾಗ ಸಮ್ಮತಿಸಿದೆ ಎಂದು ಸ್ವಿಸ್ ಸರ್ಕಾರ ಪ್ರತ್ಯೇಕ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.

    ಜಿಯೋಡೆಸಿಕ್ ಕಂಪನಿಯ ಮೂವರು ನಿರ್ದೇಶಕರಾದ ಪಂಕಜ್‍ಕುಮಾರ್ ಓಂಕಾರ್ ಶ್ರೀವಾತ್ಸವ, ಪ್ರಶಾಂತ್ ಶರದ್ ಮುಲೇಕರ್, ಕಿರಣಕ್ ಕುಲಕರ್ಣಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಸ್ವಿಸ್ ಅಧಿಕಾರಿಗಳು ಸಮ್ಮತಿಸಿದ್ದಾರೆ.

    ವೇಗವಾಗಿ ಪ್ರಗತಿ ಹೊಂದುತ್ತಿರುವ ಕಂಪನಿ ಎಂದು ಬಿಂಬಿಸಿಕೊಂಡಿದ್ದ ಜಿಯೋಡೆಸಿಕ್ ಕಂಪನಿಯ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಅಮಾನತಿನಲ್ಲಿ ಇಡಲಾಗಿದೆ. ಈ ಕಂಪನಿಯ ನಿರ್ದೇಶಕರನ್ನು ಸೆಬಿ, ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ ಮತ್ತು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಂತೆ ಪಂಕಜ್ ಕುಮಾರ್ ಜಿಯೋಡೆಸಿಕ್ ಕಂಪನಿಯ ಮುಖ್ಯಸ್ಥರಾಗಿದ್ದರೆ, ಕಿರಣ್ ಕುಲಕರ್ಣಿ ಆಡಳಿತ ನಿರ್ದೇಶಕ, ಪ್ರಶಾಂತ್ ಮುಲೇಕರ್ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

    ಚೆನ್ನೈ ಮೂಲದ ಆಧಿ ಎಂಟರ್ ಪ್ರೈಸಸ್ ಕಂಪನಿ 2014ರಲ್ಲಿ ಸ್ಥಾಪನೆಯಾಗಿದ್ದು, ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕಂಪನಿ ಎಂದು ಹೇಳಿಕೊಂಡಿತ್ತು. ಈ ಕಂಪನಿಯಲ್ಲಿ ಹಲವು ರಾಜಕಾರಣಿಗಳ ಪಾಲು ಇದೆ ಎಂಬ ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುಜರಾತ್‍ನಲ್ಲಿ 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆ

    ಗುಜರಾತ್‍ನಲ್ಲಿ 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆ

    ಗಾಂಧಿನಗರ: ಆದಾಯ ಘೋಷಣಾ ಯೋಜನೆ(ಐಡಿಎಸ್) ಅಡಿ ಗುಜರಾತಿನಲ್ಲಿ 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ ಎಂದು ಆದಾಯ ತೆರಿಗೆ ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದೆ.

    ಆರ್‌ಟಿಐ ಕಾರ್ಯಕರ್ತ ಭರತ್ಸಿನ್ಹ ಅವರು 2016ರ ಜೂನ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಗುಜರಾತಿನಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣ ಘೋಷಣೆಯಾಗಿದೆ ಎನ್ನುವ ಮಾಹಿತಿಯನ್ನು ಕೇಳಿದ್ದರು. ಈ ಪ್ರಶ್ನೆಗೆ ಐಟಿ ಐಡಿಎಸ್ ಅಡಿ ದೇಶದಲ್ಲಿ ಒಟ್ಟು 62,560 ಕೋಟಿ ರೂ. ಹಣ ಘೋಷಣೆಯಾಗಿದ್ದು, ಗುಜರಾತಿನಲ್ಲಿ ಒಟ್ಟು 18 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ. ಒಟ್ಟು ಘೋಷಣೆಯಾದ ಕಪ್ಪು ಹಣದ ಪೈಕಿ ಶೇ.29 ರಷ್ಟು ಹಣ ಗುಜರಾತಿನಲ್ಲಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದೆ.

    ಆರ್‌ಟಿಐ ಕಾರ್ಯಕರ್ತ ಭರತ್ಸಿನ್ಹ ಅವರು 2 ವರ್ಷದ ಹಿಂದೆ ಅಂದರೆ 2016 ಡಿಸೆಂಬರ್ 21 ರಂದು ಸರ್ಕಾರದ ಆದಾಯ ಘೋಷಣೆ ಯೋಜನೆ ಅಡಿ ಎಷ್ಟು ಪ್ರಮಾಣದ ಹಣ ಘೋಷಣೆಯಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಅರ್ಜಿಗೆ 2 ವರ್ಷದ ಬಳಿಕ ಐಟಿ ಉತ್ತರ ನೀಡಿದೆ.

    ಈ ಕುರಿತು ಸದ್ಯ ಮಾತನಾಡಿರುವ ಭರತ್ಸಿನ್ಹ ಅವರು, ನಾನು ಕೋರಿದ ಮಾಹಿತಿ ಪಡೆಯಲು 2 ವರ್ಷ ಕಾಲ ಹೋರಾಟ ನಡೆಸಬೇಕಾಯಿತು. ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ ವೇಳೆ ಅಧಿಕಾರಿಗಳು ಭಾಷೆಯ ಕಾರಣ ನೀಡಿ ತಿರಸ್ಕರಿಸಿದ್ದರು. ಬಳಿಕ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ಮಾಹಿತಿ ನೀಡುವಂತೆ ಸೆಪ್ಟೆಂಬರ್ 5 ರಂದು ದೆಹಲಿಯ ಮಾಹಿತಿ ಹಕ್ಕು ಮುಖ್ಯ ಆಯುಕ್ತರು ಮಾಹಿತಿ ನೀಡುವಂತೆ ಸೂಚಿಸಿದ್ದರು. ಸದ್ಯ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

    ಗುಜರಾತ್ ಉದ್ಯಮಿ ಮಹೇಶ್ ಶಾ ಬರೋಬ್ಬರಿ 13,860 ಕೋಟಿ ರೂ. ಕಪ್ಪು ಹಣ ಇರುವುದಾಗಿ ಘೋಷಣೆ ಮಾಡಿದ್ದರು. ಘೋಷಣೆ ಮಾಡಿದ ಬಳಿಕ ನಾಪತ್ತೆಯಾಗಿದ್ದ ಮಹೇಶ್ ರನ್ನು 2016ರ ಡಿಸೆಂಬರ್ 3ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು.

    2016ರ ನವೆಂಬರ್8 ರಂದು 500 ಮತ್ತು 1 ಸಾವಿರ ರೂ. ಮೌಲ್ಯದ ನೋಟುಗಳ ನಿಷೇಧಕ್ಕೂ ಮೊದಲು ಆದಾಯ ಘೋಷಣಾ ಯೋಜನೆಯನ್ನು ಜಾರಿಗೆ ತಂದಿತ್ತು. 2016ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ಅವಧಿ ಹೊಂದಿದ್ದ ಈ ಯೋಜನೆಯ ಅಡಿ ಒಟ್ಟು 67,382 ಕೋಟಿ ರೂ. ಅಕ್ರಮ ಆದಾಯ ಘೋಷಣೆ ಆಗಿತ್ತು. ಐಡಿಎಸ್ ಅಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಬೇರೆ ಯಾವುದೇ ಇಲಾಖೆಗೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.

    ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಕಪ್ಪುಕುಳಗಳಿಗೆ ತಮ್ಮಲ್ಲಿರುವ ಆದಾಯವನ್ನು ಸಕ್ರಮಗೊಳಿಸಲು ಕೊನೆಯ ಬಾಗಿಲು ಎನ್ನುವಂತೆ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆಯನ್ನು ಜಾರಿಗೆ ತಂದಿತ್ತು.  ಇದನ್ನು ಓದಿ: ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv