ಬೆಂಗಳೂರು: ಅಗ್ನಿ ಅನಾಹುತದಲ್ಲಿ ಮಾಗಡಿ ಬಿಜೆಪಿ ಅಧ್ಯಕ್ಷರಿಗೆ ಸೇರಿದ್ದ ಕೋಟ್ಯಂತರ ರೂಪಾಯಿಯ ಐಶಾರಾಮಿ ಬಂಗಲೆ ಹೊತ್ತುರಿದ ಘಟನೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿ ಇಂದು ನಡೆದಿದೆ.
ಮಾಗಡಿ ಬಿಜೆಪಿ ಅಧ್ಯಕ್ಷ ರಂಗಧಾಮಯ್ಯನ ಅವರಿಗೆ ಈ ಬಂಗಲೆ ಸೇರಿದ್ದು, ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡಿ ರಂಗಧಾಮಯ್ಯನವರು ಈ ಐಶಾರಾಮಿಯಾಗಿ ಬಂಗಲೆ ನಿರ್ಮಿಸಿದ್ದರು. ಆದರೆ ಇಂದು ದೇವರ ಪೂಜೆಗಾಗಿ ಬಂಗಲೆಯೊಳಗೆ ಹಚ್ಚಿಟ್ಟಿದ್ದ ದೀಪದಿಂದ ಈ ಭಾರಿ ಅವಘಡ ಸಂಭವಿಸಿದೆ.
ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅಗ್ನಿ ಅನಾಹುತದಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದ್ರೆ ಬಂಗಲೆಯೊಳಗಿದ್ದ ಹಲವು ಬೆಲೆಬಾಳುವ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಸುಟ್ಟು ಸಾಕಷ್ಟು ನಷ್ಟವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೊಡಗು ಸಂಪಾಜೆಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಕಳಗಿ(47) ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ ಓಮ್ನಿ ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಬಾಲಚಂದ್ರ ಕಳಗಿ ಸ್ಥಳದಲ್ಲೇ ಸಾವು ಸಾವನ್ನಪ್ಪಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಗೆ ಶವವನ್ನು ರವಾನೆ ಮಾಡಲಾಗಿದೆ. ಅಪಘಾತವಾದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಬಾಲಚಂದ್ರ ಅವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಮತ್ತು ವಿರಾಜಪೇಟೆ ಶಾಸಕ ಬೋಪಯ್ಯ ಅವರು ಆಗಮಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಜಿಲ್ಲೆಯಲ್ಲಿ ನಡೆಯಬೇಕಿದ್ದ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು: ನಟಿ ಪೂಜಾಗಾಂಧಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ರೂಂ ಬುಕ್ ಮಾಡಿ ಹಣ ಪಾವತಿಸದೇ ಸಿಲುಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ಉದ್ದೇಶಪೂರ್ವಕವಾಗಿಯೇ ನನ್ನನ್ನ ಯಾಕೆ ತಗೊಂಡ್ರು. ನನಗೆ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕವೇ ಈ ವಿಚಾರ ತಿಳಿಯಿತು. ಈ ವಿಚಾರದ ಬಗ್ಗೆ ನಾನು ಚೆಕ್ ಮಾಡುತ್ತೇನೆ ಅಂದ್ರು.
ಅಲ್ಲದೆ 23 ಲಕ್ಷ ರೂ ಕಟ್ಟುವಷ್ಟು ನಾನು ದೊಡ್ಡವನಲ್ಲ. ಅದು ಯಾರದ್ದೋ, ಏನೋ, ಎಂತದ್ದೋ.. ಆದ್ರೆ ನನ್ನ ಯಾಕೆ ತಗ್ಲಾಕ್ಕುತ್ತಾರೆ ಎಂದು ಗೊತ್ತಿಲ್ಲ. ಯಾವ ಉದ್ದೇಶ ಹಾಗೂ ನನ್ನ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ಮಾಡಲಾಗುತ್ತಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ರು. ಇದನ್ನೂ ಓದಿ: ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!
ನಾನು ಹೋಟೆಲ್ ಗೆ ಹೋಗಿಯೇ ಇಲ್ಲ. ಬೇಕಾದ್ರೆ ನೀವೇ ಪರಿಶೀಲನೆ ಮಾಡಿಕೊಳ್ಳಿ. ನಿಮಗೆ ಬೇಕಾದ್ದನ್ನು ನೀವೇ ವೆರಿಫೈ ಮಾಡಿಕೊಳ್ಳಿ. ನಾನು ಎಲ್ಲಿಯೂ ಹೋಗಿಲ್ಲ. ನನಗೆ ನನ್ನದೇ ಆದ ಆಫೀಸ್, ಮನೆ ಇದೆ. ಒಳ್ಳೆಯ ಸಂಸಾರ ಇದೆ. ಹೀಗಾಗಿ ಮನೆ, ಆಫೀಸ್ ಬಿಟ್ಟರೆ ನಾನು ಎಲ್ಲಿಗೂ ಹೋಗಲ್ಲ ಅಂದ್ರು.
ಏನಿದು ಪ್ರಕರಣ..?
ನಟಿ ಪೂಜಾಗಾಂಧಿ ಅವರು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ಹೋಟೆಲ್ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷದ ಹೊಟೇಲ್ ಬಿಲ್ ಒಟ್ಟು 26 ಲಕ್ಷ ಆಗಿತ್ತು. ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಅನ್ನೋದಕ್ಕೆ ನಿಮ್ಮಲ್ಲಿ ಸಾಕ್ಷಿ ಇದ್ಯಾ: ಪೂಜಾ ಗಾಂಧಿ
ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.
ಭೋಪಾಲ್: ಮಧ್ಯ ಪ್ರದೇಶದ ಬರ್ವಾನಿಯ ಬಿಜೆಪಿ ನಾಯಕ ಮನೋಜ್ ಠಾಕ್ರೆ ಮೃತದೇಹ ಅನುಮಾನಾಸ್ಪದವಾಗಿ ವಾರ್ಲಾ ಠಾಣೆ ವ್ಯಾಪ್ತಿಯ ಮೈದಾನದಲ್ಲಿ ಪತ್ತೆಯಾಗಿದೆ.
ಮೃತ ಮನೋಜ್ ಠಾಕ್ರೆ ಇಂದು ಮುಂಜಾನೆ ವಾಕಿಂಗ್ ಗೆಂದು ಮೈದಾನಕ್ಕೆ ಹೋಗಿದ್ದರು. ಆದರೆ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ರಕ್ತವಾಗಿರುವ ಕಲ್ಲುಗಳು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿರಬಹುದು ಎಂದು ಬರ್ವಾನಿ ಎಎಸ್‍ಪಿ ಹೇಳಿದ್ದಾರೆ.
Balwadi (Barwani) ASP on BJP leader Manoj Thackeray found dead in a field: He had gone for his routine morning walk. A blood-stained rock has been found from the crime site. Speculation is that he was killed with that rock. Investigation is being done. #MadhyaPradeshpic.twitter.com/eSACofdhfN
ಠಾಕ್ರೆಯವರ ಮೃತ ದೇಹವು ಬರ್ವಾನಿ ಗ್ರಾಮದ ರಾಧಾ ಸ್ವಾಮಿ ಭವನದ ಸಮೀಪದ ರಸ್ತೆಯ ಸಮೀಪದಲ್ಲಿ ಪತ್ತೆಯಾಗಿದೆ. ಅವರನ್ನು ಅಪರಿಚಿತ ಜನರು ಕೊಲೆ ಮಾಡಿದ್ದಾರೆ ಎಂದು ಸ್ಟೇಷನ್ ಇನ್ ಚಾರ್ಜ್ ದಿನೇಶ್ ಕುಶ್ವಾಹಾ ಹೇಳಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಾರ್ಲಾ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ಅಂದರೆ ಜನವರಿ 17ರಂದು ರಾಜ್ಯದ ಮಂದ್‍ಸೌರ್ ನ ಮುನಿಸಿಪಾಲ್ ಕಾರ್ಪೋರೇಟರ್ ಅಧ್ಯಕ್ಷ ಪ್ರಹ್ಲಾದ್ ಬಂದ್ವಾರ್ ಅವರ ಹತ್ಯೆಯಾಗಿತ್ತು. ಈ ಕೃತ್ಯದ ಬೆನ್ನಲ್ಲೆ ಪಕ್ಷದ ಇನ್ನೊಬ್ಬ ನಾಯಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಹ್ಲಾದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮನೀಶ್ ಬೈರಾಗಿ ಎಂಬಾತನನ್ನು ಬಂಧಿಸಲಾಗಿತ್ತು.
ಭೋಪಾಲ್: ಬಾಲಿವುಡ್ ‘ದೃಶ್ಯಂ’ ಸಿನಿಮಾ ನೋಡಿ ಯುವತಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಬಿಜೆಪಿ ಮುಖಂಡ ಮತ್ತು ಆತನ ಮೂವರು ಮಕ್ಕಳು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಗಂಗಾ ಪ್ರದೇಶದ ನಿವಾಸಿ ಟ್ವಿಂಕಲ್ ಡಾಗ್ರೆ (22) ಕೊಲೆಯಾದ ಯುವತಿ. ಬಿಜೆಪಿ ನಾಯಕ ಜಗದೀಶ್ ಕರೋಟಿಯಾ ಅಲಿಯಾಸ್ ಕಲ್ಲು ಪಹ್ಲ್ವಾನ್ (65), ಅವನ ಮಕ್ಕಳಾದ ಅಜಯ್ (36), ವಿಜಯ್ (38), ವಿನಯ್ (31) ಮತ್ತು ಅವರ ಸಹಾಯಕ ನೀಲಷ್ ಕಶ್ಯಪ್ (28) ಅವರನ್ನು ಬಂಧಿಸಲಾಗಿದೆ ಎಂದು ಇಂದೋರ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಹರಿನಾರಾಚಂಚಿ ಮಿಶ್ರಾ ತಿಳಿಸಿದ್ದಾರೆ.
ಮೃತ ಡಾಗ್ರೆ ಬಿಜೆಪಿ ಮುಖಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆ ಆತನ ಜೊತೆಗೆ ಇರಲು ಇಷ್ಟಪಟ್ಟಿದ್ದಳು. ಆದರೆ ಇದರಿಂದ ತಮ್ಮ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆಯೇ ಕರೋಟಿಯಾ ಮತ್ತು ಆತನ ಮಕ್ಕಳು ಟ್ವಿಂಕಲ್ ಡಾಗ್ರೆಯನ್ನು 2016 ಅಕ್ಟೋಬರ್ 16ರಂದು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ನೋಡಿ ಪ್ಲ್ಯಾನ್
ಕೊಲೆಗೆ ಪ್ಲ್ಯಾನ್ ಮಾಡುವ ಮೊದಲೇ ಆರೋಪಿಗಳು ‘ದೃಶ್ಯಂ’ ಸಿನಿಮಾವನ್ನು ನೋಡಿದ್ದಾರೆ. ಈ ಸಿನಿಮಾದಲ್ಲಿ ಆಕಸ್ಮಿಕವಾಗಿ ಕೊಲೆ ನಡೆಯುತ್ತದೆ. ಆದರೆ ನಟ ತನ್ನ ಕುಟುಂಬದೊಂದಿಗೆ ಸೇರಿ, ಪೊಲೀಸರಿಗೆ ಪ್ರಕರಣದ ತನಿಖೆಯ ಹಾದಿಯನ್ನು ತಪ್ಪಿಸುವುದು ಹೇಗೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಅದೇ ರೀತಿ ಇವರು ಕೂಡ ಮೃತ ದೇಹವನ್ನು ಸುಡುವ ಮೊದಲು ಅದೇ ಜಾಗದಲ್ಲಿ ನಾಯಿಯನ್ನು ಸುಟ್ಟಿದ್ದಾರೆ. ಬಳಿಕ ಇಲ್ಲಿ ಮನುಷ್ಯರ ಮೃತದೇಹ ಸುಡಲಾಗಿದೆ ಎಂದು ಹೇಳಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ
ಪೊಲೀಸ್ ತನಿಖೆಯ ವೇಳೆ ಮೃತದೇಹ ಸುಟ್ಟಿದ್ದ ಜಾಗದಲ್ಲಿ ಟ್ವಿಂಕಲ್ ಗೆ ಸೇರಿದ್ದ ಬ್ರೇಸ್‍ಲೈಟ್ ಮತ್ತು ಇತರ ಆಭರಣಗಳು ಸಿಕ್ಕಿದೆ. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ, ಮೊದಲು ನಾಯಿಯ ಮೃತದೇಹ ಸುಡಲಾಗಿದೆ ಎಂಬುದು ಗೊತ್ತಾಗಿದೆ. ಬಳಿಕ ನಾಯಿ ಸುಟ್ಟಿದ ಜಾಗದಲ್ಲಿಯೇ ಟ್ವಿಂಕಲ್ ಮೃತದೇಹ ಸುಟ್ಟು ಹಾಕಿದ್ದಾರೆ. ಇದೆಲ್ಲವನ್ನು ಆರೋಪಿ ಕರೋಟಿಯಾ ಪೊಲೀಸರ ಹಾದಿ ತಪ್ಪಿಸಲು ಮಾಡಿರುವ ಪ್ಲ್ಯಾನ್ ಎಂದು ತಿಳಿದಿದೆ.
ಸದ್ಯಕ್ಕೆ ಐವರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಇಒಎಸ್ ಪರೀಕ್ಷೆ?
ಗುಜರಾತ್ ಪ್ರಯೋಗಾಲಯದಲ್ಲಿ ಕರೋಟಿಯಾ ಮತ್ತು ಆತನ ಇಬ್ಬರು ಪುತ್ರರ ಮೇಲೆ ಬ್ರೇನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಒಎಸ್) ಪರೀಕ್ಷೆಯನ್ನು ಮಾಡಲಾಗಿದೆ. ಎಲೆಕ್ಟ್ರೋಸೈಕಾಲಿಜಿಕಲ್ ಪರೀಕ್ಷೆಯ ಮೂಲಕ ಆತನನ್ನು ವಿಚಾರಣೆ ನಡೆಸಿದ ವೇಳೆ ಸತ್ಯ ಪ್ರಕಟವಾಗಿದೆ.
ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರ ದೇವಸ್ಥಾನದಲ್ಲಿ ಜನರಿಗೆ ಊಟದ ಜೊತೆ ಮದ್ಯ ಹಂಚಿ ವಿವಾಧದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.
ಭಾನುವಾರದಂದು ಬಿಜೆಪಿ ನಾಯಕ ನರೇಶ್ ಅವರ ಪುತ್ರ ನಿತೀನ್, ಪಾಸಿ ಸಮುದಾಯದವರಿಗೆ ಸಮ್ಮೇಳನವನ್ನು ಹಾರ್ಡೊಯ್‍ನ ಶ್ರವಣ ದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದರು. ಈ ವೇಳೆ ಸಮ್ಮೇಳನಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಊಟದ ಜೊತೆ 200 ಎಂಎಲ್ ಮದ್ಯದ ಬಾಟಲಿಯನ್ನು ಪ್ಯಾಕ್ ಮಾಡಿ ವಿತರಿಸಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದ ಮಕ್ಕಳಿಗೂ ಕೂಡ ಅದೇ ಊಟದ ಪ್ಯಾಕ್‍ಗಳನ್ನು ನೀಡಲಾಗಿತ್ತು. ಈ ವೇಳೆ ಸ್ಥಳಿಯರೊಬ್ಬರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹಾಗೂ ಜನರು ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಹಾರ್ಡೊಯ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಶ್ ಅಗರ್ವಾಲ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು, ಜನರ ಬೆಂಬಲ ಪಡೆಯಲು ಬಿಜೆಪಿ ನಾಯಕ ಈ ರೀತಿ ಮದ್ಯವನ್ನು ಹಂಚಿದ್ದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿದೆ.
Liquor bottles, kept inside food packets, were distributed at an event organised by BJP leader Naresh Agarwal's son Nitin at a temple
ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಕೂಡ ನರೇಶ್ ಅಗರ್ವಾಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾರ್ಡೊಯ್ ಕ್ರೇತ್ರದಿಂದ ಗೆದ್ದ ಬಿಜೆಪಿ ಎಂಪಿ ಅಂಶುಲ್ ವರ್ಮಾ ಪ್ರತಿಕ್ರಿಯಿಸಿ, ಉನ್ನತ ಸ್ಥಾನದಲ್ಲಿರುವ ನಾಯಕನಾಗಿ ನರೇಶ್ ಅವರು ಈ ರೀತಿ ತಪ್ಪು ಕೆಲಸ ಮಾಡಿದ್ದಾರೆ. ಈ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ. ಇತ್ತಿಚಿಗಷ್ಟೆ ನರೇಶ್ ಅವರು ಬಿಜೆಪಿಗೆ ಸೇರಿದ್ದರು. ಈಗ ಈ ರೀತಿ ಕೆಲಸ ಮಾಡಿ ಪಕ್ಷದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಓದುವ ಮಕ್ಕಳ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಮದ್ಯವನ್ನು ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಂದೆ ಮಗ ಇಬ್ಬರ ವಿರುದ್ಧವು ಪ್ರತಿಭಟನೆ ಮಾಡುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಿಡಿಕಾರಿದರು.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಹಿರಿಯ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಕಿಶ್ತ್‍ವಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಹಾಗೂ ಸಹೋದರ ಅಜಿತ್ ಉಗ್ರರ ಗುಂಡಿಗೆ ಬಲಿಯಾದ ದುರ್ದೈವಿಗಳು. ಇಬ್ಬರು ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದರು. ರಾತ್ರಿಯಾಗಿದ್ದರಿಂದ ತಿರುವಿನಲ್ಲಿ ರಸ್ತೆ ವಾಹನ ತಡೆದ ಉಗ್ರರು, ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಉಗ್ರರ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಸಮೀಪ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಆಯುಕ್ತ ಸಂಜೀವ್ ವರ್ಮಾ ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆಯಾಗಿ ಕೊಟ್ಟಿದ್ದ ಇಟ್ಟಿಗೆಗಳನ್ನ ಬಿಜೆಪಿ ಮುಖಂಡನೊಬ್ಬ ವಾಪಸ್ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಅರಿಕೆರೆ ಕೃಷ್ಣಾರೆಡ್ಡಿ ಇಟ್ಟಿಗೆಗಳನ್ನು ವಾಪಸ್ ತೆಗೆದುಕೊಂಡು ಹೋಗಿರುವ ಬಿಜೆಪಿ ಮುಖಂಡ. ಕೃಷ್ಣಾರೆಡ್ಡಿ ಎಂಬವರು ಸಮಾಜಸೇವೆ ಹೆಸರಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಕೊಡುಗೆ-ಕಾಣಿಕೆಗಳನ್ನ ನೀಡಿದ್ದರು. ಅಂತೆಯೇ ಪರಗೋಡು ಗ್ರಾಮದ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಂತ 10,000 ಮಣ್ಣಿನ ಇಟ್ಟಿಗೆಯನ್ನ ಕಾಣಿಕೆ ನೀಡಿದ್ದರು.
ಇವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅರಿಕರೆ ಕೃಷ್ಣಾರೆಡ್ಡಿಗೆ ಬಿಜೆಪಿ ಪಕ್ಷ ಮಣೆ ಹಾಕದೆ ಕೊನೆ ಕ್ಷಣದಲ್ಲಿ ನಟ ಸಾಯಿಕುಮಾರ್ ಗೆ ಟಕೆಟ್ ಘೋಷಣೆ ಮಾಡಿತ್ತು. ಹೀಗಾಗಿ ಅಂದು ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಅಂತ ಕೊಟ್ಟಿದ್ದ ಇಟ್ಟಿಗೆಯನ್ನ ವಾಪಸ್ ತೆಗೆದುಕೊಂಡು ಹೋಗಲು ಅರಿಕೆರೆ ಕೃಷ್ಣಾರೆಡ್ಡಿ ಮುಂದಾಗಿದ್ದಾರೆ.
ಗ್ರಾಮಕ್ಕೆ ಟ್ರ್ಯಾಕ್ಟರ್ ಸಮೇತ ಬಂದು 5,000 ದಷ್ಟು ಇಟ್ಟಿಗೆ ಸಹ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇಟ್ಟಿಗೆ ಅವಶ್ಯಕತೆಯಿದ್ದು, ಎಲ್ಲೂ ಇಟ್ಟಿಗೆ ಸಿಗದ ಕಾರಣ ಈ ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಪುನಃ ಕೊಡಿಸುತ್ತೀನಿ ಅಂತ ಗ್ರಾಮಸ್ಥರ ಬಳಿ ಸಮಜಾಯಿಷಿ ನೀಡಿದ್ದಾರೆ.
ಅರಿಕೆರೆ ಕೃಷ್ಣಾರೆಡ್ಡಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಅವರ ವಿರುದ್ಧ ಹರಿಹಾಯ್ದಿದ್ದಾರೆ. ಅರಿಕೆರೆ ಕೃಷ್ಣಾರೆಡ್ಡಿಗೆ ಮನಸ್ಸೋ ಇಚ್ಛೆ ಬೈದು ಗ್ರಾಮದಿಂದ ಹೊರಕಳುಹಿಸಿದ್ದಾರೆ. ಜೊತೆಗೆ ಇನ್ನೂ ಅಳಿದುಳಿದ ಇಟ್ಟಿಗೆಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶವನ್ನ ಗ್ರಾಮಸ್ಥರು ಹೊರಹಾಕಿದ್ದಾರೆ.
ನವದೆಹಲಿ: ಆಯೋಧ್ಯೆ ರಾಮ ಮಂದಿರ ನಿರ್ಮಾಣದ ದಾರಿ ಸುಗಮವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ 1994ರ ಫಾರೂಖಿ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಆದೇಶವನ್ನು ಸ್ವಾಗತಿಸಿದರು.
ಈ ತೀರ್ಪಿನಿಂದ ನಮಗೆ ಜಯ ಸಿಕ್ಕಿಲ್ಲ. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನನ್ನ ಹೋರಾಟಕ್ಕೆ ಶಕ್ತಿ ಬಂದಿದೆ. ಆಸ್ತಿಯ ಹಕ್ಕಿಗಿಂತಲೂ ಪ್ರಾರ್ಥನೆ ಮಾಡುವ ಹಕ್ಕು ದೊಡ್ಡದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎಂದರು.
ಸುನ್ನಿ ವಕ್ಫ್ ಬೋರ್ಡ್ ನವರ ಆಸ್ತಿ ಹಕ್ಕಿನ ವಾದಕ್ಕಿಂತಲೂ ರಾಮ ಹುಟ್ಟಿದ್ದ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ವಾದವೇ ಮೇಲ್ಮಟ್ಟದ್ದು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಹೀಗಾಗಿ ಶುಕ್ರವಾರವೇ(ನಾಳೆ) ರಾಮ ಜನ್ಮಭೂಮಿಯಾದ ಆಯೋಧ್ಯೆಯಲ್ಲಿ ಪೂಜೆ ಮಾಡುವ ಹಕ್ಕಿನ ಸಂಬಂಧ ನಾನು ಸಲ್ಲಿಸಿದ್ದ ಅರ್ಜಿಯನ್ನು ಆರಂಭದಲ್ಲೇ ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸುಬ್ರಮಣಿಯನ್ ಸ್ವಾಮಿ ಈ ಹಿಂದೆಯೇ ರಾಮಜನ್ಮಭೂಮಿಯಲ್ಲಿ ಪೂಜೆ ಹಕ್ಕಿನ ಸಂಬಂಧ ಅರ್ಜಿ ಸಲ್ಲಿಸಿದ್ದರು. ಆದರೆ 1994ರ ಫಾರೂಖಿ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡ ಬಳಿಕ ನಿಮ್ಮ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸುಬ್ರಮಣಿಯನ್ ಸ್ವಾಮಿಗೆ ತಿಳಿಸಿತ್ತು.
ಮುಸ್ಲಿಂ ರಾಷ್ಟ್ರಗಳಲ್ಲಿ ಮಸೀದಿಯನ್ನು ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದು. ಉದಾಹರಣೆಗೆ ರಸ್ತೆ ನಿರ್ಮಾಣ ಸೇರಿದಂತೆ ಸಾರ್ಜಜನಿಕ ಅನೂಕೂಲಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಆದರೆ, ದೇವಸ್ಥಾನಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಆಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಬೇಕೆಂಬುದನ್ನು ಬಿಟ್ಟು, ಅಯೋಧ್ಯೆಯ ಸರಯೂ ನದಿ ದಡದಲ್ಲಿ ಮುಸ್ಲಿಮರು ಬಾಬ್ರಿ ಮಸೀದಿ ನಿರ್ಮಿಸಿಕೊಳ್ಳಬಹುದು. ಆದರೆ, ಪ್ರಸ್ತುತ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಯಾಕೆಂದರೆ ಅದು ರಾಮನ ಜನ್ಮ ಭೂಮಿ ಎಂದು ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಪ್ರತಿಕ್ರಿಯಿಸಿದ್ದರು.
ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.
ಸುಪ್ರೀಂ ಹೇಳಿದ್ದು ಏನು?
ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.
ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
* ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
* ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
* ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
* ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
* ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
* ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
* 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ
ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
* ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
* ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು
ಏನಿದು ಪ್ರಕರಣ?
ಇಸ್ಮಾಯಿಲ್ ಫಾರೂಖಿ ವರ್ಸಸ್ ಭಾರತ ಸರ್ಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಖಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.
ಮಡಿಕೇರಿ: ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ಬಂದಿದ್ದ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುರುವಾರ ಕೇಂದ್ರದ ಪರಿಶೀಲನೆ ತಂಡದೊಂದಿಗೆ ಸಂಸದ ಪ್ರತಾಪ್ ಸಿಂಹರವರು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. `ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ತೀವ್ರವಾಗಿ ಹರಿಹಾಯ್ದರು.
ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದ್ರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಉಪಸ್ಥಿತರಿದ್ದರು. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಯಿಂದ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದರು ಎನ್ನಲಾಗಿದೆ.