Tag: BL Santosh

  • ಬಿಎಸ್‍ವೈ ಕ್ಯಾಬಿನೆಟ್-ಅಮಿತ್ ಶಾ ಕೈ ಸೇರಿದ ಮೂರನೇ ಲಿಸ್ಟ್

    ಬಿಎಸ್‍ವೈ ಕ್ಯಾಬಿನೆಟ್-ಅಮಿತ್ ಶಾ ಕೈ ಸೇರಿದ ಮೂರನೇ ಲಿಸ್ಟ್

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ವಾರವೇ ಕಳೆದ್ರೂ, ಸಂಪುಟ ರಚನೆಯಾಗಿಲ್ಲ. ಆಗಸ್ಟ್ 7ರ ನಂತರವೇ ಸಂಪುಟ ರಚನೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೆ ಮೂರನೇ ಲಿಸ್ಟ್ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಪ್ರತ್ಯೇಕವಾಗಿ ಸಚಿವ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದ್ದರು. ಎರಡು ಪಟ್ಟಿಯಲ್ಲಿ ಕೆಲ ನಾಯಕರ ಹೆಸರಿತ್ತು, ಆದ್ರೆ ಕೆಲವರದ್ದು ಇರಲಿಲ್ಲ. ಇದೀಗ ಅಮಿತ್ ಶಾ ತಮ್ಮ ಆಪ್ತ ಮೂಲಗಳಿಂದ ಸಿದ್ಧಪಡಿಸಿಕೊಂಡಿರುವ ಮೂರನೇ ಪಟ್ಟಿಯನ್ನು ತರಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

     

    ಓರ್ವ ನಾಯಕ ಸಚಿವ ಆಗಬೇಕೆಂದ್ರೆ ಮೂರರ ಪೈಕಿ ಎರಡು ಪಟ್ಟಿಯಲ್ಲಿ ಹೆಸರು ಇರಬೇಕು ಎಂಬ ತೀರ್ಮಾನಕ್ಕೆ ಅಮಿತ್ ಶಾ ಬಂದಿದ್ದಾರಂತೆ. ಬುಧವಾರ ಈ ಮೂರು ಲಿಸ್ಟ್ ಜೊತೆ ಅಮಿತ್ ಶಾ ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ.

    ಬಿ.ಎಸ್.ಯಡಿಯೂರಪ್ಪ ಲಿಸ್ಟ್!:
    ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ, ಅಶ್ವಥ್ ನಾರಾಯಣಗೌಡ, ಅರವಿಂದ್ ಲಿಂಬಾವಳಿ, ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್,ಬಾಲಚಂದ್ರಜಾರಕಿಹೊಳಿ, ಶಿವನಗೌಡ ನಾಯಕ್, ಎನ್.ರವಿಕುಮಾರ್, ಸುರೇಶ್‍ಕುಮಾರ್, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ

    ಬಿ.ಎಲ್. ಸಂತೋಷ್ ಲಿಸ್ಟ್!:
    ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ,1 ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ನಾಗೇಶ್, ಶಶಿಕಲಾ ಜೊಲ್ಲೆ, ಮಾಧುಸ್ವಾಮಿ, ಉಮೇಶ್ ಕತ್ತಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್, ಬಾಲಚಂದ್ರ ಜಾರಕಿಹೊಳಿ, ಸಿ.ಟಿ.ರವಿ, ಎಸ್.ಎ.ರವೀಂದ್ರನಾಥ್, ಸಿ.ಎಂ.ಉದಾಸಿ, ಎಂ.ಪಿ.ಕುಮಾರಸ್ವಾಮಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್

  • ಚುನಾವಣೆ ವೇಳೆ ಬಿಎಲ್ ಸಂತೋಷ್ ಹೇಳಿದ್ದ ಮಾತು ನಿಜವಾಯ್ತು

    ಚುನಾವಣೆ ವೇಳೆ ಬಿಎಲ್ ಸಂತೋಷ್ ಹೇಳಿದ್ದ ಮಾತು ನಿಜವಾಯ್ತು

    ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನೀಡಿದ್ದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಾಗಲಕೋಟೆಯ ಜಮಖಂಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಎರಡು ಸರ್ಕಾರ ಬರಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದರೆ, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದರು.

    ರಾಜ್ಯದಲ್ಲಿ 10 ರೂಪಾಯಿ ಹಾಕಿ 20 ರೂ. ಪಡೆಯುವ ಕಾಲ ಇದಾಗಿದ್ದು, ಯಾವಾಗಲೂ ಮತ ಹಾಕಿದರೆ ಒಂದು ಸರ್ಕಾರ ಬರುತಿತ್ತು. ಆದರೆ ಈ ಬಾರಿ ಒಂದು ಸೀರೆ ಕೊಂಡರೆ ಎರಡು ಖಚಿತ ಎಂಬಂತೆ ಎರಡು ಸರ್ಕಾರ ಬರಲಿದೆ ಎಂದಿದ್ದರು. ಅಲ್ಲದೇ ಈ ಮಾತನ್ನು ನಾನು ಮಾತ್ರ ಹೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ವೀರಪ್ಪ ಮೊಯ್ಲಿ ಅವರು ಕೂಡ ಹೇಳಿದ್ದು, ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಮೈತ್ರಿ ಸರ್ಕಾರ ಬೀಳಲಿದೆ ಎಂಬುದಾಗಿ ಹೇಳಿದ್ದಾರೆ. ಈ ಮಾತನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹೇಳಬೇಕು. ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಭಾಷಣ ಮಾಡಿದ್ದರು.

    ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ವಿಶ್ವಾತ ಮತ ಸಾಬೀತು ಪಡಿಸಲು ವಿಫಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಬಿಎಸ್ ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಎಲ್ ಸಂತೋಷ್ ಅವರ ಅಂದು ಹೇಳಿದ ಮಾತು ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಮಲಾಲ್ ಅವರ ರಾಜೀನಾಮೆಯಿಂದ ತೆರವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಕೆಲ ದಿನಗಳ ಹಿಂದೆ ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದರು.

    ರಾಮಲಾಲ್ ಅಡಿಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಸತೀಶ್ ಈಗ ಅವರ ಸ್ಥಾನ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಅವರಿಗೆ ಮಣೆ ಹಾಕಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸಂಘಟಿಸುವ ಉದ್ದೇಶದಿಂದ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಟ್ವೀಟ್ ಮೂಲಕ ಸ್ಪೀಕರ್, ಮೈತ್ರಿ ನಾಯಕರ ಕಾಲೆಳೆದ ಬಿ.ಎಲ್.ಸಂತೋಷ್

    ಟ್ವೀಟ್ ಮೂಲಕ ಸ್ಪೀಕರ್, ಮೈತ್ರಿ ನಾಯಕರ ಕಾಲೆಳೆದ ಬಿ.ಎಲ್.ಸಂತೋಷ್

    ಬೆಂಗಳೂರು: ಬಿಎಸ್‍ಪಿ ಪಕ್ಷದ ಶಾಸಕ ಎನ್ ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸ್ಪೀಕರ್ ಮತ್ತು ಮೈತ್ರಿ ನಾಯಕರನ್ನು ಕಾಲೆಳೆದಿದ್ದಾರೆ.

    ಇಂದು ಟ್ವೀಟ್ ಮಾಡಿರುವ ಸಂತೋಷ್, ಬಿಎಸ್‍ಪಿ ಪಕ್ಷದ ಶಾಸಕ ಎನ್. ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಖ್ಯೆ ಕಡಿಮೆಯಾಗಿದೆ. ಸ್ಪೀಕರ್ ಮತ್ತು ಮೈತ್ರಿ ನಾಯಕರು ಈಗಲೂ ನಾಳೆ ಆಗೋದನ್ನು ಮುಂದೂಡಬಲ್ಲರೇ ಎಂದು ವ್ಯಂಗ್ಯವಾಡಿದ್ದಾರೆ.

    ಈ ಹಿಂದೆ ಯಾರಿಗೂ ಬೆಂಬಲ ನೀಡದಿರುವಂತೆ ಮಾಯಾವತಿ ಅವರು ಸೂಚಿಸಿದ್ದು, ಹೀಗಾಗಿ ಯಾವ ಪಕ್ಷಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ಎನ್ ಮಹೇಶ್ ಹೇಳಿದ್ದರು. ಇದಾದ ಬಳಿಕ ಸದನ ಆರಂಭವಾಗುವುದಕ್ಕೂ ಮುನ್ನಾದಿನ ಪ್ರತಿಕ್ರಿಯೆ ನೀಡಿ, ನಿಮ್ಮ ಇಷ್ಟ ಯಾರಿಗಾದರೂ ಬೆಂಬಲ ನೀಡಿ ಎಂದು ಮಾಯಾವತಿ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುತ್ತೇನೆ ಎಂದಿದ್ದರು.

    ಈಗ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗುತ್ತದೆ ಎಂಬ ಕಾರಣಕ್ಕೆ ಹಿಂದೆ ಸರಿದಿರುವ ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದು, ಹೀಗಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಎರಡು ದಿನ ನನಗೆ ಖಾಸಗಿ ಕೆಲಸ ಇದ್ದಿದರಿಂದ ಹೀಗಾಗಿ ಸದನಕ್ಕೆ ಹೋಗಿರಲಿಲ್ಲ. ನಾಳೆಯೂ ಸಹ ಕ್ಷೇತ್ರದಲ್ಲಿ ಖಾಸಗಿ ಕೆಲಸವಿದ್ದು, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಬಿಜೆಪಿಯಲ್ಲಿ  ಆರ್‌ಎಸ್‌ಎಸ್ ಸಂತೋಷ್ ಹಿಡಿತ – ಬಿಎಸ್‍ವೈ ಮಾತಿಗೆ ಬೆಲೆ ಇಲ್ಲ: ಬೇಳೂರು ಗೋಪಾಲಕೃಷ್ಣ

    ಬಿಜೆಪಿಯಲ್ಲಿ ಆರ್‌ಎಸ್‌ಎಸ್ ಸಂತೋಷ್ ಹಿಡಿತ – ಬಿಎಸ್‍ವೈ ಮಾತಿಗೆ ಬೆಲೆ ಇಲ್ಲ: ಬೇಳೂರು ಗೋಪಾಲಕೃಷ್ಣ

    ಶಿವಮೊಗ್ಗ: ಬಿಜೆಪಿಯಲ್ಲಿ ಆರ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಿಡಿತ ಶುರುವಾಗಿದ್ದು, ಯಡಿಯೂರಪ್ಪ-ಶೋಭಾಗೆ ಬೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಪ್ರಧಾನಿ ಮೋದಿ ಹೆಸರಲ್ಲಿ ಬಿಎಸ್‍ವೈ ಮತ ಕೇಳಿದ್ದು, ತಮ್ಮ ಅಸ್ತಿತ್ವ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಸಂತೋಷ್ ಜೀ ಅವರ ಹಿಡಿತ ಶುರುವಾಗಿದ್ದು, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

    ನನಗೆ ಮೋಸ ಮಾಡಿದವರಿಗೆ ಅಧಿಕಾರ ಸಿಗಬಾರದು ಎಂದು ನಾನು ಬಯಸಿದ್ದೆ. ಇಂದು ನನ್ನ ಹರಕೆಯಂತೆಯೇ ಆಗಿದೆ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತೆ ಎಂಬ ಮಾತು ಕೇಳಿ ಕಳೆದ ವರ್ಷದಿಂದ ಕೇಳಿ ಕೇಳಿ ಸಾಕಾಗಿದ್ದು, ಇವರಿಗೆ ಭ್ರಮೆ ಅಷ್ಟೇ ಎಂದರು. ಅಲ್ಲದೇ ಚುನಾವಣೆ ಬಳಿಕ ಸರ್ಕಾರ ಗಟ್ಟಿಯಾಗಿ ನಿಲ್ಲಲಿದ್ದು, ನೀತಿ ಸಂಹಿತೆಯ ಕಾರಣಗಳಿಂದ ಸರ್ಕಾರದ ಪ್ರಗತಿ ಕುಂಠಿತ ಆಗುತ್ತಿದೆ ಎಂದು ತಿಳಿಸಿದರು.

    ಬಿಜೆಪಿ ಕೈಗೊಂಬೆಯಾದ ಡಿಸಿ: ಜಿಲ್ಲೆಯಲ್ಲಿ ಬಿಜೆಪಿ ತಾಳಕ್ಕೆ ತಕ್ಕಂತೆ ಜಿಲ್ಲಾಧಿಕಾರಿಗಳು ಕುಣಿಯುತ್ತಿದ್ದಾರೆ. ಅವರಿಗೆ ನಮ್ಮ ಸರ್ಕಾರ ಇದೆ ಎಂಬುದು ಮರೆತು ಹೋಗಿದೆ. ಬಿಜೆಪಿ ಶಾಸಕರಿಗೆ ಭಯಪಟ್ಟಿರುವ ಜಿಲ್ಲಾಧಿಕಾರಿಗಳು ಅವರ ಕೈಗೊಂಬೆ ಆಗಿದ್ದು, ಆ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಸಾಗರ ಶಾಸಕರು ಮರಳು ದಂಧೆ ನಡೆಸಲು ಹೊರಟ್ಟಿದ್ದರು. ಅಲ್ಲದೇ ಒಂದು ಲಾರಿಗೆ ಹತ್ತು ಸಾವಿರ ಕೇಳಿದ್ದರು. ಇದು ಸಾಧ್ಯವಾಗದೆ ಇದ್ದಾಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂಥ ಶಾಸಕರನ್ನ ಇದೂವರೆಗೂ ನಾನು ನೋಡಿರಲಿಲ್ಲ. ಹಾಲಪ್ಪ ಅವರ ಸಹೋದರರ ಮಕ್ಕಳು ಈಗಲೂ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿ ಕಳ್ಳತನದಿಂದ ಮರಳು ಹೊಡೆಯುತ್ತಿದ್ದಾರೆ. ಆದ್ದರಿಂದ ಇದರ ವಿರುದ್ಧ ಪ್ರತಿಭಟನೆ ನಡೆಸಲು ಮೇ 23ರ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದರು.

  • ಬಿಎಸ್‍ವೈ ಪುತ್ರನಿಗೆ ಯಾವ ಡಿಎನ್‍ಎ ನೋಡಿ ಟಿಕೆಟ್ ಕೊಟ್ರು: ದಿನೇಶ್ ಗುಂಡೂರಾವ್ ಪ್ರಶ್ನೆ

    ಬಿಎಸ್‍ವೈ ಪುತ್ರನಿಗೆ ಯಾವ ಡಿಎನ್‍ಎ ನೋಡಿ ಟಿಕೆಟ್ ಕೊಟ್ರು: ದಿನೇಶ್ ಗುಂಡೂರಾವ್ ಪ್ರಶ್ನೆ

    – ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ
    – ಬಿಜೆಪಿಯವರು ಸತ್ಯಹರಿಶ್ಚಂದ್ರರೇ?

    ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರಿಗೆ ಯಾವ ಡಿಎನ್‍ಎ ನೋಡಿ ಶಿವಮೊಗ್ಗದಲ್ಲಿ ಟಿಕೆಟ್ ನೀಡಿದ್ದಾರೆ? ಹಾವೇರಿಯಲ್ಲಿ ಯಾರ ಜೀನ್ಸ್ ನೋಡಿ ಶಿವಕುಮಾರ್ ಉದಾಶಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ? ಇದಕ್ಕೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಬಿ.ಎಲ್.ಸಂತೋಷ್ ಡಿಎನ್‍ಎ ಹಾಗೂ ಜೀನ್ಸ್ ಹೇಳಿಕೆ ನೀಡಬಾರದಿತ್ತು ಎಂದರು.

    ಐಟಿ ದಾಳಿ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೋಲುವ ಭೀತಿಯಿಂದಾಗಿ ಆದಾಯ ತೆರಿಗೆ ಇಲಾಖೆ ರೇಡ್ ಗಳನ್ನು ಮಾಡಿಸುತ್ತಿದ್ದಾರೆ. ದೇಶದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳು ನಡೆಯುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

    ಬಿಜೆಪಿಯವರು ಸತ್ಯಹರಿಶ್ಚಂದ್ರರೇ? ಅವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ. ಅವರು ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರು ಹಾಗೂ ಆಪ್ತರ ಮನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಈ ರೀತಿಯ ಬೆಳವಣಿಗೆ ಯಾವತ್ತೂ ನಡೆದಿರಲಿಲ್ಲ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅವರು ಕೂಡ ಯಾವುದೇ ಕ್ರಮಕೈಗೊಂಡಿಲ್ಲ. ಐಟಿ ದಾಳಿಯಿಂದಾಗಿ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಹೀಗಾಗಿ ಅವರು ಪ್ರಚಾರ ಮಾಡುತ್ತಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ನನ್ನ ಗಮಕ್ಕೆ ಬಂದಿದೆ. ಚುನಾವಣೆಯ ಬಳಿಕ ಈ ಕುರಿತು ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.

  • ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್‍ವೈ

    ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್‍ವೈ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಬಿಎಲ್ ಸಂತೋಷ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಜೀನ್ಸ್, ಡಿಎನ್‍ಎ ನೋಡಿ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಮಾಡುವುದಿಲ್ಲ ಎಂದು ಉತ್ತರಿಸಿದ್ದರು. ಸಂತೋಷ್ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮಗಳು ಕೇಳಿದ್ದಕ್ಕೆ, ನಾನು ಆ ಬಗ್ಗೆ ಯಾವುದೇ ರಿಯಾಕ್ಟ್ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

    ತೇಜಸ್ವಿನಿ ಅನಂತಕುಮಾರ್ ಅವರ ಒಂದೇ ಹೆಸರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಅನಂತ್ ಕುಮಾರ್ ಅವರ ಸೇವೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಯಾರೇ ದೆಹಲಿಗೆ ಹೋದರೂ ಅವರ ಕೆಲಸವನ್ನು ಅವರು ಮಾಡಿ ಕೊಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ. ತೇಜಸ್ವಿ ಸೂರ್ಯ ಅವರನ್ನು ಸಹ ದೊಡ್ಡ ಅಂತರದಲ್ಲಿ ಗೆಲ್ಲಿಸಲಾಗುವುದು ಎಂದು ಹೇಳಿದರು.

    ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಚುನಾವಣೆಯಲ್ಲಿ ಎಲ್ಲರನ್ನು ಉಪಯೋಗಿಸಿಕೊಂಡು ಗೆಲುವು ಸಾಧಿಸಲಾಗುವುದು ಎಂದು ತಿಳಿಸಿದರು.

    ನಮ್ಮ ಪಕ್ಷ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆದ್ದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ಈಗಲೇ ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಡಿದಾಟ ಆರಂಭವಾಗಿದೆ. ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಬಿಎಸ್‍ವೈ ವಿಶ್ವಾಸ ವ್ಯಕ್ತಪಡಿಸಿದರು.

  • #BlackDayforHindus – ಕೇರಳ ಸರ್ಕಾರದ ವಿರುದ್ಧ ಬಿಎಲ್ ಸಂತೋಷ್ ಕಿಡಿ

    #BlackDayforHindus – ಕೇರಳ ಸರ್ಕಾರದ ವಿರುದ್ಧ ಬಿಎಲ್ ಸಂತೋಷ್ ಕಿಡಿ

    ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿರುವ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೇ ವೇಳೆ ದೇವಾಲಯದ ಪ್ರವೇಶಿಸಿದ ಮಹಿಳೆಯರ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಿಡಿಕಾರಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಸಂತೋಷ್ ಅವರು, ದೇವಾಲಯ ಪ್ರವೇಶಿಸಿರುವ ಮಹಿಳೆಯರು, ನಿಜವಾದ ಅಯ್ಯಪ್ಪ ಭಕ್ತರಲ್ಲ. ಹಿಂದೂ ಪರಂಪರೆ ಹಾಗೂ ಧರ್ಮ ಒಪ್ಪುವವರು ಅಲ್ಲ. ಅಲ್ಲದೇ ಮಹಿಳೆಯರ ಪರ ಪ್ರಾಮಾಣಿಕವಾಗಿ ವಾದವನ್ನು ಮಂಡಿಸುವವರು ಅಲ್ಲ ಎಂದು ತಿಳಿಸಿದ್ದಾರೆ.

    ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರು ಮಾವೋವಾದಿಗಳಾಗಿದ್ದು, ಭಾರತದ ವೈವಿಧ್ಯತೆಯ ವಿರೋಧಿಗಳು ಹಾಗೂ ಧರ್ಮವನ್ನು ಅಫೀಮು ಎನ್ನುವವರಾಗಿದ್ದಾರೆ. ಅಲ್ಲದೇ ಭಾರತವನ್ನು ಒಡೆಯುವವರು ಮತ್ತು ಸರ್ವಾಧಿಕಾರಿ ಪ್ರಿಯರು ಎಂದು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ಶಬರಿಮಲೆ ದೇವಾಲಯದ ಒಳಗೆ ಸಿಪಿಐ(ಎಂ) ಕಾರ್ಯಕರ್ತರು ಪ್ರವೇಶ ಮಾಡಲು ಕೇರಳ ಸರ್ಕಾರ ಬೆಂಬಲ ನೀಡಿದೆ ಎಂದು ಆರೋಪಿಸಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಐತಿಹಾಸಿಕ ಎಂಬಂತೆ ಬಿಂಬಿಸಿರುವ ಮಾಧ್ಯಮಗಳ ವಿರುದ್ಧವೂ ಸಂತೋಷ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!

    ಅಲ್ಲದೇ ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರಿಗೆ ಭ್ರದತೆ ನೀಡುವ ದೃಷ್ಟಿಯಿಂದ ಕೇರಳ ಪೊಲೀಸರು ಬೇರೆ ಅವರನ್ನು ಕರೆದ್ಯೊಯುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಇದು ಮಹಿಳೆಯರಿಗೆ ನೀಡಿರುವ ಹಕ್ಕು ಮತ್ತು ಸಮಾನತೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯ ಪ್ರವೇಶಿಸಿದ ಮಹಿಳೆಯರು ಸಿಪಿಎಂ ಕಾರ್ಯಕರ್ತೆಯರಾಗಿದ್ದಾರೆ ಎಂದು ಹೇಳಿ #SaveSabarimala, #BlackDayforHindus ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಓದಿ:  ಮಹಿಳೆಯರ ಪ್ರವೇಶದಿಂದ ಮುಚ್ಚಲಾಗಿದ್ದ ಶಬರಿಮಲೆ ದೇವಾಲಯ ಮತ್ತೆ ಓಪನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ V/S ಬಿಎಲ್‍ಎಸ್- ವರದಿ ರೂಪಿಸಲು ನೂತನ ಕಾರ್ಯದರ್ಶಿಯನ್ನು ನೇಮಿಸಿದ ಹೈಕಮಾಂಡ್

    ಬಿಎಸ್‍ವೈ V/S ಬಿಎಲ್‍ಎಸ್- ವರದಿ ರೂಪಿಸಲು ನೂತನ ಕಾರ್ಯದರ್ಶಿಯನ್ನು ನೇಮಿಸಿದ ಹೈಕಮಾಂಡ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ನಡುವಿನ ಮುಸುಕಿನ ಗುದ್ದಾಟ ವಿಚಾರಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ವರದಿ ಕಳುಹಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಯಾದವ್ ಅವರನ್ನು ಬಿಜೆಪಿ ಹೈಕಮಾಂಡ್ ನೇಮಿಸಿದೆ.

    ಬಿಜೆಪಿ ಅಧ್ಯಕ್ಷರ ಗಮನಕ್ಕೆ ತರದೆ ರಾಜ್ಯ ಬಿಜೆಪಿ ಸ್ಥಿತಿ ವರದಿ ತರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ವಾಸ್ತವ ಪರಿಸ್ಥಿತಿ ಬಗ್ಗೆ ವರದಿ ನೀಡಲು ಹೈಕಮಾಂಡ್ ಶಿವಪ್ರಕಾಶ್ ಅವರನ್ನು ನೇಮಕ ಮಾಡಿದೆ. ಹೀಗಾಗಿ ಇಂದಿನಿಂದ ಶಿವಪ್ರಕಾಶ್ ಯಾದವ್ ಮೂರು ದಿನಗಳ ರಾಜ್ಯ ಪ್ರವಾಸ ನಡೆಸಿ ವರದಿ ತಯಾರಿಸಲಿದ್ದಾರೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

    ಸಂತೋಷ್ 2018 ರ ವಿಧಾನಸಭೆ ಚುನಾವಣೆ ಹಿನ್ನೆಲೆ ವಾಸ್ತವ ಪರಿಸ್ಥಿತಿ ಬಗ್ಗೆ ಈಗಾಗಲೇ ವರದಿ ನೀಡಿದ್ದಾರೆ. ಆದರೆ ಸಂತೋಷ್ ರ ಕಾರ್ಯವೈಖರಿ ಬಗ್ಗೆ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದರಿಂದ ಎಲ್ಲರೂ ಒಪ್ಪುವ ಸಂಘಟನಾ ಕಾರ್ಯದರ್ಶಿಯಿಂದ ವರದಿ ತರಿಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‍ಗೆ ಈಗಾಗಲೇ ಸಂತೋಷ್ ವರದಿ ನೀಡಿದ್ರು ಮತ್ತೊಂದು ವರದಿ ತರಿಸಿಕೊಳ್ಳುವ ಹೈಕಮಾಂಡ್ ಪ್ರಯತ್ನ ನಡೆಸುತ್ತಿದೆ.

    ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಅಕ್ಟೋಬರ್ 22ರಂದು ಮಂಗಳೂರು, 23 ರಂದು ಮೈಸೂರು ವಿಭಾಗ, ಹಾಗೂ 24 ರಂದು ಬೆಂಗಳೂರು ವಿಭಾಗದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿಯ ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದು, ಈ ಸಭೆಯಲ್ಲಿ ಸಂಪೂರ್ಣವಾಗಿ ಚುನಾವಣೆ ಸಿದ್ಧತೆಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

    ಯಾರು ಈ ಬಿಎಲ್ ಸಂತೋಷ್?: ಬಿಜೆಪಿ ಹಾಗೂ ಸಂಘ ಪರಿವಾರದ ಮಂದಿ ಇವರನ್ನು ಸಂತೋಷ್ ಜಿ ಎಂದೇ ಗೌರವಿಸುತ್ತಾರೆ. ಸದ್ಯ ಇವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ. ಇದರ ಜತೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಪಕ್ಷದ ಸಂಘಟನೆಯ ಹೊಣೆ ಇವರ ಮೇಲಿದೆ. ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೊತೆ ಇವರಿಗೆ ನಿಕಟ ಸಂಬಂಧವಿದೆ.

    ಸಂತೋಷ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ. ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಕೇಶವ ಬಲಿರಾಂ ಹೆಡಗೇವಾರ್ ಅವರ ಆದರ್ಶ, ಆಶಯಗಳನ್ನು ಮೈಗೂಡಿಸಿಕೊಂಡು ಬಂದಿರುವ ಇವರು ಸಂಘದ ಅಪ್ಪಟ ಕಾರ್ಯಕರ್ತರ ಜೀವನ ಶೈಲಿ ರೂಢಿಸಿಕೊಂಡಿದ್ದಾರೆ.

    ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಮುಗಿಸುತ್ತಲೇ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ಜೀವನ ಆರಂಭಿಸಿದರು. ಬಳಿಕ ಮೈಸೂರು ನಗರದ ಪ್ರಚಾರಕರಾಗಿ ಕೆಲಸ ಮಾಡಿ, ಸಂಘವನ್ನು ಕಟ್ಟಿ ಬೆಳೆಸಿದ್ದರು. ಸಂಘ ಪರಿವಾರದ ಗರಡಿಮನೆಯಂತಿರುವ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ.