Tag: BJP government

  • ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ: ಸಿದ್ದರಾಮಯ್ಯ

    ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ: ಸಿದ್ದರಾಮಯ್ಯ

    – ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ
    – ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗ್ತಿದ್ದಾರೆ

    ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಸಂವಿಧಾನಾತ್ಮಕ ಮುಖ್ಯಮಂತ್ರಿ ಒಬ್ಬರಿದ್ದರೆ, ಅಸಂವಿಧಾನಿಕವಾಗಿ ಇನ್ನೊಬ್ಬರು ಮುಖ್ಯಮಂತ್ರಿ ಇದ್ದಾರೆ. ವಿಜಯೇಂದ್ರ ಇನ್ನೋರ್ವ ಮುಖ್ಯಮಂತ್ರಿ, ಇನ್ನೊಂದು ಸಲಾ ಹೇಳಲಾ ಎಂದು ಎರಡು ಬಾರಿ ವಿಜಯೇಂದ್ರನ ಹೆಸರು ಹೇಳುವ ಮೂಲಕ ಇದು ನಾನು ಹೇಳಿದ್ದಲ್ಲ ಬಿಜೆಪಿ ಶಾಸಕರೇ ಹೇಳಿರುವುದು ಎಂದು ಸಮರ್ಥನೆ ನೀಡಿದರು.

    ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಯಡಿಯೂರಪ್ಪ ಹತ್ತಿರ ಹೋದರೆ ವಿಜಯೇಂದ್ರ ಬಳಿ ಹೋಗು ಅಂತಾರೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎನ್ನುವುದು ಶುದ್ದ ಸುಳ್ಳಾಗಿದೆ. ಭಿನ್ನಮತದ ವಿಷಯವನ್ನು ತಪ್ಪಿಸಲು ಜಾರಕಿಹೊಳಿ ಈ ಹೇಳಿಕೆ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಹಿಂದೆ ಹೋಗಿರೋದು ಮಹೇಶ್ ಕುಮಟಳ್ಳಿ ಮಾತ್ರ. ಕೆಲವರು ಅಧಿಕಾರಕ್ಕೆ ಹೋದರು, ಇನ್ನೂ ಕೆಲವರು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇರುವುದು ನಿಜವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

    ಯತ್ನಾಳ್ ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕ ಎಂದು ಹೇಳುತ್ತಾರೆ ಅಂತ ಜೆ.ಪಿ.ನಡ್ಡಾಗೆ ಚಡ್ಡಾ ಎಂದು ವ್ಯಂಗ್ಯವಾಡಿದರು. ಭಿನ್ನಮತ ಇನ್ನೂ ಬೆಳಿತಿದೆ. ಆಗಾಗ ಬಿಜೆಪಿಯವರು ನನ್ನ ಭೇಟಿ ಮಾಡುತ್ತಾರೆ. ಬಿಜೆಪಿಯ ಕೆಲ ಶಾಸಕರು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಭಿನ್ನಮತದಲ್ಲಿ ನಾವು ಕೈ ಹಾಕಲ್ಲ. ಮೊದಲು ಬಿಜೆಪಿ ಸರ್ಕಾರ ಬಿದ್ದು ಹೋಗಲಿ. ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.

  • ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    – ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ವಿ

    ಬೆಂಗಳೂರು: ನಾವು ಬಂಡಾಯ ಶಾಸಕರು ಅಲ್ಲ. ನಾವು ನಮ್ಮ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ವಿರುದ್ಧ ಬಂಡಾಯ ಎದ್ದು, ಸಭೆ ಮಾಡಲು ಹೋಗಿರಲಿಲ್ಲ. ಲಾಕ್‍ಡೌನ್‍ನಿಂದ ಹೋಟೆಲ್ ಬಂದ್ ಆಗಿ ರೊಟ್ಟಿ ತಿನ್ನಲು ಆಗಿರಲ್ಲಿಲ್ಲ. ಆದ್ದರಿಂದ ಉಮೇಶ್ ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು. ಅಲ್ಲಿ ಮಾವಿನ ಹಣ್ಣು ತಿಂದು ಲೋಕಾಭಿರಾಮವಾಗಿ ಮಾತಾಡಿದ್ದೇವೆ ಎಂದು ಹೇಳಿದ್ದಾರೆ.

    ನಮಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ಆ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಮನೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ಸರ್ಕಾರ ಕೆಡುವುವ ಕೆಲಸ ಯತ್ನಾಳ್ ಮಾಡುವುದಿಲ್ಲ. ಇನ್ನೂ ಉಳಿದ ವರ್ಷ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ನಾವು ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ನಮಗೆ ಮಾತನಾಡಲು ಮುಕ್ತವಾದ ಸ್ವಾತಂತ್ರ ಇದೆ ಎಂದು ಯತ್ನಾಳ್ ತಿಳಿಸಿದ್ದಾರೆ.

    ನಾನು ಯಾವುದೇ ವಿಚಾರವಾಗಿ ಮಾತನಾಡಲು ಭಯಪಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಬಿಎಸ್‍ವೈ ಇಳಿಸುವ ಕೆಲಸ ನಾವು ಮಾಡಿಲ್ಲ. ಈ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಈ ಸಭೆಯಲ್ಲಿ ಅಭಿವೃದ್ಧಿ ವಿಚಾರ ಚರ್ಚೆ ಆಗಿದೆ. ಕ್ಷೇತ್ರದ ವಿಚಾರ ಚರ್ಚೆ ಆಗಿದೆ. ಕೊರೊನಾದಲ್ಲಿ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಸಣ್ಣ ಪುಟ್ಟ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇವೆ ಎಂದರು.

    ಇದೇ ವೇಳೆ ಉಮೇಶ್ ಕತ್ತಿ ಅವರ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದು, ಈ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದರ ಬಗ್ಗೆ ನಾವು ಮಾತನಾಡಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

  • ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ – 4ನೇ ಬಾರಿ ಸಿಎಂ ಆಗಲಿದ್ದಾರೆ ಶಿವರಾಜ್ ಸಿಂಗ್ ಚೌಹಾಣ್

    ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ – 4ನೇ ಬಾರಿ ಸಿಎಂ ಆಗಲಿದ್ದಾರೆ ಶಿವರಾಜ್ ಸಿಂಗ್ ಚೌಹಾಣ್

    ಭೋಪಾಲ್: 22 ಮಂದಿ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದು ಕಾಂಗ್ರೆಸ್ ಸರ್ಕಾರ ಪತನದ ಬಳಿಕ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಸ್ಪಷ್ಟವಾಗಿದೆ.

    ಇಂದು ರಾತ್ರಿ 9 ಗಂಟೆಗೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಲಾಲ್ಜಿ ಟಂಡನ್ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

    ಸಂಜೆ ಭೂಪಾಲ್‍ನಲ್ಲಿ ಶಾಸಕರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದು, ಇಂದು ರಾತ್ರಿ 9 ಗಂಟೆಗೆ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

    ಶಾಸಕಾಂಗ ಸಭೆಗೂ ಮುನ್ನ ದೆಹಲಿ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ನಾಯಕರಾದ ಧರ್ಮೇಂದ್ರ ಪ್ರಧಾನ್, ಡಾ. ವಿನಯ್ ಸಹಸ್ತ್ರಭೂಧೆ, ಜ್ಯೋತಿರಾಧಿತ್ಯ ಸಿಂಧಿಯಾ ಭಾಗಿಯಾಗಿ ಚರ್ಚೆ ನಡೆಸಲಿದ್ದಾರೆ.

    ಮಾಹಿತಿಯ ಪ್ರಕಾರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳಾಗಿದ್ದು, ಮೊದಲು ಶಿವರಾಜ್ ಸಿಂಗ್ ಚೌಹಾಣ್ ಏಕಾಂಗಿಯಾಗಿ ಪ್ರಮಾಣ ವಚನ ಪಡೆಯಲಿದ್ದಾರೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಕೇವಲ 40 ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ 22 ಮಂದಿ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಹಿನ್ನೆಲೆ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಸಿಎಂ ಆಗುವ ಮಾರ್ಗ ಸುಲಭವಾಗಿದೆ.

  • ಪ್ರಭಾವಿ ವ್ಯಕ್ತಿಯನ್ನ ರಕ್ಷಿಸಲು ಬಿಜೆಪಿ ಸರ್ಕಾರದಿಂದ ಪ್ರಯತ್ನ – ಕಾಂಗ್ರೆಸ್

    ಪ್ರಭಾವಿ ವ್ಯಕ್ತಿಯನ್ನ ರಕ್ಷಿಸಲು ಬಿಜೆಪಿ ಸರ್ಕಾರದಿಂದ ಪ್ರಯತ್ನ – ಕಾಂಗ್ರೆಸ್

    ಬೆಂಗಳೂರು: ಪ್ರಭಾವಿ ವ್ಯಕ್ತಿಯನ್ನ ರಕ್ಷಿಸಲು ಬಿಜೆಪಿ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?

    “ಬಳ್ಳಾರಿ ಕಾರು ಅಪಘಾತದಲ್ಲಿ ಇಬ್ಬರು ಅಮಾಯಕರು ಮರಣ ಹೊಂದಿದ್ದಾರೆ. ಅಪಘಾತ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಸರ್ಕಾರದಿಂದ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸಲ್ಲದು. ಸತ್ಯ ಮತ್ತು ನ್ಯಾಯ ಗೆಲ್ಲಲಿ” ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿಸದೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್

    ಏನಿದು ಪ್ರಕರಣ?
    ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಬಳ್ಳಾರಿಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ಬಲಿಯನ್ನು ತೆಗೆದುಕೊಂಡಿತ್ತು. ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯಕ್(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದಾರೆ.

    ಆರ್.ಅಶೋಕ್ ಹೇಳಿಕೆ:
    ಕಳೆದ ಮೂರು ದಿನದ ಹಿಂದೆ ಹಂಪಿಯಿಂದ ಬರಬೇಕಾದ್ರೆ ಬಳ್ಳಾರಿ ಭಾಗದಲ್ಲಿ ಅಪಘಾತವಾಗಿದೆ. ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದ್ದರಿಂದ ಪ್ರತಿಕ್ರಿಯೆ ನೀಡಲು ಬಂದಿದ್ದೇನೆ. ಅಪಘಾತದ ಬಳಿಕ ಸಾವನ್ನಪ್ಪಿದ ಯುವಕನ ಕುಟುಂಬಸ್ಥರೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಮಂತ್ರಿಯಾಗಿರುವುದರಿಂದ ಹೆಚ್ಚು ಮಾತನಾಡಬಾರದು. ತನಿಖೆ ವೇಳೆ ಹೇಳಿಕೆ ನೀಡಿದ್ರೆ ಕಾನೂನಿನ ಪ್ರಕಾರ ಸರಿ ಅಲ್ಲ. ಕಾನೂನು ಮೀರಿ ಯಾರು ಇಲ್ಲ. ತನಿಖೆ ವೇಳೆ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ.

    ಅಪಘಾತವಾದ ಕಾರಿಗೂ ಹಾಗೂ ಅದು ನೋಂದಣಿ ಹೊಂದಿರುವ ಸಂಸ್ಥೆಗೂ ನಮಗೆ ಸಂಬಂಧವಿಲ್ಲ. ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ಮತ್ತು ಎಲ್ಲರೂ ಗಾಯಗೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಎಲ್ಲವೂ ಬಹಿರಂಗವಾಗಲಿದೆ. ಹಾಗಾಗಿ ಅಪಘಾತಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಮಾತನಾಡಲ್ಲ. ಮಾಧ್ಯಮಗಳಲ್ಲಿ ನನ್ನ ಮಗ ಸಹ ಕಾರಿನಲ್ಲಿದ್ದ ಎಂದು ಬಿತ್ತರವಾಗುತ್ತಿದೆ. ಆದ್ರೆ ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ವಿಷಾದವಿದೆ ಎಂದರು.

     

    ದಾಖಲಾಗಿರುವ ಎಫ್‍ಐಆರ್ ನಲ್ಲಿ ನನ್ನ ಮಗನ ಹೆಸರಿಲ್ಲ. ಅಪಘಾತವಾದ ಕಾರಿನಲ್ಲಿ ನನ್ನ ಮಗನಿದ್ದ ಎಂಬುದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದ್ರೆ ತಮ್ಮ ಮಗ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಸಚಿವರು ಹಿಂದೇಟು ಹಾಕಿದರು. ಈ ವೇಳೆ ಮಗನಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡದೇ ಈಗ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಎಲ್ಲ ಪ್ರಶ್ನೆಗಳಿಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜಾಣ ಉತ್ತರ ನೀಡಿದರು.

  • ದಾಸೋಹ ಕೇಂದ್ರದ ದಾಸೋಹಕ್ಕೆ ಸರ್ಕಾರದ ಕೊಕ್ಕೆ

    ದಾಸೋಹ ಕೇಂದ್ರದ ದಾಸೋಹಕ್ಕೆ ಸರ್ಕಾರದ ಕೊಕ್ಕೆ

    – ಒಂದೂವರೆ ತಿಂಗಳಿನಲ್ಲಿ 3 ಬಾರಿ ಆದೇಶ ಬದಲಾವಣೆ

    ಬೆಂಗಳೂರು: ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ಅಡಿ ಸರ್ಕಾರವೇ ಗುರುತಿಸಿದ ಕಲ್ಯಾಣ ಸಂಸ್ಥೆಗಳಿಗೆ, ಸರ್ಕಾರವೇ ಕೊಡುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸಿದೆ. 2019ರ ನವೆಂಬರ್ 12ರಿಂದ ಡಿಸೆಂಬರ್ 27ವರೆಗೆ ಸರ್ಕಾರ ಮೂರು ಬಾರಿ ಆದೇಶವನ್ನು ಬದಲಿಸಿದೆ. ವೆಲ್ ಫೇರ್ ಸ್ಕಿಮ್ ಅನ್ವಯ ಉಚಿತ ವಸತಿ, ಊಟ ನೀಡುವ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯಂತೆ ಒಟ್ಟು 15 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿತ್ತು.

    ಸರ್ಕಾರದ 2019 ನವೆಂಬರ್ 12ರಂದು ಅನುಮೋದಿತ 460 ಕಲ್ಯಾಣ ಸಂಸ್ಥೆಗಳ 41,384 ವಿದ್ಯಾರ್ಥಿಗಳಿಗೆ ತಲಾ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಕೊಡುವ ಆದೇಶ ಮಾಡಲಾಗಿತ್ತು. 13 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ ಒಟ್ಟು 176 ಕಲ್ಯಾಣ ಸಂಸ್ಥೆಗಳು, 11,762 ವಿದ್ಯಾರ್ಥಿಗಳಿಗೆ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಆದೇಶಿಸಲಾಗಿತ್ತು. 27 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ 189 ಕಲ್ಯಾಣ ಸಂಸ್ಥೆಗಳಿಗೆ, 13,785 ವಿದ್ಯಾರ್ಥಿಗಳಿಗೆ ಒಟ್ಟು 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಪ್ರತ್ಯೇಕವಾಗಿ ಒಟ್ಟು ಮೂರು ಆದೇಶ ಹೊರಡಿಸಲಾಗಿದೆ.

    ಹೀಗೆ ಒಂದೂವರೆ ತಿಂಗಳಿನಲ್ಲಿ ಮೂರು ಬಾರಿ ಆದೇಶ ಬದಲಾವಣೆ ಆಗಿದೆ. ಇದರ ಅನ್ವಯ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಕೆಲವು ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠಕ್ಕೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಹಂಚಿಕೆ ನಿಲ್ಲಿಸಲಾಗಿದೆ.

    ಆದಿ ಚುಂಚನಗಿರಿ ಮಠದಲ್ಲಿ ಪ್ರತಿ ತಿಂಗಳು ಒಟ್ಟು 26,22 ಮಕ್ಕಳಿಗೆ 26,220 ಕೆಜಿ ಅಕ್ಕಿ ಹಾಗೂ 13,110 ಕೆಜಿ ಗೋಧಿ ಸ್ಥಗಿತಗೊಳಿಸಲಾಗಿದೆ. ಜೆಎಸ್‍ಎಸ್ ವಿದ್ಯಾರ್ಥಿ ನಿಲಯ ಮೈಸೂರು ಮತ್ತು ಜೆಎಸ್‍ಎಸ್ ಫಿಸಿಕಲ್ ಹ್ಯಾಂಡಿಕ್ಯಾಪ್ಟ್ ವರ್ಕಿಂಗ್ ವುಮನ್ ಅಂಡ್ ಸ್ಟೂಡೆಂಟ್ ಹಾಸ್ಟೆಲ್ ಸೇರಿ ಪ್ರತಿ ತಿಂಗಳು ಒಟ್ಟು 2086 ವಿದ್ಯಾರ್ಥಿಗಳಿಗೆ 20,860 ಕೆಜಿ ಅಕ್ಕಿ 10,427 ಕೆಜಿ ಗೋಧಿ, ತುಮಕೂರು ಸಿದ್ದಗಂಗಾ ಮಠಕ್ಕೆ ಪ್ರತಿ ತಿಂಗಳು ಒಟ್ಟು 7,359 ವಿದ್ಯಾರ್ಥಿಗಳಿಗೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ನೀಡಲಾಗುತ್ತಿತ್ತು. ಆ ಎಲ್ಲಾ ಸಂಸ್ಥೆಗಳಿಗೆ ನೀಡುತ್ತಿದ್ದ ಆಹಾರ ಧಾನ್ಯ ಸ್ಥಗಿತ ಮಾಡಲಾಗಿದೆ. ಹೀಗೆ ಬೇರೆ ಬೇರೆ ಆದೇಶಗಳಲ್ಲಿ ಹಂತ ಹಂತವಾಗಿ 271 ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ.

    ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.

  • ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ತುಮಕೂರು: ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

    ಖಾದರ್ ಆರೋಪ ಏನು?:
    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದ್ದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದ್ದರು.

    ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದ್ದರು.

  • ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    – ಸಿದ್ದು ಬಜೆಟ್‍ಗೆ ಮನ್ನಣೆ ನೀಡದ ರಾಜ್ಯ ಸರ್ಕಾರ

    ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    2015ರ ರಾಜ್ಯ ಬಜೆಟ್ ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿದರು. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾದ ಬಳಿಕ ಈ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2018ರ ಬಜೆಟ್ ನಲ್ಲಿ ಮತ್ತೆ ಸಿದ್ದರಾಮಯ್ಯ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಿದ್ದರು.

    2018ರ ಅಕ್ಟೋಬರ್ ನಲ್ಲಿ ಕಾಮಗಾರಿಗೆ ಬಿಮ್ಸ್ ಅಧಿಕಾರಿಗಳು ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಈ ಕಾಮಗಾರಿಗೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಯಬೇಕು. ಆದರೆ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಉದ್ದೇಶದಿಂದ ಈ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

    ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾದರೆ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಿಲ್ಲ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹದಗೆಟ್ಟು ಹೋಗಿದ್ದು, ಈ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಮೈಸೂರು: ಮೈಸೂರಿನ ರಂಗಾಯಣ ಸಂಸ್ಥೆಯ ನೂತನ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಅಡ್ಡಂಡ ಕಾರ್ಯಪ್ಪ ಇಂದು ಮೈಸೂರಿನ ಕಲಾಮಂದಿರದ ರಂಗಾಯಣದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

    ಕೊಡಗು ಮೂಲದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾಗಿರುವ ಅಡ್ಡಂಡ ಕಾರ್ಯಪ್ಪ, ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಹುದ್ದೆ ಅಲಂಕರಿಸಿದರು. ಅಧಿಕಾರ ಸ್ವೀಕಾರ ಮಾಡಿದ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಾಯಣದ ಕಲಾವಿದರು ಪುಷ್ಪಗುಚ್ಚ ನೀಡಿ ಶುಭ ಹಾರೈಸಿದರು.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ರಂಗಾಯಣದ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತಸ ತಂದಿದೆ. ರಂಗಾಯಣದ ಏಳಿಗೆಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದೇನೆ. ಹಿರಿಯ ರಂಗಕರ್ಮಿ ಬಿ. ವಿ ಕಾರಂತರು ಸ್ಥಾಪಿಸಿರುವ ರಂಗಾಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಪ್ರತಿವರ್ಷ ಸಂಕ್ರಾತಿಯ ದಿನ ಆರಂಭವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಮುಂದೂಡಿಕೆ ಆಗಲಿದೆ. ನಿಧಾನವಾಗಿಯಾದರೂ ಪ್ರಧಾನವಾಗಿ ಬಹುರೂಪಿ ನಾಟಕೋತ್ಸವನ್ನು ಆಯೋಜನೆ ಮಾಡುತ್ತೇವೆ ಎಂದರು.

    ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸರ್ಕಾರಗಳು, ನಿರ್ದೇಶಕರು ಅಧಿಕಾರವನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಬೇಕು. ಸರ್ಕಾರಗಳು ಬದಲಾದಾಗ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರನ್ನು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂಬಂಧಪಟ್ಟ ಸಾಂಸ್ಕೃತಿಕ ಸಂಸ್ಥೆಯ ಮೇಲೂ ಪರಿಣಾಮ ಬೀರುತ್ತದೆಯಲ್ಲದೆ ಅದರ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರನ್ನು ಮೂರು ವರ್ಷ ಪೂರ್ತಿ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

    ರಂಗಾಯಣದ ನಿರ್ದೇಶಕರಾಗಿರುವುದಕ್ಕೆ ನಾನು ಬಿಜೆಪಿ ವಕ್ತಾರನಾಗಿದ್ದು ಕಾರಣವಾಗಿರಲೂಬಹುದು. ನಾನು ರಂಗಾಯಣದ ನಿರ್ದೇಶಕನಾಗಬೇಕೆಂದು ಪ್ರಯತ್ನ ಪಟ್ಟಿದ್ದೆ. ಆದರೆ ಈ ಹುದ್ದೆ ನಿರೀಕ್ಷೆಯಲ್ಲಿ ಇರಲಿಲ್ಲ. ಆದರೂ ಕೂಡ ಸರ್ಕಾರ ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದೆ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

  • ಒಂದು ಡಿಸಿಎಂ ಸ್ಥಾನ, ನಾಲ್ವರಿಗೆ ಮಂತ್ರಿಗಿರಿ ನೀಡಬೇಕು: ಪ್ರಸನ್ನಾಂದ ಸ್ವಾಮೀಜಿ ಆಗ್ರಹ

    ಒಂದು ಡಿಸಿಎಂ ಸ್ಥಾನ, ನಾಲ್ವರಿಗೆ ಮಂತ್ರಿಗಿರಿ ನೀಡಬೇಕು: ಪ್ರಸನ್ನಾಂದ ಸ್ವಾಮೀಜಿ ಆಗ್ರಹ

    ಕೊಪ್ಪಳ: ವಾಲ್ಮೀಕಿ ಸಮುದಾಯದ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ, ನಾಲ್ವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಗಂಗಾವತಿಯಲ್ಲಿ ಆದಿಕಾವಿ ವಾಲ್ಮೀಕಿ ಜಾತ್ರೆಯ ಅಂಗವಾಗಿ ನಾಯಕ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, 2008ರಲ್ಲಿ ಅಂದಿನ ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಿತ್ತು. ಅದರಂತೆ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಘೊಷಣೆ ಕೂಡ ಮಾಡಿದ್ದರು. ಬಿಜೆಪಿ ನಾಯಕರ ಭರವಸೆಯಂತೆ ನಮ್ಮ ಸಮುದಾಯದ ಒಬ್ಬರನ್ನು ಡಿಸಿಎಂ ಮಾಡಬೇಕು ಮತ್ತು ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

    ಈಗಾಗಲೆ ಸಮಾಜದ ಬಹುದೊಡ್ಡ ಬೇಡಿಕೆ ಎಂಬಂತೆ ಸಮಾಜಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಬೇಕೆಂದು ಸಮಾಜದ ಬೇಡಿಕೆಯಾಗಿದೆ. ಬರುವ ವಾಲ್ಮೀಕಿ ಜಾತ್ರೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

  • ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ನೆಲಮಂಗಲ: ಬೆಂಗಳೂರಿನ ಕೊಳಚೆ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿದು ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ದಾಸನಪುರ ಹೋಬಳಿಯ ಕಾಚೋಹಳ್ಳಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತ ನೀರು ಸೇರದಂತೆ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ನಗರದಿಂದ ಯಥೇಚ್ಛವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಪರಿಣಾಮ ಯಲಹಂಕ ಕ್ಷೇತ್ರ ವ್ಯಾಪ್ತಿಯ ಕಾಚೋಹಳ್ಳಿ, ಮಾಚೋಹಳ್ಳಿ ಹಾಗೂ ಗಂಗೊಂಡನಹಳ್ಳಿ ಕೆರೆಗಳು ಮಲಿನಗೊಂಡಿದ್ದು ಪುನರುಜ್ಜೀವನಗೊಳಿಸಲು ಪ್ರತಿ ಕೆರೆಯ ಅಭಿವೃದ್ಧಿಗೆ ತಲಾ ಎರಡು ಕಾಲು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

    ಜಲಮೂಲಗಳ ರಕ್ಷಣೆಗೆ ಬಿಜೆಪಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಹರಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ವೇಳೆ ದಾಸನಪುರ ಹೋಬಳಿ ಸೇರಿದಂತೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಚೋಹಳ್ಳಿ ಹಾಗೂ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರಿನ ಘಟಕ, ಅಂಗನವಾಡಿ ನಿರ್ಮಾಣ ಸೇರಿದಂತೆ ಇಪ್ಪತ್ತೈದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.