Tag: bidar

  • ಕಳ್ಳತನ ಮಾಡಲು ಮನೆಗೆ ನುಗ್ಗಿ ಊಟ ಮಾಡಿ ದರೋಡೆ ಮಾಡಿದ್ರು!

    ಕಳ್ಳತನ ಮಾಡಲು ಮನೆಗೆ ನುಗ್ಗಿ ಊಟ ಮಾಡಿ ದರೋಡೆ ಮಾಡಿದ್ರು!

    ಬೀದರ್: ಮನೆ ಕಳ್ಳತನಕ್ಕಾಗಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ದರೋಡೆ ಮಾಡಿರುವ ಪ್ರಕರಣ ಬೀದರ್ ನಲ್ಲಿ ಬೆಳಕಿಗೆ ಬಂದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಶಾಲೆ ಪಕ್ಕದಲ್ಲಿನ ಬಸವರಾಜ ಕಾಶಪ್ಪ ಹೊನ್ನಪ್ಪನವರ ಮನೆಗೆ ಕಳ್ಳರ ತಂಡ ಕನ್ನ ಹಾಕಿದೆ. ಅಲ್ಲದೆ ಮನೆಯಲ್ಲಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ.

    ಬಸವರಾಜ ತಮ್ಮ ಪತ್ನಿ ಚಿಕಿತ್ಸೆ ಸಂಬಂಧ ಕಳೆದ 20 ದಿನಗಳಿಂದ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ತಡರಾತ್ರಿ ಮನೆಯ ಹಿಂಬದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿರುವ ಆಲ್ಮರಾ ಸೇರಿದಂತೆ ಎಲ್ಲ ಸ್ಥಳಗಳನ್ನು ಪರಿಶೀಲಿಸಿದ ಕಳ್ಳರು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಅಲ್ಲದೆ ಗ್ಯಾಸ್ ಮೇಲೆ ಒಗ್ಗರಣೆ, ಅವಲಕ್ಕಿ ಹಾಗೂ ಉಪ್ಪಿಟ್ಟು ಮಾಡಿಕೊಂಡು ಊಟ ಮಾಡಿ ಬಳಿಕ ಕದ್ದು ಪರಾರಿಯಾಗಿದ್ದಾರೆ.

    ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್‍ಐ ಬಸಲಿಂಗಪ್ಪ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಮನೆ ಮಾಲೀಕ ಬಸವರಾಜ್ ಗ್ರಾಮಕ್ಕೆ ಬಂದಾಗ ಮಾತ್ರ ಕಳುವಾದ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಬೀದರ್: ಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾರೆ.

    ಬೀದರ್ ಜಿಲ್ಲೆಯಲ್ಲಿ ಸದ್ಯ 9 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಜಿಲ್ಲೆಯ ಜನ ಕೊರೆಯುವ ಚಳಿಗೆ ಹೈರಾಣಾಗಿ ಹೋಗಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೊರವಾಡಿ ಗ್ರಾಮದ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧ ಸ್ಥಿತಿ ನೋಡಿ ಶಂಕರ್ ಎಂಬವರು ಬೆಡ್‍ಶೀಟ್ ಹಂಚಿದ್ದಾರೆ.

    ವಯೋವೃದ್ಧನಿಗೆ ಈಗಾಗಲೇ ಸ್ಟ್ರೋಕ್ ಹೊಡೆದಿದ್ದು, ಅವರನ್ನು ನೋಡಿಕೊಳ್ಳಲ್ಲಿ ಮನೆಯಲ್ಲಿ ಯಾರು ಇಲ್ಲ. ಅಲ್ಲದೆ ಕೊರೆಯುವ ಚಳಿಗೆ ವಯೋವೃದ್ಧ ತತ್ತರಿಸಿ ಹೋಗಿದ್ದರು. ಇದನ್ನು ಕಂಡ ಯುವಕ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರ್, ಈ ವಯೋವೃದ್ಧನಿಗೆ ಯಾರು ಇಲ್ಲ. ಹೀಗಾಗಿ ನಾನು ಈ ಪುಟ್ಟ ಸಹಾಯ ಮಾಡಿದ್ದೇನೆ ಎಂದು ಯುವಕ ಶಂಕರ್ ತಿಳಿಸಿದ್ದಾರೆ.

  • ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೇ ಇದ್ದು ಇಲ್ಲವಾಯ್ತು ‘ಪಶು ಪಾಲಿ ಕ್ಲಿನಿಕ್’

    ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೇ ಇದ್ದು ಇಲ್ಲವಾಯ್ತು ‘ಪಶು ಪಾಲಿ ಕ್ಲಿನಿಕ್’

    ಬೀದರ್: 2014ರಲ್ಲಿ ಬಿಜೆಪಿ ಸರ್ಕಾರ ‘ಪಶು ಪಾಲಿ ಕ್ಲಿನಿಕ್’ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ, ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ ಗಡಿಯಲ್ಲಿರುವ ಸ್ವತಃ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಕ್ಷೇತ್ರವಾದ ಬೀದರ್ ನಲ್ಲಿರುವ ಪಶು ಪಾಲಿ ಕ್ಲೀನಿಕ್‍ಗೆ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

    ಗ್ರಾಮೀಣ ಪ್ರದೇಶದ ಪಶುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಸರ್ಕಾರ 1.84 ಲಕ್ಷ ರೂ. ಅನುದಾನದಲ್ಲಿ ಪಶು ಪಾಲಿ ಕ್ಲಿನಿಕ್ ಆರಂಭಿಸಿತ್ತು. ಈ ಪಶು ಪಾಲಿ ಕ್ಲಿನಿಕ್ ನಿರ್ಮಾಣವಾಗಿ 6 ತಿಂಗಳುಗಳಾದರೂ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

    ತಜ್ಞರು, ವೈದ್ಯರು, ಯಂತ್ರೋಪಕರಣಗಳು ಹಾಗೂ ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಉದ್ಘಾಟನೆ ಭಾಗ್ಯಕ್ಕೆ ತೊಡಕಾಗಿದೆ. ಬೀದರ್ ಅಷ್ಟೇ ಅಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪಶು ಪಾಲಿ ಕ್ಲಿನಿಕ್ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

    ಈ ಪಶು ಪಾಲಿ ಕ್ಲಿನಿಕ್ ನಲ್ಲಿ ಹೈಟೆಕ್ ಲ್ಯಾಬ್, ಪಶು ರಕ್ತ ಪರಿಶೀಲನೆ, ಶ್ರಸ್ತಚಿಕಿತ್ಸೆ ಸೇರಿದಂತೆ ಹಲವಾರು ರೀತಿ ಹೈಟೆಕ್ ಚಿಕಿತ್ಸೆಯನ್ನು ಜಾನುವಾರಗಳಿಗೆ ನೀಡಬಹುದು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಾಣವಾದ ಪಶು ಪಾಲಿ ಕ್ಲಿನಿಕ್ ಮಾತ್ರ ಹಾಳುಕೊಂಪೆಯಾಗಿದೆ. ಪಶು ಸಂಗೋಪನಾ ಸಚಿವರು ಕೂಡಾ ಬೀದರ್ ಜಿಲ್ಲೆಯವರೇ ಆಗಿದ್ದು, ಈ ಬಗ್ಗೆ ಗಮನ ಹರಿಸಿ ಕ್ಲಿನಿಕ್ ಉದ್ಘಾಟನೆ ಮಾಡುತ್ತಾರಾ ಎಂದು ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

  • ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೂ ಹೈಟೆಕ್ ಶಿಕ್ಷಣ ಭಾಗ್ಯ

    ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೂ ಹೈಟೆಕ್ ಶಿಕ್ಷಣ ಭಾಗ್ಯ

    ಬೀದರ್: ರಾಜ್ಯದ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಕಾಡುತ್ತಿದೆ. ಆದರೆ ಜಿಲ್ಲೆಯ ಔರಾದ್ ತಾಲೂಕಿನ 20 ಕುಗ್ರಾಮದ ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಇಂದು ಹೈಟೆಕ್ ಶಿಕ್ಷಣ ಭಾಗ್ಯ ಲಭಿಸಿದೆ.

    ರೈತ ಸಂಘ, ರಿಲಯನ್ಸ್ ಫೌಂಡೇಶನ್, ಮೇಂಡಾ ಫೌಂಡೇಶನ್ ಮತ್ತು ಸೇಲ್ಕಾ ಫೌಂಡೇಶನ್ ಸಯೋಗದಲ್ಲಿ ಒಟ್ಟು 2 ಲಕ್ಷ ರೂ. ಹಣ ಖರ್ಚು ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಭಾಗ್ಯ ದೊರಕಿಸಿ ಕೊಡಲಾಗಿದೆ. ಔರಾದ್ ತಾಲೂಕಿನ ಬೋರ್ಗಿ, ನಾಗೂರು ಎಂ, ಲಿಂಗದಹಳ್ಳಿ, ಜೀರ್ಗಾ ಕೆ, ಚಟ್ನಹಳ್ಳಿ, ಹಾಲಿಹಿಪ್ಪರ್ಗಾ, ಸೇರಿದಂತೆ ಒಟ್ಟು 20 ಸರ್ಕಾರಿ ಶಾಲೆಗಳಲ್ಲಿ ಸದ್ಯ ಸ್ಮಾರ್ಟ್ ಕ್ಲಾಸ್ ಭಾಗ್ಯ ಲಭಿಸುತ್ತಿದೆ.

    ಪ್ರಮುಖವಾಗಿ ಬೋರ್ಗಿಯ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ದೊರಕಿದೆ. 130 ವಿದ್ಯಾರ್ಥಿಗಳು ಹೈಟೆಕ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್ ಜೊತೆಗೆ ‘ಪಂಚಸೂತ್ರ’ ಮತ್ತು ‘ನಲಿಕಲಿ’ ಎಂಬ ವಿಶೇಷ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನ ಬಳಿಸಿಕೊಂಡು ದೃಶ್ಯ ಮತ್ತು ಆಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

  • ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಸಚಿವ ಚೌವ್ಹಾಣ್

    ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಸಚಿವ ಚೌವ್ಹಾಣ್

    ಬೀದರ್: ಮುಂದಿನ ತಿಂಗಳು ಮೂರು ದಿನಗಳ ಕಾಲ ಬೀದರ್ ನ ಪಶು ವಿವಿಯಲ್ಲಿ ನಡೆಯಲಿರುವ ಪಶುಮೇಳದ ಪೂರ್ವಭಾವಿ ಸಿದ್ಧತೆ ಸಭೆ ಇಂದು ಕರೆಯಲಾಗಿತ್ತು.

    ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಪ್ರತಿಯೊಂದು ವಿಭಾಗದ ಅಧಿಕಾರಿಗಳನ್ನು ಕರೆದು ಸಿದ್ಧತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

    ಅಧಿಕಾರಿಗಳು ಗೈರಾಗಿದ್ದು ಕಂಡು ಕೆಂಡಾಮಂಡಲರಾದ ಸಚಿವ ಪ್ರಭು ಚೌವ್ಹಾಣ್ ಮಾಹಿತಿ ಇದ್ದರೂ ಯಾಕೆ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಗೆ ಕೇಳಿದರು. ಸಮರ್ಪಕ ಉತ್ತರ ಸಿಗದಿದ್ದಾಗ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಗೆ ಗೈರಾದ ಎಲ್ಲಾ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

    ಮುಂದಿನ ತಿಂಗಳು 07 ರಿಂದ 09ರವರೆಗೆ ನಡೆಯಲಿರುವ ಪಶು ಮೇಳವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದು, ಈ ಮೇಳದ ಪೋಸ್ಟರ್ ಅನ್ನು ಇಂದು ಸಚಿವರು ಬಿಡುಗಡೆ ಮಾಡಿದರು. ಎಂಎಲ್‍ಸಿ ರಘುನಾಥ್ ಮಲ್ಕಾಪೂರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತ ಚಿದ್ರಿ, ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ್, ಜಿಲ್ಲಾ ಪಂಚಾಯ್ತಿ ಸಿಇಓ ಗ್ಯಾನೇಂದ್ರ ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದರು.

  • ಕಾಳ ಸಂತೆಗೆ ಪಡಿತರ ಅಕ್ಕಿ – 35 ಟನ್ ಜಪ್ತಿ

    ಕಾಳ ಸಂತೆಗೆ ಪಡಿತರ ಅಕ್ಕಿ – 35 ಟನ್ ಜಪ್ತಿ

    ಬೀದರ್: ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿಯನ್ನು ಕಾಳ ಸಂತೆಗೆ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, 35 ಟನ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಹೈದ್ರಾಬಾದ್-ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ-65ರ ಹುಮನಾಬಾದ್ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತಿತ್ತು. ಜಿಲ್ಲೆಯ ಬಸವ ಕಲ್ಯಾಣದ ತಡೋಳಾ ಬಳಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಲಾರಿ ಸಹಿತ 35 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ಇಲಾಖೆಯ ನಿರೀಕ್ಷಕರಾದ ರವಿ ಸೂರ್ಯವಂಶಿ ಹಾಗೂ ರಾಮರತನ ದೇಗಲೆ ನೇತೃತ್ವದ ತಂಡ ದಾಳಿ ನಡೆಸಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಬೀದರ್‍ನಿಂದ ಗುಜರಾತಿಗೆ ಅಕ್ಕಿ ಸಾಗಿಸಲಾಗುತಿತ್ತು. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕ ವೃತ್ತಿಯೇ ಹಾಗೇ. ಒಂದಿಷ್ಟು ಮುಗ್ಧ ಮನಸ್ಸುಗಳ ನಿಷ್ಕಲ್ಮಶ ಪ್ರೀತಿ ಸಂಪಾದಿಸುತ್ತದೆ. ಇಂತಹ ಪ್ರೀತಿಗೆ ಬಸವಣ್ಣ ಕರ್ಮಭೂಮಿ ಸಾಕ್ಷಿಯಾಗಿದೆ.

    ಶರಣು ಎಂಬವರು ಹತ್ತರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12 ವರ್ಷದಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿಗೆ ಅವರಿಗೆ ಕಲುಬುರಗಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ಹತ್ತರ್ಗಾ ಶಾಲೆಯ ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕರನ್ನು ಒಲ್ಲದ ಮನಸ್ಸಿನಲ್ಲಿ ಬೀಳ್ಕೊಟ್ಟಿದ್ದಾರೆ.

    ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತ್ತೆ’ ಹಾಡಿಗೆ ತಮ್ಮದೆ ಶೈಲಿಯಲ್ಲಿ ಪದ ರಚನೆ ಮಾಡಿ ಹಾಡೊಂದನ್ನು ರಚಿಸಿದ್ದಾರೆ. ಜೊತೆಗೆ ಸನ್ಮಾನ ಮಾಡಿ ಪೆನ್ನು, ಗಡಿಯಾರ, ಸೇರಿದಂತೆ ಗುರು ಕಾಣಿಕೆ ಎಂಬಂತೆ ತಮ್ಮ ಉಡುಗೊರೆ ನೀಡಿದ್ದಾರೆ.

    ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹತ್ತರ್ಗಾ ಶಾಲೆಯ ವಿದ್ಯಾರ್ಥಿಗಳ ಈ ರೀತಿ ಗುರು ಪ್ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಶರಣು ಭಾವುಕರಾಗಿದ್ದು, ಗುರುವಿನ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಿದೆ.

  • ಲಾರಿಗಳ ಮುಖಾಮುಖಿ ಡಿಕ್ಕಿ – ಹಿಂಬದಿಯ ಬೈಕ್ ಸವಾರನಿಗೆ ಗಂಭೀರ ಗಾಯ

    ಲಾರಿಗಳ ಮುಖಾಮುಖಿ ಡಿಕ್ಕಿ – ಹಿಂಬದಿಯ ಬೈಕ್ ಸವಾರನಿಗೆ ಗಂಭೀರ ಗಾಯ

    ಬೀದರ್: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಲಾರಿ ಹಿಂದೆ ಬರುತ್ತಿದ್ದ ಬೈಕ್ ಸವಾರನ ಸ್ಥಿತಿ ಚಿಂತಜನಕವಾದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಕಡೆಯಿಂದ ಅತಿ ವೇಗವಾಗಿ ಬಂದ ಲಾರಿ ಹುಮಾನಾಬಾದ್ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು ಭಾರಿ ಅನಾಹುತ ತಪ್ಪಿದಂತ್ತಾಗಿದೆ. ಆದರೆ ಲಾರಿ ಹಿಂಬದಿ ಬರುತ್ತಿದ್ದ ಬೈಕ್ ಸವಾರ ಡಿಕ್ಕಿಯಾಗಿ ನಿಂತ ಲಾರಿಗೆ ಗುದ್ದಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

    ಎರಡು ಲಾರಿಗಳು ಡಿಕ್ಕಿ ಸಂಭವಿಸಿ ಲಾರಿಗಳು ಕಂದಕಕ್ಕೆ ಉರಳಿದ್ದು ಹುಮಾನಾಬಾದ್ ಸಂಚಾರಿ ಪೊಲೀಸರು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲೂಕಿನ ದುಮ್ಮಸನೂರು ಗ್ರಾಮದ ಬಳಿ ಘಟನೆಯಾಗಿದ್ದು ಹುಮಾನಾಬಾದ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

  • ನನ್ ಹತ್ರ ಉಲ್ಟಾ ಪಲ್ಟಾ ನಡೆಯಲ್ಲ- ಅಧಿಕಾರಿಗಳಿಗೆ ಸಚಿವ ಚವ್ಹಾಣ್ ಖಡಕ್ ವಾರ್ನಿಂಗ್

    ನನ್ ಹತ್ರ ಉಲ್ಟಾ ಪಲ್ಟಾ ನಡೆಯಲ್ಲ- ಅಧಿಕಾರಿಗಳಿಗೆ ಸಚಿವ ಚವ್ಹಾಣ್ ಖಡಕ್ ವಾರ್ನಿಂಗ್

    ಬೀದರ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ಲ್ಯಾನಿಂಗ್ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

    ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದರೆ ಕೆಳ ಹಂತದ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೆ ನೀವು ಮಾತ್ರ ನಗರದಲ್ಲೇ ಇದ್ದು ಕೆಲ ಮಾಡುತ್ತೀರಿ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ಈ ವೇಳೆ ಸಬೂಬು ನೀಡಲು ಬಂದ ಅಧಿಕಾರಿಗಳ ವಿರುದ್ಧ ಗುಡುಗಿದ ಸಚಿವರು, ನನ್ನ ಹತ್ತಿರ ಉಲ್ಟಾ ಪಲ್ಟಾ ನಡೆಯಲ್ಲ. ಎಲ್ಲಾ ತಾಲೂಕು ಕೇಂದ್ರಗಳಿಗೆ ನೀವು ದಿಢೀರ್ ಭೇಟಿ ನೀಡಬೇಕು. ಅಭಿವೃದ್ಧಿ ಕೆಲಸಗಳು ಆಗಬೇಕು. ಆಗಿದ್ದು ಜನರಿಗೆ ಕಾಣಬೇಕು. ಮಾತಿನಿಂದ ಏನೂ ಆಗಲ್ಲ. ಮಾಡುತ್ತೇನೆ ಎಂದು ಹೇಳಿ ಜಾರಿಕೊಂಡರೆ ನನ್ನ ಹತ್ತಿರ ನಡೆಯಲ್ಲ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

    ನೀವು ಕುರ್ಚಿ ಬಿಟ್ಟು ತಾಲೂಕು ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಮಾತ್ರ ನಾನು ನಿಮ್ಮನ್ನು ಪ್ರೀತಿಯಿಂದ ಕಾಣುತ್ತೇನೆ ಎಂದು ಹೇಳಿದರು. ಇದಕ್ಕೂ ಮೊದಲು ಬ್ರೀಮ್ಸ್ ಆಸ್ಪತ್ರೆಗೆ ರೋಗಿಗಳು ಬಂದ್ರೆ ಹೈದರಾಬಾದ್ ಹಾಗೂ ಸೊಲ್ಲಾಪುರ್‍ಗೆ ಕಳಿಸುತ್ತಾರೆ ಎಂಬ ಜನರ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಬೇಕು. ಈ ಮೂಲಕ ಹೈದ್ರಾಬಾದ್, ಸೊಲ್ಲಾಪುರ ಮುಕ್ತ ಬೀದರ್ ಆಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

  • ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ- ಒಬ್ಬ ಸಾವು

    ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ- ಒಬ್ಬ ಸಾವು

    ಬೀದರ್: ಅಂಗಡಿ ಪೂಜೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು, ಓರ್ವ ಕೊಲೆಯಾದ ಘಟನೆ ಭಾಲ್ಕಿ ತಾಲೂಕಿನ ಸಿಕ್ಕಂದರ್‌ಬಾದ್ವಾಡಿ ಗ್ರಾಮದಲ್ಲಿ ನಡೆದಿದೆ.

    ಸಿಕ್ಕಂದರ್‌ಬಾದ್ವಾಡಿ ಗ್ರಾಮದ ಜರೆಪ್ಪ (35) ಕೊಲೆಯಾದ ವ್ಯಕ್ತಿ. ಜರೆಪ್ಪ ಅವರು ಮಂಗಳವಾರ ತನ್ನ ಸ್ನೇಹಿತನ ಅಂಗಡಿ ಪೂಜೆಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಡಿಜೆ ಹಚ್ಚಿ ಸಂಭ್ರಮಿಸುತ್ತಿದ್ದರು. ಇದರಿಂದಾಗಿ ಕೋಪಗೊಂಡ ಗ್ರಾಮದ ಮತ್ತೊಂದು ಗುಂಪಿನ ಯುವಕರು ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜರೆಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜರೆಪ್ಪನ ಸಂಬಂಧಿಕರು ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‍ಗೆ ಕರೆದೊಯ್ಯ ಮುಂದಾಗಿದ್ದರು. ಆದರೆ ಹೈದ್ರಾಬಾದ್‍ಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಜರೆಪ್ಪ ಮೃತಪಟ್ಟಿದ್ದಾರೆ.

    ಗುಂಪು ಘರ್ಷಣೆಯಲ್ಲಿ ವ್ಯಕ್ತಿ ಸಾವನ್ನಪ್ಪಿದರಿಂದ ಸಿಕ್ಕಂದರ್‌ಬಾದ್ವಾಡಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಭೀಗಿ ಭದ್ರತೆ ಮಾಡಲಾಗಿದೆ. ಗ್ರಾಮಕ್ಕೆ ಎಸ್‍ಪಿ ಟಿ.ಶ್ರೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಖಟಕ್ ಚಿಂಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.