Tag: BIEC

  • ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ನೆಲಮಂಗಲ: ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇದೀಗ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.

    ಕೊರೋನಾ ಸೋಂಕಿತರಿಗೆ ನೀರು ಕೊಡುವಲ್ಲಿ ಬಿಬಿಎಂಪಿ ವಿಫಲವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಂಟೇನರ್ ಕ್ಯಾನ್ ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಬದಲು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಮೂಲಕ ದೇಶದ ಅತಿದೊಡ್ಡ ಕೋವಿಡ್ ಕೇರ್ ಕೇಂದ್ರದಲ್ಲಿ ನೀರಿನ ಅವ್ಯವಸ್ಥೆಯ ಉಂಟಾಗಿದೆ ಎನ್ನಲಾಗಿದೆ.

    ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರಿನ ಅಭಾವ ಇರುವ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶೌಚಾಲಯದಲ್ಲೂ ನೀರಿನ ಅಭಾವ ಶುರುವಾಗಿದ್ದು, ಸೋಂಕಿತರು ಪರದಾಟ ನಡೆಸುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಸಮಸ್ಯೆಯಿದ್ದು, ಕೊರೊನಾ ಸೋಂಕಿತರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

  • ಬಿಐಇಸಿ ಕೊರೊನಾ ಅಕ್ರಮಕ್ಕೆ ಬ್ರೇಕ್‌ – ಬಾಡಿಗೆ ಬದಲು ಖರೀದಿಗೆ ತೀರ್ಮಾನ, ಯಾವುದಕ್ಕೆ ಎಷ್ಟು ವೆಚ್ಚ?

    ಬಿಐಇಸಿ ಕೊರೊನಾ ಅಕ್ರಮಕ್ಕೆ ಬ್ರೇಕ್‌ – ಬಾಡಿಗೆ ಬದಲು ಖರೀದಿಗೆ ತೀರ್ಮಾನ, ಯಾವುದಕ್ಕೆ ಎಷ್ಟು ವೆಚ್ಚ?

    – ಖರೀದಿಗಿಂತಲೂ ದುಬಾರಿಯಾದ ಬಾಡಿಗೆ ದರ
    – ನಿರ್ಧಾರ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

    ಬೆಂಗಳೂರು:  ಕೊರೊನಾ ವೈರಸ್‌ ತಡೆಗಟ್ಟಲು ತೆರೆಯಲಾಗಿದ್ದ ವಿಶ್ವದ ಅತಿ ದೊಡ್ಡ ಕೋವಿಡ್‌ 19 ಆರೈಕೆ ಸ್ಥಳವಾಗಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ನಡೆಯಬಹುದಾಗಿದ್ದ ಭಾರೀ ಪ್ರಮಾಣದ ಅಕ್ರಮಕ್ಕೆ ತೆರೆ ಬಿದ್ದಿದೆ.

    ಮಂಚ, ಹಾಸಿಗೆ ಸೇರಿದಂತೆ ಕೆಲವು ಸಲಕರಣೆಗಳನ್ನು ಖರೀದಿಸಲು ಹಾಗೂ ಉಳಿದವುಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.

    ನಡೆದಿದ್ದು ಏನು?
    ಬಿಐಇಸಿಯಲ್ಲಿ ತೆರೆಯಲಾದ 10,100 ಬೆಡ್‌ ಸಾಮರ್ಥ್ಯದ ಕೋವಿಡ್‌ 19 ಕೇಂದ್ರಕ್ಕೆ ವಿವಿಧ ಸಂಸ್ಥೆಗಳಿಂದ ಪ್ರತಿ ದಿನಕ್ಕೆ 800 ರೂ. ದರದಲ್ಲಿ ಬಾಡಿಗೆ ಪಡೆಯಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದರು. ಇದಕ್ಕೆ ತಿಂಗಳಿಗೆ ಅಂದಾಜು 24 ಕೋಟಿ ರೂ. ವೆಚ್ಚವಾಗುತ್ತಿತ್ತು.

    ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಒಟ್ಟು 26 ಸಲಕರಣೆಗಳು ಇದ್ದು, ಅವುಗಳಲ್ಲಿ ಮಂಚ, ಹಾಸಿಗೆ,ದಿಂಬು, ಬೆಡ್‌ಶೀಟ್‌, ಬಕೆಟ್‌, ಮಗ್ ಇತ್ಯಾದಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಾಡಿಗೆಗೆ ಖರೀದಿಸಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಕೋವಿಡ್‌ ಹಲವು ತಿಂಗಳ ಕಾಲ ಇರುವುದರಿಂದ ತಿಂಗಳಿಗೆ 24 ಕೋಟಿ ಅಂದರೂ 5 ತಿಂಗಳಿಗೆ 120 ಕೋಟಿ ರೂ. ಆಗುವ ಸಾಧ್ಯತೆ ಇತ್ತು.

    ಖರೀದಿಗಿಂತಲೂ ಬಾಡಿಗೆ ದರವೇ ದುಬಾರಿಯಾದ ಹಿನ್ನೆಲೆಯಲ್ಲಿ ಇಷ್ಟೊಂದು ಬಾಡಿಗೆ ಹಣವನ್ನು ನೀಡುವುದು ಸರಿಯಲ್ಲ. ಆ ವಸ್ತುಗಳನ್ನು ಖರೀದಿಸಿದರೆ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗುತ್ತದೆ. ಕೋವಿಡ್‌ 19 ಕಡಿಮೆಯಾದ ಬಳಿಕ ಬಳಕೆಯಾದ ವಸ್ತುಗಳನ್ನು ಸರ್ಕಾರಿ ಹಾಸ್ಟೆಲ್‌ಗಳಿಗೆ ನೀಡಬಹುದು ಎಂಬ ಸಲಹೆ ವ್ಯಕ್ತವಾಗಿತ್ತು. ಈ ಕೇಂದ್ರದ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರದ ವಾಸನೆ ಬಡಿಯುತ್ತಿದ್ದಂತೆ ಸರ್ಕಾರ ಈಗ ವಸ್ತುಗಳನ್ನು ಖರೀದಿಸಲು ತೀರ್ಮಾನ ತೆಗೆದುಕೊಂಡಿದೆ.

    ತೀರ್ಮಾನ ಏನು?
    ಮಂಚ, ಬೆಡ್‌, ಫ್ಯಾನ್‌, ಬಕೆಟ್‌, ಮಗ್‌, ಡಸ್ಟ್‌ಬಿನ್‌ ಪ್ರತಿ ಸೆಟ್‌ ಖರೀದಿಗೆ 7,500 ರೂ. ದರವನ್ನು ನಿಗದಿ ಮಾಡಲಾಗಿದೆ. ಪ್ರಸ್ತುತ 6,500 ಬೆಡ್‌ಗಳಿಗೆ ಬೇಕಾಗಿರುವ ಈ ವಸ್ತುಗಳನ್ನು 4.87 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತದೆ.

    ನೆಲ ಹಾಸಿಗೆಗೆ ಬಳಸುವ ವಿನೈಲ್‌ ಫ್ಲೋರಿಂಗ್‌ನ್ನು ಪ್ರತಿ ಚದರ ಅಡಿಗೆ 31 ರೂ. ನಂತೆ ಖರೀದಿಸಲು ತೀರ್ಮಾನಿಸಿದ್ದು, ಇದರಿಂದ ಒಟ್ಟು 7.9 ಲಕ್ಷ ಚದರ ಅಡಿಗೆ 2.45 ಕೋಟಿ ರೂ. ವೆಚ್ಚವಾಗಲಿದೆ.

    ಪುನರ್‌ಬಳಕೆಯಾಗದ 19 ವಸ್ತುಗಳ ಪ್ರತಿ ಸೆಟ್‌ಗೆ ಪ್ರತಿ ತಿಂಗಳಿಗೆ 6,500 ರೂ. ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಟ್ಟು ಈ ಎಲ್ಲ ವಸ್ತುಗಳಿಗೆ ಒಂದು ತಿಂಗಳಿಗೆ ಬಾಡಿಗೆಯಾಗಿ 4.23 ಕೋಟಿ ರೂ. ಹಣವನ್ನು ನೀಡಲಾಗುತ್ತದೆ.

    ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ:
    ಸರ್ಕಾರದ ಗಮನಕ್ಕೆ ತರದೇ ಬಾಡಿಗೆ ಪಡೆಯಲು ತೀರ್ಮಾನ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಖರೀದಿ ಮಾಡಿರುವ ವಸ್ತುಗಳ ಒಟ್ಟು ಮೊತ್ತ 7.32 ಕೋಟಿ ರೂ. ಹಣವನ್ನು ಕೂಡಲೇ ಪೂರೈಕೆದಾರರಿಗೆ ಪಾವತಿಸುವಂತೆ ಬಿಬಿಎಂಪಿ ಆಯಕ್ತರಿಗೆ ಸೂಚಿಸಲಾಗಿದೆ.