Tag: Bird flu

  • ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

    ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

    ದೆಹಲಿ: 12ವರ್ಷದ ಬಾಲಕನೊಬ್ಬ ದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ ಮೃತಪಟ್ಟಿದ್ದಾನೆ.

    ಹಕ್ಕಿ ಜ್ವರದಿಂದ ಪ್ರಾಣ ಬಿಟ್ಟ ಮೊದಲ ಪ್ರಕರಣ ಇದಾಗಿದ್ದು, ಆತಂಕ ಮೂಡಿಸಿದೆ. ಏಮ್ಸ್​​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ. ಈ ವರ್ಷದಲ್ಲಿ ದೇಶದಲ್ಲೇ ಮೊದಲು ಹಕ್ಕಿ ಜ್ವರಕ್ಕೆ ಬಲಿಯಾಗುತ್ತಿರುವ ಮೊದಲ ಪ್ರಕರಣವಾಗಿದೆ.

    ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ  ಎಲ್ಲ ಸಿಬ್ಬಂದಿಯೂ ಐಸೋಲೇಟ್‍ಗೆ ಒಳಗಾಗಿದ್ದಾರೆ. ಈ ಬಗ್ಗೆ  ಮಾತನಾಡಿದ ಏಮ್ಸ್ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಆತನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ. ಬಾಲಕನ ಸಂಪರ್ಕಕ್ಕೆ ಬಂದ ವೈದ್ಯರು, ದಾದಿಯರು ಸೇರಿ ಎಲ್ಲರೂ ತಮ್ಮನ್ನು ತಾವು ಐಸೋಲೇಟ್‍ಗೆ ಒಳಪಡಿಸಿಕೊಂಡಿದ್ದಾರೆ. ಇನ್ನೇನಾದರೂ ಅವರಲ್ಲಿ ಹಕ್ಕಿಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಅವರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಹಕ್ಕಿ ಜ್ವರಕ್ಕೆ  H5N1  ಎಂದೂ ಕರೆಯುತ್ತಾರೆ. ಈ ವೈರಸ್ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಹಾಗೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇನ್ನು ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

    ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹರಿಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಇದು ಮನುಷ್ಯನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.

  • ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಾರಾಣಸಿ ಪ್ರವಾಸದಲ್ಲಿದ್ದಾರೆ. ಶಿಖರ್ ಧವನ್ ಮಾಡಿದ ತಪ್ಪಿಗೆ ನಾವಿಕ ಶಿಕ್ಷೆ ಅನುಭವಿಸುವಂತಾಗಿದೆ.

    ಗಂಗಾ ನದಿಯಲ್ಲಿ ದೋಣಿ ವಿಹಾರದ ವೇಳೆ ಶಿಖರ್ ಧವನ್ ಸೈಬಿರಿಯನ್ ಹಕ್ಕಿಗಳಿಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಖರ್ ಧವನ್ ಶೇರ್ ಸಹ ಮಾಡಿಕೊಂಡಿದ್ದರು. ಹಕ್ಕಿ ಜ್ವರದ ನಿಯಂತ್ರಣಕ್ಕಾಗಿ ಸರ್ಕಾರ ಪಕ್ಷಿಗಳಿಗೆ ಆಹಾರ ನೀಡದ ಕುರಿತು ಕೆಲ ಮಾರ್ಗಸೂಚಿಗಳನ್ನ ತಂದಿದೆ. ಆದ್ರೆ ಶಿಖರ್ ಧವನ್ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ನಾವಿಕ ಸೋನು ಸಹಾನಿ ಮತ್ತು ಬೋಟ್ ಮಾಲೀಕ ಪ್ರದೀಪ್ ಸಾಹಾನಿ ದಂಡ ಪಾವತಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಿದೆ. ಹಾಗಾಗಿ ವಾರಾಣಸಿ ನದಿ ದಡದಲ್ಲಿರುವ ಪಕ್ಷಿಗಳಿಗೆ ಆಹಾರ ನೀಡದಂತೆ ಸ್ಥಳೀಯ ಆಡಳಿತ ಮಂಡಳಿ ಕೆಲ ನಿಯಮಗಳನ್ನ ರೂಪಿಸಿತ್ತು.

    ವಾರಾಣಸಿಗೆ ಆಗಮಿಸಿದ್ದ ಧವನ್, ಕಾಲಭೈರವ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಂಜೆ ಗಂಗಾ ಆರತಿಯಲ್ಲಿಯೂ ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಬೋಟಿಂಗ್ ವೇಳೆ ಹಕ್ಕಿಗಳಿಗೆ ಕಾಳು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ವೈರಲ್ ಬಳಿಕ ವಾರಾಣಸಿ ಕಲೆಕ್ಟರ್ ನಾವಿಕರಿಗೆ ದಂಡ ವಿಧಿಸುವಂತೆ ಆದೇಶಿಸಿದ್ದರು

  • ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    – ಆತಂಕಕ್ಕೀಡಾದ ಗ್ರಾಮದ ಜನ

    ಲಕ್ನೋ: ಹಕ್ಕಿಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ತಿಂದು ಸುಮಾರು 6 ಬೀದಿ ಶ್ವಾನಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಗುರುವಾರ 12ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದ ಶೇಷಪುರ್ ರಸ್ತೆಯಲ್ಲಿ ಮೃತಪಟ್ಟಿದ್ದವು. ಈ ಘಟನೆ ಇದೀಗ ಪುರಾನ್ಪುರ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಮಿದ್ ಅವರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶೇರ್ ಪುರ್‍ನಲ್ಲಿ ಹಕ್ಕಿಜ್ವರದಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಒಂದು ವಾರದ ಹಿಂದೆ ಪುರಾನ್ಪುರ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿತ್ತು.

    ಬೀದಿ ಶ್ವಾನಗಳು ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು, ಶ್ವಾನಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ಸೇವಿಸಿ ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಹಿರಿಯ ಪಶು ವೈದ್ಯಕೀಯ ಅಧಿಕಾರಿಗಳು ಗುರುವಾರ ಬಾರ್ಖೇರಾ ನಗರದ ಪಂಚಾಯತ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕೋಳಿ ಮಾಂಸದ ಮಾದರಿಯನ್ನು ಪರೀಕ್ಷಿಸಲು ತೆಗೆದುಕೊಂಡಿದ್ದಾರೆ.

    ಇದೇ ರೀತಿ ಬುಧವಾರ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 50 ಕಾಗೆಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದವು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಲಾಗಿದೆ.

  • ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ – 48 ಗಂಟೆಯೊಳಗೆ 800 ಕೋಳಿ ಬಲಿ

    ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ – 48 ಗಂಟೆಯೊಳಗೆ 800 ಕೋಳಿ ಬಲಿ

    ಮುಂಬೈ: ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಹರಡಿರುವುದಾಗಿ ದೃಢಪಡಿಸಲಾಗಿದೆ. ಮುರುಂಬಾ ಎಂಬ ಗ್ರಾಮದಲ್ಲಿ ಇಲ್ಲಿಯವರೆಗೂ ಸುಮಾರು 800 ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿದೆ. ಅಲ್ಲಿನ ಜಿಲ್ಲಾಡಳಿತ ಸತ್ತ ಕೋಳಿಯ ರಕ್ತದ ಮಾದರಿಯನ್ನು ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ಕೋಳಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿರುವುದು ಖಚಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭಾನ್ ತಿಳಿಸಿದ್ದಾರೆ.

    ಸುದ್ದಿ ಮಾಧ್ಯಮದಲ್ಲಿ ಮಾತನಾಡಿದ ಮುಲ್ಜಿಕರ್ ಹಕ್ಕಿ ಜ್ವರದಿಂದ ಮಾನಷ್ಯರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಜನರನ್ನು ನಾವು ಈಗಾಗಲೇ ಪರೀಕ್ಷೆಗೆ ಒಳಪಡಿಸಿದ್ದೇವೆ. ಹಾಗಾಗಿ ಹಕ್ಕಿ ಜ್ವರ ಮನುಷ್ಯರಿಗೆ ಹರಡುತ್ತದೆ ಎಂದು ಯಾರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಈ ಮುನ್ನ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹಕ್ಕಿಜ್ವರ ಹರಡಿರುವದನ್ನು ದೃಢಪಡಿಸಿತ್ತು. ಈಗಾಗಲೇ ರೋಗ ಪೀಡಿತ ಪ್ರದೇಶಗಳಲ್ಲಿ ಹಕ್ಕಿ ಜ್ವರ ತಡೆಗಟ್ಟಲು ಎಲ್ಲ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

    ಹಕ್ಕಿ ಜ್ವರ ಹರಡಿರುವ ಪ್ರದೇಶಗಳ ಕುರಿತಂತೆ ವಿಚಾರಣೆ ನಡೆಸಲು ಕೇಂದ್ರ ತಂಡಗಳನ್ನು ದೇಶದಲ್ಲಿ ರಚಿಸಲಾಗಿದ್ದು, ತಂಡಗಳು ಇದೀಗ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ. ಕೇಂದ್ರ ತಂಡವೊಂದು ಜನವರಿ 9 ರಂದು ಕೇರಳ ರಾಜ್ಯಕ್ಕೆ ತಲುಪಿದ್ದು ಪ್ರಸ್ತುತ ಅಲ್ಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಂಕ್ರಾಮಿಕ ರೋಗ ಕುರಿತಾಗಿ ತನಿಖೆ ನಡೆಸಲು ಆರಂಭಿಸಿದೆ. ಮತ್ತೊಂದು ತಂಡ ಜನವರಿ 10 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದ್ದು ಅಲ್ಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದೆ.

    ಹಕ್ಕಿ ವಿಚಾರವಾಗಿ ತಪ್ಪು ಮಾಹಿತಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಾಗೂ ರೋಗ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

  • ದೇಶದ 7 ರಾಜ್ಯಗಳಲ್ಲಿ ಪಕ್ಷಿ ಜ್ವರ ದೃಢ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ದೇಶದ 7 ರಾಜ್ಯಗಳಲ್ಲಿ ಪಕ್ಷಿ ಜ್ವರ ದೃಢ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ನವದೆಹಲಿ: ಹರ್ಯಾಣ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪಕ್ಷಿ ಜ್ವರ ಬಂದಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವ ಉದ್ದೇಶದಿಂದ 9 ತ್ವರಿತ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಿದೆ.

    ಗುಜರಾತ್‍ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಗಳಲ್ಲಿ ಕಾಗೆ ಮತ್ತು ಕಾಡು ಹಕ್ಕಿಗಳ ಮಾದರಿಗಳಲ್ಲೂ ಸಹ ಪಕ್ಷಿಜ್ವರ (ಎಚ್-5) ಸೋಂಕು ಪತ್ತೆಯಾಗಿದೆ. ಈ ಎರಡೂ ರಾಜ್ಯಗಳಲ್ಲೂ ಸೋಂಕು ನಿಯಂತ್ರಣ ಕ್ರಮಗಳು ಪ್ರಗತಿಯಲ್ಲಿದೆ.

    ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ 86 ಕಾಗೆಗಳು ಮತ್ತು ಎರಡು ಬಾತು ಕೋಳಿಗಳು ಕೂಡ ಅಸಹಜ ಸಾವಿಗೀಡಾಗಿವೆ. ನಹಾನ್, ಬಿಲಾಸ್ ಪುರ್ ಮತ್ತು ಮಂಡಿಯಲ್ಲಿ ಕಾಡು ಹಕ್ಕಿಗಳ ಅಸಹಜ ಸಾವು ಸಂಭವಿಸಿದೆ. ಇವುಗಳ ಮಾದರಿಗಳನ್ನು ಪರೀಕ್ಷೆಗಾಗಿ ನಿಯೋಜಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

    ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಬಾಧಿತ ರಾಜ್ಯಗಳಿಗೆ ಈಗಾಗಲೇ ಕೇಂದ್ರದಿಂದ ಸೂಚನೆಗಳನ್ನು ನೀಡಲಾಗಿದೆ. ಈ ವರೆಗೆ ಪಕ್ಷಿ ಜ್ವರದ ಸೋಂಕು ಏಳು ರಾಜ್ಯಗಳಾದ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಖಚಿತಪಟ್ಟಿದೆ. ಪಕ್ಷಿಗಳ ಮಾದರಿಗಳ ಪರೀಕ್ಷಾ ವರದಿಗಳನ್ನು ದೆಹಲಿ ಮತ್ತು ಮಹಾರಾಷ್ಟ್ರದ ನಿಯೋಜಿತ ಪ್ರಯೋಗಾಲಯಗಳಿಗೆ ರವಾನಿಸಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.

    ಚತ್ತೀಸ್‍ಗಡದ ಬಲೋದ್ ಜಿಲ್ಲೆಯಲ್ಲಿ ಕಾಡು ಹಕ್ಕಿಗಳ ಮಾದರಿಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಕೇರಳದಲ್ಲಿ ಪಕ್ಷಿ ಜ್ವರ ದೃಢಪಟ್ಟು ಬಾಧಿತವಾಗಿರುವ ಎರಡು ಜಿಲ್ಲೆಗಳಲ್ಲಿ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯ ಪೂರ್ಣಗೊಂಡಿದೆ ಮತ್ತು ಕೇರಳದಲ್ಲಿ ಕಾರ್ಯಾಚರಣೆಯ ನಂತರದ ಕಣ್ಗಾವಲು ಕಾರ್ಯಕ್ರಮದ ಮಾರ್ಗಸೂಚಿ ಹೊರಡಿಸಲಾಗಿದೆ.

    ದೇಶದಲ್ಲಿ ಪಕ್ಷಿ ಜ್ವರ ಬಾಧಿತ ಪ್ರದೇಶಗಳಲ್ಲಿ ಇರುವ ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡಗಳು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಮತ್ತೊಂದೆಡೆ ಕೇಂದ್ರ ತಂಡಗಳು ಜನವರಿ 9 ರಂದು ಕೇರಳ ತಲುಪಿವೆ ಮತ್ತು ಸಂಕ್ರಾಮಿಕ ರೋಗ ಕಂಡು ಬಂದಿರುವ ಪ್ರದೇಶಗಳಲ್ಲಿ ಪರೀಕ್ಷಿಸುತ್ತಿದೆ. ಇನ್ನೊಂದು ಕೇಂದ್ರ ತಂಡ ಜನವರಿ 10 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದೆ ಮತ್ತು ಅಲ್ಲಿನ ರೋಗ ಬಾಧಿತ ಪ್ರದೇಶಗಳಲ್ಲಿ ಸಮೀಕ್ಷೆಯಲ್ಲಿ ನಿರತವಾಗಿದೆ.

    ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಮೂಲಗಳು, ಜೀವಂತ ಹಕ್ಕಿಗಳಿರುವ ಮಾರುಕಟ್ಟೆಗಳು, ಮೃಗಾಲಯ, ಕೋಳಿಸಾಕಾಣಿಕೆ ಕೇಂದ್ರಗಳು, ಮತ್ತಿತರ ಪ್ರದೇಶಗಳ ಆಸು ಪಾಸಿನಲ್ಲಿ ಕಣ್ಗಾವಲು ಹೆಚ್ಚಿಸಬೇಕು. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಮಾಡುವ ಜತೆಗೆ ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

  • ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    – ಹಕ್ಕಿ ಜ್ವರ ನಿಯಂತ್ರಣಕ್ಕೆ ರಾಜ್ಯಮಟ್ಟದ ಉನ್ನತ ಸಮಿತಿ

    ಬೆಂಗಳೂರು: ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ರಾಜ್ಯದಲ್ಲಿ ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.

    ಇಂದು ಆನ್‍ಲೈನ್ ಮೂಲಕ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾವಹಿಸುವಂತೆ ಸಚಿವರು ಸೂಚಿಸಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಇಲಾಖೆಯ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡದೆ ಮೊಟ್ಟೆ ಮತ್ತು ಮಾಂಸವನ್ನು ಸೇವಿಸಬಹುದಾಗಿದೆ. ಕೇರಳ ಹೊರತುಪಡಿಸಿ ಇತರೇ ರಾಜ್ಯಗಳಿಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೇರಳದಿಂದ ಬರುವ ಕೋಳಿ, ಕುಕ್ಕುಟ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

    ಗಡಿ ಭಾಗದಲ್ಲಿ ಹೈ ಅಲರ್ಟ್
    ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳು ಹಾಗೂ ಇತರೇ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಕ್ಕಿ ಜ್ವರ ತಡೆಗಟ್ಟಲು ರೋಗ ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಎಲ್ಲ ಕೋಳಿ ಫಾರಂಗಳಲ್ಲಿ ಮುಂಜಾಗೃತಾ ಕ್ರಮವಾಗಿ ರೋಗ ನಿಯಂತ್ರಣ ಔಷಧಿಗಳಿಂದ ಸ್ವಚ್ಛಗೊಳಿಸುವುದು ಮತ್ತು ಕನಿಷ್ಟ ಜೈವಿಕ ರಕ್ಷಣಾ ಪದ್ಧತಿ ಅಳವಡಿಕೊಳ್ಳುವಂತೆ ತೀರ್ಮಾನಿಸಿ ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದರು.

    ಕೇರಳದ ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾಡು ಹಕ್ಕಿಗಳು, ನೀರು ಹಕ್ಕಿಗಳು, ವಲಸೆ ಹಕ್ಕಿಗಳು ಬಾತುಕೋಳಿಗಳು, ಗೀಜಗದ ಹಕ್ಕಿಗಳು ಇತ್ಯಾದಿ ವಿವಿಧ ಪ್ರಭೇದದ ಹಕ್ಕಿಗಳ ಅಸಹಜ ಸಾವು ಅಥವಾ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಗಮನಹರಿಸಿ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಮುಂಜಾಗ್ರತಾ ಕ್ರಮವಾಗಿ ಅವಶ್ಯವಿರುವ ಪರಿಕರಗಳು ಮತ್ತು ರೋಗ ನಿಯಂತ್ರಕ ರಾಸಾಯನಿಕಗಳನ್ನು ಕ್ರೂಢೀಕರಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಪರಿಷ್ಕರಿಸಿ ಹೊರಡಿಸಿರುವ 2021ರ ಹಕ್ಕಿಜ್ವರದ ನಿಯಂತ್ರಣ ಹಾಗೂ ನಿರ್ವಹಣೆ ಮಾರ್ಗಸೂಚಿಗಳ ಪ್ರಕಾರ ಸರ್ವೇಕ್ಷಣೆ, ಕಣ್ಗಾವಲು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ನಗರ ಸಭೆ, ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಹಕ್ಕಿಗಳು, ಕೋಳಿಗಳ ಮರಣ ಸಂಭವಿಸಿದಲ್ಲಿ ಅದರ ಸಮೀಪ ಸಾರ್ವಜನಿಕರು ಹೊಗದಂತೆ ಮತ್ತು ಮುಟ್ಟದಂತೆ ತಿಳುವಳಿಕೆ ನೀಡಬೇಕು. ವೈಯಕ್ತಿಕ ಸುರಕ್ಷತೆಯನ್ನು ಅನುಸರಿಸಿ, ಜೈವಿಕ ಸುರಕ್ಷತಾ ಕ್ರಮಗಳೊಂದಿಗೆ ವಿಲೇವಾರಿ ಮಾಡಲು ಪಶುಸಂಗೋಪನೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

    ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳ್ಲಿ ವಿಶೇಷವಾಗಿ, ಪಕ್ಷಿಧಾಮ, ಪ್ರಾಣಿ ಸಂಗ್ರಹಾಲಯ ಹಾಗೂ ನೀರು ಸಂಗ್ರಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಕೋಳಿಗಳು, ಹಿತ್ತಲ ಕೋಳಿಗಳು, ಹಕ್ಕಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ. ಕೋಳಿ ಶೀತ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ವಹಿಸಿ ಹಾಗೂ ಜೈವಿಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರು ಸೂಚಿಸಿದ್ದಾರೆ.

    ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶೀ ರಾಜೇಂದ್ರಕುಮಾರ್ ಕಠಾರಿಯಾ, ಅಯುಕ್ತ ಹೆಚ್.ಬಸವರಾಜೇಂದ್ರ, ನಿರ್ದೇಶಕ ಡಾ.ಬಿ.ಎಸ್.ಶಿವಾರಾಮ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ, ನಗರಾಭಿದ್ಧಿ, ಸಾರಿಗೆ, ಗೃಹ ಇಲಾಖೆ, ಕಂದಾಯ ಇಲಾಖೆ, ಹಣಕಾಸು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

  • ಪ್ರಧಾನಿ ಮೋದಿ ಪಕ್ಷಿಗಳಿಗೆ ಉಣಿಸಿದ್ದಕ್ಕೆ ಹಕ್ಕಿ ಜ್ವರ ಬಂದಿದೆ: ಸಮಾಜವಾದಿ ಪಕ್ಷದ ನಾಯಕ

    ಪ್ರಧಾನಿ ಮೋದಿ ಪಕ್ಷಿಗಳಿಗೆ ಉಣಿಸಿದ್ದಕ್ಕೆ ಹಕ್ಕಿ ಜ್ವರ ಬಂದಿದೆ: ಸಮಾಜವಾದಿ ಪಕ್ಷದ ನಾಯಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಕ್ಷಿಗಳಿಗೆ ಆಹಾರ ತಿನಿಸಿದ್ದಕ್ಕೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಐಪಿ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಹಕ್ಕಿಗಳಿಗೆ ಆಹಾರ ಉಣಿಸುವ ಫೋಟೋ ಪೋಸ್ಟ್ ಮಾಡಿ, ಈ ವ್ಯಕ್ತಿಯನ್ನು ಏನು ಮಾಡಬೇಕು? ಅವರು ಬಡ ಪಕ್ಷಿಗಳಿಗೆ ಆಹಾರ ನೀಡಿದರು. ಆದರೆ ಅವು ಹಕ್ಕಿ ಜ್ವರದಿಂದ ಕೊನೆಗೊಂಡಿತು ಎಂದು ಬರೆದುಕೊಂಡಿದ್ದಾರೆ.

    ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮನುಷ್ಯರಿಗೆ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ದೆಹಲಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲು ಚಿಂತನೆ ನಡೆಸಿದೆ. ಕೇರಳ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ನಾಲ್ಕು ರಾಜ್ಯಗಳ 12 ಕೇಂದ್ರಗಳಲ್ಲಿ ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

  • ಹಕ್ಕಿ ಜ್ವರ, ಎಲ್ಲ ಜಿಲ್ಲೆಗಳಲ್ಲೂ ಹೈ ಅಲರ್ಟ್:  ಪ್ರಭು ಚವ್ಹಾಣ್

    ಹಕ್ಕಿ ಜ್ವರ, ಎಲ್ಲ ಜಿಲ್ಲೆಗಳಲ್ಲೂ ಹೈ ಅಲರ್ಟ್: ಪ್ರಭು ಚವ್ಹಾಣ್

    – ಕೇರಳ ಗಡಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ

    ಬೆಂಗಳೂರು: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ (ಎಚ್5ಎನ್8) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ ಎಲ್ಲ ಜಿಲ್ಲೆಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಹಕ್ಕಿ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರಿಗೆ ಸೂಚನೆ ನೀಡಲಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಪನಿರ್ದೇಶಕರುಗಳು ಹಕ್ಕಿ ಜ್ವರ ತಡೆಯಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿಯ ಸಭೆ ನಡೆಸಿ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಸದ್ಯ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಎಲ್ಲ ರೀತಿಯ ಎಚ್ಚರಿಗೆ ವಹಿಸಿ ರೋಗ ಲಕ್ಷಣ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕೇರಳ ಗಡಿ ಭಾಗದಲ್ಲಿ ಕೂಡಲೇ ಚೆಕ್ ಪೋಸ್ಟಗಳನ್ನು ನಿರ್ಮಿಸಿ ಕೇರಳದಿಂದ ಕೋಳಿ, ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸಬೇಕು. ಅಲ್ಲದೆ ಕೇರಳದಿಂದ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ಸ್ಯಾನಿಟೈಜ್ ಮಾಡಿ ಒಳ ಬಿಡಬೇಕು. ಅಲ್ಲದೆ ಕೈಗೊಂಡ ಕ್ರಮಗಳ ದೈನಂದಿನ ವರದಿಯನ್ನು ಉಪನಿರ್ದೇಶಕರು, ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

    ಗಡಿ ಜಿಲ್ಲೆಗಳಲ್ಲಿ ಇರುವ ಕುಕ್ಕುಟ ಕ್ಷೇತ್ರಗಳಿಂದ ಪ್ರತಿ ವಾರ ರ್ಯಾಂಡಮ್ ಆಗಿ ತಲಾ 5 ಸೀರಂ, 5 ಟ್ರೇಕಿಯಲ್ ಮತ್ತು 5 ಪರಿಸರ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.

    ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರ, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋಳಿ ಅಥವಾ ಹಕ್ಕಿಗಳ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ. ಹಕ್ಕಿ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನೆಡಸುವ ಬಗ್ಗೆ ಕ್ರಮ ವಹಿಸಬೇಕು. ಅಲ್ಲದೆ ಜೈವಿಕ ಸುರಕ್ಷಾತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

  • ಮೈಸೂರು, ಕೊಡಗಿನಲ್ಲಿ ಹಕ್ಕಿ ಜ್ವರ ಭೀತಿ : ಕರ್ನಾಟಕ-ಕೇರಳ ಗಡಿಯಲ್ಲಿ ಹೈ ಅಲರ್ಟ್

    ಮೈಸೂರು, ಕೊಡಗಿನಲ್ಲಿ ಹಕ್ಕಿ ಜ್ವರ ಭೀತಿ : ಕರ್ನಾಟಕ-ಕೇರಳ ಗಡಿಯಲ್ಲಿ ಹೈ ಅಲರ್ಟ್

    ಮೈಸೂರು: ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆ ಕರ್ನಾಟಕ- ಕೇರಳ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ. ಹಕ್ಕಿಜ್ವರದ ಪತ್ತೆಗಾಗಿ ಜಿಲ್ಲಾಡಳಿತ ನಿರಂತರ ಕಾರ್ಯಚರಣೆ ನಡೆಸುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

    ಕಳೆದ ವರ್ಷ ಮೈಸೂರಿನಲ್ಲಿ ಹಕ್ಕಿಜ್ವರದ ಹಿನ್ನೆಲೆಯಲ್ಲಿ ‘ಕಲ್ಲಿಂಗ್ ಆಪರೇಷನ್’ ನಡೆದಿತ್ತು. ಅದಕ್ಕಾಗಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಹಕ್ಕಿಜ್ವರ ಅಕ್ಕಪಕ್ಕದ ರಾಜ್ಯದಲ್ಲಿ ಕಂಡುಬಂದಿದೆ. ಹಾಗಾಗಿ ಅಲ್ಲಿ ಇದೀಗ ಕಲ್ಲಿಂಗ್ ಆಪರೇಷನ್ ನಡೆಯುತ್ತಿದೆ. ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿ ಪಕ್ಷಿ ಹಾಗೂ ಕೋಳಿ ಸಾಗಾಟ ನಿಷೇಧ ಮಾಡಲಾಗಿದೆ ಹಾಗೂ ಆ ರಾಜ್ಯಗಳಿಂದ ಬರುವ ವಾಹನಗಳನ್ನ ಸ್ಯಾನಿಟೈಜೆಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ವಲಸೆ ಹಕ್ಕಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಎಲ್ಲೆಲ್ಲಿ ವಲಸೆ ಹಕ್ಕಿಗಳು ಬರುತ್ತವೆ ಅಲ್ಲೆಲ್ಲ ಹಿಕ್ಕೆಗಳ ಸಂಗ್ರಹ ಮಾಡಿ ಲ್ಯಾಬ್‍ಗೆ ಕಳುಹಿಸಲಾಗಿದೆ. ಈವರೆಗೆ ಬಂದಿರುವ ಲ್ಯಾಬ್ ವರದಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಮೃಗಾಲಯಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧ ಅಥವಾ ಇತರೆ ನಿರ್ಧಾರಗಳ ಬಗ್ಗೆ ತೀರ್ಮಾನಿಸಿಲ್ಲ. ಹಕ್ಕಿಜ್ವರ ಪತ್ತೆಯಾದರೆ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದು ವಿವರಿಸಿದರು.

    ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಬಾವಲಿ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆಯನ್ವಯ ಪೊಲೀಸರು ಕೋಳಿ, ಕೋಳಿ ಮಾಂಸ ಸಾಗಣೆ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರೊಂದಿಗೆ ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ಈ ಕುರಿತಂತೆ ನಿಗಾ ವಹಿಸುತ್ತಿದ್ದಾರೆ.

    ಕೊಡಗಿನಲ್ಲಿ ಹೈ ಅಲರ್ಟ್: ಪಕ್ಕದ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕನ್ಫರ್ಮ್ ಆಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಹೇಳಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ 3 ಅಂತರರಾಜ್ಯ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕೊಡಗಿಗೆ ಕುಕ್ಕುಟೋದ್ಯಮದ ಯಾವುದೇ ಉತ್ಪನ್ನ ಬರುವುದಿಲ್ಲ. ಆದ್ರೆ ಕೊಡಗಿನಿಂದ ಕೇರಳಕ್ಕೆ ಕೋಳಿ ಉತ್ಪನ್ನ ಹೋಗುತ್ತದೆ. ಕೋಳಿ ಸಾಗಿಸಿ ವಾಪಸ್ ಆಗುವ ಖಾಲಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಜೊತೆಗೆ ಒಂದು ಪರ್ಸೆಂಟ್ ಹೈಪೋಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತಿದೆ. ಕೊಡಗಿನಲ್ಲಿ ಇದುವರೆಗೆ ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ಆದರೂ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ- ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್

    ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ- ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್

    – ಹಕ್ಕಿ ಜ್ವರವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಸರ್ಕಾರ
    – 48 ಸಾವಿರ ಪಕ್ಷಿಗಳನ್ನು ಕೊಲ್ಲಲು ನಿರ್ಧಾರ

    ತಿರುವನಂತಪುರಂ: ಹಕ್ಕಿ ಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ. ರಾಜ್ಯದ ಕೊಟ್ಟಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ ಈ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

    ಎರಡೂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸತ್ತ ಬಾತುಕೋಳಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ವೇಳೆ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಆದರೆ ಈ ಜ್ವರವೂ ಮನುಷ್ಯರಿಗೆ ಹರಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಹಕ್ಕಿ ಜ್ವರದಿಂದಾಗಿ ಕೊಟ್ಟಯಂನ ನೀಂದೂರ್ ಪಂಚಾಯಿತಿ ವ್ಯಾಪ್ತಿಯ ಜಮೀನಿನಲ್ಲಿ ಸುಮಾರು 1,650 ಬಾತುಕೋಳಿಗಳು ಸಾವನ್ನಪ್ಪಿದ್ದು, ಇದು ಪ್ರತ್ಯೇಕ ಪ್ರದೇಶವಾದ್ದರಿಂದ ಜನರಿಗೆ ಹರಡಿಲ್ಲ ಎನ್ನಲಾಗಿದೆ. ಆದರೂ ಕೊಟ್ಟಯಂ ಜಿಲ್ಲೆಯಲ್ಲಿ ತಲಾ 5 ಜನರ 8 ತಂಡಗಳನ್ನು ನೇಮಿಸಲಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

    ಕೇವಲ ಕೊಟ್ಟಯಂ ಮಾತ್ರವಲ್ಲದೆ ಆಲಪ್ಪುಳ ಹಾಗೂ ಕುಟ್ಟನಾಡ್ ಪ್ರದೇಶದಲ್ಲಿ ಸಹ ಈ ಹಕ್ಕಿ ಜ್ವರ ಪತ್ತೆಯಾಗಿರುವುದು ಆತಂಕವನ್ನು ಸೃಷ್ಟಿಸಿದೆ. ತಲವಾಡಿ, ಎಡತ್ವಾ, ಪಲ್ಲಿಪಾಡ್ ಹಾಗೂ ತಜಕ್ಕರ ಪಂಚಾಯಿತಿ ಪ್ರದೇಶಗಳಿಗೂ ಹಬ್ಬಿದೆ. ಅನೇಕ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸಹ ತೆರೆಯಲಾಗಿದೆ. ಅಲ್ಲದೆ ರ್ಯಾಪಿಡ್ ರಿಸ್ಪಾನ್ಸ್ ಫೋರ್ಸ್‍ಗಳನ್ನು ಹಾಕಲಾಗಿದೆ.

    ಅಲ್ಲದೆ ಹಕ್ಕಿ ಜ್ವರದ ಭೀತಿಯಿಂದಾಗಿ ನಿಯಂತ್ರಣಕ್ಕೆ ತರಲು ಒಂದು ಕಿ.ಮೀ.ವ್ಯಾಪ್ತಿಯಲ್ಲಿನ ಎಲ್ಲ ಪಕ್ಷಿಗಳನ್ನು ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿದೆ. ಸಾಕು ಪಕ್ಷಿಗಳನ್ನೂ ಸೇರಿದಂತೆ ಸುಮಾರು 48 ಸಾವಿರ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ.

    ವನ್ಯಜೀವಿ ಸಚಿವ ಕೆ.ರಾಜು ಅವರು ಈ ಕುರಿತು ಮಾತನಾಡಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಳಿಕ ರೈತರಿಗೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಸಹ ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಸಹ ಜನರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆ ಉದ್ದೇಶದಿಂದ ಹಕ್ಕಿಗಳನ್ನು ಕೊಲ್ಲಲಾಗಿತ್ತು.