Tag: bidar

  • 40 ವರ್ಷಗಳಿಂದ 2 ರೂ. ಶುಲ್ಕ- ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಬೀದರ್‌ನ ಡಾ. ಮಕ್ಸೂದ್

    40 ವರ್ಷಗಳಿಂದ 2 ರೂ. ಶುಲ್ಕ- ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಬೀದರ್‌ನ ಡಾ. ಮಕ್ಸೂದ್

    ಬೀದರ್: ಕಲಿಯುಗದ ಈ ಕಾಲದಲ್ಲಿ ವೈದ್ಯ ವೃತ್ತಿಯೂ ಬ್ಯುಸಿನೆಸ್ ಆಗೋಗಿದೆ. ಆದರೆ ಪಬ್ಲಿಕ್ ಹೀರೋ ಬೀದರ್‍ನ ಮಕ್ಸೂದ್ ಚಂದಾ ಅವರು 40 ವರ್ಷಗಳಿಂದ ಕೇವಲ 2 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಬೀದರ್ ನಗರದ ರಾಮ ಮಂದಿರ ಕಾಲೋನಿಯ ಡಾ.ಮಕ್ಸೂದ್ ಚಂದಾ ಇವತ್ತಿನ ಪಬ್ಲಿಕ್ ಹೀರೋ. ಬಡತನದಿಂದ ನೊಂದು ಬೆಂದು ಹೋಗಿರುವ ರೋಗಿಗಳು ಈ ವೈದ್ಯರ ಬಳಿ ಬಂದ್ರೆ ಸಾಕು ನಿಮ್ಮ ರೋಗಕ್ಕೆ ಮುಕ್ತಿ ನೀಡುತ್ತಾರೆ. ಬೀದರ್ ನಗರದ ರಾಮ ಮಂದಿರ ಕಾಲೋನಿಯಲ್ಲಿ ತಮ್ಮದೇ ಆದ ಒಂದು ಪುಟ್ಟ ಕ್ಲಿನಿಕ್ ಕಟ್ಟಿಕೊಂಡು ಗಡಿ ಜಿಲ್ಲೆಯ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಿ ದೇವರ ಸ್ವರೂಪಿಯಾಗಿದ್ದಾರೆ.

    ಪ್ರತಿ ದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ.ಎ.ಮಕ್ಸೂದ್ ಚಂದಾ, 40 ವರ್ಷಗಳಿಂದ 2 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಡಾ.ಎ.ಮಕ್ಸೂದ್ ಚಂದಾ ಬಡ ಜನರನ್ನು ಕಂಡು ವೈಯಕ್ತಿಕ ಸಂಪಾದನೆ ಮಾಡೋದನ್ನು ಬಿಟ್ಟು ಸಮಾಜಕ್ಕೆ ನನ್ನ ಸೇವೆ ನೀಡಬೇಕು ಎಂದು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರೋಗಿಗಳಿಗೆ ಯಾವುದಾದರು ಮಾರಣಾಂತಿಕ ಕಾಯಿಲೆ ಇದ್ದರೆ ತಮ್ಮದೇ ಟ್ರಸ್ಟ್ ಕಡೆಯಿಂದ ಹೈದ್ರಾಬಾದ್‍ನಿಂದ ನುರಿತ ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆಯುತ್ತಾರೆ. ಪತ್ನಿ, ಪುತ್ರ, ಪುತ್ರಿ, ಅಳಿಯ ಸೇರಿದಂತೆ ಇಡೀ ಕುಟುಂಬವೇ ವೈದ್ಯ ವೃತ್ತಿಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಕುಗ್ರಾಮದಲ್ಲಿ ಹುಟ್ಟಿದ ನಾನು, ಬಡವರ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದು ಅದಕ್ಕೆ ಈ ರೀತಿಯ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ಮಕ್ಸೂದ್ ಹೇಳುತ್ತಾರೆ.

    ಕುಗ್ರಾಮದಲ್ಲಿ ಹುಟ್ಟಿ ಬಡವರ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಡಾ.ಎ.ಮಕ್ಸೂದ್ ಚಂದಾ ಬಡವರಿಗಾಗಿ ಯಾಕೆ ಉಚಿತ ಸೇವೆ ನೀಡಬಾರದು ಎಂದು ಈ ಸೇವೆ ನಿಡುತ್ತಿದ್ದಾರೆ. ಸ್ವತಃ ಗೋಲ್ಡ್ ಮೇಡಲಿಸ್ಟ್ ಆಗಿರುವ ವೈದ್ಯರು ತಮ್ಮ ಸೇವೆ ಗಡಿ ಜಿಲ್ಲೆಗೆ ಬೇಕು ಎಂದು ಒಂದು ಸಣ್ಣ ಕ್ಲಿನಿಕ್ ತೆಗೆದುಕೊಂಡು ಪ್ರತಿದಿನ ಬರುವ ನೂರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ರೋಗಿಗಳು ಅಲ್ಲದೆ ಪಕ್ಕದ ತೆಲಂಗಾಣದಿಂದಲು ಕೂಡ ರೋಗಿಗಳು ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳಿಗೆ ಔಷಧಿಗಳ ಜೊತೆಗೆ ವಾಪಸ್ ಹೋಗಲು ಬಸ್ಸಿಗೆ ಹಣವಿಲ್ಲ ಅಂದರೂ ಅದನ್ನು ನೀಡಿದ ಉದಾಹರಣೆಗಳು ಕೂಡ ಇವೆ. ವೈದ್ಯರು ಅಂದರೆ ಸಾಕು ಅವರಿಗೆ ಒಂದು ಕಾರು, ಐಷಾರಾಮಿ ಆಸ್ಪತ್ರೆ ಇರಬೇಕು ಎಂಬ ಮನಸ್ಥಿತಿ ಇರುವ ವೈದ್ಯರುಗಳ ಮಧ್ಯೆ ಬಡ ರೋಗಿಗಳಿಗಾಗಿ ನಾನು ಎಂಬ ಈ ಅಪರೂಪದ ವೈದ್ಯರಿಗೆ ಜಿಲ್ಲೆಯ ಜನರೆ ಸಲಾಂ ಹಾಕುತ್ತಿದ್ದಾರೆ. ಸತತವಾಗಿ 40 ವರ್ಷಗಳಿಂದ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಎ.ಮಕ್ಸೂದ್ ಚಂದಾಗೆ ಆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಹೇಳಿದ್ದಾರೆ.

    ಒಟ್ಟಿನಲ್ಲಿ ಗ್ರಾಮೀಣ ಭಾಗದ ಕಡು ಬಡ ರೋಗಿಗಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಈ ವೈದ್ಯರು ಇತರ ವೈದರಿಗೆ ಮಾದರಿಯಾಗಿದ್ದಾರೆ.

  • ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಗ್ರಾಮದ ಬಳಿಯ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಿ ಶಿಕ್ಷಕ ಕಮ್ ಮಾದರಿ ರೈತ ಸಾಧನೆ ಮಾಡಿದ್ದಾರೆ. ಭಾಲ್ಕಿ ಪಟ್ಟಣ್ಣದ ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿರುವ ಗಣಪತಿ ಬೋಚ್ರೆ ಸತತ ಪರಿಶ್ರಮದಿಂದ ಇಂದು ಮಾದರಿ ರೈತರಾಗಿದ್ದಾರೆ. ನಾಲ್ಕು ಎಕರೆ ಬರಡು ಭೂಮಿಯನ್ನು 5 ವರ್ಷಗಳಲ್ಲಿ ಸತತ ಪರಿಶ್ರಮ ಹಾಕಿ ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಇಂದು ಪ್ರತಿವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಪರಿಶ್ರಮ ನೋಡಿದ ಜಿಲ್ಲೆಯ ರೈತರು ಅವರನ್ನೇ ಅನುಸರಿಸುತ್ತಿದ್ದಾರೆ. ರೈತರು ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಮಾದರಿ ರೈತ ತಿಳಿಸಿದ್ದಾರೆ.

    ಮಾವು, ನೇರಳೆ, ದಾಳಿಂಬೆ, ಮೊಂಸಬಿ, ಕಿತ್ತಳೆ, ಜಾಪಳ್, ಸಪೋಟಾ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಗಡಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಾವಿನ ಹಣ್ಣನಲ್ಲಿ ನಾಲ್ಕು ವಿಧಗಳ ಗಿಡಗಳನ್ನು ವಿದೇಶದಿಂದ ತಂದು ಹಾಕಿದ್ದಾರೆ. ಸಂರ್ಪೂಣವಾಗಿ ಸಾವಯವ ಗೊಬ್ಬರವನ್ನು ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಲ್ಲೂ ಇವುಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದು ಈ ರೀತಿ ಮಾದರಿ ರೈತನ ಸಾಧನೆ ನೋಡಿ ಸ್ಫೂರ್ತಿಯಾಗಿದ್ದಾರೆ. ಸರ್ಕಾರಗಳು ರೈತರಿಗೆ ಯಾವುದೇ ಸಹಕಾರ ನೀಡದೆ ರೈತರಿಗೆ ಶಾಪವಾಗಿದ್ದು, ಈ ರೀತಿಯ ಸಾಧನೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.

  • ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಬೀದರ್: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದೇ ರೀತಿ ರೋಗಿಗಳಿಗೆ ಹಣ್ಣು ಹಂಚುವ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಎಡವಟ್ಟು ಮಾಡಿದ್ದು, ಹತ್ತಾರು ಬೆಂಬಲಿಗರೊಂದಿಗೆ ತುರ್ತುನಿಗಾ ಘಟಕ(ಐಸಿಯು)ಕ್ಕೆ ನುಗ್ಗಿ ಹಣ್ಣು ಹಂಚಿದ್ದಾರೆ.

    ಮೋದಿ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಬೀದರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಚುತ್ತಿದ್ದರು. ಈ ವೇಳೆ ಕೇವಲ ವಾರ್ಡ್‍ನಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ಹಂಚದೆ, ಐಸಿಯುನಲ್ಲಿರುವ ರೋಗಿಗಳಿಗೂ ಹಣ್ಣುಗಳನ್ನು ಹಂಚಿದ್ದು, ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ಸಚಿವರು ತೊಂದರೆ ಕೊಟ್ಟಿದ್ದಾರೆ.

    ಸಚಿವರು ಹಾಗೂ ಅವರೊಂದಿಗೆ 50ಕ್ಕೂ ಹೆಚ್ಚು ಬೆಂಬಲಿಗರು ಶೂ ಹಾಕಿಕೊಂಡೇ ಐಸಿಯುಗೆ ನುಗ್ಗಿದ್ದು, ತುರ್ತುನಿಗಾ ಘಟಕಕ್ಕೆ ಒಂದೇ ಸಮಯಕ್ಕೆ ಹತ್ತಾರು ಮಂದಿ ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಐಸಿಯುನಲ್ಲಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಹೋದರೂ ಸಹ ಒಬ್ಬಿಬ್ಬರು ಮಾತ್ರ ತೆರಳಬೇಕು. ಆದರೆ, ಸಚಿವರು ಇದಾವುದನ್ನೂ ಲೆಕ್ಕಿಸದೆ ಹತ್ತಾರು ಬೆಂಬಲಿಗರೊಂದಿಗೆ ನುಗ್ಗಿದ್ದಾರೆ.

    ಈ ಮೂಲಕ ಆಸ್ಪತ್ರೆಯ ನಿಯಮವನ್ನು ಗಾಳಿಗೆ ತೂರಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಹಣ್ಣು ವಿತರಣೆ ಮಾಡದೆ, ಐಸಿಯುಗೂ ನುಗ್ಗಿ ವೈದ್ಯರಿಗೂ ಸಹ ಇರುಸುಮುರುಸು ಉಂಟುಮಾಡಿದ್ದಾರೆ.

  • ಸಿದ್ದರಾಮಯ್ಯಗೆ ಸರಿಸಮ ಯಾರೂ ಇಲ್ಲ: ಬಿ.ನಾರಾಯಣರಾವ್

    ಸಿದ್ದರಾಮಯ್ಯಗೆ ಸರಿಸಮ ಯಾರೂ ಇಲ್ಲ: ಬಿ.ನಾರಾಯಣರಾವ್

    ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯ ಅವರೇ ಹೊರತು, ಅವರಿಗೆ ಸರಿಸಮ ಯಾರೂ ಇಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮತ್ತೆ ಸಿದ್ದರಾಮಯ್ಯರ ಜಪ ಮಾಡುತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯನೇ, ಅವರಿಗೆ ಸರಿಸಮ ಯಾರೂ ಇಲ್ಲ. ಇಂತಹ ಧೀಮಂತ ನಾಯಕ ರಾಜ್ಯಕ್ಕೆ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬವರಲ್ಲಿ ನಾನು ಮೊದಲಿಗ. ಇದರಲ್ಲಿ ಎರಡನೇ ಮಾತೇ ಇಲ್ಲ. ಅನ್ನಭಾಗ್ಯ ಬೇರೆ ರಾಜ್ಯದ ಯಾವ ಸಿಎಂ ಕೊಟ್ಟಿದ್ದಾನೆ? ಆದರೆ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೊಟ್ಟಿದ್ದಾರೆ. ಇಂದು ಬರಗಾಲ ಬಂದರೂ ಅನ್ನಭಾಗ್ಯ ಯೋಜನೆ ಇರುವ ಕಾರಣಕ್ಕೆ ಜನರು ಊರು ಬಿಟ್ಟು ಗೂಳೆ ಹೋಗುತ್ತಿಲ್ಲ ಎಂದು ಹಾಡಿ ಹೊಗಳಿದರು.

    ಬಿಜೆಪಿ ಸರ್ಕಾರ ಇಡೀ ಕಲಬುರಗಿ ಭಾಗಕ್ಕೆ ಒಂದೇ ಒಂದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಕಲ್ಯಾಣ ರಾಜ್ಯ ಒಂದು ಕಡೆ ನಾಮಕರಣ ಮಾಡಿ, ಮಂತ್ರಿ ಪದವಿ ಒಂದೂ ಕೊಡೋದಿಲ್ಲ. ಕೊಟ್ಟರೂ ಪಶುಸಂಗೊಪನೆ ಎಂದು ಒಂದು ಖಾತೆ ಕೊಟ್ಟು ನಮಗೆ ಈ ರೀತಿ ವಂಚನೆ ಮಾಡೋದನ್ನ ನಾವು ಸಹಿಸಿಕೊಳ್ಳುವುದಿಲ್ಲ. ಕೇವಲ ಹೆಸರು ರಾಜ ಎಂದು ಇಟ್ಟು ಕೆಲಸ ಬೇರೆ ಅವರು ಮಾಡಿದರೆ ಒಪ್ಪಿಕೊಳ್ಳುವುದಿಲ್ಲ.

    ಹಾಗೆಯೇ ಜಿಲ್ಲೆಯ ಒಳ್ಳೆಯ ಸಚಿವ ಸ್ಥಾನ ಕೊಡಬೇಕು, ಅಭಿವೃದ್ಧಿಗೆ ಒಳ್ಳೆಯ ಬಜೆಟ್ ನೀಡಬೇಕು ಹಾಗೂ ಕಲ್ಯಾಣ ರಾಜ್ಯವನ್ನಾಗಿ ಮಾಡಲು ಎಲ್ಲರಿಗೂ ಸಹಕಾರ ನೀಡಬೇಕು. ಆ ಮಾತ್ರ ಕರ್ನಾಟಕಕ್ಕೆ ಕಲ್ಯಾಣ ರಾಜ್ಯ ಎಂದು ನಾಮಕರಣ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಈ ಬಗ್ಗೆ ಗಮನ ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

  • ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಬೀದರ್: ಕ್ಲಾಸ್ ರೂಮಿನಲ್ಲಿ ಪಾಠ ಮಾಡದೇ ನಿದ್ದೆ ಮಾಡುತ್ತಿದ್ದ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಮೊಗದಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕುಂಭಕರ್ಣ ನಿದ್ದೆಗೆ ನೊಂದು ಹೋಗಿದ್ದಾರೆ. ಒಟ್ಟು 107 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಗೆ ಹೋದ ತಕ್ಷಣ ಶಿಕ್ಷಕರು ಬೆಂಚ್ ಮೇಲೆ ಕಾಲು ಹಾಕಿ ಪಾಠ ಮಾಡದೆ ನಿದ್ದೆಗೆ ಜಾರುತ್ತಾರೆ. 6 ತಿಂಗಳಿನಿಂದ ಶಿಕ್ಷಕರು ಅಲ್ಪಸ್ವಲ್ಪ ಪಾಠ ಮಾಡಿದ್ದು ಬಿಟ್ಟರೆ ಇನ್ನುಳಿದ ಸಮಯ ಕೇವಲ ನಿದ್ದೆ ಮಾಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿಗಳು ನ್ಯಾಯ ಕೇಳಲು ನೇರವಾಗಿ ಕ್ಷೇತ್ರ ಶಿಕ್ಷಣಾಧಿರಿಗಳ ಕಚೇರಿಗೆ ಬಂದು ಬಿಇಓಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಆಟೋದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ನ್ಯಾಯ ಕೇಳಿದ್ದಾರೆ. ಸ್ವತಃ ವಿದ್ಯಾರ್ಥಿಗಳೇ ಕಚೇರಿಗೆ ಬಂದು ಬಿಇಓಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಒಂದು ಕ್ಷಣ ಕಕ್ಕಾಬಿಕ್ಕಿ ಆದರು. ಏನೇ ಮಾಡಿದ್ರೂ ನಡೆಯುತ್ತೆ ಎಂಬ ಶಿಕ್ಷಕರ ನಡೆಗೆ ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶಿಕ್ಷಕರ ವಿರುದ್ಧ ಸಿಡಿದೆದ್ದು ಪಾಠ ಮಾಡಿದ್ದಾರೆ.

  • ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಹಾಜರ್ – ಅಧಿಕಾರಿಯನ್ನು ಅಮಾನತುಗೊಳಿಸಿದ ಪ್ರಭು ಚವ್ಹಾಣ್

    ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಹಾಜರ್ – ಅಧಿಕಾರಿಯನ್ನು ಅಮಾನತುಗೊಳಿಸಿದ ಪ್ರಭು ಚವ್ಹಾಣ್

    – ಪಶು ವೈದ್ಯಕೀಯ ಕಚೇರಿಗೆ ದಿಢೀರ್ ಭೇಟಿ
    – ಅಧಿಕಾರಿಗಳಿಗೆ ಸಚಿವರ ಫುಲ್ ಕ್ಲಾಸ್

    ಬೀದರ್: ಜಿಲ್ಲೆಯ ಶಾಹಗಾಂಜ್‍ನಲ್ಲಿರುವ ಪಶು ವೈದ್ಯಕೀಯ ಕಚೇರಿಗೆ ದಿಢೀರ್ ಭೇಟಿ ನೀಡಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಟ್ಕಾ, ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಇಂದು ಶಾಹಗಾಂಜ್‍ನಲ್ಲಿರುವ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದಾರೆ. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸೆಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ಡಿ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಪರಭಾಷೆಗಳ ಪ್ರಾಬಲ್ಯದ ಮಧ್ಯೆ ಕನ್ನಡ ಉಳಿವಿಗಾಗಿ ಶ್ರಮಿಸಿದ ಎಂ.ಜಿ ದೇಶಪಾಂಡೆ

    ಪರಭಾಷೆಗಳ ಪ್ರಾಬಲ್ಯದ ಮಧ್ಯೆ ಕನ್ನಡ ಉಳಿವಿಗಾಗಿ ಶ್ರಮಿಸಿದ ಎಂ.ಜಿ ದೇಶಪಾಂಡೆ

    ಬೀದರ್: ಮರಾಠಿ, ಉರ್ದು, ತೆಲುಗು, ಹಿಂದಿ ಭಾಷೆಗಳು ಅಟ್ಟಹಾಸ ಮೆರೆಯುತ್ತಿರುವಾಗ ಗಡಿ ಜಿಲ್ಲೆಯಲ್ಲಿ “ಖ್ಯಾತಿ” ಎಂಬ ಕನ್ನಡದ ಮೊದಲ ವಾರ ಪತ್ರಿಕೆ ಪ್ರಾರಂಭ ಮಾಡಿ, ಕನ್ನಡವನ್ನು ಉಳಿಸಿದ ಕೀರ್ತಿ ನಮ್ಮ ಪಬ್ಲಿಕ್ ಹೀರೋ ಹಿರಿಯ ಸಾಹಿತಿ ಎಂ.ಜಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ.

    ಮೂಲತಃ ಆಂಧ್ರ ಪ್ರದೇಶದವರಾದ ಎಂ.ಜಿ ದೇಶಪಾಂಡೆ ಅವರು ವೃತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಆದರೆ ಹೊರರಾಜ್ಯದಿಂದ ಕರ್ನಾಟಕ್ಕೆ ಬಂದ ಮೇಲೆ ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಾರೆ. ಸುಮಾರು 50 ವರ್ಷ ಸುದೀರ್ಘವಾಗಿ ಕನ್ನಡ ಸಾಹಿತ್ಯಕ್ಕಾಗಿ ತಮ್ಮ ಸೇವೆ ಸಲ್ಲಿಸಿ, ಗಡಿ ಜಿಲ್ಲೆಯಲ್ಲಿ ಹಲವಾರ ಸಾಹಿತಿಗಳನ್ನು ಮುಖ್ಯವಾಹಿನಿಗೆ ತಂದ ಕಿರ್ತಿ ಇವರದ್ದಾಗಿದೆ. ಗಡಿ ಭಾಗದ ಕನ್ನಡದ ಕಂದ ‘ಖ್ಯಾತಿ ಕವಿ’ ಎಂದು ಎಂ.ಜಿ ದೇಶಪಾಂಡೆ ಹೆಸರುಗಳಿಸಿದ್ದಾರೆ. ಕನ್ನಡದ ವಾರ ಪತ್ರಿಕೆ ‘ಖ್ಯಾತಿ’ಯನ್ನು ಹೊರ ತಂದಾಗ ಅನ್ಯಭಾಷಿಕರು ಗಲಾಟೆ ಮಾಡಿ, ಹಲ್ಲೆ ನಡೆಸಿದ್ದರು. ಈ ಪ್ರತಿಕೆ ಮುದ್ರಣವಾಗಬಾರದು ಎಂದು ವಿರೋಧಿಸಿದ್ದರು. ಆ ಸಂದರ್ಭದಲ್ಲಿ ದೇಶಪಾಂಡೆ ಅವರು ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತು, ಕನ್ನಡ ವಾರ ಪತ್ರಿಕೆಯನ್ನು ಮುದ್ರಿಸಿ ಹೊರತಂದು ಕನ್ನಡದ ಕಂದನಾದರು.

    70ರ ದಶಕದಲ್ಲಿ ಮರಾಠಿ, ತೆಲುಗು, ಉರ್ದು ಹಾಗೂ ಹಿಂದೆ ಭಾಷೆಗಳ ಪ್ರಭಾವದಿಂದ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿತ್ತು. ಕನ್ನಡದ ಕಾರ್ಯಕ್ರಮಗಳನ್ನು ಮಾಡುವುದು, ಕನ್ನಡದ ಸಂಘಗಳನ್ನು ಕಟ್ಟುವುದು, ಕನ್ನಡ ಪತ್ರಿಕೆಗಳನ್ನು ಮುದ್ರಣ ಮಾಡುವ ಕೆಲಸವನ್ನು ಅನ್ಯಭಾಷಿಕರು ಸಹಿಸುತ್ತಿರಲಿಲ್ಲ. ಕನ್ನಡಕ್ಕಾಗಿ ದುಡಿಯುವ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. ಆ ಸಮಯದಲ್ಲಿ ಆಂಧ್ರ ಪ್ರದೇಶದಿಂದ ಬಂದು ಬ್ಯಾಂಕ್ ಉದ್ಯೋಗದಲ್ಲಿ ತೊಡಗಿಕೊಂಡಿದ್ದ ದೇಶಪಾಂಡೆ ಅವರು ಹಿರಿಯ ಸಾಹಿತಿಯಾಗಿ, ಕನ್ನಡಕ್ಕಾಗಿ ಟೊಂಕ ಕಟ್ಟಿನಿಂತರು. ಅನ್ಯಭಾಷೆಗಳ ಪತ್ರಿಕೆಗಳು ಮುದ್ರಣವಾಗುತ್ತಿದ್ದಾಗ ‘ಖ್ಯಾತಿ’ ಕನ್ನಡದ ಮೊದಲ ವಾರ ಪತ್ರಿಕೆಯನ್ನು ಕೈಬರಹದಲ್ಲಿ ಬರೆದು ಕಲ್ಲಚ್ಚಿನಲ್ಲಿ ಮುದ್ರಣ ಮಾಡಿದರು.

    ಮೊದಲ ಕನ್ನಡ ಪತ್ರಿಕೆಯನ್ನು ಮುದ್ರಣ ಮಾಡಿದ್ದರಿಂದ ಅನ್ಯಭಾಷಿಕರು ದೇಶಪಾಂಡೆ ಅವರ ಮೇಲೆ ಹಲ್ಲೆ, ಗಲಾಟೆ ಕೂಡ ನಡೆಸಿದ್ದರು. ಆದರೆ ಯಾವ ದಬ್ಬಾಳಿಕೆಗೂ ಅಂಜದೆ ಕನ್ನಡಕ್ಕಾಗಿ ಶ್ರಮಿಸಿ ಜಿಲ್ಲೆಯಲ್ಲಿ ಕನ್ನಡ ಉಳಿಸಿದ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ. ಬೀದರ್ ನಗರದ ರಾಂಪೂರೆ ಕಾಲೋನಿ ನಿವಾಸಿಯಾಗಿರುವ ದೇಶಪಾಂಡೆಯವರು 7ಂರ ದಶಕದಲ್ಲಿ ಕನ್ನಡಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟಿದ್ದರು. ಬ್ಯಾಂಕ್ ವೃತಿಯಲ್ಲಿ ಇದ್ದುಕೊಂಡೆ ಸಾಹಿತ್ಯದ ಒಲವು ಬೆಳಸಿಕೊಂಡ ದೇಶಪಾಂಡೆಯವರು ಕಥೆ, ಕಾದಂಬರಿ, ಕಾವ್ಯ, ಅನುವಾದ, ನಾಕಟ, ಇತಿಹಾಸ, ಲೇಖನ, ಚರಿತ್ರೆ, ವಚನ ಸಾಹಿತ್ಯ, ಸಂಪಾದನೆ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಕನ್ನಡ ಸಾಹಿತ್ಯ ಪರಿಷತ್, ಧರಿನಾಡು, ಚುಟುಕು ಪರಿಷತ್, ಬಿ ಕಲ್ಯಾಣ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ 5 ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 70ನೇ ದಶಕದಲ್ಲಿ ಗಡಿ ಭಾಗದಲ್ಲಿ ಅನ್ಯಭಾಷಿಕರ ಅಟ್ಟಹಾಸ ಹೇಗಿತ್ತು ಎಂಬುದನ್ನು ಹಾಗೂ ಕನ್ನಡ ಉಳಿಯುವಿಗಾಗಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ದೇಸಪಾಂಡೆ ಅವರು ತಿಳಿಸಿದ್ದಾರೆ.

    ಇವರ ಕೃತಿಗಳ ಮೇಲೆ ಕೆಲವು ಯುವ ಸಾಹಿತಿಗಳು ಪಿಎಚ್‍ಡಿ ಮಾಡಿದ್ದು, 900 ಪುಟಗಳ ಅಭಿನಂದನಾ ಗ್ರಂಥವನ್ನು ಕೂಡಾ ಹೊರತಂದಿದ್ದಾರೆ. ದೇಶಪಾಂಡೆಯವರ ‘ಮೀರಾಭಾಯಿ’ ಕವನ ಸಂಕಲನ ಮಹಾರಾಷ್ಟ್ರ ವಿವಿಯಲ್ಲಿ ಪಠ್ಯವಾಗಿದೆ. ಕನ್ನಡ ಭಾಷೆಯ 5ನೇಯ ತರಗತಿಯ ವಿದ್ಯಾರ್ಥಿಗಳು ಇವರ ಕವಿತೆಗಳನ್ನು ಓದುತ್ತಿದ್ದಾರೆ. ಕಲಬುರಗಿ ಹಾಗೂ ವಿಜಯಪುರ ಮಹಿಳಾ ವಿವಿಯ ಪಠ್ಯದಲ್ಲಿ ಇವರ ಕವಿತೆಗಳನ್ನು ಸೇರಿಸಲಾಗಿದೆ. ರಾಜ್ಯ ಮಟ್ಟದ “ಕನ್ನಡ ರತ್ನ” ಸೇರಿದಂತೆ, ಜಿಲ್ಲಾ, ಹಾಗೂ ತಾಲೂಕು ಮಟ್ಟದ ಅನೇಕ ಪ್ರಶಸ್ತಿಗಳು ಹಾಗೂ ಸನ್ಮಾನಗಳು ಇವರಿಗೆ ಸಂದಿವೆ.

    ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲೆಮರೆಕಾಯಿಯಂತಿರುವ 1,000 ಸಾಧಕರನ್ನು ಗುರಿತಿಸಿ ದೇಶಪಾಂಡೆ ಅವರು ಪ್ರೋತ್ಸಾಹ ನೀಡಿದ್ದಾರೆ. ಅನ್ಯಭಾಷಗಳ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕನ್ನಡ ಉಳಿವಿಗಾಗಿ 5 ಕನ್ನಡ ಸಾಹಿತ್ಯ ಸಂಘಟನೆಗಳನ್ನು ಕೂಡ ದೇಶಪಾಂಡೆ ಅವರು ಸಂಸ್ಥಾಪನೆ ಮಾಡಿದ್ದಾರೆ. ಈ ಹಿರಿಯ ಸಾಹಿತಿ ಬಗ್ಗೆ ಹೇಳುತ್ತಾ ಹೊರಟರೆ ಪದಗಳೇ ಸಾಕಾಗುವುದಿಲ್ಲಾ, ಅಷ್ಟರ ಮಟ್ಟಿಗೆ ಅವರು ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ.

    ಹೀಗಾಗಿ ಜಿಲ್ಲೆಯಲ್ಲಿ “ಖ್ಯಾತಿ ಕವಿ” ಎಂದೇ ಸುಪ್ರಸಿದ್ದಿ ಪಡೆದುಕೊಂಡಿರುವ ದೇಶಪಾಂಡೆ ಅವರು ಕನ್ನಡಕ್ಕಾಗಿ ಯಾವಾಗಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಇವರ ಈ ಬಹುಮುಖ ಪ್ರತಿಭೆ ಬಗ್ಗೆ ಮೊತ್ತೋರ್ವ ಹಿರಿಯ ಸಾಹಿತಿಗಳು ಹಾಡಿ ಹೊಗಳಿದ್ದಾರೆ.

  • ರಾತ್ರೋರಾತ್ರಿ ಅರೆ ಬೆತ್ತಲೆಯಾಗಿ ಎಸ್‍ಬಿಐ ಬ್ಯಾಂಕ್‍ಗೆ ಕನ್ನ ಹಾಕಿದ ಕಳ್ಳ

    ರಾತ್ರೋರಾತ್ರಿ ಅರೆ ಬೆತ್ತಲೆಯಾಗಿ ಎಸ್‍ಬಿಐ ಬ್ಯಾಂಕ್‍ಗೆ ಕನ್ನ ಹಾಕಿದ ಕಳ್ಳ

    ಬೀದರ್: ತಡರಾತ್ರಿ ಎಸ್‍ಬಿಐ ಬ್ಯಾಂಕ್‍ಗೆ ನುಗ್ಗಿ ಕಂಪ್ಯೂಟರ್ ಹಾಗೂ ಕೆಲವು ಸಲಕರಣೆಗಳನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಬೀದರ್‍ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಖೇಣಿ ರಜೋಳ ಗ್ರಾಮದ ಎಸ್‍ಬಿಐ ಬ್ಯಾಂಕ್ ಕಿಟಕಿ ಒಡೆದು ಅರೆ ಬೆತ್ತಲೆಯಾಗಿ ಒಳ್ಳ ನುಗ್ಗಿದ ದರೋಡೆಕೋರ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನೈಸ್ ಖ್ಯಾತಿಯ ಅಶೋಕ್ ಖೇಣಿ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದಿಂದ ತೀವ್ರ ಪರಿಶೀಲನೆ ನಡೆಸಲಾಗಿದೆ. ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪರಾರಿಯಾಗಿರುವ ಆರೋಪಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

  • ಬೀದರ್‌ನಲ್ಲಿ ಮರಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

    ಬೀದರ್‌ನಲ್ಲಿ ಮರಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

    ಬೀದರ್: ಮರಗಳಿಗೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.

    ಮರ ಉಳಿಸಿ ಕಾಡು ಬೆಳಸಿ ಎಂದು ವಿದ್ಯಾರ್ಥಿನಿಯರು ಪರಿಸರದ ಜಾಗೃತಿ ಮೂಡಿಸಿದ್ದಾರೆ. ಮರಗಳ ಮಾರಣಹೋಮದಿಂದಾಗಿ ಇಂದು ಪ್ರಕೃತಿ ವಿಕೋಪಗಳು, ಬರಗಾಲ ಸೃಷ್ಟಿಯಾಗಿ ಹನಿ ಹನಿ ನೀರಿಗೂ ರಾಜ್ಯದಲ್ಲಿ ಹಾಹಾಕಾರ ಶುರುವಾಗಿದ್ದು, ಇಂದು ಪರಿಸರವನ್ನು ಹೇಗೆ ನಾವು ಕಾಪಾಡಿಕೊಳ್ಳಬೇಕು ಎಂದು ನೂರಾರು ವಿದ್ಯಾರ್ಥಿನಿಯರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

    ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿರುವ ನೂರಾರು ಮರಗಳಿಗೆ ರಾಖಿ ಕಟ್ಟು ಮೂಲಕ “ಹಸಿರೆ ಉಸಿರು” ಎಂಬ ಜಾಗತಿಕ ಸಂದೇಶವನ್ನು ವಿದ್ಯಾರ್ಥಿನಿಯರು ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಅರಣ್ಯಾಧಿಕಾರಿಗಳು ಸಾಥ್ ನೀಡಿದ್ದು, ಮರಗಳಲ್ಲಿ ಸಹೋದರತ್ವ ಕಾಣುವ ಮೂಲಕ ಮರಕ್ಕೆ ರಾಖಿ ಕಟ್ಟುವ ಮೂಲಕ ವಿನೂತನವಾಗಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು. ಈ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು, ಪೋಷಕರು ಹಾಗೂ ಅರಾಣ್ಯಾಧಿಕಾರಿಗಳು ಭಾಗಿಯಾಗಿದ್ದರು.

    ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಐಶ್ವರ್ಯ, ಅರಣ್ಯಾಧಿಕಾರಿಗಳು ನಮ್ಮ ಶಾಲೆಗೆ ಬಂದು ಗಿಡಗಳ ಮಾಹಿತಿ ನೀಡಿದ್ದರು. ಬಳಿಕ ಮರಗಳಿಗೆ ರಾಖಿ ಕಟ್ಟಬೇಕು ಎಂದು ಹೇಳಿದ್ದರು. ಹಾಗಾಗಿ ನಾವು ಅರಣ್ಯಕ್ಕೆ ಬಂದು ಎಲ್ಲ ಮರಗಳಿಗೆ ರಾಖಿ ಕಟ್ಟಿದ್ದೇವೆ. ರಾಖಿ ಕಟ್ಟಲು ಕಾರಣ ಏನೆಂದರೆ ನಮ್ಮ ಅಣ್ಣ-ತಮ್ಮನಿಗೆ ರಾಖಿ ಕಟ್ಟಿದ್ದರೆ ಅವರು ನಮ್ಮನ್ನು ಹೇಗೆ ರಕ್ಷಿಸುತ್ತಾರೋ, ಹಾಗೆಯೇ ಮರಗಳು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಎಲ್ಲ ಗಿಡಗಳಿಗೆ ರಾಖಿ ಕಟ್ಟಿದ್ದೇವೆ ಎಂದು ಹೇಳಿದ್ದಾಳೆ.

  • ರಾಜ್ಯದ ಜನರನ್ನು ದಾರಿ ತಪ್ಪಿಸಲು ಕದ್ದಾಲಿಕೆ ಕೇಸ್ ಸಿಬಿಐಗೆ: ಕಾಶೆಂಪೂರ್

    ರಾಜ್ಯದ ಜನರನ್ನು ದಾರಿ ತಪ್ಪಿಸಲು ಕದ್ದಾಲಿಕೆ ಕೇಸ್ ಸಿಬಿಐಗೆ: ಕಾಶೆಂಪೂರ್

    ಬೀದರ್: ರಾಜ್ಯದ ಜನರನ್ನು ದಾರಿ ತಪ್ಪಿಸಲು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ ಮೊತ್ತೊಂದು ಕಡೆ ಬರಗಾಲ ತಾಂಡವಾಡುತ್ತಿದ್ದು ಕೇಂದ್ರದಿಂದ ಎಷ್ಟು ಅನುದಾನ ಬರುತ್ತೆ ಎಂದು ಜನ ಕಾಯುತ್ತಿದ್ದಾರೆ. ಅದ್ದರಿಂದ ಜನರನ್ನು ದಾರಿ ತಪ್ಪಿಸಲು ಸಿಎಂ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಹೇಳಿದರು.

    ಸಿಬಿಐ ತನಿಖೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೆದರುವುದಿಲ್ಲ. ಅವರಿಗೆ ಎಲ್ಲಾ ರೀತಿಯ ಶಕ್ತಿಯಿದ್ದು, ಯಾವ ತನಿಖೆಗೂ ಎಲ್ಲರೂ ಸಿದ್ಧರಿದ್ದಾರೆ. ಹೆಚ್‍ಡಿಕೆ ಕುಟುಂಬ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ. ಈ ಪ್ರಕರಣವನ್ನು ಅವರು ಸಮರ್ಥವಾಗಿ ಎದುರಿಸುತ್ತಾರೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.