ಗಾಂಧಿನಗರ: ಎರಡು ಸಮುದಾಯಗಳಿಗೆ ಸೇರಿದ ದ್ವಿಚಕ್ರ ವಾಹನಗಳ ಸಣ್ಣದೊಂದು ಅಪಘಾತದಿಂದಾಗಿ ಸಂಘರ್ಷ ನಡೆದಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಪೊಲೀಸರು ಸಂಘರ್ಷಕ್ಕೆ ಸಂಬಂಧಪಟ್ಟ 22 ಜನರನ್ನು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಧರ್ಮದವರಿದ್ದ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆ ವೇಳೆ ನಡೆದ ವಾಕ್ಸಮರದಿಂದ ಹಿಂಸಾಚಾರ ನಡೆದಿದೆ. ಗಲಭೆಕೋರರು ಕಲ್ಲು ತೂರಾಟ, ದೇವಾಲಯಗಳ ಧ್ವಂಸ ಹಾಗೂ ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೀ ಕೊಡುಗೆಗಳಿಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ತಜ್ಞರ ಎಚ್ಚರಿಕೆ
ಭಾನುವಾರ ತಡರಾತ್ರಿ ನಡೆದ ರಸ್ತೆ ಅಪಘಾತ ಸಂಘರ್ಷಕ್ಕೆ ಕಾರಣವಾಗಿದ್ದು, 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಅಪಘಾತದಿಂದಾಗಿ ಎರಡು ಸಮುದಾಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಮಸ್ಯೆ ಉಲ್ಪಣಗೊಂಡಿದೆ. ಬಳಿಕ ಕಲ್ಲುತೂರಾಟ, ಹಿಂಸಾಚಾರ ನಡೆದಿದೆ. ಗಲಭೆಕೋರರು ರಸ್ತೆ ಬದಿಯಲ್ಲಿದ್ದ ದೇವಾಲಯಕ್ಕೆ ನುಗ್ಗಿ, ಅಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ 2 ಆಟೋರಿಕ್ಷಾಗಳು ಹಾಗೂ ಹಲವು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಮತ್ತೆ 15 ಜನರ ಬಂಧನ
ಅಪಘಾತ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾವ್ಪುರ ಮತ್ತು ಕರೇಲಿಬಾಗ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದುವರೆಗೆ ಒಟ್ಟು 22 ಜನರನ್ನು ಬಂಧಿಸಲಾಗಿದೆ. ಘಟನಾ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್: ಆಂಧ್ರ ಪ್ರದೇಶದಾದ್ಯಂತ ಬರೋಬ್ಬರಿ 108 ಬೈಕ್‍ಗಳನ್ನು ಕಳ್ಳತನ ಮಾಡಿದ್ದ ಆರು ಮಂದಿ ಆರೋಪಿಗಳ ಗುಂಪನ್ನು ಪೂರ್ವ ಗೋದಾವರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯ ಆರೋಪಿಗಳನ್ನು ಕವಾಡಿ ನಾನಿ (25) ಮತ್ತು ಬಂಡಿ ಶಿವ (22) ಎಂದು ಗುರುತಿಸಲಾಗಿದೆ. ಇವರು ಬೈಕ್‍ಗಳನ್ನು ಕದ್ದು ಕಾಥೆಟಿ ಚಿನ್ನ, ದುರ್ಗ ಪ್ರಸಾಸ್, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಎಂಬವರಿಗೆ ಮಾರಾಟ ಮಾಡುತ್ತಿದ್ದರು. ಇವರು ಕದ್ದ ಬೈಕ್‍ಗಳನ್ನು ಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಈವರೆಗೆ ಕದ್ದ 108 ಬೈಕ್‍ಗಳನ್ನು ಜಿಲ್ಲಾ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬೈಕ್‍ಗಳ ಮೌಲ್ಯ ಸುಮಾರು 43 ಲಕ್ಷ ರೂಪಾಯಿ. ಸುಮಾರು 108 ಬೈಕ್‍ಗಳನ್ನು ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯಿಂದ 34, ಪಶ್ಚಿಮ ಗೋದಾವರಿ 22, ವಿಶಾಖಪಟ್ಟಣಂ 43, ವಿಜಯವಾಡ 7 ಮತ್ತು ವಿಜಯನಗರಂದಿಂದ ಎರಡು ಬೈಕ್‍ಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕವಾಡಿ ನಾನಿ ಮತ್ತು ಬಂಡಿ ಶಿವ ಸಹೋದರರಾಗಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಅಲಮುರು ಮಂಡಲ ನಿವಾಸಿಗಳು. ಇಬ್ಬರು ಆರೋಪಿಗಳು ನಕಲಿ ಕೀ ಅಥವಾ ಲಾಕ್‍ಗಳನ್ನು ಮುರಿದು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದರು. ನಂತರ ಈ ಬೈಕ್‍ಗಳನ್ನು ಇತರ ನಾಲ್ಕು ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು. ಸುಮಾರು 12,000 ರಿಂದ 15,000 ರೂ.ಗೆ ಮಾರಾಟ ಮಾಡುತ್ತಿದ್ದರು. ಬೈಕ್ ಖರೀದಿ ಮಾಡುತ್ತಿದ್ದವರು ಗ್ರಾಹಕರಿಗೆ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ನಾನಿಯನ್ನು ಈ ಹಿಂದೆ ಎರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಸೋಲಾಪುರ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಈತ 2016ರಲ್ಲಿ ಜೆಸಿಬಿ ಆಪರೇಟರ್ ಆಗಿ ಅಬುದಾಮಿಗೆ ತೆರಳಿದ್ದು 2018ರವರೆಗೂ ಅಲ್ಲಿಯೇ ಕೆಲಸ ಮಾಡುತ್ತಿದ್ದನು. ಅಲ್ಲಿಂದ ವಾಪಸ್ ಬಂದು ಸುಲಭವಾಗಿ ಹಣ ಸಂಪಾದಿಸಲು ಬೈಕ್ ಕಳ್ಳತನ ಮಾಡಲು ಶುರು ಮಾಡಿದ್ದನು. ಅಲ್ಲದೇ ಆರೋಪಿಗಳು ಬೈಕ್ ಕಳ್ಳತನದ ಮೂಲಕ ಐಶಾರಾಮಿ ಜೀವನವನ್ನು ನಡೆದುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಗುಂಪು ಸುಮಾರು ಎರಡು ವರ್ಷಗಳಿಂದ ಬೈಕ್ ಕಳ್ಳತನದಲ್ಲಿ ತೊಡಗಿದೆ. ಸದ್ಯಕ್ಕೆ ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
East Godavari District Police arrested gang of Two Wheeler Offenders,recovered 108 Motor Bikes w/Rs. 43,00,000/-.
It is the highest recovery in the recent past in the State.
– ಮೈ ಮೇಲೆ ಒಂಚೂರು ಗಾಯಗಳಿಲ್ಲ
– ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ ಬೈಕ್‍ಗಳು
ವಿಜಯಪುರ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸವಾರರು ಸಾವನ್ನಪ್ಪಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೂವಿನಹಿಪ್ಪರಗಿ ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಬಳಿಯ ದಿಂಡವಾರ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕುಮಾರ್ (22) ಮೃತ ಬೈಕ್ ಸವಾರನಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಯುವಕರು ಕಲಬುರ್ಗಿ ಜಿಲ್ಲೆಯ ಅಪ್ಜಲಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದರು ಎನ್ನಲಾಗಿದೆ. ಆದರೆ ವೇಗವಾಗಿ ಬಂದು ಬೈಕ್‍ಗಳು ಡಿಕ್ಕಿ ಹೊಡೆದಿದ್ದರೂ ಮೃತಪಟ್ಟವರಿಗೆ ಕೇವಲ ತಲೆಗೆ ಮಾತ್ರ ಗಾಯಗಾಗಿದೆ. ಆದರೆ ಮೈ ಮೇಲೆ ಒಂಚೂರು ಗಾಯಗಳಿಲ್ಲ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೂ ಕೇವಲ ತಲೆ ಮೇಲೆ ಗಾಯವಾಗಿದೆ. ಇದರಿಂದ ಅಪಘಾತದ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ.
ಡಿಕ್ಕಿಯ ರಭಸಕ್ಕೆ ಎರಡು ಬೈಕ್‍ಗಳು ಹೊತ್ತಿ ಉರಿದಿವೆ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಎರಡು ಬೈಕ್‍ಗಳ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಗೆದ್ದಲಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಕಡೆಯಿಂದ ಹಾಸನ ಕಡೆ ಹೋಗುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಯೂನಿಕಾರ್ನ್ ಬೈಕಿನಲ್ಲಿದ್ದ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ಸವಾರನನ್ನ 35 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ.
ಬೈಕ್‍ಗಳು ಡಿಕ್ಕಿಯಾದ ರಭಸಕ್ಕೆ ಮಂಜುನಾಥ್ ಅಪಘಾತದ ಸ್ಥಳದಿಂದ ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದು ಸಾವನ್ನಪ್ಪಿದ್ದಾನೆ. ಪಲ್ಸರ್ ಬೈಕಿನಲ್ಲಿದ್ದ ಇಬ್ಬರು ಯುವಕರಲ್ಲಿ ಸಂಜಯ್ ಸ್ಥಿತಿ ಗಂಭೀರವಾಗಿದ್ದು, ಮತ್ತೋರ್ವ ಸವಾರ ಗೌತಮ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಷ್ಟೆ ಅಲ್ಲದೇ ಡಿಕ್ಕಿಯ ರಭಸಕ್ಕೆ ಎರಡು ಬೈಕ್‍ಗಳು ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿವೆ. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿಯಲು ಬೈಕ್ ಸವಾರರ ಬಳಿ ಸ್ಯಾನಿಟೈಸರ್ ಇದ್ದು, ಈ ಬೆಂಕಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀದರ್: ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಖಾಸಗಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಬಂಕ್ ಸೇವೆಯನ್ನು ಷರತ್ತುಗಳಿಗೊಳಪಟ್ಟು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಆದೇಶ ಹೊರಡಿಸಿದ್ದಾರೆ.
ಈ ನಿಯಮ ಸರ್ಕಾರಿ ವಾಹನಗಳಿಗೆ, ಸರ್ಕಾರಿ ನೌಕರರಿಗೆ, ವೃದ್ಧರಿಗೆ, ವೈದ್ಯಕೀಯ ಸಿಬ್ಬಂದಿಗೆ, ಎಲ್ಲ ಅಂಬುಲೆನ್ಸ್ ಗಳಿಗೆ, ಔಷಧಿ ವ್ಯಾಪಾರಿಗಳಿಗೆ, ಪತ್ರಕರ್ತರಿಗೆ, ಗ್ಯಾಸ್ ಸಿಲಿಂಡರ್ ತಲುಪಿಸುವ ವಾಹನಗಳಿಗೆ ಸೇರಿದಂತೆ ಕೇವಲ ಅವಶ್ಯಕ ಸೇವಾ ವ್ಯಾಪ್ತಿಗೊಳಪಡುವುದನ್ನು ಹೊರತುಪಡಿಸಿ ಎಲ್ಲ ದ್ವಿಚಕ್ರ ವಾಹನಗಳಿಗೂ ಪೆಟ್ರೋಲ್ ಹಾಕದಂತೆ ಸೂಚಿಸಲಾಗಿದೆ.
ಅಗತ್ಯ ಸೇವೆಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಪೆಟ್ರೋಲ್ ತುಂಬಿಸುವಾಗ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ತೋರಿಸಬೇಕು. ಪೆಟ್ರೋಲ್ ಬಂಕ್ ಸಿಬ್ಬಂದಿ ಸಹ ಐಡಿ ಕಾರ್ಡ್ ಪರಿಶೀಲಿಸಿ ಇಂಧನ ತುಂಬಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಲ ಬೈಕ್ ಸವಾರರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಕಾನೂನು ಪಾಲನೆಯಲ್ಲಿ ಅಡೆತಡೆಯುಂಟಾಗುತ್ತಿದೆ. ಬೇಕಾಬಿಟ್ಟಿಯಾಗಿ ಜನ ಓಡಾಡುತ್ತಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೆ ಖಾಸಗಿ ದ್ವಿಚಕ್ರ ವಾಹನಗಳಿಗೆ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‍ಗಳ ಸೇವೆಯನ್ನು ನಿರ್ಬಂಧಿಸುವುದು ಅವಶ್ಯಕವಾಗಿದೆ. ಅದರಂತೆ ಸಿರ್‍ಪಿಸಿ ಕಾಯ್ದೆ 1973ರ ಕಲಂ 133 ರನ್ವಯ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.
ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಜಾಗೃತಿ ಮೂಡಿಸಲು ಕಾರಣವೇನು?:
ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.
ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ನವದೆಹಲಿ: ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು ಮತ್ತೆ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ದಶಕಗಳ ಹಿಂದೆ ಬೈಕ್ ಪ್ರಿಯರಲ್ಲಿ ಹುಚ್ಚು ಹಿಡಿಸಿದ್ದ, ಜಾವಾ ಬೈಕುಗಳನ್ನು ಜಾವಾ ಮೋಟಾರ್ ಸೈಕಲ್ ಕಂಪನಿ ಪುನಃ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. ಕಂಪನಿ ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಜಾವಾ ಕಂಪನಿಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಅದೇ ಮಾದರಿಯನ್ನು ಉಳಿಸಿಕೊಂಡು ಬಂದಿದೆ. ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.
ಜಾವಾ ಹಾಗೂ ಜಾವಾ 42 ಬೈಕ್‍ಗಳು ಮಧ್ಯಪ್ರದೇಶದ ಪಿಥಮ್‍ಪುರ್ ನಲ್ಲಿರುವ ಮಹೀಂದ್ರಾ ಘಟಕದಲ್ಲಿ ತಯಾರಾಗಲಿದ್ದು, 2019ರ ಫೆಬ್ರವರಿಯಲ್ಲಿ ಬೈಕುಗಳು ಟೆಸ್ಟ್ ರೈಡ್‍ಗೆ ಸಿಗಲಿದೆ. ಫೆಬ್ರವರಿಯ ನಂತರ ಗ್ರಾಹಕರ ಕೈ ಸೇರಲಿವೆ. ಅಲ್ಲದೇ ಜಾವಾ ಪೆರಾಕ್ ಬೈಕ್ 2019ರ ಮಧ್ಯದಲ್ಲಿ ಗ್ರಾಹಕರಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಜಾವಾ ಬೈಕಿನ ಗುಣವೈಶಿಷ್ಟ್ಯಗಳು:
293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಭಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಒಟ್ಟಾರೆ ಬೈಕಿನ ತೂಕ 170 ಕೆಜಿ ಯಷ್ಟಿದೆ. ಇದು ಬ್ಲಾಕ್, ಮರೂನ್ ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿರಲಿದೆ.
ಜಾವಾ 42 ಬೈಕಿನ ಗುಣವೈಶಿಷ್ಟ್ಯಗಳು:
293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಭಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಒಟ್ಟಾರೆ ಬೈಕಿನ ತೂಕ 170 ಕೆಜಿ ಯಷ್ಟಿದೆ. ಇದು ನೆಬ್ಯುಲಾ ಬ್ಲೂ, ಕಾಮೆಟ್ ರೆಡ್, ಸ್ಟರ್ಲೈಟ್ ಬ್ಲೂ, ಲುಮೋಸ್ ಲೈಮ್, ಹ್ಯಾಲೆಸ್ ಟೀಲ್, ಗ್ಯಾಲಕ್ಟಿಕ್ ಗ್ರೀನ್
ಜಾವಾ ಪೆರಾಕ್ ಮಾದರಿ ಗುಣವೈಶಿಷ್ಟ್ಯಗಳು:
334ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 30 ಬಿಎಚ್‍ಪಿ ಯೊಂದಿಗೆ 31 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಬಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಈ ಪೆರಾಕ್ ಮಾದರಿಯಲ್ಲಿ ದೊಡ್ಡ ಬೋರ್ ಗಳನ್ನು ಬಳಸಲಾಗಿದೆ.
ನೂತನ ಜಾವಾ ಬೈಕುಗಳ ಬೆಲೆ ಎಷ್ಟು?
ನೂತನ ಬೈಕುಗಳಾದ ಜಾವಾ ಮಾದರಿಗೆ 1.64 ಲಕ್ಷ ರೂಪಾಯಿ, ಜಾವಾ 42 ಗೆ 1.55 ಲಕ್ಷ ರೂ. ಹಾಗೂ ಜಾವಾ ಪೆರಾಕ್ ಮಾದರಿಗೆ 1.89 ಲಕ್ಷ ರೂ. ಅಂದಾಜು ಬೆಲೆ ನಿಗದಿಯಾಗಿದೆ.
ನವದೆಹಲಿ: ಸುಮಾರು 20 ವರ್ಷ ಅಸಾಪಾಸಿನ ಯುವಕನಿಗೆ ಹಾಡಹಗಲೇ 50 ಬಾರಿ ಇರಿದು, ರಾಡ್‍ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ದೆಹಲಿಯ ಖಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.
ಆಶಿಶ್ ಹಲ್ಲೆಗೊಳಗಾದ ಯುವಕ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆಶಿಶ್ ಜಿಮ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‍ಗಳಲ್ಲಿ ಬಂದ ಸುಮಾರು 20 ಯುವಕರು ದುಗ್ಗಲ್ ಕಾಲೋನಿಯ ಬೀದಿಯಲ್ಲಿ ಆಶಿಶ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪರಿಚತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಆಶಿಶ್‍ನನ್ನು ಇಬ್ಬರು ವ್ಯಕ್ತಿಗಳು ತಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ 10ಕ್ಕೂ ಹೆಚ್ಚು ಬೈಕ್‍ಗಳು ಒಂದರ ಹಿಂದೆ ಒಂದು ಬಂದಿದ್ದು, ಆಶಿಶ್‍ನನ್ನು ಸುತ್ತುವರೆದಿದ್ದಾರೆ. ನಂತರ ಆಶಿಶ್‍ಗೆ ಸುಮಾರು 50 ಬಾರಿ ಇರಿದಿದ್ದು, ರಾಡ್‍ಗಳಿಂದ ಹೊಡೆದಿದ್ದಾರೆ. ಈ ವೇಳೆ ನೆರೆಹೊರೆಯವರು ಇದನ್ನ ತಡೆಯಲು ಮುಂದಾಗಲಿಲ್ಲ. ಆಶಿಶ್ ರಸ್ತೆ ಮೇಲೆ ಬಿದ್ದಿದ್ದು, ದುಷ್ಕರ್ಮಿಗಳು ಬೈಕ್‍ಗಳಲ್ಲಿ ಚಾಕು ಹಾಗೂ ರಾಡ್‍ಗಳನ್ನ ಹಿಡಿದು ಪರಾರಿಯಾಗೋದನ್ನ ವಿಡಿಯೋದಲ್ಲಿ ಕಾಣಬಹುದು.
ದಾಳಿ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತ ನಂತರ ಸ್ಥಳೀಯರು ಆಶಿಶ್‍ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಆಶಿಶ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕನಿಷ್ಟ 50 ಇರಿತದ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ವಿಷಯ ತಿಳಿಸಿದ 1 ಗಂಟೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಆಶಿಶ್ ಮೇಲೆ ದಾಳಿ ನಡೆದಿದ್ದು ಯಾಕೆ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಸ್ಥಳಿಯ ನಿವಾಸಿಗಳು ಹೇಳುವ ಪ್ರಕಾರ ಗುರುವಾರ ಬೆಳಗ್ಗೆ ನಡೆದ ಜಗಳದ ನಂತರ ಯುವಕರ ಗುಂಪು ಆಶಿಶ್ ಮೇಲೆ ದಾಳಿ ಮಾಡಿದೆ. ಬಾಲಕನೊಬ್ಬ ಹೋಳಿ ಪ್ರಯುಕ್ತ ನೀರಿನ ಬಲೂನ್‍ಗಳನ್ನ ಎಸೆದಿದ್ದಕ್ಕೆ ಯುವಕರು ಆತನಿಗೆ ಹೊಡೆಯುತ್ತಿದ್ದರು. ಈ ವೇಳೆ ಆಶಿಶ್ ಮಧ್ಯಪ್ರವೇಶಿಸಿ ಬಾಲಕನಿಗೆ ಹೊಡೆಯೋದನ್ನ ತಡೆದಿದ್ದ ಎಂದು ಹೇಳಲಾಗಿದೆ.