Tag: bjp candidate

  • ‘ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ’ – ಯಲ್ಲಾಪುರದಲ್ಲಿ ಶಿವರಾಂ ಹೆಬ್ಬಾರ್ ಗೆಲುವು

    ‘ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ’ – ಯಲ್ಲಾಪುರದಲ್ಲಿ ಶಿವರಾಂ ಹೆಬ್ಬಾರ್ ಗೆಲುವು

    ಕಾರವಾರ: ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ.

    17 ಸುತ್ತುಗಳು ಮುಕ್ತಾಯಗೊಂಡಿದ್ದು ಶಿವರಾಂ ಹೆಬ್ಬಾರ್ 31,406 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿವರಾಂ ಹೆಬ್ಬಾರ್ 80,440 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ್ 49,034 ಮತಗಳು ಪಡೆದಿದ್ದಾರೆ. ಜಡಿಎಸ್‍ನಿಂದ ಸ್ಪರ್ಧಿಸಿದ್ದ ಚೈತ್ರಾ ಗೌಡ 1,235 ಮತಗಳು ಪಡೆದಿದ್ದು 1,444 ನೋಟಾ ಮತ ಚಲಾವಣೆಯಾಗಿದೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಿವರಾಂ ಹೆಬ್ಬಾರ್, ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ. ಜನ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

    ಬೆಳಗ್ಗೆ 10.30ರ ವೇಳೆಗೆ ಬಿಜೆಪಿ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 2, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ.

    ಕಾಗವಾಡ, ಅಥಣಿ, ಗೋಕಾಕ್, ಕೆಆರ್ ಪುರಂ, ಚಿಕ್ಕಬಳ್ಳಾಪುರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ರಾಣೇಬೆನ್ನೂರು, ಕೆಆರ್ ಪೇಟೆ, ಯಶವಂತಪುರ, ವಿಜಯನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

  • ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಚಿಕ್ಕಬಳ್ಳಾಪುರ: ಉಪಚುನಾವಣಾ ಕಣದ ಫಲಿತಾಂಶ ಸೋಮವಾರ ಹೊರಬೀಳಲಿದ್ದು, ಎಲ್ಲರ ಕೂತೂಹಲ ಫಲಿತಾಂಶದತ್ತ ನೆಟ್ಟಿದೆ. ಆದರೆ ಇತ್ತ ಚುನಾವಣಾ ಫಲಿತಾಂಶದ ಮತ ಎಣಿಕೆ ವೇಳೆ ಆಗಮಿಸುವ ಬಿಜೆಪಿ ಕಾರ್ಯಕರ್ತರೆಲ್ಲಾ ಬಿಳಿ ವಸ್ತ್ರ ಹಾಗೂ ಕೇಸರಿ ಶಲ್ಯ ಧರಿಸಿ ಆಗಮಿಸುವಂತೆ ಮನವಿ ಮಾಡಲಾಗಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಆಗಮಿಸುವಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಬೆಂಬಲಿಗರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದರಲ್ಲೂ ಎಲ್ಲರೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿ ಬರಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡಲಾಗಿದೆ.

    ಬಿಜೆಪಿ ಕಾರ್ಯಕರ್ತರು ಹಾಗೂ ಸುಧಾಕರ್ ಬೆಂಬಲಿಗರು ಮತದಾನದ ದಿನವೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿದ್ದರು. ಇದು ವಿಶೇಷವಾಗಿ ಎಲ್ಲರ ಗಮನ ಸೆಳೆದಿತ್ತು. ಈಗ ಮತ ಎಣಿಕೆ ದಿನವೂ ಕೇಸರಿ ಹಾಗೂ ಬಿಳಿ ಬಟ್ಟೆ ಧರಿಸಲು ತಿಳಿಸಲಾಗಿದೆ.

    ಮತ ಎಣಿಕೆ ದಿನ ನಿಷೇಧಾಜ್ಞೆ ಜಾರಿ:
    ಮತ ಎಣಿಕೆ ಕಾರ್ಯಯು ನಗರದ ಬಿಬಿ ರಸ್ತೆಯ ಜೂನಿಯರ್ ಕಾಲೇಜು ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಬಳಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 10 ಟೇಬಲ್‍ಗಳ ಮೂಲಕ 26 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 09 ರ ಬೆಳಗ್ಗೆ 06ರಿಂದ ಡಿಸೆಂಬರ್ 10ರ ಬೆಳಗ್ಗೆ 06 ರವರೆಗೆ ವಿಧಾನಸಭಾ ಕ್ಷೇತ್ರಾದ್ಯಾಂತ 144 ಸೆಕ್ಷೆನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅರ್ ಲತಾ ಆದೇಶಿಸಿದ್ದಾರೆ.

  • ಬಿಜೆಪಿಗೆ ಮತ ಹಾಕಿ ಸರ್- ಕೆ.ಬಿ.ಕೋಳಿವಾಡಗೆ ಕಮಲ ಅಭ್ಯರ್ಥಿ ಪತ್ನಿ ಮನವಿ

    ಬಿಜೆಪಿಗೆ ಮತ ಹಾಕಿ ಸರ್- ಕೆ.ಬಿ.ಕೋಳಿವಾಡಗೆ ಕಮಲ ಅಭ್ಯರ್ಥಿ ಪತ್ನಿ ಮನವಿ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ರಾಣೇಬೆನ್ನೂರಿನಲ್ಲಿ ಪ್ರಚಾರ ಭಾರೀ ರಂಗು ಪಡೆದಿದೆ.

    ಬಿಜೆಪಿಗೆ ಮತ ಹಾಕುವಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರಿಗೆ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರ ಪತ್ನಿ ಕೇಳಿದ ಪ್ರಸಂಗ ಇಂದು ಕರೂರು ಗ್ರಾಮದಲ್ಲಿ ನಡೆದಿದೆ. ಕೆ.ಬಿ.ಕೋಳಿವಾಡ್ ಅವರು ಕರೂರು ಗ್ರಾಮದಲ್ಲಿ ಪ್ರಚಾರ ಮುಗಿಸಿ ರಾಣೇಬೆನ್ನೂರಿಗೆ ಮರಳುತ್ತಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ ಅರುಣಕುಮಾರ ಅವರ ಪತ್ನಿ, ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರು, ಕೆ.ಬಿ.ಕೋಳಿವಾಡ ಅವರನ್ನು ಮಾತನಾಡಿಸಿ, ಬಿಜೆಪಿಗೆ ಮತ ಹಾಕಿ ಸರ್ ಎಂದು ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರ ಮನವಿಯ ಬಳಿಕ, ಕೆ.ಬಿ.ಕೋಳಿವಾಡ ಅವರು ನಗುತ್ತಲೇ ಮುಂದೆ ಸಾಗಿದರು. ಬಳಿಕ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಹಾಗೂ ಬಿಜೆಪಿ ಮುಖಂಡರು ಕರೂರು ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

  • ಹೊಸಕೋಟೆ ಮಿನಿ ಬಿಹಾರ ಆಗಿತ್ತು ಎಂದಿದ್ದು ನಿಜ: ವಿವಾದಾತ್ಮಕ ಹೇಳಿಕೆಗೆ ಎಂಟಿಬಿ ಸ್ಪಷ್ಟನೆ

    ಹೊಸಕೋಟೆ ಮಿನಿ ಬಿಹಾರ ಆಗಿತ್ತು ಎಂದಿದ್ದು ನಿಜ: ವಿವಾದಾತ್ಮಕ ಹೇಳಿಕೆಗೆ ಎಂಟಿಬಿ ಸ್ಪಷ್ಟನೆ

    – 120 ಕೋಟಿ ರೂ. ಕೊಡೋಕೆ ದುಡ್ಡು ಎಲ್ಲಿದೆ?
    – ಶರತ್ ಬಚ್ಚೇಗೌಡ ಆರೋಪ ಸುಳ್ಳೆಂದ ಎಂಟಿಬಿ

    ಬೆಂಗಳೂರು: ಸಂಸದ ಬಚ್ಚೇಗೌಡ ಹಾಗೂ ಮಾಜಿ ಶಾಸಕ ಚಿಕ್ಕೇಗೌಡ ಅವರ ಅವಧಿಯಲ್ಲಿ ಹೊಸಕೋಟೆ ಮಿನಿ ಬಿಹಾರ ಆಗಿತ್ತು ಅಂತ ನಾನು ಹೇಳಿದ್ದು ನಿಜ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

    ಹೊಸಕೋಟೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದಿನ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಿನಿ ಬಿಹಾರ್ ಪರಿಸ್ಥಿತಿ ಇತ್ತು. ಬೇಕೆಂದರೆ ಈ ಬಗ್ಗೆ ಹೊಸಕೋಟೆ ಕ್ಷೇತ್ರದ ಹಿರಿಯ ಮತದಾರರನ್ನು ವಿಚಾರಿಸಿ ನಿಮಗೆ ಗೊತ್ತಾಗುತ್ತದೆ. ಸ್ವಾತಂತ್ರ್ಯ ನಂತರ ನಡೆದ 2003ರ ಚುನಾವಣೆಯವರೆಗೂ ಮಿನಿ ಬಿಹಾರ್ ಪರಿಸ್ಥಿತಿ ಇತ್ತು ಎಂದು ಹೇಳಿದರು.

    ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಯಾವುದೇ ಆಫರ್ ಕೊಟ್ಟಿಲ್ಲ. ನಾನು 120 ಕೋಟಿ ರೂ. ಕೊಡುತ್ತೇನೆ ಅಂತ ಎಲ್ಲಿಯಾದರೂ ಹೇಳಿಕೆ ನೀಡಿದ್ದೇನಾ? ಇಲ್ಲ ಅಲ್ವಾ. ನಾನು ವ್ಯಾಪಾರ ಮಾಡುತ್ತಿಲ್ಲ. ಮತದಾರರು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ನಾನು ಯಾಕೆ ಹಣ ಕೊಡಬೇಕು? ಅಷ್ಟೇ ಅಲ್ಲದೆ 120 ಕೋಟಿ ರೂ. ಕೊಡುವುದಕ್ಕೆ ನಮ್ಮ ಬಳಿ ಹಣವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡುವುದರಿಂದ ಕುರುಬ ಸಮುದಾಯದ ಮತ ನಮ್ಮ ಕೈತಪ್ಪುವುದಿಲ್ಲ. ಹೊಸಕೋಟೆ ಕ್ಷೇತ್ರದ ಕುರುಬ ಸಮುದಾಯ ಅಷ್ಟೇ ಅಲ್ಲದೆ ಎಲ್ಲರೂ ನನಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಉಪ ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಎಂಟಿಬಿ ಖಾತೆಗೆ ಇವತ್ತೇ ಹಣ ಜಮೆ- ಹೊಸೂರು ಬ್ಯಾಂಕ್ ಕತೆ ಹೇಳಿದ ನಂಜೇಗೌಡ

    ಎಂಟಿಬಿ ಖಾತೆಗೆ ಇವತ್ತೇ ಹಣ ಜಮೆ- ಹೊಸೂರು ಬ್ಯಾಂಕ್ ಕತೆ ಹೇಳಿದ ನಂಜೇಗೌಡ

    ಬೆಂಗಳೂರು: ನನಗೆ ಸಾಲ ಕೊಟ್ಟಿದ್ದೇನೆ ಅಂತ ಇನ್ನೊಮ್ಮೆ ಹೇಳಿದರೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಮಾಲೂರು ಶಾಸಕ ನಂಜೇಗೌಡ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನು ಎಂಟಿಬಿ ನಾಗರಾಜ್ ಅವರಿಂದ ಯಾವುದೇ ರೀತಿಯ ಸಾಲ ಪಡೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ ಹೈಕಮಾಂಡ್ ಸೂಚನೆ ಮೇರೆಗೆ ಎಂಟಿಬಿ ನಾಗರಾಜ್ ನನಗೆ ಎರಡು ಕೋಟಿ ರೂ. ಪಾರ್ಟಿ ಫಂಡ್ ಕೊಟ್ಟಿದ್ದರು. ಹಣವನ್ನು ನೇರವಾಗಿ ನನ್ನ ಕೈಗೆ ಕೊಟ್ಟಿಲ್ಲ. ಹೊಸೂರಿನ ಬ್ಯಾಂಕ್ ಅಕೌಂಟ್ ಒಂದರಿಂದ ಕೋಲಾರದ ಮುಖಂಡರೊಬ್ಬರ ಅಕೌಂಟ್‍ಗೆ ಹಣ ಹಾಕಿದ್ದರು. ಚುನಾವಣೆ ಮುಗಿದು 8 ದಿನದ ನಂತರ ನನಗೆ ಆ ಹಣ ಸಿಕ್ಕಿತ್ತು. ಆದರೆ ಆ ಹಣವನ್ನು ಎಂಟಿಬಿ ನಾಗರಾಜ್ ಸಾಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎಂಟಿಬಿ ನನಗೆ ಸಾಲ ಕೊಟ್ಟಿಲ್ಲ, ಆಪರೇಷನ್ ಕಮಲಕ್ಕೆ ದುಡ್ಡು ಕೊಟ್ಟಿದ್ದಾರೆ: ಸಿದ್ದರಾಮಯ್ಯ

    ಪಾರ್ಟಿ ಫಂಡ್‍ಗೆ ಅಂತ ಕೊಟ್ಟಿದ್ದ 2 ಕೋಟೆ ರೂಪಾಯಿಯನ್ನು ಹೊಸೂರಿನ ಅಕೌಂಟ್‍ಗೆ ಇವತ್ತು ಹಾಕಿದ್ದೇನೆ. ಎಂಟಿಬಿ ನಾಗರಾಜ್ ಅವರಿಗೆ ಹುಚ್ಚು ಹಿಡಿದಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನನ್ನು ಬಿಜೆಪಿಗೆ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡಿದರು. ನಾನು ಒಪ್ಪದಿದ್ದಾಗ 2 ಕೋಟಿ ರೂ. ಸಾಲ ಕೊಟ್ಟಿದ್ದೇನೆ ಅಂತ ಹಣ ಕೇಳುವುದಕ್ಕೆ ಶುರು ಮಾಡಿದರು. ಆತನಿಗೆ ಮಾನವೀಯತೆ ಇಲ್ಲ, ಗೌರವವೂ ಇಲ್ಲ ಎಂದು ಗುಡುಗಿದರು.

    ಎಂಟಿಬಿ ಹೇಳಿದ್ದೇನು?:
    ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮ ವೇಳೆ ಮಾತನಾಡಿದ್ದ ಎಂಟಿಬಿ ನಾಗರಾಜ್, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ ಎಂದು ತಿಳಿಸಿದ್ದರು.

    ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಲೋಕಸಭಾ ಚುನಾವಣೆಯಲ್ಲಿ ಹಣವನ್ನು ಸಾಲ ತೆಗೆದುಕೊಂಡಿದ್ದ. ಆದರೆ ಮತ್ತೆ ಅವನು ವಾಪಸ್ ಮಾಡಿದ. ಭೈರೇಗೌಡ ಬಿಟ್ಟರೆ ಬೇರೆ ಯಾರು ಹಣ ವಾಪಸ್ ಮಾಡಿಲ್ಲ. ನಾನು ಮಂಜುನಾಥ್ ಸ್ವಾಮಿ ಭಕ್ತ ಸುಳ್ಳು ಹೇಳಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ಸಿನ ಕೆಲ ನಾಯಕರು ಇದ್ದಾರೆ. ನನ್ನ ಬಳಿ ಹಣ ಪಡೆದು ವಾಪಸ್ ಮಾಡದೆ ಈಗ ನನ್ನನ್ನೇ ಸೋಲಿಸಲು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಿಡಿಕಾರಿದ್ದರು.

    ನನ್ನ ಬಳಿ 1,200 ಕೋಟಿಗೂ ಅಧಿಕ ಹಣ ಇದೆ. ನಾನು ಅಷ್ಟು ಆಸ್ತಿಯ ಒಡೆಯ. ಆದರೆ ಇದೆಲ್ಲಾ ನ್ಯಾಯವಾಗಿ ಸಂಪಾದನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ನಾವು ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ. ಸಿಎಂ ಜತೆ ಮಾತನಾಡಿ ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೆವು. ಆದರೆ ಅವರು ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡಿತ್ತಿಲ್ಲ ಅಂತ ನಮ್ಮ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದರು.

  • ಭೈರತಿ ಬಸವರಾಜ್ ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳ ಉಚ್ಛಾಟನೆ

    ಭೈರತಿ ಬಸವರಾಜ್ ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳ ಉಚ್ಛಾಟನೆ

    ಬೆಂಗಳೂರು: ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಅವರನ್ನು ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಕೆಪಿಸಿಸಿ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.

    ಕೆ.ಆರ್.ಪುರಂ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್‍ನ ಜಯಪ್ರಕಾಶ್, ದೇವಸಂದ್ರ ವಾರ್ಡ್‍ನ ಶ್ರೀಕಾಂತ್, ಎ ನಾರಾಯಣಪುರದ ಸುರೇಶ್ ಹಾಗೂ ವಿಜ್ಞಾನನಗರ ವಾರ್ಡ್‍ನ ಹೆಚ್‍ಜಿ ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ ಕಾರ್ಪೊರೇಟರ್ ಗಳು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಾಲ್ಕು ಜನ ಕಾಪೊರೇಟರ್ ಗಳನ್ನು ಉಚ್ಚಾಟನೆ ಮಾಡಿದ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಅನರ್ಹ ಶಾಸಕ ಭೈರತಿ ಬಸವರಾಜ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಭೈರತಿ ಬಸವರಾಜ್ ಸೇರಿದಂತೆ 17 ಜನ ಶಾಸಕರನ್ನು ಅನರ್ಹಗೊಳಿಸಿದ್ದರು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸಿಕ್ಕಿದೆ. ಹೀಗಾಗಿ ಅನರ್ಹ ಶಾಸಕ ಭೈರತಿ ಬಸವರಾಜ್ ಸ್ವಕ್ಷೇತ್ರ ಕೆ.ಆರ್.ಪೇಟೆಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

    ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿ ಏರ್ಪಟ್ಟಿದ್ದು, ಬಿಜೆಪಿಯಿಂದ ಭೈರತಿ ಬಸವರಾಜ್, ಕಾಂಗ್ರೆಸ್‍ನಿಂದ ನಾರಾಯಣಸ್ವಾಮಿ ಹಾಗೂ ಜೆಡಿಎಸ್‍ನಿಂದ ಕೃಷ್ಣಮೂರ್ತಿ ಸ್ಪರ್ಧಿಸುತ್ತಿದ್ದಾರೆ. ಕೆ.ಆರ್.ಪುರಂಯಲ್ಲಿ ಗೆಲುವಿಗೆ ಭರ್ಜರಿ ಪ್ಲ್ಯಾನ್ ರೂಪಿಸಿರುವ ಬಿಜೆಪಿ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ ಅವರಿಗೆ ಉಸ್ತುವಾರಿ ನೀಡಿದೆ.

  • ನಾನೊಬ್ನೇ ಇದ್ದಾಗ ಬೇಕಿದ್ರೆ ಚಪ್ಲಿಯಿಂದ ಹೊಡೀರಿ: ನಾರಾಯಣಗೌಡ

    ನಾನೊಬ್ನೇ ಇದ್ದಾಗ ಬೇಕಿದ್ರೆ ಚಪ್ಲಿಯಿಂದ ಹೊಡೀರಿ: ನಾರಾಯಣಗೌಡ

    – ಕೆ.ಆರ್.ಪೇಟೆಗೆ ಬರೋಕೆ ಮಗಳು ಹೆದರುತ್ತಾಳೆ

    ಮಂಡ್ಯ: ನಾನು ಒಬ್ಬನೇ ಇದ್ದಾಗ ಬೇಕಿದ್ದರೆ ಚಪ್ಪಲಿಯಿಂದ ಹೊಡೀರಿ ಎಂದು ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ.

    ಕೆ.ಆರ್.ಪೇಟೆಯಲ್ಲಿ ಮಾತನಾಡಿ ಅವರು, ಕೆ.ಆರ್.ಪೇಟೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‍ನವರು ನನ್ನ ಮೇಲೆ ಚಪ್ಪಲು ತೂರಿದ್ದಾರೆ. ಆಗ ನನ್ನ ಕುಟುಂಬವಿತ್ತು. ಒಂದು ವೇಳೆ ನಾವು ಗುಂಪಿನ ಕಡೆಗೆ ಹೋಗಿದ್ದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತಿತ್ತು. ಇದರಿಂದ ನನ್ನ ಮಗಳು ತುಂಬಾ ಭಯಗೊಂಡಿದ್ದಾಳೆ. ಕೆ.ಆರ್.ಪೇಟೆಗೆ ಬರಲು ಹೆದುರುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ನಾಮಪತ್ರ ಸಲ್ಲಿಸುವ ದಿನ ತಹಶೀಲ್ದಾರ್ ಕಚೇರಿಗೆ ಚಿನಕುರುಳಿ, ಪಾಂಡವಪುರ, ಚನ್ನರಾಯಪಟ್ಟಣದಿಂದ ಜನರು ಬಂದಿದ್ದರು. ಹೊಡೆಯುವುದಾದರೆ ನಾನು ಒಬ್ಬ ಇದ್ದಾಗ ಬಂದು ಹೊಡೆಯಲಿ, ಫ್ಯಾಮಿಲಿ ಇದ್ದಾಗ ಈ ರೀತಿ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

    ಪಾಂಡವಪುರದ ಕೆಲವರು ಫೋನ್ ಮಾಡಿ ಹುಡುಗರು ಬೇಕಾ ಅಂತ ಕೇಳುತ್ತಿದ್ದರು. ಆದರೆ ನಾನು ಬೇಡ ಎಂದು ತಿಳಿಸುತ್ತಿದ್ದೆ. ಏಕೆಂದರೆ ಕೆ.ಆರ್.ಪೇಟೆ ಉಪ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು ಎಂದು ನಾರಾಯಣಗೌಡ ತಿಳಿಸಿದರು.

  • ಲಂಡನ್‍ನಲ್ಲಿ ವಿದ್ಯಾಭ್ಯಾಸ, ಈಗ ಹರ್ಯಾಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಚುನಾವಣೆಗೆ ನಿಂತ ಮುಸ್ಲಿಂ ಮಹಿಳೆ

    ಲಂಡನ್‍ನಲ್ಲಿ ವಿದ್ಯಾಭ್ಯಾಸ, ಈಗ ಹರ್ಯಾಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಚುನಾವಣೆಗೆ ನಿಂತ ಮುಸ್ಲಿಂ ಮಹಿಳೆ

    ಚಂಡೀಗಢ: ಲಂಡನ್‍ನಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಮುಸ್ಲಿಂ ಮಹಿಳೆ ಹರ್ಯಾಣ ಅಭಿವೃದ್ಧಿಗೆ ಪಣತೊಟ್ಟಿದ್ದು, ಮುಸ್ಲಿಂ ಪ್ರಾಬಲ್ಯವುಳ್ಳ ಮೇವತ್ ಜಿಲ್ಲೆಯ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ನೌಕ್ಷಮ್ ಚೌಧರಿ(27) ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಚುನಾವಣಾ ಕಣಕ್ಕಿಳಿದಿದ್ದಾರೆ. ನೌಕ್ಷಮ್ ಅವರ ತಂದೆ ನಿವೃತ್ತ ನ್ಯಾಯಾಧೀಶರಾಗಿದ್ದು, ತಾಯಿ ಹರ್ಯಾಣ ತೆರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೌಕ್ಷಮ್ ಅವರು ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಇತಿಹಾಸ ವಿಷಯ ಸಂಬಂಧ ಪದವಿ ಮುಗಿಸಿದ್ದಾರೆ. ಬಳಿಕ ಇಟಲಿಯಲ್ಲಿ ಲಕ್ಷುರಿ ಬ್ರ್ಯಾಂಡ್ ನಿರ್ವಹಣೆ ಹಾಗೂ ಲಂಡನ್‍ನಲ್ಲಿ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆಯಷ್ಟೇ ನೌಕ್ಷಮ್ ಭಾರತಕ್ಕೆ ಹಿಂತಿರುಗಿದ್ದು, ಆಗಲೇ ಅ.21ಕ್ಕೆ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೊಂದಿರುವ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯ ಕಡಿಮೆಯಿದೆ. ಆದರೂ ಒಂದು ಮಹಿಳೆ ಧೈರ್ಯದಿಂದ ಬಿಜೆಪಿಯಿಂದಲೇ ಟಿಕೆಟ್ ಪಡೆದು, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಇಚ್ಛಿಸಿರುವುದು ಎಲ್ಲರ ಗಮನ ಸೆಳೆದಿದೆ.

    2018ರ ನೀತಿ ಆಯೋಗದ ವರದಿ ಪ್ರಕಾರ, ಮೇವತ್ ಜಿಲ್ಲೆ ಭಾರತದಲ್ಲಿ ತೀವ್ರ ಹಿಂದುಳಿದ ಜಿಲ್ಲೆಯಾಗಿದೆ. ಯಾಕೆಂದರೆ ಇಲ್ಲಿ ರಸ್ತೆ, ಕಸ ವಿಲೇವಾರಿ ಹಾಗೂ ಇತರೆ ಮೂಲಭೂತ ಸೌಕರ್ಯವಿಲ್ಲ. ಅಲ್ಲದೆ ಇಲ್ಲಿನ ಮಹಿಳೆಯರು ಹಾಗೂ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಈ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಎಂದು ಘೋಷಿಸಲಾಗಿದೆ.

    ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ, ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನೌಕ್ಷಮ್ ಇಲ್ಲಿ ಚುನಾವಣೆಗೆ ನಿಂತಿರುವುದಾಗಿ ಹೇಳಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ನಾನು ಇಲ್ಲಿ ಚುನಾವಣೆಗೆ ನಿಂತಿದ್ದೇನೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿ ಕಾರ್ಯ ಬೇಗನೆ ಆಗುತ್ತದೆ. ಆದ್ದರಿಂದ ಈ ಬಾರಿ ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನಾನು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹೆಸರು ಪಡೆದಿದ್ದೇನೆ. ವಿಶ್ವದ ಪ್ರತಿಷ್ಠಿತ ಬ್ರಾಂಡ್‍ಗಳಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ನನಗೆ ನನ್ನ ದೇಶ ಅಭಿವೃದ್ಧಿಗೊಳ್ಳಬೇಕು, ಹರ್ಯಾಣ ಅಭಿವೃದ್ಧಿಯಾಗಬೇಕು ಎಂಬ ಆಸೆ. ಆದ್ದರಿಂದ ಆದಾಯ ತರುವ ಕೆಲಸ ಬಿಟ್ಟು ಜನಸೇವೆ ಮಾಡಲು ಬಂದಿದ್ದೇನೆ ಎಂದು ನೌಕ್ಷಮ್ ತಿಳಿಸಿದ್ದಾರೆ.

    ನೌಕ್ಷಮ್ ಅವರಿಗೆ ಪ್ರತಿಸ್ಪರ್ಧಿಯಾಗಿ 2009ರಲ್ಲಿ ಪುನ್ಹಾನ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಮೊಹಮದ್ ಲಿಯಾಸ್ ಚುನಾವಣೆಗೆ ನಿಂತಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಬೆಂಬಲಿಗರನ್ನು ಹೊಂದಿರುವ ವಿಶ್ವಾಸದಿಂದ ಲಿಯಾಸ್ ಅವರು ನೌಕ್ಷಮ್ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲವಿಲ್ಲ. ಇಲ್ಲಿ ಕಾಂಗ್ರೆಸ್ ಬೆಂಬಲ ಹೆಚ್ಚಿದೆ. ಈ ಬಾರಿ ನಾವೇ ಗೆಲ್ಲುತ್ತೇವೆ ಎಂದು ಲಿಯಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ರೋಡ್ ಶೋ ವೇಳೆ ಉಲ್ಲಂಘನೆ – ತೇಜಸ್ವಿ ಸೂರ್ಯ ವಿರುದ್ಧ ದೂರು

    ರೋಡ್ ಶೋ ವೇಳೆ ಉಲ್ಲಂಘನೆ – ತೇಜಸ್ವಿ ಸೂರ್ಯ ವಿರುದ್ಧ ದೂರು

    ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.

    ಸಾಮಾಜಿಕ ಕಾರ್ಯಕರ್ತ ಯೋಗಾನಂದ್ ಅವರು ತೇಜಸ್ವಿ ಸೂರ್ಯ ವಿರುದ್ಧ ಬೆಂಗಳೂರು ದಕ್ಷಿಣ ಚುನಾವಣಾ ಅಧಿಕಾರಿಗೆ ದೂರು ದಾಖಲಿಸಿದ್ದಾರೆ. ತೇಜಸ್ವಿ ಸೂರ್ಯ ಪ್ರಚಾರ ವಾಹನದಲ್ಲಿ ಎಲ್‍ಇಡಿ ಲೈಟ್ ಬಳಕೆ ಆಗಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಅನ್ವಯ ಪ್ರಚಾರ ವಾಹನಕ್ಕೆ ಎಲ್‍ಇಡಿ ಲೈಟ್ ಅಳವಡಿಕೆ ಮಾಡುವಂತಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪ, ಅಮಿತ್ ಶಾ ಭಾಗವಹಿಸಿದ್ದ ರೋಡ್ ಶೋ ವೇಳೆ ಎಲ್‍ಇಡಿ ದೀಪ ಬಳಕೆ ಆಗಿತ್ತು. ಹಾಗಾಗಿ ಯೋಗಾನಂದ್ ಅವರು ತೇಜಸ್ವಿ ವಿರುದ್ಧ ದೂರು ನೀಡಿದ್ದಾರೆ.

  • ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    – ಸಿಎಂ ಇಬ್ರಾಹಿಂ ವಿದೂಷಕ

    ಮೈಸೂರು: ಮುಸ್ಲಿಂ ಮತಗಳು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಬಾರದಿತ್ತು. ಅವರ ಮತ ಬೇಡ ಇವರ ಮತ ಬೇಡ ಅನ್ನಬಾರದು ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಈಶ್ವರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದ್ರು.

    ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೋಸ್ತಿ ವರ್ಸಸ್ ಬಿಜೆಪಿ ಆಗಬೇಕಿತ್ತು. ದೋಸ್ತಿ ವರ್ಸಸ್ ದೋಸ್ತಿ ಆಗಿದೆ ಎಂದು ವ್ಯಂಗ್ಯವಾಡಿದ್ರು.

    ರಾಜ್ಯದಲ್ಲಿ ದೋಸ್ತಿಗಳು ಹೇಗಿದ್ದಾರೆ ಎಂದು ಗೊತ್ತಿದೆ. ಮಂಡ್ಯದಲ್ಲಿ ದೋಸ್ತಿ ವರ್ಸಸ್ ಸುಮಲತಾ ಆಗಿದೆಯಾ ಎಂದು ಪ್ರಶ್ನಿಸಿದ್ರು. ಅಲ್ಲದೆ ಎಂಟು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ನೀವು ಹೇಗೆ ಅಧಿಕಾರ ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಎಷ್ಟರ ಮಟ್ಟಿಗೆ ನಿಮ್ಮ ನಡುವೆ ಸಮನ್ವಯ ಇದೆ ಎಂಬುದೂ ಗೊತ್ತಿದೆ ಎಂದು ಹೇಳಿದ್ರು.

    ದಾವೂದ್ ಇಬ್ರಾಹಿಂಗೂ ಸಿ.ಎಂ. ಇಬ್ರಾಹಿಂಗೂ ಏನಾದರೂ ವ್ಯತ್ಯಾಸ ಇದೆಯಾ ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ಇಬ್ರಾಹಿಂ ಒಬ್ಬ ಕ್ರಿಮಿನಲ್ ಪಾಲಿಟಿಷಿಯನ್. ಇಬ್ರಾಹಿಂ ಒಬ್ಬ ವಿದೂಷಕನಾಗಿದ್ದಾರೆ. ದಾವೂದ್ ಇಬ್ರಾಹಿಂ ಅದರೂ ಅಂಡರ್ ವಲ್ರ್ಡ್ ಡಾನ್. ಆದರೆ ಇಬ್ರಾಹಿಂ ಯಾರು ಅಂದ್ರೆ ಸಿದ್ದರಾಮಯ್ಯ ಆಸ್ಥಾನದ ಒಬ್ಬ ವಿದೂಷಕ ಎಂದು ಸಿಎ.ಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದ್ರು.


    ಅನಂತ್‍ಕುಮಾರ್ ಹೆಗ್ಡೆ ಸಂವಿಧಾನದದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತಾಡಿದ್ದರು. ಆ ಮಾತಿಗೆ ಅವರು ಸಂಸತ್ ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.