Tag: BJP MLAs

  • ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

    ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

    ಕೋಲ್ಕತ್ತಾ: ಸದನದಲ್ಲಿ ʼಮೋದಿ, ಮೋದಿʼ ಎಂದು ಬಿಜೆಪಿ ಶಾಸಕರು ಕೂಗುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಣಕ್ಕೆ ಅಡ್ಡಿಪಡಿಸಿರುವ ಪ್ರಸಂಗ ನಡೆದಿದೆ.

    ಸದನದಲ್ಲಿ ರಾಜ್ಯಪಾಲ ಜಗದೀಶ್‌ ಧನಕರ್‌ ಅವರ ಭಾಷಣಕ್ಕೆ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಸಿಎಂ ಭಾಷಣಕ್ಕೆ ಅನುವು ಮಾಡಿಕೊಡದ ಬಿಜೆಪಿ ಶಾಸಕರು, ʼಮೋದಿ.. ಮೋದಿʼ ಎಂದು ಕೂಗಿ ಅಡ್ಡಿಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ

    ಇದಕ್ಕೆ ತಿರುಗೇಟು ನೀಡಲು ಮುಂದಾದ ಮಮತಾ ಬ್ಯಾನರ್ಜಿ ಅವರು, ʼಜೈ ಬಂಗಾಳʼ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ʼಜೈ ಶ್ರೀರಾಮ್‌ʼ ಬದಲಿಗೆ ʼಜೈ ಸಿಯಾ ರಾಮ್‌ʼ ಅಂತ ಕೂಗಿ ಎಂದು ಶಾಸಕರಿಗೆ ಸಿಎಂ ತಿಳಿಸಿದ್ದಾರೆ.

    ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ತಮ್ಮ ಭಾಷಣ ಆರಂಭಿಸಿದ ಸಂದರ್ಭದಲ್ಲಿ ಬಿಜೆಪಿ ಶಾಸಕರು, ʻಮೋದಿ.. ಮೋದಿ, ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್‌ʼ ಎಂಬ ಘೋಷಣೆಗಳನ್ನು ಕೂಗಿದರು. ಸುಮಾರು 40 ನಿಮಿಷಗಳ ಕಾಲ ಘೋಷಣೆಯನ್ನು ಮುಂದುವರಿಸಿದ ಘಟನೆ ನಡೆಯಿತು. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    ಇದರಿಂದ ಅಸಮಾಧಾನಗೊಂಡ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್‌ ಶಾಂತಿಗಾಗಿ ಹೋರಾಡುತ್ತಿದೆ. ಆದರೆ ಕೇಸರಿ ಪಕ್ಷವು ರಾಜ್ಯದಲ್ಲಿ ಶಾಂತಿ ಕದಡಲು ಉತ್ಸುಕವಾಗಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಬಿಜೆಪಿಯವರು ವಿಧಾನಸಭಾ ಮತ್ತು ಮುನ್ಸಿಪಲ್‌ ಚುನಾವಣೆಯಲ್ಲಿ ಸೋತ ನಂತರವೂ ಸದನದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅವರು ನಾಚಿಕೆಗೇಡಿನವರು. ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 109 ಸ್ಥಾನಗಳ ಪೈಕಿ 105 ಸ್ಥಾನಗಳನ್ನು ಗೆದ್ದಿದೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

  • ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

    ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

    – ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು
    – ಮೂಲ ಬಿಜೆಪಿ ನಾಯಕರಿಗೂ ಜಾರಕಿಹೊಳಿ ನಾಯಕ?

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿಜೆಪಿಯಲ್ಲಿ ರಹಸ್ಯ ಸಭೆ ನಡೆಸಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಸಚಿವಾಕಾಂಕ್ಷಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

    ಸಚಿವಾಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ರೇಣುಕಾಚಾರ್ಯ, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಸಭೆ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಎಂಗೆ ಸಚಿವ ಸ್ಥಾನದ ಬೇಡಿಕೆ ಸಲ್ಲಿಸುವುದು, ಹಾಲಿ ಸಚಿವರನ್ನು ಕೈ ಬಿಟ್ಟರೆ ಮತ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬೆಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಸಚಿವಾಕಾಂಕ್ಷಿಗಳ ಪರ ಹೈಕಮಾಂಡ್ ಮುಂದೆ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಲಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಲು ಸಚಿವ ರಮೇಶ್ ಜಾರಕಿಹೊಳಿ ನಿರ್ಧಾರಿಸಿದ್ದಾರೆ. ಸಿಎಂಗೂ ಮುನ್ನ ದೆಹಲಿಗೆ ಸಾಹುಕಾರ್ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಸಭೆ ಮೂಲಕ ವಲಸಿಗರಿಗೂ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ, ಇದೀಗ ಮೂಲ ಬಿಜೆಪಿ ಶಾಸಕರಿಗೂ ಲೀಡರ್ ಆದರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಚಿವ ಸ್ಥಾನ ಗಿಟ್ಟಿಸಲು ರಮೇಶ್ ಜಾರಕಿಹೊಳಿ ಮೂಲಕ ಲಾಬಿಗಿಳಿದರಾ ಮೂಲ ಬಿಜೆಪಿಗರು ಎಂಬ ಪ್ರಶ್ನೆ ಇದೀಗ ಮೂಡುತ್ತಿದ್ದು, ಮೂಲ ಬಿಜೆಪಿ ಆಕಾಂಕ್ಷಿ ಶಾಸಕರ ನಡೆ ಕುತೂಹಲ ಹುಟ್ಟಿಸಿದೆ.

    ಸಚಿವ ಸಂಪುಟ ಕಸರತ್ತು ಸನಿಹ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕರು ಒಟ್ಟಾಗಿದ್ದು, ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಗೆದ್ದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿಗೂ ಶಾಸಕರ ಟೀಂ ಒತ್ತಡ ಹೇರಿದ್ದು, ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಪರ ಬ್ಯಾಟಿಂಗ್ ನಡೆಸದಂತೆ ಸಾಹುಕಾರ್‍ಗೆ ಒತ್ತಾಯಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ಆಕಾಂಕ್ಷಿ ಶಾಸಕರಿಂದ ಒತ್ತಡ ಹೆಚ್ಚಿದೆ. ಹೈಕಮಾಂಡ್ ನಾಯಕರ ಭೇಟಿ ವೇಳೆ ಯೋಗೇಶ್ವರ್ ವಿಚಾರ ಪ್ರಸ್ತಾಪಿಸದಂತೆ ತಿಳಿಸಿದ್ದಾರೆ. ಸಚಿವಾಕಾಂಕ್ಷಿ ಶಾಸಕರ ಒತ್ತಾಯಕ್ಕೆ ಸಾಹುಕಾರ್ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

    ರಮೇಶ್ ಜಾರಕಿಹೊಳಿ ಸಭೆಯಲ್ಲಿ ನಡೆದಿದ್ದೇನು?
    ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್ ಭೇಟಿ ವೇಳೆ ಮಾತನಾಡಬಾರದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ನೀವು ಆ ಶಾಸಕರ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ಈ ವೇಳೆ ನಾನು ಯೋಗೇಶ್ವರ್ ಪರ ಲಾಬಿ ನಡೆಸುವುದಿಲ್ಲ ಎಂದ ರಮೇಶ್ ಜಾರಕಿಹೊಳಿ ಭರಸವೆ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಲು ಸಹಾಯ ಮಾಡಬಾರದು. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ವಿಶ್ವಾಸ ಇರಿಸಬೇಕು. ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ರನ್ನು ಮಂತ್ರಿ ಸ್ಥಾನಕ್ಕೆ ಶಿಫಾರಸು ಮಾಡಬಾರದು. ಸಚಿವ ಸಂಪುಟ ಪುನಾರಚನೆ ಆದಷ್ಟು ಬೇಗ ಮಾಡಿ ಮುಗಿಸಬೇಕು. ಈ ಕುರಿತು ಸಿಎಂಗೆ ಮನವಿ ಮಾಡಲು ಇಂದು ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

  • ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಧಾರವಾಡ: ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ ಆಯ್ತು, ಈಗ ಕೊರೊನಾ ಬಂದಿದೆ. ಈ ಹಿನ್ನೆಲೆ ಸಿಎಂ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಶಾಸಕರು ಫಂಡ್ ಹೆಚ್ಚು-ಕಡಿಮೆಯಾಗಿವೆ ಎಂದು ಹೇಳಿದ್ದಾರೆ, ಪಕ್ಷದ ಸಭೆಯಲ್ಲಿ ಅದನ್ನು ಸರಿ ಮಾಡ್ತಾರೆ ಎಂದು ಧಾರವಾಡ ಶಾಸಕ ಅರವಿಂದ್ ಬೆಲ್ಲದ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಶಾಸಕರಾದವರಿಗೆಲ್ಲರಿಗೂ ಸಚಿವರಾಗುವ ಆಸೆ ಇದ್ದೇ ಇರುತ್ತದೆ. ಎಲ್ಲ ಪಕ್ಷದ ಸಿಎಂ ಇದ್ದಾಗಲೂ ಅದು ಇದ್ದದ್ದೆ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಇದನ್ನು ಬಗೆಹರಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು.

    ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಇದೆ ಎಂದು ಒಪ್ಪಿಕೊಂಡ ಶಾಸಕ ಬೆಲ್ಲದ, ಬೆಳಗಾವಿ ದೊಡ್ಡ ಜಿಲ್ಲೆ, ರಾಜ್ಯದಲ್ಲೇ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ. ಹೀಗಾಗಿ ಅಲ್ಲಿ ನ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ ಎಂದು ಅಭಿಪ್ರಾಯಪಟ್ಟರು.

  • ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    – ಡಿಕೆಶಿ ವಿರುದ್ಧ ಎಸ್‍ಟಿಎಸ್ ಗುಡುಗು

    ಮೈಸೂರು: ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ. ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಶಾಸಕರ ಒಟ್ಟಾಗಿ ಸೇರಿಸಿದ್ದಾರೆ ಅಷ್ಟೆ. ಈ ಸಭೆ ಸಿಎಂ ವಿರುದ್ಧ ಅಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್‍ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು. ಈ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಅಲ್ಲಿ ಚರ್ಚೆ ಆಗಿಲ್ಲ ಎಂದರು. ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಶಂಕರ್ ಮೂವರಿಗೂ ವಿಧಾನ ಪರಿಷತ್ ನೇಮಕ ಮಾಡಬೇಕು. ಈ ಬಗ್ಗೆ ಸಿಎಂಗೆ ಹೇಳಿದ್ದೇವೆ. ನಾವೆಲ್ಲ ಶಾಸಕರು ಈ ಮೂವರ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

    ಆಪರೇಷನ್ ಕಾಂಗ್ರೆಸ್ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವೇ ಸ್ವೀಕರಿಸಿಲ್ಲ. ಮೊದಲು ಅವರ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಿ. ಆಮೇಲೆ ಉಳಿದದ್ದು ನೋಡಲಿ. ಬಿಜೆಪಿಯಲ್ಲಿ ಅತೃಪ್ತರು, ಅಸಮಾಧಾನಿತರು ಎಂಬುದಿಲ್ಲ ಎಂದು ಹೇಳಿದ್ದಾರೆ.

  • ಬೆಳ್ಳಂಬೆಳಗ್ಗೆ ಮುರುಗೇಶ್ ನಿರಾಣಿಗೆ ಸಿಎಂ ಯಡಿಯೂರಪ್ಪ ಕರೆ

    ಬೆಳ್ಳಂಬೆಳಗ್ಗೆ ಮುರುಗೇಶ್ ನಿರಾಣಿಗೆ ಸಿಎಂ ಯಡಿಯೂರಪ್ಪ ಕರೆ

    ಬೆಂಗಳೂರು: ಮಹಾಮಾರಿ ಕೊರೊನಾದ ಅಬ್ಬರದ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ನಿರ್ಮಾಣವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಮೂವರು ನಾಯಕರು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವ್ಯೂಹ ರಚಿಸಿದ್ದಾರೆ. ಈ ಮೂವರ ನಾಯಕತ್ವದಲ್ಲಿ ಕಳೆದ 15 ದಿನದಲ್ಲಿ ಸುಮಾರು ಆರು ಬಾರಿ ಸಭೆ ನಡೆಸಿ, ಸಿಎಂ ವಿರುದ್ಧದ ಆಪರೇಷನ್ ವೇದಿಕೆಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!

    ಇದೀಗ ತಮ್ಮ ವಿರುದ್ಧ ಆಪ್ತರ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಸಿಎಂ ಯಡಿಯೂರಪ್ಪಗೆ ತಿಳಿದು ಬಂದಿದೆ. ಸಭೆ ಬೆನ್ನಲ್ಲೇ ಇಂದು ಬೆಳಗ್ಗೆ ಮುರುಗೇಶ್ ನಿರಾಣಿಗೆ ಸಿಎಂ ಕರೆ ಮಾಡಿದ್ದಾರೆ. ಆಪ್ತರ ಅಸಮಾಧಾನ ಕೇಳಲು ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನದ ಆಸೆ ಇದೆ: ನಿರಾಣಿ

    ಈ ವೇಳೆ ಮಾತನಾಡಿದ ನಿರಾಣಿ, ಯಾವ ಸಭೆಯೂ ಮಾಡಿಲ್ಲ, ಎಲ್ಲ ವದಂತಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆಗ ಉಮೇಶ್ ಕತ್ತಿಯ ಜೊತೆ ಮನೆಗೆ ಬರುವಂತೆ ನಿರಾಣಿಗೆ ಯಡಿಯೂರಪ್ಪ ತಿಳಿಸಿದ್ದಾರೆ. ರಹಸ್ಯ ಸಭೆಯ ಮಾಹಿತಿ ಸೋರಿಕೆ ಬಳಿಕ ಬಂಡಾಯ ನಾಯಕರು ಪರಸ್ಪರ ಅಂತರ ಕಾಯ್ದುಕೊಂಡಿದ್ದು, ಸಿಎಂ ಮಾತಿಗೆ ಸರಿಯಾಗಿ ಯಾವುದೇ ಉತ್ತರ ಕೊಡದೇ ಸಭೆ ನಡೆಸಿಲ್ಲ ಎಂದೇ ನಿರಾಣಿ ವಾದ ಮಾಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದುಬಂದಿದೆ.

    ನಿರಾಣಿ ಹೇಳಿಕೆ?
    ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಮುರುಗೇಶ್ ನಿರಾಣಿ, ನಾನೇನು ಸನ್ಯಾಸಿ ಅಲ್ಲ. ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ. ನಾನು ಅಸಮಾಧಾನಿತರ ನೇತೃತ್ವ ವಹಿಸಿದ್ದೇನೆ ಎನ್ನುವುದು ಸುಳ್ಳು. ಕಳೆದ ಎರಡು ತಿಂಗಳಿಂದ ನಾನು ಯಾರೊಂದಿಗೂ ಕೂಡಿಲ್ಲ, ಬೆಂಗಳೂರಿಗೂ ಬಂದಿಲ್ಲ. ಬಂದರೂ ಕಮಿಟಿ ಮೀಟಿಂಗ್ ಮಾಡಿದ್ದೇವೆ ಅಷ್ಟೆ, ಅದನ್ನು ಮುಗಿಸಿ ಮತ್ಯಾರನ್ನೂ ಭೇಟಿ ಮಾಡಿಲ್ಲ. ತಪ್ಪು ಮಾಹಿತಿ ನೀಡಲಾಗಿದೆ. ಉಳಿದವರ ಬಗ್ಗೆ ನಾವು ಮಾತನಾಡುವುದಿಲ್ಲ, ಈ ಬಗ್ಗೆ ನನಗೆ ತಿಳಿದಿಲ್ಲ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನ ಇಲ್ಲ. ನಾನು ಸ್ಟೇಬಲ್ ಆಗಿದ್ದೇನೆ. ಈ ಕುರಿತು ನಾನು ಯಾವತ್ತೂ ಬಹಿರಂಗವಾಗಿ ಹೇಳಿಲ್ಲ ಎಂದು ಹೇಳಿದ್ದರು.

     

    ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೂವರು ನಾಯಕರು ತಮ್ಮದೇ ಆದ ಪ್ರತ್ಯೇಕ ಬಣ ರಚಿಸಿಕೊಂಡು ಮುಂದೆ ಏನಾಗಬಹುದು ಎಂಬುದರ ಬಗ್ಗೆ ಆಪ್ತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರಂತೆ. ಈ ನಡುವೆ ಪರಮಾಪ್ತ ಶಾಸಕನ ಎರಡ್ಮೂರು ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಈ ಕಾರಣದಿಂದಾಗಿ ಯಡಿಯೂರಪ್ಪ ಆಪ್ತ ಬಣವೇ ಯಡಿಯೂರಪ್ಪ ವಿರುದ್ಧ ಕೂಟ ರಚಿಸಲು ಯತ್ನಿಸಲಾಗ್ತಿದೆ ಎಂದು ತಿಳಿದು ಬಂದಿದೆ.

  • ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

    ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಂದು ಬರೋಬ್ಬರಿ ಆರು ತಿಂಗಳು ತುಂಬಿವೆ. ಆದರೆ ಆರು ತಿಂಗಳ ನಂತರ ಸರ್ಕಾರ, ಪಕ್ಷ, ಸಚಿವರು, ಶಾಸಕರು, ವಲಸಿಗರು ಹೀಗೆ ಎಲ್ಲರ ಎಲ್ಲದರ ವರಸೆಗಳು ನಿಧಾನಕ್ಕೆ ಬದಲಾಗತೊಡಗಿವೆ. ಆರು ತಿಂಗಳ ಹಿಂದಿನ ಬಿಜೆಪಿಗೂ ಈಗಿನ ಬಿಜೆಪಿಗೂ ನಡುವೆ ಬಹಳಷ್ಟು ಬದಲಾವಣೆಗಳು ಆಗಿವೆ, ಆಗತೊಡಗಿವೆ. ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಮುಂದೆ ಹೋಗ್ತೀವಿ, ಉತ್ತಮ ಆಡಳಿತ ಕೊಡ್ತೀವಿ, ಪ್ರಸಕ್ತ ಸರ್ಕಾರದ ಈ ಅವಧಿ ಪೂರೈಸಿ ಮುಂದಿನ ಬಾರಿಗೂ ಬಿಜೆಪಿಯೇ ಬರೋ ಹಾಗೆ ಮಾಡ್ತೀವಿ ಅಂದವರ ಮನಸ್ಥಿತಿ- ಹೇಳಿಕೆಗಳು, ನಿಲುವು- ನಡೆಗಳು ಬಣ್ಣ ಬದಲಾಯಿಸತೊಡಗಿವೆ. ಈಗ ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಖುದ್ದು ಈಗಲೂ ಪಕ್ಷದ ಮೇರು ನಾಯಕ, ಸರ್ಕಾರದಲ್ಲೂ ಹಿಡಿತ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಹೋಗತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಶಾಸಕರ ನಡವಳಿಕೆಗಳ ಮೇಲೆ ಅದಾಗಲೇ ಗುಮಾನಿ ಶುರುವಾಗಿದೆ.

    ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರು. ಆ ಸಭೆಯ ಉದ್ದೇಶ ಬಳಿಕ ಅದು ಮಾಧ್ಯಮಗಳಲ್ಲಿ ವರದಿಯಾದ ರೀತಿ ಏನೇ ಇರಬಹುದು. ಆದರೆ ಹೀಗೆ ತಮ್ಮ ಗಮನಕ್ಕೆ ಬರದೇ ಶಾಸಕರು ಗುಪ್ತ ಸಭೆ ಮಾಡಿದ್ದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೆಟ್ಟರ್ ನಿವಾಸದ ಸಭೆಯ ಬೆನ್ನಲ್ಲೇ ಪಂಚಮಸಾಲಿ ಶಾಸಕರು ಸಹ ಸ್ವಾಮೀಜಿಗಳ ಜೊತೆ ಸಭೆ ನಡೆಸಿರುವುದು ಯಡಿಯೂರಪ್ಪ ಅವರಲ್ಲಿ ಅಸಮಾಧಾನ ಹಟ್ಟಿಸಿದೆ ಎಂದು ಅವರ ಆಪ್ತ ವರ್ಗ ಹೇಳಿಕೊಂಡಿದೆ. ಇದರ ಜೊತೆ ಬೇರೆ ಬೇರೆ ಭಿನ್ನಮತಗಳು, ರಹಸ್ಯ ಚಲನವಲನಗಳು ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಲವು ಶಾಸಕರ ಚಲನವಲನಗಳ ಮಾಹಿತಿ ಪಡೆಯಲು ಗುಪ್ತಚರ ದಳವನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ.

    ಶೆಟ್ಟರ್ ನಿವಾಸದ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಗುಪ್ತಚರ ಇಲಾಖೆಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಸಿಎಂ ಗುಪ್ತಚರ ಇಲಾಖೆಗೆ ನೀಡಿದ ಟಾಸ್ಕ್ ನಿಂದಾಗಿ ಯಾರೇ ಪ್ರತ್ಯೇಕ ಸಭೆ ನಡೆಸಿದ್ರು ತಕ್ಷಣ ಮಾಹಿತಿ ಸಿಎಂಗೆ ರವಾನೆ ಆಗಲಿದೆ ಎನ್ನಲಾಗಿದೆ.

    ಸಂಜೆ ಆಗ್ತಿದ್ದಂತೆ ಕಾರ್ಯಪ್ರವೃತ್ತರಾಗುವ ಆ ಇಂಟಲಿಜೆನ್ಸ್ ತಂಡ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಗೆ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲುಗಳಿಗೆ ರೌಂಡ್ಸ್ ಹೊಡೆಯಲು ಸಿಎಂ ಗುಪ್ತಚರ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಸೂಚನೆ ಮೇರೆಗೆ ಪಂಚತಾರಾ ಹೋಟೆಲ್ ಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ರೌಂಡ್ಸ್ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.

    ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕರೆ ತಕ್ಷಣ ಸಿಎಂಗೆ ಮಾಹಿತಿ ನೀಡಲಿದೆಯಂತೆ ಗುಪ್ತಚರ ಇಲಾಖೆಯ ಈ ತಂಡ. ಪ್ರತ್ಯೇಕ ಸಭೆಯಲ್ಲಿ ಯಾರೆಲ್ಲ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದ್ರು, ಎಲ್ಲಿ ಸಭೆ ನಡೆಸಿದರು ಎಂಬಿತ್ಯಾದಿ ಮಾಹಿತಿ ತಕ್ಷಣ ಸಿಎಂಗೆ ರವಾನೆ ಆಗಲಿದೆಯಂತೆ. ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿ ಯಾರೆಲ್ಲ ಬಿಜೆಪಿ ಶಾಸಕರಿದ್ದಾರೆ, ಲೋಕೇಶನ್ ಎಲ್ಲಿ, ಮೀಟಿಂಗ್ ಏನಾದ್ರು ಮಾಡ್ತಿದ್ದಾರಾ ಅಂತಲೂ ಈ ತಂಡ ಪತ್ತೆ ಹಚ್ಚುತ್ತಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಈ ತಂಡ ತಡರಾತ್ರಿವರೆಗೂ ಪಂಚತಾರ ಹೋಟೆಲ್ ಗಳ ರೌಂಡ್ಸ್ ಹೊಡೆಯುತ್ತಿದೆ ಎನ್ನಲಾಗಿದೆ. ಆ ಮೂಲಕ ಸರ್ಕಾರ ಉಳಿಸಿ ಉಳಿದ ಅವಧಿವರೆಗೂ ಎದುರಾಗುವ ಸಮಸ್ಯೆಗಳನ್ನು ಬರದಂತೆ ತಡೆಯಲು ಸಿಎಂ ಯಡಿಯೂರಪ್ಪ ಈ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    – ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ತಡೆ ಹಿಡಿದ ಬಿಜೆಪಿ

    ಮಂಗಳೂರು: ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ತಲಪಾಡಿ ಟೋಲ್ ಗೇಟ್‍ನಲ್ಲಿ ಬುಧವಾರ ಟೋಲ್ ಸಂಗ್ರಹ ಸ್ಥಗಿತವಾಗಿದ್ದು, ಜನ ಒಂದು ದಿನದ ಮಟ್ಟಿಗೆ ಟೋಲ್ ಫ್ರೀ ಸಂಚಾರ ಮಾಡಿ ಖುಷಿ ಪಟ್ಟರು. ಈ ಟೋಲ್ ಸಂಗ್ರಹ ಇಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲು ಕಾರಣವಾಗಿದ್ದೂ ಅದೇ ಪಂಪ್‍ವೆಲ್ ಫೈಓವರ್ ಎನ್ನುವುದು ಒಂದು ವಿಶಿಷ್ಟ ಸುದ್ದಿ.

    ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿರುವ ಪಂಪ್‍ವೆಲ್ ಫ್ಲೈ ಓವರ್ ಇನ್ನೂ ಪೂರ್ಣಗೊಳ್ಳದಿರಲು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೂ ಸಂಸದ ನಳಿನ್ ಕುಮಾರ್ ಅವರು ಮಾತ್ರ ಅಧಿಕಾರಿಗಳ ತಲೆ ಮೇಲೆ ಹಾಕಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಪ್‍ವೆಲ್ ಫೈಓವರ್ ಬಳಿ ಭೇಟಿ ನೀಡಿದ್ದ ನಳಿನ್ ಕುಮಾರ್ ಕಟೀಲ್ ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಜನವರಿ 1ರಂದು ಫೈಓವರ್ ಉದ್ಘಾಟನೆ ಎಂದಿದ್ದರು. ಆದರೆ ಇನ್ನೂ ಕಾಮಗಾರಿ ಮುಗಿಯದಿದ್ದ ಕಾರಣ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವಾಗ ಪೂರ್ಣಗೊಳ್ಳುತ್ತೆ ಎಂದು ಸ್ಪಷ್ಟನೆ ಕೇಳಿದ್ದರು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

    ಅಧಿಕಾರಿಗಳು ಇನ್ನೂ ಕೆಲ ತಿಂಗಳ ಸಮಯ ಕೇಳಿರುವುದರಿಂದ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಗಡುವು ನೀಡಿದ್ದಾರೆ. ಜೊತೆಗೆ ಆ ಒಂದು ತಿಂಗಳ ಕಾಲ ಈ ಹೈವೇಲಿ ಸಿಗುವ ತಲಪಾಡಿ ಟೋಲ್ ಗೇಟ್‍ನಲ್ಲಿ ಯಾವುದೇ ವಾಹನಗಳಿಂದಲೂ ಟೋಲ್ ಶುಲ್ಕ ಸಂಗ್ರಹಿಸಬಾರದು ಎಂದು ಟೋಲ್ ಗುತ್ತಿಗೆ ಪಡೆದಿರುವ ನವಯುಗ್ ಕಂಪನಿಯ ಸಿಬ್ಬಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಸೂಚಿಸದ್ದರು. ಆದರೆ ಇಂದು ಮುಂಜಾನೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದ್ದನ್ನು ತಿಳಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಿಜೆಪಿ ಕಾರ್ಯಕರ್ತರೊಂದಿಗೆ ತಲಪಾಡಿ ಟೋಲ್ ಗೇಟ್‍ಗೆ ಧಾವಿಸಿದರು. ಬಳಿಕ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಸಾಂಕೇತಿಕವಾಗಿ ಇಂದು ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ಮಾಡದಂತೆ ಕೇಳಿಕೊಂಡರು.

    ಈ ವೇಳೆ ವಾಗ್ದಾದ ನಡೆದು ಬಳಿಕ ಒಂದು ದಿನ ಟೋಲ್ ಸಂಗ್ರಹ ಸ್ಥಗಿತಕ್ಕೆ ಟೋಲ್ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಸಂಸದರ ಸೂಚನೆ ಇರೋದು ಪಂಪ್‍ವೆಲ್ ಫೈಓವರ್ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂದು. ನಾಳೆಯಿಂದ ಮತ್ತೆ ಎಂದಿನಂತೆ ಟೋಲ್ ಸಂಗ್ರಹ ಇರುವುದರಿಂದ ಸಂಸದರು ಈ ಮಾತನ್ನೂ ಉಳಿಸಿಕೊಳ್ಳೋದಿಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

  • ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ: ಬಿಲ್ಲವ ಸಮುದಾಯ ಕಿಡಿ

    ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ: ಬಿಲ್ಲವ ಸಮುದಾಯ ಕಿಡಿ

    ಉಡುಪಿ: ಕರಾವಳಿಯ ಪ್ರಬಲ ಬಿಲ್ಲವ ಸಮುದಾಯ ಬಿಜೆಪಿ ವಿರುದ್ಧ ಸಿಡಿದುಬಿದ್ದಿದೆ. ಜಿಲ್ಲಾಡಳಿತದ ಕಡೆಯಿಂದ ನಡೆದ ಗುರು ನಾರಾಯಣ ಜಯಂತಿಯಂದು ಈ ಕಿಡಿ ಹತ್ತಿಕೊಂಡಿದೆ. ಮುಂದಿನ ಚುನಾವಣೆಗೆ ಕಮಲದ ಕೈ ಹಿಡಿಯಲ್ಲ ಅಂತ ಬಿಲ್ಲವರು ಘೋಷಣೆ ಮಾಡಿದ್ದಾರೆ.

    ಬಿಲ್ಲವ ಸಮುದಾಯ ಕರಾವಳಿಯ ಚುನಾವಣೆಯ ನಿರ್ಣಾಯಕ ಸಮುದಾಯ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರ ಪ್ರಭಾವ ಇದೆ. ಶೇಕಡಾ ಮೂವತ್ತರಷ್ಟು ಬಿಲ್ಲವ ಮತಗಳು ಇವೆ. ಬಿಜೆಪಿ 5 ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡಲು ಬಿಲ್ಲವರು ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಪ್ರಬಲ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿದ ನಾರಾಯಣ ಗುರು ಕಾರ್ಯಕ್ರಮಕ್ಕೆ ಐದೂ ಶಾಸಕರು ಗೈರಾಗಿದ್ದು ಬಿಲ್ಲವರನ್ನು ಕೋಪಗೊಳ್ಳುವಂತೆ ಮಾಡಿದೆ.

    ಕಾಪು ವಿಶ್ವನಾಥ ಕ್ಷೇತ್ರದಲ್ಲಿ ಸಪ್ಟೆಂಬರ್ 13ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ನಡೆಯಿತು. ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಹೊರತುಪಡಿಸಿದರೆ ಯಾರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ ಗೈರಾಗಿದ್ದಾರೆ. ಸ್ಥಳೀಯ ಕಾಪು ಶಾಸಕ ಲಾಲಾಜಿ ಮೆಂಡನ್ ಕೂಡ ಕಾರ್ಯಕ್ರಮದಿಂದ ದೂರವಿದ್ದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ, ಜಾತಿ ರಾಜಕೀಯಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಿಲ್ಲವರು ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಐದು ಶಾಸಕರನ್ನು ಬಿಟ್ಟು ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಕೊಡಲಾಗಿದೆ. ಸಚಿವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ಎರಡೂ ಜಿಲ್ಲೆಯ ಪ್ರತಿನಿಧಿಯಾಗಿ ಅವರನ್ನು ಆರಿಸಲಾಗಿದೆ. ಆದರೂ ನಿಮಗೆ ಅಸಮಾಧಾನವೇ ಅಂತ ಕರವಳಿಯಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.

  • ಅಲೋಕ್‍ರನ್ನು ಅಮಾನತುಗೊಳಿಸಿ – ಸಿಎಂಗೆ ಶಾಸಕರಿಂದ ದೂರು

    ಅಲೋಕ್‍ರನ್ನು ಅಮಾನತುಗೊಳಿಸಿ – ಸಿಎಂಗೆ ಶಾಸಕರಿಂದ ದೂರು

    ಬೆಂಗಳೂರು: ರಾಜ್ಯದಲ್ಲಿ ಕೇಳಿಬರುತ್ತಿರುವ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೆ.ಎಸ್‍.ಆರ್‍.ಪಿ ಎಡಿಜಿಪಿ ಅಲೋಕ್ ಕುಮಾರ್ ಕೈವಾಡವಿದೆ. ಅವರನ್ನು ಅಮಾನತು ಮಾಡುವಂತೆ ಕೆಲ ಬಿಜೆಪಿ ಶಾಸಕರು ಸಿಎಂ ಯಡಿಯೂರಪ್ಪನವರಿಗೆ ದೂರು ನೀಡಿದ್ದಾರೆ.

    ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಲೋಕ್ ಕುಮಾರ್ ಅಮಾನತಿಗೆ ಒತ್ತಡಗಳು ಹೆಚ್ಚಾಗುತ್ತಿದ್ದು, ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರ ನೇರ ಕೈವಾಡವಿದೆ. ಸಿಬಿಐ ತನಿಖೆ ಆರಂಭಕ್ಕೂ ಮುನ್ನವೇ ಅಮಾನತು ಮಾಡಿ ಎಂದು ಕೆಲ ಬಿಜೆಪಿ ಶಾಸಕರು ಸಿಎಂ ಯಡಿಯೂರಪ್ಪನವರ ಬಳಿ ದೂರು ನೀಡಿದ್ದಾರೆ ಎನ್ನಲಾಗಿದೆ.

    ಸರ್ಕಾರ ರಚನೆ ಸಂದರ್ಭ ಅಲೋಕ್ ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಹುದ್ದೆಯಲ್ಲಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಅಮಾನತು ಮಾಡಿ ಎಂದು ಬಿಜೆಪಿಯ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್‍ರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಇದೇ ಕಷ್ಟ ಮತ್ತೊಮ್ಮೆ ಅಲೋಕ್‍ಗೆ ಎದುರಾಗುತ್ತಾ ಅನ್ನೋ ಮಾತುಗಳು ಕೇಳಿಬರುತ್ತಿವೆ.

  • ಬಿಎಸ್‍ವೈ ಸಚಿವ ಸಂಪುಟ ರಚನೆಗೆ ಡೇಟ್ ಫಿಕ್ಸ್ – ದೆಹಲಿಯಿಂದ ಬುಲಾವ್

    ಬಿಎಸ್‍ವೈ ಸಚಿವ ಸಂಪುಟ ರಚನೆಗೆ ಡೇಟ್ ಫಿಕ್ಸ್ – ದೆಹಲಿಯಿಂದ ಬುಲಾವ್

    – ಅಮಿತ್ ಶಾ ಹೇಳಿದವರಿಗಷ್ಟೇ ಸಿಗಲಿದೆ ಮಂತ್ರಿಗಿರಿ

    ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾಗಿ ವಾರ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ. ಬಿಜೆಪಿಯ ಅನೇಕ ಶಾಸಕರು ಮಂತ್ರಿಗಿರಿ ಆಕಾಂಕ್ಷಿಗಳಾಗಿದ್ದು, ಸಚಿವ ಸಂಪುಟ ರಚನೆಗಾಗಿ ಕಾಯುತ್ತಿದ್ದಾರೆ.

    ಕೊನೆಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಆಗಸ್ಟ್ 9ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸಂಪುಟ ರಚನೆಗೆ ಮುನ್ನ ಆಗಸ್ಟ್ 7ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಅಮಿತ್ ಶಾ ಅವರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ಸಿಎಂ ಅವರಿಗೆ ತಿಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರು ಈಗಾಗಲೇ ಪಟ್ಟಿ ಸಿದ್ಧಪಡಿಸಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವ ನಿರ್ಧಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಅಮಿತ್ ಶಾ ಅವರು, ಮಂತ್ರಿಗಿರಿ ಲಾಬಿ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಿಲ್ಲಾವಾರು ಶಾಸಕರ ರಿಪೋರ್ಟ್ ಗಳನ್ನು ತರಿಸಿಕೊಂಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ಕೈಯಲ್ಲಿರುವ ಎರಡು ಪಟ್ಟಿಗಳನ್ನು ತಾಳೆ ಮಾಡಿ ಫೈನಲ್ ಲಿಸ್ಟ್ ಸಿದ್ಧಗೊಳಿಸಲಿದ್ದಾರೆ. ಇದೇ ತಿಂಗಳ 8 ಅಥವಾ 9 ರಂದು ಸಚಿವ ಸಂಪುಟ ರಚನೆ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.