Tag: Bitter gourd gravy

  • ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ

    ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ

    ಹಾಗಲಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೂ ಪ್ರತಿ ಭಾರತೀಯ ಮನೆಗಳಲ್ಲಿ ಈ ಒಂದು ಕಹಿಯಾದ ತರಕಾರಿಯಿಂದ ಅಡುಗೆ ಮಾಡದೇ ಇರಲು ಸಾಧ್ಯವಿಲ್ಲ. ಏಕೆಂದರೆ ಈ ತರಕಾರಿಯಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಂ, ಸತು, ಕಬ್ಬಿಣ ಮುಂತಾದ ಅಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಹೇಳಿ ಮಾಡಿಸಿಟ್ಟ ಒಂದು ವರದಾನವಾಗಿದೆ. ಮಧುಮೇಹ ಇರುವವರಿಗಂತೂ ಈ ತರಕಾರಿ ಬೆಸ್ಟ್ ಎನ್ನಬಹುದು. ಆದರೆ ಇದನ್ನು ಬಳಸಿ ರುಚಿಕರವಾಗಿ ಅಡುಗೆ ಮಾಡೋದು ಎಲ್ಲರಿಗೂ ಸವಾಲು. ಇದಕ್ಕಿಂದು ನಾವು ಪರಿಹಾರ ಹೇಳಿಕೊಡುತ್ತೇವೆ. ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ, ಈ ಗ್ರೇವಿಯನ್ನು ನೀವೂ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಹಾಗಲಕಾಯಿ – 4
    ಆಲೂಗಡ್ಡೆ – 2
    ಅರಿಶಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಅಕ್ಕಿ ಹಿಟ್ಟು – 1 ಟೀಸ್ಪೂನ್
    ತೆಂಗಿನ ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತುರಿದ ತೆಂಗಿನಕಾಯಿ – ಕಾಲು ಕಪ್
    ಹಸಿರು ಮೆಣಸಿನಕಾಯಿ – 2
    ಮೊಸರು – 2 ಕಪ್
    ಕಡಲೆ ಹಿಟ್ಟು – 1 ಟೀಸ್ಪೂನ್
    ಸಕ್ಕರೆ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಹಿಂಗ್ – ಅರ್ಧ ಟೀಸ್ಪೂನ್
    ಮೆಂತ್ಯ ಕಾಳು – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆ – 1 ಚಿಗುರು ಇದನ್ನೂ ಓದಿ: ಹುಳಿ, ಸಿಹಿ ಖಾರ ರುಚಿಯ ಅನನಾಸು ರಸಂ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಹಾಗಲಕಾಯಿಯನ್ನು ತೊಳೆದು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಆಲೂಗಡ್ಡೆಯ ಸಿಪ್ಪೆ ತೆಗೆದು, ಅದೇ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಿ.
    * ಈಗ ಕತ್ತರಿಸಿದ ತರಕಾರಿಗಳಿಗೆ ಕೆಂಪು ಮೆಣಸಿನ ಪುಡಿ ಹಾಗೂ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಅಕ್ಕಿ ಹಿಟ್ಟು, ಉಪ್ಪು ಮತ್ತು 1 ಟೀಸ್ಪೂನ್ ಬಿಸಿ ತೆಂಗಿನ ಎಣ್ಣೆಯನ್ನು ಹಾಕಿ ಎಲ್ಲವೂ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಈಗ ಏರ್ ಫ್ರೈಯರ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ 10 ನಿಮಿಷಗಳ ಕಾಲ ಪೂರ್ವಭಾವಿಯಾಗಿ ಕಾಯಿಸಿ. ಬಳಿಕ ತರಕಾರಿಗಳನ್ನು ಸೇರಿಸಿ ಸುಮಾರು 7-8 ನಿಮಿಷಗಳ ಕಾಲ ಬೇಯಿಸಿ. ಆಗಾಗ ಕೈಯಾಡಿಸುವುದನ್ನು ಮರೆಯಬೇಡಿ.
    * ಈಗ ಗ್ರೇವಿ ತಯಾರಿಸಲು ಹಸಿರು ಮೆಣಸಿನಕಾಯಿ ಮತ್ತು ತುರಿದ ತೆಂಗಿನಕಾಯಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಮೊಸರು, ಕಡಲೆ ಹಿಟ್ಟು, ಸಕ್ಕರೆ ಸೇರಿಸಿ, ತೆಳುಗೊಳಿಸಲು 1 ಕಪ್ ನೀರು ಹಾಕಿ ಮಿಶ್ರಣ ಮಾಡಿ.
    * ಈಗ ಒಗ್ಗರಣೆ ತಯಾರಿಸಲು ಒಂದು ಚಿಕ್ಕ ಪ್ಯಾನ್ ತೆಗೆದುಕೊಂಡು, ಉಳಿದ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಾಸಿವೆ, ಹಿಂಗ್, ಕರಿಬೇವಿನ ಎಲೆ ಹಾಗೂ ಮೆಂತ್ಯವನ್ನು ಹಾಕಿ ಸಿಡಿಸಿ. ಇದನ್ನು ಮೊಸರಿನ ಮಿಶ್ರಣಕ್ಕೆ ಹಾಕಿ.
    * ಈಗ ಮಿಶ್ರಣಕ್ಕೆ ಅರ್ಧ ಟೀಸ್ಪೂನ್ ಅರಿಶಿನ ಸೇರಿಸಿ, ಕುದಿಸಿಕೊಳ್ಳಿ. ಬಳಿಕ ಏರ್ ಫ್ರೈ ಮಾಡಲಾದ ತರಕಾರಿಗಳನ್ನು ಸೇರಿಸಿ.
    * ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ಥಿರತೆ ನೋಡಿಕೊಂಡು ಪಾತ್ರೆಗೆ ಮುಚ್ಚಳ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.
    * ಇದೀಗ ಹಾಗಲಕಾಯಿಯ ರುಚಿಕರ ಗ್ರೇವಿ ತಯಾರಾಗಿದ್ದು, ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ಆರೋಗ್ಯಕರ ಬೀಟ್ರೂಟ್ ರಾಯಿತಾ