Tag: Bihar Election 2020

  • ಇದು ನನ್ನ ಕೊನೆಯ ಚುನಾವಣೆ- ನಿತೀಶ್ ಕುಮಾರ್ ಘೋಷಣೆ

    ಇದು ನನ್ನ ಕೊನೆಯ ಚುನಾವಣೆ- ನಿತೀಶ್ ಕುಮಾರ್ ಘೋಷಣೆ

    ಪಾಟ್ನಾ: ಬಿಹಾರದ 2020ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಬಿಹಾರ ಸಿಎಂ, ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಘೋಷಣೆ ಮಾಡಿದ್ದಾರೆ.

    ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ನಿಯಾದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ನಿತೀಶ್ ಕುಮಾರ್ ಅವರು, ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಬಹುದೊಡ್ಡ ಘೋಷಣೆಯನ್ನು ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕ್‍ಜನ ಶಕ್ತಿ ಪಕ್ಷದ ನಾಯಕ, ಅಜಯ್ ಕುಮಾರ್, ಯಾವಾಗಲೂ ನಿತೀಶ್ ನಿವೃತ್ತಿಯ ಪರವಾಗಿದ್ದರು. ಜೆಡಿಯು ಸದ್ಯ ಮುಖ್ಯಮಂತ್ರಿ ಆಗಬಲ್ಲ ಹೊಸ ಮುಖವನ್ನು ಘೋಷಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಇತ್ತ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ ನಾಯಕ ಉಪೇಂದ್ರ ಕುಶ್ವಾಹ, ನಿತೀಶ್ ಕುಮಾರ್ ಅವರ ಘೋಷಣೆಯನ್ನು ಸ್ವಾಗತಿಸಿದ್ದಾರೆ.

    ನಿತೀಶ್ ಕುಮಾರ್ ಅವರ ಹೇಳಿಕೆಗೆ ಟೀಕೆ ಮಾಡಿರುವ ಕಾಂಗ್ರೆಸ್, ಇದು ಕೇವಲ ರಾಜಕೀಯ ಹೇಳಿಕೆಯಾಗಿದೆ. ಮತದಾರರನ್ನು ಸೆಳೆಯಲು ಜೆಡಿಯು ಮುಖ್ಯಸ್ಥರು ಭಾವನಾತ್ಮಕ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿದೆ. ಚುನಾವಣೆಯಲ್ಲಿ ಸೋಲುವ ಮುನ್ಸೂಚನೆಯನ್ನು ಗ್ರಹಿಸಿದ್ದಾರೆ. ಆದ್ದರಿಂದಲೇ ಈ ಘೋಷಣೆ ಮಾಡಿದ್ದಾರೆ. ಆ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷ ನಾಯಕರು ಆರೋಪಿಸಿದ್ದಾರೆ.

    ಇತ್ತ ಬಿಹಾರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು, ನಿತೀಶ್ ಕುಮಾರ್ ಅವರು ಪರೋಕ್ಷವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ವಲಸೆಕೋರರನ್ನು  ಹೊರಹಾಕಲಾಗುವುದು ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ನಿತೀಶ್ ಕುಮಾರ್, ಇಂತಹ ಅಸಂಬದ್ಧ ಹೇಳಿಕೆಗಳನ್ನು ಯಾರು ನೀಡುತ್ತಾರೆ. ದೇಶದಲ್ಲಿರುವ ಪ್ರತಿಯೊಬ್ಬ ಕೂಡ ಭಾರತೀಯ. ಅವರನ್ನು ಹೆದರಿಸಿ ದೇಶದಿಂದ ಹೊರಗಟ್ಟುವ ತಾಕತ್ತು ಯಾರಿಗಿದೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡಿದ್ದಾರೆ.