Tag: BJP Minister

  • ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದ್ರೆ ನೇಣು ಹಾಕಿಕೊಳ್ಳುತ್ತೇನೆ: ಎಚ್‍ಡಿಕೆಗೆ ಸೋಮಣ್ಣ ಸವಾಲು

    ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದ್ರೆ ನೇಣು ಹಾಕಿಕೊಳ್ಳುತ್ತೇನೆ: ಎಚ್‍ಡಿಕೆಗೆ ಸೋಮಣ್ಣ ಸವಾಲು

    – ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ
    – ಎಚ್‍ಡಿಕೆ ವಿರುದ್ಧ ಗುಡುಗಿದ ವಸತಿ ಸಚಿವರು
    – ನಾನು ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ

    ಚಿಕ್ಕಬಳ್ಳಾಪುರ: ನಾನು ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

    ಸೋಮಣ್ಣ ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದವನು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ಕಿಡಿಕಾರಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಇಲ್ಲ, ನಾಲಿಗೆಗೆ ಹಿಡಿತ ಇಲ್ಲ. ನಾನು ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದನ್ನು ಅವರು ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ. ಅಂತಹ ಯಾವುದೇ ಘಟನೆಗಳು ನನ್ನ ಜೀವನದಲ್ಲಿ ನಡೆದಿಲ್ಲ. ನನ್ನ ಜೀವನ ತೆರೆದ ಪುಸ್ತಕ. ಒಂದು ವೇಳೆ ನಾನು ಬಜಾರ್ ನಲ್ಲಿ ಬಟ್ಟೆ ಕದ್ದಿದ್ದೇನೆ ಎನ್ನುವುದನ್ನು ದೃಢಪಡಿಸದಿದ್ದರೆ ಕುಮಾರಸ್ವಾಮಿ ಅವರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಇಂತಹ ಪಾಪದ ಮಾತುಗಳನ್ನ ಆಡುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿಟ್ ಅಂಡ್ ರನ್ ಅಂತ ಕರೆಯುತ್ತಾರೆ. ಮಾಜಿ ಸಿಎಂ ಆದವರು ಸಂಸ್ಕಾರ ಇಲ್ಲದೆ ಮಾತನಾಡುವುದು ಎಷ್ಟು ಸರಿ ಅಂತ ಅರ್ಥ ಮಾಡಿಕೊಳ್ಳಬೇಕು. ದಿಕ್ಕು ದಿಸೆಯಿಲ್ಲದೆ ಏನೋ ಒಂದು ಹೇಳುವುದು ಎಚ್.ಡಿ.ಕುಮಾರಸ್ವಾಮಿ ಅವರ ಜಾಯಮಾನ. ಆ ತರಹದ್ದು ಏನಾದ್ರೂ ಇದ್ದರೆ, ಧೃಡಪಡಿಸಿದರೆ ಒಂದು ಸೆಕೆಂಡ್ ಕೂಡ ನಾನು ಜೀವಂತವಾಗಿ ಇರುವುದಿಲ್ಲ ಎಂದು ಹೇಳಿದರು.

    ಎಚ್‍ಡಿಡಿ ರಾಷ್ಟ್ರದ ಸಂಪತ್ತು:
    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಷ್ಟ್ರದ ದೊಡ್ಡ ನಾಯಕರು, ರಾಷ್ಟ್ರದ ಸಂಪತ್ತು. ಅವರು ರಾಜ್ಯ ಹಾಗೂ ನಮ್ಮಂತಹ ನಾಯಕರಿಗೆ ಮಾರ್ಗದರ್ಶನ ಮಾಡಲಿ. ಯಾವುದೇ ಪಕ್ಷಕ್ಕೆ ಅವರು ಸೀಮಿತವಾಗುವುದು ಬೇಡ. ಎಚ್.ಡಿ.ದೇವೇಗೌಡರ ಆಶೀರ್ವಾದ ಎಲ್ಲಿರಿಗೂ ಬೇಕು ಎಂದು ಹೊಗಳಿದರು.

    ಎಚ್.ಡಿ.ದೇವೇಗೌಡ ಅವರನ್ನ ಮುಖ್ಯಮಂತ್ರಿ ಮಾಡಿದಾಗ ಎಚ್.ಡಿಕುಮಾರಸ್ವಾಮಿ ಎಲ್ಲಿದ್ದರು. ಕಾರ್ಪೊರೇಷನ್‍ನಲ್ಲಿ ಗುತ್ತಿಗೆದಾರರಾಗಿದ್ದರು. ದೇವೇಗೌಡರು ಸಿಎಂ ಆಗಬೇಕಾದರೆ ನನ್ನ ಶ್ರಮ ಎಷ್ಟಿತ್ತು. ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂದೇಶ ಏನಿತ್ತು. ಅದು ನನಗೆ ಗೊತ್ತು. ಈ ಕುಮಾರಸ್ವಾಮಿ ಅವರಿಗೆ ಏನು ಗೊತ್ತು ಎಂದು ಗುಡುಗಿದರು.

    ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ:
    ನಾನು ನಮ್ಮ ಅಮ್ಮ-ಅಪ್ಪ, ಗುರುಗಳು ಹಾಗೂ ದೇವೇಗೌಡರ ಕಾಲಿಗೆ ಬಿದ್ದಿದ್ದೇನೆ. ದಸರಾ ಮುಗಿದ ಮೇಲೆ ದೇವೇಗೌಡರು ಸಿಕ್ಕಿದ್ದರು. ಎಂತಹ ಒಳ್ಳೆಯ ಕೆಲಸ ಮಾಡಿದೆ ಅಂತ ಅಭಿನಂದಿಸಿದ್ದರು. ಅವರ ಮಗ ಎನ್ನುವ ಅರ್ಹತೆ ಬಿಟ್ಟರೆ ನಿಮಗೆ ಬೇರೇನು ಅರ್ಹತೆ ಇಲ್ಲ. ಆದರೆ ಬೇರೆ ಯಾರೂ ದೇವೇಗೌಡರ ಹೆಸರು ಹೇಳುವಂತಿಲ್ಲ ಎನ್ನುವ ಅಧಿಕಾರ ನಿಮಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಎಷ್ಟರ ಮಟ್ಟಿಗೆ ನಡೆಸಿಕೊಂಡರು ಎನ್ನುವುದು ನನಗೆ ಗೊತ್ತು. ನಮ್ಮ ಕಣ್ಣು ಮುಂದೆಯೇ ನೂರಾರು ನಿದರ್ಶನಗಳಿವೆ. ನಾನು ಅದನ್ನ ಹೇಳುವುಕ್ಕೆ ಹೋಗುವುದಿಲ್ಲ. ನಾನು ಬೆಂಗಳೂರಿಗೆ ಬಂದು 54 ವರ್ಷ, ರಾಜಕೀಯಕ್ಕೆ ಪ್ರವೇಶಿಸಿ 40 ವರ್ಷ ಆಯಿತು. ನಿಮ್ಮಂತ ಲಜ್ಜೆಗೆಟ್ಟ ಕೆಲಸಗಳನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.

    ಎಚ್.ಡಿ.ದೇವೇಗೌಡ ಅವರನ್ನ ನನ್ನ ತಂದೆ ಹಾಗೂ ಹಿರಿಯರಾಗಿಯೂ ನೋಡಿದ್ದೇನೆ. ನನ್ನ ಅವರ ಬಾಂಧವ್ಯ ಚೆನ್ನಾಗಿದೆ. ನೀವು ಅವರ ಮಗ ಆಗದಿದ್ರೇ ಏನಾಗಬಿಡ್ತಿದ್ರೀ? ಅರ್ಥ ಮಾಡಿಕೊಳ್ಳಿ. ನಮಗೆ ನಮ್ಮ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಇಲ್ಲಸಲ್ಲದ ಕ್ಷುಲ್ಲಕ ಆರೋಪ ಮಾಡಿ ಇನ್ನೊಬ್ಬರ ಮನಸ್ಸು ನೋಯಿಸುವ ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ. ಅದಕ್ಕೆ ಯಾರೂ ನಿಮ್ಮನ್ನ ನಂಬ್ತಾ ಇಲ್ಲ. ಇಂತಹ ದುರಂಹಕಾರದ ಅವಹೇಳನಕಾರಿಯಾಗಿ ಕೆಟ್ಟಮಟ್ಟದ ರೀತಿಯಲ್ಲಿ ಮಾತನಾಡುವುದು ನಿಲ್ಲಿಸಿ. ನಿಮ್ಮದು ಒಂದಲ್ಲ ನೂರಾರು ಇವೆ. ನಾವೇನಾದರೂ ಹೇಳಿದರೆ ನಿಮ್ಮ ಗೌರವ ಏನಾಗುತ್ತೆ ತಿಳಿದುಕೊಳ್ಳಿ. ಕುಮಾರಸ್ವಾಮಿಯವರೇ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಿ. ನಾನು ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದನ್ನು ಅರಿತುಕೊಳ್ಳಿ. ಇಂತಹ ಇಲ್ಲದ ಹೇಳಿಕೆಗಳನ್ನ ಕೊಡಬೇಡಿ. ತಪ್ಪು ಮಾಡಿದ್ದರೆ ಹೇಳಿ. ನನ್ನ ದೇಹತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

  • ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳುವ ಬಿಜೆಪಿ ಡಬಲ್ ಗೇಮ್ ತಂತ್ರವನ್ನು ಅನುಸರಿಸುತ್ತಿದೆ. ಮಾಜಿ ಸಿಎಂ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕೆ ಸಚಿವರು ಹಾಗೂ ಅಧಿಕಾರಿಗಳು ಪತ್ನಿ ಸಮೇತ ಹೋಗುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರಾಜ್ಯದಲ್ಲಿ ಉಂಟಾದ ನೆರೆಯಿಂದ ಜನರು ಸುಧಾರಿಸಿಕೊಂಡಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದ ಹಾನಿಯಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರ ಪತ್ನಿ, ಅಧಿಕಾರಿಗಳು ಹಾಗೂ ಆಪ್ತರ ವಲಯದ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

    ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಪ್ಲ್ಯಾನ್ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೆ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ 17ರ ವರೆಗೆ ಚೀನಾದಲ್ಲಿ 6 ದಿನ, 4 ದಿನ ಲಂಡನ್ ಸುತ್ತಾಡಲಿದ್ದಾರೆ. ಈಗಾಗಲೇ ಫ್ಲೈಟ್ ಬುಕ್ ಆಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸೆಮಿನಾರ್ ನೆಪದಲ್ಲಿ ಎರಡು ದೇಶಗಳ ಪ್ರವಾಸಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಸಚಿವರು, ಅಧಿಕಾರಿಗಳಿಗೆ ಸರ್ಕಾರಿ ಹಣವನ್ನು ಬಳಸಲಾಗುತ್ತಿದೆ. ಅವರೊಟ್ಟಿಗೆ ಬರುವ ಪತ್ನಿಯರಿಗೆ ವೈಯಕ್ತಿಯ ಹಣವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಯಾರೆಲ್ಲ ಹೋಗ್ತಾರೆ?
    ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್‍ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್‍ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.

    ಶೆಟ್ಟರ್‌ಗೆ ‘ಪಬ್ಲಿಕ್’ ಪ್ರಶ್ನೆ:
    *ಪ್ರಶ್ನೆ 1- ನೆರೆಯಿಂದ ಬೆಳಗಾವಿ ತತ್ತರಿಸಿ ಹೋಗಿದೆ. ಉಸ್ತುವಾರಿ ಸಚಿವರು ಹೇಗೆ ಹೋಗ್ತೀರಾ..?
    *ಪ್ರಶ್ನೆ 2 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಪತ್ನಿಯನ್ನು ಏಕೆ ಕರೆದುಕೊಂಡು ಹೋಗ್ತೀರಾ..?
    *ಪ್ರಶ್ನೆ 3 – ಪತ್ನಿಯ ಪ್ರವಾಸ ವೆಚ್ಚ ಸರ್ಕಾರ ಭರಿಸದಿದ್ದರೂ ಪತ್ನಿ ಜೊತೆಗೆ ಹೋಗುವುದು ಏಕೆ..?
    *ಪ್ರಶ್ನೆ 4 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ..?
    *ಪ್ರಶ್ನೆ 5 – ರಾಹುಲ್ ಗಾಂಧಿ ಇಂಡೋನೇಷ್ಯಾ ಖಾಸಗಿ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ..?
    *ಪ್ರಶ್ನೆ 6 – ಜೆಡಿಎಸ್ ಶಾಸಕರ ಮಲೇಷ್ಯಾ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ…?

  • ಸಚಿವ ಸಿ.ಸಿ.ಪಾಟೀಲ್‍ಗೆ ನೆರೆ ಸಂತ್ರಸ್ತ ಮಹಿಳೆಯಿಂದ ಕ್ಲಾಸ್

    ಸಚಿವ ಸಿ.ಸಿ.ಪಾಟೀಲ್‍ಗೆ ನೆರೆ ಸಂತ್ರಸ್ತ ಮಹಿಳೆಯಿಂದ ಕ್ಲಾಸ್

    – ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ

    ಗದಗ: ಮಾಧ್ಯಮಗಳ ವರದಿಯಿಂದ ಎಚ್ಚೆತ್ತು ಪ್ರವಾಹ ಪ್ರದೇಶ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತವಾರಿ ಸಚಿವ ಸಿ.ಸಿ.ಪಾಟೀಲ್ ಅವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆದಿದೆ.

    ಪ್ರವಾಹ ಪ್ರದೇಶ ವೀಕ್ಷಣೆಗೆ ಸಚಿವರು ರೋಣ ತಾಲೂಕಿನ ಹೊಳೆಆಲೂರ ಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಸಚಿವರ ವಿರುದ್ಧ ಕಿಡಿಕಾರಿದ ಹೊಳೆಆಲೂರಿನ ನಿವಾಸಿ ಈರಮ್ಮ ಹೆಬ್ಬಳ್ಳಿ ಅವರು, ಇಷ್ಟು ದಿನ ಎಲ್ಲಿ ಹೋಗಿದ್ರಿ? ಈಗ ಯಾಕೆ ಬಂದ್ರಿ ಎಂದು ಪ್ರಶ್ನಿಸಿದರು. ಇದರಿಂದಾಗಿ ಗರಂ ಆದ ಸಚಿವರು, ಯಾರೋ ಹೇಳಿಕೊಟ್ಟಂತೆ ಮಾತನಾಡ ಬೇಡಿ. ರಸ್ತೆ ದುರಸ್ತಿ, ಮನೆ ದುರಸ್ತಿ ಆಮೇಲೆ ನೋಡುತ್ತೇವೆ. ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ ಎಂದರು. ಇದನ್ನೂ ಓದಿ: ನಮಗೆ ಇರಲು ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ಇದ್ದೇನೆ: ಸಿದ್ದುಗೆ ವೃದ್ಧೆ ತರಾಟೆ

    ಈ ಮಧ್ಯೆ ಈರಮ್ಮ ಹೆಬ್ಬಳ್ಳಿ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಆಗ ಸಚಿವರು, ನಾನು ಬೆಂಗಳೂರಿಗೆ ಹೋಗಬೇಕು. ಫ್ಲೈಟ್ ಮಿಸ್ ಆಗುತ್ತದೆ. ಟೈಂ ಇಲ್ಲ ಬೇಗ ಹೋಗಬೇಕು ಎಂದರು. ಇದರಿಂದ ಕೋಪಗೊಂಡ ನೆರೆ ಸಂತ್ರಸ್ತ ಮಹಿಳೆ, ಟೈಂ ಇಲ್ಲದಿದ್ದರೆ, ಬೆಂಗಳೂರಲ್ಲೇ ಕುಳಿತು ಮಾತನಾಡಿ, ನಾವು ಟಿವಿಯಲ್ಲೇ ನೋಡುತ್ತೇವೆ. ಇಲ್ಲಿಗ್ಯಾಕೆ ಬಂದ್ರಿ ಎಂದು ತರಾಟೆ ತೆಗೆದುಕೊಂಡರು. ಇದರಿಂದಾಗಿ ತಕ್ಷಣವೇ ಸಚಿವರು ಪಟ್ಟಣದಿಂದ ಕಾಲ್ಕಿತ್ತರು.

    ಬೆಣ್ಣೆಹಳ್ಳ ಪ್ರವಾಹಕ್ಕೆ ಶ್ವಾನವೊಂದು ಕೊಚ್ಚಿಕೊಂಡು ಹೊಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಬಳಿ ನಡೆದಿದೆ. ನೋಡನೋಡುತ್ತಿದ್ದಂತೆ ಪ್ರವಾಸುರನ ಅಟ್ಟಹಾಸಕ್ಕೆ ನಾಯಿ ನೀರು ಪಾಲಾಗಿದೆ. ಸುರಕೋಡ ಗ್ರಾಮ ನಡುಗಡ್ಡೆಯಂತಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

    ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾನದಿಗೆ ಅಪಾರ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಮನೆಗಳು, ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ಸಂತ್ರಸ್ತರು ಮತ್ತೆ ಕಂಗಾಲಾಗಿದ್ದಾರೆ. ಮಲಪ್ರಭಾ ಪ್ರವಾಹಕ್ಕೆ ಕೊಣ್ಣೂರು, ಲಖಮಾಪುರ, ವಾಸನ, ಬೂದಿಹಾಳ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ.

  • ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು

    ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು

    – ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಸಚಿವರು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿದಿದ್ದರೆ ಕೊಲೆಗಡುಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿದ್ದರು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

    ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ ಅವರ ಮಧ್ಯೆ ಬೆಳಗ್ಗೆಯಿಂದಲೇ ಟ್ವೀಟ್ ವಾರ್ ಆರಂಭವಾಗಿದೆ. ಟ್ವೀಟ್ ಮೂಲಕವೇ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಸಚಿವರು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.

    ಟ್ವೀಟ್ ಮಾಡಿರುವ ಸಚಿವರು, ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎನ್ನುವ ಮೂಲಕ ತಮಗೆ ಮಾನಸಿಕ ಅಸ್ವಸ್ಥತೆ ಇರುವುದನ್ನು ಸಿದ್ದರಾಮಯ್ಯ ಅವರು ಸಾಬೀತುಪಡಿಸಿದ್ದಾರೆ. ಈ ಮಹಾನುಭಾವರು ಅಧಿಕಾರದಲ್ಲಿ ಮುಂದುವರಿದಿದ್ದರೆ ಕುಡುಕರಿಗೆ, ಕೊಲೆಗಡುಕರಿಗೆ ಮತ್ತು ಸಮಾಜಘಾತುಕರಿಗೆ ತಮ್ಮ ಕಯ್ಯಾರೆ ರಾಜ್ಯೋತ್ಸವ ಪ್ರಶಸ್ತಿಯನ್ನು ದಯಪಾಲಿಸುತ್ತಿದ್ದರೋ ಏನೋ ಎಂದು ಕುಟುಕಿದ್ದಾರೆ.

    ಮಹಾತ್ಮ ಗಾಂಧೀಜಿ ಅವರು ವಿ.ಡಿ.ಸಾವರ್ಕರ್ ಅವರನ್ನು ಭಾರತದ ನಿಷ್ಠಾವಂತ ಮಗ ಎಂದು ಕರೆದಿದ್ದಾರೆ. ಜೊತೆಗೆ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ, ಪ್ರತಿಭೆಯನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಿ ಎಂದು ಗಾಂಧೀಜಿ ತಿಳಿಸಿದ್ದಾರೆ. ವೀರ್ ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ನಡೆಯಲಿ. ನಿಮಗೆ ತಾಕತ್ತು ಇದ್ರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

    ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಚಿವ ಸಿ.ಟಿ.ರವಿ, ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದು ಹೇಳುತ್ತೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನೀವು ಮಾನಸಿಕ ಅಸ್ವಸ್ಥರಾಗಿದ್ದೀರಿ. ಇತಿಹಾಸದ ಬಗ್ಗೆ ನಿಮಗೆ ಅರಿವಿದೆಯಾ? ನೀವ್ಯಾಕೆ ಸೆಲ್ಯೂಲರ್ ಜೈಲಿಗೆ ಹೋಗಬಾರದು. ನಾನೇ ಸ್ಪಾನ್ಸರ್ ಮಾಡುತ್ತೇನೆ ಎಂದು ಗುಡುಗಿದ್ದರು.

    ಸಚಿವರ ಹೇಳಿಕೆಯಿಂದ ಗರಂ ಆಗಿದ್ದ ಸಿದ್ದರಾಮಯ್ಯ ಅವರು, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಟ್ವೀಟ್ ಮಾಡಿದ್ದರು.

    ಮತ್ತೊಂದು ಟ್ವೀಟ್‍ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ ಎಂದು ಕುಟುಕಿದ್ದರು.

  • ಆರ್.ಅಶೋಕ್‍ಗೆ ಹಿಂಬಡ್ತಿ ಭಾಗ್ಯ: ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

    ಆರ್.ಅಶೋಕ್‍ಗೆ ಹಿಂಬಡ್ತಿ ಭಾಗ್ಯ: ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

    – ಐವತ್ತಾರು ಇಂಚಿನ ಪಿಎಂ ಮೋದಿ ಎದೆಗೆ ತಾಯಿ ಹೃದಯ ಬೇಕಿದೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಹಿಂಬಡ್ತಿ ಭಾಗ್ಯ ಸಿಕ್ಕಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

    ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಆರ್. ಅಶೋಕ್ ಅವರು ಡೆಪ್ಯೂಟಿ ಸಿಎಂ ಆಗಲಿಲ್ಲ. ನೀವು ಡಿಸಿಎಂ ಆಗಬೇಕಿತ್ತು ಎಂದು ಕಾಲೆಳೆದರು. ತಕ್ಷಣವೇ ಎದ್ದು ನಿಂತ ಆರ್.ಅಶೋಕ್, ನಾನೇ ಬೇಡ ಅಂದೆ ಬಿಡಿ ಸಾರ್ ಎಂದರು. ಆಗ ಸಿದ್ದರಾಮಯ್ಯ ಅವರು, ನೋಡಿ ನಿಮಗೆ ಪಕ್ಷ ಹಿಂಬಡ್ತಿ ಭಾಗ್ಯ ಕೊಟ್ಟಿಗೆ ಎಂದಾಗ ಕಲಾಪ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಯತ್ನಾಳ್ ಸತ್ಯ ಹೇಳ್ತಾರೆ, ಅವ್ರು ನನಗೆ ಒಳ್ಳೆ ಸ್ನೇಹಿತ: ಸಿದ್ದರಾಮಯ್ಯ

    ಪಾಪ ಅಶೋಕ್‍ಗೆ ಡಿಸಿಎಂ ಸ್ಥಾನ ಇಲ್ಲ. ಕೆ.ಎಸ್. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಇಲ್ಲ. ಈಗ ಮಂತ್ರಿ ಆದವರಿಗೆ ಹಾಗೂ ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಕುಟುಕಿದರು.

    ಪ್ರಧಾನಿ ನರೇಂದ್ರ ಮೋದಿ ಬಳಿ ಐವತ್ತಾರು ಇಂಚು ಎದೆ ಇದೆ. ಆದರೆ ಅವರಿಗೆ ತಾಯಿ ಹೃದಯ ಬೇಕಲ್ಲ? ರಾಜ್ಯಕ್ಕೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸರ್ವೆ ಮಾಡಿ ಹಾನಿ ವೀಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಎಂದೆಂದು ಕೇಳರಿಯದ ಪ್ರವಾಹ ಎದುರಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೂಡಲೇ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ಮಹಾ ಮಳೆ ಹಾಗೂ ಪ್ರವಾಹದಿಂದಾಗಿ ಎಂಟು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಸಂತ್ರಸ್ತರು ಮನೆ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಶೀಲಹಳ್ಳಿಯಲ್ಲಿ ಪ್ರವಾಹದಿಂದ ದೊಡ್ಡ ಹಾನಿಯಾಗಿದೆ. ಪ್ರವಾಹ ಉಂಟಾಗಿ 60 ದಿನ ಕಳೆದಿದೆ. ಅಲ್ಲಿನ ಸೇತುವೆಯನ್ನು ಪುನರ್ ನಿರ್ಮಾಣವಾಗಿಲ್ಲ. ಇದು ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕಾಣಿಸಿಲ್ಲ ಎನ್ನುವುದೇ ನನಗೆ ನೋವು ತಂದಿದೆ. ಇಲ್ಲಿ ಲಕ್ಷಾಂತರ ಜೀವನ ಬೀದಿ ಪಾಲಾಗಿದೆ, ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಅವರು ವಿದೇಶಕ್ಕೆ ಹೋಗದೆ ಇದ್ದರೆ ಪ್ರಳಯ ಆಗುತ್ತಿತ್ತಾ? ಮನೆ ಕಳಕೊಂಡ ನೆರೆ ಸಂತ್ರಸ್ತರಿಗೆ ಶೆಡ್ ಹಾಕಿ ಕೊಟ್ಟಿಲ್ಲ. ನೆರೆ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಚಂದ್ರಯಾನ-2 ಸಂಬಂಧ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಸಮಸ್ಯೆ ಬಗ್ಗೆ ಹೇಳಬಹುದಿತ್ತು. ನನ್ನ ಮಾಹಿತಿ ಪ್ರಕಾರ ಭೇಟಿಯಾಗಲು ರಾಜ್ಯ ಬಿಜೆಪಿಯವರಿಗೆ ಅಪಾಯಿಂಟ್‍ಮೆಂಟ್ ಕೊಟ್ಟಿಲ್ಲ ಎಂದು ಕುಟುಕಿದರು.

  • ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ, ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ: ಈಶ್ವರಪ್ಪ ವ್ಯಂಗ್ಯ

    ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ, ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ: ಈಶ್ವರಪ್ಪ ವ್ಯಂಗ್ಯ

    ದಾವಣಗೆರೆ: ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಳಲು ಬಯಸುತ್ತೇನೆ. ನೀವು ಸಿಎಂ ಆದಾಗ ನಾವು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿದ್ದೇವು. ನಿನ್ನೆವರೆಗೂ ಪರಿಹಾರ ಬಂದಿಲ್ಲ ಎಂದು ಆರೋಪ ಮಾಡುತ್ತಾ ಬಂದಿರಿ. ಈಗ ಕೇಂದ್ರ ಸರ್ಕಾರವು ನರೆ ಪರಿಹಾರ ನೀಡಿದೆ. ಆದರೆ ನೀವು ಇಷ್ಟೇನಾ ಎಂದು ಕೇಳುತ್ತಿರಾ ಎಂದು ಕಿಡಿಕಾರಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಅವರು ಕೂಡ ವಿಪಕ್ಷ ಸ್ಥಾನ ಪಡೆಯಲು ಮುಂದಾಗುತ್ತಿದ್ದಾರೆ. ಟೀಕೆ ಮಾಡ ಬೇಕು, ವಿರೋಧ ಸ್ಥಾನ ಸಿಗುತ್ತೋ ಇಲ್ಲವೂ ಎಂದು ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಈಗ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುತ್ತಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ವಿರುದ್ಧ ಟೀಕೆ ಮಾಡ ಬೇಕೆಂದು ಈಗ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

    ಅಯೋಧ್ಯ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಕೊಂಡಿದೆ. ಇಡಿ ದೇಶವೇ ಹೆಮ್ಮೆ ಪಡುವಂತಹ ತೀರ್ಪು ಬರಲಿದೆ ಎನ್ನುವ ವಿಶ್ವಾಸವಿದೆ. ಯಾರಿಗೂ ನೋವಾಗದ ರೀತಿ ತೀರ್ಪು ಬರಲಿದೆ ಎಂದರು.

  • ಕೇಂದ್ರದಿಂದ ನೆರೆ ಪರಿಹಾರ ವಿಳಂಬಕ್ಕೆ ಕ್ಷಮೆಯಾಚಿಸಿದ ಶ್ರೀರಾಮುಲು

    ಕೇಂದ್ರದಿಂದ ನೆರೆ ಪರಿಹಾರ ವಿಳಂಬಕ್ಕೆ ಕ್ಷಮೆಯಾಚಿಸಿದ ಶ್ರೀರಾಮುಲು

    ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ವಿಳಂಬವಾಗಿರುವುದಕ್ಕಾಗಿ ಆರೋಗ್ಯ ಸಚಿವ ಶ್ರೀರಾಮುಲು ನೆರೆ ಸಂತ್ರಸ್ತರಲ್ಲಿ ಕ್ಷಮೆಯಾಚಿಸಿದ್ದಾರೆ.

    ಹಿರಿಯೂರು ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯನ್ನು ಕೇಂದ್ರ ತಿರಸ್ಕರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ವಾಪಸ್ ಆಗಿದ್ದು, ಎರಡ್ಮೂರು ದಿನಗಳಲ್ಲಿ ನೆರೆ ಪರಿಹಾರ ಬರಲಿದೆ ಎಂದು ಭರವಸೆ ನೀಡಿದರು.

    ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ನೆರೆ ಸಂತ್ರಸ್ತರು ಮುತ್ತಿಗೆ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂತ್ರಸ್ತರ ನೋವು ನಮಗೆ ಅರ್ಥ ಆಗುತ್ತದೆ. ಹೀಗಾಗಿ ನಮ್ಮ ಸರ್ಕಾರ ಸಂತ್ರಸ್ತರ ನೋವಿಗೆ ಸ್ಪಂದಿಸಲಿದೆ. ಬಿ.ಎಸ್, ಯಡಿಯೂರಪ್ಪ ಅವರು ನೇರ ನಿಷ್ಠುರ ರಾಜಕಾರಣಿಯಾಗಿದ್ದಾರೆ. ನೆರೆ ಪರಿಹಾರದ ವಿಚಾರದಲ್ಲಿ ಆರ್‍ಎಸ್‍ಎಸ್ ಹಾಗೂ ಬಿ.ಎಸ್. ಯಡಿಯೂರಪ್ಪ ಅಂತ ಲಿಂಕ್ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.

    ನೆರೆ ಪರಿಹಾರದ ವಿಚಾರದಲ್ಲಿ ಯಾರು ರಾಜಕೀಯ ಮಾಡುವುದು ಬೇಡ. ಅಗತ್ಯ ಬಿದ್ದರೆ ಕೇಂದ್ರದ ಬಳಿಗೆ ಎಲ್ಲರೂ ಒಟ್ಟಾಗಿ ಹೊಗೋಣ. ಯಾಕಂದರೆ ಕಾಂಗ್ರೆಸ್‍ನವರ ಮೇಲೂ ಜವಾಬ್ದಾರಿ ಇದೆ. ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶ್ರೀರಾಮುಲು ಟಾಂಗ್ ಕೊಟ್ಟರು.

  • ಈ ಕಡೆ ಮಂದಿ ನಮ್ಮ ಮಾತ್ ಕೇಳಿದ್ರೆ ಎದೆ ಒಡ್ಕೋತೀರಿ: ಶ್ರೀರಾಮುಲು

    ಈ ಕಡೆ ಮಂದಿ ನಮ್ಮ ಮಾತ್ ಕೇಳಿದ್ರೆ ಎದೆ ಒಡ್ಕೋತೀರಿ: ಶ್ರೀರಾಮುಲು

    – ಕೃಷ್ಣನ ಆಶೀರ್ವಾದ ಇದ್ರೆ ಡಿಸಿಎಂ ಆಗ್ತೀನಿ

    ಉಡುಪಿ: ಆರೋಗ್ಯ ಸಚಿವ ಶ್ರೀರಾಮುಲು ಅವರು ಡಿಸಿಎಂ ಲಕ್ಷ್ಮಣ ಸವದಿ ಪರ ಬ್ಯಾಟ್ ಬೀಸಿ, ನಮ್ಮ ಕಡೆ ಭಾಷೆನೇ ಹಂಗೆ ಎಂದು ಹೇಳಿದ್ದಾರೆ.

    ಅವಾಚ್ಯ ಪದಗಳಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಡಿಸಿಎಂ ಅವಮಾನಿಸಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಅದೇನೂ ಗಂಭೀರ ವಿಚಾರ ಅಲ್ಲ. ಉತ್ತರ ಕರ್ನಾಟಕದ ಆಡು ಭಾಷೆನೇ ಹಂಗೆ ಇರೋದು. ಕುಮಟಳ್ಳಿ ಅವರಿಗೆ ನಾನು ಸಮಾಧಾನ ಮಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

    ‘ನಮ್ ಕಡೆ ಹೆಂಗ್ ಮಾತಾಡ್ತಾರೆ ಅಂತ ನೀವು ಊಹಿಸಲೂ ಸಾಧ್ಯವಿಲ್ಲ. ನಮ್ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ. ಈ ಕಡೆ ಮಂದಿ ನಮ್ ಮಾತು ಕೇಳಿದ್ರೆ ಎದೆ ಒಡ್ಕೋತೀರಿ. ಲಕ್ಷ್ಮಣ ಸವದಿ ಅವರು ಉದ್ದೇಶ ಪೂರ್ವಕವಾಗಿ ಮಾತನಾಡಿರಲ್ಲ. ನಾವು ಇನ್ನೂ ಬೇರೆ ಬೇರೆ ಶಬ್ದ ಮಾತಾಡಿರ್ತೀವಿ. ನಮ್ ಕಡೆ ಮಂದಿ ಅಭ್ಯಾಸ ಅಷ್ಟೇ. ಕುಮಟಳ್ಳಿಯವರು ಮಿಸ್ ಅಂಡರ್ ಸ್ಟಾಡಿಂಗ್ ಮಾಡ್ಕೊಂಡಿರಬಹುದು’ ಎಂದು ನಗುತ್ತಲೇ ಹೇಳಿದರು.

    ಮಹೇಶ್ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿ ನಮ್ಮ ಸ್ನೇಹಿತರು. ಏನಾದ್ರೂ ಗೊಂದಲ ಇದ್ದರೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಉಪ ಮುಖ್ಯಮಂತ್ರಿ ಆಕಾಂಕ್ಷೆ ಹೊರ ಹಾಕಿದ ಸಚಿವರು, ಕೃಷ್ಣನ ದಯೆ ಹೇಗಿದೆಯೋ ನೋಡೋಣ. ಕೃಷ್ಣನ ಆಶೀರ್ವಾದ ಇದ್ದರೆ ಡಿಸಿಎಂ ಆಗುತ್ತೇನೆ ಎಂದು ನಸುನಕ್ಕು ಮಾಧ್ಯಮಗಳಿಗೆ ಕೈಮುಗಿದರು.

    ಸವದಿ ಹೇಳಿದ್ದೇನು?
    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದರು.

    ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.