Tag: bidar

  • ಬೀದರ್: ಬೇವಿನ ಮರದಲ್ಲಿ ಹಾಲಿನಂತ ದ್ರವ – ಸ್ಥಳೀಯರಿಂದ ಪೂಜೆ

    ಬೀದರ್: ಬೇವಿನ ಮರದಲ್ಲಿ ಹಾಲಿನಂತ ದ್ರವ – ಸ್ಥಳೀಯರಿಂದ ಪೂಜೆ

    ಬೀದರ್: ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಗಡಿ ಜಿಲ್ಲೆ ಬೀದರ್ ಸಾಕ್ಷಿಯಾಗಿದ್ದು, ಬೇವಿನ ಮರದಿಂದ ನಿರಂತರವಾಗಿ ಹಾಲಿನಂತಹ ದ್ರವ ಸುರಿಯುತ್ತಿದೆ.

    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಹೊಡ್ಡರ ಹೊಣಿಯಲ್ಲಿ ಘಟನೆ ನಡೆದಿದ್ದು, ಬೇವಿನ ಮರದಲ್ಲಿ ಹಲವು ದಿನಗಳಿಂದ ಬಿಳಿ ಬಣ್ಣದ ಹಾಲಿನಂತ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ.

    ಪ್ರಕೃತಿಯ ವಿಸ್ಮಯವನ್ನು ನೋಡಲು ಪ್ರತಿದಿನ ಜಿಲ್ಲೆಯ ಮೂಲೆ ಮೂಲೆಗಳಿಂದ ನೂರಾರು ಜನ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ದೈವರ ಪವಾಡವೆಂದು ನಂಬಿರುವ ಕೆಲವರು ಮರಕ್ಕೆ ಪೂಜೆ ಮಾಡುತ್ತಿದ್ದಾರೆ. ಸಾಲದಕ್ಕೆ ಬೇವಿನ ಮರಕ್ಕೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರ ಹಾಕಿ ವಿಸ್ಮಯ ನೋಡಲು ಬಂದ ಎಲ್ಲರಿಗೂ ತೀರ್ಥ, ಪ್ರಸಾದಗಳನ್ನು ನೀಡುತ್ತಿದ್ದಾರೆ.

    ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
    ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.

  • ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

    ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚಾಗಿದ್ದು, ಇಂದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದಾಗ ವೈದ್ಯರೊಬ್ಬರ ನಿವಾಸಕ್ಕೆ ನುಗ್ಗಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.

    ಬೀದರ್‍ನ ಬಸವ ನಗರದಲ್ಲಿರುವ ಡಾ. ರವೀಂದ್ರ ಪಾಟೀಲ್ ಅವರ ಮನೆಯಲ್ಲಿ ಇಂದು ಬೆಳಗಿನ ಜಾವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಒಟ್ಟು 20 ಲಕ್ಷ ರೂ. ಬೆಲೆ ಬಾಳುವ 50 ತೋಲೆ ಬಂಗಾರ ಕದ್ದು ಖದೀಮ ಪರಾರಿಯಾಗಿದ್ದಾನೆ. ಮನೆಯವರು ಬೆಳಗ್ಗೆ ಎದ್ದ ತಕ್ಷಣ ವಿಷಯ ಗೊತ್ತಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಿವ್ರ ಪರಿಶೀಲನೆ ಮಾಡುತ್ತಿದ್ದಾರೆ.

    ಕಳ್ಳ ದರೋಡೆ ಮಾಡಲು ಮನೆ ಒಳಗೆ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಾಂಧಿಗಂಜ್ ಪೊಲೀಸರು ಕಳ್ಳನಿಗಾಗಿ ಬಲೆ ಬಿಸಿದ್ದಾರೆ.

  • ಶೋರೂಂಗೆ ನುಗ್ಗಿದ್ರು, ಆ ಕಡೆ ಈ ಕಡೆ ನೋಡಿದ್ರು – ಅಲ್ಮೇರಾ ಒಡೆದು ದೋಚಿದ್ರು

    ಶೋರೂಂಗೆ ನುಗ್ಗಿದ್ರು, ಆ ಕಡೆ ಈ ಕಡೆ ನೋಡಿದ್ರು – ಅಲ್ಮೇರಾ ಒಡೆದು ದೋಚಿದ್ರು

    ಬೀದರ್: ಶೋರೂಂ ಶಟರ್ ಮುರಿದು, ಗ್ಲಾಸ್ ಒಡೆದು ಅಲ್ಮೇರಾದಲ್ಲಿದ್ದ 24,500 ರೂ.ಗಳನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನಿರಂಜನ ಅಷ್ಟೂರೆ ಅವರ ಮಾಲೀಕತ್ವದ ಮಹಾಲಕ್ಷ್ಮಿ ಮೋಟಾರ್ಸ್ ಶೋರೂಮಿನಲ್ಲಿ ನಸುಕಿನ ಜಾವ ಕಳ್ಳತನ ನಡೆದಿದೆ. ಕಳ್ಳರು 24,500 ರೂ.ಗಳನ್ನು ದೋಚಿರುವುದು ಮಾತ್ರವಲ್ಲದೆ 33 ಸಾವಿರ ರೂ. ಬೆಲೆ ಬಾಳುವ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಒಟ್ಟು ನಾಲ್ವರು ಕಳ್ಳರು ರಾಜಾರೋಷವಾಗಿ ಒಳಗೆ ನುಗ್ಗಿದ್ದು, ಇಬ್ಬರು ರೂಮಿನ ಎರಡೂ ಬಾಗಿಲುಗಳನ್ನು ಕಾಯುತ್ತಿದ್ದರೆ, ಇನ್ನಿಬ್ಬರು ಅಲ್ಮೇರಾ ಒಡೆದು ಹಣ ದೋಚುವುದಲ್ಲಿ ನಿರತರಾಗಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಶೋರೂಮಿನಲ್ಲಿ ಕಳ್ಳತನ ಮಾಡಿದ ನಂತರ ಭಾಲ್ಕಿ ಪಟ್ಟಣದ ಶಿವಾಜಿ ವೃತ್ತದಲ್ಲಿರುವ ವೈನ್‍ಶಾಪ್‍ಗೂ ಕಳ್ಳರು ನುಗ್ಗಿದ್ದು, ಬರಿಗೈಯಿಂದ ವಾಪಸಾಗಿದ್ದಾರೆ ಎಂದು ಪೊಲೀಸರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕಳ್ಳರು ಕೈಚಳಕ ತೋರಿಸಿದ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆ ಸಿಪಿಐ ರಮೇಶಕುಮಾರ್ ಮೈಲೂರಕರ್ ಸ್ಥಳಕ್ಕೆ ಧಾವಿಸಿ ಶೋರೂಮ್ ಪರಿಶೀಲನೆ ನಡೆಸಿದ್ದಾರೆ. ನಂತರ ಶ್ವಾನ ದಳವನ್ನು ಕರೆಸಿ ತಪಾಸಣೆ ಮಾಡಿಸಿದ್ದಾರೆ. ಈ ಕುರಿತು ಭಾಲ್ಕಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 35 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಾಟ – ಆರೋಪಿ ಬಂಧನ

    35 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಾಟ – ಆರೋಪಿ ಬಂಧನ

    ಬೀದರ್: ಅಕ್ರಮವಾಗಿ ಮಾದಕ ವಸ್ತು(ಅಫೀಮು) ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೀದರ್ ಅಬಕಾರಿ ಪೊಲೀಸರು ಇಂದು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬೀದರ್ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 35 ಲಕ್ಷ ರೂ. ಬೆಲೆ ಬಾಳುವ ಅಫೀಮು ಹಾಗೂ ಲಾರಿಯನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿ ಸುಜೀತ್ ಸಿಂಗ್‍ನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

    ಈ ಆರೋಪಿ ಮಾದಕ ವಸ್ತುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹಿಮಾಚಲ ಪ್ರದೇಶದಿಂದ ಚೆನ್ನೈಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ಪಬ್ಲಿಕ್ ಟಿವಿಗೆ ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಬಳಿ ದಾಳಿ ಮಾಡಿದ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಬೀದರ್ ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಎರಡು ರಾಜ್ಯಗಳ ಗಡಿ ಹೊಂದಿಕೊಂಡಿರುವುದರಿಂದ ಮಾದಕ ವಸ್ತುಗಳ ಅಕ್ರಮವಾಗಿ ಸಾಗಾಟ ಮಾಡಲು ಆರೋಪಿಗಳಿಗೆ ಸುಲಭ ಮಾರ್ಗವಾಗಿದೆ. ಹೀಗಾಗಿ ಈ ಭಾಗದಲ್ಲಿ ಅಕ್ರಮ ಮಾದಕ ವಸ್ತುಗಳ ಸಾಗಾಟ ನಡೆಯುತ್ತದೆ ಎನ್ನಲಾಗಿದೆ.

  • ಸ್ವಾಮೀಜಿಗಳನ್ನೂ ಬಿಟ್ಟಿಲ್ಲ ‘ಹೌದು ಹುಲಿಯಾ’ ಡೈಲಾಗ್

    ಸ್ವಾಮೀಜಿಗಳನ್ನೂ ಬಿಟ್ಟಿಲ್ಲ ‘ಹೌದು ಹುಲಿಯಾ’ ಡೈಲಾಗ್

    ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉದ್ದೇಶಿಸಿ ಪೀರಪ್ಪ ಹೇಳಿದ್ದ ‘ಹೌದು ಹುಲಿಯಾ’ ಡೈಲಾಗ್ ಈಗ ಸ್ವಾಮೀಜಿಗಳನ್ನೂ ಬಿಟ್ಟಿಲ್ಲ. ಬೀದರ್ ಜಿಲ್ಲೆ ಬಸವಕಲ್ಯಾಣದ ಯಲ್ಲದಗುಂಡಿ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡುತಿದ್ದ ಹಿರನಾಗಾವ್‍ನ ಜಯಶಾಂತಲಿಂಗ ಸ್ವಾಮೀಜಿಗಳಿಗೂ ಜನ ‘ಹೌದು ಹುಲಿಯಾ’ ಅಂದಿದ್ದಾರೆ.

    ಶ್ರೀ ಪರಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ನಡೆದ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಹಿರನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿಗಳು, ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಆಶೀರ್ವಚನ ನೀಡುತ್ತಿದ್ದರು. ಇದನ್ನೂ ಓದಿ:  ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು

    ಸ್ವಾಮೀಜಿಗಳ ಕೊನೆ ಭಾಷಣ ಆಗಿರುವ ಕಾರಣ ದೀರ್ಘವಾಗಿ ಭಾಷಣ ಮಾಡಬಾರದು. ಹಾಗೇನಾದರು ಮಾಡಿದರೆ ಜನರಿಗೆ ಬೇಜಾರಾಗುತ್ತದೆ ಎಂದು ಶ್ರೀಗಳು ಹೇಳಿದರು. ಈ ವೇಳೆ ವೇದಿಕೆಯ ಮುಂಭಾಗದಲ್ಲಿಯೇ ಕುಳಿತ್ತಿದ್ದ ವ್ಯಕ್ತಿಯೊಬ್ಬ ಜೋರಾದ ಧ್ವನಿಯಲ್ಲಿ ‘ಹೌದು ಹುಲಿಯಾ’ ಅಂತ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರೆಲ್ಲರೂ ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.

    ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ `ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಪೀರಪ್ಪ `ಹೌದು ಹುಲಿಯಾ’ ಎಂದಿದ್ದರು. ಆ ಬಳಿಕ ಪೀರಪ್ಪ ಅವರ `ಹೌದು ಹುಲಿಯಾ’ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಇದನ್ನೂ ಓದಿ: ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

  • ರಸ್ತೆ ಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್: ಕೆಳಗೆ ಬಿದ್ದು ಚಾಲಕ ಸಾವು

    ರಸ್ತೆ ಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್: ಕೆಳಗೆ ಬಿದ್ದು ಚಾಲಕ ಸಾವು

    ಬೀದರ್: ರಸ್ತೆ ಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿ ಚಾಲಕ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಬಂಡಗರವಾಡಿ ಬಳಿ ನಡೆದಿದೆ.

    ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದ ಸಾಯಿಬಣ್ಣ ಈರಣ್ಣ ಜಮಾದಾರ್ (34) ಮೃತ ಚಾಲಕ. ಸಾಯಿಬಣ್ಣ ಅವರು ಭಾನುವಾರ ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪುತ್ತಿದ್ದಂತೆ ಪ್ರಾಣ ರಕ್ಷಣೆಗಾಗಿ ತಕ್ಷಣವೇ ಕೆಳಗೆ ಜಿಗಿದಿದ್ದಾರೆ. ದುರಾದೃಷ್ಟವಶಾತ್ ಟ್ರ್ಯಾಕ್ಟರ್ ಹರಿದ ಪರಿಣಾಮ ಸಾಯಿಬಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‍ಐ ಅರುಣಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಕಳಪೆ ಕಾಮಗಾರಿ ಆರೋಪ – ಶಾಸಕ ರಹೀಂಖಾನ್ ದಿಢೀರ್ ಭೇಟಿ

    ಕಳಪೆ ಕಾಮಗಾರಿ ಆರೋಪ – ಶಾಸಕ ರಹೀಂಖಾನ್ ದಿಢೀರ್ ಭೇಟಿ

    ಬೀದರ್: ಕಳಪೆ ಕಾಮಗಾರಿ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಚಿವರು, ಬೀದರ್ ಉತ್ತರ ಕ್ಷೇತ್ರದ ಹಾಲಿ ಶಾಸಕರಾದ ರಹೀಂಖಾನ್ ತನ್ನ ಕ್ಷೇತ್ರದ ಸಿಸಿ ರೋಡ್ ಕಾಮಗಾರಿ ಪರಿಶೀಲನೆ ಮಾಡಿ ಗುತ್ತಿಗೆದಾರನಿಗೆ ಬಿಸಿ ಮುಟ್ಟಿಸಿದ್ದಾರೆ.

    ಇಂದು ಬೀದರ್ ನಗರದ ವಾರ್ಡ್ ನಂಬರ್ 24ಕ್ಕೆ ರಹೀಂಖಾನ್ ದಿಢೀರನೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಗರೋತ್ಥಾನ ಹಾಗೂ ಎಚ್‌ಕೆಆರ್‌ಡಿಬಿಯಿಂದ ಒಂದು ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಸಿಸಿ ರೋಡ್ ಕಳಪೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.

    ಹೀಗಾಗಿ ತಕ್ಷಣ ರಹೀಂಖಾನ್ ಭೇಟಿ ನೀಡಿ ನಿಯಮದಂತೆ ಕಾಮಗಾರಿ ಮಾಡಿ ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಹಾಲಿ ಶಾಸಕನಾಗಿರುವ ರಹೀಂಖಾನ್ ದಿಢೀರನೇ ಭೇಟಿ ನೀಡಿ ಪರಿಶೀಲನೆ ಮಾಡಿ ಗುತ್ತಿಗೆದಾರನಿಗೆ ಬಿಸಿ ಮುಟ್ಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

    ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

    ಬೀದರ್: ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಡರಾತ್ರಿ 80 ಕ್ವಿಂಟಾಲ್ ಸೋಯಾ ಸಂಪೂರ್ಣ ಬೆಂಕಿ ಆಹುತಿಯಾಗಿದೆ.

    ದೇವರಾವ್ ಜಾದವ್ ಅವರಿಗೆ ಸೇರಿದ ಸುಮಾರು 5 ಲಕ್ಷ ರೂ.ನ ಸೋಯಾ ಅಗ್ನಿಗೆ ಆಹುತಿಯಾಗಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಈ ಅವಘಡ ಸಂಭವಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಕಣ್ಣೀರು ಹಾಕುತ್ತಿದ್ದಾರೆ.

    ಬೆಂಕಿ ಹತ್ತಿರುವುದನ್ನು ಕಂಡ ಸ್ಥಳೀಯರು ಪಕ್ಕದ ಬೋರವೆಲ್‍ನಿಂದ ಪೈಪ್ ಹಾಕಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಏನೇ ಸಾಹಸ ಮಾಡಿದರೂ ಲಕ್ಷಾಂತರ ರೂ. ಮೌಲ್ಯದ ಸೋಯಾ ಮಾತ್ರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಕರೆ ಮಾಡಿದರೂ ಅಗ್ನಿ ಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದ್ದು, ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಗ್ರಾಮದಲ್ಲೇ ಅವಘಡ ಸಂಭವಿಸಿದ್ದು, ಸಚಿವರು ಮಾತ್ರ ಸ್ಥಳಕ್ಕೆ ಬಂದು ಸಾಂತ್ವನ ಹೇಳಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

  • ನೀರಿನ ಕೊರತೆ ಬಗ್ಗೆ ದೂರು – 24 ಗಂಟೆಯೊಳಗೆ ಸಚಿವ ಪ್ರಭು ಚೌವ್ಹಾಣ್‍ರಿಂದ ಸ್ಪಂದನೆ

    ನೀರಿನ ಕೊರತೆ ಬಗ್ಗೆ ದೂರು – 24 ಗಂಟೆಯೊಳಗೆ ಸಚಿವ ಪ್ರಭು ಚೌವ್ಹಾಣ್‍ರಿಂದ ಸ್ಪಂದನೆ

    ಬೀದರ್: ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌವ್ಹಾಣ್ ಅವರು ಸ್ಥಾಪಿಸಿರುವ ದೂರು ಪೆಟ್ಟಿಗೆಯಲ್ಲಿ ದಾಖಲಾದ ದೂರುವೊಂದಕ್ಕೆ 24 ಗಂಟೆಯೊಳಗಡೆ ಸ್ಪಂದನೆ ಸಿಕ್ಕಿದೆ.

    ಬೀದರ್ ಜಿಲ್ಲೆ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ ಎನ್ನುವ ದೂರು ಡಿ.26ರಂದು ದಾಖಲಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಸಚಿವರು, ಇಂದು ಡಿ.27ರಂದು ವಡಗಾಂವ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಇದೇ ವೇಳೆ ಪ್ರಭು ಅವರು ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ನೀರಿನ ಕೊರತೆ ಕಂಡು ಆ ಕೂಡಲೇ ಕೊಳವೆ ಬಾವಿ ಕೊರೆಯುವ ವಾಹನವನ್ನು ಸ್ಥಳಕ್ಕೆ ಕರೆಯಿಸಿದರು. ಬೋರ್ ವೆಲ್ ಒಡೆಸುವ ಮೂಲಕ ಸಚಿವರು ಆ ಗ್ರಾಮದ ಆಸ್ಪತ್ರೆಯಲ್ಲಿದ್ದ ನೀರಿನ ಭವಣೆಯನ್ನು ನೀಗಿಸಿದರು.

  • ಕುಡಿದ ಅಮಲಿನಲ್ಲಿ ನಾಲ್ವರಿಂದ ಯುವಕನ ಬರ್ಬರ ಹತ್ಯೆ

    ಕುಡಿದ ಅಮಲಿನಲ್ಲಿ ನಾಲ್ವರಿಂದ ಯುವಕನ ಬರ್ಬರ ಹತ್ಯೆ

    ಬೀದರ್: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ನಾಲ್ವರು ಯುವಕರು ಚಾಕುವಿನಿಂದ ಇರಿದು ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ನಗರದ ಉಸ್ಮಾನ್ ಗಂಜ್‍ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

    ಮಹಮ್ಮದ್ ಅಕ್ಬರ್ (20) ಕೊಲೆಯಾದ ದುರ್ದೈವಿ. ತಡರಾತ್ರಿ ಮೈಲೂರಿನ ನಾಲ್ವರು ಮುಸ್ಲಿಂ ಯುವಕರು ಕುಡಿದ ಮತ್ತಿನಲ್ಲಿ ಮೃತ ಮಹಮ್ಮದ್ ಜೊತೆ ಮಾತಿಗೆ ಮಾತು ಬೆಳೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ.

    ಕೊಲೆ ಮಾಡಿ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ನಗರ ಠಾಣೆಯ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತ ದೇಹವನ್ನು ರವಾನಿಸಲಾಗಿದ್ದು, ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.