Tag: Bihar

  • ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

    ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

    ಪಾಟ್ನಾ: ಕಾರ್ ಅಪಘಾತಕ್ಕೀಡಾಗಿ ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಮೃತರನ್ನು ಆರ್ ಜೆಡಿ ಕಾರ್ಯಕರ್ತ ಹಾಗೂ ಮಾಜಿ ಮಂತ್ರಿ ಇಸ್ಲಾಮುದ್ದೀನ್ ಪುತ್ರ ಇಕ್ರಮುಲ್ ಹಾಕ್ ಬಾಘಿ, ಇಂಟೆಕ್ಹಾಬ್ ಆಲಂ, ಪಪ್ಪು ಹಾಗೂ ಚಾಲಕ ಶಾಹಿಲ್ ಎಂದು ಗುರುತಿಸಲಾಗಿದೆ.

    ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮದ್ವೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕಾರ್ ಕಿಶಾನ್ ಗಂಜ್ ನಿಂದ ಪಾಟ್ನಾ ಕಡೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿವೈಡರ್ ಇಬ್ಭಾಗವಾಗಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಸದ್ಯ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ಎಂಬವನರನ್ನು ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅತಿಥಿಗಳು, ವಿಐಪಿಗಳು ಭಾಗಿಯಾಗಿದ್ದರು.

  • ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

    ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

    ಪಟ್ನಾ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ ನಿವಾಸದ ಮುಂಭಾಗ ಬ್ಯಾನರ್ ಹಾಕಿದ್ದು, ಈ ಬ್ಯಾನರ್ ನಲ್ಲಿ ತೇಜ್ ಪ್ರಸಾದ್ ಮತ್ತು ಐಶ್ವರ್ಯಾ ಅವರನ್ನು ಶಿವ ಪಾರ್ವತಿಗೆ ಹೋಲಿಸಿ ಫೋಟೋ ಪ್ರಕಟಿಸಲಾಗಿತ್ತು.

    ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ನಗರದ ವಿವಿಧೆಡೆ ಬ್ಯಾನರ್ ಹಾಕಲಾಗಿತ್ತು. ಅದರಲ್ಲೂ ತೇಜ್ ಪ್ರತಾಪ್ ಹಾಗೂ ಐಶ್ವರ್ಯ ಅವರನ್ನು ಶಿವ-ಪಾರ್ವತಿ ರೂಪದಲ್ಲಿ ಬಿಂಬಿಸಲಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋದ ಬಗ್ಗೆ ಚರ್ಚೆ ನಡೆಯುತ್ತಿದ್ದು, ದೇವರಂತೆ ಚಿತ್ರಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

    ವಧು ಐಶ್ವರ್ಯ ರೈ ತಂದೆ ಚಂದ್ರಿಕಾ ಪ್ರಸಾದ್ ಮಾಜಿ ಸಚಿವರಾಗಿದ್ದು, ಈಗ ಈ ಮದುವೆಯ ಮೂಲಕ ರಾಜಕಾರಣಿಗಳಿಬ್ಬರು ಸಂಬಂಧಿಗಳಾಗಿದ್ದಾರೆ. ಮೇವು ಹಗರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ ಯಾದವ್ ಪ್ರಸ್ತುತ ಬಿರ್ಸಾಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಸದ್ಯ ಮಗನ ಮದುವೆಯಲ್ಲಿ ಭಾಗವಹಿಸಲು ಕೋರ್ಟ್ ಮೂರು ದಿನಗಳ ಪೆರೋಲ್ ಮಂಜೂರು ಮಾಡಿದೆ. ಇದರ ಜೊತೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾರ್ಖಂಡ್ ಹೈಕೋರ್ಟ್ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

  • ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ-5 ಸಾವು, 25 ಜನರಿಗೆ ತೀವ್ರ ಗಾಯ

    ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ-5 ಸಾವು, 25 ಜನರಿಗೆ ತೀವ್ರ ಗಾಯ

    ಪಾಟ್ನಾ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟಗೊಂಡು ಐದು ಜನ ಸಾವನ್ನಪ್ಪಿ, 25 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಜಲಾಲ್ಪುರ ಭಾಗದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

    ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಅಕ್ಕ-ಪಕ್ಕದ ಸುಮಾರು ಐದು ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು 17 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಘಟನೆ ನಡೆದ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಂಟು ಸದಸ್ಯರನ್ನೊಳಗೊಂಡ ಭಯೋತ್ಪಾದನ ವಿರೋಧಿ ತಂಡ(ಎಟಿಎಸ್) ಭೇಟಿ ನೀಡಿ ಸ್ಫೋಟದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

    ನಳಂದ ಜಿಲ್ಲಾಧಿಕಾರಿ ಮತ್ತು ಎಸ್.ಪಿ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಶೀಘ್ರವೇ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

  • ಮೇಲ್ ಸೇತುವೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದ ಬಸ್ – 12 ಮಂದಿ ದುರ್ಮರಣ

    ಮೇಲ್ ಸೇತುವೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದ ಬಸ್ – 12 ಮಂದಿ ದುರ್ಮರಣ

    ಪಾಟ್ನಾ: ಬಸ್ಸೊಂದು ಮೇಲ್ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಅನೇಕ ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಸಿತಾಮರ್ಹಿ ಯಲ್ಲಿ ನಡೆದಿದೆ.

    ಈ ಅಪಘಾತ ಜಿಲ್ಲೆಯ ರನ್ನಿಸೈದ್ಪುರ ಪೊಲೀಸ್ ಠಾಣೆಯ ಪ್ರದೇಶದಲ್ಲಿ ಬರುವ ಭಾನಸ್ಪತ್ತಿ ಗ್ರಾಮದ ಸಮೀಪದ ರಾಷ್ಟ್ರಿಯ ಹೆದ್ದಾರಿ 77 ರಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಖಾಸಗಿ ಬಸ್ ಮುಜಫರ್ ಪುರ್ ಜಿಲ್ಲೆಯ ಅರೋಯ್ ನಿಂದ ಬೈರಿಯಾಗೆ ತೆರಳುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 77 ರ ಮೇಲ್ ಸೇತುವೆ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗಿದ್ದ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ. ಮತ್ತಿರುಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಅಪಘಾತದ ನಂತರ ಬಸ್ ಪಲ್ಟಿ ಹೊಡೆದಿದ್ದು, ಬಸ್ ಕೆಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದು, ಸದ್ಯಕ್ಕೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿ ಶಿವಾನಾರಾಯಣ್ ರಾಮ್ ಹೇಳಿದ್ದಾರೆ.

  • ಸರ್ಕಲ್‍ಗೆ ಮೋದಿ ಹೆಸರು ಇಟ್ಟಿದ್ದಕ್ಕೆ ತಕರಾರು- 70ರ ವ್ಯಕ್ತಿಯ ಶಿರಚ್ಛೇದನ

    ಸರ್ಕಲ್‍ಗೆ ಮೋದಿ ಹೆಸರು ಇಟ್ಟಿದ್ದಕ್ಕೆ ತಕರಾರು- 70ರ ವ್ಯಕ್ತಿಯ ಶಿರಚ್ಛೇದನ

    ಪಾಟ್ನಾ: 70 ವರ್ಷದ ವ್ಯಕ್ತಿಯ ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ನಗರದ ಚೌಕಕ್ಕೆ ನರೇಂದ್ರ ಮೋದಿ ಚೌಕ್ ಎಂದು ಹೆಸರಿಟ್ಟ ಕಾರಣ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಬಿಜೆಪಿ ಬೆಂಬಲಿಗರಾಗಿದ್ದ ರಾಮಚಂದ್ರ ಯಾದವ್ ಮೃತ ದುರ್ದೈವಿ. ಇಲ್ಲಿನ ದರ್ಭಂಗಾ ಜಿಲ್ಲೆಯಲ್ಲಿ ಗುರುವಾರದಂದು 40-50 ಜನರ ಗುಂಪು ಯಾದವ್ ಅವರ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಸುಮಾರು 25-30 ಬೈಕ್‍ಗಳಲ್ಲಿ ಬಂದಿದ್ದ ತಂಡ ಹಾಕಿ ಸ್ಟಿಕ್ ಹಾಗೂ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

    ನನ್ನ ತಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಇದಕ್ಕೆ ಅಂತ್ಯ ಹಾಡಬೇಕೆಂದಿದ್ದರು. ಆದ್ರೆ ಹಾಕಿ ಸ್ಟಿಕ್ ಹಾಗೂ ಕತ್ತಿಗಳನ್ನ ಹಿಡಿದು ಬಂದ ತಂಡ ಅವರ ಮೇಲೆ ದಾಳಿ ಮಾಡಿತು. ನನ್ನ ಸಹೋದgನÀನ್ನೂ ಅವರು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಯಾದವ್ ಅವರ ಮಗ ತೇಜ್ ನಾರಾಯಣ್ ಮಾಧ್ಯಮಗಳಿಗೆ ಹೇಳಿದ್ದಾರೆ.

    2 ವರ್ಷಗಳ ಹಿಂದೆ ತನ್ನ ಸಹೋದರ ಚೌಕದಲ್ಲಿ ಪ್ರಧಾನಿ ಮೋದಿಯ ಫೋಟೋ ಹಾಕಿದ್ದಕ್ಕೆ ಅವರನ್ನೂ ಕೊಲೆ ಮಾಡಲಾಗಿತ್ತು ಎಂದು ತೇಜ್ ನಾರಾಯಣ್ ಹೇಳಿದ್ದಾರೆ. ದಾಳಿ ಮಾಡಿದವರು RJD(ರಾಷ್ಟ್ರೀಯ ಜನತಾ ದಳ) ಪಕ್ಷದ ಬೆಂಬಲಿಗರು ಎಂದು ಅವರು ತಿಳಿಸಿದ್ದಾರೆ.

    ದಾಳಿಗೆ ಪ್ರಚೋದನೆಯಾದ ಅಂಶವೇನು ಎಂಬುದಕ್ಕೆ ಉತ್ತರಿಸಿದ ಅವರು, RJDಯ ಭದ್ರಕೋಟೆಯಲ್ಲಿ ಮೋದಿ ಚೌಕವಿರುವ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಉಪಚುನಾವಣೆಯಲ್ಲಿ ಆರ್‍ಜೆಡಿ ಗೆಲುವು ಸಾಧಿಸಿದ್ದು ಪ್ರಚೋದನೆಯಾಗಿದೆ ಎಂದು ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಭಂಗಾ ಪೊಲೀಸರು ಶುಕ್ರವಾರದಂದು ನಾಲ್ವರನ್ನ ಬಂಧಿಸಿದ್ದಾರೆ. 2016ರ ಡಿಸೆಂಬರ್ ನಲ್ಲಿ ರಾಮಚಂದ್ರ ಯಾದವ್ ಜಿಲ್ಲೆಯ ಬುಧಾಲಾ ಗ್ರಾಮದ ಚೌಕಕ್ಕೆ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನ ಇಟ್ಟಿದ್ದರು. ಆದ್ರೆ ಗುರುವಾರದಂದು ಆಯುಧಗಳನ್ನ ಹೊಂದಿದ್ದ ತಂಡ ಯಾದವ್ ಅವರಿಗೆ ಹೆಸರು ಬದಲಾಯಿಸುವಂತೆ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಆದ್ರೆ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಹಳೇ ಭೂವಿವಾದ. ಎಲ್ಲಾ ರೀತಿಯಿಂದ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಈವರೆಗಿನ ತನಿಖೆಯ ಪ್ರಕಾರ ಉಪಚುನಾವಣೆ ಗೆಲುವಿಗೂ ಇದಕ್ಕೂ ಸಂಬಂಧ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

    ಇದಕ್ಕೆ ಯಾದವ್ ಒಪ್ಪದ್ದಕ್ಕೆ ಆಕ್ರೋಶಗೊಂಡ ತಂಡ ಅವರ ಶಿರಚ್ಛೇದನ ಮಾಡಿದೆ. ಈ ವೇಳೆ ತಂದೆಯನ್ನ ರಕ್ಷಿಸಲು ಬಂದ ಯಾದವ್ ಅವರ ಮಗ ಕಮಲ್ ದೇವ್ ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  • ಹೋಳಿ ಹಬ್ಬದ ತಿಂಡಿ ಕೊಡಿಸುವುದಾಗಿ ಹೇಳಿ ಚಿಕ್ಕಪ್ಪನಿಂದಲೇ ಅತ್ಯಾಚಾರ- 3ರ ಬಾಲಕಿಯ ಸ್ಥಿತಿ ಗಂಭೀರ

    ಹೋಳಿ ಹಬ್ಬದ ತಿಂಡಿ ಕೊಡಿಸುವುದಾಗಿ ಹೇಳಿ ಚಿಕ್ಕಪ್ಪನಿಂದಲೇ ಅತ್ಯಾಚಾರ- 3ರ ಬಾಲಕಿಯ ಸ್ಥಿತಿ ಗಂಭೀರ

    ಪಾಟ್ನಾ: ಮೂರು ವರ್ಷದ ಕಂದಮ್ಮನ ಮೇಲೆ 20ರ ಕಾಮುಕ ಚಿಕ್ಕಪ್ಪನೊಬ್ಬ ಅತ್ಯಾಚಾರ ಎಸಗಿದ್ದು, ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿರುವ ಅಮಾನವೀಯ ಘಟನೆ ಬಿಹಾರದ ತಾಕುರ್ಗಂಜ್ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಸಂತ್ರಸ್ತೆ ತಂದೆಯ ಸಹೋದರ ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆ ಸ್ಥಿತಿ ತೀವ್ರ ಗಂಭೀರವಾಗಿದ್ದು, ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


    ನಡೆದಿದ್ದೇನು?
    ಶುಕ್ರವಾರ ಮಧ್ಯಾಹ್ನ ಹೋಳಿ ಹಬ್ಬ ಆಚರಣೆ ನಡೆಯುತ್ತಿತ್ತು. ಈ ವೇಳೆ ತಂದೆಯ ಸಹೋದರ ಬಂದು ಬಾಲಕಿಗೆ ಹಬ್ಬದ ತಿಂಡಿ ಕೊಡಿಸುವ ನೆಪ ಹೇಳಿ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಚಂದ್ರ ಯಾದವ್ ತಿಳಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ಬಳಿಕ ಕಾಣೆಯಾಗಿದ್ದಳು. ಆದರೆ ಸ್ವಲ್ಪ ಸಮಯದ ನಂತರ ನಿರ್ಮಾಣ ಹಂತದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ನಂತರ ಕಟ್ಟಡದಿಂದ ಹೊರಬರುವಾಗ ಆರೋಪಿ ಚಿಕ್ಕಪ್ಪನನ್ನು ಸ್ಥಳೀಯರ ಗುಂಪೊಂದು ಬಂಧಿಸಿದ್ದು, ನಂತರ ಆರೋಪಿಯನ್ನು ನಮಗೆ ಒಪ್ಪಿಸಿದ್ದಾರೆ ಪೊಲೀಸರು ಹೇಳಿದರು.

    ಸಂತ್ರಸ್ತೆಯ ತಂದೆ ಲಕ್ನೋ ನಗರ ನಿಗಮ್ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು, ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಅನೇಕ ವರ್ಷಗಳಿಂದ ತಾಕುರ್ಗಂಜ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಘಟನೆಯಿಂದ ಗಂಭೀರವಾಗಿದ್ದ ಬಾಲಕಿಯನ್ನ ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್‍ಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕವೂ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂಬುದಾಗಿ ವರದಿಯಾಗಿದೆ.

    ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಪಾಟ್ನಾ: ಕುಡಿದ ಮತ್ತಿನಲ್ಲಿ ಎಸ್‍ಯುವಿ ಕಾರ್ ಹರಿಸಿ 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ, ಅಮಾನತುಗೊಂಡಿರುವ ಬಿಹಾರದ ಬಿಜೆಪಿ ನಾಯಕ ಬುಧವಾರದಂದು ಇಲ್ಲಿನ ಮುಜಾಫರ್‍ಪುರ್‍ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

    ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕ ಮನೋಜ್ ಬೈತಾ ಶನಿವಾರದಿಂದ ಕಾಣೆಯಾಗಿದ್ದರು. ಬುಧವಾರದಂದು ಬೈತಾ ಪೊಲೀಸರಿಗೆ ಶರಣಾಗಿದ್ದಾರೆ. ಅಪಘಾತದಲ್ಲಿ ಗಾಯಗಳಾದ ಹಿನ್ನೆಲೆಯಲ್ಲಿ ಬಂಧನದ ಬಳಿಕ ಬೈತಾ ಅವರನ್ನ ಚಿಕಿತ್ಸೆಗಾಗಿ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

    ವರದಿಗಳ ಪ್ರಕಾರ ಬೈತಾ ಅವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರವಿದ್ದು, ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದವರು ವಾಗ್ದಾಳಿ ನಡೆಸುತ್ತಿರೋದ್ರಿಂದ ಬಿಜೆಪಿಗೆ ಮುಜುಗರ ತಂದಿದೆ. ರಾಜ್ಯ ಬಿಜೆಪಿ ನಾಯಕರ ನಿರ್ದೇಶನದಂತೆ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಘಟನೆ ಬಳಿಕ ಬೈತಾ ಅವರನ್ನ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.

    ಶನಿವಾರದಂದು ಮುಜಾಫರ್‍ಪುರ್ ಹೊರವಲಯದ ಸರ್ಕಾರಿ ಶಾಲಾ ಕಟ್ಟಡವೊಂದರ ಬಳಿ ಮನೋಜ್ ಬೈತಾ ಚಲಿಸುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಮಕ್ಕಳ ಮೇಲೆ ಹರಿದಿತ್ತು. ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿದ್ದರು.

    ಘಟನೆ ಬಳಿಕ ಬೈತಾ ಕಾರಿನಿಂದ ಇಳಿದು ಪರಾರಿಯಾಗಿದ್ದರು. ಅಪಘಾತದಲ್ಲಿ ಐವರು ಮೊಮ್ಮಕ್ಕಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗಿದ್ದು, ಬೈತಾ ಅವರೇ ಕಾರು ಚಲಾಯಿಸುತ್ತಿದ್ದುದು ಗೊತ್ತಾಗಿದೆ.

    ಬಿಹಾರದಲ್ಲಿ ಮದ್ಯಪಾನ ನಿಷೇಧವಿದ್ದರೂ ಈ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಪರೀಕ್ಷೆಗೆ ಹೋಗುವಾಗ ಅಪಘಾತ – ಕೈಯಲ್ಲಿ ಡ್ರಿಪ್ಸ್ ಹಾಕೊಂಡೆ  SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

    ಪರೀಕ್ಷೆಗೆ ಹೋಗುವಾಗ ಅಪಘಾತ – ಕೈಯಲ್ಲಿ ಡ್ರಿಪ್ಸ್ ಹಾಕೊಂಡೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

    ಪಾಟ್ನಾ: ಪರೀಕ್ಷೆಗೆ ಹೋಗುವಾಗ ಅಪಘಾತ ಸಂಭವಿಸಿದ್ದು, ಕೊನೆಗೆ ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ ವಿದ್ಯಾರ್ಥಿನಿಯೊಬ್ಬರು SSLC ಪರೀಕ್ಷೆಯನ್ನು ಬರೆದಿದ್ದಾಳೆ.

    ಶ್ವೇತಾ ಕುಮಾರಿ ಪರೀಕ್ಷೆ ಬರೆದ ಸಾಹಸಿ ವಿದ್ಯಾರ್ಥಿನಿ. ಈಕೆ ಬಿಹಾರದ ಶಾರೈರಾಂಜನ್ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಗುರ್ಮ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.


    ಬಿಹಾರದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಶ್ವೇತಾ ಕುಮಾರಿ ಶನಿವಾರ ಮೋಹನ್ಪುರದಲ್ಲಿರುವ ತನ್ನ ಶಾಲೆಗೆ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬಿಹಾರದ ಸಮಸ್ತಿಪುರದಲ್ಲಿ ವೇಗವಾಗಿ ಬೋಲೆರೊ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಶ್ವೇತಾ ಕುಮಾರಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ಅಪಘಾತದಲ್ಲಿ ಗಾಯಗೊಂಡ ಶ್ವೇತಾ ಕುಮಾರಿಯನ್ನು ಸಹೋದರ ಮತ್ತು ಇತರರ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ನಾನು ಪರೀಕ್ಷೆ ಬರೆಯಲು ಹೋಗಬೇಕು ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಸಹೋದರನ ಬಳಿ ನಾನು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡು ಎಂದು ಮನವಿ ಮಾಡಿಕೊಂಡಿದ್ದಳು. ಕೊನೆಗೆ ಆಕೆಯ ಬೇಡಿಕೆಯನ್ನು ಕುಟುಂಬವು ಸಹ ಒಪ್ಪಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿಯಲ್ಲಿಯೇ ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಪರೀಕ್ಷೆ ಬರೆಯುವಾಗ ಆಕೆಗೆ ಏನಾದರೂ ತೊಂದರೆ ಯಾಗಬಹುದು ಎಂದು ಮುಂಜಾಗೃತ ಕ್ರಮವಾಗಿ ಆಕೆಗೆ ಸಹಾಯ ಮಾಡಲು ಮೂವರು ಮಹಿಳೆಯರನ್ನು ಕೂಡ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಒಂದು ಕಾಲಿಗೆ ಬ್ಯಾಂಡೇಜ್ ಮತ್ತು ಒಂದು ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ 10 ನೇ ಬೋರ್ಡ್ ಪರೀಕ್ಷೆಯನ್ನು ಬರೆದಿದ್ದಾಳೆ.

  • ಹೆರಿಗೆಯಾದ 4 ಗಂಟೆಯಲ್ಲಿ ನವಜಾತ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಪರೀಕ್ಷೆಗೆ ಕುಳಿತ ಮಹಿಳೆ!

    ಹೆರಿಗೆಯಾದ 4 ಗಂಟೆಯಲ್ಲಿ ನವಜಾತ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಪರೀಕ್ಷೆಗೆ ಕುಳಿತ ಮಹಿಳೆ!

    ಪಾಟ್ನಾ: ಬಿಹಾರದಲ್ಲಿ ಪರೀಕ್ಷಾ ಅವ್ಯವಹಾರಗಳ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ವಿದ್ಯಾರ್ಥಿಗಳ ಕುಟುಂಬಸ್ಥರು ಕಟ್ಟಡ ಏರಿ ಎಲ್ಲರ ಸಮ್ಮುಖದಲ್ಲೇ ಪುಸ್ತಕಗಳನ್ನ ನೀಡಿ ಕಾಪಿ ಮಾಡಲು ಸಹಾಯ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದೇ ಬಿಹಾರದಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ.

    ಬಬಿತಾ ಕುಮಾರಿ ಹೆರಿಗೆಯಾದ 4 ಗಂಟೆ ಬಳಿಕ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಪರೀಕ್ಷಾ ಕೊಠಡಿಯಲ್ಲಿ ಕುಳಿತಿದ್ದರು. ಈ ದೃಶ್ಯವನ್ನ ನೋಡಿ, ಶಿಕ್ಷಕರು ಹಾಗೂ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ರು. ಬಬಿತಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರದಿದ್ದರಿಂದ ಪರೀಕ್ಷೆ ಬರೆಯಲು ಆಕೆಗೆ ಕಷ್ಟವಾಗಿತ್ತು. ಇದನ್ನ ನೋಡಿದ ಮೇಲ್ವಿಚಾರಕರು, ಅಜ್ಜಿಗೆ ಮಗುವನ್ನ ಹಿಡಿದು ಕ್ಲಾಸ್‍ನೊಳಗೆ ಕೂರಲು ಅವಕಾಶ ಮಾಡಿಕೊಟ್ಟರು. ನಂತರ ಬಬಿತಾ ತನ್ನ ಪರೀಕ್ಷೆಯತ್ತ ಗಮನ ಹರಿಸಿದರಾದ್ರೂ, ಆಗಾಗ ಮಗುವಿನ ಬಳಿ ಬಂದು ಮತ್ತೆ ಹೋಗಿ ಪರೀಕ್ಷೆ ಬರೆಯುತ್ತಿದ್ದರು.

    ಬಬಿತಾಗೆ ಒಂದು ವರ್ಷದ ಹಿಂದೆ ಕಾರ್ಮಿಕರೊಬ್ಬರ ಜೊತೆ ಮದುವೆಯಾಗಿತ್ತು. ಬಬಿತಾ ಪತಿ ಪರೀಕ್ಷಾ ಕೇಂದ್ರದ ಹೊರಗೆ ನಿಂತು, ಬೆಳಗ್ಗೆಯಷ್ಟೇ ತನ್ನ ಮಗುವಿಗೆ ಜನ್ಮ ನೀಡಿ ಪರೀಕ್ಷೆ ಬರೆಯುತ್ತಿರುವ ಹೆಂಡತಿ ಬಗ್ಗೆ ಚಿಂತೆಯಲ್ಲಿದ್ದರು.

    ಬಬಿತಾ ಅವರ ದೃಢ ಸಂಕಲ್ಪ ನೋಡಿ ಇತರೆ ವಿದ್ಯಾರ್ಥಿಗಳು ಕೂಡ ಅಚ್ಚರಿಪಟ್ಟರು. ಇದರಿಂದ ಅವರಿಗೂ ಕೂಡ ಸ್ಫೂರ್ತಿ ಸಿಕ್ಕಿದ್ದು, ಕ್ಲಾಸ್‍ನಲ್ಲೇ ಮಗು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಎಲ್ಲರೂ ಬಬಿತಾಗೆ ಶುಭಕೋರಿದ್ದು, ಆಕೆ ಪರೀಕ್ಷೆ ಬರೆಯಲು ಬಂದಿದ್ದಕ್ಕೆ ಖುಷಿ ಪಟ್ಟರು. ಅದರಲ್ಲೂ ರಾಜ್ಯ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಖುದ್ದಾಗಿ ಬಂದು ಬಬಿತಾ ಅವರನ್ನ ಶ್ಲಾಘಿಸಿದರು ಎಂದು ವರದಿಯಾಗಿದೆ.

  • ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಪಟ್ನಾ: ಶಾಲೆಯ ನಿರ್ದೇಶಕನೊಬ್ಬ 6ನೇ ತರಗತಿಯ ಬಾಲಕನ ಮೇಲೆ ನಿರಂತರವಾಗಿ ಮೂರು ವರ್ಷಗಳ ಕಾಲ ಲೈಂಗಿಕ ಶೋಷಣೆ ಎಸಗಿರುವ ಅಘಾತಕಾರಿ ಘಟನೆ ಬಿಹಾರದ ಸಿತಮಾರಿ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಬೆಳಕಿಗೆ ಬಂದ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಬಾಲಕ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರೋಪಿ ಮೂರು ವರ್ಷಗಳಿಂದ ನಿರಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ತನ್ನ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಹೀಗಾಗಿ ಬಾಲಕ ತನ್ನ ಮೇಲೆ ನಡೆಯುತ್ತಿರುವ ಶೋಷಣೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೆ ಕಳೆದ ಶುಕ್ರವಾರ ತೀವ್ರವಾಗಿ ನೊಂದ ಬಾಲಕ ಪೋಷಕರ ಬಳಿ ಘಟನೆ ಕುರಿತು ವಿವರವಾಗಿ ತಿಳಿಸಿದ್ದಾನೆ. ತನ್ನ ಮಗನ ಮೇಲೆ ನಡೆದಿರುವ ಕೃತ್ಯದ ಬಗ್ಗೆ ಕೇಳಿದ ಪೋಷಕರು ಅಘಾತಕ್ಕೊಳಗಾಗಿದ್ದಾರೆ.

    ಆರೋಪಿ ಬಾಲಕನ ಮೇಲೆ ಲೈಂಗಿಕ ಶೋಷಣೆ ನಡೆಸುವ ವೇಳೆ ಕೆಲವು ರಾಸಾಯನಿಕ ವಸ್ತುಗಳನ್ನು ದೇಹಕ್ಕೆ ಎರಚುತ್ತಿದ್ದ. ಒಂದು ವೇಳೆ ಆತನ ಕೃತ್ಯಕ್ಕೆ ನಿರಾಕರಿಸಿದರೆ ನನ್ನ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬಾಲಕ ತಿಳಿಸಿದ್ದಾನೆ.

    ಆರೋಪಿಯ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ ಬಾಲಕನ ಪೋಷಕರ ವಿರುದ್ಧವೇ ಹಲ್ಲೆ ನಡೆಸಿದ್ದು, ಈ ವೇಳೆಯು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕನ ಪೋಷಕರು ತಿಳಿದ್ದಾರೆ.