Tag: Biden

  • ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ಶೇ.66 ಅಂಕಗಳೊಂದಿಗೆ ನಂ 1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಹಲವು ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

    ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಈ ರೇಟಿಂಗ್‍ನ್ನು ಮೋದಿಗೆ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಅಗ್ರಗಣ್ಯ ನಾಯಕರ ಬಗ್ಗೆ ರೇಟಿಂಗ್ ಕಲೆಹಾಕುತ್ತದೆ. ಈ ಪೈಕಿ ಮೋದಿ ಅವರಿಗೆ ಶೇ.66 ರೇಟಿಂಗ್ ಪಡೆದುಕೊಂಡು ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಲು ತೆಗೆದುಕೊಂಡ ನಿರ್ಧಾರ ಮತ್ತು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ಈ ರೇಟಿಂಗ್ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಶೇ.28 ರೇಟಿಂಗ್ ಮೋದಿಯವರ ವಿರುದ್ಧ ಬಂದಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಪಡೆಯಲ್ಲ: ಕೇಂದ್ರ ಕೃಷಿ ಸಚಿವ ತೋಮರ್

    ಮೋದಿ ಬಳಿಕ ಅಧಿಕ ರೇಟಿಂಗ್ ಪಡೆದವರ ಪೈಕಿ ಶೇ. 65 ರೇಟಿಂಗ್ ನೊಂದಿಗೆ ಇಟಲಿಯ ಪ್ರಧಾನಿ ಮಾರಿಯೋ ದಾರ್ಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 63 ರೇಟಿಂಗ್ ಪಡೆದರೆ, ಶೇ 54 ರೇಟಿಂಗ್ ಪಡೆದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 4ನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇ.53 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಯುಎಸ್ ನ ಅಧ್ಯಕ್ಷ ಜೋ ಬಿಡೆನ್ ಶೇ. 53 ರೇಟಿಂಗ್ ಪಡೆದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

  • ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ವಾಷಿಂಗ್ಟನ್‌: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚಿನಲ್ಲಿದ್ದರೂ, ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಫಲಿತಾಂಶ ಹೊರಬೀಳಬೇಕಿರುವ ಐದು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್-ಬೈಡನ್ ನಡುವೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಟಫ್ ಫೈಟ್ ನಡೆಯುತ್ತಿದೆ.

    ನಿನ್ನೆಯವರೆಗೂ ನೆವಾಡದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದ ಜೋ ಬೈಡನ್ ಇಂದು ಜಾರ್ಜಿಯಾದಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಮತ ಎಣಿಕೆ ಮುಂದುವರಿದಂತೆ ಜೋ ಬೈಡನ್ ನಿಕಟ ಸ್ಪರ್ಧೆ ನೀಡ್ತಿದ್ದಾರೆ. ಇಲ್ಲಿಯೂ ಯಾವುದೇ ಕ್ಷಣದಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸುವ ಸಂಭವ ಕಂಡು ಬರುತ್ತಿದೆ.

     

    ಅಲಸ್ಕಾ ಮತ್ತು ನಾರ್ತ್ ಕೊರೋಲಿನಾದಲ್ಲಿ ಮಾತ್ರ ಟ್ರಂಪ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಐದರಲ್ಲಿ ಅಲಸ್ಕಾ ಬಿಟ್ಟು, ಯಾವುದೇ ರಾಜ್ಯವನ್ನು ಗೆದ್ದರೂ ಬೈಡನ್ ಅಧ್ಯಕ್ಷೀಯ ಚುನಾವಣೆ ಗೆದ್ದಂತೆ ಆಗುತ್ತದೆ.

    ಅಮೆರಿಕದಲ್ಲಿ ಕಳೆದ 120 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿ ಅಂದ್ರೆ ಶೇ.66ರಷ್ಟು ಮತದಾನ ನಡೆದಿದೆ. ಈ ಹಿಂದಿನ ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಮೀರಿಸಿ ಬೈಡನ್ 7.10 ಕೋಟಿ ಮತ ಪಡೆದು ದಾಖಲೆ ಬರೆದಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

    ಫಲಿತಾಂಶದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ ಎಣಿಕೆ ವೇಳೆ ಅಕ್ರಮ ನಡೆಯುತ್ತಿದೆ. ಕೌಂಟಿಂಗ್ ಕೇಂದ್ರಗಳಿಗೆ ನಮ್ಮ ಪಕ್ಷದವರನ್ನು ಬಿಟ್ಟುಕೊಳ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಈ ಮಧ್ಯೆ ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೈಡನ್‍ಗೆ ಭದ್ರತೆ ಹೆಚ್ಚಿಸಲಾಗಿದೆ. 538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು ಜೋ ಬೈಡನ್ 264 ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ.

    ಟ್ರಂಪ್‌ ಏನು ಮಾಡಬಹುದು?
    ಒಂದು ವೇಳೆ ಜೋ ಬೈಡನ್ ಗೆದ್ದರೂ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಚುನಾವಣೆಗೆ ಮೊದಲೇ ಪೋಸ್ಟಲ್‌ ವೋಟಿಂಗ್‌ನಲ್ಲಿ ಭಾರೀ ಅಕ್ರಮ ನಡೆಯಲಿದೆ ಎಂದಿದ್ದರು. ಈಗಲೂ ಈ ಮಾತನ್ನೇ ಹೇಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಸೋತರೂ ಜನವರಿ 20ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.

    ಈಗಾಗಲೇ ಟ್ರಂಪ್‌ ಚುನಾವಣಾ ಮತ ಎಣಿಕೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಬರೋಬ್ಬರಿ 76 ದಿನ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು ಅಧಿಕಾರ ಚಲಾಯಿಸಬಹುದು. ಟ್ರಂಪ್ ಕೈಯಲ್ಲಿ ಅಧಿಕಾರ ಇರುವ ಕಾರಣ ಅವರು ಏನು ಬೇಕಾದರೂ ಮಾಡಬಹುದು. ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಉನ್ನತಾಧಿಕಾರಿಗಳ ವರ್ಗಾವಣೆಗಳನ್ನು ಮಾಡಬಹುದು .

    76 ದಿನಗಳ ಬಳಿಕವೂ ಟ್ರಂಪ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ನೂತನ ಅಧ್ಯಕ್ಷರು, ಸೀಕ್ರೆಟ್ ಏಜೇನ್ಸಿ ನೆರವಿನಿಂದ ಟ್ರಂಪ್‍ರನ್ನು ಶ್ವೇತಸೌಧದಿಂದ ಹೊರಗೆ ಕಳಿಸಬಹುದು. ಟ್ರಂಪ್ ಮಾಜಿ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಕೂಡ ಇದಕ್ಕೆ ಅಡ್ಡ ಬರಬಹುದು.

  • ಅಮೆರಿಕದಲ್ಲಿ ನಡೆಯುತ್ತಿದೆ ಅಧ್ಯಕ್ಷೀಯ ಚುನಾವಣೆ – ಸಮೀಕ್ಷೆಗಳು ಏನು ಹೇಳಿವೆ?

    ಅಮೆರಿಕದಲ್ಲಿ ನಡೆಯುತ್ತಿದೆ ಅಧ್ಯಕ್ಷೀಯ ಚುನಾವಣೆ – ಸಮೀಕ್ಷೆಗಳು ಏನು ಹೇಳಿವೆ?

    ವಾಷಿಂಗ್ಟನ್‌: ಜಗತ್ತಿಗೆ ಅತ್ಯಂತ ಪ್ರಮುಖವಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 1 ಗಂಟೆಗೆ ಮತದಾನ ಆರಂಭ ಆಗಿದೆ.

    ನ್ಯೂ ಹ್ಯಾಂಪ್‍ಷೈರ್‌ನಲ್ಲಿ ಮೊದಲ ವೋಟ್ ನಮೂದಾಗಿದೆ. ಕೋವಿಡ್ ಮುಂಜಾಗ್ರತೆಯ ನಡುವೆ ಚುನಾವಣೆ ಜೋರಾಗಿ ನಡೆಯುತ್ತಿದೆ. ಈ ಬಾರಿ ಗೆಲ್ಲೋದು ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೋ ಅಥವಾ ಡೆಮಾಕ್ರೆಟಿಕ್‌ ಪಕ್ಷದ ಜೋ ಬಿಡೆನ್ ಅವರೋ ಎನ್ನುವುದು ನಾಳೆ ಹೊತ್ತಿಗೆ ಗೊತ್ತಾಲಿದೆ.

    ಅಮೆರಿಕದಲ್ಲಿ ಒಟ್ಟು 23.9 ಕೋಟಿ ಮತದಾರರಿದ್ದು, ಈಗಾಗಲೇ ಅರ್ಧದಷ್ಟು ಮತದಾರರು ಇ-ಮೇಲ್ ಮತ್ತು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೋಸ್ಟಲ್ ಮತಗಳ ಮೇಲೆ ಟ್ರಂಪ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ 10 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೋಲಿನ ಭಯದಲ್ಲಿರುವ ಟ್ರಂಪ್ ಕೊನೆಯ ದಿನವಾದ ನಿನ್ನೆ, ಹಿಂದೆಂದೂ ಇರದ ರೀತಿಯಲ್ಲಿ ರಾತ್ರಿ 11 ಗಂಟೆಯವರೆಗೂ ಫ್ಲೋರಿಡಾದಲ್ಲಿ ಸಮಾವೇಶ ನಡೆಸಿ ಭಾಷಣ ಮಾಡಿದರು.

    ಇತ್ತ ಜೋ ಬಿಡೆನ್ ಮಾತ್ರ ಕೂಲ್ ಆಗಿ ದಿನವನ್ನು ಆರಂಭಿಸಿದರು. ಟ್ರಂಪ್ ಅವರ ಅಧಿಕಾರದ ಸಮಯ ಮುಗಿಯಿತು. ಶ್ವೇತಭವನದಿಂದ ತೆರಳಲು ಅವರು ಗಂಟು ಮೂಟೆ ಕಟ್ಟಿಕೊಳ್ಳಬೇಕು ಎಂದು ವ್ಯಾಖ್ಯಾನಿಸಿದರು. ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲಬೇಕೆಂದು ತಮಿಳುನಾಡಿನಲ್ಲಿರುವ ಅವರ ಸ್ವಗ್ರಾಮ ತಿರುವರೂರಿನ ಲಸೇಂದ್ರಪುರಂನ ದೇಗುಲದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ. ಅಮೆರಿಕಾದ ಮಧ್ಯಮಗಳು ನಡೆಸಿದ ಸಮೀಕ್ಷೆಗಳಲ್ಲಿ ಜೋ ಬಿಡನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

    ಸಮೀಕ್ಷೆ ಏನು ಹೇಳಿವೆ?
    ಸಿಎನ್‌ಎನ್‌ ಸಮೀಕ್ಷೆ ಜೋ ಬಿಡೆನ್‌ ಶೇ.54, ಟ್ರಂಪ್‌ ಶೇ.42 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ನ್ಯೂಯಾರ್ಕ್ ಟೈಮ್ಸ್ ಜೋ ಬಿಡೆನ್‌ ಶೇ.50, ಟ್ರಂಪ್‌ ಶೇ.41 ರಷ್ಟು ಮತ ಪಡೆಯಲಿದ್ದಾರೆ.

    ಎನ್‌ಬಿಸಿ ಟ್ರಂಪ್‌ ಶೇ.42, ಬಿಡೆನ್‌ ಶೇ. 52 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ಫಾಕ್ಸ್‌ ನ್ಯೂಸ್‌ ಬಿಡೆನ್‌ ಶೇ. 52, ಟ್ರಂಪ್‌ ಶೇ.44ರಷ್ಟು ಮತ ಪಡೆಯಲಿದೆ ಎಂದು ಹೇಳಿದೆ. ರಾಯ್ಟರ್ಸ್‌ ಸಮೀಕ್ಷೆ ಬಿಡೆನ್‌ ಶೇ.52. ಟ್ರಂಪ್‌ ಶೇ. 42 ರಷ್ಟು ಮತ ಪಡೆಯಲಿದ್ದಾರೆ ಎಂದು ಹೇಳಿದೆ.

    ಈ ಸಮೀಕ್ಷೆಯೇ ಅಂತಿಮವಲ್ಲ. 2016ರಲ್ಲಿ ಎಲ್ಲಾ ಸಮೀಕ್ಷೆಗಳು ಹಿಲರಿ ಕ್ಲಿಂಟನ್ ಗೆಲ್ಲಲಿದ್ದಾರೆ  ಎಂದಿದ್ದವು. ಆದರೆ ಅಂತಿಮ ಫಲಿತಾಂಶ ಬಂದಾಗ ಟ್ರಂಪ್‌ ಗೆದ್ದಿದ್ದರು.