Tag: bidar

  • ಹೆಲ್ಮೆಟ್ ಧರಿಸಿ ರೈತನಿಂದ ಬೆಳೆಗೆ ಔಷಧಿ ಸಿಂಪರಣೆ

    ಹೆಲ್ಮೆಟ್ ಧರಿಸಿ ರೈತನಿಂದ ಬೆಳೆಗೆ ಔಷಧಿ ಸಿಂಪರಣೆ

    ಬೀದರ್: ರೈತರೊಬ್ಬರು ಬೆಳೆಗೆ ಔಷಧಿ ಸಿಂಪರಣೆ ಮಾಡುವ ವೇಳೆ ಹೆಲ್ಮೆಟ್ ಧರಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಔಷಧಿ ಸಿಂಪರಣೆ ವೇಳೆ ಈ ಮಾದರಿ ರೈತ ಹೆಲ್ಮೆಟ್ ಧರಿಸಿ ಇತರರಿಗೂ ಜಾಗೃತಿ ಮೂಡಿಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ತೋಗರಿ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡುವ ವೇಳೆ ಮುಂಜಾಗ್ರತಾ ಕ್ರಮವಾಗಿ ರೈತ ಚಾಂದಪಾಶಾ ಅವರು ಹೆಲ್ಮೆಟ್ ಧರಿಸಿದ್ದರು.

    ಸಮಾಜದಲ್ಲಿ ಅದೆಷ್ಟು ರೈತರು ತಮ್ಮ ಹೊಲಗಳಲ್ಲಿ ಔಷಧಿ ಸಿಂಪಡಿಸುವ ವೇಳೆ ಮುಂಜಾಗ್ರತಾ ಕ್ರಮ ವಹಿಸುವುದಿಲ್ಲ. ಔಷಧಿಯ ಪ್ರಭಾವಕ್ಕೆ ಸಿಲುಕಿ ಆಸ್ಪತ್ರೆಗೆ ಸೇರಿ ಹಲವು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದರು ಯಾರು ಕೇಳುವುದಿಲ್ಲ. ಆದರೆ ಚಾಂದಪಾಶಾ ಅವರು ಔಷಧಿ ಸಿಂಪರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ಐಡಿಯಾ ಕಂಡು ಹಿಡಿದಿದ್ದು, ಬೇರೆ ರೈತರಿಗೂ ಮಾದರಿಯಾಗಿದೆ.

  • ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    – ನೀವಿಲ್ಲಿ ಪಾಠ ಮಾಡ್ತಿರೋ ಅಥವಾ ಪಾರ್ಟಿ ಮಾಡ್ತಿರೋ

    ಬೀದರ್: ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಕಿಂಗ್ ಫಿಶರ್ ಬಿಯರ್ ನ  ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದನ್ನು ಕಂಡು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಕೆಂಡಾಮಂಡಲರಾಗಿದ್ದು, ಉಪಕುಲಪತಿ ನಾರಾಯಣ ಸ್ವಾಮಿಯ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಕಮಠಾಣಾ ಬಳಿಯ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿವಿಗೆ ಸಚಿವರು ದಿಢೀರ್ ಭೇಟಿ ನೀಡಿದ್ದ ವೇಳೆ ಕಿಂಗ್ ಫಿಶರ್ ಖಾಲಿ ಕಾಟನ್ ಬಾಕ್ಸ್ ಪತ್ತೆಯಾಗಿವೆ. ಈ ವೇಳೆ ಕಾಲೇಜು ಒಳಗಡೆ ಕಿಂಗ್ ಫಿಶರ್ ಬಾಕ್ಸ್ ಬಂದಿದ್ದು ಹೇಗೆ? ನೀವು ಪಾರ್ಟಿ ಮಾಡ್ತಿರಾ ಎಂದು ಉಪಕುಲಪತಿಯವರನ್ನು ಪ್ರಶ್ನಿಸಿದ್ದಾರೆ.

    ಪಶು ವಿವಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು, ಕಿಂಗ್ ಫಿಶರ್ ಕಾಟನ್ ಬಾಕ್ಸ್ ಗಳನ್ನು ನೋಡಿ ಉಪಕುಲಪತಿ ನಾರಾಯಣ ಸ್ವಾಮಿಯವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಸಿ ಬೇರೆ ವಸ್ತುಗಳನ್ನು ಪ್ಯಾಕ್ ಮಾಡುವಾಗ ಇಂತಹ ಬಾಕ್ಸ್‍ಗಳಲ್ಲೇ ಪ್ಯಾಕ್ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ.

    ಇಷ್ಟಕ್ಕೇ ಸುಮ್ಮನಾಗದ ಸಚಿವರು, ಕಾಲೇಜಿನಲ್ಲಿ ಕಿಂಗ್ ಫಿಶರ್ ಬಾಟಲ್ ಬಾಕ್ಸ್ ಬಂದಿದ್ದು ಹೇಗೆ ಎಂದು ಫುಲ್ ಗರಂ ಆಗಿದ್ದಾರೆ. ನೋಡಿ ಇದರ ಮೇಲೆ ಕಿಂಗ್ ಫಿಶರ್ ಮೈಲ್ಡ್ ಬಿಯರ್ ಎಂದು ಬರೆದಿದೆ. ನೀವು ಇಲ್ಲಿ ಪಾಠ ಮಾಡುತ್ತೀರೋ ಅಥವಾ ಪಾರ್ಟಿ ಮಾಡುತ್ತಿರೋ ಎಂದು ಪ್ರಶ್ನಿಸಿ ಕೆಂಡಾಮಂಡಲರಾಗಿದ್ದಾರೆ.

  • ಒಂದೇ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್

    ಒಂದೇ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್

    ಬೀದರ್: ಜಿಲ್ಲೆಯ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟಿಸ್ ನೀಡಿದೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌ಡಿ ಕುಮಾರಸ್ವಾಮಿ ರೈತರ ಬೆಳೆ ಸಾಲ ಮನ್ನಾ ಘೋಷಿಸಿದ್ದರು. ಇದರಿಂದ ಸಾಲಮನ್ನಾ ಯೋಜನೆಗೆ ಒಳಪಟ್ಟ ರೈತರು ನಮ್ಮ ಬೆಳೆಸಾಲ ಮನ್ನಾ ಆಗಿದೆ ಅಂತಾ ಖುಷಿಯಾಗಿದ್ದರು. ಇದೀಗ ಸಾಲಮನ್ನಾ ಆಗಿದ್ದ ರೈತರಿಗೆ ನೋಟಿಸ್ ನೀಡಲಾಗಿದೆ. ಬೀದರ್ ತಾಲೂಕಿನ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿಸುವಂತೆ ಎಸ್‌ಬಿಐ ಬ್ಯಾಂಕ್ ನೋಟಿಸ್ ನೀಡಿದೆ. ಆಗ ಸಾಲಮನ್ನಾ ಆಗಿದೆ ಅಂತಾ ಪತ್ರ ನೀಡಿದ್ದ ಬ್ಯಾಂಕ್ ಈಗ ಪುನಃ ಸಾಲ ಮರುಪಾವತಿಸಿ ಎಂದಿರೋದ್ದಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ.

    ಸಾಲಮನ್ನಾ ಆಗದಿದ್ರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳೋದೇ ದಾರಿ ಅಂತಾ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಚೊಂಡಿ ಗ್ರಾಮ ಅಲ್ಲದೇ ವಿಳಾಸ್‌ಪೂರ್, ಒನ್ನಿಕೇರಿ, ಕಪಲಾಪೂರ್, ಕೊಳ್ಳಾರ್ ಸೇರಿ ಬೀದರ್‌ನ ಹಲವು ಗ್ರಾಮಗಳ ರೈತರಿಗೆ ಬ್ಯಾಂಕ್ ನೋಟಿಸ್ ನೀಡಲಾಗಿದೆ.

    ಕೆಲ ದಿನಗಳ ಹಿಂದೆ ಸಾಲ ಮರುಪಾವತಿ ಮಾಡಲಾಗದೇ ಮಲ್ಲಪ್ಪ ಮಾರುತಿ, ರಾಚಪ್ಪ ಶಂಕರ್ ರಾವ್ ಪಾಟೀಲ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಘೋಷಿಸಿದ್ದ ಸಾಲಮನ್ನಾ ಯೋಜನೆಗೆ ಬಿಜೆಪಿ ಸರ್ಕಾರ ನೋಟಿಸ್ ನೀಡುವ ಮೂಲಕ ರಾಜಕೀಯ ದ್ವೇಷ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್‌ಸಭಾ ಸದಸ್ಯ ನಜೀರ್ ಅಹಮದ್ ಆರೋಪಿಸಿದ್ದಾರೆ.

  • ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಬೀದರ್: ಸರ್ಕಾರಿ ಕಚೇರಿಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಚಿವರು ದಿಢೀರ್ ಭೇಟಿ ನೀಡಿದರು. ಈ ವೇಳೆ ಗುಟಕಾ ತಿಂದು ಕಿಟಕಿ ಬಾಗಿಲಲ್ಲಿ ಊಗುಳಿ ಹೊಲಸು ಮಾಡಲಾಗಿತ್ತು. ಇದನ್ನು ಗಮನಿಸಿದ ಪ್ರಭು ಚೌವ್ಹಾಣ್ ಅವರು ಸ್ವಚ್ಚತೆ ಕಾಪಾಡದ್ದಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಔರಾದ್ ಪಟ್ಟಣ ಪಂಚಾಯತ್‍ನಲ್ಲಿ ಸಾಮೂಹಿಕವಾಗಿ ಗೈರಾದ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 16 ಜನ ಅಧಿಕಾರಿಗಳ ಪೈಕಿ 9 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

    ಇದೇ ವೇಳೆ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಗೈರಾದ ದಂತ ವೈದ್ಯ ಡಾ. ಮೆಹಬಿನ್ ಫೀರ್ದೊಸ್ ಎಂಬಾತನನ್ನು ಸಸ್ಪೆಂಡ್ ಮಾಡುವಂತೆ ಪ್ರಭು ಚೌವ್ಹಾಣ್ ಆದೇಶಿಸಿದ್ದಾರೆ. ಬಳಿಕ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ ಮುಖ್ಯಾಧಿಕಾರಿ, ಸಿಬ್ಬಂದಿಗೆ ಮೈ ಚಳಿ ಬಿಡಿಸಿದರು.

  • 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    -ಬಿಜೆಪಿ ನೂರು ಸಲ ಸುಳ್ಳು ಹೇಳಿ ಸತ್ಯ ಎನ್ನುತ್ತೆ

    ಬೀದರ್: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಹಿನ್ನೆಲೆ ಬೀದರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೆರೆ ಬಂದು ಇಷ್ಟು ದಿನ ಆದರೂ ಕೇಂದ್ರ ಸರ್ಕಾರ ನೈಯಾ ಪೈಸೆ ಪರಿಹಾರ ಕೊಟ್ಟಿಲ್ಲಾ. ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಡೋದೆ ಆಯ್ತು. ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1,200 ಕೋಟಿ ರೂ. ಪರಿಹಾರ ನೀಡಿದೆ ಎಂದು ಹರಿಹಾಯ್ದರು. ಜೊತೆಗೆ ಮೋದಿ ಅವರ ಭೇಟಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅನುಮತಿ ಕೊಟ್ಟಿಲ್ಲ. ಈ ಮೂಲಕ 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ನೂರು ಸಲ ಸುಳ್ಳನ್ನು ಹೇಳಿ ಸತ್ಯ ಎಂಬಂತೆ ಬಿಂಬಿಸುತ್ತಾರೆ. ಹೀಗಾಗಿ ಉಪ ಚುನಾವಣೆಯಲ್ಲಿ 15 ಸೀಟು ನಮಗೆ ಕೊಡುವ ಮೂಲಕ ಜನರು ತಕ್ಕ ಪಾಠ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪಶು ಇಲಾಖೆಯ ಸಹಾಯಕ ನಿರ್ದೇಶಕನಿಗೆ ನೋಟಿಸ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪಶು ಇಲಾಖೆಯ ಸಹಾಯಕ ನಿರ್ದೇಶಕನಿಗೆ ನೋಟಿಸ್

    ಬೀದರ್: ಪಶು ಇಲಾಖೆಯಲ್ಲಿ ಫಲಾನುಭವಿಗಳಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಸಹಾಯಕ ನಿರ್ದೇಶಕ ಓಂಕಾರ್ ಪಾಟೀಲ್ ಗೆ ನೋಟಿಸ್ ನೀಡಲಾಗಿದೆ.

    ಬೀದರ್ ಪಶು ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸೀವ್ ಸುದ್ದಿ ಬಿತ್ತರಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಶು ಇಲಾಖೆ, ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಹಾಯಕ ನಿರ್ದೇಕನಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.

    ಪಶು ಇಲಾಖೆ ಉಪ ನಿರ್ದೇಶಕ ಗೌತಮ್ ಅರಳಿಯವರು ಭ್ರಷ್ಟ ಅಧಿಕಾರಿಗೆ ನೋಟಿಸ್ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಈಗಾಗಲೇ ನೋಟಿಸ್ ನೀಡಲಾಗಿದೆ. ಹೇಳಿಕೆ ಬಳಿಕ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    2018-19 ಸಾಲಿನ ಹೈನುಗಾರಿಕೆ ಯೋಜನೆಯಲ್ಲಿ ವಿವಿಧ ಭಾಗ್ಯಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ನೀಡಲು ಪಶು ಇಲಾಖೆ ಸಹಾಯಕ ನಿರ್ದೇಶಕ ಓಂಕಾರ್ ಪಾಟೀಲ್ ಲಂಚ ಪೀಕುತಿದ್ದರು. ಪ್ರತಿಯೊಬ್ಬ ಫಲಾನುಭವಿಯಿಂದ 3 ರಿಂದ 5 ಸಾವಿರ ಲಂಚ ಬಾಚಿಕೊಳ್ಳುತ್ತಿದ್ದಾರೆ. ಯಾರು ಲಂಚ ನೀಡುವುದಿಲ್ಲವೋ ಅವರಿಗೆ ಚೆಕ್ ಕೊಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿಶಾಲ್ ಹೋನ್ನಾ ಅವರು ಪಬ್ಲಿಕ್ ಟಿವಿ ಮುಂದೆ ದೂರಿದ್ದರು.

  • ಮಗನಿಗೆ ಗೆಳೆಯನ ನೆರವು ಪ್ರೇರಣೆ- ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡ್ತಿದ್ದಾರೆ ಮಾಜಿ ಸೈನಿಕ

    ಮಗನಿಗೆ ಗೆಳೆಯನ ನೆರವು ಪ್ರೇರಣೆ- ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡ್ತಿದ್ದಾರೆ ಮಾಜಿ ಸೈನಿಕ

    ಬೀದರ್: ಮಗನನ್ನು ಸ್ನೇಹಿತ ಓದಿಸಿದ ಎನ್ನುವ ಕಾರಣಕ್ಕೆ ಇಂದು ಬೀದರಿನ ಮಾಜಿ ಸೈನಿಕರೊಬ್ಬರು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಕುಗ್ರಾಮದ ಬಡ ಮಕ್ಕಳಿಗೆ ಹೈಟೆಕ್ ಶಾಲೆಯನ್ನು ಕಟ್ಟಿಸಿ ಪೋಷಕರು ಕೊಟ್ಟಷ್ಟು ಫೀ ತೆಗೆದುಕೊಂಡು, 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬೀದರಿನ ಸಂತಾಪುರದ ಶಿಕ್ಷಣ ಸಂತ, ಮಾಜಿ ಸೈನಿಕ ಬಾಪೂರಾವ್ ಪಬ್ಲಿಕ್ ಹೀರೋ ಆಗಿದ್ದಾರೆ.

    ಬಾಪೂರಾವ್ ಪಾಟೀಲ್ ಅವರ ಊರು ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸಂತಾಪುರ. 20 ವರ್ಷ ಗಡಿಯಲ್ಲಿ ದೇಶ ಕಾದಿರುವ ಬಾಪೂರಾವ್ ಕಳೆದ 9 ವರ್ಷಗಳಿಂದ ನೂರಾರು ಮಕ್ಕಳಿಗೆ ಶಿಕ್ಷಣ ನೀಡೋ ಮೂಲಕ ದಾರಿದೀಪವಾಗಿದ್ದಾರೆ.

    ಅಂದ ಹಾಗೇ ಶಾಲೆ ಹೆಸರು ಮಾಜಿ ಸೈನಿಕ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಓದೋ ಮಕ್ಕಳಿಗೆ ಶುಲ್ಕ ಇಲ್ಲ. ಕೇಳಲ್ಲ. ಆದರೆ ಪೋಷಕರು ಅಷ್ಟೋ ಇಷ್ಟೋ ಕೊಟ್ರೆ ಮಾತ್ರ ತೆಗೆದುಕೊಳ್ಳುತ್ತಾರೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡುತ್ತಿದ್ದಾರೆ.

    ಶಿಕ್ಷಣ ದಾಸೋಹಕ್ಕೆ ಗೆಳೆಯ ಸ್ಫೂರ್ತಿ. ಬಾಪೂರಾವ್ ಪುತ್ರನನ್ನ ಎಲ್‍ಕೆಜಿಯಿಂದ ಪಿಜಿವರೆಗೆ ಉಚಿತವಾಗಿ ಓದಿಸಿದ್ರು. ಇದನ್ನು ಪ್ರೇರಣೆಯಾಗಿ ತೆಗೆದುಕೊಂಡ ಬಾಪೂರಾವ್ ಈ ಶಾಲೆ ಸ್ಥಾಪಿಸಿದ್ದಾರೆ. ಸದ್ಯ ಎಲ್‍ಕೆಜಿಯಿಂದ 8ನೇ ತರಗತಿವರೆಗೆ 300 ಮಕ್ಕಳು ಓದುತ್ತಿದ್ದಾರೆ ಎಂದು ಬಾಪೂರಾವ್ ತಿಳಿಸಿದ್ದಾರೆ.

    ಈ ಮಾಜಿ ಸೈನಿಕ 2 ಎಕರೆ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಡ್ರಿಪ್ ಇರಿಗೇಷನ್ ಮೂಲಕ 500 ಮಾವು, 500 ನಿಂಬೆ, 200 ದಾಳಿಂಬೆ, ಬಾಳೆ ಗಿಡಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಕೃಷಿಯಿಂದ ಬರುವ ಆದಾಯವನ್ನು ಶಾಲೆಗೆ ಬಳಸುತ್ತಿದ್ದಾರೆ. ಬಾಪೂರಾವ್ ಶಿಕ್ಷಣ ದಾಸೋಹದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ – ಬೀದರ್‌ನಲ್ಲಿ ಫಲಾನುಭವಕ್ಕೆ ಕೊಡ್ಬೇಕು ಲಂಚ

    ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ – ಬೀದರ್‌ನಲ್ಲಿ ಫಲಾನುಭವಕ್ಕೆ ಕೊಡ್ಬೇಕು ಲಂಚ

    – ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಹಾಯಕ ನಿರ್ದೇಶಕ

    ಬೀದರ್: ಗಡಿ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆದರೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹೈನುಗಾರಿಕೆಗೆ ಆಯ್ಕೆಯಾದ ಫಲಾನುಭವಿಗಳ ಯೋಜನೆ ಚೆಕ್ ನೀಡಬೇಕು ಅಂದರೆ ಲಂಚ ನೀಡಬೇಕು. ಈ ಪಶು ಅಧಿಕಾರಿ ಫಲಾನುಭವಿಗಳಿಂದ ಲಂಚ ತೆಗೆದುಕೊಳ್ಳುತ್ತಿರುವ ಎಕ್ಸ್ ಕ್ಲೂಸೀವ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    2018-19 ಸಾಲಿನ ಹೈನುಗಾರಿಕೆ ಯೋಜನೆಯಲ್ಲಿ ವಿವಿಧ ಭಾಗ್ಯಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ನೀಡಲು ಪಶುಇಲಾಖೆ ಸಹಾಯಕ ನಿರ್ದೇಶಕ ಓಂಕಾರ್ ಪಾಟೀಲ್ ಲಂಚ ಪೀಕುತಿದ್ದಾರೆ.

    ಭ್ರಷ್ಟಾಚಾರದ ಸಂಭಾಷಣೆ
    ಸಹಾಯಕ ನಿರ್ದೇಶಕ: ಎಂತ್ತೆಂತ ಮಂದಿ ಕೋಡತ್ತಾವೋ ಯಪ್ಪ…
    ಫಲಾನುಭವಿ: ಇಲ್ಲಾ ರೀ ಸರ್…
    ಸಹಾಯಕ ನಿರ್ದೇಶಕ: ಡೈರೆಕ್ಟ್ ಆಗಿ ಹಾಕೋಟ್ಟಿದ್ದೇನ್ ರೀ.. ನಾನು ಇವನ ಎದುರಿಗೆ ಹೇಳ್ತೀನಿ..
    ಫಲಾನುಭವಿ: ಹ್ಞಾ.. ರೀ..
    ಸಹಾಯಕ ನಿರ್ದೇಶಕ: ಕೇಲಸ ಮಾಡೋದು ಬೇಕಾಗಿಲ್ಲಾ ನೀವು ಇದಕ್ಕಾ…

    ಫಲಾನುಭವಿ: ಮತ್ತ ಏನ್ ಮಾಡಂತ್ತಿರೀ…
    ಫಲಾನುಭವಿ: ಇಗರೀ
    ಸಹಾಯಕ ನಿರ್ದೇಶಕ: ಎರಡು ಚೀಟಿ ಬರಕೋ, ಎಮ್ಮೆ ಖರೀದಿ ಮಾಡೋದು…
    ಫಲಾನುಭವಿ: ಮತ್ತೆ ಯಾಕರೀ, ಮತ್ತೆ ಯಾಕರೀ…
    ಸಹಾಯಕ ನಿರ್ದೇಶಕ: ಆಆಆ… ಎಮ್ಮೆ ಖರೀದಿ ಚೀಟಿ ಮಾಡಲ್ಲಾ, ಪನಾಸ್, ಪನಾಸ್… (50 ಸಾವಿರ)ಸೆಂಬರ್ ರೂಪಾಯಿ ಬಾಂಡ್ ತಗೋ… (ನೂರು ರೂಪಾಯಿ)

    ಪ್ರತಿಯೊಬ್ಬ ಫಲಾನುಭವಿಯಿಂದ 3 ರಿಂದ 5 ಸಾವಿರ ಲಂಚ ಚಾಚಿಕೊಳ್ಳುತ್ತಿದ್ದಾರೆ. ಯಾರು ಲಂಚ ನೀಡುವುದಿಲ್ಲವೋ ಅವರಿಗೆ ಚೆಕ್ ಕೊಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿಶಾಲ್ ಹೋನ್ನಾ ದೂರಿದ್ದಾರೆ.

    ಕೆಲ ದಿನಗಳ ಹಿಂದೆ ಬೀದರ್ ಗೆ ಭೇಟಿ ನೀಡಿದ್ದ ಸಚಿವ ಪ್ರಭು ಚವ್ಹಾಣ್, ಇಲಾಖೆಯಲ್ಲಿ ಸ್ವಚ್ಛಭಾರತ್ ಮಾಡುತ್ತೇವೆ ಎಂದು ಗುಡುಗಿದ್ದರು. ಆದರೆ ಇದೀಗ ದೃಶ್ಯ ಸಮೇತ ಸಾಕ್ಷಿ ಸಿಕ್ಕಿದೆ.ಈ ಹಿನ್ನೆಲೆಯಲ್ಲಿ ಸಚಿವರು ಕ್ರಮ ತೆಗೆದುಕೊಳ್ತಾರಾ ಎಂದು ಸ್ಥಳೀಯ ಹೋರಾಟಗಾರರು ಚಾಲೆಂಜ್ ಮಾಡಿದ್ದಾರೆ. ಒಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಇಲಾಖೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಆಗ್ತಿರೋದು ವಿಪರ್ಯಾಸದ ಸಂಗತಿಯಾಗಿದೆ.

  • ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ಬೀದರ್: ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಸಿರಗೂರ ಗ್ರಾಮದಲ್ಲಿ ನಡೆದಿದೆ.

    ಬಟಗೇರಾವಾಡಿ ಗ್ರಾಮದ ಬಸವರಾಜ ಹಣಮಂತ ಚಂಡಕಾಳೆ (38) ಕೊಲೆಯಾದ ರೌಡಿ ಶೀಟರ್. ಕೊಲೆಯಾದ ರೌಡಿ ಶೀಟರ್ ಬಸವರಾಜ ಬಿಎಸ್‍ಎಫ್‍ನಲ್ಲಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಸೇವೆಸಲ್ಲಿಸಿದ್ದ. ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸಿರಗೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಅದ್ಧೂರಿಯಾಗಿ ದೇವಿ ಮೆರವಣಿಗೆ ನಡೆದಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಜಗಳವಾಗಿತ್ತು. ಆದರೆ ಗ್ರಾಮದ ಹಿರಿಯರು ಸೇರಿ ಅದನ್ನು ಬಗೆ ಹರಿಸಿದ್ದರು. ಆದರೆ ಸೋಮವಾರ ಸಂಜೆ ಮತ್ತೆ ಎರಡೂ ಗುಂಪುಗಳ ಮಧ್ಯೆ ಗಲಾಟೆ ಆರಂಭವಾಗಿತ್ತು. ರೌಡಿ ಶೀಟರ್ ಬಸವರಾಜ್ ಒಂದು ಗುಂಪಿನ ಪರ ವಹಿಸಿಕೊಂಡು ತನ್ನ ಸಹಚರರೊಂದಿಗೆ ಸಿರಗೂರ ಗ್ರಾಮಕ್ಕೆ ಆಗಮಿಸಿದ್ದ.

    ಬಸವರಾಜ್ ಎದುರಾಳಿ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಸಿರಗೂರ ಗ್ರಾಮಸ್ಥರು ಬಸವರಾಜ್‍ಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರೌಡಿ ಶೀಟರ್ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಂಠಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯವಾಗಿದ್ದು, ಅವರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.