Tag: bidar

  • ಬೀದರ್ ಐತಿಹಾಸಿಕ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ

    ಬೀದರ್ ಐತಿಹಾಸಿಕ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ

    ಬೀದರ್: ಐತಿಹಾಸಿಕ ಪಾಪನಾಶ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

    ರಮೇಶ್ ಮಲ್ಲಯ್ಯ ಸ್ವಾಮಿ (39)ಕೊಲೆಯಾದ ದೇವಸ್ಥಾನದ ಪೂಜಾರಿ. ದೇವಸ್ಥಾನದ ಪೂಜೆ ವಿಷಯಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿದೆ.

    ಬೀದರ್‍ನ ಪಾಪನಾಶ ಕಲ್ಯಾಣ ಮಂಟದಲ್ಲಿ ಆರೋಪಿಗಳು ರಮೇಶ್ ಮೇಲೆ ರಾಡಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದೇವಸ್ಥಾನದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಬೀದರ್: ಸರಿಯಾಗಿ ಕೆಲಸ ಮಾಡದೇ ಇದ್ದರೆ ನಾಯಿಗಳು ಸಹ ಮೂಸಿ ನೋಡಲ್ಲ ಎಂದು ಬ್ರಿಮ್ಸ್ ಆಸ್ಪತ್ರೆಯ ವೈದ್ಯರನ್ನು ಮತ್ತು ಅಧಿಕಾರಿಗಳನ್ನು ಸಂಸದ ಭಗವಂತ್ ಖೂಬಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬ್ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿತ ಹಿನ್ನೆಲೆ ಇಂದು ಅಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಖೂಬಾ ಅವರು, ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಾಯಿ ಸಹ ಮೂಸಿ ನೋಡುವುದಿಲ್ಲ. 1 ವರ್ಷದ ಹಿಂದೆ 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬ್ರಿಮ್ಸ್ ಆಸ್ಪತ್ರೆ ಮೇಲ್ಛಾವಣಿ ಮಳೆಯಿಂದಾಗಿ ಕುಸಿದಿತ್ತು. ಜಿಲ್ಲಾ ಆಸ್ಪತ್ರೆಯ ಕಳಪೆ ಕಾಮಗಾರಿ ನಡೆದಿದೆ ಎಂದು ಇಂದು ಖೂಬಾ ಅವರು ಭೇಟಿ ನೀಡಿ ಸಭೆ ನಡೆಸಿ ಬ್ರೀಮ್ಸ್ ನಿರ್ದೇಶಕ ಕ್ಷೀರ ಸಾಗರನ್ನು ಸೇರಿದಂತೆ ವೈದ್ಯರನ್ನು ತರಾಟೆಗೆ ತಗೆದುಕೊಂಡರು.

    ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದ ಸಿಬ್ಬಂದಿಗಳನ್ನು ಯಾಕೆ ಅಮಾನತು ಮಾಡಿಲ್ಲಾ.? ಆಸ್ಪತ್ರೆಯಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ. ನಿಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಇಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಿರಾ..? ನಿರ್ಲಕ್ಷ್ಯ ತೋರಿದವರನ್ನು ಅಮಾನತು ಮಾಡದೇ ಹೇಗೆ ತನಿಖೆ ನಡೆಸುತ್ತಿರಾ ಎಂದು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕೋಪಗೊಂಡರು.

  • ಅಮೆರಿಕಾದಲ್ಲಿ ಅಪಘಾತ – ಬೀದರ್ ಮೂಲದ ಟೆಕ್ಕಿ, ಮಗು ದುರ್ಮರಣ

    ಅಮೆರಿಕಾದಲ್ಲಿ ಅಪಘಾತ – ಬೀದರ್ ಮೂಲದ ಟೆಕ್ಕಿ, ಮಗು ದುರ್ಮರಣ

    ಬೀದರ್: ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ತಂದೆ ಮತ್ತು ಮಗು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತಾಯಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

    ಟೆಕ್ಕಿ ಮುಖೇಶ್ ಶಿವಾಜಿವಾರ ದೇಶಮುಖ(27) ಮತ್ತು 2 ವರ್ಷದ ಮಗು ದಿವಿಜಾ ಮೃತ ದುರ್ದೈವಿಗಳು. ಮೃತರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಂಗಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಮೃತ ಮುಖೇಶ್ ಅಮೆರಿಕದ ನಾರ್ಥ್ ಕೆರೋಲಿನಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

    ಶುಕ್ರವಾರ ಮುಖೇಶ್ ಪತ್ನಿ ಮೋನಿಕಾ ದೇಶಮುಖ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದು, ಕಾರನ್ನು ಮುಖೇಶ್ ಓಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಕಾರ್ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಪತ್ನಿ ಮೋನಿಕಾ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಭಾರತಕ್ಕೆ ಮೃತ ದೇಹವನ್ನು ತರುವ ದೃಷ್ಟಿಯಿಂದ ಈಗಾಗಲೇ ಬೀದರ್ ಸಂಸದ ಭಗವಂತ್ ಖೂಬಾ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ್ದಾರೆ.

  • ನಾಲಾಯಕ್ ಸರ್ಕಾರ ಎಂದ ಖೂಬಾ – ಸಚಿವರ, ಸಂಸದರ ನಡುವೆ ತೀವ್ರ ವಾಗ್ವಾದ

    ನಾಲಾಯಕ್ ಸರ್ಕಾರ ಎಂದ ಖೂಬಾ – ಸಚಿವರ, ಸಂಸದರ ನಡುವೆ ತೀವ್ರ ವಾಗ್ವಾದ

    ಬೀದರ್: ನಗರದಲ್ಲಿ ನಡೆದ ಕೆಡಿಪಿ ಸಭೆಯ ವೇದಿಕೆ ಮೇಲೆ ಸಂಸದ ಸಂಸದ ಭಗವಂತ ಖೂಬಾ ಅವರು ನೀರು ಕೊಡಿಸಲಾಗ ನಾಲಾಯಕ್ ಸರ್ಕಾರ ಎಂದು ಹೇಳಿಕೆ ನೀಡಿದ್ದು, ಈ ವೇಳೆ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಸಂಸದರ ಮಧ್ಯೆ ತೀವ್ರ ವಾಗ್ದಾಳಿಗೆ ಕಾರಣವಾಯಿತು.

    ಇಂದು ಬೀದರ್ ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಸಭೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಸಂಸದ ಭಗವಂತ ಖೂಬಾ ಅವರು ಸಭೆ ನಡೆಸಿ ಮಾತನಾಡಿದರು. ಈ ವೇಳೆ ಅಧಿಕಾರಿಗಳು ನಗರದ ಹಲವೆಡೆ ನೀರಿನ ಸಮಸ್ಯೆ ಇದೆ ಎಂದು ಹೇಳಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಂಸದರು ಹಾಗಾದರೆ ಸರ್ಕಾರದ ನಾಲಾಯಕ್ ಇದೆಯಾ ಎಂದು ಹೇಳಿದರು…. ಈ ಹೇಳಿಕೆಯಿಂದ ಕೆರಳಿದ ಸಚಿವ ಬಂಡೆಪ್ಪ ಖಾಶೆಂಪೂರ್ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಎಂದು ಸಂಸದರ ವಿರುದ್ಧ ಗರಂ ಆದರು. ಆ ಬಳಿಕ ತಾನು ಅಧಿಕಾರಿಗೆ ಈ ರೀತಿ ಹೇಳಿದ್ದಾಗಿ ಸಂಸದರು ಸಮಜಾಯಿಸಿ ನೀಡಿದರು.

    ಸಭೆ ಬಳಿಕ ಮಾಧ್ಯಮಗಳಿಗೆ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೆ ಸಿಎಂ ಜೊತೆ ಮಾತನಾಡಿದ್ದು ಜಿಲ್ಲೆಯ ಗಡಿ ಭಾಗದ ಎರಡು ಗ್ರಾಮಗಳಲ್ಲಿ ವಾಸ್ತವ್ಯ ಮಾಡುವ ಪ್ಲಾನ್ ಇದೆ ಎಂದರು. ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವರು ಬೀದರ್ ನಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದರು. ಅಂದು ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಿಕಣಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು.

  • ರಾಯಚೂರು ನಂತ್ರ ಬೀದರ್‌ನಲ್ಲಿ ಯಶೋಮಾರ್ಗ- ಕುಡಿಯುವ ನೀರಿನ ಟ್ಯಾಂಕರ್ ಪೂಜೆ ಮಾಡಿದ ಜನತೆ

    ರಾಯಚೂರು ನಂತ್ರ ಬೀದರ್‌ನಲ್ಲಿ ಯಶೋಮಾರ್ಗ- ಕುಡಿಯುವ ನೀರಿನ ಟ್ಯಾಂಕರ್ ಪೂಜೆ ಮಾಡಿದ ಜನತೆ

    ಬೀದರ್: ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿರುವ ಬಿಸಿಲನಾಡು ರಾಯಚೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗದ ಸೇವೆ ಆರಂಭವಾಗಿತ್ತು. ಈಗ ರಾಯಚೂರು ನಂತರ ಬೀದರ್‌ನಲ್ಲಿ ನೀರಿನ ಸೌಲಭ್ಯ ಒದಗಿಸಲು ಯಶೋಮಾರ್ಗ ಮುಂದಾಗಿದೆ.

    ಶುಕ್ರವಾರ ಬೀದರ್ ಜಿಲ್ಲೆಯ ಬೋರಳ ಗ್ರಾಮದಲ್ಲಿ ಯಶೋಮಾರ್ಗ ವತಿಯಿಂದ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಿಲ್ಲೆಯ ಔರಾದ್ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೂಡ ಜನರಿಗೆ ಕುಡಿಯುವ ನೀರು ಒದಗಿಸಲಾಯಿತು. ಬೀದರ್ ಜನರು ಮೊದಲು ಕುಡಿಯುವ ನೀರಿನ ಟ್ಯಾಂಕರ್ ಗೆ ಪೂಜೆ ಮಾಡಿದ್ದಾರೆ. ಬಳಿಕ ಕೊಡಗಳಲ್ಲಿ ನೀರು ತುಂಬಿಸಿಕೊಂಡಿದ್ದಾರೆ.

    ರಾಯಚೂರು ತಾಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಬುಧವಾರ ಕುಡಿಯುವ ನೀರನ್ನು ಒದಗಿಸಲಾಗಿತ್ತು. ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಬೋರ್ ವೆಲ್‍ಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಉಚಿತವಾಗಿ ಕೊಡಲಾಗುತ್ತಿತ್ತು. ಸದ್ಯ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಜನ ಯಶೋಮಾರ್ಗದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹುಟ್ಟುಹಬ್ಬ ಆಚರಿಸಲು ಬಂದ ನಾಲ್ವರೂ ಅಪಘಾತಕ್ಕೀಡಾದ್ರು!

    ಹುಟ್ಟುಹಬ್ಬ ಆಚರಿಸಲು ಬಂದ ನಾಲ್ವರೂ ಅಪಘಾತಕ್ಕೀಡಾದ್ರು!

    ಬೀದರ್: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮಂಗಲಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

    ಸಚಿನ್ ಹಣಮಂತ, ಅರುಣ್ ಕುಮಾರ್ ಕಾಶಿನಾಥ, ಗುರುನಾಥ ವಿಠಲ, ರಘುವೀರ ಭೀಮಶ್ಯಾ ಮೃತಪಟ್ಟವರಾಗಿದ್ದು, ಎಲ್ಲರೂ 18-19 ವರ್ಷದ ಯುವಕರಾಗಿದ್ದಾರೆ ಎನ್ನಲಾಗಿದೆ.

    ತಡ ರಾತ್ರಿ ರಸ್ತೆಯಲ್ಲಿ ಸಚಿನ್ ಹುಟ್ಟುಹಬ್ಬ ಆಚರಿಸಲು ಹೆದ್ದಾರಿ ಪಕ್ಕ ಬಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ವಾಹನ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಟ್ಟುಹಬ್ಬ ಆಚರಿಸಲು ಬಂದವರು ಹೆಣವಾದರು.

    ಈ ಕುರಿತು ಮನ್ನಾಖೇಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಭೀಕರ ಬರಗಾಲ ಎಫೆಕ್ಟ್- ಹಸಮಣೆ ಏರಬೇಕಿದ್ದ ಯುವತಿ ಸಾವು!

    ಭೀಕರ ಬರಗಾಲ ಎಫೆಕ್ಟ್- ಹಸಮಣೆ ಏರಬೇಕಿದ್ದ ಯುವತಿ ಸಾವು!

    ಬೀದರ್: ಹಸಮಣೆ ಏರಬೇಕಿದ್ದ ಯುವತಿ ನೀರು ಸೇದುವಾಗ ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

    ಜಿಲ್ಲೆಯ ಔರಾದ್ ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಜಾತಾ ಮಲ್ಲಗೊಂಡ(24) ಮೃತ ದುರ್ದೈವಿ. ಇದೇ ತಿಂಗಳು 23ರಂದು ದೇವಿದಾಸ್ ಎಂಬಾತನ ಜೊತೆಗೆ ಸುಜಾತಾಳ ಮದುವೆ ನಿಶ್ಚಯವಾಗಿತ್ತು. ಆದರೆ ದುರಾದೃಷ್ಟವಶಾತ್ ಹಸಮಣೆ ಏರಬೇಕಿದ್ದ ಯುವತಿ ಕುಡಿಯುವ ನೀರು ತರಲು ಹೋಗಿ ಬಲಿಯಾಗಿದ್ದಾಳೆ. ಬಾವಿಯಿಂದ ನೀರು ಸೇದುವಾಗ ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಗಡಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರು ತರಲು ಹೋದ ಯುವತಿ ಬದುಕಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನೂರಾರು ಕನಸು ಕಂಡು ಹಸೆ ಮಣೆ ಏರಬೇಕಾದ ಯುವತಿ ನೀರಿಗಾಗಿ ಬಲಿಯಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆ ಮಾಡುವ ಖುಷಿಯಲ್ಲಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸದ್ಯ ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಧರಂಸಿಂಗ್ ಪುತ್ರನ ವಿರುದ್ಧ ಠಾಣೆ ಮೆಟ್ಟಿಲೇರಿದ ಕಾಂಗ್ರೆಸ್ ಅಭ್ಯರ್ಥಿ!

    ಧರಂಸಿಂಗ್ ಪುತ್ರನ ವಿರುದ್ಧ ಠಾಣೆ ಮೆಟ್ಟಿಲೇರಿದ ಕಾಂಗ್ರೆಸ್ ಅಭ್ಯರ್ಥಿ!

    ಬೀದರ್: ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿ ಬೀದರ್ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ದಿವಂಗತ ಮಾಜಿ ಸಿಎಂ ಧರಂಸಿಂಗ್ ಪುತ್ರನ ವಿರುದ್ಧ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಧರಂಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯ್‍ಸಿಂಗ್ ವಿರುದ್ಧ ಔರಾದ್ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯ್‍ಕುಮಾರ್ ಕೌಡಿಯಾಳ ದೂರು ನೀಡಿದ್ದಾರೆ. ಅವರಿಬ್ಬರ ಮಧ್ಯ ಸ್ಥಳೀಯ ಚುನಾವಣೆಗೆ ಬಿ ಫಾರಂ ಹಂಚಿಕೆ ವಿಷಯಕ್ಕೆ ಮಾತಿನ ಚಕಮಕಿಯಾಗಿ ವಿಜಯ್‍ಸಿಂಗ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ವಿಜಯ್‍ಕುಮಾರ್ ಅವರು ಎಸ್‍ಪಿಗೆ ದೂರು ಸಲ್ಲಿಸಿದ್ದಾರೆ.

    ಮೇ 14ರಂದು ಔರಾದ್ ಪಟ್ಟಣ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಪಕ್ಷದ ಕಾರ್ಯದರ್ಶಿ ಉಬೇದುಲ್ಲಾ ಶೇರಿಫ್, ಡಾ ಶೈಲಾಜನಾಥ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ವಿಜಯ್‍ಸಿಂಗ್ ಅವರು ವಿಜಯ್‍ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗುತ್ತದೆ. ಆದರೆ ಈ ಆರೋಪವನ್ನು ವಿಜಯ್‍ಸಿಂಗ್ ತಳ್ಳಿ ಹಾಕಿದ್ದಾರೆ.

  • ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಬೀದರ್: ಹನಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಎದುರಾಗಿದೆ. ಈ ನಡುವೆ ಗ್ರಾಮಕ್ಕೆ ಬೋರ್‌ವೆಲ್‌ ರೀ-ಬೋಟಿಂಗ್ ಮಾಡಲು ಬಂದು ನೀರು ಸಿಗದೇ ವಿಫಲವಾದ ಬೋರ್‌ವೆಲ್‌ ಗಾಡಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೋರ್ ರೀ-ಬೋಟಿಂಗ್ ಗೆ ಚಟ್ನಹಳ್ಳಿ ಗ್ರಾಮಕ್ಕೆ ಬೋರ್ ವೇಲ್ ಗಾಡಿಯೊಂದು ಬಂದಿತ್ತು. ಆದರೆ ರೀ-ಬೋಟಿಂಗ್ ಮಾಡಿದರು ಬೋರ್ ನಲ್ಲಿ ಹನಿ ನೀರು ಕೂಡ ಸಿಗಲಿಲ್ಲ. ಆದ್ದರಿಂದ ಬಂದ ಕೆಲಸ ವಿಫಲವಾದರಿಂದ ಬೋರ್‌ವೆಲ್‌ ಗಾಡಿ ವಾಪಾಸ್ ಹೊರಟಿತ್ತು. ಆದರೆ ಈ ವೇಳೆ ಏಕಾಏಕಿ ಗ್ರಾಮಸ್ಥರು ಗಾಡಿಯನ್ನು ಮುತ್ತಿಗೆ ಹಾಕಿ ಹೊಸ ಬೋರ್‌ವೆಲ್‌ ಕೊರೆಸಿ, ಬಳಿಕ ಗ್ರಾಮದಿಂದ ಹೋಗಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ನೀರಿನ ಸಮಸ್ಯೆಯಿಂದ ಕೆಂಗೆಟ್ಟಿದ್ದ ಗ್ರಾಮಸ್ಥರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಒಂದೇ ಬೋರ್‌ವೆಲ್‌ ಇದ್ದ ಕಾರಣ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇತ್ತ ಜಿಲ್ಲಾಡಳಿತ ವತಿಯಿಂದ ಅಧಿಕಾರಿಗಳು ಬೋರ್‌ವೆಲ್‌ ರೀ ಬೋಟಿಂಗ್ ಕಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೊಸ ಬೋರ್‌ವೆಲ್‌ ಕೊರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಜಿಂಕೆ, ಕೃಷ್ಣಮೃಗಗಳಿಗೂ ತಟ್ಟಿತು ನೀರಿನ ಹಾಹಾಕಾರ

    ಜಿಂಕೆ, ಕೃಷ್ಣಮೃಗಗಳಿಗೂ ತಟ್ಟಿತು ನೀರಿನ ಹಾಹಾಕಾರ

    – ಜಿಲ್ಲಾಡಳಿತ, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಕಿಡಿ

    ಬೀದರ್: ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಶುರುವಾಗಿದ್ದು, ಈ ಸಮಸ್ಯೆ ಈಗ ವನ್ಯ ಜೀವಿಗಳಿಗೂ ತಟ್ಟಿದೆ.

    ಈ ಬಾರಿಯ ರಣ ಬಿಸಿಲಿನಿಂದ ಬೆಳ್ಳೂರು ಗ್ರಾಮದ ಸುತ್ತಲಿನ ಕೆರೆ, ಹಳ್ಳ, ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದು ನೂರಾರು ಜಿಂಕೆಗಳು, ಕೃಷ್ಣಮೃಗಗಳು ಕುಡಿಯಲು ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಜೀವದ ಹಂಗು ತೊರೆದು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ ಜನ!

    ಗಡಿನಾಡು ಬೀದರ್ ಜಿಲ್ಲೆಯಲ್ಲಿ ಪ್ರತಿವರ್ಷವೂ ಬೇಸಿಗೆ ವೇಳೆ ನೀರಿಗೆ ಹಾಹಾಕಾರ ಎದುರಾಗುತ್ತದೆ. ಇದರ ಬಿಸಿ ಜನರಿಗಷ್ಟೇ ಅಲ್ಲದೆ ಮೂಕ ಪ್ರಾಣಿಗಳು ತಟ್ಟುತ್ತದೆ. ಈ ಸಮಸ್ಯೆ ಅರಿತಿದ್ದರೂ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ:  ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾಣ ಸಿಗುವ ಜಿಂಕೆ, ಕೃಷ್ಣಮೃಗಗಳಿಗೂ ನೀರಿನ ಸಮಸ್ಯೆ ಕಾಡುತ್ತಿದೆ. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಒಂದು ವೇಳೆ ಪ್ರಾಣಿಗಳಿಗೆ ನೀರು ಸಿಗದೆ ಸಾವನ್ನಪ್ಪಿದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.