Tag: Bihar Election

  • ಬಿಹಾರ ಚುನಾವಣೆಯಲ್ಲಿ ಗುಂಡಿನ ಸದ್ದು- ಅಭ್ಯರ್ಥಿ ಮೇಲೆ ಗುಂಡಿನ ದಾಳಿ

    ಬಿಹಾರ ಚುನಾವಣೆಯಲ್ಲಿ ಗುಂಡಿನ ಸದ್ದು- ಅಭ್ಯರ್ಥಿ ಮೇಲೆ ಗುಂಡಿನ ದಾಳಿ

    – ಗಂಭೀರ ಸ್ಥಿತಿಯಲ್ಲಿ ಚುನಾವಣಾ ಅಭ್ಯರ್ಥಿ

    ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಗುಂಡಿನ ಸದ್ದು ಮೊಳಗಿದ್ದು, ಜನತಾ ದಳ ರಾಷ್ಟ್ರವಾದಿ ಪಕ್ಷದ ಅಭ್ಯರ್ಥಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

    ನಾರಾಯಣ್ ಸಿಂಗ್ ಗುಂಡಿನ ದಾಳಿಗೊಳಗಾದ ಚುನಾವಣಾ ಅಭ್ಯರ್ಥಿ. ಶಿಯೋಹಾರ ಜಿಲ್ಲೆಯ ಹಥ್ಸಾರ ಗ್ರಾಮದಲ್ಲಿ ನಾರಾಯಣ್ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಗಾಯಗೊಂಡಿರುವ ನಾರಾಯಣ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

    ಘಟನೆ ಸಂಬಂಧ ಪೊಲೀಸರು ಇಬ್ಬರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹಥ್ರಾಸ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಬಿಹಾರ ಬಿಜೆಪಿ ಚುನಾವಣಾ ಉಸ್ತುವಾರಿ ಫಡ್ನವೀಸ್‍ಗೆ ಕೊರೊನಾ ಸೋಂಕು

    ಬಿಹಾರ ಬಿಜೆಪಿ ಚುನಾವಣಾ ಉಸ್ತುವಾರಿ ಫಡ್ನವೀಸ್‍ಗೆ ಕೊರೊನಾ ಸೋಂಕು

    ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ, ಬಿಹಾರ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ತಮಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿಯನ್ನ ಫಡ್ನವೀಸ್ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.

    ಲಾಕ್‍ಡೌನ್ ಬಳಿಕ ಪ್ರತಿದಿನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಇದೀಗ ದೇವರೇ ವಿಶ್ರಾಂತಿ ತೆಗೆದುಕೊಳ್ಳಲು ರಜೆ ನೀಡಿದ ಹಾಗಿದೆ. ನನ್ನ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ವೈದ್ಯರ ಸಲಹೆ ಮೇರೆ ಐಸೋಲೇಷನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ದೇವೇಂದ್ರ ಫಡ್ನವೀಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿ, ಸರ್ಕಾರದ ಕೋವಿಡ್-19 ನಿಯಮಗಳನ್ನ ಪಾಲಿಸಿ ಎಂದು ಫಡ್ನವೀಸ್ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. ಬಿಹಾರದ ಚುನಾವಣಾ ಬಿಜೆಪಿ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ಅವರನ್ನ ಪಕ್ಷ ನೇಮಕ ಮಾಡಿತ್ತು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಿರಂತರ ಪ್ರಚಾರ ಮತ್ತು ಪಕ್ಷದ ಸಮಾವೇಶಗಳಲ್ಲಿ ಫಡ್ನವೀಸ್ ಭಾಗಿಯಾಗಿದ್ದರು.

  • ಬಿಹಾರ ಚುನಾವಣೆ- ಮತದಾನದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

    ಬಿಹಾರ ಚುನಾವಣೆ- ಮತದಾನದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

    ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಸ್ಪಷ್ಟವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಬಿಹಾರದಲ್ಲಿ ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಸ್ಥಿರ ಏರಿಕೆ ಕಂಡು ಬಂದಿದೆ. 2015 ರಲ್ಲಿ ಮಹಿಳೆಯರು ಪುರುಷ ಮತದಾರರನ್ನು ಭಾರಿ ಅಂತರದಿಂದ ಹಿಂದಿಕ್ಕಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹಿಳೆಯರು 60.48% ಪುರುಷರು 53.32% ನಷ್ಟು ಮತ ಚಲಾಯಿಸಿದ್ದಾರೆ.

     

    1962 ದಾಖಲಾದ ಪ್ರಮಾಣದಲ್ಲಿ 2015 ರಲ್ಲಿ ಮಹಿಳೆಯರ ಮತದಾನ ದಾಖಲಾಗಿದೆ. ಒಟ್ಟು 1.9 ಪುರುಷರ ಮತದಾರರು 1.89 ಕೋಟಿ ಮಹಿಳಾ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ 56.66%.ರಷ್ಟು ದಾಖಲಾಗಿತ್ತು.

    2000 ರಲ್ಲಿ ಬಿಹಾರದಿಂದ ಜಾರ್ಖಂಡ್ ಬೇರ್ಪಟ್ಟ ಬಳಿಕ ಬಿಹಾರವು ಮೂರು ಚುನಾವಣೆಗಳನ್ನು ಎದುರಿಸಿದೆ. 2005, 2010 ಮತ್ತು 2015 ರಲ್ಲಿ ಫೆಬ್ರವರಿ ಮತ್ತು ಅಕ್ಟೋಬರ್‍ನಲ್ಲಿ ವಿಧಾನಸಭಾ ಚುನಾವಣೆಯನ್ನು ಕಂಡಿದೆ. 2005ರ ಫೆಬ್ರವರಿ ಚುನಾವಣಾ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ, ಮತ ಚಲಾಯಿಸಿದ ಮಹಿಳೆಯರ ಪಾಲು 42.51% (1.04 ಕೋಟಿ) ರಷ್ಟಿತ್ತು. ಇದು ಮುಂದಿನ 10 ವರ್ಷಗಳಲ್ಲಿ ಸುಮಾರು 20% ನಷ್ಟು ಹೆಚ್ಚಾಗಿದೆ. 2005 ರಲ್ಲಿ 49.94% ಪುರುಷರು (1.40 ಕೋಟಿ) ಮತ ಚಲಾಯಿಸಿದ್ದರು, 2015 ರವರೆಗೆ ಕೇವಲ 4% ರಷ್ಟು ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದೆ. 2005 ರಲ್ಲಿ ಒಟ್ಟಾರೆ ಮತದಾನ ಪ್ರಮಾಣ 46.5% ಆಗಿತ್ತು.

    ಛೀದ್ರಗೊಂಡ ಫಲಿತಾಂಶದಿಂದಾಗಿ, 2005 ರ ಅಕ್ಟೋಬರ್‍ನಲ್ಲಿ ಮತ್ತೆ ವಿಧಾನಸಭಾ ಚುನಾವಣೆಗಳು ಅನಿವಾರ್ಯವಾಗಿದ್ದವು. ಮತದಾರರ ಬಳಲಿಕೆಯ ನಿರೀಕ್ಷೆಯ ಹೊರತಾಗಿಯೂ, ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದರು. ಫೆಬ್ರವರಿ ಚುನಾವಣೆಗೆ ಹೋಲಿಸಿದರೆ ಮಹಿಳಾ ಮತದಾರರ ಪ್ರಮಾಣ 44% (1.06 ಕೋಟಿ) ಏರಿಕೆಯಾದರೆ, ಪುರುಷರ ಮತದಾನದ ಸಂಖ್ಯೆ ಕುಸಿದಿತ್ತು.

    ಆ ಚುನಾವಣೆ ನಿತೀಶ್ ಕುಮಾರ್ ಅವರನ್ನು ಅಧಿಕಾರಕ್ಕೆ ತಂದಿತು. ಅಂದಿನಿಂದ ಇಂದಿನವರೆಗೂ ಮಹಿಳಾ ಮತದಾರರ ಸಂಖ್ಯೆಯು ಗಮನಾರ್ಹವಾಗಿ ಏರಿಕೆ ಕಂಡಿದೆ. 2010ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು 10% ಕ್ಕಿಂತ ಹೆಚ್ಚು 54.48% ಕ್ಕೆ ಏರಿಕೆ ಕಂಡರೆ ಪುರುಷರ ಪ್ರಮಾಣ 51.12%ರಷ್ಟಿದೆ. 2015 ರ ಚುನಾವಣೆಯಲ್ಲಿ, ಮಹಿಳಾ ಮತದಾರರ ಪಾಲು 60% ದಾಟಿದರೆ, ಪುರುಷರ ಪ್ರಮಾಣ 2% ರಷ್ಟು ಹೆಚ್ಚಳ ಕಂಡಿದೆ.

    ಜೆಡಿಯು ಮಹಿಳೆಯರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ 2019ರ ಲೋಕಸಭಾ ಚುನಾವಣೆಯಲ್ಲೂ ಈ ಪ್ರವೃತ್ತಿ ಮುಂದುವರಿಯಿತು. 59.58% (ಒಟ್ಟು 1.99 ಕೋಟಿ) ಮಹಿಳೆಯರು, 55% (2.08 ಕೋಟಿ) ಪುರುಷರು ಮತ ಚಲಾಯಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಶೇಕಡಾ 67.09% ಮತ ಚಲಾಯಿಸಿದ್ದರೆ ಅದರಲ್ಲಿ ಪುರುಷರಿಗೆ 67.01%, ಮಹಿಳೆಯರ 67.18% ಪಾಲಿತ್ತು.

  • ಬಿಹಾರ ಜನತೆಗೆ ಉಚಿತ ಕೊರೊನಾ ವ್ಯಾಕ್ಸಿನ್ – ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಬಿಹಾರ ಜನತೆಗೆ ಉಚಿತ ಕೊರೊನಾ ವ್ಯಾಕ್ಸಿನ್ – ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಪಾಟ್ನಾ: ದೇಶದಲ್ಲಿ ಕೊರೊನಾ ನಡುವೆಯೇ ಚುನಾವಣೆಗಳು ನಡೆಯುತ್ತಿವೆ. ಇಂದು ಬಿಜೆಪಿ ಬಿಹಾರ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿನ ಬಿಜೆಪಿಯ ಒಂದು ವಾಗ್ದಾನ ಸಾರ್ವಜನಿಕರು ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ #Vaccineelectionism ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.

    ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ವಾಗ್ದಾನ ನೀಡಿದೆ. ಬಿಹಾರ ಜನತೆಗೆ ಬಿಜೆಪಿ ನೀಡುತ್ತಿರುವ ಮೊದಲ ವಾಗ್ದಾನ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೊನಾ ಲಸಿಕೆಗೆ ಸಂಶೋಧನೆಗಳು ನಡೆಯುತ್ತಿವೆ. ಕೊರೊನಾ ವ್ಯಾಕ್ಸಿನ್ ಬರುವ ಮುನ್ನವೇ ಬಿಜೆಪಿ ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ. ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ, ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳ ಪರಿಸ್ಥಿತಿ ಏನು? ಭಾರತೀಯರು ಬಿಜೆಪಿಗೆ ಮತ ನೀಡದಿದ್ರೆ ಉಚಿತ ಕೊರೊನ ಲಸಿಕೆ ಸಿಗುವದಿಲ್ವಾ ಎಂದು ಕೇಂದ್ರ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ, ಕೊರೊನಾ ವ್ಯಾಕ್ಸಿನ್ ಗಾಗಿ ಇಡೀ ವಿಶ್ವದಲ್ಲಿಯೇ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಕಂಡು ಹಿಡಿದಾಗ ಅದನ್ನ ಸಮಾನವಾಗಿ ವಿತರಿಸುವ ಕುರಿತು ಸಿದ್ಧತೆಗಳು ನಡೆದಿವೆ. ಪ್ರಾಥಮಿಕ ಅವಶ್ಯಕತೆ ಇರೋ ಜನರು ಸೇರಿದಂತೆ ಎಲ್ಲ ವರ್ಗದವರಿಗೂ ಉಚಿತ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು ಎಂದು ಹೇಳಿದ್ದಾರೆ.

  • ಬಿಹಾರ ಚುನಾವಣೆ- 20ಕ್ಕೂ ಹೆಚ್ಚು ರ‌್ಯಾಲಿಗಳಲ್ಲಿ ಪಿಎಂ ಮೋದಿ ಭಾಗಿ

    ಬಿಹಾರ ಚುನಾವಣೆ- 20ಕ್ಕೂ ಹೆಚ್ಚು ರ‌್ಯಾಲಿಗಳಲ್ಲಿ ಪಿಎಂ ಮೋದಿ ಭಾಗಿ

    -ಜೆಡಿಯು ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ರಣರಂಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ- ಜೆಡಿಯು ಮೈತ್ರಿ ರಚಿಸಿಕೊಂಡು ಚುನಾವಣೆಯನ್ನ ಎದುರಿಸುತ್ತಿವೆ. ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಚುನಾವಣೆ ರ‌್ಯಾಲಿಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ಹಿನ್ನೆಲೆ ಹೆಚ್ಚು ವರ್ಚುವಲ್ ರ‌್ಯಾಲಿಗಳು ನಡೆಯಲಿವೆ ಎನ್ನಲಾಗಿದೆ. ಕೆಲ ಸೀಮಿತ ಕ್ಷೇತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಬಿಜೆಪಿ ಮತ್ತು ಜೆಡಿಯು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಎಲ್ಲ ರ‌್ಯಾಲಿಗಳಲ್ಲಿ ಪ್ರಧಾನಿಗಳಿಗೆ ಸಿಎಂ ನಿತೀಶ್ ಕುಮಾರ್ ಸಾಥ್ ನೀಡಲಿದ್ದಾರೆ. ಮೊದಲ ಹಂತದ ಚುನಾವಣೆ ಕ್ಷೇತ್ರಗಳಿಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನ ಕಣಕ್ಕಿಳಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ.

    ಒಂದು ವೇಳೆ ಪ್ರಧಾನಿ ಮೋದಿ ಜೆಡಿಯು ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಕೊಂಡ್ರೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಕೇಂದ್ರದಲ್ಲಿ ಎನ್‍ಡಿಎ ಒಕ್ಕೂಟಕ್ಕೆ ಬೆಂಬಲ ನೀಡಿರುವ ಎಲ್‍ಜೆಪಿ (ಲೋಕ್ ಜನಶಕ್ತಿ ಪಕ್ಷ) ಬಿಹಾರ ಚುನಾವಣೆಯಲ್ಲಿ ಏಕಾಂಗಿ ಕಣಕ್ಕಿಳಿದಿದೆ. ಬಿಜೆಪಿ-ಜೆಡಿಯು ಮೈತ್ರಿಯಿಂದ ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೊರ ಬಂದಿದ್ದಾರೆ. ಇನ್ನು ಜೆಡಿಯು ಹಿರಿಯ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಎಲ್‍ಜೆಪಿ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.

    2015ರ ವಿಧಾನಸಭಾ ಚುನಾವಣೆ ಪ್ರಧಾನಿ ಮೋದಿ 31 ರ‌್ಯಾಲಿಗಳಲ್ಲಿ ಭಾಗಿಯಾಗಿದ್ದರು. ಬಿಹಾರದಲ್ಲಿ ಬಿಜೆಪಿ ಏಕಾಂಗಿಯಾಗಿ ಚುನಾವಣೆಯನ್ನ ಎದುರಿಸಿತ್ತು. ಹೀಗಾಗಿ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಭಾರೀ ಕಸರತ್ತು ನಡೆಸಿತ್ತು.

    ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರು ಬಿಜೆಪಿ ಮತ್ತು ಜೆಡಿಯೂ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿದೆ. ಬಿಜೆಪಿ 121 ಮತ್ತು ಜೆಡಿಯು 122 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. 121 ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಪಕ್ಷ ವಿಕಾಸ್ ಇನ್ಸಾನ್ ಪಾರ್ಟಿಗೆ (ವಿಐಪಿ) 11 ಸೀಟು ಬಿಟ್ಟು ಕೊಡಲಿದೆ. ಇತ್ತ ಜೆಡಿಯು ಸಹ 122ರಲ್ಲಿ 7 ಕ್ಷೇತ್ರಗಳನ್ನು ಹಿಂದೂಸ್ತಾನ್ ಅವಾಮ್ ಮೋರ್ಚಾಗೆ ನೀಡಿದೆ.

    ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 16 ಜಿಲ್ಲೆಯ 71 ಕ್ಷೇತ್ರಗಳಿಗೆ, 31 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, 17 ಜಿಲ್ಲೆಯ 94 ಕ್ಷೇತ್ರಗಳಿಗೆ 42 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಚುನಾವಣೆ ನವೆಂಬರ್ 7ರಂದು 15 ಜಿಲ್ಲೆಯ 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 33 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೂರು ಹಂತದ ಮತದಾನದ ಬಳಿಕ ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ಫಡ್ನವೀಸ್ ನೇಮಕ

    ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ಫಡ್ನವೀಸ್ ನೇಮಕ

    ಪಾಟ್ನಾ: ಬಿಹಾರ ಚುನಾವಣೆಯ ಬಿಜೆಪಿಯ ಉಸ್ತುವಾರಿಯಾಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನ ಪಕ್ಷ ನೇಮಕ ಮಾಡಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನಾಗಿ ದೇವೇಂದ್ರ ಫಡ್ನವೀಸ್ ಅವರನ್ನ ನೇಮಕ ಮಾಡಿದೆ. ಸಭೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳಾದ ಜೆಡಿಯು ಮತ್ತು ಎಲ್‍ಜೆಪಿ ಜೊತೆ ಸೀಟುಗಳ ಹಂಚಿಕೆಯ ಕುರಿತಾಗಿ ಚರ್ಚೆ ನಡೆಸಿದೆ. ಕ್ಷೇತ್ರ ಹಂಚಿಕೆಯಲ್ಲಿ ಬಿಜೆಪಿ ಇರಿಸಿರೋ ಪ್ರಸ್ತಾಪಕ್ಕೆ ಎಲ್‍ಜೆಪಿ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

    ಕಳೆದ ವಾರ ಬಿಹಾರಕ್ಕೆ ಭೇಟಿ ನೀಡಿದ್ದ ದೇವೇಂದ್ರ ಫಡ್ನವೀಸ್ ಪಕ್ಷದ ಆಂತರಿಕ ಸಭೆಯಲ್ಲಿ ಭಾಗವಹಿಸಿದ್ದರು. ಬಿಹಾರ ಕಮಲ ನಾಯಕರ ಜೊತೆ ಕುಳಿತು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಬಿಹಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷದ ಹಿರಿಯ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

    ಕೇಂದ್ರ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ್ ಸಮತಾ ಪಕ್ಷ (ಆರ್‍ಎಸ್‍ಎಲ್‍ಪಿ) ಮತ್ತು ಸಮಾಜವಾದಿ ಪಾರ್ಟಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಮೈತ್ರಿಯ ಸಿಎಂ ಅಭ್ಯರ್ಥಿಯಾಗಿರುವ ಉಪೇಂದ್ರ ಕುಶ್ವಾಗ ಅವರಿಗೆ ಸಮಾಜವಾದಿ ಪಾರ್ಟಿ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ. ಈ ಮೈತ್ರಿಯಲ್ಲಿ ಎನ್‍ಡಿಎ, ಕಾಂಗ್ರೆಸ್ ವ್ಯಂಗ್ಯ ಮಾಡಿವೆ. ಮೈತ್ರಿ ಬೆನ್ನಲ್ಲೇ ಆರ್‍ಎಸ್‍ಎಲ್‍ಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವನ್ ಆನಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ. ಮಾಧವ್ ಆನಂದ್ 2017ರಲ್ಲಿ ಆರ್‍ಎಸ್‍ಎಲ್‍ಪಿ ಸೇರ್ಪಡೆಯಾಗಿದ್ದರು.

    ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ಬಿಹಾರದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ನೆವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

  • 11 ಸಾವಿರ ಲೀ. ಮದ್ಯದ ಬಾಟ್ಲಿ ಮೇಲೆ ರೋಡ್ ರೋಲರ್ ಹರಿಸಿದ್ರು!

    11 ಸಾವಿರ ಲೀ. ಮದ್ಯದ ಬಾಟ್ಲಿ ಮೇಲೆ ರೋಡ್ ರೋಲರ್ ಹರಿಸಿದ್ರು!

    -ಹೊಳೆಯಂತೆ ಹರಿದ ಮದ್ಯ

    ಪಾಟ್ನಾ: ಅಕ್ರಮವಾಗಿ ಸಾಗಿಸುತ್ತಿದ್ದ 11 ಸಾವಿರ ಲೀಟರ್ ಮದ್ಯವನ್ನು ಚುನಾವಣಾ ಅಧಿಕಾರಿಗಳು ನಾಶ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯದ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದಿಂದ ಬಿಹಾರಕ್ಕೆ ಬರುತ್ತಿದ್ದ ವಿವಿಧ ಬ್ರ್ಯಾಂಡ್ ಗಳ ಅಕ್ರಮ ಮದ್ಯವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಾಶಗೊಳಿಸಲಾಗಿದೆ.

    ಬಿಹಾರದ ಕೈಮೂರ್ ಎಂಬಲ್ಲಿ ಮದ್ಯ ವಿತರಣೆ ಮಾಡಲಾಗುತ್ತಿರುವ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕೂಡಲೇ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಮದ್ಯವನ್ನು ವಶಕ್ಕೆ ಪಡಿಸಿಕೊಂಡಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮದ್ಯವನ್ನು ಒಂದೆಡೆ ಸೇರಿಸಿ ನಾಶ ಮಾಡಲಾಗಿದೆ. ಮದ್ಯ ನಾಶಗೊಳಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಬಿಹಾರ ಚುನಾವಣೆಯಲ್ಲಿ ಮದ್ಯ ಹಂಚುವಿಕೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಹಾಗೆ ಬಿಹಾರ ರಾಜ್ಯ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಸದ್ಯ ಲಭ್ಯವಾಗಿರುವ ಮದ್ಯ ರಾಜ್ಯಕ್ಕೆ ಕಳ್ಳ ಮಾರ್ಗ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಕೈಮೂರು ಎಸ್‍ಪಿ ದಿಲನ್‍ವಾಜ್ ಅಹ್ಮದ್ ಹೇಳಿದ್ದಾರೆ.

    ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 16 ಜಿಲ್ಲೆಯ 71 ಕ್ಷೇತ್ರಗಳಿಗೆ, 31 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, 17 ಜಿಲ್ಲೆಯ 94 ಕ್ಷೇತ್ರಗಳಿಗೆ 42 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

    ಮೂರನೇ ಹಂತದ ಚುನಾವಣೆ ನವೆಂಬರ್ 7ರಂದು 15 ಜಿಲ್ಲೆಯ 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 33 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೂರು ಹಂತದ ಮತದಾನದ ಬಳಿಕ ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಇಂದು ಬಿಹಾರ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ – ಶಿರಾ ಬೈ ಎಲೆಕ್ಷನ್‍ಗೂ ಮುಹೂರ್ತ

    ಇಂದು ಬಿಹಾರ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ – ಶಿರಾ ಬೈ ಎಲೆಕ್ಷನ್‍ಗೂ ಮುಹೂರ್ತ

    – ಮಸ್ಕಿ, ಆರ್.ಆರ್ ನಗರಕ್ಕೆ ಸದ್ಯಕ್ಕಿಲ್ಲ ಚುನಾವಣೆ?

    ನವದೆಹಲಿ: ಬಿಹಾರ ವಿಧಾನಸಭೆ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದ್ದು, ಇಂದು ಮತದಾನದ ದಿನಾಂಕ ಪ್ರಕಟಿಸಲಿದೆ. ಇದಕ್ಕಾಗಿ 12:30ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಬಿಹಾರ ಚುನಾವಣೆಗೆ ಅಧಿಕೃತ ದಿನಾಂಕ ಘೋಷಣೆಯಾಗಲಿದೆ.

    243 ಸ್ಥಾನಗಳು ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ಕೊರೊನಾ ಭೀತಿಯಲ್ಲೇ ಚುನಾವಣೆ ನಡೆಸಲು ಆಯೋಗ ಮುಂದಾಗಿದೆ.

    ಬಿಹಾರದ ಜೊತೆಗೆ ಇಂದು 15 ರಾಜ್ಯಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ 64 ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಲಿದೆ. 64 ಕ್ಷೇತ್ರಗಳ ಪೈಕಿ ರಾಜ್ಯದ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೂ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಜೊತೆಗೆ ಮಧ್ಯಪ್ರದೇಶದ 27 ಕ್ಷೇತಗಳಿವೆ. ಈ 27 ಕ್ಷೇತ್ರಗಳು ಬಿಜೆಪಿ ಸೆರ್ಪಡೆಗೊಳ್ಳಲು ಕಾಂಗ್ರೆಸ್ ತೊರೆದಿದ್ದ ಶಾಸಕರದ್ದಾಗಿವೆ.

    ಮಸ್ಕಿ, ರಾಜರಾಜೇಶ್ವರಿ ನಗರ ಅನುಮಾನ:
    ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಪ್ರಕಟಿಸುವುದು ಅನುಮಾನ ಎನ್ನಲಾಗಿದೆ. ಈ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಅರ್ಜಿ ವಿಚಾರಣಾ ಹಂತದಲ್ಲಿರುವ ಕಾರಣ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವುದು ಅನುಮಾನ ಎನ್ನಲಾಗಿದೆ.

  • ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    -ಸೋನಿಯಾ ಸೇನೆಯಿಂದ ಮುಂಬೈ ಅಸುರಕ್ಷಿತ
    -ಬಿಜೆಪಿ ಪರ ಪ್ರಚಾರ ಮಾಡ್ತಾರಾ ಕಂಗನಾ?

    ಮುಂಬೈ: ಚಂಡಿಗಢ ತಲುಪುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್, ಈ ಬಾರಿ ನಾನು ಬದುಕುಳಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಬೆಳಗ್ಗೆ ಕಂಗನಾ ಮನಾಲಿಗಾಗಿ ಮುಂಬೈನಿಂದ ಹಿಂದಿರುಗಿದ್ದರು. ಚಂಢೀಗಢ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಕಂಗನಾ ರಣಾವತ್, ಇಲ್ಲಿಗೆ ಬಂದ ಕೂಡಲೇ ಭದ್ರತೆ ಹೆಸರಿಗೆ ಮಾತ್ರವಿದೆ. ಇಲ್ಲಿ ನನಗೆ ಸುರಕ್ಷತೆ ಅನುಭವ ಆಗುತ್ತಿದ್ದು, ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಈ ಬಾರಿ ಬದುಕುಳಿದಿದ್ದೇನೆ. ಹಿಂದೊಮ್ಮೆ ಮುಂಬೈನಲ್ಲಿ ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡಿದ್ದೇನೆ. ಆದ್ರೆ ಸೋನಿಯಾ ಸೇನೆಯಿಂದಾಗಿ ಮುಂಬೈನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

    ಇನ್ನೊಂದು ಟ್ವೀಟ್ ನಲ್ಲಿ ಈ ಬಾರಿ ದೆಹಲಿಯಲ್ಲಿ ರಕ್ತ ಹರಿಸಲಾಗಿದೆ. ಸೋನಿಯಾ ಸೇನೆ ಮುಂಬೈನಲ್ಲಿ ಪ್ರತ್ಯೇಕ ಕಾಶ್ಮೀರದ ಘೋಷಣೆಗಳನ್ನ ಕೂಗಿದೆ. ಇಂದು ಸ್ವತಂತ್ರದ ಬೆಲೆ ಧ್ವನಿ ಆಗಿದೆ. ನನಗೆ ನಿಮ್ಮ ಬೆಂಬಲ ನೀಡಿ. ನನ್ನ ಜೊತೆ ನಿಮ್ಮ ಧ್ವನಿಯನ್ನ ಸೇರಿಸಿದ್ರೆ ಮುಂದೊಂದು ದಿನ ಸ್ವತಂತ್ರ ಅಂದ್ರೆ ಕೇವಲ ಕ್ರಾಂತಿ ಎಂದ ದಿನಗಳನ್ನ ಎದುರಿಸಬೇಕಾಗುತ್ತದೆ ಎಂದು ಕಂಗನಾ ಬರೆದುಕೊಂಡಿದಾರೆ.

    ಬಿಹಾರ ಚುನಾವಣೆ ಹೊಸ್ತಿಲಿನಲ್ಲಿದ್ದು, ಬಿಜೆಪಿ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ವರದಿ ಮಾಡಿವೆ. ಬಿಜೆಪಿ ಪ್ರಚಾರದ ಭಿತ್ತಿ ಪತ್ರಗಳಲ್ಲಿ ಸುಶಾಂತ್ ಭಾವಚಿತ್ರ ಹಾಕಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸುಶಾಂತ್ ಪ್ರಕರಣದಲ್ಲಿ ಧ್ವನಿ ಎತ್ತಿದ್ದ ಕಂಗನಾರನನ್ನ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಹಾರ ಬಿಜೆಪಿ ಚುನಾವಣೆ ಉಸ್ತುವಾರಿ ದೇವೆಂದ್ರ ಫಡ್ನವಿಸ್, ಪ್ರಧಾನಿ ನರೇಂದ್ರ ಮೋದಿ ಅವರು ಇರುವಾಗ ನಮಗೆ ಬೇರೆ ಯಾವ ಸ್ಟಾರ್ ಪ್ರಚಾರಕರು ಬೇಕಿಲ್ಲ ಎಂದು ಹೇಳಿದ್ದಾರೆ.

    ಶಿವಸೇನೆ ಮತ್ತು ಕಂಗನಾ ನಡುವಿನ ಸಂಘರ್ಷದ ವೇಳೆಯೇ ನಟಿ ಕುಟುಂಬಸ್ಥರು ಬಿಜೆಪಿ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶಿವಸೇನೆ ನಾಯಕರ ಬೆದರಿಕೆ ಹಿನ್ನೆಲೆ ಕಂಗನಾ ಅವರಿಗೆ ವೈ ದರ್ಜೆಯ ಭದ್ರತೆಯನ್ನ ಕೇಂದ್ರ ಸರ್ಕಾರ ನೀಡಿದೆ.

    ಭಾನುವಾರ ಮಾಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಯಾರಿ ಅವರನ್ನ ಕಂಗನಾ ಭೇಟಿಯಾಗಿದ್ದರು. ಭೇಟಿ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದ ಕಂಗನಾ, ಒಬ್ಬ ಸಾಮಾನ್ಯ ಪ್ರಜೆಯಂತೆ ರಾಜಭವನಕ್ಕೆ ಬಂದಿದ್ದೆ. ನನಗಾದ ಅನ್ಯಾಯದ ಬಗ್ಗೆ ರಾಜ್ಯಪಾಲರ ಮುಂದೆ ಹೇಳಿಕೊಂಡಿದ್ದೇನೆ. ನನಗೆ ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯಪಾಲರ ಮಗಳ ಮನವಿಯಂತೆ ನನ್ನ ಸಮಸ್ಯೆಯನ್ನ ಆಲಿಸಿರೋದು ಖುಷಿ ತಂದಿದೆ. ರಾಜಕೀಯ ಮತ್ತು ಯಾವುದೇ ಪಕ್ಷಗಳಿಗೆ ಸಂಬಂಧವಿಲ್ಲ ಎಂದಿದ್ದರು. ರಾಜಭವನದಿಂದ ಹೊರ ಬಂದ ಕಂಗನಾ ಕಮಲದ ಹೂ ಹಿಡಿದುಕೊಂಡು ಬಂದಿರುವ ಫೋಟೋಗಳು ವೈರಲ್ ಆಗಿವೆ.

    ಕಳೆದ ಕೆಲ ದಿನಗಳಿಂದ ಶಿವಸೇನೆ ಮತ್ತು ಕಂಗನಾ ನಡುವೆ ಜಟಾಪಟಿ ನಡೆದಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಬಿಎಂಸಿ ನಿಯಮಗಳ ವಿರುದ್ಧವಾಗಿ ಕಂಗನಾ ಕಚೇರಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಬಿಎಂಸಿ ಕಚೇರಿ ಕಟ್ಟಡ ಒಳಾಂಗಣವನ್ನ ನೆಲಸಮ ಮಾಡಿತ್ತು. ಈ ಸಂಬಂಧ ಕಂಗನಾ ನ್ಯಾಯಾಲಯದ ಮೊರೆ ಹೋಗಿದ್ದರು. ಕಂಗನಾ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಬಿಎಂಸಿ ಕಾರ್ಯಚರಣೆಗೆ ತಡೆ ನೀಡಿದೆ. ಹಾಗೆ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿಸುವಂತೆ ಬಿಎಂಸಿಗೆ ನ್ಯಾಯಾಲಯ ಸೂಚನೆ ನೀಡಿದೆ.

    ಕಟ್ಟಡ ನೆಲಸಮ ಬೆನ್ನಲ್ಲೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಕಂಗನಾ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಸರ್ಕಾರಕ್ಕೂ ಮತ್ತು ಕಟ್ಟಡ ನೆಲಸಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು. ಈ ನಡುವೆ ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪವನ್ನ ಮಹಾರಾಷ್ಟ್ರ ಸರ್ಕಾರ ಮಾಡಿದೆ. ಆರೋಪ ಸಾಬೀತಾದ್ರೆ ಮುಂಬೈ ತೊರೆಯುವದಾಗಿ ಕಂಗನಾ ಸವಾಲು ಹಾಕಿದ್ದಾರೆ.

  • ಕಂಗನಾ ಬಿಹಾರದ ಬಿಜೆಪಿಯ ಸ್ಟಾರ್ ಪ್ರಚಾರಕಿಯೇ? – ಫಡ್ನವಿಸ್ ಉತ್ತರ

    ಕಂಗನಾ ಬಿಹಾರದ ಬಿಜೆಪಿಯ ಸ್ಟಾರ್ ಪ್ರಚಾರಕಿಯೇ? – ಫಡ್ನವಿಸ್ ಉತ್ತರ

    – ಮುಂಬೈನಿಂದ ವಾಪಸ್ ಹೊರಟ ಕ್ವೀನ್

    ಮುಂಬೈ: ನಟಿ ಕಂಗನಾ ರಣಾವತ್ ಬಿಹಾರದಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯೇ ಎಂದು ಕೇಳಿದ ಪ್ರಶ್ನೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರ ಕೊಟ್ಟಿದ್ದಾರೆ.

    ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ವೇಳೆ ಸಾವನ್ನಪ್ಪಿದ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಬಳಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದರ ನಡುವೆ ಸುಶಾಂತ್ ಸಿಂಗ್ ಅನ್ನು ಬಾಲಿವುಡ್ ಮೂವಿ ಮಾಫಿಯಾ ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ಆರೋಪ ಮಾಡಿದ್ದ ನಟಿ ಕಂಗನಾರನ್ನು ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿ ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ.

    ಮುಂದಿನ ತಿಂಗಳು ಇರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಈಗಾಗಲೇ ಆಡಳಿತದಲ್ಲಿರುವ ಬಿಜೆಪಿ ಅಧಿಕಾರವನ್ನು ಮುಂದುವರಿಸಲು ಪ್ಲಾನ್ ಮಾಡಿಕೊಂಡಿದೆ. ಅಂತಯೇ ಬಿಜೆಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಬಿಹಾರ ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರಿಗೆ ರಾಜ್ಯದ ಪ್ರಸ್ತುತ ಸಿಎಂ ನಿತೀಶ್ ಕುಮಾರ್ ಸಾಥ್ ನೀಡಲಿದ್ದಾರೆ.

    ಮೋದಿ ಇರುವಾಗ ಯಾರು ಬೇಡ: ಹೀಗಾಗಿ ಬಿಹಾರ ಚುನಾವಣೆಗೆ ಬಗ್ಗೆ ಮಾತನಾಡಿರುವ ಫಡ್ನವೀಸ್, ಈ ಬಾರಿಯೂ ಬಿಹಾರದಲ್ಲಿ ಗೆದ್ದು, ಅಧಿಕಾರವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಕಂಗನಾ ರಣಾವತ್ ಬಿಹಾರದ ಬಿಜೆಪಿಯ ಸ್ಟಾರ್ ಪ್ರಚಾರಕಿಯೇ ಎಂದು ಅವರನ್ನು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿರುವ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿಯಂತಹ ಸ್ಟಾರ್ ಪ್ರಚಾರಕರೂ ನಮ್ಮಲ್ಲಿ ಇರುವಾಗ ಬೇರೆ ಯಾರೂ ಬೇಡ ಎಂದು ಹೇಳಿದ್ದಾರೆ. ಇದನ್ನು ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

    ಸುಶಾಂತ್ ಸಾವಿನ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಚುನಾವಣಾ ಪ್ರಚಾರದಲ್ಲಿ ನಟ ಸುಶಾಂತ್ ಫೋಟೋವನ್ನು ಬಳಿಸಿಕೊಂಡಿತ್ತು. ಜೊತೆಗೆ ಸುಶಾಂತ್ ಪೋಷಕರ ದೂರಿನಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಟನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಈ ಎಲ್ಲದರ ನಡುವೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಪರ ಪಶ್ಚಿಮಾ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿತ್ತು. ಇದನ್ನು ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    ಮುಂಬೈನಿಂದ ಹೊರಟ ಮಣಿಕರ್ಣಿಕಾ: ಇತ್ತ ಕಂಗನಾ ಮತ್ತು ಮಹಾರಾಷ್ಟ್ರದ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಕಂಗನಾ ಆಫೀಸ್ ಮತ್ತು ಮನೆಯನ್ನು ಬಿಎಂಸಿ ಒಡೆದು ಹಾಕಿದೆ. ಈಗ ಈ ಪ್ರಕರಣ ಕೋರ್ಟಿನಲ್ಲಿದೆ. ಹಲವಾರ ವಿರೋಧದ ನಡುವೆಯೂ ವೈ ಪ್ಲಸ್ ಭದ್ರತೆಯೊಂದಿಗೆ ಮುಂಬೈಗೆ ಬಂದಿದ್ದ ಕಂಗನಾ ಇಂದು ವಾಪಸ್ ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳಸಿದ್ದಾರೆ.

    ಜೂನ್ 14ರಂದು ಸುಶಾಂತ್ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ರೂ ಅಭಿಮಾನಿಗಳು ನಟನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸುಶಾಂತ್ ನಿಧನ ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದಿಂದ ಆಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದರು. ಸುಶಾಂತ್ ನಿಧನದ ಒಂದು ತಿಂಗಳ ಬಳಿ ಕಂಗನಾಗೆ ನಟಿ ಅಂಕಿತಾ ಲೋಖಂಡೆ ಸಾಥ್ ನೀಡಿ, ಮಾಜಿ ಪ್ರಿಯಕರನ ಸಾವಿನ ರಹಸ್ಯ ಬಹಿರಂಗವಾಗ ಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

    ಇನ್ನಿಬ್ಬರು ನಟಿಯರಿಗೆ ಎನ್‍ಸಿಬಿ ಸಮನ್ಸ್: ಕಳೆದ ಮೂರು ತಿಂಗಳಲ್ಲಿ ಹಲವು ಮಜಲುಗಳಲ್ಲಿ ಸಾಗಿದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ. ಸಿಬಿಐ ತನಿಖೆ ವೇಳೆ ಡ್ರಗ್ಸ್ ದಂಧೆಯ ಸುಳಿವು ಲಭ್ಯವಾಗಿದ್ದರಿಂದ ಎನ್‍ಸಿಬಿ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎನ್‍ಸಿಬಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನ ಬಂಧಿಸಿದೆ. ಇತ್ತ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಗೂ ಎನ್‍ಸಿಬಿ ಸಮನ್ಸ್ ನೀಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.