Tag: BL Santhosh

  • ಹೈಕಮಾಂಡ್ ಮೆಸೇಜ್‍ಗಾಗಿ ತುದಿಗಾಲಲ್ಲಿ ಕಾಯ್ತಿರೋ ಸಿಎಂ

    ಹೈಕಮಾಂಡ್ ಮೆಸೇಜ್‍ಗಾಗಿ ತುದಿಗಾಲಲ್ಲಿ ಕಾಯ್ತಿರೋ ಸಿಎಂ

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ಆಗುತ್ತಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಇಂದು ದೆಹಲಿಯಲ್ಲಿ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರು ಯಾರು ಮಂತ್ರಿಗಳಾಗುತ್ತಾರೆ ಎಂಬ ಸ್ಪಷ್ಟತೆ ಸಿಗುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲ ದೆಹಲಿಗೆ ಮುಖ್ಯಮಂತ್ರಿಗಳು ಹೋಗಬೇಕಾ, ಬೇಡವಾ ಅನ್ನೋ ಬಗ್ಗೆಯೂ ಇಂದೇ ತಿಳಿಯಲಿದೆ ಎನ್ನಲಾಗಿದೆ.

    ಮೊನ್ನೆಯಷ್ಟೇ ಬಿ.ಎಲ್ ಸಂತೋಷ್ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಈ ಮಾತುಕತೆಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ತಮ್ಮ ಪ್ರಸ್ತಾವನೆಯನ್ನು ಇಟ್ಟಿದ್ರು. ಇಂದು ಜೆ.ಪಿ ನಡ್ಡಾರವರ ಜೊತೆ ಸಂತೋಷ್ ನಡೆಸುವ ಮಾತುಕತೆಯಲ್ಲಿ ಯಡಿಯೂರಪ್ಪ ಅವರ ಪ್ರಸ್ತಾವನೆ, ಸಂಭಾವ್ಯರ ಪಟ್ಟಿ ಕುರಿತು ಚರ್ಚೆ ನಡೆಯಲಿದ್ದು, ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎನ್ನಲಾಗಿದೆ.

    ಮಾತುಕತೆ ಬಳಿಕ ಸಿಎಂ ಯಡಿಯೂರಪ್ಪ ಅವರಿಗೆ ಜೆ.ಪಿ ನಡ್ಡಾ ಅವರೇ ಸಂದೇಶ ಕಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಜೆ.ಪಿ ನಡ್ಡಾ ಅವರಿಂದ ಯಾವ ರೀತಿಯ ಸಂದೇಶ ಬರಬಹುದೆಂಬ ನಿರೀಕ್ಷೆ, ಕಾತರ, ಆತಂಕ ಯಡಿಯೂರಪ್ಪ ಅವರಲ್ಲಿ ಸದ್ಯ ಮನೆ ಮಾಡಿದೆ. ದೆಹಲಿಗೆ ಬುಲಾವ್ ಬಂದರೆ ಒಂದು ಕ್ಷಣವೂ ತಡಮಾಡದೇ ಯಡಿಯೂರಪ್ಪ ಹೊರಡಲಿದ್ದಾರೆ. ಈ ನಿರೀಕ್ಷೆಯಲ್ಲೇ ಇವತ್ತು ಕೆ.ಆರ್ ನಗರ ಮತ್ತು ಮಡಿಕೇರಿಗಳಲ್ಲಿ ನಿಗದಿಯಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

  • ಸಂಪುಟ ಕಸರತ್ತಿಗೆ ಬಿ.ಎಲ್ ಸಂತೋಷ್ ಎಂಟ್ರಿ

    ಸಂಪುಟ ಕಸರತ್ತಿಗೆ ಬಿ.ಎಲ್ ಸಂತೋಷ್ ಎಂಟ್ರಿ

    ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ.

    ಬೈ ಎಲೆಕ್ಷನ್ ನಲ್ಲಿ ಭರ್ಜರಿ ಗೆಲುವು ಸಾಧಿಸಿಕೊಂಡ ನಂತರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಎಂ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಗೆದ್ದಿರೋ 11 ಶಾಸಕರಿಗೆ ಸಚಿವ ಸ್ಥಾನ ಕೊಡ್ತೀನಿ ಅಂತ ಸಿಎಂ ಘೋಷಣೆ ಮಾಡಿದ್ದಾರೆ. ಆದರೆ ಯಾರಿಗೆ ಯಾವ ಸ್ಥಾನ ನೀಡಬೇಕು ಅಂತ ಸಿಎಂ ಫುಲ್ ಗೊಂದಲದಲ್ಲಿ ಇದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ.

    ಈ ಮಧ್ಯೆ ಸಂಪುಟ ವಿಸ್ತರಣೆ ಕಸರತ್ತಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಎಂಟ್ರಿ ಕೊಟ್ಟಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆ ಮಾತುಕತೆ ಮಾಡಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಮಹತ್ವದ ಚರ್ಚೆ ಮಾಡಿದ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾರು ಯಾರಿಗೆ ಯಾವ ಖಾತೆ ಕೊಡಬೇಕು. ಡಿಸಿಎಂ ಹುದ್ದೆ ಸೃಷ್ಟಿ, ಮೂಲ ಬಿಜೆಪಿಗರಿಗೆ ಸ್ಥಾನ ನೀಡುವ ಕುರಿತು ಸಿಎಂ ಜೊತೆ ಸಂತೋಷ್ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

    ಸಿಎಂ ಯಡಿಯೂರಪ್ಪ ಜೊತೆ ಮಾತುಕತೆ ಮಾಡಿರುವ ಸಂತೋಷ್ ಇಂದು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ. ಮುಂದಿನ ವಾರ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಬಹುತೇಕ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡೋ ಸಾಧ್ಯತೆ ಇದೆ. ಅಂದುಕೊಂಡಂತೆ ಎಲ್ಲವೂ ನಡೆದರೆ 15 ದಿನಗಳಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಮಿಸ್ ಆದರೆ ಸಂಕ್ರಾಂತಿ ಬಳಿಕವೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿದೆ.

  • ತಂದೆಯ ಸಲಹೆಯನ್ನು ಪಾಲಿಸಿದ ಪುತ್ರ – ಅಂತರ ಕಾಯ್ದುಕೊಂಡ ವಿಜಯೇಂದ್ರ

    ತಂದೆಯ ಸಲಹೆಯನ್ನು ಪಾಲಿಸಿದ ಪುತ್ರ – ಅಂತರ ಕಾಯ್ದುಕೊಂಡ ವಿಜಯೇಂದ್ರ

    ಬೆಂಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪುತ್ರನ ಹಸ್ತಕ್ಷೇಪ ಸರ್ಕಾರ ಮತ್ತು ಪಕ್ಷದಲ್ಲಿ ಜಾಸ್ತಿಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಈಗ ವಿಜಯೇಂದ್ರ ಈ ವಿಚಾರದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.

    ಸ್ವಲ್ಪ ದಿನ ಸೈಲೆಂಟಾಗಿ ದೂರ ಇರುವಂತೆ ಮಗನಿಗೆ ಯಡಿಯೂರಪ್ಪ ಸಲಹೆ ನೀಡಿದ್ದು, ಪಕ್ಷ, ಸರ್ಕಾರ ಎರಡರಲ್ಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಿಎಸ್‍ವೈ ಅವರಿಂದ ವಿಜಯೇಂದ್ರ ಅಂತರ ಕಾಯ್ದುಕೊಂಡಿದ್ದಾರೆ. ಪುತ್ರನ ಮಧ್ಯಪ್ರವೇಶ ನಡೆಯುತ್ತಿಲ್ಲ. ತಮಗೆ ಆಗದವರು ಹರಡಿಸಿದ ಸುದ್ದಿ ಇದು ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಲು ತಂದೆಯ ಸಲಹೆಯ ಮೇರೆಗೆ ವಿಜಯೇಂದ್ರ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

    ವಿಜಯೇಂದ್ರ ಮೇಲೆ ಸಂತೋಷ್ ಕಣ್ಣು?
    ರಾಜ್ಯ ಬಿಜೆಪಿಯ ಪ್ರಧಾನಕಾರ್ಯದರ್ಶಿ ಹುದ್ದೆಯ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೇರುವ ಮೂಲಕ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಲು ವಿಜಯೇಂದ್ರ ಲಾಬಿ ನಡೆಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹೇಶ್ ಟೆಂಗಿನಕಾಯಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ಪಕ್ಷದ ಮಂದಿಗೆ ಶಾಕ್ ನೀಡಿದ್ದರು.

    ಯಡಿಯೂರಪ್ಪನವರ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಎಸ್‍ವೈ ಆಪ್ತರಿಗೆ ಸಿಗಲಿದೆ ಎನ್ನುವ ವಿಚಾರ ಚರ್ಚೆ ಆಗುತಿತ್ತು. ಆದರೆ ಬಿಜೆಪಿ ಹೈಕಮಾಂಡ್ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ರಾಜ್ಯದ ಹಿರಿಯ ನಾಯಕರಿಗೆ ಶಾಕ್ ನೀಡಿತ್ತು. ಈ ಎರಡು ಹುದ್ದೆಗೆ ಆಯ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಅಣತಿಯಂತೆ ನಡೆದಿದ್ದು ಎನ್ನುವ ಮಾತು ಈಗ ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.

    ವಿಜಯೇಂದ್ರ ಅವರಿಗೆ ಪ್ರಧಾನಕಾರ್ಯದರ್ಶಿ ಹುದ್ದೆ ನೀಡಿದರೆ ಮತ್ತೆ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಬರುತ್ತದೆ. ದೆಹಲಿ ಮಟ್ಟದ ಸಂಸ್ಕೃತಿ ತರಲು ಈ ಎಲ್ಲ ಆಯ್ಕೆ ನಡೆದಿದೆ ಎಂದು ಬಿಜೆಪಿಯ ಕೆಲವರು ಈ ನಿರ್ಧಾರ ಪರ ಮಾತನಾಡುತ್ತಿದ್ದಾರೆ. ಇನ್ನು ಕೆಲ ನಾಯಕರು ಬಿಎಸ್‍ವೈ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲು ನಳಿನ್ ಕುಮಾರ್ ಮೂಲಕ ಸಂತೋಷ್ ತಮ್ಮ ದಾಳವನ್ನು ಪ್ರಯೋಗಿಸುತ್ತಿದ್ದಾರೆ. ಮತ್ತೊಬ್ಬ ಲಿಂಗಾಯತ ನಾಯಕನ್ನು ಬೆಳೆಸಲು ಮಹೇಶ್ ಟೆಂಗಿನಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾತನ್ನಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಒಂದೊಂದು ಆಯ್ಕೆಯ ವಿಚಾರದ ಬಗ್ಗೆ ನಾಯಕರ ನಡುವೆ ಭಾರೀ ಚರ್ಚೆ ಆಗುತ್ತಿದೆ.

  • ಬಿಜೆಪಿಯ ಸ್ವಯಂಕೃತ ಅಪರಾಧದಿಂದ್ಲೇ ಸರ್ಕಾರ ಬೀಳುತ್ತೆ- ಸಿದ್ದರಾಮಯ್ಯ

    ಬಿಜೆಪಿಯ ಸ್ವಯಂಕೃತ ಅಪರಾಧದಿಂದ್ಲೇ ಸರ್ಕಾರ ಬೀಳುತ್ತೆ- ಸಿದ್ದರಾಮಯ್ಯ

    – ಇತಿಹಾಸದಲ್ಲೇ ಮೊದ್ಲ ಬಾರಿಗೆ ಮೂವರು ಡಿಸಿಎಂ

    ಬಾಗಲಕೋಟೆ: ಕರ್ನಾಟಕದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಆಯುಷ್ಯ ಕಡಿಮೆ ಇದೆ. ಬಿಜೆಪಿಯ ಸ್ವಯಂಕೃತ ಅಪರಾಧದಿಂದಲೇ ಸರ್ಕಾರ ಬೀಳುತ್ತದೆ. ಆದ್ದರಿಂದ ನಾವೇನು ಸರ್ಕಾರ ಕೆಡುವೊಕೆ ಕೈ ಹಾಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೂವರು ಉಪಮುಖ್ಯಮಂತ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆ ಸಂವಿಧಾನ ಹುದ್ದೆ ಅಲ್ಲ. ವಿಶೇಷ ಅಧಿಕಾರ ಇಲ್ಲ. ಇಲ್ಲಿ ಯಡಿಯೂರಪ್ಪರನ್ನು ಕಟ್ಟಿ ಹಾಕೋಕೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.

    ಯಡಿಯೂರಪ್ಪಗೆ ಇಷ್ಟ ಇಲ್ಲದಿದ್ದರೂ ಹೈಕಮಾಂಡ್ ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿಗೂ ಯಡಿಯೂರಪ್ಪಗೂ ಆಗಲ್ಲ. ಹೀಗಾಗಿ ಯಡಿಯೂರಪ್ಪರನ್ನು ಕಾರ್ನರ್ ಮಾಡುವ ಉದ್ದೇಶ ಇದಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಷ್ಟ ಇರಲಿಲ್ಲ. ಚುನಾವಣೆಗೆ ಹೋಗಬೇಕು ಎಂದು ಅಂದುಕೊಂಡಿದ್ದರು. ಆದರೆ ಯಡಿಯೂರಪ್ಪ ಅವರೇ ಗೋಗರೆದು ಮುಖ್ಯಮಂತ್ರಿ ಆಗಿದ್ದಾರೆ. ಪರಿಣಾಮ ಎಷ್ಟು ದಿನ ಇರ್ತಾರೆ ಹೇಳೋಕೆ ಆಗಲ್ಲ ಎಂದು ತಿಳಿಸಿದರು.

    ಬಿಜೆಪಿಯಲ್ಲಿ ಹಿರಿತನಕ್ಕೆ ಬೆಲೆಯಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದರು. ಈಶ್ವರಪ್ಪ-ಅಶೋಕ್ ಡಿಸಿಎಂ ಆಗಿದ್ದರು. ಅವರನ್ನು ಈಗ ಡಿಸಿಎಂ ಮಾಡಿಲ್ಲ. ಅಶ್ವಥ್ ನಾರಾಯಣ ಹಾಗೂ ಶಾಸಕನೇ ಆಗದಿರುವಂತಹ ಸವದಿಯನ್ನು ಡಿಸಿಎಂ ಮಾಡಿದ್ದಾರೆ. ಜನತಾದಳದಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಆಗುತ್ತದೆ ಎಂದು ನುಡಿದರು.

    ಬಿಜೆಪಿಯವರ ಭಾರದಿಂದ ಅವರೇ ಬೀಳುತ್ತಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಡಿಸಿಎಂ ಆಗಿದ್ದಾರೆ. ಇಬ್ಬರು ಡಿಸಿಎಂ ಮಾಡಿದ್ದು ಇವರೇ, ಈಗ ಮೂವರು ಡಿಸಿಎಂ ಮಾಡಿದ್ದು ಇವರೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

  • ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸಂತೋಷ್ – ಕಾರಿನವರೆಗೂ ಬಂದು ಬೀಳ್ಕೊಟ್ಟ ಯಡಿಯೂರಪ್ಪ

    ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸಂತೋಷ್ – ಕಾರಿನವರೆಗೂ ಬಂದು ಬೀಳ್ಕೊಟ್ಟ ಯಡಿಯೂರಪ್ಪ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಬಿ.ಎಲ್ ಸಂತೋಷ್ ಭೇಟಿ ನೀಡಿದ್ದಾರೆ. ಮಾತುಕತೆಯ ಬಳಿಕ ಬಿಎಸ್ ವೈ ಅವರು ಸಂತೋಷ್ ಅವರು ಕಾರಿನಲ್ಲಿ ಕುಳಿತುಕೊಳ್ಳುವವರೆಗೂ ಬಂದು ಬೀಳ್ಕೊಟ್ಟಿದ್ದಾರೆ.

    ಸಂತೋಷ್ ಗೆ ಭಾನುವಾರವಷ್ಟೇ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಬಿಜೆಪಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಿವಾಸಕ್ಕೆ ಸಂತೋಷ್ ಭೇಟಿ ನೀಡಿದ್ದಾರೆ. ಸಂತೋಷ್ ಜೊತೆ ಮಾತಾನಾಡಿ ಬಿಎಸ್‍ವೈ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಬಿಎಸ್‍ವೈ ಅವರು ಮನೆಯ ಗೇಟ್ ವರೆಗೂ ಬಂದು ಸಂತೋಷ್‍ರನ್ನ ಕಾರು ಹತ್ತಿಸಿದ್ದಾರೆ. ಇದನ್ನೂ ಓದಿ: ರಾಮಲಾಲ್ ಜಾಗಕ್ಕೆ ಬಿಎಲ್ ಸಂತೋಷ್ ನೇಮಕ

    ಇತ್ತ ಯಲಹಂಕ ಬಳಿ ಎರಡು ರೆಸಾರ್ಟ್ ನಲ್ಲಿ ವಾಸ್ತವ್ಯ ಇರುವ ಬಿಜೆಪಿ ಶಾಸಕರು ಬೆಳ್ಳಂಬೆಳಗ್ಗೆ ಯೋಗಾಭ್ಯಾಸ ಮಾಡಿದ್ದಾರೆ. ಈ ವೇಳೆ ಕೆಲವರಿಗೆ ಯೋಗ ಮಾಡೋಕೆ ಗೊತ್ತಾಗದೇ ಕಸರತ್ತು ಮಾಡಿದ ಪ್ರಸಂಗವೂ ನಡೆದಿದೆ.

  • ಸೋಲ್ತೇವೆ ಅನ್ನೋ ಹತಾಶೆಯಿಂದ ಏನೇನೋ ಮಾತಾಡ್ತವೆ – ಸಂತೋಷ್‍ಗೆ ಸಿದ್ದರಾಮಯ್ಯ ಟಾಂಗ್

    ಸೋಲ್ತೇವೆ ಅನ್ನೋ ಹತಾಶೆಯಿಂದ ಏನೇನೋ ಮಾತಾಡ್ತವೆ – ಸಂತೋಷ್‍ಗೆ ಸಿದ್ದರಾಮಯ್ಯ ಟಾಂಗ್

    ಬೆಳಗಾವಿ: ಸೋಲುತ್ತೇವೆ ಎಂಬ ಹತಾಶೆಯಿಂದ ಏನೇನೋ ಮಾತಾಡುತ್ತವೆ. ಸಂತೋಷ್‍ಗೆ ಬುದ್ಧಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‍ಗೆ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವರು ಸಿಂಗಲ್ ಡಿಜಿಟ್ ಅಷ್ಟೇ ಡಬಲ್ ದಾಟಲ್ಲ ಅಂದ್ರು. ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿದೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನನ್ನ ಆತ್ಮ ಎಲ್ಲಾ ಕಡೆ ಇದೆ. ನನ್ನ ಆತ್ಮ ಹೃದಯದಲ್ಲಿದೆ. ಎಲ್ಲಾ ಕಡೆ ಆತ್ಮ ಇರೋಕೆ ನಾನೇನು ದೇವರು ಅಲ್ಲ ಎಂದು ಸಂತೋಷ್‍ಗೆ ತಿರುಗೇಟು ನೀಡಿದ್ರು.

    ಹತ್ತು ಕೆ.ಜಿ ಅಕ್ಕಿ ಹೇಗೆ ಕೊಡ್ತಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೋಭಾ ಕರಂದ್ಲಾಜೆಗೆ ಏನೂ ಗೊತ್ತಾಗಲ್ಲ. ಏಳು ಕೆ.ಜಿ ಕೊಡುವವರಿಗೆ ಹತ್ತು ಕೆ.ಜಿ ಕೊಡುವುದಕ್ಕೆ ಆಗಲ್ವ. ಅವರು ಪೆದ್ದು ಪೆದ್ದಾಗಿ ಮಾತಾಡುತ್ತಾರೆ. ಬುದ್ಧಿ ಇಲ್ಲ ಅವಕ್ಕೆ. ಈಶ್ವರಪ್ಪ ಪೆದ್ದ. ಪೆದ್ದನ ಮಾತಿಗೆ ಉತ್ತರ ಕೊಡಲು ಆಗಲ್ಲ ಎಂದು ವ್ಯಂಗ್ಯವಾಡಿದ್ರು.

    ಬಿಜೆಪಿ ಕಡೆ ಬೆರಳು ಮಾಡಿದ್ರೆ ಕೈಕಟ್ ಮಾಡುತ್ತೀವಿ ಎಂದು ಕೇಂದ್ರ ಸಚಿವ ಮನೋಜ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಮಾಜಿ ಸಿಎಂ, ಬಿಜೆಪಿಯವರಿಗೆ ಹೊಡಿ, ಬಡಿ, ಕೊಲೆ ಮಾಡುವುದು ಬಿಟ್ಟರೆ ಏನೂ ಗೊತ್ತಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು. ಮಾನವೀಯತೆ ಇಲ್ಲದವರು, ಯಾರಿಗೆ ಮಾನವೀಯತೆ ಇಲ್ಲವೋ ಅವರು ರಾಕ್ಷಸ ಗುಣದವರು ಎಂದು ಕಿಡಿಕಾರಿದ್ರು.

    ಇದೇ ಸಂದರ್ಭದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ನಾನು ಈಗಲ್ಲ ಹೇಳಿದ್ದು ಮುಂದೆ ಚುನಾವಣೆ ಬಂದಾಗ ಹೇಳಿರೋದು. ಆಗ 10 ಕೆ.ಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದೆ. ನಮ್ಮ ಪಕ್ಷ ಸ್ವಂತ ಶಕ್ತಿ ಮೇಲೆ ಬಂದ ಬಳಿಕ ಸಿಎಂ ಆಗ್ತೀನಿ ಎಂದು ಹೇಳಿರುವುದು ಎಂದು ಸ್ಪಷ್ಟಪಡಿಸಿದರು.

  • ಮೋದಿ ಹೇಳಿದ್ದ ಮಾತು ನಿಜವಾಯ್ತು ಅಂದ್ರು ಬಿ.ಎಲ್ ಸಂತೋಷ್!

    ಮೋದಿ ಹೇಳಿದ್ದ ಮಾತು ನಿಜವಾಯ್ತು ಅಂದ್ರು ಬಿ.ಎಲ್ ಸಂತೋಷ್!

    – ನಿಖಿಲ್ ನಿರುದ್ಯೋಗಿಯಾಗೋದು ಪಕ್ಕಾ

    ವಿಜಯಪುರ: ದುಡ್ಡು ತಿಂದವರೆಲ್ಲರನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಅವರ ಮಾತು ನಿಜವಾಯಿತು ಎಂದು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ದೋಸ್ತಿ ಸರ್ಕಾರಕ್ಕೆ ಟಾಂಗ್ ನೀಡಿದ್ರು.

    ನಗರದಲ್ಲಿ ಪ್ರಬುದ್ಧರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಟಿ ದಾಳಿ ರಾಜ್ಯದಲ್ಲಿ ರಾಜಕೀಯ ಭೂಕಂಪ ಉಂಟು ಮಾಡಿತು. ನಂತರ ಸಿಎಂ, ಸಂಪುಟ ಸಚಿವರು, ಕಾಂಗ್ರೆಸ್ ಮುಖಂಡರು ರಸ್ತೆಗೆ ಬಂದು ಪ್ರತಿಭಟನೆ ನಡೆಸಿದರು. ದುಡ್ಡು ತಿಂದವರೆಲ್ಲರನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಮೋದಿ ಈ ಹಿಂದೆ ಹೇಳಿದ ಮಾತು ಇಂದು ನಿಜವಾಯಿತು ಅಂದ್ರು.

    ಅಲ್ಲದೆ ಸಿಎಂ ಕುಮಾರಸ್ವಾಮಿ ಯೋಧರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಚುನಾವಣೆಯಲ್ಲಿ ನಿಖಿಲ್ ಗೆಲ್ಲಲ್ಲ, ನಿಖಿಲ್ ಮಾಡುವ ಸಿನಿಮಾ ಓಡಲ್ಲ. ಚುನಾವಣೆ ನಂತರ ಸಿಎಂ ಎಚ್‍ಡಿ ಕುಮಾರಸ್ವಾಮಿ ಮಗ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ ಎಂದು ವ್ಯಂಗ್ಯವಾಡಿದರು.

    ಆಗ ಕುಮಾರಸ್ವಾಮಿ ನಿಖಿಲ್‍ನನ್ನು ಸೇನೆಗೆ ಸೇರಿಸಲಿ. ಅಲ್ಲಿ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ. ನಮ್ಮ ಸೈನಿಕರು ಯಾವತ್ತೂ ಶತ್ರುಗಳ ಗುಂಡಿಗೆ ಬೆನ್ನು ಕೊಟ್ಟಿಲ್ಲ. ಬೆನ್ನಿಗೆ ಗುಂಡು ಬಿದ್ದು ಹುತಾತ್ಮರಾದ ಉದಾಹರಣೆಯೂ ಇಲ್ಲ. ಸೈನಿಕರು ಗುಂಡಿಗೆ ಎದೆಯೊಡ್ಡಿದ್ದಾರೆಂದು ಸೈನಿಕರ ಸಾಧನೆಯನ್ನು ಶ್ಲಾಘಿಸಿ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಸಂವಾದ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಆಹ್ವಾನಿಸಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ ಜಿರಾಳೆ ಬಿ.ಎಲ್ ಸಂತೋಷ್ ಗೆ ಪ್ರಶ್ನಿಸಿದರು. ಆಗ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ನಂತರ ಸಂತೋಷ್ ಮಾತನಾಡಿ, ಪಕ್ಷದ ಆಂತರಿಕ ವಿಚಾರ. ಯಾರನ್ನು ಎಲ್ಲಿ ಕರೆಯಬೇಕೆಂಬುದು ಪಕ್ಷಕ್ಕೆ ಗೊತ್ತಿದೆ ಎಂದರು.

  • ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ, ಮೋದಿ ಮಾಡಿದ್ದಾರೆಂತ ಹೇಳಿಲ್ಲ- ಬಿ.ಎಲ್ ಸಂತೋಷ್

    ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ, ಮೋದಿ ಮಾಡಿದ್ದಾರೆಂತ ಹೇಳಿಲ್ಲ- ಬಿ.ಎಲ್ ಸಂತೋಷ್

    ಉಡುಪಿ: ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ. ಆದ್ರೆ ಅದನ್ನು ಮೋದಿ ಮಾಡಿದ್ದಾರೆ ಎಂದು ನಾವು ಹೇಳಿಲ್ಲ. ಎಲ್ಲವನ್ನೂ ಮಾಡೋದಕ್ಕೆ ಮೋದಿ ಜೇಮ್ಸ್ ಬಾಂಡ್ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

    ಮಣಿಪಾಲದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಸೈನಿಕರ ಜಾತಿ ಹುಡುಕುವ ರೋಗ ಹಿಂದೆ ಇರಲಿಲ್ಲ. ಈಗ ಎಲ್ಲಾ ಘಟನೆಗೂ ಸಾಕ್ಷಿ ಕೇಳುವವರು ಹುಟ್ಟಿಕೊಂಡಿದ್ದಾರೆ. ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ. ಆದ್ರೆ ಅದನ್ನು ಮೋದಿ ಮಾಡಿದ್ದಾರೆ ಎಂದು ನಾವು ಎಲ್ಲೂ ಹೇಳಿಲ್ಲ. ಮೋದಿ ಎರಡೂ ಕೈಯಲ್ಲಿ ಪಿಸ್ತೂಲು ಹಿಡಿದು ಹೋರಾಡಲ್ಲ. ಸೈನ್ಯವನ್ನು ಟ್ಯೂನ್ ಮಾಡೋಕೆ ಮೋದಿಗೆ ಗೊತ್ತು ಎಂದು ಹೇಳಿದರು.

    ಮೋದಿ ಭ್ರಷ್ಟಾಚಾರ ವಿರೋಧಿ ನೀತಿ ಕಠಿಣವಾಗಿದೆ. ನಮ್ಮ ಪಕ್ಷದ ಒಳಗೂ ಅನೇಕರಿಗೆ ಕಿರಿಕಿರಿ ಆಗುತ್ತದೆ. ಬೀದಿ ಕಸದ ಜೊತೆಗೆ ಮನೆಯ ಕಸವೂ ಗುಡಿಸಬೇಕು. ಮೋದಿಯ ಶಿಸ್ತು ಕೆಲ ಬಿಜೆಪಿಗರಿಗೇ ಆಗಲ್ಲ. ರಾಜಕೀಯ ಅಂದ್ರೆ ಲಫಂಗನ ಕೊನೆಯ ಮೆಟ್ಟಿಲು ಆಗಿರುತ್ತದೆ. ಮೋದಿಯವರು ರಾಜಕಾರಣಕ್ಕೆ ಕ್ರೆಡಿಬಿಲಿಟಿ ಕೊಟ್ಟರು ಅಂದ್ರು.

    ಬರ್ತ್, ಮ್ಯಾರೇಜ್ ಸರ್ಟಿಫಿಕೇಟ್ ಹಿಡ್ಕೊಂಡು ವಿಧಾನಸಭೆಗೆ ಬರುವವರಿದ್ದಾರೆ. ಮೋದಿ ಜಾತಿ, ವಂಶದ ಆಧಾರದಲ್ಲಿ ರಾಜಕಾರಣ ಮಾಡಲಿಲ್ಲ. ಅವರು ಪಾರ್ಲಿಮೆಂಟ್ ಗೆ ತಲೆಬಾಗಿ ನಮಿಸಿ ಒಳಗೆ ಬರುತ್ತಾರೆ. ಈ ಬಡ್ಡಿ ಮಗಂಗೆ ಇದೆಲ್ಲಾ ಹೇಗೆ ಹೊಳೀತು ಎಂದು ಖರ್ಗೆ ಹೇಳ್ತಾರೆ. ಇದೆಲ್ಲಾ ಹೊಳೆಯೋದಲ್ಲ ಎದೆಯಲ್ಲಿ ಅರಳೋದು ಎಂದು ಖರ್ಗೆಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ರು.

    ಐಟಿ ದಾಳಿಯಾದ್ರೆ ಸಿಎಂ ಪ್ರತಿಭಟನೆ ಮಾಡ್ತಾರೆ. ಎರಡೂ ಪಕ್ಷಗಳ ಅಧ್ಯಕ್ಷರು ಬೀದಿಗೆ ಬರುತ್ತಾರೆ. ಐಟಿ ದಾಳಿ ಆಗಿರೋದು ಯಾರ ಮನೆಗೆ. ಯಾರದ್ದೋ ಮನೆಗೆ ರೇಡ್ ಆದ್ರೆ ಸಿಎಂ ಯಾಕೆ ಧರಣಿ ಮಾಡಬೇಕು. ಭ್ರಷ್ಟಾಚಾರಿಯನ್ನು ಬೀದಿಗೆ ತರುತ್ತೇನೆಂದು ಮೋದಿ ಅಂದಿದ್ದರು. ಆದ್ರೆ ಈ ರೀತಿ ಭ್ರಷ್ಟರು ಬೀದಿಗೆ ಬರುತ್ತಾರೆಂದು ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

    ಮಹಿಳೆಯರ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಕ್ಯಾಬಿನೆಟ್ ನಲ್ಲಿ ಮಹಿಳೆಯರು ಪ್ರಮುಖ ಸ್ಥಾನ ಪಡೆದದ್ದು ಅರ್ಹತೆಯಿಂದ ಬಾಲಾಕೋಟ್ ದಾಳಿಯ ಒಂಬತ್ತು ಯುದ್ಧ ವಿಮಾನ ಪೈಕಿ ಒಂದನ್ನು ಲೇಡಿ ಪೈಲಟ್ ಚಾಲನೆ ಮಾಡಿದ್ದಾರೆ ಅಂದ್ರು.

  • ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    – ತೇಜಸ್ವಿ ಸೂರ್ಯ ಪರ ಬಿಎಲ್ ಸಂತೋಷ್ ಬ್ಯಾಟಿಂಗ್
    – ಸಂತೋಷ್ ಮಾತಿಗೆ ಹೈಕಮಾಂಡ್ ಮಣೆ

    ಬೆಂಗಳೂರು: ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕಾರ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ಬಗ್ಗೆ ರಾಜ್ಯ ನಾಯಕರು ಸಭೆ ನಡೆಸಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

    ದೆಹಲಿಯಲ್ಲಿರುವ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಬಿಎಲ್ ಸಂತೋಷ್ ಅವರು ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಮುಂದಿನ ಕಥೆಯೇನು? ಇನ್ನು ಹಲವು ವರ್ಷ ಪಕ್ಷ ಕಟ್ಟಿ, ಬೆಳೆಸುವವರು ಯಾರು ಎಂದು ಹೇಳಿ ತೇಜಸ್ವಿ ಸೂರ್ಯ ಹೆಸರನ್ನೂ ಪರಿಗಣಿಸಬಹುದು ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ.

    ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೂ ಹರಿದಾಡತೊಡಗಿ ಈ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅಂತಿಮವಾಗಿ ಹೈಕಮಾಂಡ್ ಸಂತೋಷ್ ಹೇಳಿದಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಒಂದು ಕಾಲದಲ್ಲಿ ಅನಂತ್ ಕುಮಾರ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಆದರೆ ಇಂದು ಒಂದು ಟಿಕೆಟ್‍ಗಾಗಿ ಕಡೆ ದಿನದವರೆಗೂ ತೇಜಸ್ವಿನಿ ಅನಂತಕುಮಾರ್ ಕಾದಿದ್ದರು. ಅಂದು ಅನಂತಕುಮಾರ್ ಜತೆ ಸಂತೋಷ್ ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಇಂದು ಬಿ.ಎಲ್.ಸಂತೋಷ್ ಚದುರಾಂಗದಾಟದಲ್ಲಿ ಎಲ್ಲವೂ ಉಲ್ಟಾವಾಗಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಇದರ ಜೊತೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ನಿಧನರಾದರೂ ಪತ್ನಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬಂದಿದೆ.

    ನನಗೆ ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ರೀತಿ ಟಿಕೆಟ್ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗುತ್ತದೆ. ನನ್ನನ್ನು ಬೆಂಬಲಿಸಿದ ನಾಯಕರಾದ ಮುಕುಂದ ಮತ್ತು ಬಿಎಲ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

     

  • ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು: ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್  ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕಾರಣ ಎನ್ನುವ ಮಾತು ಬಿಜೆಪಿ ವಲಯದಿಂದ ಈಗ ಕೇಳಿ ಬಂದಿದೆ.

    ಹೌದು. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

    ಅನಂತ್ ಕುಮಾರ್ ಅವರ ಸತತ ಜಯದಿಂದ ಬಿಜೆಪಿಯ ಭದ್ರಕೋಟೆ ಆಗಿರುವ ಈ ಕ್ಷೇತ್ರದಲ್ಲಿ ಸುಲಭವಾಗಿಯೇ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಜೆಪಿ ತನ್ನ ಐದು ಪಟ್ಟಿಯನ್ನು ಬಿಡುಗಡೆ ಮಾಡಿದರೂ ಬೆಂಗಳೂರು ದಕ್ಷಿಣದ ಅಭ್ಯರ್ಥಿಯನ್ನು ಘೋಷಿಸದೇ ಕುತೂಹಲ ಮೂಡಿಸಲು ಕಾರಣ ಬಿಎಲ್ ಸಂತೋಷ್ ಕಾರಣ ಎನ್ನುವ ಮಾತು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ಆರ್‍ಎಸ್‍ಎಸ್ ಆಕ್ಷೇಪ ವ್ಯಕ್ತಪಡಿಸುತ್ತದೆ. ಹೀಗಾಗಿ ಪಕ್ಷದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿಸೂರ್ಯ ಅವರನ್ನು ಕಣಕ್ಕೆ ಇಳಿಸಬಹುದು ಎಂದು ಹೈಕಮಾಂಡ್ ಮಟ್ಟದವರಿಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಪರಿಗಣಿಸಿದ ಹೈಕಮಾಂಡ್ ಈಗ ತೇಜಸ್ವಿನಿ ಅವರನ್ನು ಇಳಿಸಬೇಕೋ ಅಥವಾ ತೇಜಸ್ವಿ ಸೂರ್ಯ ಅವರನ್ನು ಇಳಿಸಬೇಕೋ ಎನ್ನುವ ಗೊಂದಲದಲ್ಲಿದೆ.

    ತೇಜಸ್ವಿನಿ ಹೆಸರನ್ನು ಶಿಫರಾಸು ಮಾಡಿದ ಬಳಿಕ ಸಂತೋಷ್ ಅವರು ಮತ್ತೊಂದು ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ರಾಜ್ಯ ನಾಯಕರು ಸಂತೋಷ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸಂತೋಷ್ ಅವರ ಪ್ರಸ್ತಾಪಕ್ಕೆ ಕೆಲ ಬಿಜೆಪಿ ನಾಯಕರು ಸಹಮತವನ್ನೂ ಸೂಚಿಸಿದ್ದಾರೆ ಎನ್ನಲಾಗಿದೆ. ಜಯನಗರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದ ವಿಜಯ್ ಕುಮಾರ್ ಅವರು ಮೃತಪಟ್ಟಿದ್ದರು. ಹೀಗಾಗಿ ನಂತರ ನಡೆದ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಅನುಕಂಪದ ಅಲೆಯಲ್ಲಿ ಪ್ರಹ್ಲಾದ್ ಬಾಬು ಅವರಿಗೆ ಜಯ ಸಿಗಬಹುದು ಎಂದು ಎಣಿಸಿ ಟಿಕೆಟ್ ನೀಡಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಜಯಗಳಿಸಿದ್ದರು. ಹೀಗಾಗಿ ಯಾವಾಗಲೂ ಅನುಕಂಪ ಕೆಲಸ ಮಾಡುವುದಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದಾಗಿ ಕ್ಷೇತ್ರದಲ್ಲಿ ಗಟ್ಟಿ ಅಭ್ಯರ್ಥಿಯನ್ನು ಹಾಕಬೇಕು ಎನ್ನುವ ವಿಚಾರದ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಸಂಜೆ ಇತ್ಯರ್ಥ: ಸೋಮವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದು ಇಂದು ಸಂಜೆ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ.