Tag: bidar

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹೊರ ರಾಜ್ಯಕ್ಕೆ ಪಡಿತರ ಅಕ್ಕಿ ಅಕ್ರಮ ಸಾಗಾಣೆ – ಓರ್ವನ ಬಂಧನ, 25 ಟನ್ ಅಕ್ಕಿ ವಶ

    ಹೊರ ರಾಜ್ಯಕ್ಕೆ ಪಡಿತರ ಅಕ್ಕಿ ಅಕ್ರಮ ಸಾಗಾಣೆ – ಓರ್ವನ ಬಂಧನ, 25 ಟನ್ ಅಕ್ಕಿ ವಶ

    ಬೀದರ್: ಅನ್ನಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಸಾಗಿಸುವಾಗ ಜಪ್ತಿಯಾಗಿದೆ.

    ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಲಾರಿ ಸಹಿತ 25 ಟನ್ ಅಕ್ಕಿ ವಶಪಡಿಸಿಕೊಂಡ ಫಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ. ಅಕ್ಕಿ ತುಂಬಿದ ಲಾರಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65-ರ ಚಂಡಕಾಪೂರ ಸಮೀಪ ದಾಳಿ ಮಾಡಿ ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಆಹಾರ ಇಲಾಖೆ ಶಿರಸ್ತೇದಾರ ರಾಮರತನ ದೇಗಲೆ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 7.5 ಲಕ್ಷ ಮೌಲ್ಯದ 250 ಕ್ವಿಂಟಾಲ್ (25 ಟನ್) ಅಕ್ಕಿ ಸಹಿತ ಲಾರಿ ಜಪ್ತಿ ಮಾಡಿ. ಗುಜರಾತಿನ ಜಾಮ್‍ನಗರ ಮೂಲದ ಲಾರಿ ಚಾಲಕ ಭೋವನ್ ವಘೇಲಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಪ್ರವಾಸಕ್ಕೆಂದು ಬೀದರ್‌ಗೆ ಬಂದಿದ್ದ ಮೈಸೂರು ಮೂಲದ ವ್ಯಕ್ತಿ ಸಾವು

    ಪ್ರವಾಸಕ್ಕೆಂದು ಬೀದರ್‌ಗೆ ಬಂದಿದ್ದ ಮೈಸೂರು ಮೂಲದ ವ್ಯಕ್ತಿ ಸಾವು

    ಬೀದರ್: ಪ್ರವಾಸಕ್ಕಾಗಿ ಬಂದಿದ್ದ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಅನುಭವ ಮಂಟಪದ ಯಾತ್ರಿ ನಿವಾಸದ ಬಳಿ ನಡೆದಿದೆ.

    ಮೈಸೂರು ನಗರದ ಟಿಎನ್ ಪುರ ಬಡಾವಣೆ ನಿವಾಸಿ ಎ.ಕೆ. ಶಿವರಾಜ ಕುನ್ನುಮಾದಪ್ಪ (64) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಫೆ.1 ರಂದು ತಮ್ಮ ಗೆಳೆಯ ಜೈಶಂಕರ್ ಜೊತೆಗೂಡಿ ಮನೆಯಿಂದ ಹೊರಟ ಇವರು ಕಲಬುರ್ಗಿ, ಬೀದರ್ ಪ್ರವಾಸ ಮುಗಿಸಿಕೊಂಡು ಸೋಮವಾರ ಸಂಜೆ ಇಲ್ಲಿಯ ಅನುಭವ ಮಂಟಪಕ್ಕೆ ಬಂದು ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.

    ಮಧ್ಯರಾತ್ರಿ ಬಾತ್ ರೂಂಗೆಂದು ತೆರಳಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹೃದಯಾಘತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಸುದ್ದಿ ತಿಳಿದ ನಗರ ಠಾಣೆ ಪಿಎಸ್‍ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಸತಿ ಶಾಲೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ- ಕೊಲೆ ಆರೋಪ

    ವಸತಿ ಶಾಲೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ- ಕೊಲೆ ಆರೋಪ

    ಬೀದರ್: ತಾಲೂಕಿನ ಕೋಳ್ಳಾರ್ ಗ್ರಾಮದ ಬಳಿ ಇರುವ ಶ್ರಮಜೀವಿ ವಸತಿ ಪ್ರೌಢ ಶಾಲೆಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರು ಕೊಲೆ ಎಂದು ಆರೋಪಿಸಿದ್ದಾರೆ.

    ವಿದ್ಯಾರ್ಥಿನಿಯನ್ನು ಸುಪ್ರಿಯಾ ಎಂದು ಗುರುತಿಸಲಾಗಿದೆ. ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಗ್ ತಾಂಡ ನಿವಾಸಿಯಾಗಿದ್ದ ಸುಪ್ರಿಯಾ ಕಳೆದ ಜೂನ್ ತಿಂಗಳಿಂದ ಈ ವಸತಿ ಶಾಲೆಯಲ್ಲಿ ಓದುತ್ತಿದ್ದಳು.

    ವಸತಿ ಶಾಲೆಯ ಆಡಳಿತ ಮಂಡಳಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಪೋಷಕರು ಮಾತ್ರ ಇದು ಆತ್ಮಹತ್ಯೆ ಅಲ್ಲಾ ಕೊಲೆ ಎಂದು ಆರೋಪಿಸುತ್ತಿದ್ದಾರೆ.

    ವಿದ್ಯಾರ್ಥಿನಿಯ ಮೃತದೇಹವನ್ನು ಪೋಷಕರಿಗೆ ಮಾಹಿತಿ ನೀಡದೆ ಆಡಳಿತ ಮಂಡಳಿ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದೆ. ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಆಡಳಿತ ಮಂಡಳಿಯವರು ಆಸ್ಪತ್ರೆಗೆ ಯಾಕೆ ತೆಗೆದುಕೊಂಡು ಬಂದ್ರು ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ನ್ಯೂಟೌನ್ ಪಿಎಸ್‍ಐ ಗುರು ಪಾಟೀಲ್ ಪರಿಶೀಲನೆ ಮಾಡಿದ್ದಾರೆ.

  • ಮೊಬೈಲ್ ರಿಪೇರಿ ಮಾಡುವಾಗ ಬ್ಯಾಟರಿ ಬ್ಲಾಸ್ಟ್ – ತಪ್ಪಿದ ಭಾರಿ ಅನಾಹುತ

    ಮೊಬೈಲ್ ರಿಪೇರಿ ಮಾಡುವಾಗ ಬ್ಯಾಟರಿ ಬ್ಲಾಸ್ಟ್ – ತಪ್ಪಿದ ಭಾರಿ ಅನಾಹುತ

    ಬೀದರ್: ಲೆನೊವೊ ಕಂಪನಿ ಸೇರಿದ ಮೊಬೈಲ್ ರಿಪೇರಿ ಮಾಡುವಾಗ ಅದರ ಬ್ಯಾಟರಿ ಬ್ಲಾಸ್ಟ್ ಆಗಿದ್ದು ಭಾರಿ ಅನಾಹುತ ತಪ್ಪಿದೆ.

    ಬೀದರ್ ಜಿಲ್ಲೆಯ ಕಮಲಾನಗರ ಪಟ್ಟಣದ ಓಂ ಶಿವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಕೆಲಸಗಾರ ಓಂಕಾರ್ ಮಠಪತಿ ಎಂದಿನಂತೆ ಮೊಬೈಲ್ ರಿಪೇರಿ ಮಾಡುವಾಗ ಸಣ್ಣದೊಂದು ಹೊಗೆ ಕಾಣಿಸಿಕೊಂಡ ಬಳಿಕ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗಿದೆ.

    ಇದರಿಂದ ಭಯಗೊಂಡ ರಿಪೇರಿ ಮಾಡುವವರು ಮೊಬೈಲ್ ದೂರ ಎಸೆದು ಘಟನೆಯಿಂದ ಪಾರಾಗಿದ್ದಾರೆ. ಓಂಕಾರ್ ರಿಪೇರಿ ಮಾಡುವಾಗ ಈ ಅವಘಡ ಸಂಭವಿಸಿದ್ದು, ಬದುಕಿದೆ ಬಡ ಜೀವ ಎನ್ನುವಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಪೇರಿ ಮಾಡುವಾಗ ಸಣ್ಣಗೆ ಹೊಗೆ ಬಂತು ಆದರೂ ರಿಪೇರಿ ಮಾಡಲು ಪ್ರಯತ್ನ ಮಾಡಿದಾಗ ಬ್ಯಾಟರಿ ಬ್ಲಾಸ್ಟ್ ಆಯ್ತು ಎಂದು ರಿಪೇರಿ ಮಾಡಿದ ಓಂಕಾರ್ ಹೇಳಿದ್ದಾರೆ.

  • ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್: ಹೈದರಾಬಾದ್‍ನ ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಇಂದು ಬೀದರ್‌ಗೆ ಭೇಟಿ ನೀಡಿದ್ದಾರೆ.

    ಶಾಲೆಯೊಂದರಲ್ಲಿ ನಾಟಕವನ್ನು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬೀದರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ವಿಷಯ ತಿಳಿದ ಸಂಸದ ಅಸಾದುದ್ದಿನ್ ಓವೈಸಿ ಇಂದು ಬೀದರ್‍ಗೆ ಭೇಟಿ ನೀಡಿ, ಎಸ್‍ಪಿ ಟಿ ಶ್ರೀಧರ್‍ರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡರು.

    ಇದಾದ ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಓವೈಸಿ ಪ್ರಕರಣದಲ್ಲಿ ಬಂಧನವಾಗಿರುವ ಇಬ್ಬರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದರು. ಭೇಟಿ ಬಳಿಕ ಟ್ವೀಟ್ ಮಾಡಿರುವ ಸಂಸದ ಓವೈಸಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ನಾನು ಬೀದರ್ ಎಸ್‍ಪಿ ಅವರನ್ನು ಭೇಟಿ ಮಾಡಿದೆ. ಶಾಲೆಯಲ್ಲಿ ನಾಟಕ ಮಾಡಿದಕ್ಕೆ ಬಂಧಿಸಿ, ದೇಶದ್ರೋಹದ ಆರೋಪ ಮಾಡಿರುವುದನ್ನು ನಾವು ಬಲವಾಗಿ ಆಕ್ಷೇಪಿಸಿದ್ದೇವೆ.

    ಈ ಪ್ರಕರಣ ತನಿಖೆಯಲ್ಲಿದೆ ಮತ್ತು ದೇಶದ್ರೋಹ ಎಂಬುದನ್ನು ತನಿಖೆ ನಂತರ ತೆಗೆದುಹಾಕಬಹುದು ಎಂದು ಎಸ್‍ಪಿ ಅವರು ಹೇಳಿದ್ದಾರೆ. ಆದರೆ ಈ ಮಹಿಳೆಯರು ಸ್ಥಳೀಯ ನಿವಾಸಿಗಳಾಗಿದ್ದರಿಂದ ಅವರನ್ನು ಬಂಧಿಸುವ ಮೊದಲು ಇದನ್ನು ಮಾಡಬೇಕು ಎಂಬುದು ನನ್ನ ವಾದ ಮತ್ತು ಶಾಲೆಯಲ್ಲಿ ನಾಟಕ ಮಾಡುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?
    ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

  • ವ್ಯಕ್ತಿಯಿಂದ ಕಿರುಕುಳ – 6 ತಿಂಗಳ ಹಿಂದೆ ಮದ್ವೆಯಾಗಿದ್ದ ದಂಪತಿ ಆತ್ಮಹತ್ಯೆ

    ವ್ಯಕ್ತಿಯಿಂದ ಕಿರುಕುಳ – 6 ತಿಂಗಳ ಹಿಂದೆ ಮದ್ವೆಯಾಗಿದ್ದ ದಂಪತಿ ಆತ್ಮಹತ್ಯೆ

    ಬೀದರ್: ಅನ್ಯ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.

    ಮಹೇಶ್ ಸಜ್ಜನ ಶೆಟ್ಟಿ (25) ಮತ್ತು ವಿಜಯಲಕ್ಷ್ಮಿ (22) ಮೃತ ದಂಪತಿ. ಇಬ್ಬರು ತಾವು ಮಲಗುವ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮತ್ತು ವಿಜಯಲಕ್ಷ್ಮಿ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಜಯಲಕ್ಷ್ಮಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟಿನಲ್ಲಿ ನನ್ನ ಸಾವಿಗೆ ಮನೆಯವರು ಯಾರು ಕಾರಣರಲ್ಲ. ಇದಕ್ಕೆ ನನ್ನ ತವರು ಮನೆಯಾದ ಜೋಜನಾ ಗ್ರಾಮದ ರಾಜಪ್ಪಾ ಚಿದಕೆ ಕಾರಣನಾಗಿದ್ದಾನೆ. ಯಾಕೆಂದರೆ ನನ್ನ ಪತಿಯ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿ ತಲೆ ಕೆಡಿಸಿ ನನ್ನ ಸಂಸಾರವನ್ನು ಹಾಳು ಮಾಡುತ್ತಿದ್ದಾನೆ. ಇತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಡೆತ್ ನೋಟ್‍ನಲ್ಲಿ ಬರೆದಿದ್ದಾಳೆ.

    ವ್ಯಕ್ತಿ ಆರೋಪ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಮೂರು ದಿನಗಳಿಂದ ಜಗಳ ನಡೆಯುತ್ತಿದೆ. ಆದರೆ ಶುಕ್ರವಾರ ರಾತ್ರಿ ಮನನೊಂದು ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಪಿಐ ಶ್ರೀ ಟಿ.ಆರ್ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಪ್ಲಾಸ್ಟಿಕ್ ಮುಕ್ತ ಶಾಲೆ, ಗ್ರಾಮಕ್ಕೆ ಪಣ – ಹಳೆ ಬಟ್ಟೆಯಿಂದಲೇ ಬ್ಯಾಗ್ ತಯಾರಿ

    ಪ್ಲಾಸ್ಟಿಕ್ ಮುಕ್ತ ಶಾಲೆ, ಗ್ರಾಮಕ್ಕೆ ಪಣ – ಹಳೆ ಬಟ್ಟೆಯಿಂದಲೇ ಬ್ಯಾಗ್ ತಯಾರಿ

    – ಔರಾದ್‍ನ ಶಿಕ್ಷಕ ವೀರಕುಮಾರ್ ಇವತ್ತಿನ ಪಬ್ಲಿಕ್ ಹೀರೋ

    ಬೀದರ್: ದೇಶಾದ್ಯಂತ ಏಕ ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ ನಡೆಯುತ್ತಿದೆ. ಕೆಲವು ಕಡೆ ಜಾರಿಯೂ ಆಗುತ್ತಿದೆ. ಇದಕ್ಕೆ ಕೈಜೋಡಿಸಿರೋ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಔರಾದ್‍ನ ಠಾಣಾಕುಸನೂರು ಗ್ರಾಮದ ಶಿಕ್ಷಕ ವೀರಕುಮಾರ್. ಪ್ಲಾಸ್ಟಿಕ್ ಬಳಕೆಯ ಕುರಿತು ಶಾಲೆಯಿಂದಲೇ ಮಕ್ಕಳಿಗೆ ಅರಿವು ಮೂಡಿಸುತ್ತಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಠಾಣಾಕುಸನೂರು ಗ್ರಾಮದಲ್ಲಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ನ ಆಂಗ್ಲ ಮಾದ್ಯಮ ಶಿಕ್ಷಕರಾದ ವೀರಕುಮಾರ್ ಮಂಠಾಳಕರ್ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದಾರೆ. 7ನೇಯ ತರಗತಿ ಪಠ್ಯದಲ್ಲಿರುವ “ಅವೈಂಡ್ ಪ್ಲಾಸ್ಟಿಕ್” ಎಂಬ ಪಾಠದಿಂದ ಪ್ರೇರಣೆ ಪಡೆದ ಶಿಕ್ಷಕರು, 400 ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

    ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ್ರೂ, ತರಕಾರಿ, ಹಣ್ಣ ಹಂಪಲು ತರಲು ತಾವೇ ಕೈಯಾರ ಮಾಡಿಕೊಂಡಿರುವ ಬಟ್ಟೆ ಚೀಲವನ್ನೆ ಬಳಕೆ ಮಾಡುತ್ತಿದ್ದಾರೆ. 1 ರಿಂದ 7 ತರಗತಿವರೆಗೆ ಈ ಯೋಜನೆ ಅನುಷ್ಠಾನ ಮಾಡಿ ಯಶಸ್ವಿಯಾಗಿರೋ ಮೇಷ್ಟ್ರು ವೀರಕುಮಾರ್, ಈಗ ಗ್ರಾಮದಲ್ಲೂ ಆಂದೋಲನಕ್ಕೆ ಮುಂದಾಗಿದ್ದಾರೆ. 100 ಗ್ರಾಮಸ್ಥರಿಗೆ ಮಕ್ಕಳೇ ತಯಾರು ಮಾಡಿರೋ ಬಟ್ಟೆ ಚೀಲವನ್ನು ಉಚಿತವಾಗಿ ನೀಡಿದ್ದಾರೆ.

    ಪ್ಲಾಸ್ಟಿಕ್ ವಾಟರ್ ಬಾಟೆಲ್, ಪ್ಲಾಸ್ಟಿಕ್ ಕವರ್‍ನಲ್ಲಿರೋ ಸ್ನ್ಯಾಕ್ಸ್ ತಿನ್ನದಂತೆ ಮಕ್ಕಳಿಗೆ ಮೇಷ್ಟ್ರು ಸೂಚಿಸಿದ್ದು, ಇದು ಕಾರ್ಯಗತವೂ ಆಗುತ್ತಿದೆ. ಈ ಸ್ಟೋರಿಯನ್ನು ನೋಡೋ ಶಿಕ್ಷಕರೂ ಕೂಡ ತಮ್ಮ ಶಾಲೆಗಳಲ್ಲಿ ಅನುಷ್ಠಾನ ತಂದರೆ ಪ್ಲಾಸ್ಟಿಕ್ ಮುಕ್ತ ಜಾಗೃತಿ ಮತ್ತಷ್ಟು ಪರಿಣಾಮಕಾರಿಯಾಗಲಿದೆ.

  • ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ತೋಗರಿ ಬೆಳೆ ಬೆಂಕಿಗಾಹುತಿ

    ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ತೋಗರಿ ಬೆಳೆ ಬೆಂಕಿಗಾಹುತಿ

    ಬೀದರ್: ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ಮೌಲ್ಯದ ತೋಗರಿ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿಟ್ಟಗುಪ್ಪಾ ಹೊರವಲಯದಲ್ಲಿ ನಡೆದಿದೆ.

    ಈರಣ್ಣ ಕಟ್ಟಿಗೆಯವರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೋಗರಿ ಬೆಳೆ ಭಸ್ಮವಾಗಿದ್ದು, ಈ ಮೂಲಕ ಕೆಲವೇ ದಿನಗಳಲ್ಲಿ ರಾಶಿ ಮಾಡಲು ತಯಾರಿ ಮಾಡಿಕೊಂಡಿದ್ದ ರೈತನಿಗೆ ನಿರಾಸೆಯಾಗಿದೆ. ಜಮೀನಿನ ಮೇಲಿದ್ದ ವಿದ್ಯುತ್ ತಂತಿಗಳು ಇಂದು ಸಂಜೆ ಕೆಳಗೆ ಬಿದ್ದಿದ್ದು, ಬೆಳೆಗೆ ತಗುಲಿ ನಾಲ್ಕು ಎಕರೆಯಲ್ಲಿ ಬೆಳೆದು ನಿಂತ್ತಿದ್ದ ತೋಗರಿ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತ ತೀವ್ರ ಆತಂಕಕ್ಕೊಳಗಾಗಿದ್ದಾರೆ.

    ಜಮೀನಿಗೆ ಬೆಂಕಿ ಬಿದ್ದಿರುವ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲೆಗೆ ತೋಗರಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಈ ಕುರಿತು ಚಿಟ್ಟಗುಪ್ಪಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೌರತ್ವ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯುವಕರಿಂದ ಪಾದಯಾತ್ರೆ

    ಪೌರತ್ವ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯುವಕರಿಂದ ಪಾದಯಾತ್ರೆ

    ಬೀದರ್: ಪೌರತ್ವ ಕಾಯ್ದೆ ವಿರೊಧಿಸಿ ಇಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಸಮಾವೇಶದಲ್ಲಿ ಭಾಗಿಯಾಗಲು ಯುವಕರ ತಂಡವೊಂದು ಬಸವಕಲ್ಯಾಣದಿಂದ ಕಲಬುರಗಿಗೆ ಪಾದಯಾತ್ರೆ ಬೆಳೆಸಿದೆ.

    ಯುವಕರು ಬಸವಕಲ್ಯಾಣ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯಾತ್ರೆ ಆರಂಭಿಸಿದರು. ಸಾವಿರಾರು ಜನ ಯುವಕರು ಈ ಪಾದಯಾತ್ರೆಯಲ್ಲಿ ಭಾಗಿಯಾದರು. ಬಸವಕಲ್ಯಾಣ ನಗರದಿಂದ ಬಂಗ್ಲಾ, ಮುಡಬಿ ಮಾರ್ಗವಾಗಿ ಕಲಬುರಗಿಗೆ ತೆರಳಿದರು.

    ರಾಷ್ಟ್ರ ಧ್ವಜ ಕೈ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು. ಶರಣರ ನಾಡು ಕಲಬುರಗಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಸ್ವಾಮೀಜಿಗಳು ಸೇರಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ.

    ಪಾದಯಾತ್ರೆ ಮಾಡಿದ ಯುವಕರ ತಂಡದಲ್ಲಿ ಅಸ್ಲಾಮ್ ಜನಾಬ್, ಮೌಲಾನ ಅಕ್ಬರಲೀ, ಖಲೀಲ್ ಅಹ್ಮದ್, ಮಿನಾಜ್ ನವಾಬ್, ಖುತ್ಬುದ್ದೀನ್, ವಸಿ ಅದೋನಿ, ಮೋಸಿನ್ ಚಾಬುಕ್ ಇದ್ದರು.