Tag: bidar

  • ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಬೀದರ್: ಎಮ್ಮೆ ರಕ್ಷಿಸಲು ಹೋಗಿದ್ದ ಯುವಕನ್ನೊಬ್ಬ ಕೆರೆ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗೋಪಾಲ ರೆಡ್ಡಿ ಪಲರಡ್ಡೆ(22) ಮೃತ ಯುವಕ. ಇಂದು ಮಧ್ಯಾಹ್ನ ಎಮ್ಮೆ ಮೇಯಿಸಲೆಂದು ಜಮೀನಿಗೆ ತೆರಳಿದಾಗ, ಗ್ರಾಮದ ಸಮೀಪವೇ ಇರುವ ಕೆರೆ ನೀರಿನಲ್ಲಿ ಇಳಿದ ಎಮ್ಮೆ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೆ ಒದ್ದಾಡುತ್ತಿತ್ತು.

    ಇದನ್ನು ಗಮನಿಸಿದ ಗೋಪಾಲರೆಡ್ಡಿ ನೀರಿನಿಂದ ಎಮ್ಮೆ ಹೊರ ತರಲೆಂದು ತಾನು ಕೆರೆಗೆ ಇಳಿದಿದ್ದಾನೆ. ಆದರೆ ತಾನು ಕೂಡ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ಯುವಕನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪವಷ್ಟರಲ್ಲಿ ಯುವಕ ಮೃತಪಟ್ಟಿದ್ದ.

  • ಸಭೆಗೆ ಅಧಿಕಾರಿಗಳು ಗೈರು – ಸಿಬ್ಬಂದಿಯನ್ನೂ ಸಭೆಯಿಂದ ಹೊರಹಾಕಿದ ಶಾಸಕ

    ಸಭೆಗೆ ಅಧಿಕಾರಿಗಳು ಗೈರು – ಸಿಬ್ಬಂದಿಯನ್ನೂ ಸಭೆಯಿಂದ ಹೊರಹಾಕಿದ ಶಾಸಕ

    ಬೀದರ್: ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದು, ಇದರಿಂದ ಕೋಪಗೊಂಡ ಶಾಸಕ ನಾರಾಯಣರಾವ್ ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ ಪ್ರಸಂಗ ನಡೆದಿದೆ.

    ಬಸವಕಲ್ಯಾಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಶಾಸಕರು ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ್ದಾರೆ.

    ಬೆಳಗ್ಗೆ ಆರಂಭವಾಗಬೇಕಿದ್ದ ಸಭೆ ತಡವಾಗಿ ಮಧ್ಯಾಹ್ನ ಆರಂಭವಾಯಿತು. ಈ ವೇಳೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಅಧಿಕಾರಿಗಳ ಗೈರು ಕುರಿತು ಗಮನಿಸಿ ಗರಂ ಆದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಅವರು, ಸಭೆ ಆರಂಭದಲ್ಲಿಯೇ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾ.ಪಂ ಸಿಇಒ ಪಿ.ಎಸ್.ಮಡೋಳಪ್ಪ ಅವರಿಗೆ ಸೂಚಿಸಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ನಾರಾಯಣರಾವ್, ಸಭೆಯಲ್ಲಿ ತಮ್ಮ ಇಲಾಖೆಯ ಮುಖ್ಯ ಅಧಿಕಾರಿಗಳ ಪರವಾಗಿ ಪಾಲ್ಗೊಂಡಿರುವ ಸಹಾಯಕ ಸಿಬ್ಬಂದಿ ಎದ್ದು ನಿಲ್ಲಿ ಎಂದು ತಿಳಿಸಿದರು. ಆಗ ನೀರಾವರಿ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಸಭೆಯಲ್ಲಿ ಎದ್ದು ನಿಂತರು. ನಿಮ್ಮ ಇಲಾಖೆ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು. ಸಭೆಗೆ ಬರಲು ಸಾಧ್ಯವಾಗದವರು ನಮಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಪಾಲ್ಗೊಂಡಿದ್ದ ಸಹಾಯಕ ಸಿಬ್ಬಂದಿಯನ್ನು ಸಭೆಯಿಂದ ಹೊರ ಹೋಗುವಂತೆ ಸೂಚಿಸಿದರು.

  • ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ- ಬೀದರಿನಲ್ಲಿ ಬೃಹತ್ ರ‍್ಯಾಲಿ

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ- ಬೀದರಿನಲ್ಲಿ ಬೃಹತ್ ರ‍್ಯಾಲಿ

    ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಸೋಮವಾರ ಗಡಿ ಜಿಲ್ಲೆ ಬೀದರಿನಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

    ವಿವಿಧ ಸಂಘಟನೆಗಳನ್ನೊಳಗೊಂಡ ಜಾತ್ಯಾತೀತ ನಾಗರಿಕ ವೇದಿಕೆಯ ಜಿಲ್ಲಾ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಸಮಿತಿ ವತಿಯಿಂದ ನಾಳೆ ಶಾಂತಿಯುತವಾಗಿ ಬೃಹತ್ ರ‍್ಯಾಲಿ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಚೌಬಾರ್, ಶಾಹಗಾಂಜ್, ಮಹಮ್ಮದ್ ಗವಾನ್, ಅಂಬೇಡ್ಕರ್ ವೃತಗಳಲ್ಲಿ ಬೃಹತ್ ರ‍್ಯಾಲಿ ಮಾಡಲಿ ನಡೆಯಲಿದೆ. ನಂತರ ಅಂಬೇಡ್ಕರ್ ವೃತದಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಮನವಿ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮಾಡುವುದಾಗಿ ಮುಖಂಡರು ತಿಳಿಸಿದ್ದಾರೆ.

    ಜಾತಿ, ಧರ್ಮ ಎನ್ನದೆ ಸಾವಿರಾರು ಜನ ಸಮಾನ ವಯಸ್ಕರು ಸೇರಲಿದ್ದಾರೆ ಎಂದು ಜಾತ್ಯಾತೀತ ನಾಗರಿಕರ ಸಮಿತಿ ಕಾರ್ಯದರ್ಶಿ ಶ್ರಿಕಾಂತ್ ಸ್ವಾಮಿ ವಿವರಿಸಿದರು.

  • ಬೀದರ್ ನಲ್ಲಿ ಚನ್ನಬಸವ ಪಟ್ಟದೇವರ ಜಯಂತಿ ಆಚರಣೆ

    ಬೀದರ್ ನಲ್ಲಿ ಚನ್ನಬಸವ ಪಟ್ಟದೇವರ ಜಯಂತಿ ಆಚರಣೆ

    ಬೀದರ್: ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ರಕ್ಷಿಸಿದ ಚನ್ನಬಸವ ಪಟ್ಟದೇವರ ಜಯಂತಿಯನ್ನು ಇಂದು ಆಚರಿಸಲಾಯ್ತು.

    ಜಿಲ್ಲೆಯ ಭಾಲ್ಕಿ ಪಟ್ಟಣದ ಹಿರೇಮಠದಲ್ಲಿ 130ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗದ ಬೆಕ್ಕಿನ ಕಲ್ಮಠ ಶ್ರೀಗಳಾದ ಜಗತ್ ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ ಉದ್ಘಾಟಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಪುರೋಹಿತ ಶಾಹಿಗಳ ಕಪಿಮುಷ್ಟಿಯಿಂದ ಶರಣ ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ನಿಜಾಮರ ದಬ್ಬಾಳಿಕೆಗೆ ಸಿಲುಕಿದ್ದ ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ಚನ್ನಬಸವ ಪಟ್ಟದೇವರು ರಕ್ಷಿಸಿದರು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಭಾರತಿ ಜನತಾ ಪಕ್ಷದ ಮುಖಂಡರಾದ ಆ.ಏ ಸಿದ್ರಾಮ, ಬಾಬುವಾಲಿ ಮಠದ ಶ್ರೀಗಳು ಉಪಸ್ಥಿತರಿದ್ದರು.

  • ನಿರ್ಮಾಣ ಹಂತದ ದೇವಸ್ಥಾನ ಕುಸಿತ- ತಪ್ಪಿದ ಭಾರೀ ಅನಾಹುತ

    ನಿರ್ಮಾಣ ಹಂತದ ದೇವಸ್ಥಾನ ಕುಸಿತ- ತಪ್ಪಿದ ಭಾರೀ ಅನಾಹುತ

    ಬೀದರ್: ನಗರದ ಸಾಯಿ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಶ್ರೀ ಸಾಯಿ ಮಂದಿರದ ಮೇಲ್ಛಾವಣಿ ಕುಸಿದು ಭಾರೀ ಅವಘಡ ತಪ್ಪಿದೆ.

    ಲಕ್ಷಾಂತರ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಹಲವು ತಿಂಗಳುಗಳಿಂದ ಶ್ರೀ ಸಾಯಿ ಮಂದಿರದ ನಿರ್ಮಾಣವಾಗುತ್ತಿದೆ. ಆದರೆ ಶನಿವಾರ ದೇವಸ್ಥಾನ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಈ ವೇಳೆ ಸ್ಥಳದಲ್ಲಿ ಕಾರ್ಮಿಕರು, ಸಾರ್ವಜನಿಕರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಕುಸಿದು ಬಿದ್ದ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೀಗಾಗಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳವು ಕುಸಿದಿರುವ ಕಟ್ಟಡವನ್ನು ತೆರವು ಗೊಳಿಸಿದೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಿಜೆಪಿ ಸರ್ಕಾರ ಹಿಟ್ಲರ್, ತುಘಲಕ್ ಸರ್ಕಾರ ಇದ್ದಂತೆ: ಎಂಬಿ ಪಾಟೀಲ್

    ಬಿಜೆಪಿ ಸರ್ಕಾರ ಹಿಟ್ಲರ್, ತುಘಲಕ್ ಸರ್ಕಾರ ಇದ್ದಂತೆ: ಎಂಬಿ ಪಾಟೀಲ್

    ಬೀದರ್: ರಾಜ್ಯದ ಬಿಜೆಪಿ ಸರ್ಕಾರ ಹಿಟ್ಲರ್ ಹಾಗೂ ತುಘಲಕ್ ಸರ್ಕಾರ ಇದ್ದಂತೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೀದರ್ ನ ಬಿವಿ ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಂಬಿ ಪಾಟೀಲ್ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದ ಮಂಗಳೂರು ಸಾವಿಗೆ ಸಿಎಂ, ಗೃಹ ಮಂತ್ರಿ ಹಾಗೂ ಕಮಿಷನರ್ ಕಾರಣರಾದರೆ ದೇಶಗಳಲ್ಲಿ ಸಂಭವಿಸಿದ ಸಾವು, ನೋವುಗಳಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದರು.

    ಮಾಜಿ ಸಿಎಂ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಗಲಭೆ ಸ್ಥಳಕ್ಕೆ ಬಿಡದಿದ್ದಕ್ಕೆ ವಾಗ್ದಾಳಿ ನಡೆಸಿದ ಪಾಟೀಲ್, ವಿರೋಧ ಪಕ್ಷದ ನಾಯಕರು ಎಂದ್ರೆ ಯಾರು? ಇವರ ಕೆಲಸ ಏನು ಗೊತ್ತಾ, ಈ ರೀತಿ ಘಟನೆಗಳು ಆದಾಗ ಸಾಂತ್ವನ ಹೇಳೋದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಅವರ ಕರ್ತವ್ಯ. ಆದರೆ ಸಿದ್ದರಾಮಯ್ಯರನ್ನು ಸ್ಥಳಕ್ಕೆ ಬಿಡಲೇ ಇಲ್ಲಾ. ಘಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರು ಹೋಗಬಾರದು ಅಂದ್ರೆ ಏನು ಅರ್ಥ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಗೋಲಿಬಾರ್ ಬಗ್ಗೆ ಕಿಡಿಕಾರಿದ ಎಂಬಿ ಪಾಟೀಲ್, ಎಲ್ಲಾ ಪ್ರಯೋಗಗಳು ಮುಗಿದ ಬಳಿಕ ಗೋಲಿಬಾರ್ ಕಟ್ಟ ಕಡೆಯ ಅಸ್ತ್ರವಾಗಿದೆ. ಆದರೆ ಒಂದೇ ಸಾರಿ ನೇರವಾಗಿ ಗೋಲಿಬಾರ್ ಮಾಡೋದಾ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಬೀದರ್: ಎಟಿಎಂ ಒಡೆದು ದರೋಡೆ ಮಾಡಲು ಯತ್ನಿಸಿದ ಕಳ್ಳನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಕಾರ್ಯಚರಣೆ ಯಶಸ್ವಿಗೊಳಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

    ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಶಹಾಪುರ ಮಸೀದಿ ಮುಖ್ಯ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್‍ನ ಎಟಿಎಂ ಒಡೆದು ದರೋಡೆ ಮಾಡಲು ಯತ್ನ ಮಾಡಿದ್ದಾನೆ. ಇಂದು ಬೆಳಗ್ಗಿನ ಜಾವ ಎಟಿಎಂಗೆ ನುಗ್ಗಿದ ಕಳ್ಳ ಯಂತ್ರ ಒಡೆಯಲು ತೊಡಿಗಿದ್ದನು. ಎಟಿಎಂ ಯಂತ್ರ ಒಡೆಯುವ ವೇಳೆ ಬ್ಯಾಂಕ್‍ನ ಮುಖ್ಯ ಕಚೇರಿಗೆ ಸಂದೇಶ ರವಾನೆಯಾಗಿದೆ.

    ಸಂದೇಶ ರವಾನೆ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ನಗರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ಕೂಡಲೆ ಕಾರ್ಯಪ್ರವರ್ತರಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‍ಐ ಸುನಿಲಕುಮಾರ ನೇತೃತ್ವದ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಸವಕಲ್ಯಾಣ ನಗರ ನಿವಾಸಿ ಶ್ರೀಕಾಂತ ಮಲ್ಲಿಕಾರ್ಜುನ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಲು ಯತ್ನಿಸಿದ ವ್ಯಕ್ತಿ ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.

  • ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ದರೋಡೆಕೋರರು

    ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ದರೋಡೆಕೋರರು

    ಬೀದರ್: ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದರೋಡೆ ಮಾಡಿದ ಘಟನೆ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಕ್ರಾಂತಿ ಗಣೇಶ ದೇವಸ್ಥಾನದಲ್ಲಿ ಗುರುವಾರ ನಡೆದಿದೆ.

    ಗುರುವಾರ ಬೆಳಗಿನ ಜಾವ ಐತಿಹಾಸಿಕ ಕ್ರಾಂತಿ ಗಣೇಶ ದೇವಸ್ಥಾನಕ್ಕೆ ನುಗ್ಗಿದ ಆರೋಪಿಗಳು ಗೇಟ್ ಬೀಗ ಮುರಿದು ಒಳ ನುಗ್ಗಿ ಹುಂಡಿಯನ್ನು ಒಡೆದು ಒಂದು ಲಕ್ಷ ರೂ.ಗೂ ಅಧಿಕ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

    ನಗರದಲ್ಲಿನ ಐತಿಹಾಸಿಕಾ ದೇವಸ್ಥಾನವನ್ನೇ ಕನ್ನ ಹೊಡೆದಿರುವುದಕ್ಕೆ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾರಿಕಟ್ಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಬಲೆ ಬಿಸಿದ್ದಾರೆ.

  • ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ 1 ಸಾವಿರ ಪತ್ರ ಕಳುಹಿಸಲು ಮುಂದಾದ ಕಾರಂಜಾ ಸಂತ್ರಸ್ತರು

    ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ 1 ಸಾವಿರ ಪತ್ರ ಕಳುಹಿಸಲು ಮುಂದಾದ ಕಾರಂಜಾ ಸಂತ್ರಸ್ತರು

    ಬೀದರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಳುವಳಿ ಮಾಡಲು ಕಾರಂಜಾ ಸಂತ್ರಸ್ತರು ಮಂದಾಗಿದ್ದಾರೆ.

    ಬರೋಬ್ಬರಿ 40 ವರ್ಷಗಳಿಂದ ಕಾರಂಜಾ ಹಿನ್ನೀರಿನಲ್ಲಿ ಕಳೆದುಕೊಂಡ ತಮ್ಮ ಭೂಮಿಯ ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ನೈಯಾಪೈಸೆಯ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಕಾರಂಜಾ ಸಂತ್ರಸ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಂಚೆ ಪತ್ರ ಚಳುವಳಿ ಮಾಡಲು ಮುಂದಾಗಿದ್ದಾರೆ.

    ಈಗಾಗಲೇ ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡಿರುವ 28 ಹಳ್ಳಿಗಳಲ್ಲಿ ಪತ್ರಗಳನ್ನು ಹಂಚಲಾಗುತ್ತದೆ. ಈ ಪತ್ರಗಳನ್ನು ಕಾರಂಜಾ ಸಂತ್ರಸ್ತರು ಮೋದಿಗೆ ಪೋಸ್ಟ್ ಮಾಡಲಿದ್ದು, ಪ್ರಧಾನಿಯಿಂದಾದ್ರು ಪರಿಹಾರ ಸಿಗಬಹುದು ಎಂಬ ಭರವಸೆಯಲ್ಲಿ ಇದ್ದಾರೆ.

    2013 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೀದರ್ ಜಿಲ್ಲೆಯನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಭರವಸೆ ನೀಡಿ ವಿಜಯಶಾಲಿಯಾಗಿದ್ದ ನೈಸ್ ಖ್ಯಾತಿಯ ಅಶೋಕ್ ಖೇಣಿ ಸಾಹೇಬ್ರು ಕೂಡಾ ಕಾರಂಜಾ ಸಂತ್ರಸ್ತರಿಗೆ ನಾನು ಗೆದ್ದು ಬಂದರೆ ಪರಿಹಾರ ಕೊಡಿಸುವುದಾಗಿ ಮಾತುಕೊಟ್ಟು ತಪ್ಪಿದ್ದರು. ಹೀಗಾಗಿ ಎಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹುಸಿ ಭರವಸೆಯಿಂದ ಬೇಸತ್ತಿರುವ ಕಾರಂಜಾ ಸಂತ್ರಸ್ತರು 1 ಸಾವಿರ ಅಂಚೆ ಪತ್ರಗಳನ್ನು ಪ್ರಧಾನಿಗೆ ಕಳಿಸಲು ನಿರ್ಧಾರ ಮಾಡಿದ್ದಾರೆ.

  • ಜಾತಿಯ ತಿರುವು ಪಡೆದುಕೊಂಡ ಗಣಿಗಾರಿಕೆ ಹಲ್ಲೆ ಪ್ರಕರಣ

    ಜಾತಿಯ ತಿರುವು ಪಡೆದುಕೊಂಡ ಗಣಿಗಾರಿಕೆ ಹಲ್ಲೆ ಪ್ರಕರಣ

    ಬೀದರ್: ಕಳೆದ ಡಿಸೆಂಬರ್ 12ರಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಸಂಬಂಧಿಯಿಂದ ಹಲ್ಲೆ ಮಾಡಿದ ಪ್ರಕರಣ ದಿನ ಉರುಳುತ್ತಿದ್ದಂತ್ತೆ ಜಾತಿ ಸ್ವರೂಪ ಪಡೆದುಕೊಳ್ಳುತ್ತಿದೆ.

    ಕ್ರಷರ್ ಮಾಲೀಕ ಶರಣು ರೆಡ್ಡಿ ಮೇಲೆ ಹಲ್ಲೆ ಮಾಡಿದ್ದಕ್ಕೆ ರೆಡ್ಡಿ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದ್ದು ಕ್ರಮ ತೆಗೆದುಕೊಳ್ಳಿ ಅಂತ ರೆಡ್ಡಿ ಯುವ ಬ್ರಿಗೇಡ್ ನಿಂದ ಬೀದರ್ ಎಸ್‍ಪಿ, ಡಿಸಿಯವರಿಗೆ ನಿನ್ನೆ ಮನವಿ ನೀಡಲಾಗಿತ್ತು. ಇಂದು ಹಲ್ಲೆ ಮಾಡಿದ ಸಿದ್ದು ಪಾಟೀಲ್ ಸೇರಿದಂತೆ ನೂರಾರು ಲಿಂಗಾಯತರು ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದಾರೆ.

    ಸಿದ್ದು ಪಾಟೀಲ್ ಅವರ ಸಹೋದರ ಸಂತೋಷ್ ಪಾಟೀಲ್‍ಗೆ ಶರಣ ರೆಡ್ಡಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದನ್ನ ಪ್ರಶ್ನಿಸಲು ತೆರಳಿದಾಗ ನನ್ನ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ನಾನು ಇದಕ್ಕೆ ಪ್ರತಿರೋಧ ಒಡ್ಡಿದೆ ಅಷ್ಟೆ ಎಂದು ಸಿದ್ದು ಪಾಟೀಲ್ ಹೇಳುತ್ತಿದ್ದಾರೆ. ನೀವು ಸಿಸಿಟಿವಿಯನ್ನು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು ಅಂತ ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ ಬಳಿ ಮನವಿ ಮಾಡಿಕೊಂಡರು.

    ಹಲ್ಲೆ ಪ್ರಕರಣವೀಗ ಜಾತೀಯ ತಿರುವು ಪಡೆದುಕೊಂಡಿದ್ದು, ಈ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಪ್ರಕರಣವನ್ನ ಬಗೆಹರಿಸಬೇಕು. ಇಲ್ಲವಾದರೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಮತೀಯ ಗಲಭೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.