Tag: biparjoy cyclone

  • ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಯಲ್ಲಿ ವಾಹನ ಸವಾರರ ಪರದಾಟ

    ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಯಲ್ಲಿ ವಾಹನ ಸವಾರರ ಪರದಾಟ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಇಂದು ಬೆಳ್ಳಂಬೆಳಗ್ಗೆಯೇ ಮಳೆರಾಯನ ಆಗಮನವಾಗಿದ್ದು, ನಗರದ ಹಲವೆಡೆ ಭಾರೀ ಮಳೆಯಾಗಿದೆ. ಭಾರೀ ಮಳೆಯ (Rain) ಪರಿಣಾಮ ವಾಹನ ಸವಾರರು ಸಂಚರಿಸಲು ರಸ್ತೆ ಕಾಣಿಸದೆ ಪರದಾಡಿದ್ದಾರೆ.

    ಚೆನ್ನೈನಲ್ಲಿ (Chennai) ಮೇಲ್ಮೈ ಸುಳಿಗಾಳಿಯ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಮುಂದಿನ 3 ಗಂಟೆಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (Meteorological Department) ನೀಡಿದೆ. ಅದೇ ರೀತಿ ಬೆಂಗಳೂರಿನಲ್ಲಿ ಮಳೆ ಪ್ರಾರಂಭವಾಗಿದ್ದು, ಹಲವೆಡೆ ಭಾರೀ ಪ್ರಮಾಣದ ಮಳೆಯಾಗಿದೆ. ವಿಧಾನಸೌಧದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ನಗರದ ಮೌರ್ಯ ಸರ್ಕಲ್, ಕೆಆರ್ ಸರ್ಕಲ್, ಶಿವಾನಂದ ಸರ್ಕಲ್, ರೇಸ್ ಕೋರ್ಸ್, ಮೆಜೆಸ್ಟಿಕ್, ಫ್ರೀಡಂ ಪಾರ್ಕ್, ಕಾರ್ಪೊರೇಷನ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ- ಬೆಳ್ಳಂಬೆಳಗ್ಗೆ ಕೊಡೆ ಹಿಡಿದ ಜನ

    ಸದಾಶಿವನಗರದಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ಕಾಂಗ್ರೆಸ್ (Congress) ಪ್ರತಿಭಟನೆ ಹಿನ್ನೆಲೆ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಡಬೇಕಿದ್ದ ಡಿಕೆ ಶಿವಕುಮಾರ್ ಮಳೆಯಿಂದಾಗಿ ಮನೆಯಲ್ಲಿಯೇ ಉಳಿದಿದ್ದಾರೆ. 11 ಗಂಟೆಗೆ ಕಾಂಗ್ರೆಸ್ ಪ್ರತಿಭಟನೆ ನಿಗದಿಯಾಗಿದ್ದು, ಇಲ್ಲಿಯವರೆಗೂ ಡಿಕೆಶಿ ಮನೆಯ ಮುಂದೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸುಳಿದಿಲ್ಲ. ಇದನ್ನೂ ಓದಿ: ಇನ್ಮೇಲೆ ಇಂದಿರಾ ಕ್ಯಾಂಟೀನ್‍ನಲ್ಲಿ ಸಿಗುತ್ತೆ ಮಂಗಳೂರು ಬನ್ಸ್- ದರದಲ್ಲೂ ಬದಲಾವಣೆ

    ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂನಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯ ಹಿನ್ನೆಲೆ ರಸ್ತೆ ಕಾಣಿಸದೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಜೂನ್ 21ರಂದು ಬೆಳಗ್ಗೆಯವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಮುಂದಿನ 5 ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಸಿಎಂ ಅವ್ರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ- 2018ರ ಪಬ್ಲಿಕ್ ಟಿವಿ ವರದಿ ತೆಗೆದು ಸರ್ಕಾರಕ್ಕೆ ತಿವಿದ ಯತ್ನಾಳ್

    ಬೆಂಗಳೂರಿನಲ್ಲಿ ಎಲ್ಲಿ ಎಷ್ಟು ಮಿ.ಮೀ ಮಳೆಯಾಗಿದೆ?

    ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಿದ್ದು, ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿಲೋಮೀಟರ್ ಇರುವ ಸಾಧ್ಯತೆಯಿದೆ. ಬಿಪರ್‌ಜಾಯ್ ಚಂಡಮಾರುತದಿಂದ (Biparjoy Cyclone) ಪ್ರಭಾವಗೊಂಡಿದ್ದ ಮುಂಗಾರು ಮತ್ತೆ ಚುರುಕಾಗಿದೆ. ಸೈಕ್ಲೋನ್ ಪರಿಣಾಮ ದೊಡ್ಡ ಅಲೆಗಳು ಸಮುದ್ರ ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರಣ ಬಿಸಿಲಿಗೆ ನಲುಗಿದ ಸರ್ಕಾರ – ಇಂದು ಹೈವೋಲ್ಟೇಜ್‌ ಸಭೆ

  • Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    ಗಾಂಧಿನಗರ: ಗುಜರಾತ್ (Gujarat) ರಾಜ್ಯದಲ್ಲಿ ಬಿಪರ್‌ಜಾಯ್ ಚಂಡಮಾರುತ ರಣಕೇಕೆ ಹಾಕುತ್ತಿದ್ದು, ಸ್ಥಳೀಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯ ಹಿನ್ನೆಲೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶಾಲೆಯೊಂದರ 127 ಜನರನ್ನು ರಾಷ್ಟ್ರೀಯ ವಿಪತ್ತು ಪಡೆ (NDRF) ಸ್ಥಳಾಂತರಿಸಿದೆ.

    ಬಿಪರ್‌ಜಾಯ್ ಚಂಡಮಾರುತದ (Biparjoy Cyclone) ಪರಿಣಾಮದಿಂದಾಗಿ ಗುಜರಾತ್ ರಾಜ್ಯ ತತ್ತರಿಸಿ ಹೋಗಿದ್ದು, ಸುಮಾರು 74,000 ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಕರಾವಳಿಯ ಸಮೀಪವಿರುವ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ದೇವಭೂಮಿ ದ್ವಾರಕ ಜಿಲ್ಲೆಯ ರೂಪನ್ ಬಂದರ್ ಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಅಲ್ಲೂ ನೀರಿನ ಮಟ್ಟ ಏರಿಕೆಯಾಗಲು ಪ್ರಾರಂಭಿಸಿದಾಗ ಅಲ್ಲಿಂದ ಇನ್ನೊಂದು ಶಾಲೆಗೆ ಸ್ಥಳಾಂತರಿಸಲು (Evacuated) ನಿರ್ಧರಿಸಲಾಯಿತು. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಮೊಣಕಾಲಿನವರೆಗೂ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮಕ್ಕಳನ್ನು ಹಾಗೂ ಆ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ವೇಳೆ ನವಜಾತ ಶಿಶುವೊಂದನ್ನು ಮಳೆಯಿಂದ ಯಾವುದೇ ಹಾನಿಯಾಗದ ರೀತಿಯಲ್ಲಿ ಬಟ್ಟೆಯಲ್ಲಿ ಸುತ್ತಿ ಬಳಿಕ ಖಾಲಿ ಸಿಮೆಂಟ್ ಚೀಲದಲ್ಲಿ (Cement Bag) ಇಟ್ಟುಕೊಂಡು ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿ ಒಳ ನುಸುಳುತ್ತಿದ್ದ ಐವರು ವಿದೇಶಿ ಭಯೋತ್ಪಾದಕರ ಹತ್ಯೆ

    ಶಿಶುವನ್ನು (Infant) ಸಿಮೆಂಟ್ ಚೀಲದಲ್ಲಿ ಹಾಕಿಕೊಂಡು ಸ್ಥಳಾಂತರಿಸುವ ವಿಡಿಯೋ ವೈರಲ್ ಆಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಮಗುವನ್ನು ಚೀಲದಲ್ಲಿ ಹಾಕಿಕೊಂಡು ನೀರಿನ ಮಟ್ಟ ಕಡಿಮೆ ಇರುವಲ್ಲಿ ಕುಟುಂಬಸ್ಥರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಅಲ್ಲದೇ ಉಳಿದ ಮಕ್ಕಳ ಕೈ ಹಿಡಿದುಕೊಂಡು ನೀರಿನಲ್ಲಿ ಕರೆದುಕೊಂಡು ಹೋಗುವ ಹಾಗೂ ಶಾಲೆಯಿಂದ ಸಾಮಗ್ರಿಗಳನ್ನು ಸಾಗಿಸುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಒಟ್ಟು 82 ಪುರುಷರು, 27 ಮಹಿಳೆಯರು, 15 ಮಕ್ಕಳು ಹಾಗೂ 3 ನರ್ಸಿಂಗ್ ಸಿಬ್ಬಂದಿಯನ್ನು ಶಾಲೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಗುಜರಾತ್‌ನ ಜಖೌ ಬಂದರಿನ ಬಳಿ ಶುಕ್ರವಾರ ಸಂಜೆ 125-140 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಭೂಕುಸಿತವುಂಟಾಗಿದೆ. ವಿಪರೀತ ಗಾಳಿ ಮಳೆಯ ಹಿನ್ನೆಲೆ ವಿವಿಧ ಸ್ಥಳಗಳಲ್ಲಿ 524ಕ್ಕೂ ಅಧಿಕ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸುಮಾರು ಒಂದು ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್‍ ತೀರದಲ್ಲಿಅಲ್ಲೋಲ ಕಲ್ಲೋಲ

    ಬಿಪರ್‌ಜಾಯ್ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

  • Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಗಾಂಧಿನಗರ: ಬಿಪರ್ ಜಾಯ್ ಚಂಡಮಾರುತ (Biparjoy Cyclone) ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಗುರುವಾರ ಮಧ್ಯರಾತ್ರಿ ನಂತರ ಸೈಕ್ಲೋನ್ ಕಛ್ ಬಳಿ ತೀರವನ್ನು ಪೂರ್ಣಪ್ರಮಾಣದಲ್ಲಿ ದಾಟಿದ್ದು, ಕ್ರಮೇಣ ದುರ್ಬಲಗೊಳ್ತಿದೆ.

    ಸದ್ಯ ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಕರಾಚಿಯತ್ತ ತೆರಳುತ್ತಿದೆ. ಯಾವುದೇ ಕ್ಷಣದಲ್ಲಿ ಇದು ವಾಯುಭಾರ ಕುಸಿತವಾಗಿ ಬದಲಾಗಲಿದೆ. ಬಿಪರ್‌ ಜಾಯ್ ತೀರ ದಾಟುವ ಸಂದರ್ಭದಲ್ಲಿ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ. ಬಿರುಗಾಳಿ ಸಹಿತ ಭಾರೀ ಮಳೆ ದೊಡ್ಡ ಮಟ್ಟದಲ್ಲಿ ಅನಾಹುತ ಸೃಷ್ಟಿಸಿದೆ. ಅನೇಕ ಕಡೆ ಸಾವಿರಾರು ಮರಗಿಡಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. 500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಕಾರ್ಯಕ್ರಮವೊಂದಕ್ಕೆ ಹಾಕಿದ್ದ ಬೃಹತ್ ಟೆಂಟ್ ಧರಾಶಾಯಿಯಾಗಿದೆ.

    ಮನೆ ಶೀಟ್‍ಗಳು, ಹೋರ್ಡಿಂಗ್‍ಗಳು ತರಗೆಲೆಯಂತೆ ಹಾರಿವೆ. 1000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ದಿಢೀರ್ ಪ್ರವಾಹ ಸೃಷ್ಟಿಯಾಗಿ ತಗ್ಗು ಪ್ರದೇಶಗಳೆಲ್ಲಾ ಜಲಮಯವಾಗಿವೆ. ಮಾಂಡ್ವಿಯಲ್ಲಿ ಹಲವು ಮನೆ, ಆಸ್ಪತ್ರೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ನಿನ್ನೆಯಿಂದ ನೂರಕ್ಕೂ ಹೆಚ್ಚು ರೈಲು ಬಂದ್ ಆಗಿವೆ. ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗ್ತಿದೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಭಾವ್‍ನಗರದ ಪ್ರವಾಹದಲ್ಲಿ ಸಿಲುಕಿದ್ದ ಮೇಕೆಗಳನ್ನು ಕಾಪಾಡಲು ಹೋದ ತಂದೆ ಮಗ ನೀರು ಪಾಲಾಗಿದ್ದಾರೆ. 23 ಮಂದಿ ಗಾಯಗೊಂಡಿದ್ದಾರೆ. 24 ಜಾನುವಾರು ಮೃತಪಟ್ಟಿವೆ. ಗುಜರಾತ್ ಸಿಎಂಗೆ ಕರೆ ಮಾಡಿದ ಪ್ರಧಾನಿ ಎಲ್ಲಾ ಮಾಹಿತಿ ಪಡೆದಿದ್ದಾರೆ. ಗಿರ್ ಅರಣ್ಯದಲ್ಲಿ ಪ್ರಾಣಿಗಳ ಸುರಕ್ಷತೆಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಸಂಜೆಯಿಂದ ರಾಜಸ್ಥಾನದಲ್ಲಿ ತೂಫಾನ್ ಪ್ರಭಾವ ಕಾಣಿಸಿಕೊಂಡಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಆಗ್ತಿದೆ. ಬರ್ಮೇರ್ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಮುಂಬೈ‌ನಲ್ಲೂ ಮಳೆ (Mumbai Rain) ಆಗ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿಯೇ ಇದೆ.

  • Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

    Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

    – ಸುರಕ್ಷಿತ ಸ್ಥಳಗಳಿಗೆ 1 ಲಕ್ಷ ಮಂದಿ ಶಿಫ್ಟ್

    ಗಾಂಧಿನಗರ: ಬಿಪರ್‌ಜಾಯ್ ತೂಫಾನ್ (Biparjoy Cyclone) ತೀವ್ರತೆಗೆ ಅರಬ್ಬಿ ಸಮುದ್ರ ತೀರ ಪ್ರದೇಶ ತತ್ತರಿಸಿದೆ. ಭೀಕರ ಚಂಡಮಾರುತ ಸಂಜೆ 7.10ರ ಸುಮಾರಿಗೆ ಗುಜರಾತ್‍ (Gujrat) ನ ಕಛ್ ಪ್ರಾಂತ್ಯ (Kutch) ದ ಕೋಟ್ ಲಖಪತ್ ಬಳಿ ತೀರವನ್ನು ತಾಕಿದೆ.

    ಗುಜರಾತ್ ತೀರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ. ಕೆಲವೆಡೆ ಇದಕ್ಕೆ ಭಾರೀ ಮಳೆ ಜೊತೆಯಾಗಿದೆ. ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸ್ತಿದೆ. ಗುಜರಾತ್ ತೀರದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ತೂಫಾನ್ ಸಂಪೂರ್ಣವಾಗಿ ತೀರವನ್ನು ದಾಟಲು ಕನಿಷ್ಠ ಐದಾರು ಗಂಟೆ ಬೇಕಾಗುತ್ತದೆ. ಸದ್ಯ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ತೀರ ದಾಟುವ ಹೊತ್ತಿಗೆ ಈ ಗಾಳಿಯ ವೇಗ 120ರಿಂದ 130 ಕಿಲೋಮೀಟರ್ ಗೆ ಹೆಚ್ಚಾಗಬಹುದು. ಜನತೆ ಎಚ್ಚರಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ತೀರ ಪ್ರದೇಶದ 20ಕ್ಕೂ ಹೆಚ್ಚು ಗ್ರಾಮಗಳಿಂದ ಜನರನ್ನು ಖಾಲಿ ಮಾಡಿಸಲಾಗಿದೆ. ಅಂದಾಜು 1 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸರ್ಕಾರ ಶಿಫ್ಟ್ ಮಾಡಿದೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಿಪರ್‌ಜಾಯ್ ರಾತ್ರಿ 11.30ರ ಹೊತ್ತಿಗೆ ತೀರವನ್ನು ದಾಟುವ ನಿರೀಕ್ಷೆ ಇದ್ದು, ತೀರ ದಾಟಿದ ನಂತರ ಇದು ತೀವ್ರ ತೂಫಾನ್ ಆಗಿ. ನಂತರ ದುರ್ಬಲಗೊಳ್ಳಲಿದೆ. ಇದರ ಪ್ರಭಾವ ಕಛ್-ಸೌರಾಷ್ಟ್ರ ಪ್ರಾಂತ್ಯದಲ್ಲಿ ಭಾರೀ ಮಳೆ ಆಗಲಿದೆ. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    ಈಗಾಗಲೇ ದ್ವಾರಕ, ಪೋರಬಂದರ್, ಜಾಮ್‍ನಗರ, ಮೋರ್ಬಿ ಸೇರಿ ಹಲವೆಡೆ ಮೂರರಿಂದ ಆರು ಮೀಟರ್ ಎತ್ತರದವರೆಗೂ ರಕ್ಕಸಗಾತ್ರದ ಅಲೆಗಳು ಏಳುತ್ತಿವೆ. ತೂಫಾನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲಗಳು, ಕಚೇರಿಗಳು, ಶಾಲೆಗಳು ಬಂದ್ ಆಗಿವೆ. 76 ರೈಲುಗಳ ಸಂಚಾರ ಬಂದ್ ಆಗಿದೆ. ಭೂಸೇನೆ, ನೌಕಾಪಡೆ, ವಾಯುಪಡೆಗಳು ಸನ್ನದ್ಧವಾಗಿವೆ. ಅರಬ್ಬಿ ಸಮುದ್ರದಲ್ಲಿ ಏರ್ಪಟ್ಟ ಚಂಡಮಾರುತಗಳಲ್ಲಿ ಇದು ಹೆಚ್ಚು ಕಾಲ ಚಾಲ್ತಿಯಲ್ಲಿರುವ ಸೈಕ್ಲೋನ್ ಆಗಿರುವುದು ವಿಶೇಷ.

    ಈ ಸೈಕ್ಲೋನ್ ಪ್ರಭಾವ ಗುಜರಾತ್ ಜೊತೆಗೆ 8 ರಾಜ್ಯಗಳ ಮೇಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಡಿಯು-ಡಾಮನ್, ಲಕ್ಷದ್ವೀಪ, ದಾದ್ರಾ ನಗರ್ ಹವೇಲಿ ಮೇಲೆ ಬೀರಿದೆ. ನೆರೆಯ ಪಾಕಿಸ್ತಾನ (Pakistan) ದಲ್ಲಿಯೂ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಇನ್ನು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಪರ್‌ಜಾಯ್ ಚಂಡಮಾರುತ ತೀವ್ರತೆಯನ್ನು ಸೌದಿಅರೇಬಿಯಾದ ಗಗನಯಾನಿ ಸುಲ್ತಾನ್ ಅಲ್‍ನೆಯಾಡಿ ಸೆರೆ ಹಿಡಿದಿದ್ದಾರೆ.

    ಬಿಪರ್‌ಜಾಯ್ ಸೈಕ್ಲೋನ್ ಕರ್ನಾಟಕದ ಕರಾವಳಿ ತೀರದಲ್ಲೇನೂ ದೊಡ್ಡ ಅವಾಂತರ ಉಂಟು ಮಾಡಿಲ್ಲ. ಹೆಚ್ಚಿದ ಗಾಳಿಯಿಂದಾಗಿ ಮಳೆ ಆಗಿಲ್ಲ. ಆದರೆ ಸಮುದ್ರ ಪಕ್ಷುಬ್ಧಗೊಂಡಿದೆ. ಪರಿಣಾಮ ಮಲ್ಪೆ ಪಡುಕೆರೆಯ ತೀರದಲ್ಲಿ ಕಡಲ್ಕೊರೆತ ಹೆಚ್ಚಿದೆ. ಅರ್ಧ ಕಿಲೋಮೀಟರ್‍ನಷ್ಟು ದೂರ ಕಡಲು ಕೊರೆತ ಉಂಟಾಗಿದೆ. ಭಾರೀ ಗಾತ್ರದ ಕಲ್ಲುಗಳನ್ನು ಭಾರೀ ಅಲೆಗಳು ಸಮುದ್ರದೊಳಕ್ಕೆ ಹೊತ್ತೊಯ್ದಿವೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕಡಲ ತೀರಗಳಲ್ಲಿ ರಕ್ಕಸಗಾತ್ರದ ಅಲೆಗಳು ಕಂಡುಬರ್ತಿವೆ. ಜೂನ್ 19ರವರೆಗೂ ಇದೇ ಪರಿಸ್ಥಿತಿ ಇರಲಿದೆ.. ಹೀಗಾಗಿ ಮೀನುಗಾರಿಕೆ ಬಂದ್ ಮಾಡಲಾಗಿದೆ. ಮೀನುಗಾರರು ತಮ್ಮ ಬೋಟುಗಳನ್ನು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಶಿಫ್ಟ್ ಮಾಡ್ತಿದ್ದಾರೆ.

  • Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

    Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

    ಗಾಂಧೀನಗರ: ಭೂಕಂಪಗಳು ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಹುಟ್ಟಿದ ಮಕ್ಕಳಿಗೆ ಅದೇ ಹೆಸರಿಡುವ ವಿಚಿತ್ರ ಪ್ರವೃತ್ತಿ ಹೊಸದೇನಲ್ಲ. ಅರಬ್ಬಿ ಸಮುದ್ರದಲ್ಲಿ ಈಗ ಬಿಪರ್‌ಜಾಯ್‌ (Cyclone Biparjoy) ಚಂಡಮಾರುತ ಅಬ್ಬರ ಜೋರಾಗಿದೆ. ಬಿರುಗಾಳಿ, ಭಾರೀ ಮಳೆ ತರುವ ಅಪಾಯದ ಈ ಸೈಕ್ಲೋನ್‌ ಹೆಸರನ್ನೇ ಗುಜರಾತ್‌ನಲ್ಲಿ (Gujarat) ನವಜಾತ ಹೆಣ್ಣು ಶಿಶುವಿಗೆ ಇಡಲಾಗಿದೆ.

    ಚಂಡಮಾರುತದ ಭೀಕರತೆಯಿಂದಾಗಿ ಭೂಕುಸಿತ ಉಂಟಾಗಿದೆ. ಸೈಕ್ಲೋನ್‌ ಹೆಚ್ಚಿನ ಅಪಾಯದ ಸೂಚನೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ ʼಬಿಪರ್‌ಜಾಯ್‌ʼ ಎಂದು ಹೆಸರು ಪಡೆದ ಶಿಶುವಿನ ತಾಯಿಯೂ ಒಬ್ಬರು. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ, ಈಗ ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಎಂಬಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಬ್ಬರಿಸುತ್ತ ಜನರನ್ನು ಕಾಡುತ್ತಿರುವ ಸೈಕ್ಲೋನ್‌ ಹೆಸರನ್ನೇ ಈಗ ತಮ್ಮ ಮಗಳಿಗೆ ಇಟ್ಟಿದ್ದಾರೆ.

    ಕೊರೊನಾ ಸಾಂಕ್ರಾಮಿಕ ತೀವ್ರ ಸ್ವರೂಪದಲ್ಲಿದ್ದಾಗ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಂಪತಿ ತಮ್ಮ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದರು. ಅಂತೆಯೇ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲೂ ವೈರಸ್‌ನ ಹೆಸರನ್ನು ಮಗುವೊಂದಕ್ಕೆ ಇಡಲಾಗಿತ್ತು. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

    ರಾಜಸ್ಥಾನದ ಕುಟುಂಬವೊಂದರ ದಂಪತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಗುವಿಗೆ ವಿಚಿತ್ರವಾಗಿ ಹೆಸರಿಟ್ಟರು. ಕೋವಿಡ್‌ ತಡೆಗಟ್ಟಲು ವಿಧಿಸಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಜನಿಸಿದ ಗಂಡು ಮಗುವಿಗೆ ‘ಲಾಕ್‌ಡೌನ್‌’ ಎಂದೇ ಹೆಸರಿಟ್ಟಿದ್ದರು.

  • ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    – ಭಾರೀ ಹಾನಿ, ರಕ್ಷಣಾ ಕಾರ್ಯಕ್ಕೆ ವೇಗ

    ಗಾಂಧೀನಗರ: ಕೆಲವೇ ನಿಮಿಷಗಳಲ್ಲಿ ಬಿಪರ್ ಜಾಯ್ (Biparjoy Cyclone) ಚಂಡಮಾರುತ ಗುಜರಾತ್‍ನ ಮಾಂಡ್ವಿ ತೀರಕ್ಕೆ ಅಪ್ಪಳಿಸಲಿದೆ. ಈಗಾಗಲೇ ಚಂಡಮಾರುತ ತೀವ್ರತೆಗೆ ಅರಬ್ಬಿ ಸಮುದ್ರ ತೀರ ಪ್ರದೇಶ ತತ್ತರಿಸಿದೆ. ರಾತ್ರಿಯ ವೇಳೆಗೆ ಚಂಡಮಾರುತ ಜಖೌ ಬಂದರು ದಾಟಲಿದೆ.

    ಗುಜರಾತ್ (Gujrat) ತೀರ ಪ್ರದೇಶದಲ್ಲಿ ಸದ್ಯಕ್ಕೀ 60-70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗ್ತಿದೆ. ಇನ್ನು ಸ್ವಲ್ಪ ಹೊತ್ತಲ್ಲೇ ಗಾಳಿಯ ವೇಗ ಇನ್ನೂ ಹೆಚ್ಚಾಗಲಿದೆ. ದೊಡ್ಡ ಮಟ್ಟದಲ್ಲಿ ಗಾಳಿ ಬೀಸುತ್ತಿರೋದ್ರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 75 ಸಾವಿರ್ಕಕೂ ಹೆಚ್ಚು ಕಡಲ ತೀರ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸರ್ಕಾರ ಶಿಫ್ಟ್ ಮಾಡಿದೆ. ಇದನ್ನೂ ಓದಿ: Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    ಸೈಕ್ಲೋನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲ, ಕಚೇರಿಗಳು, ಶಾಲೆಗಳನ್ನು ಬಂದ್ ಮಾಡಲಾಗಿದೆ. ಕಛ್, ಜುನಾಗಢ್, ದ್ವಾರಕಾ, ಪೋರ್ ಬಂದರ್, ಮಾಂಡವಿ, ಗಾಂಧಿನಗರ, ಮೊರ್ಬಿ, ಸೌರಾಷ್ಟ್ರಗಳಲ್ಲಿ ಎನ್‍ಡಿಆರ್‍ಎಫ್ ತಂಡ ನಿಯೋಜನೆ ಮಾಡಲಾಗಿದೆ. ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಈಗಿಂದಲೇ ರಕ್ಷಣಾ ಕಾರ್ಯಾಚರಣೆಗೆ ಸೇನಾ ಪಡೆಗಳು ಸಜ್ಜಾಗಿವೆ. 500ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ನಿರತವಾಗಿರಲಿವೆ. ಈಗಾಗ್ಲೇ ದ್ವಾರಕದ ಗೋಮತಿ ಘಾಟ್‍ಗೆ ಗೃಹ ಸಚಿವ ಹರ್ಷ ಸಾಂಗ್ವಿ ಭೇಟಿ ನೀಡಿದ್ದು ಜನರನ್ನು ಸ್ಥಳಾಂತರ ಮಾಡಿಸ್ತಿದ್ದಾರೆ.

  • Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ತಾಪಮಾನ ಹೆಚ್ಚುತ್ತಿದ್ದು ಜನರು ಮನೆಯಿಂದ ಹೊರ ಬರಲು‌ ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ತೀವ್ರ ಬಿಸಿಲಿಸಿದ್ದು, ಗಂಟೆಗೆ 30-40 ಕಿಮೀ ವೇಗದಲ್ಲಿ ಬಿಸಿ ಗಾಳಿ ಬೀಸಲಿದೆ.

    weather (1)

    ಮಂಗಳವಾರ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ಬುಧವಾರ ಇದು 41 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿಪರ್‌ ಜಾಯ್‌ ಚಂಡಮಾರುತ (Biparjoy Cyclone) ಇಂದು‌ ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ ಭಾಗದಲ್ಲಿ ಅಪ್ಪಳಿಸುತ್ತಿರುವ ಹಿನ್ನಲೆ‌ ಬಿಸಿ ಗಾಳಿಯ ಪ್ರಮಾಣ ತಗ್ಗಲಿದ್ದು ಮುಂದಿನ 4 ದಿನಗಳ 37°-39° ಸೆಲ್ಸಿಯಸ್‌ ತಾಪಮಾನ ಇರಲಿದೆ‌ ಎಂದು ಭಾರತೀಯ ಹವಾಮಾನ ‌ಇಲಾಖೆ‌ (IMD) ಹೇಳಿದೆ. ಇದನ್ನೂ ಓದಿ: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    weather

    ಸದ್ಯ ತೀವ್ರ ಬಿಸಿಲಿರುವ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬರಲು‌ ಹಿಂದೇಟು‌ ಹಾಕ್ತಿದ್ದಾರೆ. ಮಧ್ಯಾಹ್ನದ ವೇಳೆ‌ ಜನರ ಸಂಚಾರ ‌ವಿರಳವಾಗಿದೆ. ಉರಿ ಬಿಸಿಲಿನಿಂದ ಜನರಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದ್ದು ಬೆವರಿನಿಂದ ತುರಿಕೆ ಸಮಸ್ಯೆಯೂ‌ ಕಂಡು ಬರುತ್ತಿದೆ. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

    ನೈಋತ್ಯ ಮಾನ್ಸೂನ್ ಕಳೆದ ಗುರುವಾರ ಕೇರಳ ಕರಾವಳಿ ಭಾಗಕ್ಕೆ ಆಗಮಿಸಿದೆ. ದೆಹಲಿಯಲ್ಲಿ ಜೂನ್ 27ರ ವೇಳೆಗೆ ಮಾನ್ಸೂನ್ ಕಾಣಿಸಿಕೊಳ್ಳಬೇಕಿತ್ತು. ಆದರೆ ದೆಹಲಿಯಲ್ಲಿ ಮಾನ್ಸೂನ್ (Monsoon) ಆರಂಭವಾಗುವ ಬಗ್ಗೆ‌ ಹವಾಮಾನ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ. ಜೂನ್ 3ನೇ ವಾರದಲ್ಲಿ ಮಾನ್ಸೂನ್ ಬಗ್ಗೆ ಅಂದಾಜಿಸಬಹುದು ಎನ್ನಲಾಗಿದೆ.

  • ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

    ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

    ಮಂಗಳೂರು: ರಾಜ್ಯದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಆದರೆ ಕರಾವಳಿಯಲ್ಲಿ ಬಿಪರ್‌ಜಾಯ್‌ ಚಂಡಮಾರುತದ (Biparjoy Cyclone) ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ತಳ್ಳುತ್ತಿದ್ದಾರೆ.

    ಅರಬ್ಬೀ ಸಮುದ್ರದಲ್ಲಿ (Arabian Sea) ಎದ್ದಿರುವ ಚಂಡಮಾರುತದ ಪರಿಣಾಮ ಕಡಲು ಮಾತ್ರ ಭೋರ್ಗರೆಯುತ್ತ ಬರುತ್ತಿದ್ದು ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು (Mangaluru) ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಧರಾಶಾಯಿ ಆಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಫೋಟೋ ಲೀಕ್- ಸಚಿವ ಜಮೀರ್‌ಗೆ ಸುರ್ಜೇವಾಲ ಕ್ಲಾಸ್

    ಈ ಭಾಗದಲ್ಲಿ ಕಡಲ್ಕೊರೆತ ಪ್ರತಿ ಬಾರಿ ಕಾಣಿಸಿಕೊಳ್ಳುವ ಸಮಸ್ಯೆ. ಮಳೆ ಜೋರಾದರೆ, ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡರೆ, ಕರಾವಳಿಯ ಕೆಲವು ಪ್ರದೇಶಗಳು ಟಾರ್ಗೆಟ್ ಆಗುತ್ತವೆ. ಕಡಲ ರಾಜನ ಅಬ್ಬರಕ್ಕೆ ಭೂಪ್ರದೇಶ ಕೊಚ್ಚಿ ಹೋಗುತ್ತಿದ್ದು, ಅಲ್ಲಿನ ಮನೆಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಈ ಸಮಸ್ಯೆಗೆ ಪ್ರತಿ ಬಾರಿ ರಾಜಕಾರಣಿಗಳು ಶಾಶ್ವತ ಕಾಮಗಾರಿಯ ಭರವಸೆ ನೀಡಿದರೂ, ಅದು ಭರವಸೆಗಷ್ಟೇ ಸೀಮಿತವಾಗಿವೆ.

    ಕಳೆದ ಬಾರಿಯೂ ಮೀನುಗಾರಿಕೆ ಸಚಿವರಾಗಿದ್ದ ಎಸ್. ಅಂಗಾರ ಕೇರಳದ ಮಾದರಿ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರು. ಆದರೆ ಕಾಮಗಾರಿಗೆ ಅನುದಾನವನ್ನೇ ಬಿಡುಗಡೆ ಮಾಡಿರಲಿಲ್ಲ. ಇದೀಗ ರಾಜ್ಯದಲ್ಲಿ ಸರಕಾರ ಬದಲಾಗಿದ್ದು, ಮತ್ತೆ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಆಗಬೇಕು ಇಲ್ಲವೇ ಈ ಭಾಗದ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಒಂದೆಡೆ ಕಡಲು ಆಕ್ರಮಿಸಿಕೊಂಡು ಬರುತ್ತಿದ್ದರೆ, ಮತ್ತೊಂದೆಡೆ ಕಡಲಿಗೆ ಕಲ್ಲು ಹಾಕುವ ಕೆಲಸ ನಡೆಯುತ್ತಲೇ ಇದೆ. ಈ ರೀತಿ ಕಲ್ಲುಗಳನ್ನು ಸುರಿದರೆ, ಅದು ಪೂರ್ತಿಯಾಗಿ ಕಡಲಿನ ಒಳ ಸೇರುತ್ತವೆ. ಹತ್ತಾರು ವರ್ಷಗಳಿಂದಲೂ ಇದೇ ರೀತಿ ಆಗಿರುವುದರಿಂದ ಜನರು ಇಂತಹ ಅರೆಬರೆ ಕಾಮಗಾರಿಯ ನಾಟಕ ಬೇಡ ಎನ್ನುತ್ತಾರೆ. ಒಟ್ಟಿನಲ್ಲಿ ಮಳೆ ಬಿರುಸು ಪಡೆಯುವ ಮೊದಲೇ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದ್ದು ಇನ್ನು ಮಳೆ ಜೋರಾದಲ್ಲಿ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕ ಸ್ಥಳೀಯರಲ್ಲಿದೆ.

  • ಅತೀ ತೀವ್ರ ತೂಫಾನ್ ಆಗಿ ಬದಲಾದ ಬಿಪರ್ಜೋಯ್- ಮುಂಬೈನಲ್ಲಿ ವೈಮಾನಿಕ ಸೇವೆಗಳಲ್ಲಿ ವ್ಯತ್ಯಯ

    ಅತೀ ತೀವ್ರ ತೂಫಾನ್ ಆಗಿ ಬದಲಾದ ಬಿಪರ್ಜೋಯ್- ಮುಂಬೈನಲ್ಲಿ ವೈಮಾನಿಕ ಸೇವೆಗಳಲ್ಲಿ ವ್ಯತ್ಯಯ

    – ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ, ಕಟ್ಟೆಚ್ಚರ

    ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಏರ್ಪಟ್ಟಿರುವ ಬಿಪರ್ಜೋಯ್ (Biparjoy Cyclone) ತೂಫಾನ್ ಅತಿ ತೀವ್ರ ಚಂಡಮಾರುತವಾಗಿ ಬದಲಾಗಿದೆ. ಕರಾವಳಿ ತೀರದತ್ತ ಇದು ಚಲಿಸ್ತಿರುವ ಹಿನ್ನೆಲೆಯಲ್ಲಿ ಬಲವಾದ ಗಾಳಿ ಬೀಸತೊಡಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ರಕ್ಕಸಗಾತ್ರದ ಅಲೆಗಳು ಭೀತಿಯನ್ನುಂಟು ಮಾಡ್ತಿವೆ.

    ಬಿರುಗಾಳಿಸಹಿತ ಮಳೆ ವೈಮಾನಿಕ ಸೇವೆಗಳಿಗೆ ಅಡ್ಡಿಯನ್ನುಂಟು ಮಾಡ್ತಿವೆ. ಮುಂಬೈ ಏರ್ ಪೋರ್ಟ್ (Mumbai Airport) ನಲ್ಲಿ ವಿಮಾನಗಳ ಆಗಮನ-ನಿರ್ಗಮನದಲ್ಲಿ ವ್ಯತ್ಯಯವಾಗಿದೆ. ಕೆಲ ವಿಮಾನ (Flights) ಗಳು ರದ್ದಾದ್ರೆ, ಇನ್ನೂ ಕೆಲ ವಿಮಾನಗಳ ಹಾರಾಟ ವಿಳಂಬವಾಗಿದೆ. ಪ್ರಯಾಣಿಕರು ಪರದಾಡುತ್ತಿದ್ದಾರೆ.

    ಇದೇ 15ರಂದು ಗುಜರಾತ್‍ನ ಕಛ್ ಮತ್ತು ಪಾಕಿಸ್ತಾನ (Pakistan) ದ ಕರಾಚಿ ನಡುವೆ ಬಿಪರ್ಜೋಯ್ ಚಂಡಮಾರುತ ತೀರವನ್ನು ದಾಟಲಿದೆ. ಸದ್ಯ ಪೋರಬಂದರ್‍ನಿಂದ 310ಕಿಲೋಮೀಟರ್ ದೂರದಲ್ಲಿ, ದ್ವಾರಕದಿಂದ 430 ಕಿಲೋಮೀಟರ್ ಸೈಕ್ಲೋನ್ ಕೇಂದ್ರೀಕೃತವಾಗಿದ್ದು, ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಈಶಾನ್ಯ ದಿಕ್ಕಿನತ್ತ ಚಲಿಸ್ತಿದೆ. ಚಂಡಮಾರುತ ತೀರದಾಟುವ ಸಂದರ್ಭದಲ್ಲಿ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆ.

    ಕಛ್ ಮತ್ತು ಸೌರಾಷ್ಟ್ರದಲ್ಲಿ ಆರೆಂಜ್ ಅಲರ್ಟ್ (Orange Alert) ಪ್ರಕಟಿಸಲಾಗಿದೆ. ದ್ವಾರಕೆಯಲ್ಲಿ 1300 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ, ಹತ್ತು ಹಲವು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಪಾಕಿಸ್ತಾನ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ತೀರ ಪ್ರದೇಶದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಇದನ್ನೂ ಓದಿ: 4 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

    ಇತ್ತ ರಾಜ್ಯದ ಕರಾವಳಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡಿದೆ. ಕಾರವಾರದಲ್ಲಿ ನಾಲ್ಕೈದು ಅಡಿ ಎತ್ತರಕ್ಕೆ ಅಲೆಗಳು ಏಳುತ್ತಿವೆ. ಸಮುದ್ರ ತೀರದಲ್ಲಿ ಮೀನುಗಾರಿಕೆ ಸೇರಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಆದರೂ ಮುರುಡೇಶ್ವರ (Murudeshwara) ದಲ್ಲಿ ಕೆಲ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ದುಸ್ಸಾಹಸ ಮಾಡಿದ್ದಾರೆ. ಹುಬ್ಬಳ್ಳಿಯ ಸಂತೋಷ್ ಎಂಬಾತ ಸಮುದ್ರದ ಪಾಲಾಗಿದ್ದಾನೆ. ಇಬ್ಬರನ್ನು ಲೈಫ್‍ಗಾರ್ಡ್‍ಗಳು ರಕ್ಷಣೆ ಮಾಡಿದ್ದಾರೆ.

    ಉಡುಪಿಯ ಮಲ್ಪೆ ಬೀಚ್‍ (Malpe Beach Udupi) ಗೆ ನೆಟ್ ಅಳವಡಿಸಲಾಗಿದೆ. ಪ್ರವಾಸಿಗರು ನೀರಿಗಿಳಿಯೋದನ್ನು ತಡೆಯಲು ಪೊಲೀಸರು, ಲೈಫ್‍ಗಾರ್ಡ್‍ಗಳು ಹರಸಾಹಸ ಮಾಡ್ತಿದ್ದಾರೆ. ಮಂಗಳೂರಿನ ಸೋಮೇಶ್ವರ, ಬಟ್ಟಪ್ಪಾಡಿ, ಉಳ್ಳಾಲ, ಸುರತ್ಕಲ್ ಬಳಿ ರಕ್ಕಸ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಕಡಲಂಚಿನ ಹಲವು ಮನೆ, ಮರ ನೀರುಪಾಲಾಗ್ತಿದೆ. ಮೀನುಗಾರರ ರಕ್ಷಣೆಗೆ ರಕ್ಷಣಾ ತಂಡ ನಿಯೋಜನೆ ಮಾಡಲಾಗಿದ್ದು, ಸಹಾಯವಾಣಿ ತೆರೆಯಲಾಗಿದೆ. ಇನ್ನು ಕಡಲ ಕೊರೆತ ಹೆಚ್ಚಿದ್ದು, ಮುಂಗಾರು ಸಂದರ್ಭದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ.