Tag: BL Santosh

  • ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಒಂದು ರುಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ ಎಂದು ಬಿಜೆಪಿ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ನಡೆದು ಫಲಿತಾಂಶ ಬಂದಿದೆ. ಬುದ್ಧಿವಂತರ ಚುನಾವಣೆ ಮಾದರಿ ಎಂದೆಲ್ಲಾ ಇವರಿಗೆ ಬಿಂಬಿತವಾದ ಪರಿಷತ್ ಚುನಾವಣೆಗೆ ಕೋಟಿ ಕೋಟಿ ರೂಪಾಯಿ ಹಣದ ಹೊಳೆ ಹರಿದ ಬಗ್ಗೆ ಜಿಲ್ಲಾ ಮಟ್ಟದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡ ಸಂತೋಷ್ ಅವರು ಖೇದ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು, ಮತಗಳು, ಮತ ಹಾಕಿದ ಪ್ರತಿನಿಧಿಗಳು ಖರೀದಿಯಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

    ದ.ಕ-ಉಡುಪಿ ಶೇ.99 ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಬೇಕು. ನಾವು ಮಾರಾಟಕ್ಕಿಲ್ಲ, ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರಿಗೆ ಈ ಬದ್ಧತೆ ಬೇಕು ಎಂದು ಕರೆ ನೀಡಿದರು.

    ಕೆಲ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಪರಿಷತ್ತಿನ ಚುನಾವಣೆಗೆ ಖರ್ಚಾಗಿದೆ. ಆಮಿಷಗಳಿಗೆ ಮಣಿದು ಜನಪ್ರತಿನಿಧಿಗಳು ಮತ ಚಲಾವಣೆ ಮಾಡಿರುವುದು ಜಗಜ್ಜಾಹೀರಾಗಿದೆ. ದ.ಕ ಉಡುಪಿ ಬಿಜೆಪಿ ಅಭ್ಯರ್ಥಿ ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೆಸರು ಉಲ್ಲೇಖ ಮಾಡದೇ ವಿಷಯ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ವಿಧಾನ ಪರಿಷತ್ ರದ್ದು ಗೊಳಿಸುವ ಸಮಯ ಬಂದಿದೆಯಲ್ಲವೇ? ಅಂತ ಪಕ್ಷದ ಹಿರಿಯ ಮತ್ತು ಸಂವೇದನೆ ಇರುವ ಕಾರ್ಯಕರ್ತರೊಬ್ಬರು ನನ್ನನ್ನು ಪ್ರಶ್ನಿಸಿದರು. ದ.ಕನ್ನಡದ ಉಡುಪಿ ಜಿಲ್ಲೆಯಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರೂ ವೋಟ್ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬನಿಗೆ ಇರಬೇಕಾದ ಅತಿ ದೊಡ್ಡ ಗುಣ ಎಂದು ಹೇಳಿದರು.

  • ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ಶಬ್ಬೀರ್ ನಿಡಗುಂದಿ
    ನವದೆಹಲಿ: ಅಣ್ಣಾಮಲೈ ಬಳಿಕ ರಾಜ್ಯದ ಮತ್ತೊಬ್ಬ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶೀಘ್ರದಲ್ಲಿ ಬಿಜೆಪಿ ಸೇರುವ ತಯಾರಿಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಉನ್ನತ ಹುದ್ದೆಯ ಕನಸು ಕಂಡು ಹಗಲಿರುಳು ಓದಿ ದಕ್ಕಿಸಿಕೊಂಡ ಐಎಎಸ್, ಐಪಿಎಸ್ ನಂತಹ ಉನ್ನತ ಸ್ಥಾನಗಳನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದೊಂದು ಟ್ರೆಂಡ್ ಶುರುವಾಗಿದ್ದು ಯುವ ಅಧಿಕಾರಿಗಳು ರಾಜಕೀಯದತ್ತ ಮುಖ ಮಾಡಿದ್ದು ಈಗ ಚನ್ನಣ್ಣನವರ್ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವಿಚಾರವನ್ನು  ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್‍ರನ್ನ ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ. ಈ ಬಗ್ಗೆ ಪ್ರಾಥಮಿಕ ಮಾತುಕತೆಗಳು ನಡೆಯುತ್ತಿದ್ದು ರವಿ ಡಿ ಚನ್ನಣ್ಣನವರ್ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

    ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ. ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆಗೂ ಮುನ್ನ ಮಹೇಶ್ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ರವಿ ಚನ್ನಣ್ಣನವರ್ ಕೂಡಾ ಇದ್ದರು ಎಂದು ಮೂಲಗಳು ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸಭೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

     

    ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ರವಿ ಚನ್ನಣ್ಣನವರ್ ಕೂಡಾ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಅಣ್ಣಾಮಲೈ ದಾರಿ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲೂ ಜನಪ್ರಿಯ ಅಧಿಕಾರಿಗಳಿಗೆ ಆದ್ಯತೆ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದು ವರ್ಚಸ್ಸು ಹೆಚ್ಚಿಸುವ ಲೆಕ್ಕ ಲೆಕ್ಕಚಾರದಲ್ಲಿ ಇದೆಯಂತೆ.

    ರಾಜ್ಯದ ಮಟ್ಟಿಗೆ ರವಿ ಡಿ ಚನ್ನಣ್ಣನವರ್ ಪ್ರಖ್ಯಾತಿ ಪಡೆದಿದ್ದು ಸಿಂಗಂ ಎಂದು ಕರೆಸಿಕೊಳ್ಳುತ್ತಿದ್ದಾರೆ. ಗದಗ ಮೂಲದ ಈ ಐಪಿಎಸ್ ಅಧಿಕಾರಿಯನ್ನು ರಾಜ್ಯದ ದೊಡ್ಡ ಪ್ರಮಾಣದ ಯುವ ಸಮುದಾಯದ ಸ್ಫೂರ್ತಿಯಾಗಿಸಿಕೊಂಡಿದ್ದು ಮುಂದಿನ ಚುನಾವಣೆಗೆ ಇವರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಲೆಕ್ಕಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ.

  • ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

    ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

    ಸುಕೇಶ್ ಡಿ.ಎಚ್
    ದಣಿವರಿಯದ ನಾಯಕನಿಗೆ ಸಾಕಿನ್ನು ನೀವು ದಣಿವಾರಿಸಿಕೊಳ್ಳಿ ಎನ್ನಲು ಸಿದ್ಧತೆ ಆರಂಭವಾಗಿದೆ. ಆದರೆ ಅದನ್ನ ಹೇಳೋದು ಹೇಗೆ ಅನ್ನೋದೆ ಸದ್ಯದ ಗೊಂದಲ. ದೆಹಲಿ ನಾಯಕರಿಗೆ ಹೇಳುವ ಮನಸ್ಸಿದೆ. ರಾಜ್ಯ ನಾಯಕರುಗಳಿಗೆ ಆ ಬೆಳವಣಿಗೆಯ ನಂತರದ ಆಗು ಹೋಗುಗಳ ಬಗ್ಗೆ ತರಾವರಿ ಕನಸುಗಳಿವೆ, ಆಸೆಗಳಿವೆ, ಅರ್ಹತೆಗೂ ಮೀರಿದ ನಿರೀಕ್ಷೆಗಳಿವೆ.ಹೌದು ಇದು ದಣಿವರಿಯದ ನಾಯಕ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರನ್ನ ಮಾಜಿ ಮುಖ್ಯಮಂತ್ರಿ ಮಾಡಲು ಪಕ್ಷದ ಮಟ್ಟದಲ್ಲಿ ಆರಂಭವಾಗಿರುವ ಸಿದ್ಧತೆಯ ಸ್ಯಾಂಪಲ್. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಖಾತೆ ತೆರೆಯಲು ಬಿಜೆಪಿ ಈಗಲು ಹೆಣಗಾಡುತ್ತಿದೆ. ಆದರೆ ರಾಜ್ಯದ ಮಟ್ಟಿಗೆ ಹೇಳುವುದಾದರೆ ಒಂದುವರೆ ದಶಕದ ಹಿಂದೆಯೇ ಕರ್ನಾಟಕದ ಬಾಗಿಲು ಬಿಜೆಪಿಗೆ ತೆರೆದುಕೊಂಡಿತ್ತು. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ವಾಜಪೇಯಿ, ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ ಹೀಗೆ ಬೇರೆ ಬೇರೆ ಹೆಸರುಗಳು ಆಯಾ ಕಾಲ ಘಟ್ಟದಲ್ಲಿ ಮುನ್ನಲೆಗೆ ಬಂದಿರಬಹುದು. ಆದರೆ ಕಳೆದ 3-4 ದಶಕದಿಂದ ರಾಜ್ಯ ಬಿಜೆಪಿ ಪಾಲಿಗೆ ರೇಸ್‍ನಲ್ಲಿ ಇರುವ ಏಕೈಕ ಹೆಸರು ಯಡಿಯೂರಪ್ಪ ಮಾತ್ರ. ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯ ಅನಂತ ಕುಮಾರ್, ಈಶ್ವರಪ್ಪ ಮುಂತಾದ ನಾಯಕರು ಜೊತೆಗಿದ್ದರು, ಬಲ ತುಂಬಿದರು ಅನ್ನೋದು ನಿಜವಾದರೂ ರಾಜ್ಯ ಬಿಜೆಪಿಗೆ ಕಳೆದ ಮೂರು ನಾಲ್ಕು ದಶಕಗಳಿಂದ ಒಂದೇ ಹೆಸರು ಆಸರೆ ಅದು ಯಡಿಯೂರಪ್ಪ, ಯಡಿಯೂರಪ್ಪ ಮತ್ತು ಯಡಿಯೂರಪ್ಪ.

    ಆದರೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲನ್ನ ಕರ್ನಾಟಕದಲ್ಲಿ ತೆರೆದು ಭವ್ಯ ಸ್ವಾಗತ ಕೋರಿದ ಯಡಿಯೂರಪ್ಪರಿಗೆ ಇದು ವಿಶ್ರಾಂತಿಯ ಕಾಲ ಅನ್ನೋದು ಬಹುತೇಕ ಬಿಜೆಪಿ ನಾಯಕರ ಅಭಿಪ್ರಾಯ. ವಯಸ್ಸಿನ ಕಾರಣ, ಆರೋಗ್ಯದ ದೃಷ್ಟಿ ಎಲ್ಲವು ಯಡಿಯೂರಪ್ಪ ಸಾಕು ಹೊಸತನ ಬೇಕು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಬೆಕ್ಕಿಗಾದರೆ ಗಂಟೆ ಕಟ್ಟಿಬಿಡಬಹುದಿತ್ತು. ಆದರೆ ರಾಜಾ ಹುಲಿಗೆ ಮನವೊಲಿಕೆಯ ಗಂಟೆ ಕಟ್ಟಬೇಕಿದೆ. ಪಕ್ಷಕ್ಕೆ ಹಿನ್ನಡೆಯಾಗದಂತೆ, ಯಡಿಯೂರಪ್ಪ ಮನಸ್ಸಿಗೆ ನೋವಾಗದಂತೆ ಬೆಣ್ಣೆಯಿಂದ ಕೂದಲು ತೆಗೆಯಬೇಕು. ಆದರೆ ಅದನ್ನು ತೆಗೆಯುವವರು ಯಾರು ಮತ್ತು ಹೇಗೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.

    ಅಷ್ಟಕ್ಕೂ ಕುಮಾರಸ್ವಾಮಿ ಸರ್ಕಾರವನ್ನ ಪತನಗೊಳಿಸಿ ಆಪರೇಷನ್ ಕಮಲವನ್ನ ಯಶಸ್ವಿಯಾಗಿ ಮಾಡಿ ಮುಗಿಸಿದ ಯಡಿಯೂರಪ್ಪ ರಾಜ ಸಿಂಹಾಸನವನ್ನ ಏರಿದ್ದರೂ ಅದು ಕೇವಲ ಒಂದು ವರ್ಷ ಮಾತ್ರ ಅನ್ನೋ ಮಾತು ಆರಂಭದಿಂದಲೂ ಕೇಳಿ ಬಂದಿತ್ತು. ಒಂದು ವರ್ಷ ಕಳೆದು ಅಂತೆ ಕಂತೆ ಎನ್ನುವಷ್ಟರಲ್ಲಿ ಕೋವಿಡ್ ಹಾವಳಿ ಎಲ್ಲರ ಬಾಯಿ ಮುಚ್ಚಿಸಿತು. ಈಗ ಕರೋನಾ ಎರಡನೆ ಅಲೆಯ ನಡುವೆ ಯಡಿಯೂರಪ್ಪ ಪದಚ್ಯುತಿಯ ಎರಡನೆ ಅಲೆಯೂ ಬೀಸತೊಡಗಿದೆ. ಆದರೆ ಒಂದಂತೂ ಸತ್ಯ. ವಯಸ್ಸಿನ ಕಾರಣವು ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಿನಷ್ಟು ಪ್ರಬಲರಾಗಿ ಉಳಿದಿಲ್ಲ. ಬಿಜೆಪಿ ಹೈಕಮಾಂಡ್ ಸಹಾ ಈ ಮೊದಲಿನಂತೆ ದುರ್ಬಲವಾಗಿಯು ಇಲ್ಲ. ಆದರೆ ಯಡಿಯೂರಪ್ಪ ಅನ್ನುವ ಮಾಸ್ ಲೀಡರನ್ನ ಸಿಎಂ ಕುರ್ಚಿಯಿಂದ ಇಳಿಸುವುದು ಬಿಜೆಪಿ ಹೈ ಕಮಾಂಡ್‍ಗೆ ಅಷ್ಟು ಸುಲಭದ ಮಾತಂತು ಅಲ್ಲಾ. ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್ ಅನ್ನುವಂತಾದರೆ ರಾಜ್ಯ ಬಿಜೆಪಿಯ ಹಡಗಿಗೆ ತೂತು ಬೀಳೋದು ಗ್ಯಾರಂಟಿ. ಆದ್ದರಿಂದ ಆಪರೇಷನ್ ಯಡಿಯೂರಪ್ಪದಲ್ಲಿ ಪೇಶೆಂಟ್ ಸೇಫಾಗಬೇಕು ಆಪರೇಷನ್ ಸಕ್ಸಸ್ ಆಗಬೇಕಿದೆ.

    ಅಷ್ಟಕ್ಕೂ ಕರೋನಾ ತೀವ್ರ ಸಂಕಷ್ಟದ ನಡುವೆ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು ಯಾಕೆ…? ರಾಜಕಾರಣದ ಪಾಲಿಗೆ ಮುಂದಿನ ಎರಡು ವರ್ಷ ಅನ್ನೋ ಶಾರ್ಟ್ ಟೈಮ್ ಹಾಗೂ ವ್ಯಕ್ತಿಗತ ಹಿಡಿತದಿಂದ ಪಕ್ಷದ ಹಿಡಿತಕ್ಕೆ ರಾಜ್ಯ ಬಿಜೆಪಿಯನ್ನ ತರಲೇಬೇಕು ಅನ್ನೋ ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದ ಲೆಕ್ಕಾಚಾರ. ಯಡಿಯೂರಪ್ಪ ಬದಲಾವಣೆಯ ಮಾತು ಕೇಳಿ ಬರುತ್ತಿದ್ದಂತೆ ಡಜನ್‍ಗೂ ಹೆಚ್ಚು ಹೆಸರುಗಳು ಸಿಎಂ ರೇಸ್‍ಗೆ ಕೇಳಿ ಬರತೊಡಗಿವೆ. ಅರವಿಂದ ಬೆಲ್ಲದ್, ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ, ಲಕ್ಷಣ ಸವದಿ, ಬಸವರಾಜ್ ಬೊಮ್ಮಾಯಿ, ಅಶ್ವಥ್ ನಾರಾಯಣ, ಆರ್.ಅಶೋಕ್, ಗೋವಿಂದ ಕಾರಜೋಳ ಹೀಗೆ ಸಾಲು ಸಾಲು ಹೆಸರುಗಳು ಕೇಳಿ ಬರತೊಡಗಿವೆ. ಇವೆಲ್ಲ ಹೆಸರುಗಳನ್ನ ಸೈಡ್ ಲೈನ್ ಮಾಡಿ ಬಿ.ಎಲ್.ಸಂತೋಷ್ ಹೆಸರೇ ಅಂತಿಮ ರೇಸ್‍ಗೆ ಬಂದರೂ ಆಶ್ಚರ್ಯವಿಲ್ಲ. ಸಿಎಂ ಕನವರಿಕೆಯಲ್ಲಿರುವ ಬಹುತೇಕ ನಾಯಕರು ಸೂಟು ಬೂಟು ಹೊಲಿಸಿಕೊಂಡು ಸಿದ್ಧವಾದಂತಿದೆ. ಕೆಲವರಿಗೆ ಪಕ್ಷದ ಸೂಟು, ಇನ್ನೂ ಕೆಲವರಿಗೆ ಆರ್‍ಎಸ್‍ಎಸ್ ಕೋಟು, ಮತ್ತೆ ಕೆಲವರಿಗೆ ಜಾತಿ ಲೆಕ್ಕಾಚಾರದ ಕುರ್ತಾ ಪೈಜಾಮ ಎಲ್ಲವು ಆಸರೆಯಾಗಿರಬಹುದು. ಆದರೆ ಯಡಿಯೂರಪ್ಪನವರ ನಾಯಕತ್ವಕ್ಕೆ ಸರಿ ಸಮಾನಾದ ನಾಯಕ ಯಾರು…? ಅನ್ನೋ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ. ಆಸೆ ಇದ್ದ ಮಾತ್ರಕ್ಕೆ ಯಾರೂ ನಾಯಕರಾಗಲಾರರು. ಆದರೆ 2008ರ ಯಡಿಯೂರಪ್ಪನವರ ಆಡಳಿತ ಅವರಲ್ಲಿದ್ದ ಚುರುಕುತನ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದ ರೀತಿ ಎಲ್ಲವು ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಯ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದವು. ಆದರೆ 2021 ರ ಯಡಿಯೂರಪ್ಪರಿಂದ ಹೆಚ್ಚಿನದ್ದೇನು ನಿರೀಕ್ಷೆ ಮಾಡುವಂತಿಲ್ಲ. ವಯಸ್ಸಿನ ಕಾರಣವೋ, ರಾಜ್ಯದ ಆರ್ಥಿಕ ಸ್ಥಿತಿಗತಿಯೋ ಅಥವಾ ವೈಯಕ್ತಿಕವಾಗಿ ಯಡಿಯೂರಪ್ಪನವರೇ ಆಸಕ್ತಿ ಕಳೆದುಕೊಂಡರೋ ಗೊತ್ತಿಲ್ಲ. ಆದರೆ ಸರ್ಕಾರ ಮುನ್ನಡೆಸುವುದರಲ್ಲಿ ಇದು 2008ರ ಯಡಿಯೂರಪ್ಪ ಅಲ್ಲ ಅನ್ನುವುದಂತು ಸ್ಪಷ್ಟ. ಕೇವಲ ಖುರ್ಚಿ ಆಸೆಗಾಗಿ ಯಡಿಯೂರಪ್ಪ ದಿನ ದೂಡುವ ಅವಶ್ಯಕತೆಯು ಇಲ್ಲ. ಆದರೆ ಯಡಿಯೂರಪ್ಪ ನಂತರ ಯಾರು ಅಂದರೆ ಯಡಿಯೂರಪ್ಪರಷ್ಟೆ ಪ್ರಬಲ ನಾಯಕ ಯಾರು ಅನ್ನೋ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರಿರಲಿ, ಕೇಂದ್ರ ಬಿಜೆಪಿ ನಾಯಕರಿರಲಿ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿಯಂತೂ ಖಂಡಿತವಾಗಿ ಇದೆ.

    ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಬದಲಾವಣೆ ಪ್ರಯತ್ನ ಆರಂಭವಾಗಿರಬಹುದು. ಆದರೆ ಅವರನ್ನ ವಿಶ್ವಾಸಕ್ಕೆ ತಗೆದುಕೊಂಡು ಮನವೊಲಿಕೆ ಮಾಡಿ ಇಳಿಸಿದರಷ್ಟೆ ರಾಜ್ಯ ಬಿಜೆಪಿ ಸೇಫ್. ಹೈಕಮಾಂಡ್ ಸ್ಟ್ರಾಂಗ್ ಇದೆ ನಾವು ಆಡಿದ್ದೇ ಆಟ ಅಂದುಕೊಂಡರೆ ಪರಿಣಾಮವೇ ಬೇರೆ ಆಗಬಹುದು. 2013ರಲ್ಲಿ ಯಡಿಯೂರಪ್ಪ ಸಿಟ್ಟು ಮಾಡಿಕೊಂಡು ಪಕ್ಷ ಒಡೆದು ಕೆಜೆಪಿ ಕಟ್ಟಿದಾಗ ಇದ್ದ ಪರಿಸ್ಥಿತಿ ಈಗಿಲ್ಲ. ಹಾಗೆಯೇ ಅಷ್ಟೆ ಹಟದಲ್ಲಿ ಬಿಜೆಪಿ ಒಡೆದು ಇನ್ನೊಂದು ಪಕ್ಷ ಕಟ್ಟುವ ಶಕ್ತಿಯು ಯಡಿಯೂರಪ್ಪನವರಲ್ಲಿ ಉಳಿದಿಲ್ಲ. ಈ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಜೊತೆ ಅವರದೇ ಸಮುದಾಯದ ನಾಯಕರುಗಳು ಗಟ್ಟಿಯಾಗಿ ನಿಲ್ಲಲಾರರು. ಆದರೂ ಬಿ.ಎಸ್.ಯಡಿಯೂರಪ್ಪನವರಿಗೆ ಗೌರವದ ವಿದಾಯ ಹೇಳದ ಹೊರತು ಗೊಂದಲ ಬಗೆಹರಿಯುವ ಲಕ್ಷಣವು ಕಾಣುತ್ತಿಲ್ಲ. ಯಡಿಯೂರಪ್ಪ ಕೆಲವು ಷರತ್ತಿನೊಂದಿಗೆ ಬದಲಾವಣೆಗೆ ಒಪ್ಪಿಕೊಳ್ತಾರೆ ಅನ್ನುವ ಮಾತು ಬಿಜೆಪಿ ಪಾಳಯದಿಂದಲೇ ಕೇಳಿ ಬರತೊಡಗಿವೆ. ಆದರೆ ಪುತ್ರ ವ್ಯಾಮೋಹ ಹಿಡಿದು ಕುಳಿತರೆ ಮಾತ್ರ ಕೇಂದ್ರ ನಾಯಕರಿಗೆ ಯಡಿಯೂರಪ್ಪ ಪ್ರಕರಣ ಮತ್ತಷ್ಟು ಕಗ್ಗಂಟಾಗಲಿದೆ. ಒಟ್ಟಾರೆ ಕೇಂದ್ರ ಬಿಜೆಪಿ ನಾಯಕರಿಗೆ ಬದಲಾವಣೆಯ ಮನಸ್ಸಿದೆ. ರಾಜ್ಯ ನಾಯಕರುಗಳಿಗೆ ಥರಾವರಿ ಕನಸುಗಳಿವೆ. ಆದರೆ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಮನಸ್ಸಲ್ಲಿ ಏನಿದೆ..? ಇದಕ್ಕೆ ಕಾಲವೇ ಉತ್ತರಿಸಬೇಕು.

    [ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]

  • ಸಮನ್ವಯತೆ ಕೊರತೆ – ಬಿಎಸ್‍ವೈಯನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಿಎಲ್‍ಎ ಸ್

    ಸಮನ್ವಯತೆ ಕೊರತೆ – ಬಿಎಸ್‍ವೈಯನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಿಎಲ್‍ಎ ಸ್

    ಬೆಂಗಳೂರು: ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯತೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

    ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಮಾತುಕತೆಯ ವೇಳೆ ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಕೆಲ ಸಂವಹನ, ಸಮನ್ವಯತೆ ಕೊರತೆಯಿಂದ ಸಮಸ್ಯೆ ಆಗಿರುವುದು ನಿಜ ಎಂದು ಹೇಳಿರುವುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಮುಂದೆ ಸಮನ್ವಯತೆ ಕೊರತೆ ಆಗದಂತೆ ಕೇಂದ್ರವೂ ಕ್ರಮ ವಹಿಸಲಿದೆ. ರಾಜ್ಯ ಸರ್ಕಾರದಿಂದಲೂ ಅಗತ್ಯ ಕ್ರಮ ವಹಿಸಬೇಕು. ಬೇರೆ ರಾಜಕೀಯ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸದ್ಯಕ್ಕೆ ತಲೆಕೆಡಿಸಿಕೊಂಡಿಲ್ಲ ಎಂದು ಸಿಎಂ ಯಡಿಯೂರಪ್ಪನವರಿಗೆ ಸಂತೋಷ್ ಅವರು ಸಮಾಧಾನ ಮಾಡಿದ್ದಾರೆ.

    ಸಹಜವಾಗಿ ಕೋವಿಡ್‍ನಂತಹದ ದೊಡ್ಡ ಸಮಸ್ಯೆ ಬಂದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಇನ್ನು ಮುಂದೆ ಆ ರೀತಿ ಸಮಸ್ಯೆಗಳು ಬರುವುದಿಲ್ಲ ಎಂದು ಸಂತೋಷ್ ಅವರು ಹೇಳಿದ್ದಾರೆ. ಒಟ್ಟು 15 ನಿಮಿಷಗಳ ಕಾಲ ಸಿಎಂ ಸಂತೋಷ್ ಮಾತುಕತೆ ನಡೆದಿದೆ.

    ಯಾಕೆ ಈ ಮಾತುಕತೆ?
    ರಾಜ್ಯದಲ್ಲಿ ಆಕ್ಸಿಜನ್ ಕೊರತೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‍ಗೆ ಸರ್ಕಾರ ಅಫಿಡವಿತ್ ಸಲ್ಲಿಸಿತ್ತು. ವಿಚಾರಣೆಯ ಬಳಿಕ ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು.

    ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಮೇ 7 ರಂದು ಕೇಂದ್ರಕ್ಕೆ ಆದೇಶಿಸಿತ್ತು.

    ಎರಡು ಕಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಯಾಕೆ ಈ ಹೊಂದಾಣಿಕೆ ಸಮಸ್ಯೆ ಎಂಬ ಪ್ರಶ್ನೆ ಎದ್ದಿತ್ತು. ಅಷ್ಟೇ ಅಲ್ಲದೇ ಎರಡು ಸರ್ಕಾರಕ್ಕೆ ಇರಿಸು ಮುರಿಸು ಆಗಿತ್ತು.

  • ಕೇರಳ ಚುನಾವಣೆ ಕಾರ್ಯತಂತ್ರದಲ್ಲಿ ಡಿಸಿಎಂ ಫುಲ್ ಬ್ಯುಸಿ- ಸಂಜೆ ಕೋವಳಂ ಬೀಚ್‍ನಲ್ಲಿ ವಾಕಿಂಗ್

    ಕೇರಳ ಚುನಾವಣೆ ಕಾರ್ಯತಂತ್ರದಲ್ಲಿ ಡಿಸಿಎಂ ಫುಲ್ ಬ್ಯುಸಿ- ಸಂಜೆ ಕೋವಳಂ ಬೀಚ್‍ನಲ್ಲಿ ವಾಕಿಂಗ್

    ತಿರುವನಂತಪುರ: ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯ ಬಿಜೆಪಿ ಸಹ ಪ್ರಭಾರಿ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬೆಳಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಂಜೆ ವೇಳೆ ಕೋವಳಂ ಬೀಚ್‍ನಲ್ಲಿ ಕೆಲ ಕಾಲ ವಾಕ್ ಮಾಡಿದರು.

    ಬೆಳಗ್ಗೆ ಉಪಹಾರ ಸಮಯದಿಂದಲೇ ವಿವಿಧ ನಾಯಕರು, ಜಿಲ್ಲೆಗಳ ಮುಖಂಡರು, ಚುನಾವಣಾ ತಂತ್ರಗಾರಿಕೆ ತಂಡಗಳೊಂದಿಗೆ ನಿರಂತರ ಸಭೆ ನಡೆಸಿದರು. ಬಹಿರಂಗ ಪ್ರಚಾರ, ನಂತರ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸೂಚನೆ ನೀಡಿದರು.

    ಈ ನಡುವೆ ಕೇರಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೂ ಮಾತುಕತೆ ನಡೆಸಿದರು. ಮಧ್ಯಾಹ್ನ 2.30ರ ವರೆಗೆ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು.

    ಕೋವಳಂ ಬೀಚ್‍ನಲ್ಲಿ ವಾಕಿಂಗ್:
    ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿದ್ದ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸಂಜೆ ಹೊತ್ತಿಗೆ ಪ್ರಸಿದ್ಧ ಕೋವಳಂ ಬೀಚ್‍ಗೆ ತೆರಳಿ ಕೆಲ ಕಾಲ ವಾಕಿಂಗ್ ಮಾಡಿದರು. ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಈ ವೇಳೆ ಬಿಜೆಪಿ ನಾಯಕ ರಾಜಶೇಖರನ್ ನಾಯರ್ ಅವರ ಪತ್ನಿ ಹಾಗೂ ನಟಿ ಅಂಬಿಕಾ ಸಹೋದರಿ ನಟಿ ರಾಧಾ ಎದುರಾದರು. ಅವರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿದರು.

  • ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಸಾಧನೆ- ಬಿಎಸ್‍ವೈ, ಕಟೀಲ್‍ಗೆ ಸಂತೋಷ್ ಅಭಿನಂದನೆ

    ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಸಾಧನೆ- ಬಿಎಸ್‍ವೈ, ಕಟೀಲ್‍ಗೆ ಸಂತೋಷ್ ಅಭಿನಂದನೆ

    – ಈ ವರೆಗೆ ಶೇ.48 ವಾರ್ಡ್‍ಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು

    ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶೇ.48ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ  ಅಭಿನಂದನೆ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಬಿ.ಎಲ್.ಸಂತೋಷ್, ಒಟ್ಟು 82,616 ಗ್ರಾಮ ಪಂಚಾಯತ್ ವಾರ್ಡ್‍ಗಳ ಪೈಕಿ ಈ ವರೆಗೆ 5,344, ಅಂದರೆ ಶೇ.48 ರಷ್ಟು ವಾರ್ಡ್‍ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗ್ರೇಟ್ ಗೋಯಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಗ್ರಾಮ ಪಂಚಾಯತ್ ಚುನಾವಣೆಗಳ ಮತ ಎಣೆಕೆ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ವಾರ್ಡ್‍ಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಇನ್ನೂ ಕೆಲ ವಾರ್ಡ್‍ಗಳಲ್ಲಿ ಎಣಿಕೆ ನಡೆಯುತ್ತಿದೆ. ಸಂಜೆ ಅಥವಾ ರಾತ್ರಿಯ ವೇಳೆ  ಎಲ್ಲ ಗ್ರಾಮ ಪಂಚಾಯಿತಿಗಳ ಫಲಿತಾಂಶ ಹೊರ ಬೀಳಲಿದೆ..

  • ವಿರೋಧ ಪಕ್ಷಗಳು ಹೇಳಿದ್ದನ್ನು ಜಾರಿಗೆ ತಂದಿದ್ದೇವೆ – ದಾಖಲೆ ರಿಲೀಸ್‌ ಮಾಡಿದ ರವಿಶಂಕರ್‌ ಪ್ರಸಾದ್‌

    ವಿರೋಧ ಪಕ್ಷಗಳು ಹೇಳಿದ್ದನ್ನು ಜಾರಿಗೆ ತಂದಿದ್ದೇವೆ – ದಾಖಲೆ ರಿಲೀಸ್‌ ಮಾಡಿದ ರವಿಶಂಕರ್‌ ಪ್ರಸಾದ್‌

    – ವಿರೋಧ ಪಕ್ಷಗಳ ಪ್ರಣಾಳಿಕೆಯಲ್ಲಿ ಉಲ್ಲೇಖ
    – ವಿರೋಧಿಸಬೇಕೆಂಬ ಕಾರಣಕ್ಕೆ ವಿರೋಧ

    ನವದೆಹಲಿ: ವಿರೋಧ ಮಾಡಬಕೇಂಬ ಉದ್ದೇಶಕ್ಕಾಗಿ ಕಾಂಗ್ರೆಸ್‌ ಮತ್ತು ವಿಪಕ್ಷಗಳು ಕೃಷಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ(ಎಪಿಎಂಸಿ) ಯನ್ನು ರದ್ದುಪಡಿಸುವ /ತಿದ್ದುಪಡಿ ಮಾಡುವ ಭರವಸೆ ನೀಡಲಾಗಿತ್ತು. ಬಿಜೆಪಿ ಈಗ ಮಸೂದೆ ತಂದಿದ್ದಕ್ಕೆ ವಿರೋಧಿಸುವ ಮೂಲಕ ಕಾಂಗ್ರೆಸ್‌ ದ್ವಿಮುಖ ನೀತಿಯನ್ನು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಯುಪಿಎ ಅವಧಿಯಲ್ಲಿ ಕೃಷಿ ಅಭಿವೃದ್ಧಿಗೆ ಕಾಂಗ್ರೆಸ್‌ ಏನು ಮಾಡಲು ಮುಂದಾಗಿತ್ತೋ ಅದನ್ನೇ ಮೋದಿ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸೋತಿವೆ. ಈಗ ಪ್ರತಿಭಟನೆಗಳಿಗೆ ಬೆಂಬಲ ನೀಡುವ ಮೂಲಕ ಅಸ್ವಿತ್ವ ಉಳಿಸಿಕೊಳ್ಳಲು ಮುಂದಾಗಿವೆ ಎಂದು ಕಿಡಿಕಾರಿದರು.

    ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುತ್ತೇವೆ. ರಫ್ತು ಸೇರಿದಂತೆ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತೇವೆ ಎಂದು 2019 ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿತ್ತು. ಈಗ ನಾವು ಜಾರಿಗೆ ತಂದಿದ್ದಕ್ಕೆ ವಿರೋಧಿಸುತ್ತಿದೆ ಎಂದು ಹೇಳಿದರು.

    ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ 2010ರಲ್ಲಿ ಕೃಷಿ ಮಾರುಕಟ್ಟೆ ಮೂಲಸೌಕರ್ಯದಲ್ಲಿ ಖಾಸಗಿ ವಲಯ ಭಾಗವಹಿಸುವ ಸಂಬಂಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿ ರೈತರಿಗೆ ನೆರವಾಗಲು ಖಾಸಗಿ ವಲಯಗಳು ಪಾಲ್ಗೊಳ್ಳುವಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಿಳಿಸಿ ಎಂದು ಪತ್ರದ ಬರೆದು ಕೋರಿದ್ದರು. ಆದರೆ ಈಗ ಬಿಜೆಪಿಯನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ರವಿಶಂಕರ್‌ ಪ್ರಸಾದ್‌ ಟೀಕಿಸಿದರು.

    ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಭಾನುವಾರ ಶರದ್‌ ಪವಾರ್‌ ಪತ್ರವನ್ನು ಟ್ವೀಟ್‌ ಮಾಡಿ, 2010ರಲ್ಲಿ ಕೃಷಿಯಲ್ಲಿ ಖಾಸಗಿ ವಲಯಗಳು ಇರಬೇಕೆಂದು ಬೇಡಿಕೆ ಇಟ್ಟು ಪತ್ರ ಬರೆದಿದ್ದರು. ಆದರೆ ಈಗ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    2016ರ ಚುನಾವಣಾ ಪ್ರಚಾರದ ಸಮಯದಲ್ಲಿ ಡಿಎಂಕೆ ಯಾವುದೇ ಮಧ್ಯವರ್ತಿಗಳಿಲ್ಲದೇ ರೈತರು ನೆರವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೃಷಿ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಮುಂದಾಗುವಂತೆ ಹೊಸ ನೀತಿಯನ್ನು ತರುತ್ತೇವೆ ಎಂದು ಹೇಳಿತ್ತು. ಈ ರೀತಿ ಪ್ರಣಾಳಿಕೆಯಲ್ಲಿ ಘೋಷಿಸಿದ ಡಿಎಂಕೆ ಇಂದು ಭಾರತ ಬಂದ್‌ಗೆ ಕರೆ ನೀಡಿದೆ. ವಿರೋಧ ಪಕ್ಷಗಳು ಅವರಾಗಿಯೇ ಬಯಲಾಗುತ್ತಿದ್ದಾರೆ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

     

  • ಮಾಜಿ ಸಿಎಂ ಎಚ್‍ಡಿಕೆಗೆ ನನ್ನ ಮೇಲೆ ವಿಶೇಷ ಪ್ರೀತಿ: ಸಚಿವ ಸುಧಾಕರ್

    ಮಾಜಿ ಸಿಎಂ ಎಚ್‍ಡಿಕೆಗೆ ನನ್ನ ಮೇಲೆ ವಿಶೇಷ ಪ್ರೀತಿ: ಸಚಿವ ಸುಧಾಕರ್

    – ನನಗೂ ಕೂಡ ಎಚ್‍ಡಿಕೆ ಮೇಲೆ ವಿಶೇಷವಾದ ಗೌರವವಿದೆ

    ಬೆಂಗಳೂರು: ಕೊರೊನಾ ನಿಯಂತ್ರಣ ಹಾಗೂ ಪ್ರವಾಹ ಪರಿಹಾರ ಕ್ರಮ ಕೈಗೊಳ್ಳಲು ಮೈ ಬಗ್ಗಿಸಿ ಕೆಲಸ ಮಾಡಿ ತೋರಿಸಿ ಎಂದು ಹೇಳಿದ್ದ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದು, ಮಾಜಿ ಸಿಎಂ ಎಚ್‍ಡಿಕೆಗೆ ನನ್ನ ಮೇಲೆ ವಿಶೇಷ ಪ್ರೀತಿ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

    ನಗರದ ಬಿಜೆಪಿ ಕಚೇರಿ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ನನಗೂ ಅವರ ಮೇಲೆ ವಿಶೇಷ ಗೌರವವಿದೆ ಅಷ್ಟೇ ಎಂದರು. ಇದನ್ನೂ ಓದಿ: ಮಾಧ್ಯಮಗಳ ಮುಂದೆ ಪೋಸ್ ಕೊಡೋದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ: ಹೆಚ್‍ಡಿಕೆ

    ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕೊರೊನಾ ನಿಯಂತ್ರಣದ ಬಗ್ಗೆ ಮಾಹಿತಿ ಕೇಳಿದ್ದರು. ಸೋಮಕಿನ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅವರಿಗೆ ವರದಿ ಕೊಟ್ಟಿದ್ದೇವೆ. ಅವರು ಕೂಡ ಈ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. 65 ಸಾವಿರ ಇರುವ ಟೆಸ್ಟಿಂಗ್ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸುವಂತೆ ಹೇಳಿದರು ಎಂದು ತಿಳಿಸಿದರು.

    ನಂಜನಕೂಡು ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ವೈದ್ಯಾಧಿಕಾರಿ ಆತ್ಮಹತ್ಯೆ ತನಿಖೆಗೆ ನಡೆಸಲು ನಮ್ಮ ತಕಾರರು ಇಲ್ಲ. ಈಗಾಗಲೇ ಸಿಎಂ ಅವರು ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅವರ ಧರ್ಮಪತ್ನಿ ಅವರನ್ನು ಸಬ್ ರಿಜಿಸ್ಟರ್ ಆಗಿ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ. ಉನ್ನತ ಮಟ್ಟದ ತನಿಖೆಗೂ ನಾವು ಒಪ್ಪುತ್ತೇವೆ. ಮೃತ ಅಧಿಕಾರಿಯ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕುಟುಂಬ ಸದಸ್ಯರು ಯಾವ ರೀತಿ ತನಿಖೆ ನಡೆಸಲು ಕೇಳುತ್ತಾರೋ ಅದೇ ರೀತಿ ಮಾಡುತ್ತೇವೆ. ಆದರೆ ಕೆಲವರು ಈ ವಿಷಯವನ್ನು ಅನ್ಯ ವಿಷಯಗಳಿಗೆ ಬಳಸಿಕೊಂಡರೇ ಅದು ಅವರಿಗೆ ಉಪಯೋಗವಿಲ್ಲ ಎಂದರು.

  • ದಲಿತ ಶಾಸಕನ ಮನೆಗೆ ರಕ್ಷಣೆ ನೀಡದ ನಿಮ್ಮ ಸರ್ಕಾರ ಕೋಟ್ಯಂತರ ದಲಿತರನ್ನು ರಕ್ಷಿಸುತ್ತಾ – ಬಿಎಲ್‌ಎಸ್‌ಗೆ ಸಿದ್ದು ಪ್ರಶ್ನೆ

    ದಲಿತ ಶಾಸಕನ ಮನೆಗೆ ರಕ್ಷಣೆ ನೀಡದ ನಿಮ್ಮ ಸರ್ಕಾರ ಕೋಟ್ಯಂತರ ದಲಿತರನ್ನು ರಕ್ಷಿಸುತ್ತಾ – ಬಿಎಲ್‌ಎಸ್‌ಗೆ ಸಿದ್ದು ಪ್ರಶ್ನೆ

    ಬೆಂಗಳೂರು: ನಿಮ್ಮದೇ ಪಕ್ಷ‌ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರಿಗೆ ತಿರುಗೇಟು ನೀಡಿದ್ದಾರೆ.

    ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌, ಬಿಜೆಪಿ ನಾಯಕರ ಆರೋಪ, ಪ್ರತ್ಯಾರೋಪ ತೀವ್ರಗೊಂಡಿದೆ.

    ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಬಿಎಲ್‌ ಸಂತೋಷ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ದೆಹಲಿ ತಂತ್ರಗಾರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವುದಿಲ್ಲ ಎಂದು ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ಗೆ ಬಿಎಲ್‌ ಸಂತೋಷ್‌ ಅವರು, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ದಾಳಿಯ ಕೃತ್ಯವನ್ನು ಖಂಡಿಸದೇ ಈ ರೀತಿಯ ಬೂಟಾಟಿಕೆ ಮಾಡುವುದನ್ನು ನಿಲ್ಲಿಸಿ. ನಿಮ್ಮದೇ ಕಾಂಗ್ರೆಸ್‌ ಪಕ್ಷದ ದಲಿತ ಶಾಸಕನ ಮೇಲೆ ನಡೆದ ದಾಳಿ ವೇಳೆ ಅವರ ಬೆಂಬಲಕ್ಕೆ ನಿಲ್ಲಿ ಎಂದು ಟ್ವೀಟ್‌ ಮಾಡಿದ್ದರು.

    ಬಿಎಲ್‌ ಸಂತೋಷ್‌ ಅವರು ಟ್ವೀಟ್‌ನಲ್ಲಿ ʼದಲಿತʼ ಪದವನ್ನು ಬಳಸಿರುವುದು ಸಿದ್ದರಾಮಯ್ಯನವರ ಸಿಟ್ಟಿಗೆ ಕಾರಣವಾಗಿದ್ದು, ಈಗ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಹಾಕಿ ಅದಕ್ಕೆ #AntiDalitBJP ಎಂಬ ಹ್ಯಾಷ್‌ ಟ್ಯಾಗ್‌ ಹಾಕಿ ತಿರುಗೇಟು ನೀಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಿ.ಎಲ್ ಸಂತೋಷ್ ಅವರು ‘ಹಿಂದುತ್ವ’ದ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ, ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ?

    ರಾಜ್ಯದಲ್ಲಿ ನಿಮ್ಮದೇ ಪಕ್ಷ‌ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ ಸಂತೋಷ್ ಅವರೇ?

    ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ… ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ ಸಂತೋಷ್ ಅವರೇ?

    ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು ಸಂತೋಷ್ ಅವರೇ?ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?

    ನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ಇದು ನಿಮ್ಮ ದಲಿತರ ಮೇಲಿನ ಕಾಳಜಿಯಲ್ಲವೇ ಸಂತೋಷ್ ಅವರೇ? ಇದನ್ನೂ ಓದಿ: 2 ಪಕ್ಷಗಳ ಪರ ನವೀನ್ ಪೋಸ್ಟ್‌ – ಸ್ಟೇಟಸ್‌ ಹಿಂದಿತ್ತು ಮಾಸ್ಟರ್‌ ಪ್ಲಾನ್‌

    ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿ ಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88,395 ಕೋಟಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರ್ತೀರಾ ಸಂತೋಷ್ ಅವರೇ?

    ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು‌ ಸಂತೋಷ್ ಅವರೇ? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು?

    https://www.facebook.com/Siddaramaiah.Official/posts/1237335883278538

  • ಮನಸ್ಸಲ್ಲೊಂದು ನಾಲಿಗೆ ಮೇಲೊಂದು ಇಟ್ಕೋಳೋಕೆ ಸಂತೋಷ್‍ಜಿಯೇನು ನೀವಾ?

    ಮನಸ್ಸಲ್ಲೊಂದು ನಾಲಿಗೆ ಮೇಲೊಂದು ಇಟ್ಕೋಳೋಕೆ ಸಂತೋಷ್‍ಜಿಯೇನು ನೀವಾ?

    – ಸಿದ್ದು ವಿರುದ್ಧ ಗುಡುಗಿದ ಪ್ರತಾಪ್ ಸಿಂಹ

    ಬೆಂಗಳೂರು: ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿಯೇ ತಿರುಗೇಟು ನೀಡಿದ್ದಾರೆ.

    ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮೂಲಕವೇ ಕಿಡಿಕಾರಿದ್ದ ಸಿದ್ದರಾಮಯ್ಯ, ಚೀನಾ ವಿಚಾರದ ಬಗ್ಗೆ ಮಾತನಾಡಲು ಸಂತೋಷ್ ಯಾರು? ಸಂತೋಷ್ ಅವರು ಸಿಎಂ ಯಡಿಯೂರಪ್ಪಗೆ ಶಹಭಾಸ್ ಗಿರಿ ನೀಡಿದ್ದು ಮನಸ್ಸಿನಿಂದಲೋ ಇಲ್ಲ ನಾಲಿಗಿಯಿಂದಲೋ ಎಂದು ಪ್ರಶ್ನಿಸಿದ್ದರು.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಮನಸ್ಸಲ್ಲೊಂದು ನಾಲಿಗೆ ಮೇಲೊಂದು ಇಟ್ಕೋಳೋಕೆ ಸಂತೋಷ್‍ಜಿಯೇನು ನೀವಾ? 2006ಕ್ಕಿಂತ ಮುಂಚೆ ಯಾರನ್ನು ಸಭೆ ಸಮಾರಂಭಗಳಲ್ಲಿ ಅವಳು, ಇವಳು ಅಂತ ಏಕವಚನದಲ್ಲಿ ಹೀಗಳೆಯುತಿದ್ದಿರೋ ಅದೇ ಸೋನಿಯಾ ಗಾಂಧಿಯವರನ್ನು ಅಧಿನಾಯಕಿ ಎಂದು ಒಪ್ಪಿಕೊಂಡಿರೋ ನೀವಷ್ಟೇ ಮನಸ್ಸು ಮತ್ತು ನಾಲಗೆಯಲ್ಲಿ ಬೇರೆ ಬೇರೆ ಇಟ್ಟುಕೊಳ್ಳಲು ಸಾಧ್ಯ ಸಾರ್ ಎಂದು ಕಾಲೆಳೆದಿದ್ದಾರೆ.

    ಲಾಕ್‍ಡೌನ್ ವಿಚಾರವಾಗಿ ಸಿದ್ದು ಮಾಡಿದ್ದ ಟ್ವೀಟ್‍ಗೆ ತಿರುಗೇಟು ಕೊಟ್ಟಿರುವ ಸಿಂಹ, ಬಾಸೂ, ನಿಮ್ಮ ಕಾಂಗ್ರೆಸ್ 55 ವರ್ಷ ದೇಶವಾಳಿದರೂ ಕೊರೋನಾ ಬಂದಾಗ ದೇಶದಲ್ಲಿ ಇದ್ದಿದ್ದು ಬೆರಳೆಣಿಕೆಯ ಟೆಸ್ಟಿಂಗ್ ಲ್ಯಾಬ್‍ಗಳು, ವೆಂಟಿಲೇಟರ್ ಗಳು, ಪಿಪಿಇ ಕಿಟ್‍ಳನ್ನಂತೂ ಹುಡುಕಬೇಕಿತ್ತು. ಲಾಕ್‍ಡೌನ್ ಅವಧಿಯಲ್ಲಿ ಇವೆಲ್ಲವನ್ನೂ ಸರಿಪಡಿಸಿ, ಸೋಂಕಿತರ ಸಂಖ್ಯೆ ಎಷ್ಟೇ ಹೆಚ್ಚಾದರೂ ನಿಭಾಯಿಸುವ ಸಾಮರ್ಥ್ಯವನ್ನು ದೇಶ ಹೊಂದುವಂತೆ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

    ಮೂರನೇ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಎಂಥದೇ ಆಗಿರಲಿ ನಿಮಗೆ ಧನ್ಯವಾದ ಬಾಸ್. ನಿಮ್ಮ ಸರಣಿ ಟ್ವೀಟ್‍ಗಳನ್ನು ನೋಡಿದರೆ ನಾವು ಮಾತ್ರವಲ್ಲ ನೀವೂ ಬಿಎಲ್ ಸಂತೋಷ್ ಜೀ ಅವರ ಭಾಷಣದ ಫ್ಯಾನು ಅಂತಾ ಗೊತ್ತಾಯ್ತು ಎಂದು ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ.