Tag: birds

  • ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ- ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್

    ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ- ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್

    – ಹಕ್ಕಿ ಜ್ವರವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಸರ್ಕಾರ
    – 48 ಸಾವಿರ ಪಕ್ಷಿಗಳನ್ನು ಕೊಲ್ಲಲು ನಿರ್ಧಾರ

    ತಿರುವನಂತಪುರಂ: ಹಕ್ಕಿ ಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ. ರಾಜ್ಯದ ಕೊಟ್ಟಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ ಈ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

    ಎರಡೂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸತ್ತ ಬಾತುಕೋಳಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ವೇಳೆ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಆದರೆ ಈ ಜ್ವರವೂ ಮನುಷ್ಯರಿಗೆ ಹರಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಹಕ್ಕಿ ಜ್ವರದಿಂದಾಗಿ ಕೊಟ್ಟಯಂನ ನೀಂದೂರ್ ಪಂಚಾಯಿತಿ ವ್ಯಾಪ್ತಿಯ ಜಮೀನಿನಲ್ಲಿ ಸುಮಾರು 1,650 ಬಾತುಕೋಳಿಗಳು ಸಾವನ್ನಪ್ಪಿದ್ದು, ಇದು ಪ್ರತ್ಯೇಕ ಪ್ರದೇಶವಾದ್ದರಿಂದ ಜನರಿಗೆ ಹರಡಿಲ್ಲ ಎನ್ನಲಾಗಿದೆ. ಆದರೂ ಕೊಟ್ಟಯಂ ಜಿಲ್ಲೆಯಲ್ಲಿ ತಲಾ 5 ಜನರ 8 ತಂಡಗಳನ್ನು ನೇಮಿಸಲಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

    ಕೇವಲ ಕೊಟ್ಟಯಂ ಮಾತ್ರವಲ್ಲದೆ ಆಲಪ್ಪುಳ ಹಾಗೂ ಕುಟ್ಟನಾಡ್ ಪ್ರದೇಶದಲ್ಲಿ ಸಹ ಈ ಹಕ್ಕಿ ಜ್ವರ ಪತ್ತೆಯಾಗಿರುವುದು ಆತಂಕವನ್ನು ಸೃಷ್ಟಿಸಿದೆ. ತಲವಾಡಿ, ಎಡತ್ವಾ, ಪಲ್ಲಿಪಾಡ್ ಹಾಗೂ ತಜಕ್ಕರ ಪಂಚಾಯಿತಿ ಪ್ರದೇಶಗಳಿಗೂ ಹಬ್ಬಿದೆ. ಅನೇಕ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸಹ ತೆರೆಯಲಾಗಿದೆ. ಅಲ್ಲದೆ ರ್ಯಾಪಿಡ್ ರಿಸ್ಪಾನ್ಸ್ ಫೋರ್ಸ್‍ಗಳನ್ನು ಹಾಕಲಾಗಿದೆ.

    ಅಲ್ಲದೆ ಹಕ್ಕಿ ಜ್ವರದ ಭೀತಿಯಿಂದಾಗಿ ನಿಯಂತ್ರಣಕ್ಕೆ ತರಲು ಒಂದು ಕಿ.ಮೀ.ವ್ಯಾಪ್ತಿಯಲ್ಲಿನ ಎಲ್ಲ ಪಕ್ಷಿಗಳನ್ನು ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿದೆ. ಸಾಕು ಪಕ್ಷಿಗಳನ್ನೂ ಸೇರಿದಂತೆ ಸುಮಾರು 48 ಸಾವಿರ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ.

    ವನ್ಯಜೀವಿ ಸಚಿವ ಕೆ.ರಾಜು ಅವರು ಈ ಕುರಿತು ಮಾತನಾಡಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಳಿಕ ರೈತರಿಗೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಸಹ ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಸಹ ಜನರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆ ಉದ್ದೇಶದಿಂದ ಹಕ್ಕಿಗಳನ್ನು ಕೊಲ್ಲಲಾಗಿತ್ತು.

  • ಹಾಯಾಗಿ ವಿಹರಿಸುತ್ತಿರೋ ಪ್ರಾಣಿ, ಪಕ್ಷಿ, ಜಲಚರಗಳು – ವಿಡಿಯೋ ನೋಡಿ

    ಹಾಯಾಗಿ ವಿಹರಿಸುತ್ತಿರೋ ಪ್ರಾಣಿ, ಪಕ್ಷಿ, ಜಲಚರಗಳು – ವಿಡಿಯೋ ನೋಡಿ

    ಕಾರವಾರ: ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇದ್ದಾರೆ. ಆದರೆ ಪರಿಸರ ಹಾನಿಯಿಂದ ಎಲ್ಲೋ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮತ್ತು ಜಲಚರಗಳು ಈಗ ಹಾಯಾಗಿ ಎಲ್ಲೆಡೆ ಓಡಾಡುತ್ತಿವೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ, ಹಾವು, ಪಕ್ಷಿಗಳು, ಜಲಚರಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದಲ್ಲಿ ಮಂಜುನಾಥ್ ತ್ರ್ಯಂಬಕ ಹೆಗಡೆಯವರ ತೋಟದಲ್ಲಿ 11 ಅಡಿ ಉದ್ದದ ಕಾಳಿಂಗಸರ್ಪ ಕಾಣಿಸಿಕೊಂಡಿದೆ. ತಕ್ಷಣ ಶಿರಸಿಯ ಉರಗತಜ್ಞ ಮನು ಬಂದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.

    ಹಳಿಯಾಳ ಮತ್ತು ಯಲ್ಲಾಪುರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಡುವ ಮೂಲಕ ಜನರ ಕ್ಯಾಮರಾದಲ್ಲಿ ಸೆರೆಯಾಗಿದ್ದಾವೆ. ಇತ್ತ ಅಂಕೋಲದಲ್ಲಿ ನಗರಕ್ಕೆ ಬಾರದ ಕಾಡಿನಲ್ಲೇ ಹೆಚ್ಚು ಇರುವ ಹಾರ್ನ್ ಬಿಲ್ ಪಕ್ಷಿಗಳು ಸದ್ದಿಲ್ಲದ ನಗರ ಪ್ರವೇಶ ಮಾಡಿ ಮನೆಗಳ ಮೇಲೆ ವಿಹರಿಸುತ್ತಿವೆ.

    ಅರಬ್ಬಿ ಸಮುದ್ರದಲ್ಲೂ ಕೂಡ ಮೀನುಗಾರಿಕೆ ಬಂದ್ ಆಗಿದ್ದರಿಂದ ಬೃಹದಾಕಾರದ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿವೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕ್ಯಾಮರಾಕ್ಕೆ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯ ಸೆರೆಯಾಗಿದೆ.

  • ಗದಗಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ

    ಗದಗಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ

    ಗದಗ: ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲೂ ಪಕ್ಷಿದಾಮವೊಂದು ಪ್ರಸಿದ್ಧಿಯಾಗಿದ್ದು, ಪ್ರತಿವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ. ಅಲ್ಲಿಯ ವಿದೇಶಿ ಬಾನಾಡಿಗಳ ಚಿಲಿಪಿಲಿ ಕಲರವಗಳ ಚೆಲ್ಲಾಟ ನೋಡಲು ಎರಡು ಕಣ್ಣುಗಳು ಸಾಲದು.

    ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಸುಮಾರು 130 ಎಕರೆ ವಿಸ್ತೀರ್ಣ ಹೊಂದಿರುವ ಐತಿಹಾಸಿಕ ಕೆರೆಯಿದು. ದೇಶ-ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಈ ಕೆರೆ ಆಕರ್ಷಿಸುತ್ತಿದೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನ್, ಟಿಬೇಟ್ ಹೀಗೆ ಅನೇಕ ಕಡೆಯಿಂದ ಸಾವಿರಾರು ಹಕ್ಕಿಗಳು ಪ್ರತಿವರ್ಷ ಚಳಿಗಾಲಕ್ಕೆ ಇಲ್ಲಿಗೆ ಲಗ್ಗೆ ಇಡುತ್ತವೆ. ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ ಎನ್ನಲಾಗುತ್ತಿದೆ.

    ಜಿಲ್ಲೆ ಮಾಗಡಿ ಕೆರೆಗೆ ಬರುವ ಪಕ್ಷಿಗಳಾದ ಬಾರ್ ಹೆಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ್, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ವಿದೇಶಿ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ ಅಂದ-ಚಂದ ಸವಿಯಲು ಎರಡು ಕಣ್ಣುಗಳು ಸಾಲದು. ಗುಂಪು ಗುಂಪಾಗಿ ರಾಕೆಟ್‍ನಂತೆ ಹಾರಿ ಬರುತ್ತವೆ. ಇವುಗಳನ್ನ ನೋಡಲು ಅನೇಕ ಜಿಲ್ಲೆಗಳಿಂದ ಜನರು ಬರುತ್ತಾರೆ. ಕೆಲವು ಪಕ್ಷಿ ಪ್ರೇಮಿಗಳು ಇವುಗಳ ಫೋಟೋ ಶೂಟ್‍ಗಾಗಿ ಅಂತಾನೆ ಬಂದು, ಕೆರೆಯ ದಡದಲ್ಲಿ ಕೂತು ಫೋಟೋ ಕ್ಲಿಕ್ ಮಾಡುವ ಮೂಲಕ ಸಂತೋಷ ಪಡುತ್ತಾರೆ.

    ವಿದೇಶಿ ಪಕ್ಷಿಗಳು ಡಿಸೆಂಬರ್ ತಿಂಗಳಲ್ಲಿ ಈ ಕೆರೆಗೆ ಬರಲು ಪ್ರಾರಂಭಿಸುತ್ತವೆ. ಫೆಬ್ರವರಿವರೆಗೆ ಅಂದರೆ ಸುಮಾರು ಮೂರು-ನಾಲ್ಕು ತಿಂಗಳ ಕಾಲ ಈ ಮಾಗಡಿ ಕೆರೆಯಲ್ಲಿ ಪಕ್ಷಿಗಳು ವಾಸವಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ವಿದೇಶಿ ಪಕ್ಷಿಗಳು ರಾತ್ರಿಯಾಗುತ್ತಿದ್ದಂತೆ ಆಹಾರಕ್ಕಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಹೊರಡುತ್ತವೆ. ರಾತ್ರಿ ಹೊತ್ತು ಆಹಾರಕ್ಕೆ ಹೋದರೆ ಮತ್ತೆ ಮುಂಜಾನೆ ಕೆರೆಗೆ ಮರಳುತ್ತವೆ.

    ಈ ಪಕ್ಷಿಗಳನ್ನ ನೋಡಲು ನಿತ್ಯವು ರಾಜ್ಯದ ನಾನಾ ಭಾಗದಿಂದಲೂ ಅಷ್ಟೇ ಅಲ್ಲ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರವಾಸಿಗರು ಸಹ ಇಲ್ಲಿಗೆ ಬರುತ್ತಿದ್ದಾರೆ. ಹೀಗಾಗಿ ಕೆರೆ ಸುತ್ತಲು ಫುಟ್ ಪಾತ್, ಕುಡಿಯುವ ನೀರು, ಉದ್ಯಾನವನ, ಕುಳಿತುಕೊಳ್ಳಲು ಬೆಂಚ್ ಅಥವಾ ಆಸನದ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕ್ಯಾಂಟೀನ್ ಹೀಗೆ ಪ್ರವಾಸಿಗರಿಗೆ ಅನೇಕ ಮೂಲಭೂತ ಸೌಲಭ್ಯಗಳನ್ನ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕು ಎಂಬುದು ಪ್ರವಾಸಿಗರ ಹಾಗೂ ಸ್ಥಳೀಯರ ಬೇಡಿಕೆಯಾಗಿದೆ.

  • ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಕೊಪ್ಪಳ: ಹೊಲ ಗದ್ದೆಗಳಲ್ಲಿ ಬೇಸಿಗೆ ಬೆಳೆಯ ಭತ್ತ ನಾಟಿ ಮಾಡುವ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದಂತೆ ಆಹಾರ ಅರಸಿ ಹೊಲಗಳಿಗೆ ಆಗಮಿಸುತ್ತಿರುವ ಬೆಳ್ಳಕ್ಕಿಗಳ ಹಿಡ್ಡು ಗದ್ದೆಗಳಿಗೆ ರಂಗು ಮೂಡಿಸುತ್ತಿವೆ.

    ಪ್ರತಿ ವರ್ಷ ಮುಂಗಾರು ಬೆಳೆ ಕಟಾವು ಮಾಡಿದ ನಂತರ ಬೇಸಿಗೆ ಬೆಳೆಗಾಗಿ ಭತ್ತದ ಸಸಿ ಮಡಿಗಳನ್ನು ಹಾಕಿ, ಎರಡ್ಮೂರು ತಿಂಗಳುಗಳ ಕಾಲ ಸಾವಯುವ ಗೊಬ್ಬರ, ಸಗಣೆ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈ ಬಾರಿ ಕಟಾವು ಮಾಡಿದ 15 ದಿನಗಳಲ್ಲಿಯೇ ಪುನಃ ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಜಮೀನು ಸಿದ್ಧಗೊಳಿಸಲು ರೈತರು ಮುಂದಾಗಿದ್ದಾರೆ. ಅದಕ್ಕಾಗಿ ಹೊಲಗಳಿಗೆ ನೀರು ಹರಸಿ ಭೂಮಿಯನ್ನು ಹದಗೊಳಿಸಲಾಗುತ್ತಿದೆ.

    ಈ ವೇಳೆಯಲ್ಲಿ ಬೆಳ್ಳಕ್ಕಿಗಳಿಗೆ ಬೇಕಾಗುವ ಕೀಟಗಳು ಜಮೀನಿನಲ್ಲಿ ಸುಲಭವಾಗಿಯೇ ದೊರೆಯುತ್ತವೆ. ಕೀಟಗಳ ಜೊತೆಗೆ ನೀರು ದೊರೆಯುತ್ತಿರುವುದರಿಂದ ಕೆಲವು ದಿನಗಳಿಂದ ಗಂಗಾವತಿ ತಾಲೂಕಿನ ನಾನಾ ಭಾಗಗಳ ಜಮೀನುಗಳಲ್ಲಿ ನೂರಾರು ಬೆಳ್ಳಕ್ಕಿಗಳ ಹಿಂಡು ಸ್ವಚ್ಛಂದವಾಗಿ ಹಾರಾಡುವ ಮೂಲಕ ರೈತರಿಗೂ ಸಹ ಆನಂದವನ್ನು ನೀಡುತ್ತಿವೆ.

    ಎಲ್ಲೆಲ್ಲಿ ಹೆಚ್ಚಾಗಿವೆ ಹಕ್ಕಿಗಳ ಕಲರವ?
    ತುಂಗಭದ್ರಾ ನದಿ ಪಾತ್ರಗಳಲ್ಲಿ ಹಾಗೂ ಕೊಳವೆ ಬಾವಿ ಹೊಂದಿರುವ ರೈತರು ಸೇರಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತದೆ. ನದಿ ಪಾತ್ರ ಮತ್ತು ಕೊಳವೆ ಬಾವಿ ನೀರು ಬಳಸಿ ರೈತರು ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರಿಸುಮಾರು 400ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿಯೇ ಹಕ್ಕಿಗಳು ಆಹಾರವನ್ನು ಅರಸಿ ತಾಲೂಕಿನ ಆನೆಗೊಂದಿ, ಚಿಕ್ಕರಂಪೂರ, ಮಲ್ಲಾಪೂರ, ಸಣಾಪೂರ, ಢಣಾಪೂರ, ಚಿಕ್ಕಜಂತಕಲ್, ಮುಸ್ಟೂರು, ವಡ್ಡರಹಟ್ಟಿ, ಸಂಗಾಪೂರ, ಬಸವನದುರ್ಗ, ಹನುಮನಹಳ್ಳಿ, ಹಿರೇಜಂತಕಲ್, ಸಿದ್ದಿಕೇರಿ, ಮರಳಿ, ಪ್ರಗತಿನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬೆಳ್ಳಕ್ಕಿಗಳ ಹಿಂಡು ಬೀಡು ಬಿಟ್ಟಿವೆ.

    ಕೃಷಿ ಕಾರ್ಮಿಕರಲ್ಲಿ ಸಂತಸ:
    ಭತ್ತ ನಾಟಿ ಮಾಡುವ ಜಮೀನುಗಳಲ್ಲಿ ಮುಂಚಿತವಾಗಿಯೇ ಭೂಮಿಗೆ ನೀರು ಬಿಟ್ಟು, ಟ್ರ್ಯಾಕ್ಟರ್ ಗಳ ಸಹಾಯದಿಂದ ಹದಗೊಳಿಸಲಾಗುವುದು. ಹದಗೊಳಿಸುವ ವೇಳೆಯಲ್ಲಿ ಭೂಮಿಯಲ್ಲಿ ಇರುವ ಕೀಟಗಳು ಮೇಲೆ ಕಾಣಿಸಿಕೊಳ್ಳುತ್ತವೆ. ಅವುಗಳು ತಿನ್ನುವ ಉದ್ದೇಶದಿಂದ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಬೆಳಗಿನ ಜಾವದಲ್ಲಿ ಕಾಣಿಸಿಕೊಳ್ಳುವ ಹಕ್ಕಿಗಳ ಗುಂಪಿನ ಕಲರವ ಕೃಷಿ ಕಾರ್ಮಿಕರನ್ನು ಸಂತಸಗೊಳಿಸುತ್ತಿದೆ.

    ಅಲ್ಲದೆ ದಾರಿಯಲ್ಲಿ ಹೋಗುವ ಜನರು ಜಮೀನಿನಲ್ಲಿ ಹಾರಾಡುವ ಬೆಳ್ಳಕ್ಕಿಗಳ ಗುಂಪುಗಳನ್ನು ನೋಡಿ, ಫೋಟೊ ಸೆರೆ ಹಿಡಿದು ಸಂತಸ ಪಡುತ್ತಿದ್ದಾರೆ. ಬೆಳ್ಳಕ್ಕಿಗಳು ಆಹಾರ ಅರಸಿ ಜಮೀನುಗಳ ಕಡೆ ಬಂದಿರುವುದು ನೋಡುಗರಿಗೆ ಹಾಗೂ ರೈತರ ಕಣ್ಣುಗಳನ್ನು ತಂಪಾಗಿಸುತ್ತಿವೆ.

  • ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

    ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

    ಮಂಡ್ಯ: ಪ್ರವಾಹದಿಂದ ಹಲವು ಮಂದಿ ತಮ್ಮ ಅಪಾರ ಪ್ರಮಾಣದ ಆಸ್ತಿಪಾಸ್ತಿಯ ಜೊತೆಗೆ ತಮ್ಮ ಬದುಕನ್ನು ಕೂಡ ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಮನುಷ್ಯರು ಮಾತ್ರ ಬದುಕನ್ನು ಕಳೆದುಕೊಂಡಿಲ್ಲ ಮೂಕ ಪಕ್ಷಿಗಳು ತಮ್ಮ ಸಂತಾನದ ಜೊತೆಗೆ ತಮ್ಮ ಗೂಡನ್ನು ಕಳೆದುಕೊಂಡು ಪರದಾಡುತ್ತಿವೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ದೇಶ ಅಲ್ಲದೇ ವಿದೇಶಿ ಪಕ್ಷಿಗಳಿಗೂ ಆಶ್ರಯ ನೀಡುತ್ತಿರುವ ಸುಂದರವಾದ ತಾಣ. ಇಲ್ಲಿಗೆ ದೇಶಿ ಹಾಗೂ ವಿದೇಶಿ ಪಕ್ಷಿಗಳು ಬಂದು ತಮ್ಮ ಸಂತಾನವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ತಮ್ಮ ಪ್ರದೇಶಗಳಿಗೆ ತೆರಳುತ್ತಿದ್ದವು. ಆದರೆ ಕಳೆದ 20 ದಿನಗಳ ಹಿಂದೆ ಬಂದ ಪ್ರವಾಹದಿಂದ ರಂಗನತಿಟ್ಟಿನಲ್ಲಿದ್ದ, 23 ಐಲ್ಯಾಂಡ್‍ಗಳ ಪೈಕಿ 17 ಐಲ್ಯಾಂಡ್‍ಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಐಲ್ಯಾಂಡ್‍ನಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಪಕ್ಷಿಗಳು ಗೂಡು ಸೇರಿದಂತೆ ಗೂಡಿನಲ್ಲಿದ್ದ ಮೊಟ್ಟೆ ಹಾಗೂ ಮರಿಗಳನ್ನು ಕಳೆದುಕೊಂಡು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ರಂಗನತಿಟ್ಟಿನಲ್ಲಿದ್ದ ಐಲ್ಯಾಂಡ್‍ಗಳಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಕೃತಕವಾಗಿ ಅರಣ್ಯ ಇಲಾಖೆ ನಿರ್ಮಾಣ ಮಾಡಿತ್ತು. ಆದರೆ 20 ದಿನಗಳ ಹಿಂದೆ ಕೆಆರ್‍ಎಸ್ ಜಲಾಶಯದಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದ ಪರಿಣಾಮ ಪ್ರವಾಹ ಬಂದು 17 ಐಲ್ಯಾಂಡ್‍ಗಳು ನಾಶವಾಗಿವೆ. ಇದರಿಂದ ಎರಡು ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಪ್ರವಾಹದಿಂದ ಆರ್ಥಿಕವಾಗಿ ನಷ್ಟವಲ್ಲ, ಪ್ರಕೃತಿಯ ಸೌಂದರ್ಯದ ಜೊತೆ ಪಕ್ಷಿಗಳ ಬದುಕು ಕೂಡ ಬೀದಿಗೆ ಬಿದ್ದಿದೆ. ಇದೀಗ ಆ ಇಲ್ಲಿರುವ ಪಕ್ಷಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಇದೀಗ ರಂಗನತಿಟ್ಟಿನಲ್ಲಿ ಪರದಾಡುತ್ತಿವೆ. ಇನ್ನೇನೂ ಎರಡು ತಿಂಗಳು ಕಳೆದರೆ ಇನ್ನೂ ಅಪಾರ ಪ್ರಮಾಣದಲ್ಲಿ ಪಕ್ಷಿಗಳು ಸಂತಾನೋತ್ಪತ್ತಿಗೆ ಬರಲಿವೆ. ಅಷ್ಟರಲ್ಲಿ ನಾಶವಾಗಿರುವ ಐಲ್ಯಾಂಡ್‍ಗಳ ದುರಸ್ಥಿ ಮಾಡಬೇಕು ಎನ್ನುವುದು ಪಕ್ಷಿ ಪ್ರೇಮಿಗಳ ಆಶಯವಾಗಿದೆ.

  • ಮೂಕ ಪ್ರಾಣಿಗಳ ವೇದನೆಗೆ ಮರುಗಿದ ಗುಡಿಬಂಡೆ ಜನತೆ

    ಮೂಕ ಪ್ರಾಣಿಗಳ ವೇದನೆಗೆ ಮರುಗಿದ ಗುಡಿಬಂಡೆ ಜನತೆ

    – ಜೀವ ಸಂಕುಲದ ರಕ್ಷಣೆಗೆ ಮುಂದಾದ ಯುವಕರು

    ಚಿಕ್ಕಬಳ್ಳಾಪುರ: ತೀವ್ರ ಬರ ಬಂದು ನಾಡಿನಲ್ಲಿರುವ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕಾಡಿನಲ್ಲಿರುವ ಪ್ರಾಣಿಗಳಿಗೆ ಎಲ್ಲಿ ನೀರು ಸಿಗುತ್ತೆ? ನೀರೇ ಇಲ್ಲದ ಮೇಲೆ ಆಹಾರ ಸಿಗುವುದಂತೂ ಕಷ್ಟಸಾಧ್ಯ. ಕಾಡಿನಲ್ಲಿರುವ ಪ್ರಾಣಿಗಳ ಪರದಾಟ ಕಂಡು ಮರುಗಿದ ಪಟ್ಟಣದ ಪ್ರಾಣಿಪ್ರಿಯರು ನಾಡಿನಿಂದ ದವಸ ದಾನ್ಯ, ಹಣ್ಣು ತರಕಾರಿ, ನೀರನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಉಣಬಡಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಆಂಧ್ರ-ಕರ್ನಾಟಕ ಗಡಿನಾಡು ಗುಡಿಬಂಡೆ ಪಟ್ಟಣ, ಈ ಕಡೆ ಬಂದರೆ ಕರ್ನಾಟಕ, ಆ ಕಡೆ ಹೋದರೆ ಆಂಧ್ರ. ಎರಡೂ ರಾಜ್ಯಗಳ ಗಡಿಯಲ್ಲಿರುವ ಕಾಡಿನಲ್ಲಿ ಈ ಬಾರಿ ತೀವ್ರ ಬರ ಬಂದಿದೆ. ಎತ್ತ ಕಣ್ಣು ಹಾಯಿಸಿದ್ರೂ ಹಸಿರು ಮಾಯವಾಗಿದೆ. ಕಾಡಿನಲ್ಲಿರುವ ನವಿಲು, ಜಿಂಕೆ, ಕರಡಿ, ಮೊಲ, ಸಾರಂಗ ಸೇರಿದಂತೆ ಸರಿಸೃಪಗಳಿಗೆ ಕುಡಿಯಲು ನೀರೇ ಇಲ್ಲ. ನೀರಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಪ್ರಾಣಿಪ್ರಿಯರು ಪ್ರಾಣಿಗಳ ದಾಹಕ್ಕೆ ಮರುಗಿದ್ದು ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ.

    ಗುಡಿಬಂಡೆಯ ಕೆಲವು ಯುವಕರು ಸ್ವಯಂಸೇವಾ ಸಂಘಗಳ ಸಹಾಯದೊಂದಿಗೆ ಅರಣ್ಯದ ಜೀವ ಸಂಕುಲದ ರಕ್ಷಣೆಗೆ ಮುಂದಾಗಿದ್ದಾರೆ. ಜೋಳ, ಅಕ್ಕಿ, ನವಣೆ, ರಾಗಿ, ಸಜ್ಜೆ, ಸೇರಿದಂತೆ ದವಸ ಧಾನ್ಯಗಳನ್ನು ಮಿಕ್ಸ್ ಮಾಡಿ, ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗಿ ಕಾಡಿನ ಆಯಕಟ್ಟಿನ ಜಾಗಗಳಲ್ಲಿ ಇಡುತ್ತಿದ್ದಾರೆ. ದಾನಿಗಳಿಂದ ಸಿಮೆಂಟ್ ತೊಟ್ಟಿಗಳನ್ನು ಸಂಗ್ರಹಿಸಿ ಅದರಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷಿ ಮಾತು ಕೇಳಿ ಪಕ್ಷಿಗಳ ಮಾರಣಹೋಮ

    ಜ್ಯೋತಿಷಿ ಮಾತು ಕೇಳಿ ಪಕ್ಷಿಗಳ ಮಾರಣಹೋಮ

    ಬೆಂಗಳೂರು: ಪಾರ್ಕ್ ಗಳಲ್ಲಿ ಕಾಳು ತಿನ್ನುತ್ತಿದ್ದ ಹಕ್ಕಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಮಕ್ಕಳು ಹಾಗೂ ಕೆಲಸ ಇಲ್ಲದವರು ಜ್ಯೋತಿಷಿ ಮಾತು ಕೇಳಿ ಖಾರ ಬೂಂದಿ, ಹುರಿಗಡಲೆ ತಂದು ಪಕ್ಷಿಗಳಿಗೆ ಹಾಕುತ್ತಿದ್ದಾರೆ.

    ಜ್ಯೋತಿಷಿಗಳು ಮೂಕ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಹೂಡಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗುವುದಕ್ಕೆ, ಮಕ್ಕಳು ಆಗುವುದಕ್ಕೆ ಹೀಗೆ ಹಲವು ಹರಕೆಗಳು ಈಡೇರಬೇಕಂದರೆ ಹಕ್ಕಿಗಳಿಗೆ ಕಾಳು, ಖಾರ ಬೂಂದಿ ಹಾಕುವುದಕ್ಕೆ ಜ್ಯೋತಿಷಿಯೊಬ್ಬನು ಹೇಳಿದ್ದಾನೆ. ಹೀಗಾಗಿ ಪಾರ್ಕ್ ಗೆ ಬರುವ ವಾಕರ್ಸ್ ಪಕ್ಷಿಗಳಿಗೆ ಕಾಳುಗಳನ್ನು ಹಾಕುವ ಮೂಲಕ ಅವುಗಳ ಸಾವಿಗೆ ಕಾರಣರಾಗುತ್ತಿದ್ದಾರೆ.

    ಪ್ರಮುಖವಾಗಿ ಹುರಿಗಡಲೆ ಹಾಗೂ ಬೇಕರಿಯಲ್ಲಿ ಸಿಗುವ ಮಿಕ್ಚರ್, ಖಾರ ಬೂಂದಿ ಹಾಗೂ ಮನೆಯಲ್ಲಿ ಉಳಿದ ಎಣ್ಣೆ ಪದಾರ್ಥಗಳನ್ನು ಹಾಕುತ್ತಿದ್ದಾರೆ. ಇದನ್ನು ತಿಂದರೆ ಪಕ್ಷಿಗಳಿಗೆ ಜೀರ್ಣವಾಗುವುದಿಲ್ಲ. ಸರಿಯಾಗಿ ನೀರು ಕೂಡ ಸಿಗುವುದಿಲ್ಲ. ಇದರಿಂದ ಪಕ್ಷಿಗಳಿಗೆ ದಾಹ ಇನ್ನು ಹೆಚ್ಚಾಗುತ್ತೆ. ನೀರಿಲ್ಲದೆ ಪಕ್ಷಿಗಳು ಸಾವನ್ನಪ್ಪುತ್ತೆ ಎಂದು ಪಕ್ಷಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿರುವ ಕೆರೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮೂಕ ಪ್ರಾಣಿಗಳು ಸಾವಿನ ಅಂಚಿಗೆ ಸೇರುತ್ತಿವೆ. ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಪಕ್ಷಿಗಳಿಗೆ ಸನ್ ಸ್ಟ್ರೋಕ್ ಹಾಗೂ ಚಿಕನ್ ಪಾಕ್ಸ್ ಆಗುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ ಪರಿವಾಳಗಳಿಗೆ ಪ್ಯಾರಲಿಸಿಸ್ ಬರುವ ಸಾಧ್ಯತೆಗಳಿರುತ್ತವೆ.

    ಅಂತಹದರಲ್ಲಿ ಸಿಲಿಕಾನ್ ಸಿಟಿಯ ಜನ ಪಾರ್ಕಿನಲ್ಲಿ ವಾಕ್ ಮಾಡುವುದಕ್ಕೆಂದು ಪಕ್ಷಿಗಳ ಮಾರಣಹೋಮಕ್ಕೆ ಕಾರಣರಾಗುತ್ತಿದ್ದಾರೆ. ಜನ ಯಾವುದೋ ಸ್ವಾಮೀಜಿ ಹೇಳಿದ್ರು, ಜ್ಯೋತಿಷ್ಯದವರು ಹೇಳಿದ್ದಾರೆ ಎಂದು ಈ ಮೂಕ ಪಕ್ಷಿಗಳಿಗೆ ಏನ್ ಏನೋ ತಂದು ಹಾಕಿ ಅವುಗಳು ಪ್ರಾಣ ತೆಗೆಯುತ್ತಿದ್ದಾರೆ. ಸ್ವಾಮೀಜಿ, ಜ್ಯೋತಿಷಿಗಳ ಮಾತು ನಂಬದೇ ನಿಮ್ಮ ಮನೆ ಮೇಲೆ ಒಂದ್ ಬೌಲ್ ನೀರಿಡಿ. ಅವುಗಳ ನೀರಿನ ದಾಹವನ್ನು ನೀಗಿಸಿ ಎಂದು ಪಕ್ಷಿ ಪ್ರಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಜ್ರ ಕಾಠಿಣ್ಯ ಕುಸುಮ ಕೋಮಲ ಶ್ರೀಗಳಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚುಮೆಚ್ಚು!

    ವಜ್ರ ಕಾಠಿಣ್ಯ ಕುಸುಮ ಕೋಮಲ ಶ್ರೀಗಳಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚುಮೆಚ್ಚು!

    ಕಲ ಜೀವಗಳಿಗೂ ಪ್ರೀತಿಯ ಧಾರೆ ಎರೆದ ವಾತ್ಸಲ್ಯ ಮೂರ್ತಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚು ಮೆಚ್ಚು. ಶ್ರೀಗಳ ಶರಣ ವಿಚಾರಧಾರೆಯಲ್ಲಿ ಜಾತಿ ಮತಗಳ ಜಂಜಡವಿಲ್ಲ, ಪಂಥ ಪಂಗಡಗಳ ಪ್ರವರವಿಲ್ಲ, ಮೇಲು ಕೀಳುಗಳ ಮಾಲಿನ್ಯವಿಲ್ಲ, ಮಡಿ ಮೈಲಿಗೆಗಳ ಮೀಸಲಿಲ್ಲ, ಅಂತಸ್ತು ಅಧಿಕಾರಗಳ ಅವಿವೇಕವಿಲ್ಲ.

    ಶ್ರೀಗಳ ವಿಚಾರಧಾರೆಯಲ್ಲಿ ನಿಸರ್ಗಕ್ಕೆ ಬೆಲೆ ಇದೆ, ಬದುಕಿಗೆ ಬೆಲೆ ಇದೆ, ಕಾಯಕಕ್ಕೆ ಗೌರವಿದೆ. ದಾಸೋಹಕ್ಕೆ ದಿವ್ಯತೆಯಿದೆ ಅನ್ನುವ ತತ್ವ ಸಾರಿ ಅದರಂತೆಯೆ ಬದುಕಿದವರು. ಸ್ವಾಮೀಜಿ ಕಂಡ್ರೆ ಜಗತ್ತಿಗೆ ಮಾತ್ರವಲ್ಲ ಮಠದ ಅವರಣದ ಸಾಕು ಪ್ರಾಣಿಗಳಿಗೂ ಹಿಗ್ಗು. ಮಠದ ಅವರಣದಲ್ಲಿ ಖಾವಿ ಧರಿಸಿದ ಚೇತನ ನಡೆಯುತ್ತಿದ್ರೆ ದನಕರುಗಳು, ನಾಯಿಮರಿಗಳು, ಓಡೋಡಿ ಬರುತ್ತಿದ್ದವು.  ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಶ್ರೀಮಠದಲ್ಲಿರುವ ಗೋಶಾಲೆಗೆ ದಿನಕೊಮ್ಮೆಯಾದ್ರೂ ಹೋಗಿ ಬರದಿದ್ರೆ ಸ್ವಾಮೀಜಿಗಳಿಗೆ ಸಮಾಧಾನವೇ ಇರುತ್ತಿರಲಿಲ್ಲ. ದನಕರುಗಳ ಮೈ ನೇವರಿಸಿ ಹಸಿ ಹುಲ್ಲು, ಬಾಳೆಹಣ್ಣು ಕೊಟ್ಟು ಪ್ರೀತಿ ತೋರುತ್ತಿದ್ದ ಗುರುಗಳು, ಮಠದ ಅವರಣದಲ್ಲಿ ಅಡ್ಡಾಡುವ ಬೀದಿನಾಯಿಗಳಿಗೆ ಬಿಸ್ಕೇಟು, ಊಟ ಹಾಕುತ್ತಿದ್ದರು.

    ಅಷ್ಟೇ ಅಲ್ಲ ಬೆಟ್ಟ ಗುಡ್ಡಗಳ ಸುಂದರ ಪರಿಸರದಲ್ಲಿದ್ದ ಸಿದ್ದಗಂಗೆಯ ಬೆಟ್ಟದಲ್ಲಿದ್ದ ಒಂದು ಸುಂದರ ಜಿಂಕೆಗೆ ಶ್ರೀಗಳನ್ನು ಕಂಡ್ರೆ ಭಾರೀ ಪ್ರೀತಿಯಂತೆ. ಕೈಗೆ ಸಿಗುತ್ತಿದ್ದ ಈ ಜಿಂಕೆಗೂ ಪ್ರೀತಿಯಿಂದ ಆಹಾರ ಕೊಡುತ್ತಿದ್ರು ಶ್ರೀಗಳು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಇನ್ನು ನವಿಲಿಗೂ ಆಹಾರ ನೀಡುತ್ತಿದ್ದ ಗುರುಗಳ ಭಾವಚಿತ್ರ ಎಂತವರಿಗೂ ಅಚ್ಚರಿ ಮೂಡಿಸುವಂತಿದೆ. ಇನ್ನು ವಾರ್ಷಿಕವಾಗಿ ಮಠದ ಅವರಣದಲ್ಲಿ ದನಗಳ ಪರಿಷೆಯನ್ನು ಮಾಡಿಸುತ್ತಿದ್ದರು. ರೈತರು ತಮಗೆ ಬೇಕಾದ ರಾಸುಗಳನ್ನು ಆರಿಸಿಕೊಳ್ಳಲು ಈ ಪರಿಷೆಯಿಂದ ಸಾಧ್ಯವಾಗುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದಕ್ಕೆ ಮನುಷ್ಯರಷ್ಟೇ ಅಲ್ಲ 50ಕ್ಕೂ ಹೆಚ್ಚು ಪಕ್ಷಿಗಳು ಸಾವು!

    ಪ್ರಸಾದಕ್ಕೆ ಮನುಷ್ಯರಷ್ಟೇ ಅಲ್ಲ 50ಕ್ಕೂ ಹೆಚ್ಚು ಪಕ್ಷಿಗಳು ಸಾವು!

    ಚಾಮರಾಜನಗರ: ಮನುಷ್ಯ ತನಗೆ ಆಗುವ ನೋವನ್ನು ವ್ಯಕ್ತಪಡಿಸಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಪಕ್ಷಿಗಳು ಹಾಗೂ ಪ್ರಾಣಿಗಳು ಮೂಕ ವೇದನೆಯಲ್ಲಿಯೇ ಪ್ರಾಣ ಬಿಡುತ್ತವೆ. ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

    ವಿಷ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದ 80ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ವಿಷಯುಕ್ತ ಆಹಾರ ಸೇವಿಸಿದ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ. ಅವುಗಳು ನರಳಿ ನರಳಿ ಪ್ರಾಣಬಿಟ್ಟ ದೃಶ್ಯ ಮನಕಲಕುವಂತಿದೆ.

    ರಾಸಾಯನಿಕ ಅಥವಾ ಕ್ರಿಮಿನಾಶಕದ ವಾಸನೆ ಬಂದಿದ್ದರಿಂದ ಕೆಲವರು ಅಲ್ಲಿಯೇ ಪ್ರಸಾದ (ರೈಸ್‍ಬಾತ್) ಬೀಸಾಡಿದ್ದಾರೆ. ಪರಿಣಾಮ ಅದನ್ನು ತಿಂದ ಪಕ್ಷಿಗಳು ಕೂಡ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿವೆ. ಕಾಗೆ, ಗೊರವಂಕಗಳು ಸೇರಿದಂತೆ ವಿವಿಧ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಅನೇಕ ಪಕ್ಷಿಗಳು ದೇವಸ್ಥಾನ ಹೊರಗಿನ ಆವರಣದಲ್ಲಿ, ಮರದ ಕೆಳಗೆ, ಪೊದೆಯ ಒಳಗೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಿದ್ದು ಪ್ರಾಣ ಬಿಟ್ಟಿವೆ. ಪ್ರಸಾದದಲ್ಲಿ ವಿಷ ಬೆರೆಸಿರುವುದು ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪಕ್ಷಿಗಳು ತಟ್ಟಿದೆ. ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುವುದಕ್ಕೂ ಮುನ್ನ ದೇವಸ್ಥಾನದ ಸುತ್ತಲೂ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆರವು ಮಾಡುವ ಕೆಲಸ ಆಗಬೇಕಾಗಿದೆ.

    ವಿಷ ಬೆರೆಸಿದ್ದ ಆಹಾರವನ್ನು ತೆಗೆದು ಹಾಕದೇ ಇದ್ದರೆ ಮತ್ತಷ್ಟು ಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು, ನಾಯಕರು ದೇವಸ್ಥಾನದ ಸುತ್ತಮುತ್ತ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆಗೆದು ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

    https://youtu.be/lmYrOGtYaKE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

    ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

    ಗದಗ: ಬಹಳಷ್ಟು ಜನರಿಗೆ ಪಕ್ಷಿಧಾಮ ಎಂದಾಕ್ಷಣ ರಂಗನತಿಟ್ಟು ಹಾಗೂ ಬೆಂಗಳೂರಿನ ಬೆಳ್ಳುರು ಕೆರೆ ನೆನಪಾಗುತ್ತದೆ. ಈಗ ಅದರಷ್ಟೇ ಪ್ರಸಿದ್ಧಿಯಾದ ಪಕ್ಷಿಧಾಮವೊಂದು ಉತ್ತರ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಐತಿಹಾಸಿಕ ಕೆರೆ. ಸುಮಾರು 231 ಎಕರೆ ವಿಸ್ತೀರ್ಣ ಹೊಂದಿರುವ ಈ ಮಾಗಡಿ ಕೆರೆ, ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ದೇಶ-ವಿದೇಶಿಯ ಹಕ್ಕಿಗಳು ಚಳಿಗಾಲದ ಸಮಯದಲ್ಲಿ ಪ್ರತಿ ವರ್ಷ ಅವುಗಳ ಸಂತತಿಗಾಗಿ ಇಲ್ಲಿ ಲಗ್ಗೆ ಇಡುತ್ತವೆ.

    ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನದ ಲಡಾಕ್ ಹೀಗೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ, ಅಂದ, ಚೆಂದ ನೋಡಲು ಎರಡು ಕಣ್ಣುಗಳು ಸಾಲದು. ಇದರಿಂದ ನಮಗೆ ತುಂಬಾನೆ ಸಂತೋಷವಾಗುತ್ತೆ. ಜಿಲ್ಲಾಡಳಿತ ಈ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದು ಪಕ್ಷಿ ವೀಕ್ಷಕರು ಹೇಳುತ್ತಾರೆ.

    ಸುಮಾರು ಮೂರು ತಿಂಗಳ ಕಾಲ ಈ ಮಾಗಡಿ ಕೆರೆಯಲ್ಲಿ ಪಕ್ಷಿಗಳು ವಾಸವಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ವಿದೇಶಿ ಪಕ್ಷಿಗಳು ಕತ್ತಲಾಗುತ್ತಿದ್ದಂತೆಯೇ ಆಹಾರಕ್ಕಾಗಿ ಪಕ್ಕದ ಜಮೀನುಗಳಿಗೆ ಹೋಗುತ್ತವೆ. ರಾತ್ರಿ ಹೊತ್ತು ಆಹಾರಕ್ಕೆ ಹೋದರೆ ಮತ್ತೆ ಮುಂಜಾವು ಸಮಯ ಚಿಲಿ-ಪಿಲಿಗುಟ್ಟುತ್ತಾ ಕೆರೆಗೆ ಮರಳುತ್ತವೆ. ಈ ವಿದೇಶಿ ಬಾನಾಡಿಗಳು ಹಿಂಡು-ಹಿಂಡಾಗಿ ಬಂದು ಈ ಕೆರೆಯಲ್ಲಿ ಕುಳಿತುಕೊಳ್ಳುವ ದೃಶ್ಯ ನಯನ ಮನೋಹರವಾಗಿದೆ.

    ಈ ಬಾನಾಡಿಗಳ ಹಾರಾಟ, ಕೂಗಾಟ ಇವುಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಆದರೆ ಇಂತಹ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿಲ್ಲ. ಕೆರೆ ಹೂಳೆತ್ತುವುದು, ವಾಚ್ ಟವರ್, ಗಾರ್ಡನ್, ಕೂಡಲು ಬೆಂಚು, ಕುಡಿಯುವ ನೀರು, ವಾಹನ ಸೌಕರ್ಯ ಹೀಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈ ಪಕ್ಷಿಗಳನ್ನು ನೋಡಲು ನಿತ್ಯವೂ ಪ್ರವಾಸಿಗರು, ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಮನುಷ್ಯ ದೇಶ ಬಿಟ್ಟು ಹೊಗಬೇಕಾದರೆ, ಅನೇಕ ಕಾನೂನು ಪ್ರಕ್ರಿಯೆಗಳಿವೆ. ಆದರೆ ಈ ವಿದೇಶಿ ಅತಿಥಿಗಳಿಗೆ ಯಾವ ಕಾನೂನು ಅಡ್ಡಿಬರಲ್ಲ. ಹೀಗೆ ನೈಸರ್ಗಿಕವಾಗಿ ಪಕ್ಷಿಧಾಮವಾಗಿರುವ ಈ ಕೆರೆ ಇನ್ನಷ್ಟು ಕಾಯಕಲ್ಪ ಕಾಣಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv