Tag: bidar

  • ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಕೀ ಕೊಟ್ಟಿರುವ ಗೊಂಬೆಗಳು ಮಾತಾಡ್ತಿವೆ: ಆರ್. ಅಶೋಕ್ ಟೀಕೆ

    ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಕೀ ಕೊಟ್ಟಿರುವ ಗೊಂಬೆಗಳು ಮಾತಾಡ್ತಿವೆ: ಆರ್. ಅಶೋಕ್ ಟೀಕೆ

    ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕಾಂಗ್ರೆಸ್ ಪಾಳಯದಲ್ಲಿ ಎದ್ದಿದೆ. ಆದರೆ ಸಿದ್ದರಾಮಯ್ಯ ಕೀ ಕೊಟ್ಟಿರುವ ಪ್ರಕಾರ ಅವರ ಗೊಂಬೆಗಳು ಮಾತನಾಡುತ್ತಿವೆ ಎಂದು ಬಿಜೆಪಿ ಮುಂಖಡ ಆರ್ ಅಶೋಕ್ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅವರು ಕೀ ಕೊಟ್ಟಿರುವ ಗೊಂಬೆಗಳು ಮಾತನಾಡುತ್ತಿವೆ. ಲೋಕಸಭಾ ಚುನಾವಣೆಯ ಮುಂಚೆ ಯಾಕೆ ಈ ಗೊಂಬೆಗಳು ಮಾತನಾಡಲಿಲ್ಲ? ಸಿದ್ದರಾಮಯ್ಯ ಹೇಳಿದ ಹಾಗೇ ಗೊಂಬೆಗಳು ಕೇಳುತ್ತಿವೆ. ಬಿಜೆಪಿ ಸಮ್ಮಿಶ್ರ ಸರ್ಕಾರವನ್ನ ಬೀಳಿಸುವ ಕೆಲಸವನ್ನ ಮಾಡುತ್ತಿಲ್ಲ. ಆ ಕೆಲಸವನ್ನ ಸಿದ್ದರಾಮಯ್ಯನವರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಜೆಡಿಎಸ್‍ನವರ ಮೇಲೆ ಸಿದ್ದರಾಮಯ್ಯ ಹಾವಿನ ದ್ವೇಷ ಇಟ್ಟುಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಮೇಲೆ 40 ವರ್ಷದ ದ್ವೇಷ ಸಿದ್ದರಾಮಯ್ಯ ಅವರಿಗಿದೆ. ಅದನ್ನ ಅವರು ಮರೆತಿಲ್ಲ. ಸಿದ್ದರಾಮಯ್ಯನವರನ್ನ ಜೆಡಿಎಸ್ ಪಕ್ಷದಿಂದ ಕತ್ತು ಹಿಡಿದು ತಳ್ಳಿ ಮೈಸೂರು ಹೈವೇಗೆ ತಂದು ಬಿಸಾಕಿದ್ದಾರೆ. ಆ ಹಾವಿನ ದ್ವೇಷವನ್ನ ಸಿದ್ದರಾಮಯ್ಯ ಈಗ ತೀರಿಸಿಕೊಳ್ಳುತ್ತಾರೆ. ಸರ್ಕಾರವನ್ನ ಅವರೇ ಕೆಡುವುತ್ತಾರೆ ಎಂದರು.

    ಜೆಡಿಎಸ್ ಹಾಗೂ ಕಾಂಗ್ರೆಸ್‍ನವರು ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ಹೊಂದಿದವರು. ಪಾಕಿಸ್ತಾನದ ಬಗ್ಗೆ ಧ್ವನಿ ಎತ್ತಿಯೂ ಇವರು ಮಾತನಾಡುವುದಿಲ್ಲ. ಭಯೋತ್ಪಾದಕರನ್ನ ಜೀ ಎಂದು ಗೌರವ ಕೊಟ್ಟು ಕಾಂಗ್ರೆಸ್ಸಿನವರು ಕರೆಯುತ್ತಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.

  • ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿದ್ದ ಸುದ್ದಿಯನ್ನು ಪಬ್ಲಿಕ್ ಟಿವಿ ಬೆಳಗ್ಗೆ ಪ್ರಸಾರ ಮಾಡಿತ್ತು. ‘ಜಲಯುದ್ಧ’ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ.

    ಜಿಪಂ ಸಿಇಓ ಮಹಾಂತೇಶ ಬೀಳಗಿ ಚಿಮ್ಮೆಗಾಂವ್ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಬಾವಿಯೊಳಗೆ ನೀರು ಬಿಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುವಂತೆ ಸೂಚಿಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೇಗಾಂವ್ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ನಿಷ್ಕಾಳಜಿ ವಹಿಸಿದ ಅಧಿಕಾರಿಗಳನ್ನು ಪರಿಶೀಲನೆ ಮಾಡಿ  ಅಮಾನತು ಮಾಡುತ್ತೇನೆ. ಚಿಮ್ಮೆಗಾಂವ್ ಗ್ರಾಮಕ್ಕೆ ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಇಓ ಮಹಾಂತೇಶ ಬೀಳಗಿ ಹೇಳಿದ್ದಾರೆ.

    ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದರು. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

  • ಜೀವದ ಹಂಗು ತೊರೆದು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ ಜನ!

    ಜೀವದ ಹಂಗು ತೊರೆದು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ ಜನ!

    ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿರುವ ಸಾಹಸಮಯ ದೃಶ್ಯಗಳು ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಕಂಡು ಬಂದಿದೆ.

    ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವುದನ್ನು ಕಾಣಬಹುದಾಗಿದೆ. ಬಾವಿ ಮೇಲೆ ನಿಂತಿರುವ ಜನರಿಗೆ ಯಾವುದೇ ರೀತಿ ಸುರಕ್ಷತೆಯೂ ಇಲ್ಲ.

    ಒಂದು ವೇಳೆ ನಿಂತಿರುವ ಜನರು ಸಮತೋಲನ ಕಳೆದುಕೊಂಡರೆ 50 ಅಡಿ ಆಳದ ಬಾವಿಗೆ ಬೀಳಬೇಕಾಗುತ್ತಿದೆ. ಇಂತಹ ಭೀಕರ ಬರಗಾಲ ಎದುರಾದರೂ ಗ್ರಾಮಸ್ಥರಿಗೆ ನೀರು ಕೊಡಲು ಜಿಲ್ಲಾಡಳಿತ ವಿಫಲವಾಗಿದೆ.

  • ತೆಂಗಿನ ಕಾಯಿ ಜೊತೆ ಗಾಂಜಾ ಸಾಗಾಟ – 35 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ತೆಂಗಿನ ಕಾಯಿ ಜೊತೆ ಗಾಂಜಾ ಸಾಗಾಟ – 35 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ಬೀದರ್: ತೆಂಗಿನ ಕಾಯಿ ಮಾರಾಟ ಮಾಡುವ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೀದರ್ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

    ಬೀದರ್ ಔರಾದ್ ತಾಲೂಕಿನ ಘಾಮಾ ತಾಂಡದಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿಗಳಿದ್ದ ಮನೆಯ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ.

    ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ಕಾರು, ಮೂರು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀದರ್ ಜಿಲ್ಲೆಯ ಎಸ್‍ಪಿ ಟಿ ಶ್ರೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನರಸಿಂಹ ಝರಣಾ ದರ್ಶನಕ್ಕೆ ನಿಷೇಧ!

    ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನರಸಿಂಹ ಝರಣಾ ದರ್ಶನಕ್ಕೆ ನಿಷೇಧ!

    ಬೀದರ್: ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಾ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, 400 ವರ್ಷಗಳ ಇತಿಹಾಸವಿರುವ ದೇವರ ದರ್ಶನಕ್ಕೆ ಜಲಕ್ಷಾಮ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ.

    ಗಡಿ ಭಾಗದ ಪವಿತ್ರ ತಾಣಗಳಲ್ಲಿ ಒಂದಾಗಿರುವ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು. ಆದ್ರೆ ನರಸಿಂಹ ಝರಣಾ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, 400 ವರ್ಷಗಳ ಇತಿಹಾಸವಿರುವ ದೇವರ ದರ್ಶನಕ್ಕೆ ಜಲಕ್ಷಾಮ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ. ದೇವಸ್ಥಾನದ ಗುಹೆಯಲ್ಲಿ ಇರುತ್ತಿದ್ದ ಸುಮಾರು 300 ಮೀಟರ್ ನೀರಿನಲ್ಲಿ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿರುವ ಝರಣಾ ನರಸಿಂಹ ಸ್ವಾಮಿ ದರ್ಶನ ಪಡೆಯುವುದು ಇಲ್ಲಿನ ವಿಶೇಷವಾಗಿತ್ತು.

    ಈ ರೀತಿ ನೀರಿನಲ್ಲಿ ನಡೆದು ಹೋಗಿ ದರ್ಶನ ಪಡೆಯುವುದರಿಂದ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಕೂಡಾ ಇದೆ. ಆದರೆ ಈ ಬಾರಿ ಜಿಲ್ಲೆ ಬಾರಿ ಬರಗಾಲಕ್ಕೆ ತುತ್ತಾಗಿದ್ದು ನರಸಿಂಹ ಝರಣಾಗೂ ಬರದ ಬಿಸಿ ತಟ್ಟಿದೆ. ದರ್ಶನಕ್ಕೆ ಬಂದ ಭಕ್ತರಿಗೆ ಮೂಲ ದರ್ಶನ ಭಾಗ್ಯ ಸಿಗದೇ ಹೊರಗಿನ ಮೂರ್ತಿ ದರ್ಶನ ಪಡೆದು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.

    ದೇವಸ್ಥಾನದ ಸುತ್ತಮುತ್ತ ಬೋರ್ ವೆಲ್ ಕೊರೆಯುತ್ತಿರವುದರಿಂದ ನೀರಿನ ಸಮಸ್ಯೆ ಎದುರಾಗಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಮನವಿ ಮಾಡಿಕೊಂಡಿದ್ದಾರೆ.

  • ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ಬೀದರ್: ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದಾಗಿ ಲಾರಿಯೊಂದು ಧಗಧಗನೆ ಉರಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಹೊರವಲಯದ ಶಾಪೂರ್ ಗೇಟ್ ಬಳಿ ನಡೆದಿದೆ.

    ಲಾರಿಯಲ್ಲಿದ್ದ ಡೀಸೆಲ್ ಖಾಲಿ ಮಾಡದೇ ವೆಲ್ಡಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ವೆಲ್ಡಿಂಗ್ ಕಾರ್ಮಿಕನ ಅಚಾರ್ತುದಿಂದಾಗ ಬೆಂಕಿಯ ಕೆನ್ನಾಲಿಗೆ ಲಾರಿ ಸುಟ್ಟು ಕರಕಲಾಗಿದೆ. ತುಕ್ಕು ಹಿಡಿದಿದ್ದ ಲಾರಿಯ ಟ್ಯಾಂಕರ್ ಗೆ ಕಾರ್ಮಿಕ ವೆಲ್ಡಿಂಗ್ ಮಾಡುತ್ತಿದ್ದನು. ಆದರೆ ಟ್ಯಾಂಕರ್ ನಲ್ಲಿದ್ದ ಡೀಸೆಲನ್ನು ಹಾಗೆಯೇ ಬಿಟ್ಟು ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿ ಹಾರಿ ಡೀಸೆಲ್ ಟ್ಯಾಂಕರ್ ನಲ್ಲಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಲಾರಿ ಧಗಧಗನೆ ಹೊತ್ತಿ ಉರಿದಿದೆ. ಇದನ್ನೂ ಓದಿ:ಆಕ್ಸಿಡೆಂಟ್ ರಭಸಕ್ಕೆ ಹೊತ್ತಿ ಉರಿದ ಕಂಟೇನರ್ – ಚಾಲಕರಿಬ್ಬರ ಸಜೀವ ದಹನ

    ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭೂ ತಾಯಿ ಮಡಿಲು ಸೇರಿದ ವಿಜಯಕುಮಾರ್ ಖಂಡ್ರೆ

    ಭೂ ತಾಯಿ ಮಡಿಲು ಸೇರಿದ ವಿಜಯಕುಮಾರ್ ಖಂಡ್ರೆ

    ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಹಿರಿಯ ಸಹೋದರ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಅವರ ಅಂತ್ಯಕ್ರಿಯೆ ಇಂದು ಭಾಲ್ಕಿಯ ಶಾಂತಿಧಾಮದಲ್ಲಿ ನೇರವೇರಿತು.

    ಲಿಂಗಾಯತ ವೀರಶೈವ ವಿಧಿ ವಿಧಾನಗಳ ಪ್ರಕಾರ ಭಾಲ್ಕಿ ಹೀರೆಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೆವರು ಅವರು ವಿಜಯಕುಮಾರ್ ಖಂಡ್ರೆ ಅವರ ಅಂತ್ಯಕ್ರಿಯೆ ನೆರವೇರಿಸಿದರು. ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ರಾಜಶೇಖರ ಪಾಟೀಲ್, ರಹೀಂಖಾನ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

    ವಿಜಯಕುಮಾರ್ ಖಂಡ್ರೆ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇಂದು ನಡೆಯುತ್ತಿದ್ದರಿಂದ ಭಾಲ್ಕಿ ಸ್ತಬ್ಧವಾಗಿತ್ತು. ಪಟ್ಟಣದ ಅನೇಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ, ಮಾಜಿ ಶಾಸಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಂಬನಿ ಮಿಡಿದರು.

    ಎರಡು ಬಾರಿ ಭಾಲ್ಕಿ ಶಾಸಕರಾಗಿ ವಿಜಯಕುಮಾರ್ ಅವರು ಆಯ್ಕೆಯಾಗಿದ್ದರು. ಭಾಲ್ಕಿ ಕ್ಷೇತ್ರದಲ್ಲಿ ಇವರು ಬಹಳಷ್ಟು ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರಿಗೆ ನಿನ್ನೆ ತೀವ್ರ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

  • ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ್ ಖಂಡ್ರೆ ಇನ್ನಿಲ್ಲ

    ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ್ ಖಂಡ್ರೆ ಇನ್ನಿಲ್ಲ

    ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಹಿರಿಯ ಸಹೋದರ ಹಾಗೂ ಭಾಲ್ಕಿ ಮಾಜಿ ಶಾಸಕ ವಿಜಯ್‍ಕುಮಾರ್ ಖಂಡ್ರೆ ಅವರು ಇಂದು ನಿಧನರಾಗಿದ್ದಾರೆ.

    60 ವರ್ಷದ ವಿಜಯ್‍ಕುಮಾರ್ ಖಂಡ್ರೆ ಅವರು ಹೃದಯಾಘಾತಕ್ಕೆ ಒಳಗಾಗಿ ಹೈದರಾಬಾದ್‍ನ ಖಾಸಗಿ ಸನ್ ಶೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

    ಎರಡು ಬಾರಿ ಭಾಲ್ಕಿ ಶಾಸಕರಾಗಿ ವಿಜಯಕುಮಾರ್ ಅವರು ಆಯ್ಕೆಯಾಗಿದ್ದರು. ಭಾಲ್ಕಿ ಕ್ಷೇತ್ರದಲ್ಲಿ ಇವರು ಬಹಳಷ್ಟು ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಇವರ ಅಂತ್ಯಸಂಸ್ಕಾರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಭಾಲ್ಕಿಯಲ್ಲಿ ನೆರವೇರಲಿದ್ದು, ಈ ಬಗ್ಗೆ ಭಾಲ್ಕಿ ಕಾಂಗ್ರೆಸ್ ಹಾಗೂ ಈಶ್ವರ್ ಖಂಡ್ರೆ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಶೋಕ ಸಂದೇಶ, ಭಾಲ್ಕಿ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆರವರು ಇಂದು ಬೆಳಗ್ಗೆ 10.30 ಗಂಟೆಗೆ ಹೈದ್ರಾಬಾದನ ಖಾಸಗಿ ಸನ್ ಶೈನ್ ಆಸ್ಪತ್ರೆ ಯಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಶ್ರೀಯುತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1.00ಗಂಟೆಗೆ ಸ್ವಗ್ರಾಮ ಭಾಲ್ಕಿಯಲ್ಲಿ ಜರುಗಲಿದೆ ಎಂದು ಬರೆದು ಟ್ವೀಟ್ ಮಾಡಿ ಸಹೋದರ ನಿಧನರಾಗಿರುವ ವಿಷಯವನ್ನು ತಿಳಿಸಿ, ಸಂತಾಪ ಸೂಚಿಸಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಬೀದರ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಬಳಿ ನಡೆದಿದೆ.

    ಕಾಶಿನಾಥ್ ಪಾಟೀಲ್ (17) ಹಾಗೂ ನಾಗರಾಜ್ (16) ಸೆಲ್ಫಿ ಕ್ಲಿಕ್ಕಿಸಿಕೊಳ್ಳವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಬೇಸಿಗೆ ರಜೆ ಇದ್ದ ಕಾರಣ ಕಾಶಿನಾಥ್ ಹಾಗೂ ನಾಗರಾಜ್ ದುಬಲಗುಂಡಿಯಿಂದ ಮಾವನ ಮನೆಗೆ ಬಂದಿದ್ದರು. ಈ ವೇಳೆ ಇಬ್ಬರು ಕಾರಂಜಾ ಡ್ಯಾಂನಲ್ಲಿ ಹತ್ತಿರ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಬಿದ್ದ ಕಾಶಿನಾಥ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮತದಾನ ಮಾಡಲು ಸಮಸ್ಯೆಯಾಗ್ಬಾರ್ದು- ನೈರುತ್ಯ ರೈಲ್ವೆ ವಿಶೇಷ ರೈಲು

    ಮತದಾನ ಮಾಡಲು ಸಮಸ್ಯೆಯಾಗ್ಬಾರ್ದು- ನೈರುತ್ಯ ರೈಲ್ವೆ ವಿಶೇಷ ರೈಲು

    – ಹೊರಡೋ ಸಮಯ, ಮಾರ್ಗದ ಬಗ್ಗೆ ಮಾಹಿತಿ

    ಬೀದರ್: ಇದೇ ಮೊದಲ ಬಾರಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಬೀದರ್ ನ ಜನರು ಸೇರಿದಂತೆ ಉತ್ತರ ಕರ್ನಾಟಕದ ಮತದಾರರಿಗೆ ಇಂದು ಬೀದರ್ ಟು ಯಶವಂತಪುರ ವಿಶೇಷ ರೈಲನ್ನು ನೈರುತ್ಯ ರೈಲ್ವೆ ಒದಗಿಸಿದೆ.

    ಮಂಗಳವಾರ ಉತ್ತರ ಕರ್ನಾಟಕದಲ್ಲಿ ಎರಡನೇಯ ಹಂತದಲ್ಲಿ ಮತದಾನ ನಡೆಯಲ್ಲಿದ್ದು, ಇದಕ್ಕಾಗಿ ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಬೀದರ್ ಗೆ ತತ್ಕಾಲ್ ಎಕ್ಸ್ ಪ್ರೆಸ್ ವಿಶೇಷ ರೈಲು ಹೊರಡಲಿದೆ. ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಹೊರಡಲಿರುವ ವಿಶೇಷ ರೈಲು ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಸೈದಾಪುರ, ಯಾದಗಿರಿ, ವಾಡಿ ಹಾಗೂ ಕಲಬುರಗಿ ಮಾರ್ಗವಾಗಿ ಏಪ್ರಿಲ್ 23ರ ಬೆಳಗ್ಗೆ 6 ಗಂಟೆಗೆ ಬೀದರ್ ತಲುಪಲಿದೆ.

    ಅದೇ ವಿಶೇಷ ರೈಲು ಏಪ್ರಿಲ್ 23ರ ಸಂಜೆ 7 ಗಂಟೆಗೆ ಬೀದರ್ ನಿಂದ ಹೊರಡಲಿದ್ದು ಏಪ್ರಿಲ್ 24ರ ಬೆಳಗ್ಗೆ 8.15ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಗಡಿ ಜಿಲ್ಲೆ ಬೀದರ್ ಸೇರಿದಂತೆ ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ಉದ್ಯೋಗಿಗಳು, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಮತದಾರರಿಗೆ ಮತದಾನ ಮಾಡಲು ಯಾವುದೇ ಸಮಸ್ಯೆಯಾಗಬಾರದು ಎಂದು ನೈರುತ್ಯ ರೈಲ್ವೆ ಇಲಾಖೆ ಈ ರೀತಿ ವಿಶೇಷ ರೈಲನ್ನು ಮೊದಲ ಬಾರಿಗೆ ಒದಗಿಸಿದೆ.