Tag: bite

  • ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

    ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

    ಟೋಕಿಯೋ: ಒಲಿಂಪಿಕ್ಸ್ ಅಥವಾ ಬೇರೆ ಯಾವುದೇ ಕ್ರೀಡಾಕೂಟದಲ್ಲೂ ಕೂಡ ಆಥ್ಲೀಟ್ಸ್ ಗಳು ತಾವು ಪದಕ ಗೆದ್ದರೆ ಅದನ್ನು ಕಚ್ಚುವ ಫೋಟೋ ನಾವು ನೋಡಿರುತ್ತೇವೆ. ಹಾಗಾದರೆ ಈ ರೀತಿ ಪದಕ ಕಚ್ಚಲು ಕಾರಣವೇನು? ಈ ಕುರಿತು ಅಸಲಿ ಕಾರಣ ಕೇಳಿದರೆ ನೀವು ಕೂಡ ಒಂದು ಕ್ಷಣ ನಗುತ್ತೀರಿ.

    ಹೌದು, ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಆಥ್ಲೀಟ್ಸ್ ಗಳು ಕಷ್ಟ ಪಟ್ಟು ತಮ್ಮ ದೇಶಕ್ಕಾಗಿ, ರಾಜ್ಯಕ್ಕಾಗಿ, ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದರೆ ಆ ಪದಕವನ್ನು ಕಚ್ಚಿಕೊಂಡು ನಿಂತಿರುವ ಫೋಟೋವನ್ನು ಸಾಕಷ್ಟು ಬಾರಿ ನಾವೆಲ್ಲರೂ ನೋಡಿದ್ದೇವೆ. ಪದಕ ಕಚ್ಚುವುದು ಇತಿಹಾಸದಿಂದಲೂ ನಡೆದುಕೊಂಡು ಬರುತ್ತಿದೆ. ಈ ಹಿಂದೆ ಚಿನ್ನದ ವ್ಯಾಪಾರಿಗಳು ಅಸಲಿ ಚಿನ್ನವನ್ನು ತಿಳಿಯಲು ಕಚ್ಚುತ್ತಿದ್ದರಂತೆ. ಅಸಲಿ ಚಿನ್ನ ಮೃದು ಲೋಹವಾಗಿರುವುದರಿಂದ ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತು ಕಾಣಿಸಿಕೊಳ್ಳುತ್ತಿತ್ತು. ಈ ಮೂಲಕ ಅಸಲಿ ಮತ್ತು ನಕಲಿ ಚಿನ್ನವನ್ನು ಪತ್ತೆ ಹಚ್ಚುತ್ತಿದ್ದರಂತೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಆದರೆ ಕ್ರೀಡಾಪಟುಗಳು ಕೂಡ ಈ ರೀತಿ ಚಿನ್ನವನ್ನು ಪರೀಕ್ಷಿಸುತ್ತಿದ್ದಾರ ಎಂಬ ಅನುಮಾನ ಮೂಡಿದರೆ ಅದು ತಪ್ಪು. ಒಲಿಂಪಿಕ್ಸ್‍ನಲ್ಲಿ ನೀಡುವ ಪದಕ ಪೂರ್ತಿ ಚಿನ್ನದಾಗಿರುವುದಿಲ್ಲ ಅಲ್ಪ ಪ್ರಮಾಣದ ಚಿನ್ನದ ಲೇಪಣ ಇರುತ್ತದೆ. ಇದು ಕ್ರೀಡಾಪಟುಗಳಿಗು ತಿಳಿದಿದೆ. ಆದರೂ ಕೂಡ ಆಥ್ಲೀಟ್ಸ್‍ಗಳು ಮಾತ್ರ ಆತನ ಕಣ್ಣಿಗೆ ಸುಂದರವಾಗಿ ಕಾಣಲು ಪದಕವನ್ನು ಕಚ್ಚುತ್ತಾರೆ ಎಂಬುದು ಬಯಲಾಗಿದೆ.

    ಹಾಗಾದರೆ ಆತ ಯಾರು ಗೊತ್ತ ಆತ ಬೇರೆಯಾರು ಅಲ್ಲ ಫೋಟೋಗ್ರಾಫರ್. ಹೌದು ಪದಕ ಗೆದ್ದ ಕ್ರೀಡಾಪಟುಗಳು ಪದಕ ಗೆದ್ದ ಖುಷಿಯನ್ನು ಬೇರೆ ಬೇರೆ ರೀತಿಯಾಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲು ಈ ಹಿಂದೆ ಫೋಟೋಗ್ರಾಫರ್ ಒಬ್ಬರು ಪದಕವನ್ನು ಕಚ್ಚಿ ಫೋಸ್ ನೀಡುವಂತೆ ಕ್ರೀಡಾಪಟುವಿಗೆ ಸೂಚಿಸಿದ್ದರಂತೆ. ಅದು ಮುಂದುವರಿದಿದ್ದು, ಇದೀಗ ಕೂಡ ಪದಕ ಗೆದ್ದವರು ಈ ರೀತಿ ಪದಕ ಕಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

  • ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಲಕ್ನೋ: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈ ಬಗ್ಗೆ ರಾಜ್ ಕುಮಾರ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ, ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದರು.

    ಘಟನೆ ನಡೆದ ಬಳಿಕ ರಾಜ್ ಕುಮಾರ್ ಕುಟುಂಬಸ್ಥರು ಸೇರಿ ಸಾವನ್ನಪ್ಪಿದ್ದ ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

  • 60ಕ್ಕೂ ಹೆಚ್ಚು ಮಂದಿ ಜೀವಕ್ಕೆ ಕಂಟಕ ತಂದಿಟ್ಟ ಹುಚ್ಚು ನಾಯಿ!

    60ಕ್ಕೂ ಹೆಚ್ಚು ಮಂದಿ ಜೀವಕ್ಕೆ ಕಂಟಕ ತಂದಿಟ್ಟ ಹುಚ್ಚು ನಾಯಿ!

    ಸೇಲಂ: ಹುಚ್ಚು ಹಿಡಿದಿದ್ದ ಬೀದಿ ನಾಯಿಯೊಂದು ಬರೋಬ್ಬರಿ 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳ ಮೇಲೆ ದಾಳಿ ನಡೆಸಿ, ಅವರನ್ನು ಆಸ್ಪತ್ರೆಯತ್ತ ಮುಖಮಾಡುವಂತೆ ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

    ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಕಾಣಿಸಿಕೊಂಡ ಹುಚ್ಚು ನಾಯಿ ತನ್ನಷ್ಟಕ್ಕೆ ಬೀದಿ ಬೀದಿಗಳಲ್ಲಿ ಓಡಾಡುತ್ತಿತ್ತು. ಆದರೆ ಏಕಾಏಕಿ ಶುಕ್ರವಾರದಂದು ದಾರಿಹೋಕರಿಗೆ ಕಚ್ಚಿದೆ. ಬಳಿಕ ಸೇಲಂನ ಗಾಂಧಿ ಮಹಾನ್ ಪ್ರದೇಶ, ಕಲರಂಪಟ್ಟಿ, ಕುರಿಂಜಿನಗರ, ನಾರಾಯಣನ್ ನಗರ ಹಾಗೂ ಪಂಚಪಟ್ಟಿ ಪ್ರದೇಶಕ್ಕೆ ತೆರಳಿ ಸುಮಾರು 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳಿಗೆ ಕಚ್ಚಿ ಹಲ್ಲೆ ಮಾಡಿದೆ.

    ಕಣ್ಣಿಗೆ ಕಂಡವರ ಮೇಲೆಲ್ಲಾ ಹುಚ್ಚು ನಾಯಿ ಎಗರಿ ಕಚ್ಚಿದಾಗ ರೊಚ್ಚಿಗೆದ್ದ ಸ್ಥಳೀಯರು, ತಕ್ಷಣ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಓಡಾಡುತ್ತಿತ್ತು, ಆದರೆ ಏಕಾಏಕಿ ಈ ರೀತಿ ಕಚ್ಚಿ ನಾಗರೀಕರನ್ನು ಆಸ್ಪತ್ರೆ ಪಾಲು ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆ ಬಳಿಕ ನಾಯಿ ಕಡಿತಕ್ಕೆ ತುತ್ತಾದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, 2 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಬೀದಿಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ದೂರು ನೀಡಿದ್ದರೂ ಸೇಲಂ ನಗರಪಾಲಿಕೆ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ನಗರಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶೌಚಕ್ಕೆ ಕುಳಿತಾಗ ಬೀದಿನಾಯಿಗಳ ದಾಳಿ- ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ

    ಶೌಚಕ್ಕೆ ಕುಳಿತಾಗ ಬೀದಿನಾಯಿಗಳ ದಾಳಿ- ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ

                                                               ಸಾಂದರ್ಭಿಕ ಚಿತ್ರ

    ಬೆಳಗಾವಿ: ನಾಯಿಗಳು ಮಗುವನ್ನೇ ತಿನ್ನಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಅಬ್ಬಾಸ್ ಸನದಿ ನಾಯಿಗಳ ದಾಳಿಗೆ ಒಳಗಾದ ಮಗು. ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿದ ಪರಿಣಾಮ ಅಬ್ಬಾಸ್ ಸ್ಥಿತಿ ಚಿಂತಾಜನಕವಾಗಿದೆ.

    ಅಬ್ಬಾಸ್ ಸನದಿ ಮನೆ ಮುಂದೆ ಶೌಚಕ್ಕೆ ಕುಳಿತಿದ್ದನು. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಆತನ ಮೇಲೆ ದಾಳಿ ಮಾಡಿವೆ. ಪರಿಣಾಮ ಮುಖ, ತಲೆ ಭಾಗ ಸೇರಿ ಮೈಯೆಲ್ಲಾ ಕಚ್ಚಿ, ತಿಂದು ಹಾಕುವ ಪ್ರಯತ್ನ ಮಾಡಿವೆ. ಘಟನೆಯಿಂದ ಗಂಭೀರ ಗಾಯಗೊಂಡ ಅಬ್ಬಾಸ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

    ಸದ್ಯ ಅಬ್ಬಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಪತಿ ಮಹಾಶಯ!

    ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಪತಿ ಮಹಾಶಯ!

    ಲಕ್ನೋ: ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಅನುಮಾನದಿಂದ ಪತಿ ಮಹಾಶಯನೊಬ್ಬ ಪತ್ನಿಯ ಮೂಗನ್ನೇ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಶಹಜಾಹನ್ಪುರದಲ್ಲಿ ನಡೆದಿದೆ.

    ಪಾಲ್ಹೋರಾ ಗ್ರಾಮದ ನಿವಾಸಿ ಅರ್ಜುನ್, ತನ್ನ ಪತ್ನಿ ಗೀತಾಳಿಗೆ ಭಾನುವಾರ ಮನೆಯಿಂದ ಹೊರಗೆ ಹೋಗಬೇಡವೆಂದು ತಡೆದಿದ್ದನು. ಆದ್ರೆ ಆಕೆ ಪತಿಯ ಮಾತನ್ನು ಲೆಕ್ಕಿಸದೇ ಹೊರ ಹೋಗಲು ಮುಂದಾಗಿದ್ದಾಳೆ. ಆ ವೇಳೆ ಅರ್ಜುನ್ ಕೋಪದಿಂದ ಆಕೆಯ ಮೂಗನ್ನು ಹಿಡಿದು ಕಚ್ಚಿದ್ದಾನೆ ಎಂದು ನಗರದ ಪೊಲೀಸ್ ಅಧಿಕಾರಿ ದಿನೇಶ್ ತ್ರಿಪಾಠಿ ಹೇಳಿದ್ದಾರೆ.

    ಐದು ದಿನಗಳ ಹಿಂದೆ ಗೀತಾ ಅರ್ಜುನ್ ಗೆ ಹೇಳದೆ ಕೇಳದೆ ಬರೇಲಿಗೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡ ಅರ್ಜುನ ಆಕೆ ವಾಪಸ್ಸಾದ ಬಳಿಕ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಅವ್ಯಾಚಪದಗಳಿಂದ ಆಕೆಗೆ ಬೈದಿದ್ದಾನೆ ಈ ಘಟನೆಯೇ ಅರ್ಜುನ್ ಗೆ ಗೀತಾಳ ಮೇಲೆ ಅನುಮಾನ ಪಡಲು ಕಾರಣವಾಗಿದೆ. ಈ ಘಟನೆ ಪೊಲೀಸರವರೆಗೂ ತಲುಪಿದ್ದು, ಹಾಗಾಗಿ ಮಧ್ಯಪ್ರವೇಶಿಸಬೇಕಾಯಿತು ಎಂದು ತ್ರಿಪಾಠಿ ಹೇಳಿದ್ದಾರೆ.

    ಸದ್ಯ ಘಟನೆ ಬಳಿಕ ಗೀತಾಳನ್ನು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv