Tag: BJP government

  • ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಕ್ಕರೆ ಕಾರ್ಖಾನೆ ಕೈಬಿಟ್ಟ ಬಿಜೆಪಿ ಸರ್ಕಾರ

    ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಕ್ಕರೆ ಕಾರ್ಖಾನೆ ಕೈಬಿಟ್ಟ ಬಿಜೆಪಿ ಸರ್ಕಾರ

    ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈ ಬಿಡುತ್ತಿದೆ ಎಂದು ದಳಪತಿಗಳು ಮಾಡುತ್ತಿದ್ದ ಆರೋಪಗಳು ಸತ್ಯವಾಗುತ್ತಿದ್ಯಾ ಎಂಬ ಪ್ರಶ್ನೆಗಳು ಈಗ ಮಂಡ್ಯ ಜಿಲ್ಲೆಯಲ್ಲಿ ಎದ್ದಿದೆ.

    ಮಂಡ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ಮೈಶುಗರ್ ಮತ್ತು ಪಾಂಡಪುರ ಸಕ್ಕರೆ ಕಾರ್ಖಾನೆಗಳು ಮುಚ್ಚಿರುವ ಹಿನ್ನೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಮೈಶುಗರ್ ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡುವುದಾಗಿ ಬಜೆಟ್‍ನಲ್ಲಿ ಹಣವನ್ನು ಸಹ ಘೋಷಣೆ ಮಾಡಿತ್ತು. ಆದರೆ ಈಗ ಸಚಿವ ಆರ್.ಅಶೋಕ್ ನನ್ನ ಮುಂದೆ ಹೊಸ ಕಾರ್ಖಾನೆ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ ಯೋಜನೆಗೆ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ.

    ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಸಚಿವ ಆರ್.ಅಶೋಕ್, ನನ್ನ ಮುಂದೆ ಇರೋದು ಪಿಎಸ್‍ಎಸ್‍ಕೆ ಕಾರ್ಖಾನೆ ಹಾಗೂ ಮೈಶುಗರ್ ಕಾರ್ಖಾನೆಗಳನ್ನು ಲೀಸ್‍ಗೆ ಕೊಡುವ ಪ್ರಸ್ತಾವನೆ. ಅದರಂತೆ ನಾವು ಈ ಎರಡು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಲೀಸ್‍ಗೆ ಕೊಡಲು ಮುಂದಾಗಿದ್ದೇವೆ. ಟೆಂಡರ್ ಕರೆದು ರೈತರು ಬೆಳೆದ ಕಬ್ಬಿಗೆ ಯಾರು ಸರಿಯಾದ ಬೆಲೆ ನೀಡುತ್ತಾರೋ ಅವರಿಗೆ ಮಾತ್ರ ಲೀಸ್‍ಗೆ ಕೊಡುತ್ತೇನೆ. ಮುಂದಿನ ಕಟಾವಿನ ಒಳಗೆ ಈ ಕೆಲಸ ಪ್ರಗತಿಯ ಹಂತಕ್ಕೆ ಬರುತ್ತದೆ. ಆದರೆ ಹೊಸ ಕಾರ್ಖಾನೆ ಕಟ್ಟುವ ಗಮನ ನನಗೆ ಇಲ್ಲ ಎಂದಿದ್ದಾರೆ.

    ಈ ಎರಡು ಕಾರ್ಖಾನೆಗಳು ಸದ್ಯ ಕಬ್ಬನ್ನು ಅರೆಯದೆ ಪಾಳು ಬಿದ್ದಿವೆ. ಇಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕರುಗಳ ಅಭಿಪ್ರಾಯವನ್ನು ಸಂಗ್ರಹ ಮಾಡಿಕೊಂಡಿದ್ದೇವೆ. ಲೀಸ್‍ಗೆ ಕೊಡಲು ಎಲ್ಲರೂ ಒಪ್ಪಿದ್ದಾರೆ. ಹೀಗಾಗಿ ಎರಡು ಕಾರ್ಖಾನೆಗಳನ್ನು ಲೀಸ್‍ಗೆ ಕೊಡುತ್ತೇವೆ. ಕೇವಲ ಕಾರ್ಖಾನೆಯನ್ನು ಮಾತ್ರ ಖಾಸಗಿ ಅವರಿಗೆ ನೀಡುತ್ತೇವೆ. ಕಾರ್ಖಾನೆಯ ಆಸ್ತಿಯನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಹಾಗೂ ಸಿ.ಟಿ.ರವಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಕಾರ್ಖಾನೆಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.

  • ಅನುದಾನಕ್ಕಾಗಿ ಕಣ್ಣೀರು ಹಾಕಿ ಸಚಿವರನ್ನು ಬೇಡಿಕೊಂಡ ಶಾಸಕ

    ಅನುದಾನಕ್ಕಾಗಿ ಕಣ್ಣೀರು ಹಾಕಿ ಸಚಿವರನ್ನು ಬೇಡಿಕೊಂಡ ಶಾಸಕ

    ತುಮಕೂರು: ಡಿಕೆ ಸಹೋದರರ ಸಂಬಂಧಿ, ಕುಣಿಗಲ್ ಶಾಸಕ ಡಾ.ರಂಗನಾಥ್ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗದ್ಗದಿತರಾಗಿ ಕೈ ಮುಗಿದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಮಾಧುಸ್ವಾಮಿ ಬಳಿ ಬೇಡಿಕೊಂಡ ಘಟನೆ ಇಂದು ಕೆಡಿಪಿ ಸಭೆಯಲ್ಲಿ ನಡೆದಿದೆ.

    ಕುಣಿಗಲ್ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 14 ಕೋಟಿ ರೂ ಸರ್ಕಾರದಿಂದ ತಡೆಹಿಡಿಯಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು ನನಗೆ ತುಂಬಾ ನೋವಾಗಿದೆ ಎಂದು ಶಾಸಕರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಇದ್ದಂತಹ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಕೆಲ ಕ್ಷೇತ್ರಗಳ ಅನುದಾನಗಳನ್ನು ತಡೆಹಿಡಿಯಲಾಗಿದೆ. ಮುಂದಿನ ಕೆಲ ದಿನದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಡಾ.ರಂಗನಾಥ್‍ಗೆ ಭರವಸೆ ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಇಂದು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿ ಅಲ್ಲಿನ ಕುಂದು ಕೊರತೆಯನ್ನು ಪರಿಶೀಲಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭರಚುಕ್ಕಿ ಜಲಪಾತೋತ್ಸವ ನಡೆಸುವ ಬಗ್ಗೆ ಚಿಂತಿಸಿದ್ದಾರೆ.

    ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಭರಚುಕ್ಕಿ ಉತ್ಸವ ನಡೆಸಲು ಪ್ರವಾಸಿಗರು, ಸ್ಥಳೀಯರು ಆಗ್ರಹಿಸಿದ್ದರು. ಹೀಗಾಗಿ ಜನರ ಆಗ್ರಹದ ಬೆನ್ನಲ್ಲೇ ಸಚಿವರು ಬೆಳ್ಳಂಬೆಳಗ್ಗೆ ಜಲಪಾತ ವೀಕ್ಷಣೆ ಆಗಮಿಸಿದ್ದರು. ಕಳೆದ 3 ತಿಂಗಳಿಂದ ದುಮ್ಮಿಕ್ಕಿ ಹರಿಯುತ್ತಿರೋ ಭರಚುಕ್ಕಿ ಜಲಪಾತದ ನೀರಿನ ಪ್ರಮಾಣವನ್ನು ಸಚಿವರು ವೀಕ್ಷಿಸಿದರು. ಹಾಗೆಯೇ ಅಲ್ಲಿನ ಕುಂದು ಕೊರತೆ ಬಗ್ಗೆ ಪರಿಶಿಲನೆ ನಡೆಸಿ, ಮಾಹಿತಿ ಪಡೆದರು.

    ಜೊತೆಗೆ ಭರಚುಕ್ಕಿ ಜಲಪಾತೋತ್ಸವ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಜಲಪಾತೋತ್ಸವ ನಡೆಸುವಂತೆ ಸಚಿವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಸರ್ಕಾರಕ್ಕೆ ನೂರು ದಿನ, ಆದರೆ ಸಾಧನೆ ಶೂನ್ಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಕೇವಲ ಸಿಟ್ಟು, ಸೇಡು, ಕಹಿ ಭಾವನೆಗಳೇ ತುಂಬಿರುವವರಿಂದ ನೈಜ ಮೌಲ್ಯ ಮಾಪನ ಅಸಾಧ್ಯ ಎಂದು ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದರು.

    100 ದಿನಗಳ ಆಡಳಿತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ವಿಶೇಷವಾಗಿ ನೆರೆ ಮತ್ತು ಮಳೆ ನಮಗೆ ದೊಡ್ಡ ಸವಾಲಾಗಿತ್ತು. ನೆರೆಸಂತ್ರಸ್ತರಿಗೆ ನೆರವಾಗಲು ಸಾಕಷ್ಟು ಶ್ರಮಿಸಿದ್ದೇವೆ. ನಮಗೆ ಕೊಟ್ಟಿರುವ ಖಾತೆಗಳಲ್ಲಿ ಸಾಕಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ. ನಾವು ಏನೋ ಒಂದು ಸಾಧಿಸಿದ್ದೇವೆ ಎನ್ನುವುದಕ್ಕಿಂತ ಮುಂದಿನ ದಿನಗಳ ಸಾಧನೆಗೆ ಇದು ಸ್ಪೂರ್ತಿ ಕೊಟ್ಟಿರುವ ಅವಧಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಶ್ರೀರಾಮುಲು

    ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಶ್ರೀರಾಮುಲು

    ಗದಗ: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿ ಇನ್ನು ಕೇವಲ ಮೂರು ತಿಂಗಳು ಮಾತ್ರನಾ ಅನ್ನೋ ಪ್ರಶ್ನೆ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ.

    ಯಾಕಂದರೆ ಗದಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ನಾಳೆ ಏನಾದರು ಆದ್ರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ, 3 ತಿಂಗಳಲ್ಲಿ ಸರ್ಕಾರದ ಅನುದಾನ ಎಷ್ಟಿದೆಯೋ ಅಷ್ಟನ್ನೂ ಬಳಸಿ ಅಂತಾ ಅಧಿಕಾರಿಗಳಿಗೆ ಆದೇಶ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನನ್ನ ರಾಜಕೀಯದಲ್ಲೂ ಕೂಡ ಸುಧಾರಣೆ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಸ್ವತಃ ರಾಮುಲು ಅವರೇ 3 ತಿಂಗಳ ಬಳಿಕ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರಾ ಅನ್ನೋ ಪ್ರಶ್ನೆ ಎಲ್ಲರ ತಲೆಕೆಡಿಸಿದೆ. ಈ ಹೇಳಿಕೆ ರಾಜಕೀಯ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

    ನಾವು ಯಾವುದೇ ಕೆಲಸ ಮಾಡಲಿ ಭಗವಂತ ನೋಡುವ ಕೆಲಸ ಮಾಡಬೇಕು. ಮನುಷ್ಯರು ನೋಡೋದು ಬೇಕಾಗಿಲ್ಲ. ಇಲ್ಲಿ ಯಾರೂ ಶಾಶ್ವತ ಅಲ್ಲ. ರಾಜ್ಯದಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು ಹಾಗೂ ವೈದ್ಯರ ಕೊರತೆಯಿದೆ. ಆ ಕೊರತೆಯನ್ನು ನೀಗಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳ ಅನುದಾನದಲ್ಲಿ 20 ಕೋಟಿ ರೂ. ಉಳಿದಿದೆ. ಇದನ್ನು ಮೂರು ತಿಂಗಳೊಳಗೆ ಖರ್ಚು ಮಾಡಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2 ಸಾವಿರ ಕೋಟಿ ಅನುದಾನವನ್ನು ಕೊಡುತ್ತಾರೆ ಎಂದಾದರೆ ಅಧಿಕಾರಿಗಳು ಅದನ್ನು ಎನ್‌ಆರ್‌ಎಚ್‌ಎಂನಲ್ಲಿ ಖರ್ಚು ಮಾಡಿದರೆ ಮಾತ್ರ ಪೂರ್ಣ ಅನುದಾನವನ್ನು ಕೇಳಲು ಸಾಧ್ಯವಾಗುತ್ತೆ ಎಂದು ಶ್ರೀರಾಮುಲು ತಿಳಿಸಿದರು.

    ಹಾಗೆಯೇ ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಹಾಗೆಯೇ ಉಳಿದಿದೆ ಎಂದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಳಿದಿರಬಹುದು? ಮೂರು ತಿಂಗಳೊಳಗೆ ಈ ಹಣವನ್ನು ಖರ್ಚು ಮಾಡಿ. ಆಸ್ಪತ್ರೆಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ತೆಗೆದುಕೊಂಡು ಬನ್ನಿ, ಅಭಿವೃದ್ಧಿ ಮಾಡಿ ನಾವೇನು ಬೇಡ ಅನ್ನೋದಿಲ್ಲ. ನಿಮಗೆ ಪೂರ್ಣ ಸ್ವತಂತ್ರ್ಯ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಎಲ್ಲರೂ ಎಲ್ಲಾ ರೀತಿಯಲ್ಲೂ ಸುಧಾರಣೆ ಆಗಬೇಕು. ನಾನೂ ಕೂಡ ಸುಧಾರಣೆ ಆಗಬೇಕು, ಆದರೆ ರಾಜಕೀಯ ಒತ್ತಡ ಇರುವುದರಿಂದ ನಾನು ಸುಧಾರಣೆ ಆಗಲು ಆಗುತ್ತಿಲ್ಲ. ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅದನ್ನು ಸರಿಪಡಿಸಬೇಕಾದರೆ, ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    – ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ ಟೀಕೆ

    ಬೆಳಗಾವಿ: ಕುಂದಾನಗರಿಯಲ್ಲಿ ಒಂದೆಡೆ ಮಧ್ಯರಾತ್ರಿಯೇ ಕನ್ನಡಿಗರು, ಕನ್ನಡ ಅಭಿಮಾನಿಗಳು 64ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಆದರೆ ಇನ್ನೊಂದೆಡೆ ರಾಜ್ಯೋತ್ಸವವನ್ನು ವಿರೋಧಿಸಿ, ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಗಳನ್ನ ಕೊಟ್ಟು ಎಂಇಎಸ್(ಮಹಾರಾಷ್ಟ್ರ ಏಕಿಕರಣ ಸಮಿತಿ) ಪುಂಡಾಟ ಮೆರೆದಿದೆ.

    ರಾಜ್ಯೋತ್ಸವ ವಿರುದ್ಧ ಎಂಇಎಸ್ ಇಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಮಾಡುತ್ತಿದೆ. ನಗರದ ಸಂಭಾಜಿ ವೃತ್ತದಿಂದ ಬಸವೇಶ್ವರ ಸರ್ಕಲ್‍ವರೆಗೆ ಸೈಕಲ್ ರ‍್ಯಾಲಿಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ್ ದಳವಿ ಹಾಗೂ ಅನೇಕ ಎಂಇಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೆರವಣಿಗೆಯಲ್ಲಿ ಕಿಡಿಕೇಡಿಗಳು ಕರ್ನಾಟಕ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ, ಕೇಂದ್ರ ಸರ್ಕಾವನ್ನು ದೃತರಾಷ್ಟ್ರನಿಗೆ ಹೋಲಿಸಿದ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಅಷ್ಟೇ ಅಲ್ಲದೆ ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದ್ದು ಎಂದು ಪ್ರಶ್ನೆ ಮಾಡಿರುವ ವ್ಯಂಗ್ಯ ಬರಹ ಹಾಗೂ ಚಿತ್ರಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಎಂಇಎಸ್ ನಾಯಕರು ಕರ್ನಾಟವನ್ನು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಕುಂದಾನಗರಿಯಲ್ಲಿ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ

    ಇವೆಲ್ಲರ ನಡುವೆ ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿರುವುದು ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರ ಒಗ್ಗೂಡಿಸುವ ಎಂಇಎಸ್ ಯತ್ನ ವಿಫಲವಾಗಿದ್ದು, ಮಹಾರಾಷ್ಟ್ರದ ನಾಯಕರು ಎಂಇಎಸ್‍ಗೆ ಕೈಕೊಟ್ಟಿದ್ದಾರೆ. ಪ್ರತಿ ಕರಾಳ ದಿನ ಆಚರಣೆಗೆ ಬರುತ್ತಿದ್ದ ಮಹಾರಾಷ್ಟ್ರ ನಾಯಕರು ಈ ವರ್ಷ ಎಂಇಎಸ್ ಮನವಿಗೆ ಸ್ಪಂದಿಸಿಲ್ಲ.

  • ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    – ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
    – ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು

    ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.

    ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ಆರ್ಥಿಕತೆ ಸರಿಪಡಿಸಲು ವಿಪಕ್ಷಗಳನ್ನ ದೂಷಿಸಿದ್ರೆ ಸಾಕಾಗಲ್ಲ: ಸೀತಾರಾಮನ್‍ಗೆ ಸಿಂಗ್ ತಿರುಗೇಟು

    ಆರ್ಥಿಕತೆ ಸರಿಪಡಿಸಲು ವಿಪಕ್ಷಗಳನ್ನ ದೂಷಿಸಿದ್ರೆ ಸಾಕಾಗಲ್ಲ: ಸೀತಾರಾಮನ್‍ಗೆ ಸಿಂಗ್ ತಿರುಗೇಟು

    ಮುಂಬೈ: ಭಾರತದ ಆರ್ಥಿಕತೆಯ ಶೋಚನೀಯ ಸ್ಥಿತಿಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಮನಹೋನ್ ಸಿಂಗ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

    ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನು ನಾನು ನೋಡಿದ್ದೇನೆ. ಆ ವಿಚಾರವಾಗಿ ಟೀಕೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಕೇಂದ್ರ ಸರ್ಕಾರ ಆರ್ಥಿಕ ಕುಸಿತದ ಸಮಸ್ಯೆಗೆ ಪರಿಹಾರ ಹುಡುಕುವುದರ ಬದಲು ವಿಪಕ್ಷಗಳ ವಿರುದ್ಧ ಆರೋಪ ಮಾಡುತ್ತಿವೆ. ಇದರಿಂದ ದೇಶದ ಆರ್ಥಿಕತೆಯ ಸುಧಾರಣೆ ಆಗುವುದಿಲ್ಲ ಎಂದು ಕುಟುಕಿದ್ದಾರೆ.

    ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಹಾಗೂ ಆರ್‌ಬಿಐ ಪಿಎಂಸಿ ಬ್ಯಾಂಕಿನ ಬಿಕ್ಕಟ್ಟಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಈ ಮೂಲಕ ಬ್ಯಾಂಕ್‍ನಲ್ಲಿ ಹೂಡಿಕೆ ಮಾಡಿರುವ 16 ಲಕ್ಷ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕತೆ ಅಸಮರ್ಪಕ ನಿರ್ವಹಣೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಈ ಹಿಂದೆ ಮಹಾರಾಷ್ಟ್ರ ಹೂಡಿಕೆದಾರರನ್ನು ಆಕರ್ಷಿಸುವ ನಂಬರ್ ಒನ್ ರಾಜ್ಯವಾಗಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಇಲ್ಲಿನ ಅತಿದೊಡ್ಡ ಕಾರ್ಖಾನೆ ಮುಚ್ಚಿಹೋಗಿದೆ. ಪರಿಣಾಮ ಹೂಡಿಕೆದಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಜ್ಯವು ಭಾರೀ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.

    ಸೀತಾರಾಮನ್ ಹೇಳಿದ್ದೇನು?:
    ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗ ಭಾರತದ ಆರ್ಥಿಕ ನೀತಿ ವಿಚಾರದ ಬಗ್ಗೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಉಪನ್ಯಾಸ ನೀಡಿದರು. ಈ ವೇಳೆ ಮಾತನಾಡಿ, ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವಧಿಯಲ್ಲಿ ಬ್ಯಾಂಕ್‍ಗಳು ದುಸ್ಥಿತಿಗೆ ತಲುಪಿದ್ದವು. ಈಗ ನಮ್ಮ ಸರ್ಕಾರ ಬ್ಯಾಂಕ್‍ಗಳಿಗೆ ಜೀವ ನೀಡಿ ಹೊಸ ಚೈತನ್ಯ ನೀಡುತ್ತಿದೆ ಎಂದು ತಿಳಿಸಿದ್ದರು.

    ಆರ್ಥಿಕ ತಜ್ಞರಾಗಿರುವ ರಘುರಾಮ್ ರಾಜನ್ ಮೇಲೆ ನನಗೆ ನನಗೆ ಬಹಳ ಗೌರವವಿದೆ. ದೇಶದ ಆರ್ಥಿಕತೆ ಸದೃಢವಾಗಿದ್ದಾಗ ಅವರು ಆರ್‌ಬಿಐ ಗವರ್ನರ್ ಆಗಿದ್ದರು. ರಾಜನ್ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳು ಒಂದು ಫೋನ್ ಕರೆ ಮಾಡಿದರೆ ಸಾಕು ಸಾಲ ಮಂಜೂರಾಗುತಿತ್ತು. ಇದರಿಂದ ಸೃಷ್ಟಿಯಾದ ಸಮಸ್ಯೆಯಿಂದ ಪಾರಾಗಲು ಸಾರ್ವಜನಿಕ ರಂಗದ ಬ್ಯಾಂಕುಗಳು ಸರ್ಕಾರದ ಷೇರುಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾಹಿತಿ ನೀಡಿದ್ದರು.

    ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಈ ವಿಚಾರ ಹೇಳುತ್ತಿಲ್ಲ. ಮನಮೋಹನ್ ಸಿಂಗ್ ಮತ್ತು ರಾಜನ್ ಅವರಿದ್ದ ಸಮಯದಲ್ಲಿ ಬ್ಯಾಂಕುಗಳು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಆ ಸಂದರ್ಭದಲ್ಲಿ ನಮಗೆ ಈ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ 2012-13ರಲ್ಲಿ ಸಾರ್ವಜನಿಕ ರಂಗದ ಕೆಟ್ಟ ಸಾಲದ ಪ್ರಮಾಣ 9,190 ಕೋಟಿ ರೂ. ಇದ್ದರೆ, 2013-14ರ ವೇಳೆಗೆ ಇದು 2.16 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು.

  • ಸಿದ್ದರಾಮಯ್ಯಗೆ ಸರಿಸಮ ಯಾರೂ ಇಲ್ಲ: ಬಿ.ನಾರಾಯಣರಾವ್

    ಸಿದ್ದರಾಮಯ್ಯಗೆ ಸರಿಸಮ ಯಾರೂ ಇಲ್ಲ: ಬಿ.ನಾರಾಯಣರಾವ್

    ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯ ಅವರೇ ಹೊರತು, ಅವರಿಗೆ ಸರಿಸಮ ಯಾರೂ ಇಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮತ್ತೆ ಸಿದ್ದರಾಮಯ್ಯರ ಜಪ ಮಾಡುತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯನೇ, ಅವರಿಗೆ ಸರಿಸಮ ಯಾರೂ ಇಲ್ಲ. ಇಂತಹ ಧೀಮಂತ ನಾಯಕ ರಾಜ್ಯಕ್ಕೆ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬವರಲ್ಲಿ ನಾನು ಮೊದಲಿಗ. ಇದರಲ್ಲಿ ಎರಡನೇ ಮಾತೇ ಇಲ್ಲ. ಅನ್ನಭಾಗ್ಯ ಬೇರೆ ರಾಜ್ಯದ ಯಾವ ಸಿಎಂ ಕೊಟ್ಟಿದ್ದಾನೆ? ಆದರೆ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೊಟ್ಟಿದ್ದಾರೆ. ಇಂದು ಬರಗಾಲ ಬಂದರೂ ಅನ್ನಭಾಗ್ಯ ಯೋಜನೆ ಇರುವ ಕಾರಣಕ್ಕೆ ಜನರು ಊರು ಬಿಟ್ಟು ಗೂಳೆ ಹೋಗುತ್ತಿಲ್ಲ ಎಂದು ಹಾಡಿ ಹೊಗಳಿದರು.

    ಬಿಜೆಪಿ ಸರ್ಕಾರ ಇಡೀ ಕಲಬುರಗಿ ಭಾಗಕ್ಕೆ ಒಂದೇ ಒಂದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಕಲ್ಯಾಣ ರಾಜ್ಯ ಒಂದು ಕಡೆ ನಾಮಕರಣ ಮಾಡಿ, ಮಂತ್ರಿ ಪದವಿ ಒಂದೂ ಕೊಡೋದಿಲ್ಲ. ಕೊಟ್ಟರೂ ಪಶುಸಂಗೊಪನೆ ಎಂದು ಒಂದು ಖಾತೆ ಕೊಟ್ಟು ನಮಗೆ ಈ ರೀತಿ ವಂಚನೆ ಮಾಡೋದನ್ನ ನಾವು ಸಹಿಸಿಕೊಳ್ಳುವುದಿಲ್ಲ. ಕೇವಲ ಹೆಸರು ರಾಜ ಎಂದು ಇಟ್ಟು ಕೆಲಸ ಬೇರೆ ಅವರು ಮಾಡಿದರೆ ಒಪ್ಪಿಕೊಳ್ಳುವುದಿಲ್ಲ.

    ಹಾಗೆಯೇ ಜಿಲ್ಲೆಯ ಒಳ್ಳೆಯ ಸಚಿವ ಸ್ಥಾನ ಕೊಡಬೇಕು, ಅಭಿವೃದ್ಧಿಗೆ ಒಳ್ಳೆಯ ಬಜೆಟ್ ನೀಡಬೇಕು ಹಾಗೂ ಕಲ್ಯಾಣ ರಾಜ್ಯವನ್ನಾಗಿ ಮಾಡಲು ಎಲ್ಲರಿಗೂ ಸಹಕಾರ ನೀಡಬೇಕು. ಆ ಮಾತ್ರ ಕರ್ನಾಟಕಕ್ಕೆ ಕಲ್ಯಾಣ ರಾಜ್ಯ ಎಂದು ನಾಮಕರಣ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಈ ಬಗ್ಗೆ ಗಮನ ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

  • ಹೆಚ್‍ಡಿಕೆ ಸರ್ಕಾರ ಇದ್ದಾಗಲೂ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ: ಕಟೀಲ್

    ಹೆಚ್‍ಡಿಕೆ ಸರ್ಕಾರ ಇದ್ದಾಗಲೂ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ: ಕಟೀಲ್

    ವಿಜಯಪುರ: ಕೆಲವು ಅಧಿಕಾರಿಗಳು ಬಿಜೆಪಿ ಸರ್ಕಾರವಿದ್ದಾಗ ರಾಜೀನಾಮೆ ನೀಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರವಿದ್ದಾಗ ದಕ್ಷ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

    ಇಂದು ನಗರದಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರದಲ್ಲಿ ಕೇವಲ ಒಬ್ಬರು ಅಧಿಕಾರಿ ರಾಜೀನಾಮೆ ನೀಡಿದ್ದಾರೆ ಅಷ್ಟೇ. ಆದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ ಡಿವೈಎಸ್ಪಿಯಿಂದ ಎಸ್ಪಿವರೆಗೆ ರಾಜೀನಾಮೆ ನೀಡಿದ್ದರು. ಸಸಿಕಾಂತ್ ಅವರ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

    ಅಧಿಕಾರಿಗಳ ರಾಜೀನಾಮೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ಅವರಿಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಇದೆ ಎಂದರು. ಇನ್ನು ಯತ್ನಾಳ ನನಗೆ ಮಾರ್ಗದರ್ಶನ ನೀಡಿದ್ದಾರೆ. ನನಗೆ ಹಿಂದೆ ರಾಜ್ಯಾಧ್ಯಕ್ಷ ಅವಕಾಶ ಕೊಟ್ಟಿರಲಿಲ್ಲ. ಯತ್ನಾಳ ಉತ್ತರ ಕರ್ನಾಟಕ ಪ್ರವಾಸ ಮಾಡಿ ಎಂದಿದ್ದರು ಯತ್ನಾಳ ಹೇಳಿದಂತೆ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ಸಿಎಂ ಬಿಎಸ್‍ವೈ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ನನ್ನ ಮಧ್ಯೆ ಯಾವುದೇ ಭಿನ್ನಮತ ವ್ಯಕ್ತವಾಗಿಲ್ಲ. ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಪಕ್ಷ ಸಂಘಟಿಸುವ ಕುರಿತು ಉತ್ತಮ ಚರ್ಚೆಯಾಗಿದೆ. ನಮ್ಮ ಕಡೆ ಕಾಫಿ ಪ್ಲ್ಯಾಂಟರ್ ಥರ ನ್ಯೂಸ್ ಪ್ಲ್ಯಾಂಟರ್ ಈ ಸುದ್ದಿಯನ್ನು ಸೃಷ್ಠಿಸಿದ್ದಾರೆ ಎಂದು ಮಾಧ್ಯಮಗಳ ಮೇಲೆ ಕೋಪಗೊಂಡರು.

  • ಬಿಜೆಪಿ ಸರ್ಕಾರ ಬಂದಾಗಿನಿಂದ ‘ಇಡಿ’ ವಿಪಕ್ಷಗಳ ವಿರುದ್ಧ ಬಳಸುವ ಅಸ್ತ್ರವಾಗಿದೆ: ಪ್ರಿಯಾಂಕ್ ಖರ್ಗೆ

    ಬಿಜೆಪಿ ಸರ್ಕಾರ ಬಂದಾಗಿನಿಂದ ‘ಇಡಿ’ ವಿಪಕ್ಷಗಳ ವಿರುದ್ಧ ಬಳಸುವ ಅಸ್ತ್ರವಾಗಿದೆ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಜಾರಿ ನಿರ್ದೆಶನಾಲಯ(ಇಡಿ) ವಿಪಕ್ಷಗಳ ವಿರುದ್ಧ ಬಳಸುವ ಅಸ್ತ್ರವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಡಿ ವಿಪಕ್ಷಗಳಿಗೆ ಬಳಸುವ ಅಸ್ತ್ರವಾಗಿದೆ. ಕರ್ನಾಟಕದಲ್ಲೂ ಕೇಂದ್ರ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಬೇರೆ ಪಕ್ಷ ದುರ್ಬಲ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಕೊಲೆ ಆರೋಪಿಯ ಹೇಳಿಕೆ ಮೇರೆಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹರಿಹಾಯ್ದರು.

    ಸಿಬಿಐ, ಐಟಿ, ಇಡಿ ಎಲ್ಲವನ್ನೂ ಬಳಸಿ ಬ್ಲ್ಯಾಕ್‍ಮೇಲ್ ತಂತ್ರ ಮಾಡುತಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡು ಬಂದಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿರವಾಗುತ್ತಿದೆ. ಹೀಗಾಗಿ ವಿಪಕ್ಷಗಳನ್ನು ನಿಯಂತ್ರಣದಲ್ಲಿ ಇಡಬೇಕೆಂದು ಈ ರೀತಿ ಕೇಂದ್ರದ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ದಿನೇಶ್ ಗುಂಡೂರಾವ್ ನಮ್ಮ ಅಧ್ಯಕ್ಷರಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಸೂಚನೆಯನ್ನೂ ನೀಡಿಲ್ಲ. ಈ ಕುರಿತು ಹೈಕಮಾಂಡ್‍ನಿಂದ ಯಾವುದೇ ಮಾಹಿತಿಯೂ ಬಂದಿಲ್ಲ, ಇದು ಮಾಧ್ಯಮದ ಸೃಷ್ಟಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

    ಬೆಳಗ್ಗೆ ಮಾಧ್ಯಮಗಳ ಜೊತೆ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ನಾನೇನೂ ತಪ್ಪು ಮಾಡಿಲ್ಲ, ರೇಪು ಮಾಡಿಲ್ಲ, ದುಡ್ಡು ಕದ್ದಿಲ್ಲ. ರಾಜಕೀಯವಾಗಿ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಲು ಅವರನ್ನು ಹಿಡಿದಿಟ್ಟಿದ್ವಿ. ಹೀಗಾಗಿ ಈಗ ಬೇಕಾದಷ್ಟು ಅನುಭವಿಸುತ್ತಿದ್ದೇವೆ. ಪರವಾಗಿಲ್ಲ ಎಲ್ಲವನ್ನೂ ನಾವು ಫೇಸ್ ಮಾಡಬೇಕು ಎಂದಿದ್ದರು.

    ಏನಾದರೂ, ಯಾರಿಗಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ. ಗುರುವಾರ ನಾವು ಹಾಕಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಸದ್ಯಕ್ಕೆ ನಾನು ಪ್ಲೈಟ್ ಬುಕ್ ಮಾಡಿದ್ದು, ದೆಹಲಿಗೆ ಹೋಗುತ್ತಿದ್ದೇನೆ. ಲಾಯರ್ ನಾ ಮೀಟ್ ಮಾಡಬೇಕು ಎಂದು ಹೇಳಿದ್ದರು.

    ಗುರುವಾರ ರಾತ್ರಿ 9.40ಕ್ಕೆ ನನಗೆ ಸಮನ್ಸ್ ಕೊಟ್ಟು ಒಂದು ಗಂಟೆಗೆ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಅದೇನೋ ರಾತ್ರಿ ಬಂದು ತುರ್ತಾಗಿ ವಿಚಾರಣೆಗೆ ಬನ್ನಿ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಪ್ರೆಸ್ ಮೀಟ್ ಮಾಡಿ ಮಾತಾಡೇ ದೆಹಲಿಗೆ ಹೋಗುತ್ತೇನೆ. ನನಗೆ ಒಂದೆರಡು ಗಂಟೆ ಪರ್ಸನಲ್ ಕಮಿಟ್ ಮೆಂಟ್ ಕೆಲಸ ಇದೆ. ಆದ್ದರಿಂದ ಹೋಗುತ್ತಿದ್ದೇನೆ. ನನ್ನ ಯಾರೂ ಫಾಲೋ ಮಾಡಬೇಡಿ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದರು.