Tag: birth

  • ಐದು ಕಾಲಿನ ವಿಚಿತ್ರ ಕರು ಜನನ

    ಐದು ಕಾಲಿನ ವಿಚಿತ್ರ ಕರು ಜನನ

    ಬೆಂಗಳೂರು: ಐದು ಕಾಲು ಇರುವ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಳೆಸಂದ್ರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ರೈತ ರಾಜಣ್ಣ ಎಂಬುವರಿಗೆ ಸೇರಿದ ಹಸುವೊಂದು ಈ ರೀತಿಯ ವಿಚಿತ್ರ ರೀತಿಯಲ್ಲಿ ಇರುವ ಕರುವನ್ನು ಇಂದು ಮಧ್ಯಾಹ್ನ ಹಾಕಿದೆ. ಸಾಮಾನ್ಯ ಕರುವಿನಂತೆ ನಾಲ್ಕು ಕಾಲುಗಳಿದ್ದು, ಆದರೆ ಕರುವಿನ ಬೆನ್ನ ಮೇಲೆ ಮತ್ತೊಂದು ಕಾಲು ಮೂಡಿ ಬಂದಿದೆ. ಹೀಗಾಗಿ ವಿಚಿತ್ರವಾಗಿ ಜನಿಸಿರುವ ಕರುವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

    ಈ ಹಿಂದೆ ರಾಮನಗರದಲ್ಲಿ ಎರಡು ತಲೆ ಹಾಗೂ ಮೂರು ಕಣ್ಣು ಇರುವ ಕರು ಹುಟ್ಟಿರುವುದನ್ನು ನೋಡಿದ್ದೇವು. ಈಗ ಐದು ಕಾಲುಗಳನ್ನು ಹೊಂದಿರುವ ಕರು ಹುಟ್ಟಿದೆ.

    ಇದನ್ನು ಓದಿ: ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

  • ರಾಯಚೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ರಾಯಚೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ರಾಯಚೂರು: ಇಲ್ಲಿನ ಶಕ್ತಿನಗರದಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಮೂಲತಃ ತೆಲಂಗಾಣ ಮೂಲದವರದ ಸುಜಾತ ಸೂಗಪ್ಪ ಎಂಬವರೆ ಮೂರು ಮಕ್ಕಳಿಗೆ ಜನ್ಮ ನೀಡಿರುವ ಮಹಿಳೆ. ತ್ರಿವಳಿ ಮಕ್ಕಳಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹೆರಿಗೆ ನೋವಿನಿಂದ ಬಳ್ಳಾರಿಯ ಶಕ್ತಿ ನಗರದ ಕೆಪಿಸಿಎಲ್ ಆಸ್ಪತ್ರೆಗೆ ದಾಖಲಾಗಿದ್ದ ಸುಜಾತ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದಾರೆ.

    ಇದನ್ನು ಓದಿ : ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

     

  • 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ

    82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ

    ಕಲಬುರಗಿ: ಜಿಲ್ಲೆಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ ಶ್ರೀ ಶರಣಬಸಪ್ಪ ಅಪ್ಪಾ ಅವರು ತಮ್ಮ 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಶ್ರೀ ಶರಣಬಸಪ್ಪ ಅವರ ಪತ್ನಿ 40 ವರ್ಷದ ದಾಕ್ಷಾಯಿಣಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶ್ರೀಗಳು ತಮ್ಮ 82ನೇ ವಯಸ್ಸಿಯಲ್ಲಿ ತಂದೆಯಾಗಿದ್ದಕ್ಕೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಕ್ತರು ಸಡಗರದಿಂದ ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ವ್ಯಕ್ತ ಪಡಿಸಿದ್ದಾರೆ.

    ಡಾ. ಶರಣಬಸವಪ್ಪ ಅಪ್ಪಾ ಅವರು 1935ರ ನವೆಂಬರ್ 14 ರಂದು ಜನಿಸಿದ್ದರು. ಶ್ರೀಗಳಿಗೆ ಎರಡು ಮದುವೆಯಾಗಿದ್ದು, ಮೊದಲನೆ ಪತ್ನಿ ಕೋಮಲಾತಾಯಿ ಐದು ಮಂದಿ ಪುತ್ರಿಯರಿಗೆ ಜನನ ನೀಡಿದ್ದರು. ಮೊದಲ ಪತ್ನಿಯ ಐದು ಪುತ್ರಿಯರಿಗೂ ಮದುವೆಯಾಗಿದೆ. ಆದರೆ ಮೊದಲ ಪತ್ನಿ ಕೋಮಲಾತಾಯಿ ಹಲವು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮೊದಲ ಪತ್ನಿಯ ಮೃತಪಟ್ಟ ಬಳಿಕ ದಾಕ್ಷಾಯಿಣಿ ಅವರನ್ನು ಶರಣಬಸಪ್ಪ ಅಪ್ಪಾ ಅವರು ಮದುವೆಯಾಗಿದ್ದರು. ಎರಡನೇ ಪತ್ನಿ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಇದೀಗ ಗಂಡು ಮಗುವಿಗೆ ಜನನ ನೀಡಿದ್ದಾರೆ.

  • ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮೈಸೂರು: ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳು ಜನಿಸಿದ ಘಟನೆ ನಂಜನಗೂಡುನಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದ ಮಂಜುನಾಥ್ ಮತ್ತು ರೂಪಾ ದಂಪತಿಗೆ ಮೂರು ಮಕ್ಕಳು ಜನನವಾಗಿದೆ. ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ರೂಪಾ ಜನ್ಮ ನೀಡಿದ್ದಾರೆ. ರೂಪಾ ನಂಜನಗೂಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

    ಹೆರಿಗೆಯ ನಂತರ ತಾಯಿ – ಮಕ್ಕಳು ಆರೋಗ್ಯವಾಗಿದ್ದಾರೆ. ರೂಪಾ ಹಾಗೂ ಮಂಜುನಾಥ್ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಕ್ಕಳಿಲ್ಲದ ಕೊರಗಿನಲ್ಲಿದ್ದ ಈ ದಂಪತಿಗೆ ತ್ರಿವಳಿ ಮಕ್ಕಳ ಜನನದಿಂದ ಖುಷಿ ತಂದಿದೆ.

  • ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಮುಂಬೈ: ಮಹಿಳೆಯೊಬ್ಬರು ಸೋಮವಾರ ರಾತ್ರಿ ನಗರದ ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

    26 ವರ್ಷದ ಸಲ್ಮಾ ಶೇಖ್ ಮಗುವಿಗೆ ಜನ್ಮ ನೀಡಿದ ತಾಯಿ. ರೈಲು ಸಿಎಸ್‍ಟಿ ರೈಲ್ವೆ ನಿಲ್ದಾಣದಿಂದ ದಾದರ್ ಮಾರ್ಗವಾಗಿ ಕಲ್ಯಾಣ್ ಗೆ ತೆರಳುತ್ತಿತ್ತು. ರೈಲು ದಾದರ್ ನಿಲ್ದಾಣದ ಮೂರನೇ ಪ್ಲಾಟ್‍ಫಾರಂ ಗೆ ಆಗಮಿಸಿದಾಗ ಸಲ್ಮಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

    ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಲ್ಮಾ ಅವರನ್ನು ಮೊದಲಿಗೆ ನಿಲ್ದಾಣದಲ್ಲಿರುವ `ಒನ್ ರೂಪಿ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಈ ಕ್ಲಿನಿಕ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ.

  • 2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ 26 ವರ್ಷದ ಗುಂಡೂರು ಹುಲಿಗೆಮ್ಮ ತನ್ನ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

    ಆರೋಗ್ಯ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಆರೈಕೆ ಮಾಡಲಾಗುತ್ತಿದೆ. ಹುಲಿಗೆಮ್ಮ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳು ಬೆಳೆಯುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ತಿಳಿದಿತ್ತು. ಮೊದಲನೇ ಹೆರಿಗೆಯಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು.

    ಹೀಗಾಗಿ ಹೆರಿಗೆಗೆ ಒಂದು ತಿಂಗಳ ಮುಂಚೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳಿಂದ ವಿಮ್ಸ್ ನಲ್ಲಿ ಆರೈಕೆ ಬಳಿಕ ಶುಕ್ರವಾರ ಸಂಜೆ ಹೆರಿಗೆಯಾಗಿದೆ.

     

     

     

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಲಂಡನ್: ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ.

    21 ವರ್ಷದ ಹೇಡನ್ ಕ್ರಾಸ್ ಎಂಬವರು ಬ್ರಿಟನ್ ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ವ್ಯಕ್ತಿಯಾಗಿದ್ದಾರೆ. ಜೂನ್ 16ರಂದು ನಗರದ ರಾಯಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನನವಾಗಿದೆ. ಸದ್ಯ ಕ್ರಾಸ್ ಮಗುವಿಗೆ `ಟ್ರಿನಿಟಿ ಲೇಘ್ ‘ ಅಂತ ಹೆಸರಿಟ್ಟಿದ್ದಾರೆ.

    `ಟ್ರಿನಿಟಿ ಎಲ್ಲಾ ರೀತಿಯಲ್ಲೂ ಪರಿಪೂರ್ಣಳಾಗಿದ್ದಾಳೆ. ಅವಳು ಆರೋಗ್ಯವಾಗಿದ್ದಾಳೆ. ಮಗಳನ್ನು ಪಡೆದ ನಾನು ತುಂಬಾ ಅದೃಷ್ಟವಂತ’ ಅಂತ ಕ್ರಾಸ್ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದು, ಸಲಿಂಗಿಯಾಗಲು ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಮೂರು ವರ್ಷಗಳ ಕಾಲ ಪುರುಷನಾಗಿದ್ದರು. ಪುರುಷನಾಗಲು ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಈ ಮಧ್ಯೆ ಕ್ರಾಸ್ ಗೆ ತಾನು ಮಗು ಹೊಂದಬೇಕು ಎನ್ನುವ ಹಂಬಲ ಉಂಟಾಯಿತು. ಹೀಗಾಗಿ ಅವರು ಹಾರ್ಮೊನ್ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಭೇಟಿಯಾದ ದಾನಿಯೊಬ್ಬರು ವೀರ್ಯ ನೀಡಲು ಮುಂದಾದ್ರು. ಈ ಮೂಲಕ ಕ್ರಾಸ್ ಗರ್ಭ ಧರಿಸಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಈ ಬಗ್ಗೆ ಪ್ರಕಟಿಸಿದ್ದರು. ಅಂತೆಯೇ ಜೂನ್ 16ರಂದು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿದ್ದಾರೆ. ಆದ್ರೆ ಮಗುವಿನ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ.

    `ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ವೀರ್ಯ ದಾನಿಗಳ ನೆರವಿನಿಂದ ಗರ್ಭ ಧರಿಸಿದ್ದೆ. ಈ ಮೊದಲು ಮಗು ಪಡೆಯಲು ವೀರ್ಯ ದಾನಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದೆ. ಈ ವೇಳೆ ವ್ಯಕ್ತಿಯೊಬ್ಬರು ಸಹಾಯಕ್ಕೆ ಬಂದರು. ಅವರಿಗೆ ನಾನಿನ್ನೂ ಏನೂ ಕೊಟ್ಟಿಲ್ಲ. ಸದ್ಯ ಅವರು ಎಲ್ಲಿದ್ದಾರೆ ಎಂಬುವುದು ತನಗೆ ಗೊತ್ತಿಲ್ಲ’ ಅಂತ ಹೇಳಿದ್ದಾರೆ.

    ಇದೀಗ ಮತ್ತೆ ಲಿಂಗ ರೂಪಾಂತರ ಚಿಕಿತ್ಸೆಯನ್ನು ಮುಂದುವರಿಸಲು ಕ್ರಾಸ್ ತೀರ್ಮಾನಿಸಿದ್ದಾರೆ. ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬರಿಗೆ ಮಗು ಜನಿಸಿರೋದು ಇದೇ ಮೊದಲು ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

  • ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಿಡಗೋಡಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕಣ್ಣು ಹಾಗೂ ಎರಡು ತಲೆಯ ಕರುವೊಂದಕ್ಕೆ ಜನ್ಮ ನೀಡಿದೆ.

    ನಿಡಗೋಡಿ ಗ್ರಾಮದ ನಿವಾಸಿ ಪುಟ್ಟೇಗೌಡ ಹಾಗೂ ಗುಂಡಮ್ಮ ಎಂಬವರಿಗೆ ಸೇರಿದ ಸೀಮೆಹಸು ಮೂರು ಕಣ್ಣು ಹಾಗು ಎರಡು ತಲೆಯ ಕರುವಿಗೆ ಜನ್ಮ ನೀಡಿದ್ದು ಕರು ಸದ್ಯಕ್ಕೆ ಆರೋಗ್ಯವಾಗಿದೆ.

    ಕರು ಜನನವಾಗುವ ವೇಳೆ ಎರಡು ತಲೆ ಒಳಗೊಂಡಿದ್ರಿಂದ ಹೆರಿಗೆ ಮಾಡಿಸಲು ಸ್ವಲ್ಪ ಕಷ್ಟವಾಯ್ತು. ಇಂತಹ ವಿಚಿತ್ರ ಕರುವನ್ನು ನಾವು ನೋಡಿರಲಿಲ್ಲ. ಸದ್ಯಕ್ಕೆ ಕರುವಿಗೆ ಬಾಟಲ್ ಮೂಲಕ ಹಾಲು ನೀಡಲಾಗ್ತಿದ್ದು ಮುಂದಿನ ದಿನಗಳಲ್ಲಿ ಅದು ಬೆಳೆದಂತೆ ಬೆಳೆಯಲಿ ಎಂದು ಹಸುವಿನ ಮಾಲೀಕರಾದ ಗುಂಡಮ್ಮ ತಿಳಿಸಿದ್ದಾರೆ.

    ಮೂರು ಕಣ್ಣು, ಎರಡು ತಲೆಯ ಕರುವನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ರು. ಮೂರು ಕಣ್ಣು ಒಳಗೊಂಡಿದ್ರಿಂದ ಪರಶಿವನಾದ ಮುಕ್ಕಣ್ಣನ ಸ್ವರೂಪಿ ಎಂದು ಸಾರ್ವಜನಿಕರು ಕರುವನ್ನು ವೀಕ್ಷಣೆ ಮಾಡಿದ್ರು. ಮೂರು ಕಣ್ಣು ಹಾಗು ಎರಡು ತಲೆ ಹೊಂದಿರುವ ಕರು ಆರೋಗ್ಯವಾಗಿ ಬೆಳೆದ್ರೆ ಚೆನ್ನಾಗಿ ಸಾಕಿ ಅದನ್ನು ಯಾವುದಾದ್ರೂ ದೇವಾಲಯಕ್ಕೆ ನೀಡುವುದಾಗಿ ಮಾಲೀಕ ಪುಟ್ಟೇಗೌಡ ಹೇಳಿದ್ದಾರೆ.

    ಈ ವಿಚಿತ್ರ ಕರುವನ್ನ ಗ್ರಾಮದ ಮಹಿಳೆಯರು ಪೂಜೆ ಸಹ ಮಾಡಿದ್ದಾರೆ.

     

  • 35 ಸಾವಿರ ಅಡಿ ಎತ್ತರದದಲ್ಲಿ ಮಗುವಿಗೆ ಜನ್ಮ ನೀಡಿದ್ಳು ತಾಯಿ!

    35 ಸಾವಿರ ಅಡಿ ಎತ್ತರದದಲ್ಲಿ ಮಗುವಿಗೆ ಜನ್ಮ ನೀಡಿದ್ಳು ತಾಯಿ!

    ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರು ಜೆಟ್ ಏರ್‍ವೇಸ್ ವಿಮಾನದಲ್ಲಿ ಮಾರ್ಗ ಮಧ್ಯ ಅನಿರೀಕ್ಷಿತವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಹೌದು. ಭಾನುವಾರ ಬೆಳಗ್ಗೆ 2.55ಕ್ಕೆ ಜೆಟ್ ಏರ್‍ವೇಸ್ 9 ಡಬ್ಲ್ಯು 569 ವಿಮಾನ ದಮ್ಮಾಮ್‍ನಿಂದ ಕೊಚ್ಚಿಗೆ ಆಗಮಿಸುತಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ವಿಮಾನದ ಸಿಬ್ಬಂದಿ ತುರ್ತು ಘೋಷಣೆ ನೀಡಿದರು. ತಕ್ಷಣವೇ ವಿಮಾನವನ್ನು ಮುಂಬೈ ಕಡೆಗೆ ತಿರುಗಿಸಲಾಯಿತು.

    ಅರಬ್ಬಿ ಸಮುದ್ರದ ಮೇಲೆ ಪ್ರಯಾಣಿಸುತ್ತಿದ್ದಾಗಲೇ ವಿಮಾನದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ನರ್ಸ್ ಸಹಾಯಕಿಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ವಿಮಾನವು ಮುಂಬೈನಲ್ಲಿ ಇಳಿದಿದ್ದು, ತಕ್ಷಣ ತಾಯಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಚ್ಚಿಗೆ  12.45ಕ್ಕೆ ತಲುಪಬೇಕಿದ್ದ ವಿಮಾನ 90 ನಿಮಿಷ ತಡವಾಗಿ ತಲುಪಿದೆ.

    ಕಂಪೆನಿಯ ವಿಮಾನದಲ್ಲಿ ಈ ಮಗು ಜನಿಸಿದ್ದಕ್ಕೆ,  ಜೀವಿತಾವಧಿಯಲ್ಲಿ ಈ ಗಂಡು ಮಗುವಿಗೆ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸುವ ಉಡುಗೊರೆಯನ್ನು ದಂಪತಿಗೆ ಏರ್‍ವೇಸ್ ನೀಡಿದೆ.