Tag: bjp karnataka

  • ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    – ಕರ್ನಾಟಕ ʻಅಪರಾಧಗಳ ರಾಜ್ಯʼ ಎನ್ನುವಂತಾಗಿದೆ
    – ರಾಜ್ಯ ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೆಲಸ – ಡಿ.ವಿ ಸದಾನಂದಗೌಡ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಫರಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಬಿಜೆಪಿ (BJP Karnataka) ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ (Alok Mohan) ಅವರಿಗೆ ಮನವಿ ಸಲ್ಲಿಸಿದೆ.

    ಮಾಜಿ ಸಿಎಂ ಡಿ.ವಿ ಸದಾನಂದಗೌಡ (Sadananda Gowda) ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಳವಿಕ ಅವಿನಾಶ್, ರಾಜ್ಯ ಮುಖ್ಯವಕ್ತಾರ ಅಶ್ವಥ್‌ ನಾರಾಯಣ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ ರಾಮಮೂರ್ತಿ, ಬೆಂಗಳೂರು ಉತ್ತರ ಕ್ಷೇತ್ರದ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದಗೌಡರು, ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನಿರ್ದೇಶನದಡಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಬಂದಿದೆ. ಮಹಿಳೆಯರು ವಾಕಿಂಗ್ ಹೋಗಲೂ ಭಯಪಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕ್ರಿಮಿನಲ್‌ಗಳು ಹತ್ಯೆ ಮಾಡಿ ಓಡಿ ಹೋಗ್ತಾರೆ, ಮತ್ತೊಬ್ಬರ ಮೇಲೂ ಹಲ್ಲೆ ನಡೆಸುತ್ತಿದ್ದಾರೆ. ಇಂಥವರನ್ನ ಸಾರ್ವಜನಿಕರು ಹಿಡಿದು ಕೊಡುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಭಯಾನಕ ಕೃತ್ಯಗಳ ಬಗ್ಗೆ ಗಮನ ಸೆಳೆದಿದ್ದೇವೆ. ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವ ಆರೋಪಗಳಿದ್ದು, ಇದನ್ನು ತಪ್ಪಿಸಿ ಸ್ವತಂತ್ರವಾಗಿ ಕೆಲಸ ಮಾಡುವಂತೆ ಹಾಗೂ ಅಪರಾಧ ಕೃತ್ಯಗಳ ಕಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಬಿಜೆಪಿ ನಿಯೋಗ ಸಲ್ಲಿಸಿದ ಮನವಿ ಪತ್ರದಲ್ಲಿ ಏನಿದೆ?
    ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವುದು ತಮಗೂ ತಿಳಿದಿದೆ. ಹಿಂದೆ ರಾಜ್ಯವು ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಉತ್ತಮ ಹೆಸರು ಪಡೆದಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೀಗ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಈ ಮೂಲಕ ಕರ್ನಾಟಕ ʻಅಪರಾಧಗಳ ರಾಜ್ಯʼಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ. ಇದನ್ನೂ ಓದಿ: ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್‌ ಮಾಡ್ಕೊತ್ತಾರೆ: ಡಿಕೆಶಿ

    ಮಹಿಳೆಯರು, ಮಕ್ಕಳ ಮೇಲಿನ ಅಪರಾಧ ಹೆಚ್ಚಾಗಿದೆ:
    ಆರ್ಥಿಕ ಅಪರಾಧಗಳಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಬಂದಿದೆ. ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಶೇ.46 ರಷ್ಟು ಹೆಚ್ಚಳವಾಗಿದೆ. ಹಿರಿಯ ನಾಗರೀಕರ ಮೇಲಿನ ಅಪರಾಧದಲ್ಲಿ ಶೇ.86ರಷ್ಟು ಹೆಚ್ಚಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಬಂದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಕಾನೂನು-ಸುವ್ಯವಸ್ಥೆ ಕಡೆ ಗಮನ ಕೊಡುತ್ತಿಲ್ಲ. ಅಪರಾಧ ಪ್ರಮಾಣ ಹೆಚ್ಚಳದ ವಿಚಾರದಲ್ಲೂ ಅದು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೋಲಿನ ಭೀತಿಯಿಂದ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿತ್ತು. ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಕರಣ ದಾಖಲಿಸದೇ ಇರುವುದು, ಜೀವ ಬೆದರಿಕೆ ಹಾಕಿದರೂ ಕ್ರಮ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ, ಕುಸಿದು ಅರಾಜಕತೆ ಸೃಷ್ಟಿಯಾಗಿದೆ. ಇದರಿಂದ ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎಂಬ ಸಂದೇಹ ಬರುತ್ತಿದೆ. ಜನಸಾಮಾನ್ಯರೂ ಇದೇ ಪ್ರಶ್ನೆ ಮುಂದಿಡುತ್ತಿದ್ದಾರೆ. ಗನ್ ಹಿಡಿದು ಓಡಾಡುವ ವ್ಯಕ್ತಿ, ಮುಖ್ಯಮಂತ್ರಿಗಳಿಗೆ ಹೂವಿನ ಹಾರ ಹಾಕುವ ದುಸ್ಥಿತಿ ರಾಜ್ಯಕ್ಕೆ ಬಂದಿದೆ. ಜನರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಒಂದು ವರ್ಗಕ್ಕೆ ಬೆಣ್ಣೆ ಇನ್ನೊಂದು ವರ್ಗಕ್ಕೆ ಜೈಲುವಾಸ, ಲಾಠಿ ಏಟು ಎಂಬ ದುಸ್ಥಿತಿ ರಾಜ್ಯದ್ದಾಗಿದೆ. ಕೋಮುದ್ವೇಷ, ಹಿಂಸಾಚಾರದ ಘಟನೆಗಳು, ರಾಜಕೀಯ ಪ್ರೇರಿತ ದ್ವೇಷಭಾಷಣಗಳಿಂದ ನಾಗರೀಕರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದೇ ಒದ್ದಾಡುತ್ತಿದ್ದಾರೆ. ಹಿಂದೂ-ಬಿಜೆಪಿ ಕಾರ್ಯಕರ್ತರ ಮೇಲೆ ಹಗೆತನ ಸಾಧಿಸುವುದು ಕಾಂಗ್ರೆಸ್‌ಗೆ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

    ಹಿಂದೂಗಳು 2ನೇ ದರ್ಜೆಯ ನಾಗರಿಕರಾಗಿದ್ದಾರೆ:
    ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಪದೇ-ಪದೇ ಸಾಬೀತಾಗಿದೆ. ಬೆಳಗಾವಿಯಲ್ಲಿ ನಡೆದ ಘಟನೆಯಂತೂ ಅತ್ಯಂತ ಅಮಾನವೀಯ. ಸಿದ್ದರಾಮಯ್ಯನವರು ಸೇರಿದಂತೆ ಸಂಪೂರ್ಣ ಆಡಳಿತ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತಿದ್ದಾಗ 42 ವರ್ಷದ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಹಲ್ಲೆ ನಡೆಸಿದ್ದರು. ಪೊಲೀಸ್ ಇಲಾಖೆ ಇಂತಹ ದುರ್ಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದರೂ ತಪ್ಪಾಗಲಾರದು. ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ಅಪರಾಧಿಗಳು ಭಾಗಿಯಾದ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತದೆ. ಮುಸ್ಲಿಂ ವ್ಯಕ್ತಿಗಳ ಗುಂಪಿನಿಂದ ದಂಪತಿಗಳಿಬ್ಬರು ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿ, ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದರು. ಆರಂಭದಲ್ಲಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಚ್ಚಿಹಾಕಲು ಈ ಸರ್ಕಾರ ಮುಂದಾಗಿತ್ತು. ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸ ಜೋರಾಗಿ ಹಾಕಿದ್ದಾಗಿ ಆಕ್ಷೇಪಿಸಿ ಹಿಂದೂ ಅಂಗಡಿಯವರೊಬ್ಬನ ಮೇಲೆ ಮುಸ್ಲಿಂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದನ್ನು ಸಮರ್ಥನೆ ಮಾಡಿಕೊಳ್ಳೋದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು 2ನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ ಎಂಬುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

    ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣ, ಅಂಬಿಕಾ ಎಂಬ ಯುವತಿಯ ಹತ್ಯೆ ಸೇರಿದಂತೆ ಅನೇಕ ಮಹಿಳೆಯರ ಹತ್ಯೆ ನಡೆದಿದೆ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ ಎಂಬುದು ಸಹ ಜನಾಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಮಾಣ, ಕಾನೂನು- ಸುವ್ಯವಸ್ಥೆ ಕುಸಿತವನ್ನು ತಾವು ಗಮನಿಸಿ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.

  • ಆರ್‌ಸಿಬಿ ಮಹಿಳಾ ತಂಡಕ್ಕೆ ಸಿದ್ದರಾಮಯ್ಯ, ಡಿಕೆ ಸುರೇಶ್‌, ಬಿಜೆಪಿಯಿಂದ ಪ್ರಸಂಶೆಗಳ ಮಹಾಪೂರ

    ಆರ್‌ಸಿಬಿ ಮಹಿಳಾ ತಂಡಕ್ಕೆ ಸಿದ್ದರಾಮಯ್ಯ, ಡಿಕೆ ಸುರೇಶ್‌, ಬಿಜೆಪಿಯಿಂದ ಪ್ರಸಂಶೆಗಳ ಮಹಾಪೂರ

    – ನಮ್ಮ ಬೆಂಗಳೂರಿಗೆ ಮರಳುತ್ತಿದೆ ಆರ್‌ಸಿಬಿ ಸೈನ್ಯ

    ಬೆಂಗಳೂರು: ಪ್ರತಿ ಬಾರಿಯೂ ʻಈ ಸಲ ಕಪ್‌ ನಮ್ದೆʼ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಕನಸು 16 ವರ್ಷಗಳ ಬಳಿಕ ನನಸಾಗಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ (WPL 2024) ಮೊದಲ ಆವೃತ್ತಿಯಲ್ಲಿ ಹೀನಾಯ ಸೋಲನುಭವಿಸಿದ್ದ ಆರ್‌ಸಿಬಿ ಮಹಿಳಾ (RCB Womens) ತಂಡ ತನ್ನ 2ನೇ ಆವೃತ್ತಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 16 ವರ್ಷಗಳ ಬಳಿಕ ಟ್ರೋಫಿ ಗೆದ್ದು ಪ್ರಶಸ್ತಿಯ ಬರ ನೀಗಿಸಿದ ತಂಡಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ರಾಜ್ಯದ ಅನೇಕ ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

    ಟಾಟಾ ಮಹಿಳಾ ಪ್ರೀಮಿಯರ್‌ ಲೀಗ್‌ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿಸುವ ಜೊತೆಗೆ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಇದು ವಿಶ್ವದಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಎಲ್ಲಿಲ್ಲದ ಸಂತಸ ತಂದಿದೆ. ಕಪ್‌ ಗೆದ್ದಿರುವ ಆರ್‌ಸಿಬಿ ಮಹಿಳಾ ತಂಡ ತನ್ನ ಪ್ರಾಮಾಣಿಕ ಅಭಿಮಾನಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಳ್ಳಲು ತವರಿಗೆ ಆಗಮಿಸುತ್ತಿದೆ. ʻನಾವು ತವರಿಗೆ ಬರುತ್ತಿದ್ದೇವೆ ಎಂದು ಜಗತ್ತಿಗೆ ಸಾರಿ ಹೇಳಿʼ ಎಂದು ಎಕ್ಸ್‌ನಲ್ಲೂ ಬರೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಎಕ್ಸ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

    ಯಾರು ಏನ್‌ ಹೇಳ್ತಾರೆ?
    ಸಿದ್ದರಾಮಯ್ಯ: ಟಾಟಾ ಡಬ್ಲ್ಯೂಪಿಎಲ್‌ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್‌ಸಿಬಿ ತಂಡ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ.

    ಬಿಜೆಪಿ ಕರ್ನಾಟಕ: ಅಂತೂ ಇಂತೂ ಈ ಸಲ ಕಪ್ ನಮ್ದೇ!! ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.

    ಡಿಕೆ ಸುರೇಶ್‌: ನಮ್ಮ ಹುಡುಗಿಯರು ಇತಿಹಾಸ ನಿರ್ಮಿಸಿದ್ದಾರೆ. ಅಭಿನಂದನೆಗಳು ಆರ್‌ಸಿಬಿ, ಕೊನೆಗೂ ಈ ಸಲ ಕಪ್‌ ನಮ್ದು!. ಅಲ್ಲದೇ ಡಬ್ಲ್ಯೂಪಿಎಲ್‌ ಫೈನಲ್‌ನಲ್ಲಿ ಎದುರಾಳಿ ತಂಡದ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ ಹೆಮ್ಮೆಯ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಅವರಿಗೆ ಅಭಿನಂದನೆಗಳು. ಇಂದು ನೀವು ಕನ್ನಡಿಗರ ಹೃದಯವನ್ನು ಗೆದ್ದಿದ್ದೀರಿ!

    ಅಭಿಮಾನಿಗಳಿಗೆ ಹಬ್ಬ: ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ ಹಲವೆಡೆ ಅಭಿಮಾನಿಗಳು ಊರ ಜಾತ್ರೆಯಂತೆ ಪಟಾಕಿ ಸಿಡಿಸಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳು ʻಆರ್‌ಸಿಬಿ ಆರ್‌ಸಿಬಿʼ ಘೋಷಣೆ ಮೊಳಗಿಸುತ್ತಿದ್ದರು.

  • ಹಿಜಬ್‌ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್‌ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆ

    ಹಿಜಬ್‌ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್‌ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆ

    ನವದೆಹಲಿ: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಬಿಜೆಪಿ ಟ್ವೀಟ್‌ ಮೂಲಕ ಬಹಿರಂಗಪಡಿಸುತ್ತಿದೆ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾಚಿಕೆಯಿಲ್ಲದ ಕರ್ನಾಟಕ ಬಿಜೆಪಿ ಘಟಕವು ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದಕ್ಕಾಗಿ ಅಪ್ರಾಪ್ತ ಬಾಲಕಿಯರ ವಿಳಾಸಗಳನ್ನು ಟ್ವೀಟ್‌ ಮಾಡುತ್ತಿದೆ. ಇದು ಎಷ್ಟು ಸಂವೇದನಾಹೀನ ನಡೆ ಎಂಬುದು ನಿಮಗೆ ತಿಳಿದಿದೆಯೇ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ಹೈಡ್ರಾಮಾ ನೋಡಿ ಕೇಸರಿ ಶಾಲು ತೆಗೆದ ವಿದ್ಯಾರ್ಥಿ

    ಕರ್ನಾಟಕದ ಡಿಜಿಪಿ ಮತ್ತು ಭಾರತದ ಟ್ವಿಟ್ಟರ್‌ ಶಾಖೆ, ಬಿಜೆಪಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಕರ್ನಾಟಕ ಬಿಜೆಪಿ ಘಟಕವು ಹಿಜಬ್‌ ವಿಚಾರವಾಗಿ ಹೈಕೋರ್ಟ್‌ ಮೆಟ್ಟಿಲೇರಿರುವ ಅರ್ಜಿದಾರರ ಹೆಸರು ಮತ್ತು ಅವರ ವೈಯಕ್ತಿಕ ವಿವರಗಳನ್ನು ಟ್ವೀಟ್‌ ಮಾಡಿತ್ತು. ರಾಜಕೀಯದಲ್ಲಿ ಪ್ರಸ್ತುತವಾಗಿರಲು ಕಾಂಗ್ರೆಸ್‌ ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನೂ ಓದಿ: ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ