Tag: BJP MLAs

  • ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರವನ್ನು ಬೀಳಿಸಲು ಮುಂದಾದ ರಾಜ್ಯ ಬಿಜೆಪಿ ನಾಯಕರಿಗೆ ಅವರದ್ದೇ ಕಂಪ್ಯೂಟರ್ ಬಾಬಾ ಶಾಕ್ ಕೊಟ್ಟಿದ್ದಾರೆ.

    ಬಿಜೆಪಿಯ ನಾಲ್ಕು ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಸಮಯ ಬಂದಾಗ ಎಲ್ಲರ ಮುಂದೆ ಹಾಜರು ಪಡೆಸುತ್ತೇನೆ. ಸಿಎಂ ಕಮಲ್‍ನಾಥ್ ಹೇಳಿದರೆ ಅವರ ಮುಂದೆ ಹಾಜರು ಪಡಿಸುತ್ತೇನೆ. ಬಿಜೆಪಿ ಆ ನಾಲ್ಕು ಜನ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕಂಪ್ಯೂಟರ್ ಬಾಬಾ ಬಾಂಬ್ ಸಿಡಿಸಿದ್ದಾರೆ.

    ಕಂಪ್ಯೂಟರ್ ಬಾಬಾ ಎಂದೇ ಖ್ಯಾತಿಯಾಗಿರುವ ನಾಮದೇವ್ ದಾಸ್ ತ್ಯಾಗಿ ಅವರು ಬಿಜೆಪಿ ಶಿವರಾಜ್‍ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ರಾಜ್ಯ ದರ್ಜೆಯ ಮಂತ್ರಿ ಸ್ಥಾನಮಾನ ಪಡೆದಿದ್ದರು. ನರ್ಮದಾ ನದಿಯ ಸಂರಕ್ಷಣಾ ಸಮಿತಿ ಸದಸ್ಯ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬಾ, ನರ್ಮಾನಂದ ಮಹಾರಾಜ್, ಹರಿಹರನಂದ ಮಹಾರಾಜ್, ಭೈಯು ಮಹಾರಾಜ್‍ಜಂದ್ ಹಾಗೂ ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಮಧ್ಯಪ್ರದೇಶ ಸರ್ಕಾರ ಮಂತ್ರಿ ಸ್ಥಾನವನ್ನು ಕಲ್ಪಿಸಿತ್ತು. ಸದ್ಯ ಕಮಲ್‍ನಾಥ್ ನೇತೃತ್ವದ ಸರ್ಕಾರದಲ್ಲಿ ಕಂಪ್ಯೂಟರ್ ಬಾಬಾ ನರ್ಮದಾ, ಶಿಪ್ರಾ ಹಾಗೂ ಮಂದಾಕಿನಿ ನದಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.

    ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರಿಬ್ಬರು ಕ್ರಿಮಿನಲ್ ಅಪರಾಧ ತಿದ್ದುಪಡಿ ತರಲು ಬೆಂಬಲ ನೀಡುವ ಮಸೂದೆಯ ಪರ ಮತವನ್ನು ಹಾಕಿ ಶಾಕ್ ನೀಡಿದ್ದರು. ಈ ಬೆನ್ನಲ್ಲೇ ಕಂಪ್ಯೂಟರ್ ಬಾಬಾ ತಮ್ಮದೆ ಪಕ್ಷದ ನಾಯಕರು ನಡೆಸಿದ್ದ ಆಪರೇಷನ್‍ಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಹೊತ್ತಿದ್ದ ಬಿಜೆಪಿಗೆ ಆಘಾತವಾಗಿದೆ.

    ಕಮಲ್‍ನಾಥ್ ನೇತೃತ್ವದ ಸರ್ಕಾರವು ವಿಶ್ವಾಸಮತ ಕಳೆದುಕೊಳ್ಳಲಿದೆ ಎಂದು ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೇಳಿದ್ದರು. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದ್ದು, ಕಾಂಗ್ರೆಸ್ ಮತ್ತೆ ಹೆಚ್ಚಿನ ಸಂಖ್ಯಾಬಲ ಸಿಕ್ಕಂತಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿದ ಶಾಸಕರ ಪೈಕಿ ಒಬ್ಬರಾದ ನಾರಾಯಣ್ ತ್ರಿಪಾಠಿ ಅವರು, ಇದು ನನ್ನ ಘರ್ ವಾಪಸಿ ಎಂದು ಬುಧವಾರ ಘೋಷಿಸಿದ್ದರು.

    ಬುಧವಾರವಷ್ಟೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

    ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

    – ಬಿಜೆಪಿಯಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ
    – ಆರೋಗ್ಯ ವಿಚಾರಿಸೋದು ನಮ್ಮ ಕರ್ತವ್ಯ

    ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬವನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಯೇ ಅಹೋರಾತ್ರಿ ಧರಣಿ ಮಾಡಿದ್ದು, ರಾತ್ರಿಯೆಲ್ಲ ಸದನದಲ್ಲಿ ನಿದ್ದೆ ಮಾಡಿ ಬೆಳ್ಳಂಬೆಳಗ್ಗೆ ವಿಧಾನಸೌಧದಲ್ಲಿ ತಿಂಡಿ ಮಾಡಿದ್ದಾರೆ.

    ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್ ಸವಿದಿದ್ದಾರೆ. ಬಿಜೆಪಿ ಶಾಸಕರ ಬ್ರೇಕ್ ಫಾಸ್ಟ್ ವೇಳೆ ಡಿಸಿಎಂ ಪರಮೇಶ್ವರ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ಶಾಸಕರ ಜೊತೆ ಪರಮೇಶ್ವರ್ ಕೂಡ ತಿಂಡಿ ತಿಂದಿದ್ದಾರೆ.

    ಪರಮೇಶ್ವರ್ ಬಿಜೆಪಿಯ ಇಂದಿನ ರಣತಂತ್ರ ತಿಳಿದುಕೊಳ್ಳಲು ಬೆಳ್ಳಂಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ನಿದ್ದೆ ಮಾಡಿದ್ರಾ? ಜಾಗರಣೆ ಮಾಡಿದ್ರಾ? ಸೊಳ್ಳೆ ಕಡಿದ್ವಾ? ಆರೋಗ್ಯ ಹೇಗಿದೆ? ಎಂದು ಬಿಜೆಪಿ ಶಾಸಕರ ಆರೋಗ್ಯವನ್ನು ಪರಮೇಶ್ವರ್ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಗುರುವಾರ ರಾತ್ರಿಯಿಂದ ವಿಧಾನಸೌಧದಲ್ಲಿ ತಂಗಿದ್ದಾರೆ. ಸಭಾಧ್ಯಕ್ಷರು ಅವರ ಯೋಗಕ್ಷೇಮ, ಊಟ, ವಸತಿ ಏರ್ಪಡಿಸಬೇಕು ಎಂದು ಸೂಚಿಸಿದ್ದರು. ಹೀಗಾಗಿ ರಾತ್ರಿ ಭೋಜನದ ವ್ಯವಸ್ಥೆ, ಮಲಗಲು, ಪಿಲ್ಲೋ ಕೊಟ್ಟಿದ್ದೆವು. ಇಂದು ಬೆಳಗ್ಗೆ ಕೂಡ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ನಾನು ಅವರ ಜೊತೆಯಲ್ಲಿಯೇ ತಿಂಡಿ ಸವಿದೆ. ಮುಂಜಾಗೃತಾ ಕ್ರಮವಾಗಿ ವೈದ್ಯರ ಒಂದು ತಂಡವನ್ನು ಇಲ್ಲೆ ಇರಿಸಿದ್ದೆವು. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಗೂ ಏನು ತೊಂದರೆಯಾಗಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

    ಸದನದ ಒಳಗಿನ ವರ್ತನೆಗಳು ಬೇರೆ, ಹೊರಗಿನ ವರ್ತನೆಗಳೇ ಬೇರೆ. ನನಗೆ ತುಂಬಾ ಒಳ್ಳೆಯ ಸ್ನೇಹಿತರು ಬಿಜೆಪಿಯಲ್ಲಿ ಇದ್ದಾರೆ. ರಾತ್ರಿ ವಿಧಾನಸಭೆಯಲ್ಲೇ ಬಿಜೆಪಿ ಸ್ನೇಹಿತರು ಮಲಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಬೆಳಗ್ಗೆಯೇ ವಿಧಾನಸಭೆಗೆ ಬಂದಿದ್ದೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

  • ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ- ಸಿಎಂ ಕುಮಾರಸ್ವಾಮಿ

    ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ- ಸಿಎಂ ಕುಮಾರಸ್ವಾಮಿ

    ಮಂಡ್ಯ: ನನ್ನ ವೈಯಕ್ತಿಕ ವಿಚಾರ ಹಾಗೂ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ಬಾಲಗಂಗಾಧರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು. ಸರ್ಕಾರ ಬೀಳಲು ಹೊರಟಿರುವ ಬಿಜೆಪಿ ಶಾಸಕರಿಗೆ ನಿರ್ಮಲಾನಂದನಾಥ ಸ್ವಾಮೀಜಿ ತರಾಟೆ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳು ರಾಜಕೀಯವಾಗಿ ನನ್ನ ಬಗ್ಗೆ ಹಾಗೂ ಸರ್ಕಾರದ ಕುರಿತು ಅನೇಕ ವರದಿ ಪ್ರಕಟಿಸಲಿ. ಆದರೆ ಇದರಲ್ಲಿ ನಿರ್ಮಲಾನಂದ ಶ್ರೀಗಳ ಹೆಸರನ್ನು ಪ್ರಸ್ತಾಪಿಸಬೇಡಿ. ಹೀಗೆ ಮಾಡುವುದರಿಂದ ಶ್ರೀಗಳಿಗೆ ಹಾಗೂ ಮಠಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೇಳಿಕೊಂಡರು.

    ಸಮಾಜಕ್ಕೆ ಶ್ರೀಮಠ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ನಿರ್ಮಲಾನಂದ ಶ್ರೀಗಳ ಹೆಸರನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಒಂದು ಸಮಾಜದ ವ್ಯಕ್ತಿಗೋಸ್ಕರ ಶ್ರೀಗಳು ಯಾವತ್ತೂ ವಕಾಲತ್ತು ವಹಿಸಲ್ಲ. ನಾನು ಶಾಶ್ವತವಾಗಿ ಸಿಎಂ ಕುರ್ಚಿಯಲ್ಲಿ ಇರಲ್ಲ. ಭಗವಂತ ಎಷ್ಟು ದಿನ ಸಿಎಂ ಆಗಿರಬೇಕೆಂದು ಬರೆದುಬಿಟ್ಟಿದ್ದಾನೆ ಅಂತ ಗೊತ್ತಿಲ್ಲ. ಅಧಿಕಾರ ಕಳೆದುಕೊಳ್ಳುತ್ತೇನೆ ಎಂದು ಯಾವತ್ತೂ ಕುಗ್ಗಿಲ್ಲ ಎಂದು ಹೇಳಿದರು.

    ಗುರುಹಿರಿಯರ ಆಶೀರ್ವಾದ ಇರುವವರೆಗೂ ಕಲ್ಲುಬಂಡೆಯಾಗಿಯೇ ಮುಂದುವರಿಯುತ್ತೇನೆ. ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ ಎಂದು ಸಿಎಂ ಕುಮಾರಸ್ವಾಮಿ, ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

    ಮಂಡ್ಯ ಜಿಲ್ಲೆಯ ಜನತೆ ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಹೀಗಾಗಿ ಅವರ ಕಷ್ಟವನ್ನು ಬಗೆ ಹರಿಸಬೇಕು. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ಹೊಸ ಎಥನಾಲ್ ಕಾರ್ಖಾನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದ ಅವರು, ತೆಂಗು ಬೆಳೆಗಾರರಿಗೆ ಬೆಳೆ ಕೈಕೊಟ್ಟರೆ ಎಕರೆಗೆ 20 ಸಾವಿರ ರೂ. ಪರಿಹಾರ ಕೊಡುತ್ತೇವೆ. ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ 10 ಸಾವಿರ ರೂ. ಸಾಲ ಕೊಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯ 5 ಶಾಸಕರನ್ನು ಕಾಂಗ್ರೆಸ್‍ಗೆ ಕರೆತರ್ತೀನಿ- ಬೇಳೂರು ಗೋಪಾಲಕೃಷ್ಣ

    ಬಿಜೆಪಿಯ 5 ಶಾಸಕರನ್ನು ಕಾಂಗ್ರೆಸ್‍ಗೆ ಕರೆತರ್ತೀನಿ- ಬೇಳೂರು ಗೋಪಾಲಕೃಷ್ಣ

    – ತಾನು ಬಿಜೆಪಿಯಲ್ಲಿದ್ದಾಗಿನ ಗುಟ್ಟು ರಿವೀಲ್

    ಶಿವಮೊಗ್ಗ: ಆಪರೇಷನ್ ಕಮಲ ಮಾಡಿದರೆ ನನ್ನ ಬಳಿಯಿರುವ ನಾಲ್ಕಾರು ಬಿಜೆಪಿ ಶಾಸಕರು ಕಾಂಗ್ರೆಸ್ ಬರಲು ತಯಾರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕಾಂಗ್ರೆಸ್‍ನ ಯಾವ ಶಾಸಕರು ಕೂಡ ಹೋಗೋ ಪ್ರಶ್ನೆಯೇ ಇಲ್ಲ. ಒಂದು ವೇಳೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ರೆ, ನನ್ನ ಬಳಿ ಇರುವ ನಾಲ್ಕಾರು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ. ಈ ಹಿಂದೆ ಆಪರೇಷನ್ ಕಮಲ ಮಾಡಿದ್ದು ನಾನೇ. ಹಾಗಾಗಿ ಈ ಬಗ್ಗೆ ಎಲ್ಲಾ ಮಾಹಿತಿ ನನ್ನ ಬಳಿ ಇದೆ. ನಾನು ಆಪರೇಷನ್ ಕಮಲ ಮಾಡಿದ್ದ ಸಂದರ್ಭದಲ್ಲಿ ಅನಿಲ್ ಲಾಡ್ ಬಳಿ 43 ಶಾಸಕರನ್ನು ಕೂಡಿಟ್ಟಿದ್ದೆ ಎಂದು ತಾನು ಬಿಜೆಪಿಯಲ್ಲಿದ್ದಾಗಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ಬಿಜೆಪಿಗೆ ಸವಾಲ್:
    ಈಗಾಗಲೇ ಐದು ಜನ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆ ಐವರನ್ನು ನಾನು ಕಾಂಗ್ರೆಸ್‍ಗೆ ತರದೇ ಇದ್ದರೆ ನನ್ನ ಹೆಸರು ಬೇಳೂರು ಗೋಪಾಲಕೃಷ್ಣ ಅಲ್ಲವೇ ಅಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೂ ಹಾಗೂ ಸಿಎಂಗೂ ವಿಷಯ ತಿಳಿಸಿದ್ದೇನೆ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.

    ಶೋಭಾಗೆ ತಿರುಗೇಟು:
    ಶೋಭಾ ಕರಂದ್ಲಾಜೆ ಬೇಳೂರು ಗೋಪಾಲಕೃಷ್ಣ ಸಣ್ಣ ವ್ಯಕ್ತಿ ಎಂದು ಹೇಳಿದ್ದರು. ಹೌದು.. ನಾನು ಸಣ್ಣ ವ್ಯಕ್ತಿಯೇ ಆಗಲಿ. ಯಡಿಯೂರಪ್ಪ ಅವರಂತೆ ಭ್ರಷ್ಟಾಚಾರ ಮಾಡಿದ್ರೆ ಎಲ್ಲೋ ಹೋಗ್ತಿದ್ದೆ. ನಾವೆಲ್ಲ ಸೇರಿ ನಿಮಗೆ ಎಂ.ಎಲ್.ಸಿ. ಮಾಡಿದ್ದೆವು. ನಿಮ್ಮ ಬಗ್ಗೆ ನಾನು ಬಿಚ್ಚಿಟ್ರೆ, ನೀವು ತಲೆ ತಗ್ಗಿಸಬೇಕಾಗುತ್ತದೆ. ಎಲ್ಲರೂ ಸಣ್ಣ ಮಟ್ಟದಿಂದಲೇ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಹುಮತ ಸಾಬೀತಿಗೆ ಬಿಜೆಪಿಯಿಂದ ಕೊನೆ ಕ್ಷಣದ ಕಸರತ್ತು!

    ಬಹುಮತ ಸಾಬೀತಿಗೆ ಬಿಜೆಪಿಯಿಂದ ಕೊನೆ ಕ್ಷಣದ ಕಸರತ್ತು!

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಕೊನೆ ಕ್ಷಣದ ಕಸರತ್ತು ಮಾಡುತ್ತಿದೆ.

    ಶಾಂಗ್ರಿಲಾ ಹೋಟೆಲ್‍ ನಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಬಿಎಸ್‍ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ, ಧಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಸಭೆಯ ಬಳಿಕ ಶಾಸಕರು ವಿಶ್ರಾಂತಿ ಪಡೆದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ನಾಯಕರು ಬಹುಮತ ಸಾಬೀತುಪಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಯಾರು ಯಾವ ರೀತಿಯ ಕಾರ್ಯತಂತ್ರ ರೂಪಿಸಿದ್ದೇವೆ ಎನ್ನುವ ಬಗ್ಗೆ ಗುಟ್ಟು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

    ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಲಿದ್ದು, ಮೊದಲಿಗೆ ಚುನಾಯಿತ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಬಳಿಕ ಸಿಎಂ ಯಡಿಯೂರಪ್ಪ ಪ್ರಸ್ತಾವ ಮಂಡಿಸಿ ಸರ್ಕಾರವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.