ಬೆಂಗಳೂರು: ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೀದರ್ ಸಂಸದ ಭಗವಂತ್ ಖೂಬಾ ಅವರು ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಬಿಜೆಪಿ ಕಾರ್ಯಾಲಯ ಪ್ರವೇಶಿಸುವ ಮುನ್ನ ಬಾಗಿಲ ಬಳಿ ಮಂಡಿಯೂರಿ ನೆಲಕ್ಕೆ ತಲೆ ತಾಗಿಸಿ ನಮಸ್ಕರಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಕ್ಷವು ನನಗೆ ಈಗ ಹೆಚ್ಚಿನ ಜವಾಬ್ದಾರಿ ನೀಡಿದೆ. ಆದ್ದರಿಂದ ಪಕ್ಷಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಮನ ಸಲ್ಲಿಸಿದ್ದಾಗಿ ಅವರು ಭಾವಪೂರ್ಣರಾಗಿ ನುಡಿದರು.
ಬಳಿಕ ಕಾರ್ಯಾಲಯದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಅಲ್ಲದೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
ಜಗನ್ನಾಥ ಭವನವನ್ನು ಪ್ರವೇಶಿಸುವ ಮೊದಲು ನಮಸ್ಕರಿಸಿ, ನಂತರ ಭಾರತ ಮಾತೆಯ ಹಾಗೂ ಕರ್ನಾಟಕ ಕೇಸರಿ ಎಂದೇ ಪ್ರಖ್ಯಾತರಾಗಿರುವ ಶ್ರೀ. ಜಗನ್ನಾಥ್ ಜೋಷಿಯವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಾರ್ಪಣೆ ಮಾಡಿದೆ. pic.twitter.com/UvPVJ78YPk
ಬೆಂಗಳೂರು: ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಂಡಿದೆ. ಯೋಗದ ಮೂಲಕ ಕಣ್ಣುಮುಚ್ಚಿ ಭಗವಂತನ ಧ್ಯಾನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನವಾದ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿ. ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ಗಣಿತದಿಂದ ಹಿಡಿದು ಹಲವು ಕೊಡುಗೆಯಲ್ಲಿ ಯೋಗವೂ ಒಂದು ಎಂದು ತಿಳಿಸಿದರು.
ಯೋಗ ಆಧ್ಯಾತ್ಮದ ಒಂದು ಭಾಗ. ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಂಡಿದೆ. ಯೋಗದ ಮೂಲಕ ಕಣ್ಣುಮುಚ್ಚಿ ಭಗವಂತನ ಧ್ಯಾನ ಮಾಡಲಾಗುತ್ತದೆ. ಉಳಿದವು ಕಣ್ಣು ಬಿಟ್ಟು ಭಗವಂತನ ಕಾಣುವ ಪ್ರಯತ್ನ ಮಾಡಲಾಗುತ್ತದೆ. ಮನಸ್ಸು ಬುದ್ಧಿಯ ಮೂಲಕ ಭಗವಂತ, ಮೋಕ್ಷವನ್ನು ಕಾಣುವ ಪದ್ಧತಿ ಯೋಗ ಎಂದು ಬಣ್ಣಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಮಹತ್ವದ ಕೊಡುಗೆ ನೀಡಿದೆ. ಸಾವಿರಾರು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಯೋಗ ಇಂದು ವಿಶ್ವ ಯೋಗದಿನವಾಗಿ ಆಚರಣೆಯಾಗುತ್ತಿದೆ. ಈ ವರ್ಷದ ಆರನೇ ವರ್ಷದ ಯೋಗ ದಿನಾಚರಣೆ ಮಾಡಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಯೋಗ ದಿನಕ್ಕೆ ಕಟೀಲ್ ಚಾಲನೆ ನೀಡಿದರು.
ಬಳಿಕ ನಳಿನ್, ಎಂಎಲ್‍ಸಿ ರವಿಕುಮಾರ್, ಬಿಜೆಪಿ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸರಳವಾಗಿ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಈ ವೇಳೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಭಾಗಿಯಾಗಿದ್ದರು. ಯೋಗ ದಿನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಲಾಯಿತು.
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಲೀಕ್ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಕಟೀಲ್ ಅವರು, ಈ ಆಡಿಯೋವನ್ನು ಸಿದ್ದರಾಮಯ್ಯನವರೇ ರಿಲೀಸ್ ಮಾಡಿದ್ದಾರೆ. ಈ ಹಿಂದೆಯೂ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಮಾತನಾಡಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಅವರಿಗೆ ಮುಖ್ಯಮಂತ್ರಿ ಆಗುವ ಆಸೆ. ಅದಕ್ಕಾಗಿಯೇ ಇಂತಹ ಪ್ರಯೋಗಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಆಂತರಿಕ ಸಭೆಯಲ್ಲಿ ಮಾಡಿದ ಆಡಿಯೋ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಎಲ್ಲವನ್ನೂ ಹೊರಗೆ ತರುತ್ತೇವೆ. ಆದರೆ ಈ ವಿಚಾರವಾಗಿ ಬಿಜೆಪಿ ತಲೆ ಕೆಡಿಸಿಕೊಂಡಿಲ್ಲ. ಇಂತಹ ಪ್ರಯೋಗ ಮಾಡಿದ ಸಿದ್ದರಾಮಯ್ಯ ಅವರ ಸ್ಥಿತಿ ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ. ಬಿಜೆಪಿ ಸರ್ಕಾರ ಬಿದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಅಂದುಕೊಂಡಿದ್ದಾರೆ. ಇದು ಅವರ ಹಗಲುಗನಸು ಎಂದು ಕುಟುಕಿದರು.
ಬಿಎಸ್‌ವೈ ಆಡಿಯೋ ವಿರುದ್ಧ ಕಾಂಗ್ರೆಸ್ ಕಾನೂನು ಸಮರ ಮಾಡಲಿ. ಸಿದ್ದರಾಮಯ್ಯ ಅವರು ಕಾನೂನನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಸುಳ್ಳು ಪ್ರಚಾರ ಮಾಡಲು ಹೊರಟಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಬಿ.ಎಸ್.ಯಡಿಯೂರಪ್ಪನವರ ಆಡಿಯೋ ಮಾಡಿದ್ದು ಬಿಜೆಪಿಯವರೇ ಅಂತ ಸ್ಪಷ್ಟವಾಗಿಲ್ಲ. ಪಕ್ಷದ ಕಡೆಯಿಂದ ಆಡಿಯೋ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಬಗ್ಗೆ ಮಂಗಳೂರು ದರ್ಶನ ಪುಸ್ತಕ ಮಾಡಲಾಗಿತ್ತು. ಆ ಪುಸ್ತಕದಲ್ಲಿ ಟಿಪ್ಪು ಸಾವಿರಾರು ಕ್ರೈಸ್ತರನ್ನು ಹತ್ಯೆ ಮಾಡಿದ್ದಾನೆ. ಹೀಗಾಗಿ ಆತ ಕ್ರೂರಿ, ನೆತ್ತರು ಹರಿಸಿದವ ಅಂತ ಮಾಹಿತಿ ಇದೆ. ಇದೊಂದೆ ವಿಚಾರ ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ಎಲ್ಲವೂ ದ್ವಂದ್ವ ಇದೆ. ಇಂತಹ ನಿಲುವುಗಳ ಮೂಲಕ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ 100 ದಿನಗಳು ಪೂರೈಸಿದ್ದಕ್ಕೆ ಸಿದ್ದರಾಮಯ್ಯನವರು ಟೀಕೆ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ 100 ದಿನಗಳ ಪೂರೈಸಿದ್ದಾಗ ಅನೇಕ ಕೊಲೆಗಳಾಗಿದ್ದವು. ಮಂಗಳೂರಿಗೆ ಸಿದ್ದರಾಮಯ್ಯ ಬರುತ್ತಿದ್ದಾರೆ ಅಂತ ಶರತ್ ಮಡಿವಾಳರ ಮೃತದೇಹ ಮುಚ್ಚಿಡಲಾಗಿತ್ತು. ಮಂಗಳೂರಿನಿಂದ ತೆರಳಿದ ಬಳಿಕ ಮೃತದೇಹ ಹೊರಗೆ ತರಲಾಗಿತ್ತು ಎಂದು ಆರೋಪಿಸಿದರು.
-ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ
-ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ ನಡಿಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಸಿಎಂ ಯಡಿಯೂರಪ್ಪ ಅಷ್ಟೇ ಅಲ್ಲ ಸಿಎಂ ಬೆಂಬಲಿಗರನ್ನೂ ಕೂಡ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಯಡಿಯೂರಪ್ಪನವರ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ. ಹಾಗೆಯೇ ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸಿಎಂ ಬೆಂಬಲಿಗ ನಂಜುಂಡಸ್ವಾಮಿ ಆರೋಪಿಸಿದ್ದಾರೆ. ಬಹಿರಂಗವಾಗಿ ವೀಡಿಯೋದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ನಂಜುಂಡಸ್ವಾಮಿ, ಸಿಎಂ ಬೆಂಬಲಿಗರು ಎಂಬ ಕಾರಣಕ್ಕೆ ತಮ್ಮ ಪಕ್ಷದಲ್ಲಿ ಭೇದಭಾವ ಮಾಡಲಾಗುತ್ತಿದೆ ಎಂದು ಹೇಳಿಕೊಂಡರು.
ಲಿಂಗಾಯತರು, ಯಡಿಯೂರಪ್ಪನವರು ಆಪ್ತರೆಂದು ನಮಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ನಂಜುಂಡಸ್ವಾಮಿ ಬಹಿರಂಗ ಆರೋಪಿ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಬಿಜೆಪಿ ಕಚೇರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
14 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ, ಆದ್ರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಆದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಬೆಳೆಸಿದರು. ಆದರೆ ಪ್ರಸ್ತುತವಾಗಿ ಬಂದಿರುವ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡಿಕೊಂಡು ಸುಮಾರು 5ರಿಂದ 6 ಮಂದಿ ಕೆಲಸಗಾರರನ್ನು ತೆಗೆದು ಹಾಕಿದ್ದಾರೆ. ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಾರೆ. 14 ವರ್ಷ ನಾವು ದುಡಿದ ಶ್ರಮ ಎಲ್ಲಿ ಹೋಯ್ತು? ಬಿಎಸ್‍ವೈ ಬೆಂಬಲಿಗರು ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಬಿಎಸ್‍ವೈ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಎಲ್ಲಾ ಜಾತಿಯ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಿಬಿಡುತ್ತೆ. ಉತ್ತರ ಕರ್ನಾಟಕ ನೆರೆ ಪರಿಹಾರ ಕೊಡಬೇಕು ಎಂದು ಬಿಎಸ್‍ವೈ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತ ಕಿಡಿಕಾರಿದರು.
ವಿಧಾನಸೌಧ, ವಿಧಾನಸಭೆಯಲ್ಲಿ ಯಾರೂ ಕೂಡ ಯಡಿಯೂರಪ್ಪ ಅವರನ್ನ ಬೈಯ್ಯುತ್ತಲ್ಲ. ಆದರೆ ನಮ್ಮ ಪಕ್ಷದಲ್ಲಿ ಸೇರಿಕೊಂಡಿರುವ ಕೆಲವು ಹುಳಗಳು ಸಿಎಂನಾ ಮೂಲೆಗುಂಪು ಮಾಡಲು ಪ್ಲಾನ್ ಹಾಕಿದ್ದಾರೆ ಎಂದರು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡ ಎಚ್ಚರಿಸಿದ್ದಾರೆ. ನೀವು ಹೀಗೆ ಕಚೇರಿಯಲ್ಲಿ ತಾರತಮ್ಯ ಮಾಡುತ್ತೀರಿ, ಲಿಂಗಾಯರು ಎಂದು ಬೇಧ ಮಾಡಿದರೆ ನಿಜವಾಗಿಯೂ ಮುಂದಿನ ಚುವಾವಣೆಯಲ್ಲಿ 40%ದಷ್ಟು ಕೂಡ ಮತ ಬೀಳಲ್ಲ. ಬಿಎಸ್‍ವೈ ಪಕ್ಷ ಕಟ್ಟಿದ್ದಾಗ ಬಿಜೆಪಿ ಸ್ಥಿತಿ ಹೇಗಿತ್ತು ಈಗ ಹೇಗಿದೆ ಎನ್ನುವುದನ್ನು ಮರೆಯಬೇಡಿ. ನೀವು ಹೀಗೆ ತಾರತಮ್ಯ ಮಾಡುತ್ತಿದ್ದರೆ ಬಜೆಪಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸೀಟು ಗೆಲ್ಲಲ್ಲ ಎಂದರು.
ಹಾಗೆಯೇ ಅಮಿತ್ ಶಾ ಅವರ ಬಗ್ಗೆ ಮಾತನಾಡಿ, ನೀವು ನೆರೆ ವೀಕ್ಷಣೆಗೆ ಬಂದು ಕರ್ನಾಟಕದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ. ಆದರೂ ಪರಿಹಾರ ಬಿಡುಗಡೆ ಮಾಡಲು ಏಕೆ ತಡಮಾಡಿದ್ದೀರಾ? ಬೇರೆ ರಾಜ್ಯಗಳಿಗೆ ಎಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈವರೆಗೂ ಬಿಎಸ್‍ವೈ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇದನ್ನು ನಳಿನ್ ಕುಮಾರ್ ಕಟೀಲ್ ತಿಳಿದುಕೊಳ್ಳಬೇಕು. ಯಡಿಯೂರಪ್ಪ ಇದ್ರೆ ಬಿಜೆಪಿ, ಈಗ ಅವರು ಬೇಡ ಎಂದು ಬೇರೆಯವರು ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಮೋದಿ ಅವರೊಬ್ಬರನ್ನೇ ನೋಡಿ ಬಿಜೆಪಿಗೆ ಜನ ಮತ ಹಾಕಿಲ್ಲ. ಕನಾಟಕದಲ್ಲಿ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ. ಮೋದಿ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.
ಮೈಸೂರು: ದೆಹಲಿಯ ಕೇಂದ್ರ ಬಿಜೆಪಿ ಕಚೇರಿಗೆ ಹುಸಿಬಾಂಬ್ ಬೆದರಿಕೆ ಕರೆ ಮಾಡಿದ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರು ಮೈಸೂರಿನಲ್ಲಿ ವೃದ್ಧನನ್ನು ಬಂಧಿಸಿದ್ದಾರೆ.
ಮೈಸೂರಿನ ಸಿದ್ಧಾರ್ಥ ನಗರ ನಿವಾಸಿ 85 ವರ್ಷದ ಸುಕನ್ ರಾಜ್ ಬಂಧಿತ ವೃದ್ಧ. ಬಂಧಿತ ವೃದ್ಧ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.
ಏನಿದು ಪ್ರಕರಣ?
ಜೂನ್ 22 ರಂದು ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಾಂಬ್ ಇದೆ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದನು. ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಿಜೆಪಿ ಕಚೇರಿಗೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಆದರೆ ಇದೊಂದು ಹುಸಿ ಕರೆ ಎಂಬುದು ತಿಳಿದುಬಂದಿತ್ತು. ಕರೆಯ ಜಾಡು ಹಿಡಿದ ಪೊಲೀಸರಿಗೆ ಇದು ಮೈಸೂರಿನಿಂದ ಬಂದಿದೆ ಎನ್ನುವುದು ಗೊತ್ತಾಗಿತ್ತು. ಅದ್ದರಿಂದ ಈ ಪ್ರಕರಣವನ್ನು ಕರ್ನಾಟಕ ಪೊಲೀಸರಿಗೆ ವಹಿಸಲಾಗಿತ್ತು.
ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಆಗಮಿಸಿದ್ದು, ಕುತೂಹಲ ಮೂಡಿಸಿದೆ.
ಹೌದು. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಿದ್ದು, ಜನರ ಚಿತ್ರ ದೇಶದ ಫಲಿತಾಂಶದತ್ತ ನೆಟ್ಟಿದೆ. ಇತ್ತ ರಾಜಕೀಯ ನಾಯಕರುಗಳು ತಮ್ಮ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರ ಮನೆಗೆ ರತ್ನಪ್ರಭಾ ಆಗಮಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರೋ ಬಿಎಸ್‍ವೈ ಮನೆಗೆ ಆಗಮಿಸಿರುವ ರತ್ನಪ್ರಭಾ ಅವರು ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸೋ ಸಾಧ್ಯತೆಗಳಿವೆ ಎನ್ನಲಾಗಿದೆ.
ಇತ್ತ ಬಿಜೆಪಿ ಕಚೇರಿ ಮುಂಭಾಗ ದೊಡ್ಡ ಎಲ್ ಇಡಿ ಸ್ಕ್ರೀನ್ ಪರದೆಯ ಮೂಲಕ ಚುನಾವಣಾ ಫಲಿತಾಂಶ ವೀಕ್ಷಣೆಗೆ ಸಜ್ಜು ಮಾಡಲಾಗುತ್ತಿದೆ. ಅಲ್ಲದೆ ಸಾಕಷ್ಟು ಕಾರ್ಯಕರ್ತ ರು ಆಗಮಿಸುವ ನಿರೀಕ್ಷೆ ಇರೋದ್ರಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನವದೆಹಲಿ: ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರಿಗೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ.
ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಭೋಪಾಲ್‍ನಿಂದ ಸ್ಪರ್ಧೆ ನಡೆಸುವ ವಿಚಾರ ಸಂಬಂಧ ಜಿವಿಎಲ್ ರಾವ್ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಈ ವೇಳೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. ಶೂ ಎಸೆದ ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯರ್ತರು ಆತನ ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ಹೋಗಿದ್ದಾರೆ.
ಶೂ ಎಸೆದ ವ್ಯಕ್ತಿಯನ್ನು ಶಕ್ತಿ ಭರ್ಗವ್ ಎಂದು ಗುರುತಿಸಲಾಗಿದ್ದು ಸರ್ಜನ್ ಆಗಿದ್ದಾನೆ. ಐಪಿ ಎಸ್ಟೇಟ್ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
#WATCH Delhi: Shoe hurled at BJP MP GVL Narasimha Rao during a press conference at BJP HQs .More details awaited pic.twitter.com/7WKBWbGL3r
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಿಜೆಪಿ ನಾಯಕರು ಹಾಗೂ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಬಂದು ಕೇಸರಿ ನಾಯಕರ ಅಂತಿಮ ದರ್ಶನ ಪಡೆದಿದ್ದಾರೆ.
ಬಿಜೆಪಿ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಬಿಜೆಪಿ ಕಚೇರಿ ಸುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಒಬ್ಬರು ಡಿಸಿಪಿ, 5 ಇನ್ಸ್ ಪೆಕ್ಟರ್, 6 ಸಬ್ ಇನ್ಸ್ ಪೆಕ್ಟರ್, 220 ಪೊಲೀಸ್ ಕಾನ್ಸ್ ಟೇಬಲ್ ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಜನರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಮೃತದೇಹಕ್ಕೆ ಮಾಲಾರ್ಪಾಣೆ ಮಾಡಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅಶ್ವಿನ್ ಚೌಬೆ , ರಾಮಲಾಲ್, ಮುರಳೀಧರ್ ರಾವ್, ಅನುರಾಗ್ ಠಾಕೋರ್, ಡಿವಿಎಸ್ ಸೇರಿದಂತೆ ಗಣ್ಯರಿಂದ ಅಂತಿಮ ನಮನ ಸಲ್ಲಿಸಿದ್ದಾರೆ. ಒಂದು ಕಡೆ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ ಇನ್ನೊಂದೆಡೆ ಅನಂತ್ ಕುಮಾರ್ ಅಮರ್ ರಹೇ ಎಂಬ ಘೋಷವಾಕ್ಯಗಳು ಕೇಳಿಬಂದಿತ್ತು.
ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಸ್ತುವಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಮೂವರು ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ರವಿಕುಮಾರ್, ಅರವಿಂದ ಲಿಂಬಾವಳಿ ಸ್ಥಳದಲ್ಲೇ ಮೇಲ್ವಿಚಾರಣೆ ನಡೆಸಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿನ್ನೆ ಅಂತಿಮ ದರ್ಶನ ಪಡೆದಿದ್ದರು. ಇಂದು ಮಧ್ಯಾಹ್ನ ಚಾಮರಾಜ ಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಬಿಜೆಪಿ ಕಚೇರಿಯಿಂದ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ಇದೀಗ ನ್ಯಾಷನಲ್ ಕಾಲೇಜ್ ನತ್ತ ತೆರಳುತ್ತಿದೆ.
ಉಡುಪಿ: ನಗರದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಬಿಜೆಪಿ ಸದಸ್ಯರು, ಜಿಲ್ಲಾ ಅಧ್ಯಕ್ಷರು ಎಲ್ಲಾ ಸೇರಿ ಕುಣಿದು ಕುಪ್ಪಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಹಿಳಾ ಮಣಿಗಳು ಹಿಂದಿ ಸಿನೆಮಾವೊಂದರ ಹಾಡಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಲೋಕಸಭಾ ಚುನಾವಣಾ ಸಿದ್ಧತಾ ಮೀಟಿಂಗ್ ನಡೆದಿದ್ದು, ಬಳಿಕ ಮಹಿಳಾ ಪದಾಧಿಕಾರಿಗಳು ಕಚೇರಿಯಲ್ಲಿಯೇ ಪಕ್ಷದ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾದ ಸಭೆ ಮುಗಿದ ಬಳಿಕ “ರಂಗೀಲೊ ಮಾರೋ ಡೋಲ್ನಾ” ಎಂಬ ಹಿಂದಿ ಹಾಡಿಗೆ ಮಹಿಳಾ ಪದಾಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ. ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿರುವ ಹತ್ತಕ್ಕೂ ಹೆಚ್ಚು ಮಹಿಳೆಯರಲ್ಲಿ ಬಹುತೇಕ ಮಧ್ಯವಯಸ್ಸಿನವರೇ ಇದ್ದು, ತಮ್ಮ ವಯಸ್ಸನ್ನೂ ಲೆಕ್ಕಿಸದೇ ಸಂಭ್ರಮಿಸಿದ್ದಾರೆ.
ಕಚೇರಿಯ ಸಭಾಂಗಣದಲ್ಲಿ ಡ್ಯಾನ್ಸ್ ಮಾಡಿರುವ ಈ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲೋಕಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆಗೆ ರಿಹರ್ಸಲ್ ಶುರು ಮಾಡಿದ್ದಾರಾ ಅನ್ನೋದಾಗಿ ಜಾಲತಾಣಿಗರು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಚಿತ್ತಾಪುದುರ್ ಪ್ರದೇಶದಲ್ಲಿ ದುಷ್ಕರ್ಮಿಗಳು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬುಧವಾರ ಬೆಳಗ್ಗೆ ಸುಮಾರು 4 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ವೇಳೆ ಕಚೇರಿ ಮುಚ್ಚಿದ್ದರಿಂದ ಯಾರಿಗೂ ಅಪಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಾನು ಮಲಗಿದ್ದಾಗ ಏನೋ ಶಬ್ದ ಕೇಳಿಸಿತು. ಮಹಡಿಯಿಂದ ಕೆಳಗಿಳಿದು ಬಂದಾಗ ಎರಡು ಪೆಟ್ರೋಲ್ ಬಾಂಬ್ ಎಸೆದಿರುವುದನ್ನ ನೋಡಿದೆ. ಒಂದು ಮೇಲೆ ಹಾಗೂ ಮತ್ತೊಂದನ್ನು ಕೆಳಮಹಡಿಯಲ್ಲಿ ಎಸೆಯಲಾಗಿತ್ತು. ಅವರು ವಾಹನಗಳನ್ನ ಇಲ್ಲೇ ನಿಲ್ಲಿಸಿ ಪರಾರಿಯಾದರು. ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಹೆಚ್ಚಿನ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಪ್ರತ್ಯಕ್ಷದರ್ಶಿ ನಾಮ್ ಮುತ್ತು ಕುಮಾರ್ ಹೇಳಿದ್ದಾರೆ.
ಘಟನೆ ನಂತರ ಚೆನ್ನೈನ ಬಿಜೆಪಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲಾ ಕಡೆಯಿಂದ ಬ್ಯಾರಿಕೇಡ್‍ಗಳನ್ನ ಹಾಕಲಾಗಿದ್ದು, ಯಾವುದೇ ವಾಹನಗಳನ್ನ ಒಳಗೆ ಬಿಡುತ್ತಿಲ್ಲ ಎಂದು ವರದಿಯಾಗಿದೆ.
ದುಷ್ಕಮಿಗಳು ಬಾಂಬ್‍ಗಳನ್ನ ಎಸೆದು ಪರಾರಿಯಾಗುತಿರುವುದನ್ನ ಸಿಸಿಟಿವಿ ದೃಶ್ಯವಳಿಯಲ್ಲಿ ಕಾಣಬಹುದು.