Tag: Bike Yatra

  • ಜೆಡಿಎಸ್ ಟಿಕೆಟ್‍ಗಾಗಿ ಬುಲೆಟ್ ಹತ್ತಿದ ಮಹಿಳಾ ಟಿಕೆಟ್ ಆಕಾಂಕ್ಷಿ

    ಜೆಡಿಎಸ್ ಟಿಕೆಟ್‍ಗಾಗಿ ಬುಲೆಟ್ ಹತ್ತಿದ ಮಹಿಳಾ ಟಿಕೆಟ್ ಆಕಾಂಕ್ಷಿ

    ಮಂಡ್ಯ: ಪುರುಷರಿಗೆ ನಾವೇನು ಕಮ್ಮಿಯಿಲ್ಲ ಎಂದು ಮಹಿಳೆಯೊಬ್ಬರು ಬುಲೆಟ್ ಹತ್ತಿ ಬೈಕ್ ಯಾತ್ರೆ ನಡೆಸುವ ಮೂಲಕ, ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗಾಗಿ ವರಿಷ್ಠರನ್ನು ಒತ್ತಾಯಿಸಿದ್ದಾರೆ.

    ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆಯಾದ ಗಂಟೆಗೌಡನಹಳ್ಳಿ ಪ್ರಭಾ ಎಂಬವರು ನೂರಾರು ಬೈಕ್‍ಗಳೊಂದಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗೆ ಒತ್ತಾಯಿಸಿ ಬೈಕ್ ಯಾತ್ರೆ ನಡೆಸಿದರು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬುಲೆಟ್ ಹತ್ತಿ ಬೈಕ್ ಯಾತ್ರೆ ನಡೆಸಿದ ಪ್ರಭಾ ಅವರಿಗೆ ನೂರಾರು ಬೈಕ್‍ಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಾಥ್ ನೀಡಿದರು.

    ಇದೇ ವೇಳೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಪ್ರಭಾ ಅವರು, ಈ ಬಾರಿ ಮಂಡ್ಯ ಕ್ಷೇತ್ರದಿಂದ ನನಗೇ ಟಿಕೆಟ್ ನೀಡಬೇಕು. ಈ ಮೂಲಕ ಪಕ್ಷದ ವರಿಷ್ಠರು ಮಹಿಳೆಯರ ಪ್ರಾಬಲ್ಯಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

    ಪ್ರಭಾ ಅವರ ಬೈಕ್ ಯಾತ್ರೆಗೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫರ್‍ವುಲ್ಲಾ ಖಾನ್ ಬೆಂಬಲ ಸೂಚಿಸಿದರು. ಆದರೆ ಪ್ರಭಾ ಅವರು ಬೈಕ್ ಯಾತ್ರೆ ನಡೆಸಲು ಅನುಮತಿ ಪಡೆದಿಲ್ಲ ಎಂದು ಪೊಲೀಸರು ಬೈಕ್ ಅನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಮಹಿಳಾ ಕಾರ್ಯಕರ್ತೆಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಪುರುಷ ಮುಖಂಡರ ಬೈಕ್ ಯಾತ್ರೆಗೆ ತೊಂದರೆ ಕೊಡದೆ, ಮಹಿಳೆಯರ ಬೈಕ್ ಯಾತ್ರೆಯನ್ನು ತಡೆಯುತ್ತಿರಿ ಎಂದು ಪೊಲೀಸರ ವಿರುದ್ಧ ಜೆಡಿಎಸ್ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದರು.