Tag: bjp activist

  • ಗುರುಗಳ ಬಳಿ ಭಕ್ತರೇ ಹೋಗಬೇಕು, ಭಕ್ತರ ಬಳಿ ಗುರುಗಳು ಹೋಗಬಾರದು: ಶಿವಲಿಂಗ ಸ್ವಾಮೀಜಿಗೆ ತರಾಟೆ

    ಗುರುಗಳ ಬಳಿ ಭಕ್ತರೇ ಹೋಗಬೇಕು, ಭಕ್ತರ ಬಳಿ ಗುರುಗಳು ಹೋಗಬಾರದು: ಶಿವಲಿಂಗ ಸ್ವಾಮೀಜಿಗೆ ತರಾಟೆ

    ಹಾವೇರಿ: ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ವಾಮೀಜಿ ಹಿರೆಕೇರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಂಬಿಕೆ ದ್ರೋಹಿ ಅಧಿಕಾರದ ಆಸೆಗಾಗಿ ಸುಳ್ಳು ಹೇಳುವ ಸ್ವಾಮೀಜಿ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಪುತ್ರನ ಸಂಧಾನ ವಿಫಲ – ಸ್ಪರ್ಧೆಗೆ ನಿಲ್ತೀನಿ ಎಂದ ಸ್ವಾಮೀಜಿ

    ನಮ್ಮ ರಟ್ಟಿಹಳ್ಳಿ ಗುರುಗಳನ್ನು ಬಿಡದ ಡಿಕೆಶಿ ಮತ್ತು ಕುಮಾರಸ್ವಾಮಿ ಹೊಲಸು ಬುದ್ಧಿ ಎಂದು ಒಬ್ಬರು ಪೋಸ್ಟ್ ಹಾಕಿದ್ದಾರೆ. ಮತ್ತೊಬ್ಬರು ನಾಡಿನ ಅನೇಕ ಮಠಾಧೀಶರು ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲೆಂದು ಹರಸುತ್ತಿರುವಾಗ ನಮ್ಮ ತಾಲೂಕಿನ ಶ್ರೀಗಳ ನಡೆ ಬೇಸರ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

    ಮತ್ತೊಬ್ಬರು ತಮ್ಮ ಪೋಸ್ಟ್ ನಲ್ಲಿ ಸಮಾಜದಲ್ಲಿ ಗುರು-ಸ್ಥಾನ ಹೊಂದಿ ಸರ್ವ ಸಮಾಜದ ಭಕ್ತರಿಗೆ ಆಶೀರ್ವಾದ ಮಾಡುವವರು ಇಂದು ಭಕ್ತರ ಹತ್ತಿರ ಆಶೀರ್ವಾದ ಮಾಡಿ ಎಂದು ಕೇಳಲು ಬರುವುದು ನೋವಿನ ಸಂಗತಿ ಎಂದು ಹಿರೆಕೇರೂರಿನ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಚುನಾವಣೆಗೆ ನಿಲ್ಲಬೇಡಿ ಎಂದು ಬಿ.ವೈ ರಾಘವೇಂದ್ರ ಬೇಡಿಕೊಂಡಿದ್ದರು. ಬಿಸಿ ಪಾಟೀಲ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾಸ್ಟರ್‍ಪ್ಲಾನ್ ಮಾಡಿದ್ದಾರೆ. ವೀರಶೈವ ಲಿಂಗಾಯತರ ವೋಟು ಒಡೆಯಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರಣತಂತ್ರ ರೂಪಿಸಿದ್ದಾರೆ. ಹಾಗಾಗಿ ಕಾರ್ಯಕರ್ತರು ಸ್ವಾಮೀಜಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

  • ನಾನು ಸತ್ತರೆ ಯತ್ನಾಳ್, ಪಿಎಸ್‌ಐ ಕಾರಣ: ಬಿಜೆಪಿ ಕಾರ್ಯಕರ್ತನ ಪೋಸ್ಟ್

    ನಾನು ಸತ್ತರೆ ಯತ್ನಾಳ್, ಪಿಎಸ್‌ಐ ಕಾರಣ: ಬಿಜೆಪಿ ಕಾರ್ಯಕರ್ತನ ಪೋಸ್ಟ್

    -ಯತ್ನಾಳ್, ಅಪ್ಪು ಜಟಾಪಟಿ

    ವಿಜಯಪುರ: ನಾನು ಸತ್ತರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಪಿಎಸ್‌ಐ ಶರಣಗೌಡ ಪಾಟೀಲ್ ಕಾರಣ ಎಂದು ಬಾಬು ಜಗದಾಳೆ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಪಿಎಸ್‌ಐ ಶರಣಗೌಡರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನನ್ನು ಥಳಿಸಿದ್ದಾರೆ. ಪಿಎಸ್‌ಐ ಶರಣಗೌಡ ಮತ್ತು ಶಾಸಕ ಯತ್ನಾಳ್ ಕಡೆಯವರು ಅಪಘಾತ ಮಾಡಿ ಕೊಲೆಗೈಯಲು ಸಂಚು ರೂಪಿಸಿದ್ದಾರೆ. ನನಗೆ ನ್ಯಾಯ ಬೇಕು ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    https://www.facebook.com/kiran.jagadale.355/videos/1296230770561539/

    ಬಾಬು ಜಗದಾಳೆ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಪ್ತ ಕೂಡ ಹೌದು. ಇದೇ ಕಾರಣಕ್ಕೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಯತ್ನಾಳ್ ವಿರುದ್ಧ ಬಾಬು ಪೋಸ್ಟ್ ಹಾಕುತ್ತಿದ್ದರು. ಅಲ್ಲದೆ ಯತ್ನಾಳ್ ಬಿಜೆಪಿ ಸೇರ್ಪಡೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು.

    ಕೆಲವು ದಿನಗಳ ಹಿಂದೆ ವಿಜಯಪುರ ನಗರದ ರಸ್ತೆ ದುರಸ್ಥಿ ಬಗ್ಗೆ ಯತ್ನಾಳ್ ವಿರುದ್ಧ ಬಾಬು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದೇ ಕಾರಣಕ್ಕೆ ಯತ್ನಾಳ್ ಪೊಲೀಸ್ ಠಾಣೆಗೆ ಬಾಬುನನ್ನು ಕರೆಸಿ ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ.

    ಪಿಎಸ್‌ಐ ಶರಣಗೌಡ ಹಾಗೂ ಯತ್ನಾಳ್ ಈ ರೀತಿ ಮಾಡಿದ್ದು ತಪ್ಪು. ನನಗೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿರೋಧಿ ಪೋಸ್ಟ್ ಗಳು ಬರುತ್ತವೆ. ಹಾಗಂತ ಅಧಿಕಾರ ಇದ್ದಾಗ, ಇಲ್ಲದಿದ್ದಾಗ ನಾನೆಂದೂ ಅವರ ವಿರುದ್ಧ ಏನು ಮಾಡಿಲ್ಲ. ಯತ್ನಾಳ್ ಅವರು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸಿದ್ದರೆ ತಪ್ಪು. ಅಲ್ಲದೆ ಪೊಲೀಸರು ಕೂಡ ಈ ರೀತಿ ಯಾರದೋ ಒತ್ತಡಕ್ಕೆ ಹೀಗೆ ಮಾಡಬಾರದು ಎಂದು ಮಾಜಿ ಸಚಿವ ಅಪ್ಪಾಸಹೇಬ ಪಟ್ಟಣಶೆಟ್ಟಿ ತಮ್ಮ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.

    ನಾನೇನು ಸ್ಟಾರ್ ಕ್ಯಾಂಪೇನರ್ ಅಲ್ಲ. ಪಕ್ಷ ಮಹಾರಾಷ್ಟ್ರ ಚುನಾವಣೆಯ ಜವಾಬ್ದಾರಿ ನೀಡಿತ್ತು. ಅದನ್ನು ನಿಭಾಯಿಸಿದ್ದೆನೆ ಅಷ್ಟೆ. ನಾವು ಹೋದ ಕಡೆಯಲ್ಲೆಲ್ಲ ಬಹುತೇಕ ಬಿಜೆಪಿ ಜಯಗಳಿಸಿದೆ. ಯತ್ನಾಳ್ ಸ್ವಪಕ್ಷೀಯರ ವಿರುದ್ಧವೇ ಮಾತನಾಡುವುದು ತಪ್ಪು. ಇದನ್ನು ಪಕ್ಷದ ಹಿರಿಯರು ಗಮನಿಸುತ್ತಿದ್ದಾರೆ ಎಂದು ಯತ್ನಾಳ್ ಗೆ ಮತ್ತೆ ಟಾಂಗ್ ನೀಡಿದ್ದಾರೆ.

    ಯತ್ನಾಳ್ ಹಾಗೂ ಅಪ್ಪು ಜಗಳ ಇದೀಗ ತಾರಕಕ್ಕೇರಿದ್ದು, ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಅಲ್ಲದೆ ಇವರಿಬ್ಬರ ಜಗಳದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ.

  • ಬಿಎಸ್‍ವೈ ಆಯ್ತು ಈಗ ಅವರ ಬೆಂಬಲಿಗರು ಕೂಡ ಟಾರ್ಗೆಟ್

    ಬಿಎಸ್‍ವೈ ಆಯ್ತು ಈಗ ಅವರ ಬೆಂಬಲಿಗರು ಕೂಡ ಟಾರ್ಗೆಟ್

    -ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ
    -ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ

    ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ ನಡಿಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಸಿಎಂ ಯಡಿಯೂರಪ್ಪ ಅಷ್ಟೇ ಅಲ್ಲ ಸಿಎಂ ಬೆಂಬಲಿಗರನ್ನೂ ಕೂಡ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಯಡಿಯೂರಪ್ಪನವರ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ. ಹಾಗೆಯೇ ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸಿಎಂ ಬೆಂಬಲಿಗ ನಂಜುಂಡಸ್ವಾಮಿ ಆರೋಪಿಸಿದ್ದಾರೆ. ಬಹಿರಂಗವಾಗಿ ವೀಡಿಯೋದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ನಂಜುಂಡಸ್ವಾಮಿ, ಸಿಎಂ ಬೆಂಬಲಿಗರು ಎಂಬ ಕಾರಣಕ್ಕೆ ತಮ್ಮ ಪಕ್ಷದಲ್ಲಿ ಭೇದಭಾವ ಮಾಡಲಾಗುತ್ತಿದೆ ಎಂದು ಹೇಳಿಕೊಂಡರು.

    ಲಿಂಗಾಯತರು, ಯಡಿಯೂರಪ್ಪನವರು ಆಪ್ತರೆಂದು ನಮಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ನಂಜುಂಡಸ್ವಾಮಿ ಬಹಿರಂಗ ಆರೋಪಿ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಬಿಜೆಪಿ ಕಚೇರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    14 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ, ಆದ್ರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಆದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಬೆಳೆಸಿದರು. ಆದರೆ ಪ್ರಸ್ತುತವಾಗಿ ಬಂದಿರುವ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡಿಕೊಂಡು ಸುಮಾರು 5ರಿಂದ 6 ಮಂದಿ ಕೆಲಸಗಾರರನ್ನು ತೆಗೆದು ಹಾಕಿದ್ದಾರೆ. ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಾರೆ. 14 ವರ್ಷ ನಾವು ದುಡಿದ ಶ್ರಮ ಎಲ್ಲಿ ಹೋಯ್ತು? ಬಿಎಸ್‍ವೈ ಬೆಂಬಲಿಗರು ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಎಲ್ಲಾ ಜಾತಿಯ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಿಬಿಡುತ್ತೆ. ಉತ್ತರ ಕರ್ನಾಟಕ ನೆರೆ ಪರಿಹಾರ ಕೊಡಬೇಕು ಎಂದು ಬಿಎಸ್‍ವೈ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತ ಕಿಡಿಕಾರಿದರು.

    ವಿಧಾನಸೌಧ, ವಿಧಾನಸಭೆಯಲ್ಲಿ ಯಾರೂ ಕೂಡ ಯಡಿಯೂರಪ್ಪ ಅವರನ್ನ ಬೈಯ್ಯುತ್ತಲ್ಲ. ಆದರೆ ನಮ್ಮ ಪಕ್ಷದಲ್ಲಿ ಸೇರಿಕೊಂಡಿರುವ ಕೆಲವು ಹುಳಗಳು ಸಿಎಂನಾ ಮೂಲೆಗುಂಪು ಮಾಡಲು ಪ್ಲಾನ್ ಹಾಕಿದ್ದಾರೆ ಎಂದರು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡ ಎಚ್ಚರಿಸಿದ್ದಾರೆ. ನೀವು ಹೀಗೆ ಕಚೇರಿಯಲ್ಲಿ ತಾರತಮ್ಯ ಮಾಡುತ್ತೀರಿ, ಲಿಂಗಾಯರು ಎಂದು ಬೇಧ ಮಾಡಿದರೆ ನಿಜವಾಗಿಯೂ ಮುಂದಿನ ಚುವಾವಣೆಯಲ್ಲಿ 40%ದಷ್ಟು ಕೂಡ ಮತ ಬೀಳಲ್ಲ. ಬಿಎಸ್‍ವೈ ಪಕ್ಷ ಕಟ್ಟಿದ್ದಾಗ ಬಿಜೆಪಿ ಸ್ಥಿತಿ ಹೇಗಿತ್ತು ಈಗ ಹೇಗಿದೆ ಎನ್ನುವುದನ್ನು ಮರೆಯಬೇಡಿ. ನೀವು ಹೀಗೆ ತಾರತಮ್ಯ ಮಾಡುತ್ತಿದ್ದರೆ ಬಜೆಪಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸೀಟು ಗೆಲ್ಲಲ್ಲ ಎಂದರು.

    ಹಾಗೆಯೇ ಅಮಿತ್ ಶಾ ಅವರ ಬಗ್ಗೆ ಮಾತನಾಡಿ, ನೀವು ನೆರೆ ವೀಕ್ಷಣೆಗೆ ಬಂದು ಕರ್ನಾಟಕದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ. ಆದರೂ ಪರಿಹಾರ ಬಿಡುಗಡೆ ಮಾಡಲು ಏಕೆ ತಡಮಾಡಿದ್ದೀರಾ? ಬೇರೆ ರಾಜ್ಯಗಳಿಗೆ ಎಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈವರೆಗೂ ಬಿಎಸ್‍ವೈ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇದನ್ನು ನಳಿನ್ ಕುಮಾರ್ ಕಟೀಲ್ ತಿಳಿದುಕೊಳ್ಳಬೇಕು. ಯಡಿಯೂರಪ್ಪ ಇದ್ರೆ ಬಿಜೆಪಿ, ಈಗ ಅವರು ಬೇಡ ಎಂದು ಬೇರೆಯವರು ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಮೋದಿ ಅವರೊಬ್ಬರನ್ನೇ ನೋಡಿ ಬಿಜೆಪಿಗೆ ಜನ ಮತ ಹಾಕಿಲ್ಲ. ಕನಾಟಕದಲ್ಲಿ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ. ಮೋದಿ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

  • ಸಾವಿರ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು: ಬಿಜೆಪಿ ಮುಖಂಡನಿಂದ ಅಧಿಕಾರಿಗೆ ಅವಾಜ್

    ಸಾವಿರ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು: ಬಿಜೆಪಿ ಮುಖಂಡನಿಂದ ಅಧಿಕಾರಿಗೆ ಅವಾಜ್

    ಶಿವಮೊಗ್ಗ: ಜಿಲ್ಲೆಯ ಶಂಕರ ವಲಯ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗೆ ಬಿಜೆಪಿ ಯುವ ಮುಖಂಡನೋರ್ವ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗಾಜನೂರಿನ ಗಣಪತಿ ದೇವಸ್ಥಾನದ ಮುಂಭಾಗದಲ್ಲಿದ್ದ ಮಾವಿನ ಮರವನ್ನು ತುಂಗಾ ಮೇಲ್ದಂಡೆ ಯೋಜನೆಯ ಎಇಇ ಕುಮಾರಸ್ವಾಮಿ ಎಂಬವರು ಕಡಿಸಿದ್ದರು. ಈ ಸಂಬಂಧ ಎಇಇ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿತ್ತು.

    ಇದರಿಂದ ಸಿಟ್ಟಿಗೆದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್, ವಲಯ ಅರಣ್ಯಾಧಿಕಾರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾನೆ. ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ, ‘ನೀನು ಸಸ್ಪೆಂಡ್ ಆಗುವುದು ಗ್ಯಾರಂಟಿ. ಮನೆಗೆ ನುಗ್ಗುತ್ತೇವೆ. ನಾನು ಸಾವಿರ ಮರ ಕಡಿಯುತ್ತೇನೆ, ಏನು ಮಾಡ್ತೀಯಾ ಮಾಡು. ನಮ್ಮದೇ ಸರ್ಕಾರ ಇರೋದು ಸರ್ಕಾರಿ ಸಂಬಳಕ್ಕೆ ಕೆಲಸ ಮಾಡುತ್ತಿರುವ ನಿನಗೆ ಇಷ್ಟೊಂದು ಕೊಬ್ಬಾ’ ಎಂದು ಅವಾಜ್ ಹಾಕಿದ್ದಾನೆ.

    ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಬಿಜೆಪಿ ಯುವ ಮುಖಂಡನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತುಂಗಾ ನಗರ ಠಾಣೆಯಲ್ಲಿ ಬೆದರಿಕೆ ಹಾಗು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಬಿಜೆಪಿ ಯುವ ಮುಖಂಡ ಗಿರಿರಾಜ್ ವಿರುದ್ಧ ದೂರು ದಾಖಲಾಗಿದೆ.

  • ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಈಶ್ವರಪ್ಪ ಮಗಳ ಮೊಬೈಲ್ ಪತ್ತೆ

    ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಈಶ್ವರಪ್ಪ ಮಗಳ ಮೊಬೈಲ್ ಪತ್ತೆ

    ಬಾಗಲಕೋಟೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮಗಳ ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.

    ನನ್ನ ಮೊಬೈಲ್ ಕಳೆದು ಹೋಗಿತ್ತು ಎಂದು ಈಶ್ವರಪ್ಪ ಅವರ ಮಗಳು ಕೆ ಶಾಂತಾ ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಮೊಬೈಲ್ ಈಗ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಪತ್ತೆಯಾಗಿದೆ.

    ಈಶ್ವರಪ್ಪ ಅವರ ಬೆಂಗಳೂರು ಗಾಂಧಿಭವನದ 41 ನಂ ನಿವಾಸದಿಂದ ಸೆಷ್ಟೆಂಬರ್ 13 ರಂದು ಅವರ ಪುತ್ರಿ ಕೆ ಶಾಂತಾರ ಮೊಬೈಲ್ ಕಳುವಾಗಿತ್ತು. ಇದನ್ನು ಹುಡುಕಿಕೊಡಿ ಎಂದು ಕೆ ಶಾಂತಾ ಪೊಲೀಸರಿಗೆ ದೂರು ನೀಡಿದ್ದರು. ಶಾಂತಾ ಅವರ ಮೊಬೈನನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಬಾಗಲಕೋಟೆಯ ಬಂಟನೂರು ಗ್ರಾಮದಲ್ಲಿ ಇದೆ ಎಂದು ತಿಳಿದುಬಂದಿತ್ತು.

    ಈ ಮಾಹಿತಿಯನ್ನು ಬೆಂಗಳೂರು ನಾರ್ತ್ ಈಸ್ಟ್ ಪೊಲೀಸರು ಲೋಕಾಪುರ ಪೊಲೀಸರಿಗೆ ನೀಡಿದ್ದರು. ಮಾಹಿತಿ ಮೇರೆಗೆ ಆ ಗ್ರಾಮಕ್ಕೆ ಹೋದ ಅವರು ಲಕ್ಷ್ಮಣ ಬಂಡಿವಡ್ಡರ್ ಮನೆಯಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೋಯಿತು. ಓರ್ವ ಕಾರ್ಯಕರ್ತನಾಗಿ ಹೋಗಿ ಸಚಿವರ ಮಗಳ ಮೊಬೈಲ್ ಕದ್ದುಕೊಂಡು ಬಂದಿದ್ದನೋ ಎಂಬ ಅನುಮಾನಗಳು ಮೂಡುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    ಮಂಡ್ಯ: ಕೋಡಿ ಮಠದ ಶ್ರೀಗಳ ಹೇಳಿಕೆ ಖಂಡಿಸಿ ಮಂಡ್ಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಅವರು ಸವಾಲು ಹಾಕಿದ್ದಾರೆ.

    ನಿಮ್ಮ ಭವಿಷ್ಯ ನಿಜವಾದರೆ ಹೆಬ್ಬೆರಳು ಕಟ್ ಮಾಡಿಕೊಂಡು ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ. ಒಂದು ವೇಳೆ ಸರ್ಕಾರ ಅವಧಿ ಪೂರ್ಣಗೊಳಿಸಿದರೆ ಶ್ರೀಗಳು ನನ್ನನ್ನು ಮಠದ ಶಿಷ್ಯನಾಗಿ ಸ್ವೀಕರಿಸುವಂತೆ ಆಗ್ರಹಿಸಿದ್ದಾರೆ.

    ಕಾರ್ಯಕರ್ತನ ಸವಾಲೇನು..?
    ನಿನ್ನೆ ಕೋಡಿ ಮಠದ ಸ್ವಾಮಿಗಳು ಇನ್ನು 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು. ಒಂದು ವೇಳೆ 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾದರೆ ಹಿಂದೆ ಏಕಲವ್ಯ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ಯಾವ ರೀತಿ ದಾನವಾಗಿ ನೀಡಿದ್ದಾನೋ ಅದೇ ರೀತಿ ನನ್ನ ಬಲಗೈ ಹೆಬ್ಬೆರಳನ್ನು ಸ್ವಾಮೀಜಿಗಳಿಗೆ ದಾನವಾಗಿ ಕೊಡುತ್ತೇನೆ. ಒಂದು ವೇಳೆ ಬಿಜೆಪಿ ಪೂರ್ಣಾವಧಿ ಸರ್ಕಾರ ಮಾಡಿದರೆ ಬೇರೇನೂ ಬೇಡ ನಿಮ್ಮ ಶಿಷ್ಯನಾಗಿ ನನ್ನನ್ನು ಸ್ವೀಕರಿಸಬೇಕಾಗಿ ಸ್ವಾಮೀಜಿ ಹಾಗೂ ಮಠದ ಭಕ್ತನಾಗಿ ಮನವಿ ಮಾಡಿಕೊಂಡರು.

    ಶ್ರೀಗಳು ಹೇಳೀದ್ದೇನು..?
    ಗುರುವಾರ ಹಾವೇರಿಯಲ್ಲಿ ಮಾತನಾಡಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದರು. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ. 18 ತಿಂಗಳ ನಂತರ ಮತ ಭಿಕ್ಷೆ ಎಂದು ನಾನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಕೋಡಿಹಳ್ಳಿ ಮಠದ ಶ್ರೀ ಭವಿಷ್ಯ ಹೇಳಿದ್ದರು.

  • ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಕಲಬುರಗಿ: ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 28 ವರ್ಷದ ಪ್ರಶಾಂತ್ ಕೊಟರಗಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯವರ ಜೊತೆ ಜಗಳಮಾಡಿಕೊಂಡು ಸ್ನೇಹಿತರೊಡೆನೆ ಪಾರ್ಟಿಗೆ ತೆರಳಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

    ಕೌಟುಂಬಿಕ ಕಾರಣದ ಹಿನ್ನಲೆ ಮನೆಯಲ್ಲಿ ಜಗಳ ಮಾಡಿಕೊಂಡ ಪ್ರಶಾಂತ್ ಕೊಟರಗಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಪಾರ್ಟಿ ಮಾಡಲು ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲ ಸೇರಿ ಕಂಠ ಪೂರ್ತಿ ಮದ್ಯಸೇವನೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರು ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಪ್ರಶಾಂತ್ ಕೊಟರಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.

  • ಪ್ರತಾಪ್ ಸಿಂಹ ವಿಜಯೋತ್ಸವ – ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕಾರ್ಯಕರ್ತರ ಸ್ಟೆಪ್

    ಪ್ರತಾಪ್ ಸಿಂಹ ವಿಜಯೋತ್ಸವ – ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕಾರ್ಯಕರ್ತರ ಸ್ಟೆಪ್

    ಮಡಿಕೇರಿ: ನೂತನ ಸಂಸದ ಪ್ರತಾಪ್ ಸಿಂಹ ಗೆಲುವನ್ನು ಸಂಭ್ರಮಿಸಲು ಬಿಜೆಪಿ ಕಾರ್ಯಕರ್ತರು ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಪ್ರತಾಪ್ ಸಿಂಹ ಮೊದಲ ಭೇಟಿ ಹಿನ್ನೆಲೆಯಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ. ಈ ವೇಳೆ ಕಾಯರ್ಕಕರ್ತರು ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದ್ದಾರೆ.

    ಸೋಮವಾರಪೇಟೆಯ ಕಕ್ಕೆಹೊಳೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ನೂರಾರು ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪ್ರತಾಪ್ ಸಿಂಹ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದು ಸಂಸದರಿಗೆ, ಹಾಸನದ ಪರಾಚಿತ ಬಿಜೆಪಿ ಅಭ್ಯರ್ಥಿ ಎ. ಮಂಜು ಸಾಥ್ ನೀಡಿದ್ದರು. ಮೆರವಣಿಗೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಭಾಗಿಯಾಗಿದ್ದರು.

  • ಬಾಲಕಿಯ ಮೇಲೆ 60 ವರ್ಷದ ಬಿಜೆಪಿ ಕಾರ್ಯಕರ್ತನಿಂದ ನಿರಂತರ ಅತ್ಯಾಚಾರ!

    ಬಾಲಕಿಯ ಮೇಲೆ 60 ವರ್ಷದ ಬಿಜೆಪಿ ಕಾರ್ಯಕರ್ತನಿಂದ ನಿರಂತರ ಅತ್ಯಾಚಾರ!

    ಬಳ್ಳಾರಿ: ಅಪ್ರಾಪ್ತ ಬಾಲಕಿಯ ಮೇಲೆ 60 ವರ್ಷದ ಬಿಜೆಪಿ ಕಾರ್ಯಕರ್ತನೊಬ್ಬ ನಿರಂತರ ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಾಗೇನಹಳ್ಳಿ ನಿವಾಸಿ ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಕೂಡ ಆಗಿದ್ದನು. ಹಲವು ದಿನಗಳಿಂದ ಈತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ಪೋಷಕರು ಹೆದ್ದಾರಿಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಈತ ಬಿಜೆಪಿ ಕಾರ್ಯಕರ್ತನಾಗಿದ್ದರಿಂದ ಆಗಾಗ ಟೀ ಕುಡಿಯಲು ಹೋಗುತ್ತಿದ್ದನು. ಅಷ್ಟೇ ಅಲ್ಲದೇ ಬಾಲಕಿಯಿಂದ ಟೀ ಮತ್ತು ಇತರೆ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದನು. ಈ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಬಾಲಕಿಗೆ ದುಡ್ಡಿನ ಆಮಿಷವೊಡ್ಡಿ ಆರೋಪಿ ಚಂದ್ರಶೇಖರ್ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ನಂತರ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಲಾಗಿದೆ. ಆಗ ಬಾಲಕಿ ನಾಲ್ಕು ತಿಂಗಳು ಗರ್ಭವತಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ವಿಚಾರ ಬೆಳಕಿಗೆ ಬಂದ ನಂತರ ಸಂತ್ರಸ್ತೆ ಬಾಲಕಿ ಮತ್ತು ಅತ್ಯಾಚಾರದ ಆರೋಪದ ವ್ಯಕ್ತಿಯ ಮಧ್ಯೆ ಕೆಲವು ಸಮುದಾಯದ ಮುಖಂಡರು ಸಂದಾನಕ್ಕೆ ಪ್ರಯತ್ನ ಮಾಡಿದ್ದಾರೆ.

    ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿ ಚಂದ್ರಶೇಖರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಆರೋಪಿ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಹೊಸಪೇಟೆ ಡಾನ್ ಬಾಸ್ಕೊ ಮಕ್ಕಳ ಸಹಾಯವಾಣಿ ಉಪ ಕೇಂದ್ರದ ಸಿಬ್ಬಂದಿ ಬಾಲಕಿಯಿಂದ ಮಾಹಿತಿ ಪಡೆದಿದ್ದು, ಅವರ ಆಶ್ರಯದಲ್ಲಿಯೇ ಇದ್ದಾಳೆ.

  • ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರದಿಂದ ನೀತಿಸಂಹಿತೆ ಜಾರಿಯಾಗಿದ್ದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ `ಮತ್ತೊಮ್ಮೆ ಮೋದಿ’ ಅಂತ ಬರೆಸಿ, ಕೆಲ ಬಿಜೆಪಿ ನಾಯಕರ ಫೋಟೋವನ್ನೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಿಂಟ್ ಹಾಕಿಸಿದ್ದರು. ಆದ್ರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ರಾಜಕೀಯ ಪಕ್ಷ ಪರವಾಗಿ ಪ್ರಚಾರ ಮಾಡುವಂತ ಮದುವೆ ಕಾರ್ಡ್ ಹಂಚುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಕಳೆದ ಹದಿನೈದು ದಿನಗಳಿಂದ ಲಗ್ನ ಪತ್ರಿಕೆಗಳನ್ನು ಬಸವರಾಜ ಹಂಚುತ್ತಿದ್ದರು. ಆದರೆ ಭಾನುವಾರ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಇಂದಿನಿಂದ ಲಗ್ನಪತ್ರಿಕೆ ಹಂಚಿಕೆ ಮಾಡದಿರುವಂತೆ ಚುನಾವಣಾ ಅಧಿಕಾರಿಗಳು ಬಸವರಾಜ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿರುವ ಆರ್‍ಓ ಅಧಿಕಾರಿ ಲಗ್ನಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಮುದ್ರಿತ ಪತ್ರಿಕೆಗಳ ಲೆಕ್ಕ ಕೂಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ಸೇನೆ, ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ

    ಇದೆ ಮಾರ್ಚ್ 24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಇಬ್ಬರ ಮದುವೆಗಳು ನಿಶ್ಚಯವಾಗಿದೆ. ಆದರಿಂದ ಬಿಜೆಪಿ ಕಾರ್ಯಕರ್ತ ಆಗಿರುವ ಬಸವರಾಜ ಮತ್ತೊಮ್ಮೆ ಮೋದಿ ಅಂತ ಪ್ರಿಂಟ್ ಮಾಡಿಸಿದ್ದ ತಮ್ಮ ಲಗ್ನಪತ್ರಿಕೆಯನ್ನು ಎಲ್ಲರಿಗೂ ಹಂಚುವ ಮೂಲಕ ಮದುವೆಯ ಆಮಂತ್ರಣದ ಜೊತೆಗೆ ಬಿಜೆಪಿ ಪರ ಪ್ರಚಾರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೋವನ್ನು ಕೂಡ ಹಾಕಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ನಾಯಕ ರಾಜುಗೌಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನ ಪ್ರಿಂಟ್ ಮಾಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv